ಮಾನವನ ನಡವಳಿಕೆಗಳು ಮತ್ತು ಜೀವನದ ಅನುಭವಗಳು ಅವರ ಡಿಎನ್‌ಎ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಮತ್ತು ಈ ಪ್ರಭಾವಗಳು ಪೀಳಿಗೆಯಿಂದ ಪೀಳಿಗೆಗೆ  ಹರಡಬಹುದು ಎಂಬುದನ್ನು ಅಧ್ಯಯನ ಮಾಡುವ ಜೀವಶಾಸ್ತ್ರದ ಒಂದು ಶಾಖೆಯಾದ ಎಪಿಜೆನೆಟಿಕ್ಸ್ ಅನ್ನು ಇಂದು ವಿಜ್ಞಾನಿಗಳು ಪರಿಶೋಧಿಸುತ್ತಿದ್ದಾರೆ. ಆದರೆ, ಯೋಗದ ದೃಷ್ಟಿಕೋನದಲ್ಲಿ, ಹಿಂದಿನ ಪ್ರಭಾವವು ನಮ್ಮ ಪೂರ್ವಜರನ್ನು ಮೀರಿ, ಭೂಮಿಯ ಮೊದಲ ಜೀವರೂಪದವರೆಗೂ ವ್ಯಾಪಿಸಿದೆ. ಈ ಲೇಖನದಲ್ಲಿ, ದೀರ್ಘಕಾಲದಿಂದಲೂ ಬಳಕೆಯಲ್ಲಿರುವ ಮತ್ತು ವಿವಿಧ ರೀತಿಯಲ್ಲಿ ದುರ್ಬಳಕೆಯಾಗುತ್ತಿರುವ ಪದ; ಕರ್ಮದ ಅರ್ಥವನ್ನು ಸದ್ಗುರುಗಳು ವಿವರಿಸುತ್ತಾರೆ. ಅದರ ಪ್ರಭಾವಗಳು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ವಿವರಿಸುತ್ತಾ, ಅವರು ಈ ಜಟಿಲ ಸಂರಚನೆಯ ಮೇಲೆ ಹಿಡಿತವನ್ನು ಪಡೆಯುವ ಮಾರ್ಗವನ್ನೂ ತೋರಿಸುತ್ತಾರೆ.

ಸದ್ಗುರು: ಕರ್ಮ ಎಂದರೆ ಕಾರ್ಯ ಅಥವಾ ನಮ್ಮೊಳಗೆ ಉಳಿದಿರುವ ಕಾರ್ಯದ ಅವಶೇಷ. ನಿಮ್ಮ ತಂದೆ ಮಾಡಿದ ಕಾರ್ಯಗಳು ಕೇವಲ ನೀವಿರುವ ಜೀವನ ಸನ್ನಿವೇಶದಲ್ಲಷ್ಟೇ ಅಲ್ಲದೆ ನಿಮ್ಮ ದೇಹದ ಪ್ರತಿಯೊಂದು ಕೋಶದಲ್ಲಿಯೂ ಪ್ರಬಲವಾಗಿ ಪ್ರಭಾವ ಬೀರುತ್ತಿವೆ. ನಿಮ್ಮ ಹೆತ್ತವರಿಂದ ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ! ನೀವು ಹದಿನೆಂಟು ಅಥವಾ ಇಪ್ಪತ್ತು ವರ್ಷದವರಾಗಿದ್ದಾಗ, ನಿಮ್ಮ ತಂದೆ ಅಥವಾ ನಿಮ್ಮ ತಾಯಿಯ ವಿರುದ್ಧ ಸಂಪೂರ್ಣವಾಗಿ ಬಂಡಾಯವೆದ್ದಿರುವುದನ್ನು ಗಮನಿಸಿರಬಹುದು, ಆದರೆ ನೀವು ನಲವತ್ತು ಅಥವಾ ನಲವತ್ತೈದು ವರ್ಷದವರಾದಾಗ, ನೀವು ಅವರಂತೆ ಮಾತನಾಡಲು ಪ್ರಾರಂಭಿಸುತ್ತೀರಿ, ಅವರಂತೆಯೇ ವರ್ತಿಸುತ್ತೀರಿ ಮತ್ತು ಅವರಂತೆಯೇ ಕಾಣುತ್ತೀರಿ. ಈ ರೀತಿ ಬದುಕುವುದು ದುರ್ಭಾಗ್ಯ, ಏಕೆಂದರೆ, ಈ ತಲೆಮಾರು ಏನಾದರೂ ಹಿಂದಿನ ತಲೆಮಾರಿನಂತೆಯೇ ವರ್ತಿಸುತ್ತ, ನಡೆದುಕೊಳ್ಳುತ್ತ, ಜೀವಿಸುತ್ತ, ಜೀವನವನ್ನು ಅನುಭವಿಸುತ್ತಿದ್ದರೆ, ಇದೊಂದು ವ್ಯರ್ಥವಾದ ಪೀಳಿಗೆ. ಹಿಂದಿನ ತಲೆಮಾರಿನವರು ಎಂದೂ ಊಹಿಸದ ರೀತಿಯಲ್ಲಿ ಈ ಪೀಳಿಗೆಯು ಜೀವನವನ್ನು ಅನುಭವಿಸಬೇಕು. ನೀವು ಬೀದಿಯಲ್ಲಿ ಏನಾದರೂ ಹುಚ್ಚುತನವನ್ನು ಮಾಡಬೇಕೆಂದು ನಾನು ಹೇಳುತ್ತಿಲ್ಲ, ನನ್ನ ಪ್ರಕಾರ ನೀವು ಜೀವನವನ್ನು ಅನುಭವಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಅದನ್ನು ಅನುಭವದ ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು.

ಪುರಾತನ ಕೂಗು

ಆದರೆ ಕರ್ಮ ಕೇವಲ ನಿಮ್ಮದಲ್ಲ, ನಿಮ್ಮ ತಂದೆ ಅಥವಾ ಅಜ್ಜನದೂ ಅಲ್ಲ. ಮೊದಲ ಜೀವ ರೂಪ, ಆ ಬ್ಯಾಕ್ಟೀರಿಯಾ ಅಥವಾ ವೈರಸ್, ಆ ಏಕ ಕೋಶ ಜೀವಿಯ ಕರ್ಮವೂ ಸಹ ಇಂದಿಗೂ ನಿಮ್ಮೊಳಗೆ ಕಾರ್ಯನಿರ್ವಹಿಸುತ್ತಿದೆ. ನಿಮ್ಮ ದೇಹದಲ್ಲಿ ನೀವು ಹೊಂದಿರುವ ಬ್ಯಾಕ್ಟೀರಿಯಾಗಳು ಸಹ ನಿಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯರು ಯಾವ ರೀತಿಯ ಬ್ಯಾಕ್ಟೀರಿಯಾವನ್ನು ಹೊಂದಿದ್ದರು ಎಂಬುದರ ಆಧಾರದ ಮೇಲೆ ಒಂದು ನಿರ್ದಿಷ್ಟ ನಡವಳಿಕೆಯ ಮಾದರಿಯನ್ನು ಹೊಂದಿರುತ್ತದೆ. ಆದ್ದರಿಂದ, ನಿಮ್ಮ ಬಗ್ಗೆ ನೀವು ಹೊಂದಿರುವ ಎಲ್ಲಾ ಮಹಾನ್ ಕಲ್ಪನೆಗಳು, ನಿಮ್ಮ ವ್ಯಕ್ತಿತ್ವದ ಬಗ್ಗೆ ನೀವು ಹೊಂದಿರುವ ಎಲ್ಲಾ ಮಹಾನ್ ಕಲ್ಪನೆಗಳು ಸುಳ್ಳಾಗಿವೆ. ಇದಕ್ಕಾಗಿಯೇ ನಾವು ನಿಮಗೆ ಹೇಳಿದ್ದೇವೆ, ಇದೆಲ್ಲವೂ ಮಾಯೆ, ಏಕೆಂದರೆ ನಿಮ್ಮಲ್ಲಿ ಆಗುತ್ತಿರುವ ಸಂಗತಿಗಳು ಹೇಗಿವೆಯೆಂದರೆ, ನೀವು ಮಾಡುವ ಎಲ್ಲವೂ ಗತಕಾಲದ ಮಾಹಿತಿಯಿಂದ ನಿಯಂತ್ರಿಸಲ್ಪಡುತ್ತಿವೆ.

"ನೀವು ಏನನ್ನೂ ಮಾಡಬೇಕಾಗಿಲ್ಲ, ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ. ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ಕುಳಿತು ಧ್ಯಾನ ಮಾಡಿ" ಎಂದು ನಾನು ನಿಮಗೆ ಹೇಳಿದರೆ, ಆರಂಭದಲ್ಲಿ ಅದು ದೊಡ್ಡ ಭಾಗ್ಯವೆಂಬಂತೆ ಕಾಣಿಸಬಹುದು, ಆದರೆ ಒಂದು ತಿಂಗಳ ಬಳಿಕ ನೀವು ಹುಚ್ಚರಾಗಿಬಿಡುವಿರಿ. ಆ ಹುಚ್ಚುತನವನ್ನು ಮೀರಿಹೋದರೆ, ನೀವು ಎಲ್ಲವನ್ನೂ ಮೀರಿಹೋಗುವಿರಿ, ಆದರೆ ಹೆಚ್ಚಿನವರು ತಮ್ಮೊಳಗೆ ಹುಚ್ಚು ಹುಟ್ಟಿಕೊಂಡಾಗ ಬಿಟ್ಟುಬಿಡುತ್ತಾರೆ. ಅವರು ಗಾಬರಿಗೊಂಡು ಓಡಿಹೋಗಲು ಪ್ರಯತ್ನಿಸುತ್ತಾರೆ ಏಕೆಂದರೆ ಇದು ಸುಲಭದ ಸಂಗತಿಯಲ್ಲ. ಇದು ನಿಮ್ಮ ತಂದೆ, ನಿಮ್ಮ ಅಜ್ಜ, ನಿಮ್ಮ ಪೂರ್ವಿಕರು ಮತ್ತು ಆ ಎಲ್ಲ ಬ್ಯಾಕ್ಟೀರಿಯಾಗಳ ಪುರಾತನ ಕೂಗಾಗಿದೆ. ಲಕ್ಷಾಂತರ ಜೀವಗಳು, ಅವೆಲ್ಲವೂ ತಮ್ಮ ಅಭಿವ್ಯಕ್ತಿಗಾಗಿ ಕೂಗಾಡುತ್ತಿವೆ.  ಅವು ತಮ್ಮ ಮಾತನ್ನು ಹೇಳಲು ಬಯಸುತ್ತವೆ . ಅವು ನಿಮ್ಮನ್ನು ಸುಲಭವಾಗಿ ಬಿಡುವುದಿಲ್ಲ. ನೀವು ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಏಕೆಂದರೆ ಅವು ನಿಮ್ಮ ದೇಹದ ಪ್ರತಿಯೊಂದು ಕೋಶದಲ್ಲೂ ಮಿಡಿಯುತ್ತಿವೆ.

"ಇದರ ಅರ್ಥ ನಾನು ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದೇ?" ಖಚಿತವಾಗಿ ಸಿಕ್ಕಿಹಾಕಿಕೊಂಡಿದ್ದೀರಿ, ಆದರೆ ಸಂಪೂರ್ಣವಾಗಿ ಅಲ್ಲ. ಏಕಕೋಶೀಯ ಪ್ರಾಣಿಯಿಂದ ಪ್ರಾರಂಭವಾಗಿ ಅತ್ಯುನ್ನತವಾದ ಪ್ರಾಣಿಯವರೆಗೆ ಇರುವ ಪ್ರಾಣಿ ಸ್ವಭಾವದ ಸಂಯುಕ್ತ ಅಭಿವ್ಯಕ್ತಿಯಾದ ಪಶುಪತದಿಂದ - ಪಶುಪತಿ, "ಪಶು" ಎಂದರೆ ಜೀವ, "ಪತಿ" ಎಂದರೆ ಪ್ರಭು, ಎಲ್ಲಾ ಜೀವಗಳ ಪ್ರಭು,  ಪಶುಪತಿ ಆಗುವ ಸಾಧ್ಯತೆಯಿದೆ - ನೀವು ಇದೆಲ್ಲವನ್ನೂ  ಮೀರಿ ಹೋಗಬಹುದು.

ವಿಷಯಗಳ ಮೇಲೆ ಹಿಡಿತ ಪಡೆಯಿರಿ

ಕರ್ಮ ನಿಮ್ಮ ಶತ್ರುವಲ್ಲ ಎಂಬುದು ಅರ್ಥವಾಗಬೇಕು. ಯಾವುದು ಏನೆಂಬ ನಿಮ್ಮ ಅರಿವಿಲ್ಲದಿರುವಿಕೆಯೇ ನಿಮ್ಮ ಶತ್ರು. ಕರ್ಮ ಜೀವನಪ್ರಕ್ರಿಯೆಯ ನೆನಪುಗಳಾಗಿವೆ. ಏಕಕೋಶ ಜೀವಿಯಿಂದ ಹಿಡಿದು ಇತರ ಎಲ್ಲ ರೂಪಗಳವರೆಗಿನ ಜೀವನಪ್ರಕ್ರಿಯೆಯ ನೆನಪುಗಳಿರುವ ಕಾರಣದಿಂದಲೇ ನೀವು ಈಗಿರುವ ರೀತಿಯಲ್ಲಿ, ನಿಮಗೆ ಈ ಶರೀರವನ್ನು ನಿರ್ಮಿಸಲು ಸಾಧ್ಯವಾಗಿದೆ. ಈಗ ನಿಮ್ಮ ಭೌತಿಕ ಶರೀರದಲ್ಲಿ ನಿಮ್ಮ ಅಸ್ತಿತ್ವಕ್ಕೆ ಆಧಾರ ನಿಮ್ಮ ಕರ್ಮವೇ. ನಿಮ್ಮ ಎಲ್ಲ ಕರ್ಮಗಳನ್ನು ತೆಗೆದುಹಾಕಿದರೆ, ಈ ಕ್ಷಣವೇ ನೀವು ನಿಮ್ಮ ಶರೀರವನ್ನು ತ್ಯಜಿಸುತ್ತೀರಿ. ಇದು ನಿಮ್ಮ ಪ್ಲಗ್‌ನ್ನು ಕಿತ್ತುಹಾಕುವಂತೆ. ಕರ್ಮವು  ನಿಮ್ಮನ್ನು ನಿಮ್ಮ ಶರೀರಕ್ಕೆ ಭದ್ರವಾಗಿ ಜೋಡಿಸುವ ಒಂದು ಅಂಟಾಗಿದೆ.

ನಿಮ್ಮ ದೇಹ ಅಥವಾ ನಿಮ್ಮ ಮನಸ್ಸನ್ನು ನೀವು ಬದಲಾಯಿಸಬೇಕಾಗಿಲ್ಲ, ಹಿಡಿಕೆ ಎಲ್ಲಿದೆ ಎಂಬುದನ್ನು ಮಾತ್ರ ನೀವು ಕಂಡುಹಿಡಿಯಬೇಕು. ಈಗ, ನೀವು ಕಾರಿನಲ್ಲಿ ಕುಳಿತಾಗ, ನಿಮ್ಮ ಸೀಟ್ ಬೆಲ್ಟ್‌ನ್ನು ಹಾಕಿಕೊಳ್ಳುವಿರಿ. ಸೀಟ್ ಬೆಲ್ಟ್ ಒಳ್ಳೆಯದು, ಅದು ನಿಮ್ಮ ಜೀವವನ್ನು ಉಳಿಸಬಹುದು. ಆದರೆ ನೀವು ಸೀಟ್ ಬೆಲ್ಟ್‌ನ್ನು, ನೀವು ಬಯಸಿದಾಗ ತೆರೆಯಲು ಸಾಧ್ಯವಾಗದ ರೀತಿಯಲ್ಲಿ ಬಳಸಿದರೆ,  ಅದೇ ನಿಮ್ಮ ಬಂಧನವಾಗಿಬಿಡುತ್ತದೆ. ನೀವು ಕಾರನ್ನು ಹತ್ತಿದಾಗ, ನೀವು ಬಾಗಿಲು ಮುಚ್ಚುತ್ತೀರಿ. ಇದು ಒಂದು ಒಳ್ಳೆಯ ವಿಷಯ. ಆದರೆ ಊಹಿಸಿ, ನೀವು ಕಾರಿನಲ್ಲಿ ಪ್ರವೇಶಿಸಿದಿರಿ ಮತ್ತು ಬಾಗಿಲನ್ನು ತೆರೆಯಲಾಗುತ್ತಿಲ್ಲ, ಅದು ಭಯಾನಕವಾಗಿಬಿಡುತ್ತದೆ. ನೀವು ಕೇವಲ ಹಿಡಿಕೆಯೆಲ್ಲಿದೆ ಎಂಬುದನ್ನು ತಿಳಿಯಬೇಕು. ಆಗ, ನಿಮ್ಮ ಬಳಿ ಒಂದು ಪರ್ವತದಷ್ಟು ಕರ್ಮ ಇದ್ದರೂ ಯಾವ ಸಮಸ್ಯೆಯೂ ಇಲ್ಲ.

ಸಮಸ್ಯೆ ಬಂದಿರುವುದು ಕರ್ಮದಿಂದಲ್ಲ, ನೀವು ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಸಮಸ್ಯೆ ಬಂದಿದೆ, ನೀವು ಅದರ ಬಲೆಯಲ್ಲಿ ಸಿಲುಕಿದ್ದೀರಿ. ನಿಮ್ಮ ಮತ್ತು ನಿಮ್ಮ ದೇಹದ ನಡುವೆ, ನಿಮ್ಮ ಮತ್ತು ನಿಮ್ಮ ಮನಸ್ಸಿನ ನಡುವೆ ಸ್ವಲ್ಪ ಅಂತರ ಬಂದರೆ, ಯಾವುದೇ ಕರ್ಮವು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಶರೀರಧಾರಿಯಾಗಿ ಜೀವಿಸಲು ಸಹ ಅದನ್ನು ಬಳಸಿಕೊಳ್ಳಬಹುದು, ನೀವು ಒಂದು ನಿರ್ದಿಷ್ಟ ವ್ಯಕ್ತಿತ್ವವನ್ನು ಸಹ ಕಾಪಾಡಿಕೊಳ್ಳಬಹುದು ಆದರೆ ಅದು ಬಂಧನವಾಗುವುದಿಲ್ಲ, ಅದೊಂದು ಮೆಟ್ಟಿಲಾಗುತ್ತದೆ.