ಕನಸುಗಳು ಮತ್ತು ಕರ್ಮ – ಭಾಗ 2
ಎರಡು ಭಾಗಗಳ ಪೈಕಿ ಎರಡನೇ ಭಾಗದಲ್ಲಿ, ಸದ್ಗುರುಗಳು ಕನಸುಗಳ ಸ್ವರೂಪವನ್ನು ಮತ್ತು ಅವು ಕರ್ಮದ ಗೋಜಲನ್ನು ಬಿಡಿಸುವುದಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ನೋಡುತ್ತಾರೆ.

ಸದ್ಗುರು: ಕರ್ಮವು ಅನೇಕ ವಿಷಯಗಳಿಂದ ಕೂಡಿದೆ. ಪ್ರತಿಯೊಬ್ಬರ ಪ್ರಸ್ತುತ ಗ್ರಹಿಕೆಯ ಪ್ರಕಾರ ನಾವು ಅದೇ ಕರ್ಮದ ಬಗ್ಗೆ ವಿವಿಧ ಹಂತಗಳಲ್ಲಿ ಮಾತನಾಡುತ್ತೇವೆ. ಕರ್ಮ ಎಂದರೆ ಕಾರ್ಯ. ಯಾರ ಕಾರ್ಯ? "ನನ್ನ ಕಾರ್ಯ." ಮೊದಲನೇದಾಗಿ ಏನೆಂದರೆ , "ಈ ಬಿಡಿಸಿಕೊಳ್ಳುವಿಕೆ ಆಗುತ್ತಿರುವುದು, ನಾನೇ ಬಂಧಿಸಿಕೊಂಡಿರುವುದರಿಂದ" ಎನ್ನುವುದನ್ನು ಅರಿತುಕೊಳ್ಳುವುದು. ಈ ಬಿಡಿಸಿಕೊಳ್ಳುವಿಕೆ ಬಹಳ ಸ್ವಯಂಚಾಲಿತವಾಗಿ ಆಗುತ್ತಿರುವಂತೆ ಕಾಣುತ್ತದೆ. "ಇದಕ್ಕೆ ನನ್ನ ತೊಡಗುವಿಕೆಯೂ ಸಹ ಬೇಕಾಗಿಲ್ಲ. ಇದು ತಾನಾಗೇ ಆಗುತ್ತದೆ. ನನ್ನ ಕೋಪ ತಾನಾಗೇ ಆಗುತ್ತದೆ, ನನ್ನ ಆಲೋಚನೆಗಳು ತಾನಾಗೇ ಆಗುತ್ತವೆ, ನನ್ನ ಭಾವನೆಗಳು ತಾನಾಗೇ ಆಗುತ್ತವೆ." ಇದು ಆಗಲು ಉದ್ದೇಶ ಅಥವಾ ತೊಡಗಿಸಿಕೊಳ್ಳುವಿಕೆಯ ಅಗತ್ಯವೂ ಇಲ್ಲ. ಇದು ಸುಮ್ಮನೆ ಆಗುತ್ತಿದೆ. ಇದು ಬೇರೆ ಯಾವುದೋ ಜೀವಿ ಇದೆಲ್ಲವನ್ನು ಮಾಡುತ್ತಿರುವಂತೆ ಕಾಣುತ್ತದೆ. ನೀವು ಸ್ವಲ್ಪ ಕಾಲ ಮೌನದಲ್ಲಿದ್ದು, ಮನಸ್ಸು ಹೇಗೆ ಸಾಗುತ್ತಿದೆ ಎಂಬುದನ್ನು ಗಮನಿಸಿದರೆ, ನೀವು ಬೇರೆ ಯಾವುದೋ ಶಕ್ತಿಯ ಪ್ರಭಾವಕ್ಕೊಳಗಾಗಿರುವಂತೆ ಇರುತ್ತದೆ. ಅದು ತನ್ನದೇ ಆದ ಕೆಲಸವನ್ನು ಮಾಡುತ್ತಿರುವಂತೆ ಅನಿಸುತ್ತದೆ. ಆದರೆ ಅದು ಕೇವಲ ನೀವು ಮಾಡಿದ್ದನ್ನು ಬಿಡಿಸುತ್ತಿರುವುದು.
ಈಗ, ಜೀವನವೆಲ್ಲವೂ ಬಂಧಿಸಿಕೊಳ್ಳುವಿಕೆ, ಕನಸೆಲ್ಲವೂ ಬಿಡಿಸುವಿಕೆಯೇ? ಇಲ್ಲ. ಜೀವನವು ಬಂಧಿಸಿಕೊಳ್ಳುವಿಕೆ ಮತ್ತು ಬಿಡಿಸಿಕೊಳ್ಳುವಿಕೆಯ ಮಿಶ್ರಣ. ನೀವು ಎಷ್ಟು ಅಪ್ರಜ್ಞಾಪೂರ್ವಕರಾಗಿರುತ್ತೀರೋ, ಅಷ್ಟು ಬಿಡಿಸುವಿಕೆ ಆಗುತ್ತಿರುತ್ತದೆ. ನೀವು ಭಾಗಶಃ ಪ್ರಜ್ಞಾಪೂರ್ವಕರಾದರೆ, ನೀವು ಹೆಚ್ಚು ಬಂಧಿಸಿಕೊಳ್ಳುವಿಕೆಯಲ್ಲಿ ತೊಡಗುತ್ತೀರಿ. ನೀವು ಸಂಪೂರ್ಣವಾಗಿ ಪ್ರಜ್ಞಾಪೂರ್ವಕರಾದರೆ, ಆಗ ಬಿಡಿಸಿಕೊಳ್ಳುವಿಕೆ ಬಹಳ ವೇಗವಾಗಿ ಆಗುತ್ತದೆ, ಬಂಧಿಸಿಕೊಳ್ಳುವುದು ಸಂಪೂರ್ಣವಾಗಿ ತಡೆಯಲ್ಪಡುತ್ತದೆ. ಅರೆಪ್ರಜ್ಞಾವಸ್ಥೆಯಲ್ಲಿ ಯಾವಾಗಲೂ ಬಿಡಿಸಿಕೊಳ್ಳುವುದಕ್ಕಿಂತ ಹೆಚ್ಚು ಬಂಧಿಸುವಿಕೆಯಾಗುತ್ತಿರುತ್ತದೆ. ಉದಾಹರಣೆಗೆ, ಸಾಮಾನ್ಯ ರೈತ ಕೇವಲ ತನ್ನ ಕರ್ಮವನ್ನು ಬಿಡಿಸಿಕೊಳ್ಳುತ್ತಿದ್ದಾನೆ. ಅವನು ಹೆಚ್ಚು ವಿಷಯಗಳನ್ನು ಸಂಚಯಿಸುತ್ತಿಲ್ಲ. ಅವನು ಬೆಳಿಗ್ಗೆ ಎದ್ದು, ತನ್ನ ಭೂಮಿಯನ್ನು ಉಳುತ್ತಾನೆ, ತನ್ನ ಪ್ರಾಣಿಗಳನ್ನು ನೋಡಿಕೊಳ್ಳುತ್ತಾನೆ, ಅವನಿಗೆ ಬೇಕಾದ ಸರಳ ಕೆಲಸಗಳನ್ನು ಮಾಡುತ್ತಾನೆ ಅಷ್ಟೇ. ಅವನು ಜಗತ್ತನ್ನು ಹೇಗೆ ಜಯಿಸಬೇಕೆಂದು ಯೋಚಿಸುತ್ತಿಲ್ಲ. ಆದ್ದರಿಂದ ಅವನ ಜೀವನವು ಹೆಚ್ಚಾಗಿ ಬಿಡಿಸಿಕೊಳ್ಳುವ ಬಗ್ಗೆಯಾಗಿದೆ. ಅವನಲ್ಲಿ ಬಂಧಿಸಿಕೊಳ್ಳುವಿಕೆ ಇಲ್ಲವೇ ಇಲ್ಲ ಎಂದಲ್ಲ, ಆದರೆ ಅವನ ಬಂಧಿಸಿಕೊಳ್ಳುವಿಕೆ, ಬಿಡಿಸಿಕೊಳ್ಳುವುದಕ್ಕಿಂತ ಕಡಿಮೆ ಇರುತ್ತದೆ ಏಕೆಂದರೆ ಅವನ ಜೀವನದ ಸ್ವರೂಪವು ಬಂಧಿಸುವಿಕೆಗೆ ಹೆಚ್ಚಿನ ಅವಕಾಶ ನೀಡುವುದಿಲ್ಲ; ಇದು ಹೆಚ್ಚಾಗಿ ಬಿಡಿಸಿಕೊಳ್ಳುವಿಕೆ. ಆದರೆ ನೀವು ವಿದ್ಯಾವಂತರಾದ ಮೇಲೆ, ನಿಮ್ಮ ಬಂಧಿಸುವಿಕೆ ಮತ್ತು ಬಿಡಿಸಿಕೊಳ್ಳುವಿಕೆ ಚೆನ್ನಾಗಿ ಬೆರೆತುಹೋಗುತ್ತದೆ, ನೀವು ಏಕಕಾಲದಲ್ಲಿ ಬಂಧಿಸಿಕೊಳ್ಳುವಿಕೆ ಮತ್ತು ಮಾಡುವಿಕೆಯ ಸಾಮರ್ಥ್ಯವನ್ನು ಪಡೆಯುತ್ತೀರಿ.
ಒಂದು ಹಂತದಲ್ಲಿ, ನಿಮ್ಮ ಚಿಂತನೆ ಮತ್ತು ಭಾವನೆ ಅಪ್ರಜ್ಞಾಪೂರ್ವಕ ರೀತಿಯಲ್ಲಿ ತಮ್ಮನ್ನು ಕಾರ್ಯಗತಗೊಳಿಸುತ್ತಿವೆ. ಮತ್ತೊಂದು ಹಂತದಲ್ಲಿ, ನೀವು ಉದ್ದೇಶಗಳನ್ನು ಹೊಂದಿರುತ್ತೀರಿ. ಇದು ಜನರಿಗೆ ಸದಾ ಆಗುತ್ತಿರುತ್ತದೆ. ಇದೆಲ್ಲವನ್ನು ಶಿಕ್ಷಣದ ಮೇಲೆ ದೂಷಿಸಲು ನಾನು ಬಯಸುವುದಿಲ್ಲ, ಆದರೆ ಸಾಮಾನ್ಯವಾಗಿ, ನೀವು ಪಡೆಯುವ ಶಿಕ್ಷಣದ ಪ್ರಕಾರವೇ ಇದಕ್ಕೆ ಕಾರಣ - ಇದು ನಿಮ್ಮಲ್ಲಿ ಬಲವಾದ ಉದ್ದೇಶಗಳನ್ನು ಸ್ಥಾಪಿಸುತ್ತದೆ. ಇಂದಿನ ಶಿಕ್ಷಣವು ತಿಳುವಳಿಕೆಯ ಪ್ರಕ್ರಿಯೆಯಲ್ಲ, ಇದು ಸಾಕ್ಷಾತ್ಕಾರದ ಪ್ರಕ್ರಿಯೆಯಲ್ಲ, ಇದು ನಿಮ್ಮ ದೇಹ ಅಥವಾ ನಿಮ್ಮ ಮನಸ್ಸನ್ನು ಅದರ ಸಂಪೂರ್ಣ ಸಾಮರ್ಥ್ಯಕ್ಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲ. ಇದು ನಿಮ್ಮಲ್ಲಿ ಬಹಳ ಬಲವಾದ ಆಸೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸ್ಥಾಪಿಸುತ್ತದೆ.
ವಿದ್ಯಾವಂತ ಜನರು ಮಿತಿಯಿಲ್ಲದ ಬಯಕೆಗಳಿಂದ ನರಳುತ್ತಿದ್ದಾರೆ. ಅವರಿಗೆ ಹೊಟ್ಟೆ ತುಂಬ ತಿಂದು ಸಂತೋಷದಿಂದ ಕುಳಿತು ನಿದ್ದೆ ಮಾಡಲು ಆಗುವುದಿಲ್ಲ. ಇಲ್ಲ. ಅವರು ತಿನ್ನುವಾಗ, ವ್ಯಾಪಾರದ ಬಗ್ಗೆ ಮಾತನಾಡುತ್ತಾರೆ. ಕೆಲಸವನ್ನು ಕೈಗೆತ್ತಿಕೊಂಡಿರುವುದರಿಂದ, ಏನನ್ನಾದರೂ ಸೃಷ್ಟಿಸಲು, ಏನನ್ನಾದರೂ ನಿರ್ಮಿಸಲು, ತಮ್ಮ ಜೀವನ ಅಥವಾ ಎಲ್ಲರ ಜೀವನವನ್ನು ಅದ್ಭುತವಾಗಿಸಲು ಅಲ್ಲ. ಅಲ್ಲ. ಯಾವುದೇ ನಿರ್ದಿಷ್ಟ ಧ್ಯೇಯವಿಲ್ಲದೆ, ಬಲವಾದ ಉದ್ದೇಶಗಳನ್ನು ಹೊಂದಿರುವುದರಿಂದ ಅವರು ಮಾಡುತ್ತಿರುವ ಅಸಂಬದ್ಧತೆಯನ್ನು ಇನ್ನಷ್ಟು ಮಾಡಲು ಬಯಸುತ್ತಾರೆ. ಇದು ಕರ್ಮವನ್ನು ಸೃಷ್ಟಿಸಲು ಶಕ್ತಿಶಾಲಿ ಸಾಧನ: ಉದ್ದೇಶ. ಕರ್ಮವನ್ನು ಉಂಟುಮಾಡುವುದು ಇಚ್ಛೆಯೇ ಹೊರತು ಕಾರ್ಯವಲ್ಲ.
ಕರ್ಮದ ಪ್ರಕ್ರಿಯೆಯಲ್ಲಿ, ಚಟುವಟಿಕೆಯ ಕಾರಣದಿಂದ ಬಿಡಿಸಿಕೊಳ್ಳುವಿಕೆ ಆಗುತ್ತಿದೆ. ಬಲವಾದ ಉದ್ದೇಶಗಳ ಕಾರಣದಿಂದ ಕರ್ಮಗಳು ಉಂಟಾಗುತ್ತಿದೆ. ನೀವು ನಿಮ್ಮ ಬಗ್ಗೆ ಎಷ್ಟು ಹೆಚ್ಚು ಯೋಚಿಸುತ್ತೀರೋ, ನಿಮ್ಮ ಉದ್ದೇಶಗಳು ಅಷ್ಟು ಬಲವಾಗುತ್ತವೆ. ನಾನು ಉದ್ದೇಶಗಳೆಂದು ಹೇಳುವಾಗ, ನಾನು ಶ್ರೇಷ್ಠ ಉದ್ದೇಶಗಳ ಬಗ್ಗೆ ಮಾತನಾಡುತ್ತಿಲ್ಲ - ನಾನು ಪ್ರಬಲವಾದ ಉದ್ದೇಶಗಳ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಕೋಪದಲ್ಲಿದ್ದಾಗ, ನೀವು ಕರ್ಮದಿಂದ ಬಿಡಿಸಿಕೊಳ್ಳುತ್ತಿರಬಹುದು, ಆದರೆ ನೀವು ಕರ್ಮದ ಸಂಚಯವನ್ನು ಮಾಡುತ್ತಲೂ ಇರಬಹುದು. ನೀವು ಕೋಪಕ್ಕೆ ಗುರಿಯಾಗಿ ತಣ್ಣಗಾಗಬಹುದು. ಅಥವಾ ನೀವು ಕೋಪಕ್ಕೆ ಗುರಿಯಾಗಿ ನಂತರ ಒಂದು ಉದ್ದೇಶವನ್ನು ಸೃಷ್ಟಿಸಬಹುದು: "ನಾನು ಅವಳಿಗೆ ಏನು ಮಾಡಬೇಕೆಂದು ಬಯಸುತ್ತೇನೆ ಗೊತ್ತೇ?" ಈಗ ನೀವು ದೊಡ್ಡ ರೀತಿಯಲ್ಲಿ ಕರ್ಮ ಸಂಚಯದಲ್ಲಿ ತೊಡಗುತ್ತೀರಿ. ಕೋಪವು ಕೇವಲ ಸ್ಫೋಟ. ಕೋಪವು ನಿಮ್ಮೊಳಗೆ ಆದ ಯಾವುದೋ ಒಂದು ವಿಷಯದ ಬಿಡಿಸುವಿಕೆ. ಕೋಪವು ದ್ವೇಷವನ್ನು ಹುಟ್ಟಿಸಬಹುದು. ದ್ವೇಷವು ಉದ್ದೇಶ. ದ್ವೇಷವು ಉದ್ದೇಶವನ್ನು ಹೊಂದಿರುವ ಕೋಪ. ಅಸೂಯೆ ಬಿಡಿಸಿಕೊಳ್ಳುವಿಕೆ ಆಗಿರಬಹುದು, ನಾವು ಹೊಟ್ಟೆಕಿಚ್ಚು ಉದ್ದೇಶವೆಂದು ಹೇಳಬಹುದು - ಇದು ಉದ್ದೇಶವನ್ನು ಹೊಂದಿರುವ ಅಸೂಯೆ. ಈಗ, ನೀವು ಕೋಪದಲ್ಲಿದ್ದರೂ, ನೀವು ದ್ವೇಷದಿಂದ ತುಂಬಿದ್ದರೆ, ಒಂದು ನಿರ್ದಿಷ್ಟ ಶಾಂತತೆಯೊಂದಿಗೆ ನಿಮ್ಮ ಕೋಪ ಅಥವಾ ದ್ವೇಷವನ್ನು ನೀವು ತೋರಿಸುವುದಿಲ್ಲ. ನೀವು ಶಾಂತವಾದ ಮುಖವನ್ನು ಹಾಕಿಕೊಂಡು ಉಗ್ರವಾದ ಕೆಲಸಗಳನ್ನು ಮಾಡುತ್ತೀರಿ, ಅಲ್ಲವೇ? ಉದಾಹರಣೆಗೆ ಕಾಮವು ಬಿಡಿಸಿಕೊಳ್ಳುವಿಕೆ. ಉದ್ರೇಕ ಕರ್ಮ ಸಂಚಯ ಏಕೆಂದರೆ ಅದು ಉದ್ದೇಶ.
ಸುಶಿಕ್ಷಿತರೆಂದು ಎಂದು ಕರೆಯಲ್ಪಡುವವರು
ನಿಮ್ಮೊಳಗೆ ನಡೆಯುವ ಎಲ್ಲಾ ಆಲೋಚನೆಗಳು ಮತ್ತು ಭಾವನೆಗಳಿಗೆ ಅಭಿವ್ಯಕ್ತಿ ನೀಡಿದರೆ, ನೀವು ಬಹುತೇಕ ಅಸಭ್ಯರಾಗಿ ಕಾಣುತ್ತೀರಿ. ಅದನ್ನು ಪರಿಷ್ಕರಿಸಲು, ನೀವು ಒಂದು ಉದ್ದೇಶವನ್ನು ಸೃಷ್ಟಿಸುತ್ತೀರಿ - ಅದೇ ಕರ್ಮ ಸಂಚಯ. ಈ ಅತ್ಯಾಧುನಿಕತೆ ಎಂಬುದು ಆತ್ಮಹತ್ಯೆಯಂತೆ ಏಕೆಂದರೆ ನಿರಂತರವಾಗಿ ನೀವು ಕರ್ಮದಿಂದ ಬಿಡಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕರ್ಮ ಸಂಚಯದಲ್ಲಿ ತೊಡಗುತ್ತೀರಿ, ಏಕೆಂದರೆ ಮನಸ್ಸು ಎರಡು ಮುಖಗಳನ್ನು ಹೊಂದಿರುತ್ತದೆ. ಒಂದು ಹಂತದಲ್ಲಿ, ಅದು ಬಿಡಿಸಿಕೊಳ್ಳುತ್ತಿದೆ, ಇನ್ನೊಂದು ಹಂತದಲ್ಲಿ, ಅದು ತನ್ನದೇ ಆದ ಉದ್ದೇಶಗಳನ್ನು ಹೊಂದಿದೆ. ಸುಶಿಕ್ಷಿತರೆಂದು ಕರೆಯಲ್ಪಡುವ ಜನರನ್ನು ನೀವು ನೋಡುತ್ತೀರಿ - ನಾನು "ಸುಶಿಕ್ಷಿತರು" ಎಂದು ಹೇಳಿದಾಗ, ಸಾಮಾಜಿಕವಾಗಿ ಸುಶಿಕ್ಷಿತ ಜನರನ್ನು ಅರ್ಥೈಸುತ್ತೇನೆ, ನಿಜವಾಗಿಯೂ ಸುಸಂಸ್ಕೃತ ಜನರನ್ನಲ್ಲ - ಅವರು ಸರಳ ಜನರಿಗಿಂತ ಯಾವಾಗಲೂ ಹೆಚ್ಚು ಬಳಲುತ್ತಾರೆ. ಸರಳ ಜನರ ಕೋಪ, ದ್ವೇಷ ಮತ್ತು ಪೂರ್ವಗ್ರಹಗಳು ಮುಕ್ತ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆ. ಅವರು ಒರಟಾಗಿ ಕಾಣಿಸಬಹುದು ಆದರೆ ಕುಯುಕ್ತಿಯ ದೃಷ್ಟಿಯಿಂದ, ಅವರು ಸುಶಿಕ್ಷಿತರು ಎಂದು ಕರೆಯಲ್ಪಡುವ ಜನರಿಗಿಂತ ಹಲವು ಅಂಕಗಳಷ್ಟು ಕೆಳಗಿದ್ದಾರೆ. ಹೆಚ್ಚು ಸುಶಿಕ್ಷಿತ ಜನರು, ಮೊದಲಿಗೆ ಇತರರನ್ನು ಮೋಸಗೊಳಿಸಲು ಕಲಿಯುತ್ತಾರೆ. ಸ್ವಲ್ಪ ಸಮಯದ ನಂತರ, ಅವರು ಪರಿಣತರಾಗುತ್ತಾರೆ ಮತ್ತು ಅವರು ತಮ್ಮನ್ನೂ ಸಹ ಮೋಸಗೊಳಿಸಬಹುದು. ಅವರ ಉದ್ದೇಶಗಳು ಅವರಿಗೂ ಬಹಿರಂಗವಾಗುವುದಿಲ್ಲ.
ಮಾನವ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ, ಅದು ಹೇಗೆ ವಿಕಸನಗೊಳ್ಳುತ್ತದೆ, ಯಾವುದು ಅದನ್ನು ಅರಳಿಸಬಲ್ಲದು, ಯಾವುದು ಅದನ್ನು ಕೊಳಕಾಗಿಸಬಲ್ಲದು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದೆ, ಶಿಕ್ಷಣವು ನಿಮಗೆ ನೀಡುವ ವೈವಿಧ್ಯಮಯ ಅನಾವರಣದಿಂದಾಗಿ ಆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ವಿಷಯಗಳನ್ನು ಯಾವುದೇ ಆಳವಾದ ತಿಳುವಳಿಕೆಯಿಂದ ನೋಡಲಾಗುತ್ತಿಲ್ಲ. ಮಾಹಿತಿಯನ್ನು ಎಲ್ಲಾ ರೀತಿಯ ರೂಪಗಳಲ್ಲಿ ಎಲ್ಲಾ ರೀತಿಯ ಜನರಿಗೆ ಸರಳವಾಗಿ ನೀಡಲಾಗುತ್ತದೆ. ಆದ್ದರಿಂದ ಸಾಮಾನ್ಯವಾಗಿ, ದುರದೃಷ್ಟವಶಾತ್ ಜನರು ತಮ್ಮನ್ನು ತಾವು ಬಂಧಿಸಿಕೊಳ್ಳಲು ಶಿಕ್ಷಣವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಸುತ್ತಲಿನ ಪ್ರಪಂಚದ ವಿಷಯದಲ್ಲಿ, ಮಾಹಿತಿಯ ವಿಷಯದಲ್ಲಿ, ಅವರಿಗೆ ಹೆಚ್ಚು ತಿಳಿದಿರಬಹುದು, ಆದರೆ ಜೀವನ ಪ್ರಕ್ರಿಯೆಯ ವಿಷಯದಲ್ಲಿ, ವಿದ್ಯಾವಂತ ಜನರು ಸಾಮಾನ್ಯವಾಗಿ ಅನಕ್ಷರಸ್ಥರಿಗಿಂತ ಹೆಚ್ಚು ಅಜ್ಞಾನಿಗಳಾಗಿರುತ್ತಾರೆ.ನೀವು ಭಾರತದಲ್ಲಿ ಸರಳ ಅನಕ್ಷರಸ್ಥ ರೈತರ ಮನೆಗೆ ಹೋದರೆ, ಅವನ ಜೀವನ ಪ್ರಜ್ಞೆ, ಅವನ ದೇಹದ ಪ್ರಜ್ಞೆ, ಅವನ ದೈಹಿಕ ಸೌಕರ್ಯದ ಪ್ರಜ್ಞೆ, ಯಾರೊಂದಿಗೆ ಏನು ಕೆಲಸ ಮಾಡುತ್ತದೆ ಮತ್ತು ಏನು ಮಾಡುವುದಿಲ್ಲ ಎಂಬ ಅವನ ಪ್ರಜ್ಞೆಯು ಪ್ರಪಂಚದ ಹೆಚ್ಚಿನ ವಿದ್ಯಾವಂತ ಸಮುದಾಯಗಳಿಗಿಂತ ಹೆಚ್ಚು ಸ್ಪಷ್ಟ ಮತ್ತು ಸಮಂಜಸವಾಗಿದೆ. ಏಕೆಂದರೆ ಅವನ ಮನಸ್ಸಿನಲ್ಲಿ ಅಷ್ಟೊಂದು ಗೊಂದಲಮಯ ಚಿಂತನೆ ಇಲ್ಲ. ಅವನು ತಲೆಯಲ್ಲಿ ಹೆಚ್ಚು ಗೋಜಲುಗಳಿಲ್ಲ, ಇದು ಬಹಳಷ್ಟು ವಿದ್ಯಾವಂತ ಜನರಿಗೆ ಸಂಭವಿಸಿದೆ. ಶಿಕ್ಷಣವೇ ಕಾರಣವಲ್ಲ, ಅದನ್ನು ಒಬ್ಬರ ಯೋಗಕ್ಷೇಮಕ್ಕಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಯಾವುದೇ ಮಾರ್ಗಸೂಚಿ ಇಲ್ಲದಿರುವುದು ಇದಕ್ಕೆ ಕಾರಣ. ಆದ್ದರಿಂದ ದುರದೃಷ್ಟವಶಾತ್, ಸಬಲೀಕರಣವಾಗಬೇಕಿದ್ದ ಶಿಕ್ಷಣ, ಸ್ಪಷ್ಟತೆಯಾಗಬೇಕಿದ್ದ ಶಿಕ್ಷಣವು ಜೀವನ ಪ್ರಕ್ರಿಯೆಯ ಬಗ್ಗೆಯೇ ಹೆಚ್ಚಿನ ಗೊಂದಲವನ್ನು ತಂದಿದೆ.
ಆದ್ದರಿಂದ ಎಚ್ಚರ ಮತ್ತು ಕನಸು - ಈ ಎರಡರ ನಡುವೆ ವ್ಯತ್ಯಾಸ ಮಾಡದಿರುವುದೇ ಉತ್ತಮ. ಈ ಎರಡೂ ಸ್ಥಿತಿಗಳನ್ನು ಕನಸಾಗಿ ನೋಡಬೇಕೆಂದು, ಅಥವಾ ಈ ಎರಡೂ ಸ್ಥಿತಿಗಳನ್ನು ಎಚ್ಚರದ ವಿವಿಧ ಹಂತಗಳಾಗಿ ನೋಡಬೇಕು. ಇದು ಒಂದು ರೀತಿಯ ಕನಸು, ಅದು ಆಳವಾದ ಕನಸು. ಅಥವಾ ಇದು ಒಂದು ರೀತಿಯ ವಾಸ್ತವ, ಅದು ಇನ್ನೊಂದು ರೀತಿಯ ವಾಸ್ತವ. ನೀವು ಇದನ್ನು ಈ ರೀತಿ ನೋಡಿದರೆ, ನೀವು ಎರಡನ್ನೂ ಬಂಧಿಸಿಕೊಳ್ಳುವ ಪ್ರಕ್ರಿಯೆಯಾಗಿಸುವ ಬದಲು ಬಿಡಿಸಿಕೊಳ್ಳುವ ಪ್ರಕ್ರಿಯೆಯನ್ನಾಗಿ ಮಾಡಿಕೊಳ್ಳಬಹುದು.


