ಕರ್ಮ - ಜೀವನಪ್ರಕ್ರಿಯೆಯ ನೆನಪು
ಸದ್ಗುರುಗಳು ಹೇಳುತ್ತಾರೆ, ಕರ್ಮ ಎಂದರೆ ನೀವು ಮಾಡಿದ ಯಾವುದೋ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳ ವಿಷಯವಲ್ಲ. ಕರ್ಮ ಎಂದರೆ ಜೀವನಪ್ರಕ್ರಿಯೆಯ ನೆನಪು.

ಸದ್ಗುರು: ಕರ್ಮ ಎನ್ನುವ ಪದವು ಜನರ ಮನಸ್ಸಿನಲ್ಲಿ ವಿಭಿನ್ನ ಅರ್ಥಗಳನ್ನು ಮೂಡಿಸುತ್ತದೆ. ಕರ್ಮ ಎಂದರೆ ಕಾರ್ಯ. ಕಾರ್ಯ ಹಲವು ವಿಭಿನ್ನ ಸ್ತರಗಳಲ್ಲಿದೆ. ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಶಕ್ತಿಯ ಕಾರ್ಯವಿದೆ, ಇವನ್ನು ನಾವು ಕರ್ಮ ಎಂದು ಕರೆಯಬಹುದು. ಆದರೆ ಕಾರ್ಯ ಈ ನಾಲ್ಕು ಆಯಾಮಗಳಿಗಿಂತ ಆಳಕ್ಕೆ ಹೋಗುವುದಾದರೆ ನಾವು ಅದನ್ನು ಕ್ರಿಯಾ ಎನ್ನುತ್ತೇವೆ. ಹೀಗಾಗಿ, ಕರ್ಮ ಮತ್ತು ಕಾರ್ಯ ಎರಡೂ ಕ್ರಿಯೆಯೆಂದೇ ಅರ್ಥೈಸಲಾಗುತ್ತದೆ, ಆದರೆ ಕರ್ಮವು ಜೀವ ವ್ಯವಸ್ಥೆಯ ಮೇಲೆ ಒಂದು ಅಚ್ಚೊತ್ತನ್ನ ಅಥವಾ ಪ್ರಭಾವವನ್ನು ಬಿಟ್ಟು ಹೋಗುವಂತಹ ಕಾರ್ಯವಾಗಿದೆ. ಅಂದರೆ, ಆ ಕಾರ್ಯದ ನೆನಪು ಮತ್ತು ಕೆಮಿಸ್ಟ್ರಿ ಉಳಿದುಕೊಳ್ಳುತ್ತದೆ. ಕ್ರಿಯೆ ಎಂಬುದು ಪೂರ್ತಿ ಬೇರೇನೇ ಆಯಾಮದಲ್ಲಿ ನಾಟುವ ಮೂಲಕ, ಈಗಾಗಲೇ ಶೇಖರಿಸಿರುವ ಕರ್ಮಶೇಷವನ್ನು ಕಿತ್ತೊಗೆಯಲು ಪ್ರಾರಂಭಿಸುತ್ತದೆ.
ಕರ್ಮವು ಅನೇಕ ರೀತಿಯದ್ದಾಗಿದ್ದು, ಅದಕ್ಕೆ ಹಲವು ಪದರಗಳು ಮತ್ತು ಆಯಾಮಗಳಿವೆ. ನಿಮ್ಮ ತಂದೆ ಮಾಡಿದ ಕಾರ್ಯಗಳು ಕೇವಲ ನೀವಿರುವ ಜೀವನ ಸನ್ನಿವೇಶದಲ್ಲಷ್ಟೇ ಅಲ್ಲದೆ ನಿಮ್ಮ ದೇಹದ ಪ್ರತಿಯೊಂದು ಕೋಶದಲ್ಲಿಯೂ ಪ್ರಬಲವಾಗಿ ಪ್ರಭಾವ ಬೀರುತ್ತಿವೆ. ನಿಮ್ಮಲ್ಲಿ ಹಲವರು ಗಮನಿಸಿರಬಹುದು 18-20 ವರ್ಷಗಳ ಪ್ರಾಯದಲ್ಲಿದ್ದಾಗ ತಮ್ಮ ತಂದೆ-ತಾಯಿಯನ್ನ ತೀವ್ರವಾಗಿ ವಿರೋಧಿಸಿರಬಹುದು. ಆದರೆ 40-45 ವರ್ಷಕ್ಕೆ ಬಂದಾಗ ನೀವು ಅವರಂತೆಯೇ ನಡೆದುಕೊಳ್ಳಲು ಪ್ರಾರಂಭಿಸಿದಿರಿ! ಅವರಂತೆಯೇ ಮಾತನಾಡುತ್ತೀರಿ, ಅವರಂತೆಯೇ ವರ್ತಿಸುತ್ತೀರಿ. ಈ ರೀತಿ ಬದುಕುವುದು ದುರ್ಭಾಗ್ಯ, ಏಕೆಂದರೆ ಜೀವನವು ಕೇವಲ ಪುನರಾವೃತ್ತಿಯಾಗುತ್ತಿದ್ದರೆ, ಈ ತಲೆಮಾರು ಏನಾದರೂ ಹಿಂದಿನ ತಲೆಮಾರಿನಂತೆಯೇ ವರ್ತಿಸುತ್ತ, ನಡೆದುಕೊಳ್ಳುತ್ತ, ಜೀವಿಸುತ್ತ, ಜೀವನವನ್ನು ಅನುಭವಿಸುತ್ತಿದ್ದರೆ, ಇದೊಂದು ವ್ಯರ್ಥವಾದ ಪೀಳಿಗೆ.
ಈ ಪೀಳಿಗೆಯು ಹಿಂದಿನ ಪೀಳಿಗೆ ಎಂದೂ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಜೀವನವನ್ನು ಅನುಭವಿಸಬೇಕು. ಹುಚ್ಚಾಗಿ ಏನನ್ನೋ ಮಾಡುವ ಮೂಲಕವಲ್ಲ, ಆದರೆ ನೀವು ಜೀವನವನ್ನು ಅನುಭವಿಸುವ ರೀತಿಯಲ್ಲಿ ಉನ್ನತ ಮಟ್ಟಕ್ಕೆ ಏರಬೇಕು.
ಜೀವನಪ್ರಕ್ರಿಯೆಯ ನೆನಪು
ಆದರೆ ನಿಮ್ಮಲ್ಲಿನ ಕರ್ಮವು ಕೇವಲ ನಿಮ್ಮ ಅಥವಾ ನಿಮ್ಮ ಪೂರ್ವಜರದ್ದಷ್ಟೇ ಅಲ್ಲ. ಮೊಟ್ಟಮೊದಲ ಏಕಕೋಶೀಯ ಜೀವ – ಆ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ಕರ್ಮ ಸಹ ಇಂದು ನಿಮ್ಮೊಳಗೆ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯ ಗಾತ್ರದ ಮಾನವನ ದೇಹದಲ್ಲಿ ಸುಮಾರು 10 ಲಕ್ಷ ಕೋಟಿ ಮಾನವ ಜೀವಕೋಶಗಳಿವೆ. ಆದರೆ ಅದಕ್ಕೂ ಮೀರಿ ನಿಮ್ಮ ದೇಹದಲ್ಲಿ 100 ಲಕ್ಷಕೋಟಿಯಷ್ಟು ಬ್ಯಾಕ್ಟೀರಿಯಾಗಳಿವೆ – ಅಂದರೆ ನೀವು ಒಂದಕ್ಕೆ ಹತ್ತರ ಅನುಪಾತದಲ್ಲಿ ಬ್ಯಾಕ್ಟೀರಿಯಾದಿಂದ ಕೂಡಿರುವಿರಿ! ಕೇವಲ ನಿಮ್ಮ ಮುಖದ ಚರ್ಮದ ಮೇಲೆಯೇ 1800 ಕೋಟಿ ಬ್ಯಾಕ್ಟೀರಿಯಾಗಳಿವೆ! ನೀವು ಅವುಗಳನ್ನು ಬರಿ ಕಣ್ಣಿನಲ್ಲಿ ನೋಡಲಾಗದಿರುವುದು ಒಳ್ಳೆಯದೇ ಅಲ್ಲವೇ?
ನಿಮ್ಮ ಬಹುಪಾಲು ಭಾಗವು ನಿಜಕ್ಕೂ ಬ್ಯಾಕ್ಟೀರಿಯಾಗಳೇ ಎನ್ನಬಹುದು. ನಿಮ್ಮಲ್ಲಿರುವ ಬ್ಯಾಕ್ಟೀರಿಯಾದ ವಿಧವು ನಿರ್ದಿಷ್ಟ ವರ್ತನೆಯ ಮಾದರಿಯನ್ನು ಹೊಂದಿರುತ್ತದೆ, ಇದು ನಿಮ್ಮ ಪೂರ್ವಜರಲ್ಲಿ ಯಾವ ರೀತಿಯ ಬ್ಯಾಕ್ಟೀರಿಯಾ ಇತ್ತು ಎಂಬುದನ್ನು ಅವಲಂಬಿಸಿರುತ್ತದೆ. ಬ್ಯಾಕ್ಟೀರಿಯಾಗಳು ನಿಮ್ಮ ದೇಹದಲ್ಲಿ ವರ್ತಿಸುವ ರೀತಿಗೂ ಬೇರೆಯವರ ದೇಹದಲ್ಲಿ ವರ್ತಿಸುವ ರೀತಿಗೂ ಬಹಳ ವ್ಯತ್ಯಾಸವಿದೆ.
ಹೀಗಾಗಿ ನೀವು ನಿರ್ದಿಷ್ಟ ಗುಣವುಳ್ಳ ಬ್ಯಾಕ್ಟೀರಿಯಾವನ್ನೂ ಸಹ ಆನುವಂಶಿಕವಾಗಿ ಪಡೆದಿರುತ್ತೀರಿ. ಅವು ಸಹ ನಿರ್ದಿಷ್ಟ ಕರ್ಮದ ಸಂಗ್ರಹಣೆಯನ್ನು ಹೊಂದಿರುತ್ತವೆ ಮತ್ತು ನಿರ್ದಿಷ್ಟ ರೀತಿಯಲ್ಲಿ ನಿಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತವೆ ಮತ್ತು ವರ್ತಿಸುತ್ತವೆ. ಹಾಗಾಗಿ ಕರ್ಮ ಎಂಬುದು ನೀವು ಮಾಡಿದ ಯಾವುದೋ ಒಳಿತು ಅಥವಾ ಕೆಟ್ಟದ್ದರ ವಿಷಯವಲ್ಲ. ಕರ್ಮ ಎಂಬುದು ಜೀವನಪ್ರಕ್ರಿಯೆಯ ನೆನಪು. ದೇಹವು ರಚನೆಯಾಗಿರುವ ರೀತಿಗೆ ಕಾರಣವೇನೆಂದರೆ ಏಕಕೋಶೀಯ ಜೀವಿಯಿಂದ ಮೊದಲಾಗಿ ಪ್ರತಿಯೊಂದು ರೂಪದವರೆಗಿನ ಜೀವನಪ್ರಕ್ರಿಯೆಯ ನೆನಪುಗಳಿವೆ. ನಿಮ್ಮ ಮೆದುಳಿನೊಳಗೆ ರಿಪ್ಟಿಲಿಯನ್ ಮೆದುಳಿದೆ ಎಂಬುದು ವೈದ್ಯಕೀಯ ಸತ್ಯ, ಅದು ಮೊಸಳೆಯ ಮೆದುಳಿನ ಗಾತ್ರದಷ್ಟಿದೆ. ನೀವು ಏಕೆ ಕೋಪದಿಂದ ಎಲ್ಲರನ್ನೂ ಕಚ್ಚಲು ಹೋಗುತ್ತೀರಿ ಎಂದು ಅರ್ಥವಾಯಿತೇ?
ನಿಮ್ಮ ಬಗ್ಗೆ ನಿಮಗಿದ್ದಂತಹ ಮಹತ್ತರವಾದ ಕಲ್ಪನೆಗಳೆಲ್ಲ ಸುಳ್ಳು. ಈ ಕಾರಣಕ್ಕಾಗಿಯೇ ನಾವು ನಿಮಗೆ ಹೇಳಿದ್ದೇವೆ, "ಇದೆಲ್ಲವೂ ಮಾಯೆ," ಏಕೆಂದರೆ ನಿಮ್ಮೊಳಗೆ ನಡೆಯುತ್ತಿರುವ ಸಂಗತಿಗಳ ರೀತಿ ಹೀಗಿದೆ - ನೀವು ಮಾಡುವ ಬಹುತೇಕ ಎಲ್ಲವೂ ಹಿಂದಿನ ಮಾಹಿತಿಯಿಂದ ನಿಯಂತ್ರಿಸಲ್ಪಡುತ್ತದೆ.
"ಇದರ ಅರ್ಥ ನಾನು ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದೇ?" ಸಿಕ್ಕಿಹಾಕಿಕೊಂಡಿದ್ದೀರಿ ಖಂಡಿತ, ಆದರೆ ಸಂಪೂರ್ಣವಾಗಿ ಅಲ್ಲ. ಪಶುಪತವಾಗಿರುವುದರಿಂದ - ಪ್ರಾಣಿ ಸ್ವಭಾವದ ಸಂಯುಕ್ತ ಅಭಿವ್ಯಕ್ತಿ - ಆ ಏಕಕೋಶೀಯ ಜೀವಿಯಿಂದ ಹಿಡಿದು ಅತ್ಯುನ್ನತವಾದದ್ದರವರೆಗೆ, ಪಶುಪತಿಯಾಗುವ ಸಾಧ್ಯತೆ ಇದೆ - ಇದೆಲ್ಲವನ್ನೂ ಮೀರಿ ಹೋಗಬಹುದು. ಮಾನವ ವ್ಯವಸ್ಥೆಯೊಳಗೆ, ವ್ಯವಸ್ಥೆಯ ಮೂಲ ನಕ್ಷೆ- ಮೂಳೆಯ ಅಸ್ಥಿಪಂಜರವಲ್ಲ, ಆದರೆ ಶಕ್ತಿಯ ನಕ್ಷೆ - ಅಥವಾ ಶಕ್ತಿಯ ಮೂಲ ನಕ್ಷೆಯಲ್ಲಿ 112 ಚಕ್ರಗಳು ಅಥವಾ ಸಂಧಿಸ್ಥಾನಗಳಿವೆ, ಅಲ್ಲಿ ಅದು ಭದ್ರವಾಗಿ ಹಿಡಿದಿಡಲ್ಪಟ್ಟಿರುತ್ತದೆ.
ಈ ಎಲ್ಲ ಚಕ್ರಗಳು ವ್ಯವಸ್ಥೆಯೊಳಗಿನ ಕರ್ಮದ ಶೇಷ ಅಥವಾ ಹಿಂದಿನ ನೆನಪುಗಳ ಪ್ರಭಾವಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತವೆ, ಅದು ಈ ಜೀವನ ಪ್ರಕ್ರಿಯೆಯನ್ನು ನಡೆಯುವಂತೆ ಮಾಡುತ್ತದೆ. ಆದರೆ ದೇಹದ ಭೌತಿಕ ಚೌಕಟ್ಟಿನ ಹೊರಗೆ ಇನ್ನೂ ಎರಡು ಚಕ್ರಗಳಿವೆ, ಅವು ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಅತಿ ಕಡಿಮೆ ಅಥವಾ ಬಹುತೇಕ ನಿಷ್ಕ್ರಿಯವಾಗಿ ಉಳಿಯುತ್ತವೆ. ಆದರೆ ನೀವು ಸಾಕಷ್ಟು ಸಾಧನೆ ಮಾಡಿದರೆ, ಅವು ಸಕ್ರಿಯವಾಗುತ್ತವೆ.
114ನೇ ಚಕ್ರವು ಒಂದು ನಿರ್ದಿಷ್ಟ ರೀತಿಯಲ್ಲಿ ಮಿಡಿಯುತ್ತದೆ, ಅದನ್ನು ಪ್ರಾಚೀನ ಕಾಲದಿಂದಾದಿಯಾಗಿ ಔರೋಬೋರೋಸ್ ಎಂದು ವರ್ಣಿಸಲಾಗಿದೆ - ತನ್ನ ಸ್ವಂತ ಬಾಲವನ್ನು ನುಂಗುವ ಸರ್ಪದ ಚಿಹ್ನೆ. ಈ ಚಿಹ್ನೆಯನ್ನು ನೀವು ಬಹುತೇಕ ಎಲ್ಲಾ ಪ್ರಾಚೀನ ಸಂಸ್ಕೃತಿಗಳಲ್ಲಿ ನೋಡಬಹುದು. ಭಾರತದಲ್ಲಿ ನೀವು ಇದನ್ನು ಎಲ್ಲಾ ದೇವಾಲಯಗಳಲ್ಲಿ ನೋಡಬಹುದು, ಗ್ರೀಸ್, ಈಜಿಪ್ಟ್ ಮತ್ತು ಮೆಸೊಪೊಟೇಮಿಯನ್ ದೇವಾಲಯಗಳಲ್ಲಿ ನೋಡಬಹುದು - ಬಹುತೇಕ ಎಲ್ಲೆಡೆ. ಇಲ್ಲಿರುವುದಕ್ಕಿಂತಲೂ ಮೀರಿದ್ದರ ಕಡೆಗೆ ಗಮನ ಹರಿಸಿದ ಎಲ್ಲಾ ಪ್ರಾಚೀನ ಸಂಸ್ಕೃತಿಗಳಲ್ಲಿ ನೀವು ಔರೋಬೋರೋಸ್‌ನ್ನು ನೋಡಬಹುದು.
ಇಂದು, ಆಧುನಿಕ ಗಣಿತಶಾಸ್ತ್ರವು ಔರೋಬೋರೋಸ್ ಅನ್ನು ಅನಂತತೆಯ ಚಿಹ್ನೆಯಾಗಿ ಬಳಸುತ್ತದೆ. ಹಾಗಾಗಿ 114ನೇ ಚಕ್ರವು ಅನಂತತೆಯ ರೂಪದಲ್ಲಿ ಮಿಡಿಯುತ್ತದೆ. ಮತ್ತು ಜೀವಶಕ್ತಿಗಳು ನಿಮ್ಮೊಳಗಿನ ಈ ಆಯಾಮವನ್ನು ಸ್ಪರ್ಶಿಸಿದರೆ, ಆಗ ನೀವು ಮಾಡುವ ಪ್ರತಿಯೊಂದು ಕ್ರಿಯೆಯೂ ಮುಕ್ತಿಯ ಪ್ರಕ್ರಿಯೆಯಾಗುತ್ತದೆ ಏಕೆಂದರೆ ಕ್ರಿಯೆಯು ಇನ್ನು ಮುಂದೆ ನಿಮ್ಮದಲ್ಲ, ಅದು ಅನಂತ ಸ್ವರೂಪದ್ದಾಗಿರುತ್ತದೆ. ನಿಮ್ಮ ಶಕ್ತಿಗಳು 112ರ ಒಳಗಿದ್ದರೆ, ನೀವು ಮಾಡುವ ಪ್ರತಿಯೊಂದು ಕ್ರಿಯೆಗೂ ಒಂದು ಶೇಷವಿರುತ್ತದೆ, ಆದ್ದರಿಂದ ನಿಮ್ಮ ಮೇಲೆ ಹಿತವಾದ ಶೇಷವನ್ನು ಬಿಡುವಂತಹ ಸರಿಯಾದ ರೀತಿಯ ಕ್ರಿಯೆಯನ್ನು ಮಾಡುವುದು ಉತ್ತಮ.
ಪುರಾತನ ಕೂಗು
ಚಟುವಟಿಕೆಯು ನಿಮ್ಮನ್ನು ಸಿಕ್ಕಿಸುತ್ತದೆಯೋ ಅಥವಾ ವಿಮೋಚನೆಯ ಪ್ರಕ್ರಿಯೆಯಾಗುತ್ತದೆಯೋ ಎಂಬುದು ಮೂಲತಃ ಒಬ್ಬರ ಸಾಧನೆಯ ಹಂತ ಮತ್ತು ಕ್ರಿಯೆಯನ್ನು ಮಾಡುವಾಗಿನ ವರ್ತನೆ ಮತ್ತು ಉದ್ದೇಶದ ಮೇಲೆ ಅವಲಂಬಿತವಾಗಿರುತ್ತದೆ. ಜನರು ತಮ್ಮ ಜೀವನದಲ್ಲಿ ಅಗತ್ಯವಿರುವ ಚಟುವಟಿಕೆಗಳನ್ನು ನಿರ್ವಹಿಸದೆ ಸಾಧನೆ ಮಾಡಲು ಪ್ರಯತ್ನಿಸಿದರೆ, ಸಾಧನೆಯು ದೊಡ್ಡ ಒದ್ದಾಟವಾಗುತ್ತದೆ. ನೀವು ದಿನಕ್ಕೆ ಹನ್ನೆರಡು ಗಂಟೆ ಕುಳಿತುಕೊಂಡು ಧ್ಯಾನ ಮಾಡಲು ಪ್ರಯತ್ನಿಸಿದರೆ, ಆರಂಭದಲ್ಲಿ ಅದು ದೊಡ್ಡ ಭಾಗ್ಯವೆಂಬಂತೆ ಕಾಣುತ್ತದೆ, ಆದರೆ ಒಂದು ತಿಂಗಳೊಳಗೆ ನೀವು ಹುಚ್ಚರಾಗುತ್ತೀರಿ. ನೀವು ಆ ಹುಚ್ಚುತನವನ್ನು ದಾಟಿದರೆ, ನೀವು ಎಲ್ಲವನ್ನೂ ದಾಟುತ್ತೀರಿ, ಆದರೆ ಹೆಚ್ಚಿನ ಜನರು ತಮ್ಮೊಳಗೆ ಹುಚ್ಚುತನ ಉಂಟಾದಾಗ ಬಿಟ್ಟುಬಿಡುತ್ತಾರೆ, ಏಕೆಂದರೆ ಅದು ಸುಲಭವಲ್ಲ. ಇದು ನಿಮ್ಮ ತಂದೆ, ನಿಮ್ಮ ಅಜ್ಜ, ನಿಮ್ಮ ಪೂರ್ವಜರು ಮತ್ತು ಆ ಪ್ರಾಣಿಸೂಕ್ಷ್ಮಜೀವಿಗಳ ಪುರಾತನ ಕೂಗಾಗಿದೆ. ಅವೆಲ್ಲವೂ ಅಭಿವ್ಯಕ್ತಿ ಹುಡುಕಲು ಕಿರುಚುತ್ತವೆ. ಅವು ಸುಮ್ಮನಿರುವುದಿಲ್ಲ. ನೀವು ಅವೆಲ್ಲವನ್ನೂ ನಾಶಮಾಡಬಹುದು, ಆದರೆ ಅದು ಹೆಚ್ಚು ಸಾಧನೆಯ ಅಗತ್ಯವಿರುವ ಕಠಿಣ ಮಾರ್ಗವಾಗಿದೆ. ಅಥವಾ ನೀವು ಅವುಗಳಿಂದ ಅಂತರ ನಿರ್ಮಿಸಿಕೊಳ್ಳಬಹುದು - ಅವು ಕಿರುಚಲಿ ಆದರೆ ನೀವು ಕೇಳದಿರುವುದರಿಂದ ತೊಂದರೆಯಿಲ್ಲ. ಇವು ಎರಡು ವಿಭಿನ್ನ ಮಾರ್ಗಗಳಾಗಿವೆ, ಆದರೆ ನಿಮ್ಮ ದೇಹದ ಪ್ರತಿಯೊಂದು ಕೋಶದಲ್ಲೂ ಅವು ಮಿಡಿಯುತ್ತಿರುವುದರಿಂದ ನೀವು ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಆ ಎಲ್ಲದರಿಂದ ನಿಮ್ಮ ಅಂತರ ನಿರ್ಮಿಸಿಕೊಳ್ಳಲು ತುಂಬಾ ಕೆಲಸ ಬೇಕು, ಅಥವಾ ಸರಳವಾಗಿ ಭಕ್ತಿ ಸಾಕಾಗುತ್ತದೆ. ಅದನ್ನು ನೀವು ನಿಮ್ಮಷ್ಟಕ್ಕೇ ಮಾಡಬೇಕಾದರೆ, ಶ್ರಮಿಸಬೇಕಾಗುತ್ತದೆ. ನೀವು ಅನುಗ್ರಹದ ಸವಾರಿ ಮಾಡಲು ಬಯಸಿದರೆ, ಯಾವುದೇ ಶ್ರಮವಿಲ್ಲ ಆದರೆ ನೀವು ಚಾಲಕನ ಆಸನದಲ್ಲಿ ಇರುವುದಿಲ್ಲ. ಆದ್ದರಿಂದ ನೀವು ಓಡಿಸಲು ಕಲಿಯಬೇಕು - ಇದರಲ್ಲಿ ಅನೇಕ ಅಪಾಯಗಳಿವೆ - ಅಥವಾ ಪರಿಣತ ಚಾಲಕನು ಓಡಿಸುತ್ತಾನೆ ಮತ್ತು ನೀವು ಹಿಂದಿನ ಆಸನದಲ್ಲಿ ಕುಳಿತು ನಿದ್ರಿಸಬಹುದು. ನೀವು ಅಲ್ಲಿಗೆ ತಲುಪಿದರಾಯಿತು, ಹೇಗೆ ಎನ್ನುವುದು ಯಾಕೆ ಮುಖ್ಯ?


