ಸದ್ಗುರು: ಇದು ವಾಸ್ತವದಲ್ಲಿ ಮಾನವರಿಗೆ ಮಾತ್ರವಲ್ಲದೆ ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ. ಭಾರತದಲ್ಲಿ, ಜನರು ಮಲಗಿರುವ ನಾಯಿಯನ್ನು ಸಹ ದಾಟುವುದಿಲ್ಲ.

ನಿಮ್ಮ ಜೀವನದ ಅನುಭವವು ಭೌತಿಕತೆಗೆ ಮಾತ್ರ ಸೀಮಿತವಾಗಿದ್ದಾಗ, ಮನುಷ್ಯನ ಗಡಿ ಚರ್ಮ ಎಂದು ಭಾವಿಸುತ್ತೀರಿ. ನೀವು ಜೀವನವನ್ನು ಅನುಭವಿಸುವ ರೀತಿಯನ್ನು ಸ್ವಲ್ಪ ಹೆಚ್ಚು ವಿಸ್ತರಿಸಿದಾಗ, ಮನುಷ್ಯನ ಗಡಿ ಚರ್ಮವನ್ನು ಮೀರಿ ಹೋಗಿರುವುದನ್ನು ನೋಡುತ್ತೀರಿ - ಎಷ್ಟರ ಮಟ್ಟಿಗೆ ಎಂಬುದು ನಿಮ್ಮ ಮೇಲೆ ಅವಲಂಬಿಸಿರುತ್ತದೆ. ನೀವು ಕಣ್ಣು ಮುಚ್ಚಿ ಕುಳಿತಷ್ಟೂ, ನೀವು "ದಪ್ಪ" ಆಗುತ್ತೀರಿ - ಕೊಬ್ಬಿನಾಂಶದ ಪ್ರಮಾಣದಲ್ಲಲ್ಲ - ನೀವು ವಿಸ್ತರಿಸುತ್ತೀರಿ. ನೀವು ಕಡಿಮೆ ಯೋಚಿಸಿದಷ್ಟೂ, ನಿಮ್ಮ ಉಪಸ್ಥಿತಿ ಹೆಚ್ಚಾಗುತ್ತದೆ.

ನೀವು ಕಣ್ಣು ಮುಚ್ಚಿ ಕುಳಿತಷ್ಟೂ, ನೀವು "ದಪ್ಪ" ಆಗುತ್ತೀರಿ - ಕೊಬ್ಬಿನಾಂಶದ ಪ್ರಮಾಣದಲ್ಲಲ್ಲ - ನೀವು ವಿಸ್ತರಿಸುತ್ತೀರಿ.

ಬಹುತೇಕ ಜನರು ನಿದ್ರಿಸುತ್ತಿರುವಾಗ ಮಾತ್ರ ತಮ್ಮೊಳಗೆ ಶಾಂತಿ ಮತ್ತು ಸಮತೋಲನದ ಸಾಮ್ಯತೆಯನ್ನು ಅನುಭವಿಸುತ್ತಾರೆ. ಅವರಿಗೆ ನಿದ್ದ್ರೆಯು ಅವರ ಜೀವನದಲ್ಲಿ ತಿಳಿದಿರುವ ಅತ್ಯಂತ ಗಹನವಾದ ಸ್ಥಿತಿಯಾಗಿದೆ. ಇದು ಅತ್ಯಂತ ದುರದೃಷ್ಟಕರವಾಗಿ ಜೀವಿಸುವ ವಿಧಾನ. ಅವರು ಗಾಢ ನಿದ್ದೆಯಲ್ಲಿದ್ದಾಗ, ಅವರು ಸಾಕಷ್ಟು ಶಾಂತಿಯುತ ಮತ್ತು ಸಮತೋಲಿತರಾಗಿರುತ್ತಾರೆ. ಎಚ್ಚರವಿದ್ದಾಗ ಅವರು ಎಲ್ಲೆಡೆ ಹರಡಿ ಹಂಚಿ ಹೋಗಿರುತ್ತಾರೆ.

ಹಾಗಾಗಿ, ಅವರು ಮಲಗಿದಾಗ ಸ್ವಲ್ಪ ವಿಸ್ತರಿಸಿರುತ್ತಾರೆ. ವಿಶೇಷವಾಗಿ ನೀವು ಯಾವುದೇ ಗಟ್ಟಿಯಾಗಿರುವುದರ ಮೇಲೆ ಮಲಗಿಕೊಂಡಾಗ, ನೀವು ಮಲಗಿರುವ ಕಡೆ ಅದಕ್ಕೆ ವ್ಯಕ್ತಗೊಳ್ಳಲು ಸ್ಥಳಾವಕಾಶವಿರದ ಕಾರಣ, ಸ್ವಾಭಾವಿಕವಾಗಿ ಅದು ಖಾಲಿ ಜಾಗವಿರುವ ಕಡೆಗೆ ವಿಸ್ತರಿಸುತ್ತದೆ. ನಿಮ್ಮ ಶಕ್ತಿಗಳು ನಿಮ್ಮ ಸುತ್ತಲೂ ಇರುವ ಬದಲು, ಅವು ನಿಮ್ಮ ಮೇಲೆ 50 ಪ್ರತಿಶತದಿಂದ  ರಿಂದ 100 ಪ್ರತಿಶತದವರೆಗೆ ವಿಸ್ತರಿಸುತ್ತವೆ.

ವಿಸ್ತೃತವಾದ ಶಕ್ತಿ ಶರೀರ

ಇದನ್ನು ಕಲ್ಪಿಸಿಕೊಳ್ಳುತ್ತ ಹೇಳುವುದಾದರೆ, ನಿಮ್ಮ ಶಕ್ತಿ ಶರೀರವು ನಿಮ್ಮ ಚರ್ಮವನ್ನೂ ಮೀರಿ  ಒಂದು ಅಡಿಯಷ್ಟಿದೆ ಅಂತಾದರೆ. ನೀವು ಮಲಗಿದಾಗ, ಅದು ಸರಿಸುಮಾರು ಒಂದೂವರೆ ಅಥವಾ ಎರಡು ಅಡಿ ಇರಬಹುದು. ನಿಮಗೆ ತಿಳಿಯದೆಯೇ, ಸ್ವಲ್ಪ ಪ್ರಮಾಣದಲ್ಲಿ ಶಕ್ತಿ ಶರೀರ ಸ್ವಾಭಾವಿಕವಾಗಿ ಕುಗ್ಗುತ್ತದೆ ಮತ್ತು ವಿಸ್ತಾರವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ನಿಮ್ಮಿಂದ ಹೆಚ್ಚಿನ ದೂರವನ್ನು ಕಾಯ್ದುಕೊಳ್ಳುತ್ತಾರೆ - ಗೌರವದಿಂದಲ್ಲ, ಆ ಕ್ಷಣದಲ್ಲಿ ನಿಮ್ಮ ಶಕ್ತಿ ಶರೀರದ ಗಾತ್ರದಿಂದಾಗಿ. ಇದು ಹೀಗೆಯೇ ಇರಬೇಕು - ಆ ಕ್ಷಣಕ್ಕೆ ಅಗತ್ಯವಿರುವಂತೆ. ನಿಮಗೆ ಒಂದು ನಿರ್ದಿಷ್ಟ ಸೂಕ್ಷ್ಮತೆಯಿದ್ದರೆ, ನೀವು ಸ್ವಾಭಾವಿಕವಾಗಿಯೇ ಈ ವಿಷಯಗಳನ್ನು ತಿಳಿಯುತ್ತೀರಿ. ಇದು ಯಾವುದೋ ವಿಶೇಷ ವರವೆಂದು ನೀವು ಹೇಳಬಹುದು-ನಾನು ಅದನ್ನು ಸಂಪೂರ್ಣವಾಗಿ ನಿರಾಕರಿಸುತ್ತಿಲ್ಲ. ಆದರೆ ಆಗಲೂ, ಜನರು ಈ ರೀತಿಯ ಸೂಕ್ಷ್ಮತೆಯನ್ನು ಹೊಂದಿಲ್ಲ, ಏಕೆಂದರೆ ಪ್ರಮುಖವಾಗಿ ಅವರಿಗೆ ಯಾವುದಕ್ಕೂ ಗಮನ ಕೊಡಲಾಗುತ್ತಿಲ್ಲ. ಅವರು ಯಾವುದಕ್ಕೂ ಗಮನ ಕೊಡಲಾಗುತ್ತಿಲ್ಲ ಏಕೆಂದರೆ ಅವರ ಸುತ್ತಲಿನ ಜೀವನದ ಬಗ್ಗೆ ಅವರು ತಿರಸ್ಕಾರದ  ಮನೋಭಾವವನ್ನು ಹೊಂದಿದ್ದಾರೆ.

ನಿಮ್ಮ ಶಕ್ತಿ ಶರೀರವು ನಿಮ್ಮ ಚರ್ಮವನ್ನೂ ಮೀರಿ  ಒಂದು ಅಡಿಯಷ್ಟಿದೆ. ನೀವು ಮಲಗಿದಾಗ, ಅದು ಸರಿಸುಮಾರು ಒಂದೂವರೆ ಅಥವಾ ಎರಡು ಅಡಿ ಇರಬಹುದು.

ನಾನು ಐದಾರು ವರ್ಷದ ಬಾಲಕನಾಗಿದ್ದಾಗ, ಮನೆಯಲ್ಲಿ ಏನನ್ನಾದರೂ ದಿಟ್ಟಿಸಿ ನೋಡುತ್ತ ಅಥವಾ ಕೆಲವೊಮ್ಮೆ ಏನನ್ನೂ ನೋಡದೆ ಕುಳಿತಿರುತ್ತಿದ್ದೆ. ಬಹಳ ಸಮಯದ ನಂತರ, ಯೋಗದಲ್ಲಿ ಒಂದು ಮುದ್ರೆ ಇದೆ ಎಂದು ನನಗೆ ಅರಿವಾಯಿತು, ಅಲ್ಲಿ ನೀವು ಸುಮ್ಮನೆ ಶೂನ್ಯತೆಯನ್ನು ದಿಟ್ಟಿಸಿ ನೋಡುತ್ತೀರಿ. ಯಾವುದೂ ಉತ್ಕೃಷ್ಟವಲ್ಲ, ಯಾವುದೂ ನಿಕೃಷ್ಟವೂ ಅಲ್ಲ. ನಿಮಗೆ ಯಾವುದೇ ವಸ್ತು ಹಾಗೂ ಶೂನ್ಯತೆ  ಎರಡೂ ಸಮಾನ-ನೀವು ಸುಮ್ಮನೆ ನೋಡುತ್ತಿದ್ದೀರಿ. ಇದ್ದಕ್ಕಿದ್ದಂತೆ, ನನ್ನ ತಾಯಿ ಹಾದು ಹೋಗುತ್ತಿದ್ದರು. ಆರಂಭದಲ್ಲಿ, ಅವರು ನನಗೆ ಕಾಣುತ್ತಿದ್ದರು. ಆದರೆ ನಂತರ ಅವರು ಹಾದು ಹೋದಾಗ, ಅವರು ಸಂಪೂರ್ಣ ಮಸುಕಾಗಿ ಮತ್ತು ಸ್ವಲ್ಪ ವಿಸ್ತೃತರಾಗಿ ಕಾಣುತ್ತಿದ್ದರು. ಅವರು ಮತ್ತೆ ಹಾದು ಹೋದಾಗ, ಅವರು ಬಹುತೇಕ ಪಾರದರ್ಶಕವಾಗಿ ಮತ್ತು ಇನ್ನೂ ವಿಸ್ತೃತರಾಗಿ ಕಾಣುತ್ತಿದ್ದರು.

ನಂತರ ನನ್ನ ತಂದೆ ಬರುತ್ತಿದ್ದರು. ನಾನು ಅವರನ್ನು ಖಾಲಿ ನೋಟದಿಂದ ನೋಡುತ್ತಿದ್ದೆ. ಅವರು ನನ್ನ ಕಣ್ಣುಗಳ ಮುಂದೆ ಕೈಸನ್ನೆ  ಮಾಡುತ್ತಿದ್ದರು. ನಿಸ್ಸಂಶಯವಾಗಿ, ಅವರು "ನೀನು ಯಾಕೆ ಓದುತ್ತಿಲ್ಲ?" ಅಥವಾ ಅಂತಹದ್ದೇನನ್ನಾದರೂ ಕೇಳುತ್ತಿದ್ದರು. ನಾನು ಆ ಮಾತುಗಳನ್ನು ಕೇಳಲಿಲ್ಲ, ನಾನು ಸುಮ್ಮನೆ ನೋಡಿದೆ, ಎಲ್ಲಾ ರೀತಿಯ ವಿಷಯಗಳನ್ನು ನೋಡಿದೆ. ನಾನು ಯಾವ ರೀತಿಯ ಆಕಾರಗಳನ್ನು  ನೋಡಿದೆ ಎಂಬುದರ ಆಧಾರದ ಮೇಲೆ, ಅವರು  ಏನು ಹೇಳುತ್ತಿದ್ದಾರೆಂದು ತಿಳಿಯಿತು. ದಿಟ್ಟಿಸುತ್ತಿದ್ದ ರೀತಿ ನೋಡಿ ಈ ಹುಡುಗನ ಬುದ್ಧಿಗೆ ಏನೋ ಆಗಿದೆ ಎಂದು ಚಿಂತಿಸುತ್ತಿದ್ದರು. ನೀವು ಸಾಕಷ್ಟು ಗಮನ ಕೊಟ್ಟರೆ, ನೀವೇ ಇದನ್ನು ಅನುಭವಿಸುತ್ತೀರಿ.

ನಿಮ್ಮ ಸುತ್ತ ಏನು ಅಲೆದಾಡುತ್ತಿದೆ?

ಯೋಗ ಶರೀರ ಶಾಸ್ತ್ರದಲ್ಲಿ, ನಿಮ್ಮ ಅಸ್ತಿತ್ವಕ್ಕೆ ಮೂರು ಭೌತಿಕ ಆಯಾಮಗಳಿವೆ - ಭೌತಿಕ ಶರೀರ, ಮಾನಸಿಕ ಶರೀರ ಮತ್ತು ಶಕ್ತಿಯ ಶರೀರ - ಅನ್ನಮಯ ಕೋಶ, ಮನೋಮಯ ಕೋಶ, ಪ್ರಾಣಮಯ ಕೋಶ. ಭೌತಿಕ ಶರೀರವು ಆಹಾರದ ರೂಪದಲ್ಲಿ ನಾವು ಭೂಮಿಯಿಂದ ಸ್ವೀಕರಿಸುವ ಭೌತಿಕ ವಸ್ತುವಿನಿಂದ ಮಾಡಲ್ಪಟ್ಟಿದೆ. ಮಾನಸಿಕ ಶರೀರವು ಸಹ ನಿಮ್ಮ ಸುತ್ತಲಿನ ಪ್ರಪಂಚದ ವಿಷಯದಿಂದ ಕೂಡಿದೆ, ಆದರೆ ಈ ವಿಷಯ ಬಹಳ ಸೂಕ್ಷ್ಮವಾಗಿದೆ. ನಾವು ಮಾನಸಿಕ ಶರೀರವನ್ನು ಮಾಹಿತಿ, ಅನುರಣನ, ಶಬ್ದಗಳು ಮತ್ತು ಸಂಸ್ಕಾರಗಳಿಂದ ನಿರ್ಮಿಸುತ್ತೇವೆ.

ಪ್ರಜ್ಞಾಪೂರ್ವಕರಾಗಿರುವ ಜನರು ಬೇರೆಯವರ ಕರ್ಮದತ್ತ ಹಾದು ಹೋಗಲು ಅಥವಾ ನಡೆಯಲು ಬಯಸುವುದಿಲ್ಲ. ಯಾರನ್ನಾದರೂ ದಾಟಿ ಹೋಗುವ ಮೂಲಕ, ನೀವು ಒಂದು ರೀತಿಯಲ್ಲಿ ಅವರ ಕರ್ಮದೊಳಗೆ ಸಾಗುತ್ತೀರಿ.

ಭೌತಿಕ ಶರೀರವು ಭೌತಿಕ ವಸ್ತುವಿನಿಂದ ಮಾಡಲ್ಪಟ್ಟಿರುವುದರಿಂದ, ಅದು ತಕ್ಕಮಟ್ಟಿಗೆ ಸರಿಯಾದ ರೂಪವನ್ನು ಪಡೆಯುತ್ತದೆ. ಬಹುತೇಕ ಜನರ ಮಾನಸಿಕ ದೇಹಕ್ಕೆ ಸ್ಪಷ್ಟವಾದ ರೂಪವಿಲ್ಲ. ಅವರು ಏನನ್ನು ಸಂಗ್ರಹಿಸಿದ್ದಾರೆ ಎಂಬುದರ ಬಗ್ಗೆ ಅವರು ಪ್ರಜ್ಞಾಪೂರ್ವಕರಾಗಿಲ್ಲ. ಬಹುತೇಕ ಮಾನವರಿಗೆ, ಸಂಗ್ರಹಿಸಿರುವ ವಿಷಯದ 1%ರಷ್ಟೂ ಸಹ ಪ್ರಜ್ಞಾಪೂರ್ವಕವಾಗಿಲ್ಲ. 99% ಅಪ್ರಜ್ಞಾಪೂರ್ವಕವಾಗಿ ಸಂಗ್ರಹಿಸಲ್ಪಟ್ಟಿರುವುದರಿಂದ, ಮಾನಸಿಕ ರಚನೆಯು ಚದುರಿದೆ. ಅದು ಸಾಕಷ್ಟು ಗೊಂದಲದಲ್ಲಿದೆ. ನೀವು ನಿಮ್ಮ ಮಾನಸಿಕ ರೂಪಕ್ಕೆ ಪ್ರಜ್ಞಾಪೂರ್ವಕ ರಚನೆಯನ್ನು ಸೃಷ್ಟಿಸುವಂತಾದರೆ, ಮತ್ತು ಪರಿಸ್ಥಿತಿಯ ಅಗತ್ಯತೆಗೆ ಅನುಗುಣವಾಗಿ ರಚನೆಯನ್ನು ಬದಲಾಯಿಸಲು ಸಾಧ್ಯವಾದರೆ, ನಿಮ್ಮ ಮನಸ್ಸು ಒಂದು ಚಮತ್ಕಾರಿ ಉಪಕರಣವಾಗುತ್ತದೆ.

ನಿಮ್ಮ ಶಕ್ತಿ ಶರೀರವೂ ಸಹ ಮಾಹಿತಿಯನ್ನು ಹೊಂದಿದೆ. ಅದು ಯಾವ ರೂಪವನ್ನು ತೆಗೆದುಕೊಳ್ಳುತ್ತದೆ ಎಂಬುದು ನಿಮ್ಮೊಳಗೆ ಯಾವ ರೀತಿಯ ಮಾಹಿತಿಯಿದೆ ಎಂಬುವುದನ್ನು ಅವಲಂಬಿಸಿದೆ. ಭೌತಿಕ ಶರೀರದ ಮಟ್ಟದಲ್ಲಿನ ಮಾಹಿತಿಯನ್ನು ಆನುವಂಶಿಕತೆ ಎಂದು ಕರೆಯಲಾಗುತ್ತದೆ. ಅದೇ ರೀತಿ, ಮಾನಸಿಕ ರಚನೆಯ ಬಗೆಗಿನ ಮಾಹಿತಿ ಇದೆ, ಮತ್ತು ಶಕ್ತಿ ರಚನೆಯ ಬಗೆಗಿನ ಮಾಹಿತಿ ಇದೆ.

ಪ್ರಜ್ಞಾಪೂರ್ವಕರಾಗಿರುವ ಜನರು ನಿಮ್ಮ ಮಾನಸಿಕ ಅಥವಾ ಶಕ್ತಿ ಶರೀರದ ಮೇಲೆ ಹಾದು ಹೋಗಲು ಬಯಸುವುದಿಲ್ಲ. ಯಾರು ಯಾವ ರೀತಿಯ ಕರ್ಮವನ್ನು ಹೊತ್ತಿದ್ದಾರೆ ಎಂದು ನಮಗೆ ತಿಳಿದಿಲ್ಲ, ಆದರೆ ಅವರು ನಿದ್ರಿಸುತ್ತಿರುವಾಗ ಅಥವಾ ನಿದ್ರೆಗೆ ಜಾರುತ್ತಿರುವಾಗ, ಕರ್ಮದ ರಚನೆಯ ಅಪ್ರಜ್ಞಾಪೂರ್ವಕ ಚಟುವಟಿಕೆ ಗರಿಷ್ಟ ಮಟ್ಟದಲ್ಲಿರುತ್ತದೆ. ನೀವು ಯಾವುದೇ ಪ್ರಜ್ಞಾಪೂರ್ವಕ ಚಟುವಟಿಕೆಯನ್ನು ನಿರ್ವಹಿಸದ ಕಾರಣ, ಅಪ್ರಜ್ಞಾಪೂರ್ವಕ ಚಟುವಟಿಕೆಯು ಪೂರ್ಣ ಪ್ರಮಾಣದಲ್ಲಿರುತ್ತದೆ. ಪ್ರಜ್ಞಾಪೂರ್ವಕರಾಗಿರುವ ಜನರು ಬೇರೆಯವರ ಕರ್ಮದತ್ತ ಹಾದು ಹೋಗಲು ಅಥವಾ ನಡೆಯಲು ಬಯಸುವುದಿಲ್ಲ. ಯಾರನ್ನಾದರೂ ದಾಟಿ ಹೋಗುವ ಮೂಲಕ, ನೀವು ಒಂದು ರೀತಿಯಲ್ಲಿ ಅವರ ಕರ್ಮದೊಳಗೆ ನಡೆಯುತ್ತಿರುವಿರಿ.

ನಿಮ್ಮ "ಸರಕುಗಳನ್ನು" ನಿಭಾಯಿಸುವುದು

ಇತರರ ಸರಕುಗಳನ್ನು ತೆಗೆದುಕೊಳ್ಳದಿರುವುದು ಜಾಣ್ಮೆ, ಏಕೆಂದರೆ ನಿಮ್ಮ ಸ್ವಂತ ಸರಕುಗಳನ್ನು ನಿಭಾಯಿಸುವುದೇ ಸವಾಲಾಗಿದೆ. ಈ ಕಾರಣಕ್ಕಾಗಿ, ನೀವು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಂಡಾಗ, ಬ್ರಹ್ಮಚಾರಿಯಾಗಿ, ಯಾರನ್ನೂ ಅಪ್ಪಿಕೊಳ್ಳುವುದಿಲ್ಲ – "ನಮಸ್ಕಾರ" ಮಾಡುವುದಷ್ಟೆ ಸಾಕು. ನಾವು ನಿಮ್ಮ ಕರ್ಮದ ಹಾದಿಯಲ್ಲಿ ಬರಲು ಬಯಸುವುದಿಲ್ಲ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ನಾವು ಅದನ್ನು ನಿಮ್ಮಿಂದ ಕಸಿದುಕೊಳ್ಳಲು ಬಯಸುವುದಿಲ್ಲ. ನಿಮ್ಮ ಗುರು ನಿಮ್ಮ ನಿರ್ದಿಷ್ಟ ಕರ್ಮಕ್ಕೆ ಒಂದು ವಿಧಾನವನ್ನು ರೂಪಿಸಿರುವಾಗ, ಅದನ್ನು ಎಲ್ಲಾ ರೀತಿಯ ಜನರೊಂದಿಗೆ ಬೆರೆಸಬಾರದು. ಇಲ್ಲದಿದ್ದಲ್ಲಿ, ಅದು ಅನಗತ್ಯವಾಗಿ  ಕ್ಲಿಷ್ಟಕರವಾಗಿಬಿಡುತ್ತದೆ.

ಯಾರ ಮೇಲೂ ದಾಟಿ ಹೋಗಬೇಡಿ. ನೀವು ಅವರ ಸುತ್ತ ಹೋಗಬಹುದು. ಇದು ಗೌರವದ ಸಂಕೇತ ಸಹ ಆಗಿದೆ.

ಎಲ್ಲಾ ಕಡೆಯಿಂದಲೂ ಅತೀ ಹೆಚ್ಚು ವಿಷಯಗಳನ್ನು ನಿಮ್ಮೊಳಗೆ ಬಿಟ್ಟುಕೊಂಡರೆ, ಕರ್ಮದ ಪ್ರಕ್ರಿಯೆ ಬಹಳ ಜಟಿಲವಾಗಿಬಿಡುತ್ತದೆ. ಮತ್ತು ನೀವು ಯಾವಾಗಲೂ ಇತರರ ಕರ್ಮದೊಂದಿಗೆ ಬೆರೆಸಿಕೊಂಡಿದ್ದೀರಿ ಎಂದರೆ ನಿಮ್ಮ ಕರ್ಮಕ್ಕಾಗಿ ರೂಪಿಸಲಾಗಿರುವ ವಿಧಾನ ಕೆಲಸ ಮಾಡುವುದಿಲ್ಲ. ತೀವ್ರವಾದ ಸಾಧನೆಯಲ್ಲಿರುವ ಕೆಲವರು ಏಕಾಂತ ಗುಹೆಯೊಳಗೆ ಅಥವಾ ಮುಂತಾದ ಪ್ರದೇಶಗಳನ್ನರಸಿ ಹೋಗುವುದೇಕೆಂದರೆ ಅವರು ವಿಷಯಗಳನ್ನು ಜಟಿಲಗೊಳಿಸಲು ಬಯಸುವುದಿಲ್ಲ. ಅವರು ತಮ್ಮ ಸ್ವಂತ ಕರ್ಮದ ಜಟಿಲತೆಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದನ್ನು ಇನಷ್ಟು ಕಠಿಣಗೊಳಿಸಲು ಬಯಸುವುದಿಲ್ಲ.

ಆ ಕಾರಣಕ್ಕಾಗಿ ನೀವು ಯಾರನ್ನೂ ದಾಟಿ ಹೋಗಬಾರದು. ನೀವು ಅವರ ಸುತ್ತ ಹೋಗಬಹುದು. ಇದು ಗೌರವದ ಸಂಕೇತ ಸಹ ಆಗಿದೆ. ಅದಲ್ಲದೆ, ನೀವು ಅವರನ್ನು ದಾಟಿ ಹೋದರೆ ಅದು ಆ ವ್ಯಕ್ತಿಯನ್ನು ವಿಚಲಿತಗೊಳಿಸಬಹುದು. ನೀವು ಅವರ ಶಕ್ತಿ ಶರೀರವನ್ನು ವಿಚಲಿತಗೊಳಿಸಿದರೆ, ಅವರು ಕೂಡಲೇ ಎದ್ದೇಳದಿರಬಹುದು, ಆದರೆ ಆಂತರಿಕವಾಗಿ, ಅದು ಅವರನ್ನು ವಿಚಲಿತಗೊಳಿಸುತ್ತದೆ.

ಇದೆಲ್ಲವೂ ಜೀವನದ ಮೂಲಭೂತ ಅವಗಾಹನೆಯಿಂದ ಬಂದಿದೆ. ನೀವು ಮುಂಚೆ ಏನೇ ಮಾಡುತ್ತಿದ್ದರೂ ಸರಿ – ವ್ಯಾಪಾರ ನಡೆಸುವುದು, ಮದುವೆಯಾಗುವುದು, ಮಕ್ಕಳನ್ನು ಹೆತ್ತು ಬೆಳೆಸುವುದು, ಯುದ್ಧ ಮಾಡುವುದು– ಈ ಭೂಮಿಯಲ್ಲಿ ಹುಟ್ಟಿದ ಯಾವುದೇ ವ್ಯಕ್ತಿಗೂ ಇದ್ದದ್ದು ಒಂದೇ ಗುರಿ – ಅಂತಿಮ ಮೋಕ್ಷ. ಮುಕ್ತಿಯೇ ಏಕೈಕ ಗುರಿಯಾಗಿತ್ತು. ಸಮಗ್ರ ಸಂಸ್ಕೃತಿಯನ್ನು ಇದರ ಸುತ್ತ ನಿರ್ಮಿಸಲಾಗಿತ್ತು. ನೀವು ಇತರರ ಕರ್ಮದೆಡೆಗೆ ಸಾಗಬಾರದೆಂದು ಅನೇಕ ವಿಧಾನಗಳನ್ನು ರೂಪಿಸಲಾಗಿತ್ತು. ನಿಮ್ಮಲ್ಲಿ ಈಗಾಗಲೇ ಇರುವ ಜಟಿಲತೆಯನ್ನು ನೀವು ಅರಿತಿರುವುದರಿಂದ, ನೀವು ಯಾವುದೇ ಹೊಸತನ್ನು ಶೇಕರಿಸಲು ಬಯಸುವುದಿಲ್ಲ.  ನಿಮ್ಮದೇ ಸಮಸ್ಯೆಗಳನ್ನು ಬಿಡಿಸಿದರೆ, ಅದೇ ಸಾಕು. ನೀವು ಅದನ್ನು ಇನಷ್ಟು ಜಟಿಲಗೊಳಿಸಲು ಬಯಸುವುದಿಲ್ಲ.