ಪ್ರಶ್ನಕಾರ: ಸದ್ಗುರುಗಳೇ, ಕೃಷ್ಣನು ಸ್ವತಃ ದೇವರೇ ಎಂದು ಭಾವಿಸಿದರೆ, ಅವನ ಭಕ್ತರೇಕೆ ಇಷ್ಟು ಕಷ್ಟಗಳನ್ನೆದುರಿಸಿದರು? ನನ್ನ ಬಗ್ಗೆ ಹೇಳುವುದಾದರೆ, ನಾನು ನಿಮ್ಮತ್ತ ನೋಡುವವರೆಗೂ ನನ್ನ ಜೀವನದ ಬಗ್ಗೆ ಬಹುತೇಕ ಜನರು ಅಸೂಯೆಪಡುವಂತಿತ್ತು. ಈಗಲೂ ಜನರು ನನ್ನ ಜೀವನದ ಬಗ್ಗೆ ಅಸೂಯೆಪಡುತ್ತಾರೆ, ಆದರೆ ವಿಭಿನ್ನ ರೀತಿಯಲ್ಲಿ. ವಾಸ್ತವವಾಗಿ, ಅದು ನನಗೆ ಸಾಕಷ್ಟು ಏರಿಳಿತಗಳಿಂದ ಕೂಡಿದ ಪ್ರಯಾಣದಂತಿದೆ. ಜೀವನವನ್ನು ಸುಗಮಗೊಳಿಸುವುದರ ಬಗ್ಗೆ ಅಲ್ಲದಿದ್ದರೆ, ಅನುಗ್ರಹವೆಂಬುದು ಇನ್ನಾವುದರ ಕುರಿತು?

ಸದ್ಗುರು: ಬಲರಾಮ ಮಥುರೆಯನ್ನು ಬಿಡುವ ಸಂದರ್ಭದಲ್ಲಿ ಮತ್ತು ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸುತ್ತಾ, ಸರಿಯಾದ ಆಹಾರ ಅಥವಾ ವಿಶ್ರಾಂತಿ ಇಲ್ಲದೆ ಕಾಡಿನ ಮೂಲಕ ನಡೆಯುತ್ತಿದ್ದಾಗ ಇದೇ ರೀತಿಯ ಪ್ರಶ್ನೆಯನ್ನು ಕೇಳಿದ್ದನು: "ಇವೆಲ್ಲವೂ  ನಮಗೇಕೆ ಸಂಭವಿಸುತ್ತಿವೆ, ಅದೂ ನೀನು ಇರುವಾಗ?" ಕೃಷ್ಣನ ಉತ್ತರವೇನೆಂದರೆ, "ಜೀವನವು ಅಗಾಧ ಪ್ರಮಾಣದಲ್ಲಿ ಸಂಭವಿಸುತ್ತಿರುವಾಗ ದೂರಬೇಡ." ನೀವು ಕೆಲವು ಸಂದರ್ಭಗಳನ್ನು ಒಳ್ಳೆಯದು ಮತ್ತು ಇತರವುಗಳನ್ನು ಕೆಟ್ಟದು ಎಂದು ನೋಡುವುದರಿಂದ, ಅಥವಾ ಕೆಲವು ಸಂದರ್ಭಗಳನ್ನು ಯೋಗ್ಯ ಮತ್ತು ಇತರವುಗಳನ್ನು ಅಯೋಗ್ಯ ಎಂದು ನೋಡುವುದರಿಂದ, ನೀವು ಕೇವಲ ಜೀವನವನ್ನು ಜೀವನವಾಗಿ ನೋಡದೆ ಈ ವಿಷಯಗಳು ನಿಮಗೇಕೆ ಸಂಭವಿಸುತ್ತಿವೆ ಎಂದು ಕೇಳುತ್ತೀರಿ. ನೀವು ಆಧ್ಯಾತ್ಮಿಕ ಮಾರ್ಗಕ್ಕೆ ಕಾಲಿಟ್ಟ ತಕ್ಷಣ, ಎಲ್ಲವೂ ಫಾಸ್ಟ್-ಫಾರ್ವರ್ಡ್‌ನಲ್ಲಿರುವಂತೆ, ಜೀವನವು ನಿಮಗೆ ಮಹತ್ತರವಾದ ಪ್ರಮಾಣದಲ್ಲಿ ಸಂಭವಿಸುತ್ತದೆ. ನೀವು ಒಂದು ವಿಷಯವನ್ನು ಒಳ್ಳೆಯದು ಮತ್ತು ಇನ್ನೊಂದನ್ನು ಕೆಟ್ಟದು ಎಂದು ಗುರುತಿಸದಿದ್ದರೆ, ಜೀವನವು ಅತ್ಯಂತ ತೀವ್ರತೆಯೊಂದಿಗೆ ಸಂಭವಿಸುತ್ತಿದೆ ಎಂದು ನೀವು ನೋಡುತ್ತೀರಿ - ಅಷ್ಟೇ. ಒಳ್ಳೆಯದು ಮತ್ತು ಕೆಟ್ಟದು ಎಂಬುದೇನೂ ಇಲ್ಲ. ಜೀವನವು ಸಂಭವಿಸುತ್ತಿದೆ. ಕೆಲವರು ಅದನ್ನು ಆನಂದಿಸುತ್ತಾರೆ - ಕೆಲವರು ನರಳುತ್ತಾರೆ.

ಎಲ್ಲರೂ ಇದನ್ನು ಆನಂದಿಸುವಂತೆ ನೋಡಿಕೊಳ್ಳುವುದಷ್ಟೇ ನಾವು ಮಾಡಬಹುದಾದ ಕೆಲಸ. ಮೂಲಭೂತ ಹಂತದಲ್ಲಿ, ಭೂಮಿ ಮೇಲೆ ನಡೆಯುತ್ತಿರುವ ಘಟನೆಗಳು ಯಾವುದೇ ಮಹತ್ವ ಇಲ್ಲ. ಒಂದು ಸಿಡಿಲು ಬಡಿದು ನಾವೆಲ್ಲರೂ ಅದಕ್ಕೆ ತುತ್ತಾಗಿ ಸುಟ್ಟು ಹೋದರೂ, ಅದನ್ನು ದುರಂತ ಎಂದು ನಾನು ಭಾವಿಸುವುದಿಲ್ಲ - ಅದು ಕೇವಲ ಒಂದು ಘಟನೆ. "ಹಾಗಾದರೆ ಈಶಾ ಫೌಂಡೇಶನ್, ನನ್ನ ಕುಟುಂಬ ಮತ್ತು ನನ್ನ ಮಕ್ಕಳ ಬಗ್ಗೆ ಏನು?" ಅವರೆಲ್ಲರಿಗೂ ಸಹ ಜೀವನವು ಮಹತ್ತರವಾದ ಪ್ರಮಾಣದಲ್ಲಿ ಸಂಭವಿಸುತ್ತದೆ, ಏಕೆಂದರೆ ನಾವು ಇದ್ದಕ್ಕಿದ್ದಂತೆ ಆವಿಯಾಗಿಹೋಗಿದ್ದೇವೆ. ನೀವು ಇದನ್ನು ಒಳ್ಳೆಯದು ಮತ್ತು ಕೆಟ್ಟದ್ದರ ಗುರುತಿಸುವಿಕೆಯನ್ನು ಮೀರಿ ನೋಡಿ. ಜೀವನವು ಅತಿ ತೀವ್ರತೆಯಲ್ಲಿ ಸಂಭವಿಸುತ್ತಿದೆ - ಅಷ್ಟೇ.

ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವಾಗ, ನಿಮ್ಮ ಆಂತರಿಕ ಸ್ಥಿತಿಯು ಫಾಸ್ಟ್-ಫಾರ್ವರ್ಡ್‌ನಲ್ಲಿರುತ್ತದೆ.

ನೀವು ಅಧ್ಯಾತ್ಮದೆಡೆಗೆ ಸಾಗಲು ಬಯಸಿದರೆ, ಸ್ವಾಭಾವಿಕವಾಗಿಯೇ ನೀವು ಜೀವನದ ದೊಡ್ಡ ತುಣುಕನ್ನು ಬಯಸುತ್ತಿದ್ದೀರಿ. ವಾಸ್ತವವಾಗಿ, ನೀವು ಜೀವನದಲ್ಲಿ ಏನನ್ನೇ ಬಯಸಿ ಹೋಗುತ್ತಿದ್ದರೂ ಅದು ಜೀವನದ ದೊಡ್ಡ ತುಣುಕನ್ನು ಹೊಂದುವ ಪ್ರಯತ್ನವಾಗಿದೆ. ನೀವು ಜೀವನದ ತೆಳುವಾದ ವೇಫರ್ ಪದರವನ್ನು ಮಾತ್ರ ತಿನ್ನುತ್ತಿದ್ದರೆ, ಬಹುಶಃ ಅದೆಲ್ಲವೂ ಮಧುರವಾಗಿರುತ್ತದೆ, ಆದರೆ ಅದು ಇನ್ನೂ ತೆಳುವಾದ ವೇಫರ್ ಮಾತ್ರವೇ ಆಗಿರುತ್ತದೆ. ನೀವು ಕೇಕ್ ತೆಗೆದುಕೊಂಡು ಐಸಿಂಗ್ ಮಾತ್ರ ತಿನ್ನುತ್ತಿದ್ದರೆ, ಸ್ವಲ್ಪ ಸಮಯದ ನಂತರ ಮಧುರತೆಯು ವಿಷವಾಗುತ್ತದೆ. ನೀವು ಹೇಳಿದ್ದೀರಿ, "ನನ್ನ ಜೀವನವು ಬಹಳ ಜನರು ಅಸೂಯೆಪಡುವಂಥದ್ದಾಗಿತ್ತು," ಆದರೆ ಅದು ಎಷ್ಟು ಖಾಲಿಯಾಗಿತ್ತು ಎಂಬುದು ನಿಮಗೆ ತಿಳಿದಿದೆ. ಕಾರು ಇಲ್ಲದವರು ಕಾರು ಇರುವವರನ್ನು ಮಹಾನ್ ಅದೃಷ್ಟವಂತರೆಂದು ಭಾವಿಸುತ್ತಾರೆ. ಅದು ಖಂಡಿತವಾಗಿಯೂ ಆರಾಮದಾಯಕ ಮತ್ತು ಅನುಕೂಲಕರವಾಗಿರುತ್ತದೆ, ಆದರೆ ಅದು ಮಹಾನ್ ಅದೃಷ್ಟವಲ್ಲ. ಕಾರುಗಳೇ ಇಲ್ಲದಿದ್ದರೆ, ಯಾರೂ ಅದನ್ನು ಹೊಂದಲು ಆಸೆಪಡುತ್ತಿರಲಿಲ್ಲ. ಸಮಸ್ಯೆಯು ಇತರರೊಂದಿಗೆ ಹೋಲಿಸುವಲ್ಲಿದೆ, "ಓಹ್, ಅವಳ ಬಳಿ ಇದೆ - ನನ್ನ ಬಳಿ ಇಲ್ಲ" ಎಂಬ ವಿಷಯದಲ್ಲಿ. ಕಾರು ಇಲ್ಲದವರು ಕಾರು ಇರುವವರೊಂದಿಗೆ ಹೋಲಿಸದಿದ್ದರೆ, ನಡೆಯುವುದು ಅಥವಾ ಸೈಕಲ್‌ನಲ್ಲಿ ಸಾಗುವುದು ಚೆನ್ನಾಗಿಯೇ ಇರುತ್ತದೆ.. ನೀವು "ನನ್ನ ಜೀವನವು ಎಲ್ಲರ ಅಸೂಯೆಪಡುವಂತಿತ್ತು" ಎಂದು ಹೇಳಿದಾಗ, ಅದು ಮೂಲಭೂತ ಅರ್ಥದಲ್ಲಿ ಜೀವನದ ಬಗ್ಗೆ ಹೇಳಿಕೆಯಲ್ಲ - ಅದು ನಿಮ್ಮ ಸಾಮಾಜಿಕ ಸ್ಥಿತಿಯ ಬಗೆಗಿನ ಹೇಳಿಕೆಯಾಗಿದೆ.

ನಾನು ಜೀವನ ಅಂದಾಗ ಅಸ್ತಿತ್ವ, ಜೀವಚೈತನ್ಯದ ನಿಟ್ಟಿನಲ್ಲಿ ಮಾತನಾಡುತ್ತಿದ್ದೇನೆ. ಇದೀಗ, ನೀವು ವಾಸ್ತವವಾಗಿ ಆಳವಾದ ಅರ್ಥದಲ್ಲಿ ಜೀವನದೊಂದಿಗೆ ಯಾವುದೇ ಸಂಬಂಧವಿಲ್ಲದ ಅನೇಕ ವಿಷಯಗಳನ್ನು ಜೀವನವೆಂದು ಪರಿಗಣಿಸುತ್ತೀರಿ. ಇದಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ - ಇದೊಂದು ಮಾನಸಿಕ ಸ್ಥಿತಿ. ಎಲ್ಲಾ ನರಳಾಟವೂ ಆ ಹುಚ್ಚುತನದಿಂದ ಬರುತ್ತದೆ.

ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವಾಗ, ನಿಮ್ಮ ಆಂತರಿಕ ಸ್ಥಿತಿಯು ಫಾಸ್ಟ್-ಫಾರ್ವರ್ಡ್‌ನಲ್ಲಿರುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಒಂದು ಮೂಲಭೂತ ಕಾರಣವೆಂದರೆ ನಿಮ್ಮ ಪ್ರಾರಬ್ಧ - ಈ ಜೀವಮಾನಕ್ಕೆ ಹಂಚಿಕೆಯಾದ ಕರ್ಮ. ಸೃಷ್ಟಿಯು ಬಹಳ ಕರುಣಾಪೂರಿತವಾಗಿದೆ. ಅದು ನಿಮಗೆ ನಿಮ್ಮ ಸಂಪೂರ್ಣ ಕರ್ಮವನ್ನು ಈ ಜೀವಮಾನದಲ್ಲಿ ನೀಡಿದರೆ- ಅದನ್ನು ಸಂಚಿತ ಎಂದು ಕರೆಯಲಾಗುತ್ತದೆ - ನೀವು ಸಾಯುತ್ತೀರಿ. ನಿಮ್ಮಲ್ಲಿ ಅನೇಕರು ಈ ಜೀವಮಾನದ ನೆನಪುಗಳನ್ನು ಸಹ ಕೊಡವಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ನಿಮಗೆ ನೂರು ಜೀವಮಾನಗಳ ನೆನಪುಗಳನ್ನು ಅತಿ ತೀವ್ರತೆಯಲ್ಲಿ ನೆನಪಿಸಿದೆನೆಂದು ಊಹಿಸಿ, ನಿಮ್ಮಲ್ಲಿ ಹೆಚ್ಚಿನವರು ಆ ನೆನಪಿನ ಹೊರೆಯನ್ನು ಸಹಿಸಲಾಗದೆ ಇಲ್ಲಿಯೇ ಸಾವನ್ನಪ್ಪುತ್ತೀರಿ. ಆದ್ದರಿಂದ, ಪ್ರಕೃತಿಯು ನೀವು ನಿಭಾಯಿಸಬಲ್ಲ ಪ್ರಮಾಣದ ಪ್ರಾರಬ್ಧವನ್ನು ಹಂಚಿಕೆ ಮಾಡುತ್ತಿದೆ. ನೀವು ಪ್ರಕೃತಿಯ ಹಂಚಿಕೆಯ ಪ್ರಕಾರ ಹೋದರೆ, ಮತ್ತು ನೀವು ಯಾವುದೇ ಹೊಸ ಕರ್ಮವನ್ನು ಸೃಷ್ಟಿಸುವುದಿಲ್ಲವೆಂದು ನಾವು ಭಾವಿಸಿದರೆ - ಇದು ನಿಜವಲ್ಲ - ನೂರು ಜೀವಮಾನಗಳ ಕರ್ಮವನ್ನು ಕರಗಿಸಲು, ನೀವು ಕನಿಷ್ಠ ನೂರು ಜೀವಮಾನಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ನೂರು ಜೀವಮಾನಗಳ ಪ್ರಕ್ರಿಯೆಯಲ್ಲಿ, ನೀವು ಇನ್ನೂ ಸಾವಿರ ಜೀವಮಾನಗಳಿಗೆ ಆಗುವಷ್ಟು ಕರ್ಮವನ್ನು ಸಂಗ್ರಹಿಸಬಹುದು.

ನೀವು ಆಧ್ಯಾತ್ಮಿಕ ಮಾರ್ಗದಲ್ಲಿದ್ದಾಗ, ನಿಮ್ಮ ಪರಮೋನ್ನತ ಗಮ್ಯಸ್ಥಾನವನ್ನು ತಲುಪಲು  ಆತುರದಲ್ಲಿದ್ದೀರಿ. ಅದು ನೂರು ಅಥವಾ ಸಾವಿರ ಜೀವಮಾನಳಲ್ಲಾಗಲೆಂದು ನೀವು ಬಯಸುವುದಿಲ್ಲ - ನೀವು ಅದನ್ನು ತ್ವರಿತಗೊಳಿಸಲು ಬಯಸುತ್ತೀರಿ. ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಪ್ರವೇಶಿಸುವುದು ಎಂದರೆ ಜೀವನವನ್ನು ಗರಿಷ್ಠ ಪ್ರಮಾಣದಲ್ಲಿ ಅನುಭವಿಸಲು ಸಿದ್ಧರಾಗಿರುವುದು. ನೀವು ಬಂದು ನನ್ನೊಂದಿಗೆ ಕುಳಿತ ನಂತರ, ಇದು ನನ್ನ ಆಶೀರ್ವಾದವೂ ಆಗಿದೆ - ಜೀವನವೆಂದೆನಿಸಿಕೊಳ್ಳುವ ಎಲ್ಲವೂ ನಿಮಗೆ ಸಂಭವಿಸಲಿ. "ಮರಣವು ಸಂಭವಿಸಿದರೆ ಏನು?" ಅದೂ ಅದ್ಭುತವಾಗಿದೆ. ಅಲ್ಲಿಗೆ ಹೋಗಲು 75 ವರ್ಷಗಳ ಬದಲಿಗೆ, ನೀವು 35 ವರ್ಷಗಳಲ್ಲಿ ಅಲ್ಲಿಗೆ ಹೋಗಬಹುದಾದರೆ, ಅದು ಅದ್ಭುತವಲ್ಲವೇ? ಇದು ಕೇವಲ ತರ್ಕದ ಪ್ರಶ್ನೆಯಲ್ಲ - ಇದು ಜೀವನದ ವಾಸ್ತವವಾಗಿದೆ. ಇದೇ ಕೃಷ್ಣನು ಗೀತೆಯಲ್ಲಿ ನೀಡುತ್ತಿರುವ ಉಕ್ತಿ: ನೀವು ಅವರಿಗೆ ಸರಿಯಾದ ರೀತಿಯ ಪರಿಸ್ಥಿತಿಯನ್ನು ಒದಗಿಸಬಹುದಾದರೆ, ಅವರು ಶೀಘ್ರದಲ್ಲೇ ಅಲ್ಲಿಗೆ ಹೋಗಲಿ. ಬಾಲ ಯೋಗಿ ಮತ್ತು ಮಹಾ ಭಕ್ತೆಯೂ ಆಗಿದ್ದ ಒಬ್ಬ ಹುಡುಗಿಯ ವಿವಾಹದ ಬಗ್ಗೆ ಒಂದು ಸುಂದರವಾದ ತಮಿಳು ಕವಿತೆ ಇದೆ. ಅವರು 3000 ಅತಿಥಿಗಳಿಗೆ ದೊಡ್ಡ ವಿವಾಹವನ್ನು ಆಯೋಜಿಸಿದರು. ಅವರು ವಿವಾಹವಾದರು, ಮತ್ತು ನಂತರ, ಮಹಾ ಕವಿಯೂ ಆಗಿದ್ದ ಬಾಲ ಯೋಗಿ ಸುಂದರವಾದ ಭಕ್ತಿ ಕಾವ್ಯವನ್ನು ಗಾನ ಮಾಡಲು ಪ್ರಾರಂಭಿಸಿದ. ಎಲ್ಲರ ಗಮನವೂ ಅವನ ಮೇಲಿತ್ತು, ಮತ್ತು ಅದನ್ನೇ ಅವನು ಬಯಸಿದ್ದು. ಸಂಪೂರ್ಣ ಗಮನದ ಈ ಕ್ಷಣವನ್ನು ಅವನು ಅವರೆಲ್ಲರ ಸಾಕ್ಷಾತ್ಕಾರಕ್ಕಾಗಿ ಬಳಸಿದ - ಅವರೆಲ್ಲರೂ ಅಲ್ಲಿಯೇ, ವಿವಾಹ ಮಂಟಪದಲ್ಲಿ ತಮ್ಮ ದೇಹಗಳನ್ನು ತ್ಯಜಿಸಿದರು. ಅನೇಕ ನೂರು ವರ್ಷಗಳ ನಂತರ, ಕವಿಯು ಒಂದು ಕವಿತೆಯಲ್ಲಿ ಸುಂದರವಾಗಿ ವಿಲಾಪಿಸುತ್ತಾನೆ: "ಅವರು ನನ್ನನ್ನು ಆ ವಿವಾಹಕ್ಕೆ ಆಹ್ವಾನಿಸಿದ್ದರೆ, ನಾನು ಹೀಗೆ ಒದ್ದಾಡಬೇಕಾಗಿ ಬರುತ್ತಿರಲಿಲ್ಲ. ನಾನೂ ಅದನ್ನು ಸಾಧಿಸಿರುತ್ತಿದ್ದೆ. ನಾನು ಕೆಲವು ನೂರು ವರ್ಷಗಳು ತಡವಾಗಿ ಬಂದೆ. ಓಹ್, ಅಂತಹ ಇನ್ನೊಂದು ವಿವಾಹ ನನಗೆ ದೊರಕಬಲ್ಲದೇ?"

ಅನುಗ್ರಹವು ನೀವು ಇದೀಗ ಸಿಲುಕಿರುವ ಮಿತಿಗಳಿಂದ ನಿಮ್ಮನ್ನು ಎಳೆದು ಹೊರ ಹಾಕಲು ಪ್ರಯತ್ನಿಸುತ್ತಿದೆ.

ಅವನು ವಿವಾಹ ಮಂಟಪದಲ್ಲಿ 3002 ಜನರು ಸಾಯುವುದನ್ನು ದುರಂತವೆಂದು ಪರಿಗಣಿಸಲಿಲ್ಲ. ಬಾಲ ಯೋಗಿಯ ಉಪಸ್ಥಿತಿಯಿಂದಾಗಿ, ಅವರೆಲ್ಲರೂ ಒಂದೇ ಸಮಯದಲ್ಲಿ ಮುಕ್ತಿ ಪಡೆದದ್ದು ಮಹಾ ಅದೃಷ್ಟವೆಂದು ನೋಡುತ್ತಾನೆ. ಆಧ್ಯಾತ್ಮಿಕ ವ್ಯಕ್ತಿಯು ಘಟನೆಗಳನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ನೋಡುವುದಿಲ್ಲ - ಜೀವನವು ನಿಮಗೆ ಎಷ್ಟು ತೀವ್ರತೆಯಲ್ಲಿ ಸಂಭವಿಸುತ್ತಿದೆ ಎಂಬುದರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ಒಳ್ಳೆಯದು ಮತ್ತು ಕೆಟ್ಟದು ಸಾಮಾಜಿಕ ವಿದ್ಯಮಾನಗಳು - ಅವುಗಳಿಗೆ ಜೀವನದೊಂದಿಗೆ ಯಾವುದೇ ಸಂಬಂಧವಿಲ್ಲ. ನೀವು ಒಮ್ಮೆ ನಿರ್ದಿಷ್ಟ ರೀತಿಯಲ್ಲಿ ದೀಕ್ಷೆ ಪಡೆದ ನಂತರ, ನೀವು ನಿಮ್ಮ ಪ್ರಾರಬ್ಧಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನೀವು ನೂರು ಜೀವಮಾನಗಳ ಪಾಲನ್ನು ಇದೀಗ ನಿಭಾಯಿಸಲು ಬಯಸಿದರೆ, ಸ್ವಾಭಾವಿಕವಾಗಿ ನಿಮ್ಮ ಜೀವನವು ಅತಿ ತೀವ್ರತೆಯೊಂದಿಗೆ ಸಂಭವಿಸುತ್ತದೆ. ನೀವು ಸಮಚಿತ್ತತೆಯನ್ನು ಕಾಪಾಡಿಕೊಂಡರೆ, ನಿಮ್ಮ ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಯೂ ನಿಮ್ಮನ್ನು ಒಂದು ಹೆಜ್ಜೆ ಮುಂದಕ್ಕೆ ತರುತ್ತದೆ ಎಂಬುದನ್ನು ನೀವು ನೋಡುತ್ತೀರಿ. ನೀವು ಇದನ್ನು ನೋಡದಿದ್ದರೆ, ನಿಮ್ಮ ಸಾಮಾಜಿಕ ಪರಿಸ್ಥಿತಿಗಳಿಂದ ಪ್ರಭಾವಿತರಾದರೆ, ಜೀವನವು ಸಂಭವಿಸುತ್ತಿರುವ ವೇಗದಿಂದಾಗಿ, ನಿಮ್ಮ ಜೀವನದಲ್ಲಿ ಏನೋ ತಪ್ಪಾಗುತ್ತಿದೆ ಎಂದು ನೀವು ಭಾವಿಸಬಹುದು, ಅದು ಹಾಗಲ್ಲ.

ಧನಾತ್ಮಕ ಪರಿಭಾಷೆಯನ್ನು ಯಾವಾಗಲೂ ಲಕ್ಷಾಂತರ ವಿಭಿನ್ನ ರೀತಿಯಲ್ಲಿ ತಪ್ಪಾಗಿ ಅರ್ಥೈಸಬಹುದು ಏಕೆಂದರೆ ನಿಮ್ಮ ಮನಸ್ಸು ಅದರ ಮೇಲೆ ನಿಂತಿರುತ್ತದೆ. ನಾನು ಉದ್ದೇಶಪೂರ್ವಕವಾಗಿ ಋಣಾತ್ಮಕ ಪರಿಭಾಷೆಯನ್ನು ಬಳಸುತ್ತೇನೆ ಏಕೆಂದರೆ ನೀವು ಅದನ್ನು ತಪ್ಪಾಗಿ ಅರ್ಥೈಸುವುದಿಲ್ಲ. ನೀವು ಆಧ್ಯಾತ್ಮಿಕರಾಗಲು ಬಯಸಿದರೆ, ಮೂಲಭೂತವಾಗಿ, ಅದರರ್ಥ ನೀವು ಇದೀಗ ಹೇಗಿದ್ದೀರೋ,ಅದನ್ನು  ಕೊನೆಗೊಳಿಸಲು ಬಯಸುತ್ತೀರಿ. ಅದನ್ನು ಧನಾತ್ಮಕ ರೀತಿಯಲ್ಲಿ ಹೇಳುವುದಾದರೆ, ನೀವು ಮೋಕ್ಷವನ್ನು ಹುಡುಕುತ್ತಿದ್ದೀರಿ. ನೀವು ನಿಮ್ಮ ಪರಮೋನ್ನತ ಸ್ವರೂಪವನ್ನು ಹುಡುಕುತ್ತಿದ್ದೀರಿ; ನೀವು ದೇವರನ್ನು ಹುಡುಕುತ್ತಿದ್ದೀರಿ; ನೀವು ಅಪರಿಮಿತವಾಗಲು ಬಯಸುತ್ತೀರಿ. ನೀವು ಅಸೀಮರಾಗಲು ಬಯಸಿದಾಗ, ನೀವು ಇದೀಗ ಇರುವ ರೀತಿಯನ್ನು ಅಳಿಸಿಹಾಕಲು ಬಯಸುತ್ತೀರಿ. ನೀವು ಒಮ್ಮೆ ಈ ಇಚ್ಛೆಯನ್ನು ವ್ಯಕ್ತಪಡಿಸಿದ ಮತ್ತು ಅಗತ್ಯವಾದ ಶಕ್ತಿಯನ್ನು ನಿಮ್ಮಲ್ಲಿ ಹೂಡಿಕೆ ಮಾಡಿದ ನಂತರ, ನೀವು ಈಗಿರುವ ರೀತಿಯನ್ನು ಕೊನೆಗೊಳಿಸಲು ಬೇಕಾದ ಸಂಗತಿಗಳು ಸಂಭವಿಸುತ್ತವೆ. ಇದರರ್ಥ ನಿಮಗೆ ಋಣಾತ್ಮಕ ವಿಷಯಗಳು ಸಂಭವಿಸುತ್ತವೆ ಎಂದಲ್ಲ. ಇದು ಕೇವಲ ಜೀವನವು ಫಾಸ್ಟ್-ಫಾರ್ವರ್ಡ್‌ನಲ್ಲಿ, ಪ್ರಚಂಡ ವೇಗದಲ್ಲಿ ಮುಂದುವರಿಯುತ್ತದೆ.

ಹಾಗಾದರೆ ಅನುಗ್ರಹ ಎಂದರೇನು? ಈ ಅಸ್ತಿತ್ವದಲ್ಲಿ, ಶಕ್ತಿಯು ವಿವಿಧ ಅಭಿವ್ಯಕ್ತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅದು ಸೂರ್ಯನ ಬೆಳಕಿನಂತೆ, ಗಾಳಿಯಂತೆ, ಗುರುತ್ವಾಕರ್ಷಣೆಯಂತೆ ಕಾರ್ಯನಿರ್ವಹಿಸುತ್ತದೆ - ಅದೇ ರೀತಿ, ಅದು ಅನುಗ್ರಹವಾಗಿಯೂ ಕಾರ್ಯನಿರ್ವಹಿಸುತ್ತದೆ. ಗುರುತ್ವಾಕರ್ಷಣೆಯು ನಿಮ್ಮನ್ನು ಕೆಳಗೆ ಎಳೆಯಲು ಪ್ರಯತ್ನಿಸುತ್ತಿದೆ; ಗಾಳಿಯು ನಿಮ್ಮನ್ನು ಬೀಸಿ ಹಾಕಲು ಪ್ರಯತ್ನಿಸುತ್ತಿದೆ; ಸೂರ್ಯನು ನಿಮ್ಮನ್ನು ಸುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾನೆ - ಅನುಗ್ರಹವು ನಿಮ್ಮನ್ನು ಗ್ರಹದಿಂದ ಕಿತ್ತೊಗೆಯಲು ಪ್ರಯತ್ನಿಸುತ್ತಿದೆ. ಇದು ಋಣಾತ್ಮಕ ರೀತಿಯಲ್ಲಿ ಹೇಳುವುದಾಗಿದೆ. ನೀವು ಅದೇ ವಿಷಯವನ್ನು ಧನಾತ್ಮಕ ಪರಿಭಾಷೆಯಲ್ಲಿ ವ್ಯಕ್ತಪಡಿಸಲು ಬಯಸಿದರೆ, ಭೂಮಿಯು ನಿಮ್ಮನ್ನು ಅಪ್ಪಿಕೊಳ್ಳಲು ಪ್ರಯತ್ನಿಸುತ್ತಿದೆ; ಗಾಳಿಯು ನಿಮ್ಮನ್ನು ತಂಪಾಗಿಸಲು ಪ್ರಯತ್ನಿಸುತ್ತಿದೆ; ಸೂರ್ಯನು ನಿಮ್ಮನ್ನು ಬೆಚ್ಚಗಾಗಿಸಲು ಪ್ರಯತ್ನಿಸುತ್ತಿದ್ದಾನೆ - ಅನುಗ್ರಹವು ನಿಮ್ಮನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಋಣಾತ್ಮಕ ಪರಿಭಾಷೆಯ ಪ್ರಕಾರ ಹೋಗೋಣ, ಏಕೆಂದರೆ ನೀವು ಅದಕ್ಕೆ ಅಂಟಿಕೊಳ್ಳುವುದಿಲ್ಲ. ಅನುಗ್ರಹವು ನೀವು ಇದೀಗ ಸಿಲುಕಿರುವ ಮಿತಿಗಳಿಂದ ನಿಮ್ಮನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಿದೆ. ಮಿತಿಗಳೆಂದರೆ ಭೂಮಿ, ಜನರು, ದೇಹ, ಮನಸ್ಸು, ಭಾವನೆಗಳು - ಎಲ್ಲವೂ. ನೀವು ಅನುಗ್ರಹವನ್ನು ಆಹ್ವಾನಿಸಿದ್ದೀರಿ ಮತ್ತು ಅದು ತನ್ನ ಕೆಲಸವನ್ನು ಮಾಡುತ್ತಿದ್ದು, ಅದು ನಿಮ್ಮನ್ನು ಮೇಲಕ್ಕೆ ಎಳೆಯುತ್ತಿದ್ದರೆ ನೀವು ಕೈಬಿಟ್ಟು ಅನಗತ್ಯ ಒದ್ದಾಟವನ್ನು ಸೃಷ್ಟಿಸುತ್ತೀರಿ. ಆಧ್ಯಾತ್ಮಿಕ ಪ್ರಕ್ರಿಯೆಯಿಂದಾಗಿ ಜೀವನವು ಸಂಭವಿಸುತ್ತಿದ್ದರೆ, ಅದು ನನಗೆ ಪರವಾಗಿಲ್ಲ. ಒದ್ದಾಟವು ಸಂಭವಿಸುತ್ತಿದ್ದರೆ, ಅದಕ್ಕೆ ಕಾರಣ,  ನೀವು ಅನುಗ್ರಹವನ್ನು ನಿಮ್ಮನ್ನು ಮೇಲೆ ಎಳೆಯಲು ಆಹ್ವಾನಿಸಿ ನಂತರ ಕೈಬಿಡುತ್ತಿದ್ದೀರಿ. ಆಗ ಸಹಜವಾಗಿಯೇ, ನೀವು ಒದ್ದಾಡುತ್ತೀರಿ.