ಕನಸುಗಳು ಮತ್ತು ಕರ್ಮ - ಭಾಗ 1
ಎರಡು ಭಾಗಗಳ ಪೈಕಿ ಮೊದಲನೆಯದರಲ್ಲಿ, ಸದ್ಗುರುಗಳು ಕನಸುಗಳ ಸ್ವರೂಪವನ್ನು ಮತ್ತು ಕರ್ಮದಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಅವು ಹೇಗೆ ಸಂಬಂಧಿಸಿವೆ ಎಂಬುದನ್ನು ವಿವರಿಸುತ್ತಾರೆ.

ಸದ್ಗುರು: ಒಬ್ಬ ವ್ಯಕ್ತಿಯು ಕನಸು ಕಂಡಾಗ, ಅದನ್ನು ಕಲ್ಪನೆ ಎಂದು ಕರೆಯುತ್ತಾರೆ. ಜನರ ಗುಂಪು ಕನಸು ಕಂಡಾಗ, ಅದು ಸಮಾಜವಾಗುತ್ತದೆ. ವಿಶ್ವವು ಕನಸು ಕಂಡಾಗ, ಅದು ಸಾಮಾನ್ಯವಾಗಿ ವಾಸ್ತವವೆಂದೆನಿಸಿಕೊಳ್ಳುತ್ತದೆ. ಕನಸು ಒಂದು ನಿರ್ದಿಷ್ಟ ವಾಸ್ತವವಾಗಿದೆ, ಮತ್ತು ವಾಸ್ತವವು ಒಂದು ನಿರ್ದಿಷ್ಟ ಕನಸಾಗಿದೆ. ಕನಸಿನ ಬಗೆಗಿನ ಅತ್ಯುತ್ತಮ ವಿಷಯವೆಂದರೆ, ನೀವು ಎಚ್ಚರಗೊಂಡಾಗ, ಅದು ಮುಗಿದಿರುತ್ತದೆ. ವಾಸ್ತವ ಎಂದು ಕರೆಯಲ್ಪಡುವ ವಿಷಯದಲ್ಲೂ ಅದು ಹಾಗೆಯೇ - ನೀವು ಎಚ್ಚರಗೊಂಡಾಗ, ಅದು ಮುಗಿಯುತ್ತದೆ. ವೈದ್ಯಕೀಯವಾಗಿ, ನಾವು ನಿದ್ರೆಯಲ್ಲಿ ನಿಮ್ಮ ದೇಹದ ವಿವಿಧ ಪರಿಮಾಣಗಳನ್ನು ಪರಿಶೀಲಿಸಿದರೆ, ಅವು ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತವೆ - ನೀವು ಧ್ಯಾನ ಮಾಡುತ್ತಿರಬಹುದು. ಆದ್ದರಿಂದ ನಿದ್ರೆಯು ಕೇವಲ ಜಾಗೃತಾವಸ್ಥೆಯ ಹೆಚ್ಚು ಶಾಂತ ಸ್ಥಿತಿಯಾಗಿದೆ, ಅಥವಾ ಜಾಗೃತಾವಸ್ಥೆಯು ನಿದ್ರೆಯ ಹೆಚ್ಚು ಕ್ಷೋಭೆಗೊಳಗೊಂಡ ನಿದ್ರಾವಸ್ಥೆಯಾಗಿದೆ.
ಇದು ಒಂದು ರೀತಿಯ ಶಬ್ದಗಳ ಆಟವೇ? ಒಂದು ರೀತಿಯ ಮನರಂಜನೆಯೇ? "ಸರಿ, ಕನಸು ಮತ್ತು ಎಚ್ಚರ ಒಂದೇ, ವಾಸ್ತವ ಮತ್ತು ಕನಸು ಒಂದೇ?" ಎಂದು ಯೋಚಿಸಲು, ಇಲ್ಲ ಅದು ಹಾಗಲ್ಲ. ಕೇವಲ ಇಂದ್ರಿಯಗಳು ಅರ್ಥೈಸಲ್ಪಟ್ಟ ರೀತಿಯಲ್ಲಷ್ಟೇ ನೀವು ವಾಸ್ತವವನ್ನರಿತಿದ್ದೀರಿ. ಅದು ಹೇಗಿದೆಯೋ ಹಾಗೆ ನಿಮಗೆ ಅದು ತಿಳಿದಿಲ್ಲ. ಆದ್ದರಿಂದ ನೀವು "ವಾಸ್ತವ" ಎಂದು ಏನನ್ನು ಕರೆಯುತ್ತೀರೋ ಅದು ನಿಮ್ಮ ಮನಸ್ಸಿನ ವ್ಯಾಖ್ಯಾನವಾಗಿದೆ, ನೀವು "ಕನಸು" ಎಂದು ಕರೆಯುವುದೂ ಸಹ ನಿಮ್ಮ ಮನಸ್ಸಿನ ವ್ಯಾಖ್ಯಾನವಾಗಿದೆ. ನಿಮ್ಮ ಮನಸ್ಸಿನಲ್ಲಿ ಏನಾಗುತ್ತದೆಯೋ ಅದು ಮತ್ತೊಂದು ರೀತಿಯ ವಾಸ್ತವ. ನಾವು ಅದನ್ನು "ಮಾನಸಿಕ ವಾಸ್ತವ" ಎಂದು ಕರೆಯಬಹುದು. ಹೆಚ್ಚಿನ ಜನರಿಗೆ, ಅವರ ಕನಸು ಅವರ ಆಲೋಚನಾ ಪ್ರಕ್ರಿಯೆಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ದುರದೃಷ್ಟವಶಾತ್, ಅವರಿಗೆ ಅದರಲ್ಲಿ ಹೆಚ್ಚಿನದು ನೆನಪಿರುವುದಿಲ್ಲ.
ಕರ್ಮದ ಅನಾವರಣ
ಜೀವನದ ಪ್ರಕ್ರಿಯೆಯನ್ನು ಈಗಾಗಲೇ ಆಗಿದ್ದು ವ್ಯಕ್ತಗೊಳ್ಳುತ್ತಿರುವುದು ಎಂದು ಅರ್ಥೈಸಬಹುದು. ನಾವು "ನಿಮ್ಮ ಜೀವನವು ಹೀಗೆ ಇರುವುದಕ್ಕೆ ಕಾರಣ ನಿಮ್ಮ ಕರ್ಮ" ಎಂದು ಹೇಳಿದಾಗ, ಅದರ ಅರ್ಥ, ಸರಳವಾಗಿ ಹೇಳುವುದಾದರೆ ನಿಮ್ಮ ಜೀವನವು ಈಗಾಗಲೇ ಆಗಿರುವುದನ್ನು ಅನಾವರಣಗೊಳಿಸುತ್ತಿದೆ ಎಂದರ್ಥ. ಆದರೆ ಜೀವನದ ಸನ್ನಿವೇಶಗಳು ನೀವು ಹೊಂದಿರುವ ಕರ್ಮದ ಅಂಶದೊಂದಿಗೆ ಚೆನ್ನಾಗಿ ಸಹಕರಿಸದೇ ಇರಬಹುದು. ನೀವು ಕಣ್ತೆರೆದು ಕನಸು ಕಾಣಲು ಪ್ರಯತ್ನಿಸುತ್ತಿದ್ದರೆ ಮತ್ತು ನಿಮ್ಮ ಕನಸನ್ನು ನನಸಾಗಿಸಲು ಪ್ರಪಂಚದ ಸಹಕಾರವನ್ನು ಬಯಸುತ್ತಿದ್ದರೆ, ಅದು ಒಂದು ಹತಾಶ ಮಾರ್ಗವಾಗಿದೆ. ಏಕೆಂದರೆ ಜಗತ್ತು ನಿಮ್ಮ ಕನಸಿಗೆ ಸಹಕರಿಸುವುದಿಲ್ಲ. ಅವರಿಗೆ ಅವರದೇ ವಿಚಾರಗಳಿವೆ. ಕನಸಿನಲ್ಲಿ, ನೀವು ಹೊಂದಿರುವ ಕರ್ಮದ ಅಂಶಗಳಿಗೆ ಅನುಕೂಲವಾದ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಕರ್ಮದ ಅಪ್ರಜ್ಞಾಪೂರ್ವಕ ಅನಾವರಣವನ್ನು ಮೀರಿ ಜೀವನವು ಒಂದು ಪ್ರಜ್ಞಾಪೂರ್ವಕ ಪ್ರಕ್ರಿಯೆಯಾಗಿ ಮಾರ್ಪಟ್ಟರೆ ಮಾತ್ರ, ಜಾಗ್ರತಾವಸ್ಥೆಯು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಜೀವನವು ಈಗಾಗಲೇ ಆಗಿರುವುದನ್ನು ವ್ಯಕ್ತಗೊಳಿಸುವುದಕ್ಕೆ ಮಾತ್ರ ಸೀಮಿತವಾಗಿದ್ದರೆ, ಕನಸು ಖಂಡಿತವಾಗಿಯೂ ಅದನ್ನು ಮಾಡಲು ಉತ್ತಮ ಸ್ಥಳವಾಗಿದೆ.
ಯೋಗ ಪರಂಪರೆಯಲ್ಲಿ, ಮಹಾದೇವನಾದ ಶಿವನನ್ನು ಸಂಪೂರ್ಣ ಸುಪ್ತ ಅಥವಾ ಸಂಪೂರ್ಣ ಜಾಗೃತ ಎಂದು ವರ್ಣಿಸಲಾಗಿದೆ. ಇದು ಪೂರ್ಣ ಪ್ರಜ್ಞಾವಂತನ ಸ್ಥಿತಿ: ಅವನು ಅಸ್ತಿತ್ವದಲ್ಲಿಇಲ್ಲದೆ ಇರಬಹುದು ಅಥವಾ ಸಂಪೂರ್ಣವಾಗಿ ಇರಬಹುದು. ಅವನಿಗೆ ಮಧ್ಯಂತರ ವಾಸ್ತವತೆ ಇಲ್ಲ ಏಕೆಂದರೆ ವ್ಯಕ್ತಗೊಳಿಸಲು ಏನೂ ಇಲ್ಲದಿದ್ದರೆ, ಕೇವಲ ನಿಶ್ಚಲತೆ ಮತ್ತು ಜಾಗೃತಿ ಮಾತ್ರ ಇರುತ್ತದೆ. ಕನಸಿನ ಸ್ಥಿತಿ ಇರುವುದಿಲ್ಲ. ನಾನು "ಕನಸು" ಎಂದು ಹೇಳಿದಾಗ, ನೀವು ನಿದ್ದೆಯಲ್ಲಿರುವಾಗ ಸಂಭವಿಸುವ ದೃಶ್ಯಾವಳಿಯ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ನೀವು ಕಣ್ಣು ತೆರೆದಿರುವಾಗಲೂ, ನೀವು ಕನಸಿನ ಸ್ಥಿತಿಯಲ್ಲಿರುತ್ತೀರಿ. ಇದೀಗ, ನೀವು ಸೃಷ್ಟಿಯನ್ನು ಹೇಗೆ ಅನುಭವಿಸುತ್ತಿದ್ದೀರಿ ಎಂಬುದು ಸಂಪೂರ್ಣವಾಗಿ ಕನಸಿನಂತಿದೆ. ಅದು ಇರುವ ರೀತಿಯಲ್ಲಿ ಇಲ್ಲ.
ಕನಸಿನ ಶಕ್ತಿ ಮತ್ತು ಕನಸಿನ ಕ್ಷುಲ್ಲಕತೆ ಏಕಕಾಲದಲ್ಲಿ ಇರುತ್ತವೆ. ಕನಸಿನಲ್ಲಿ ಕಳೆದುಹೋದವನಿಗೆ ಅದೊಂದು ಪ್ರಬಲ ವಿಷಯ. ಸ್ವಲ್ಪ ದೂರದಿಂದ ನೋಡುತ್ತಿರುವವನಿಗೆ ಅದು ತುಂಬಾ ಕ್ಷುಲ್ಲಕ ವಿಷಯ. ಅದು ನಿಮ್ಮ ಕನಸಿನ ವಿಷಯದಲ್ಲಿ ನೀವು ಎಲ್ಲಿ ನಿಂತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಹಾಗಾದರೆ ಕನಸಿನಲ್ಲಿ ನೀವು ಕರ್ಮವನ್ನು ಸಂಗ್ರಹಿಸಬಹುದೇ? ಕರ್ಮದ ಸಂಗ್ರಹವು ನೀವು ನಿರ್ವಹಿಸುವ ಚಟುವಟಿಕೆಯಲ್ಲಿಲ್ಲ. ಅದು ಒಬ್ಬರ ಕಾರ್ಯದ ಇಚ್ಛೆ ಅಥವಾ ಉದ್ದೇಶದಲ್ಲಿದೆ. ಕನಸಿನಲ್ಲಿ ನೀವು ಉದ್ದೇಶವನ್ನು ಹೊಂದಲು ಸಮರ್ಥರೇ? "ಇಂದು, ನಾನು ಈ ರೀತಿಯ ಕನಸನ್ನು ಕಾಣಲಿದ್ದೇನೆ" ಎಂದು ನೀವು ನಿರ್ಧರಿಸಬಹುದೇ? ಇಲ್ಲ. ಕನಸಿನಲ್ಲಿ ಯಾವುದೇ ಇಚ್ಛೆ ಇಲ್ಲ. ಆದ್ದರಿಂದ ಕನಸು ಕೇವಲ ವ್ಯಕ್ತಗೊಳಿಸುವ ಪ್ರಕ್ರಿಯೆಯಾಗಿದೆ. ಹಗಲಿನಲ್ಲಿಯೂ, ಹೆಚ್ಚಿನ ಸಮಯ ನೀವು ಈಗಾಗಲೇ ಸಂಚಯಿಸಿರುವ ಸಂಗತಿಗಳಿಂದ ಬಿಡಿಸಿಕೊಳ್ಳುತ್ತಿದ್ದೀರಿ. ನಿಮ್ಮ ಕೋಪ, ನಿಮ್ಮ ಮಹತ್ವಾಕಾಂಕ್ಷೆ, ನಿಮ್ಮ ಹತಾಶೆ, ನಿಮ್ಮ ಪ್ರೀತಿ, ನಿಮ್ಮ ಉತ್ಸಾಹ, ನಿಮ್ಮ ದ್ವೇಷ, ಇವೆಲ್ಲವುಗಳ ಹೆಚ್ಚಿನವು ಕೇವಲ ಕರ್ಮದ ಬಿಡಿಸಿಕೊಳ್ಳುವಿಕೆಯಾಗಿದೆ, ನಿಮ್ಮ ಬಂಧಿಸಿಕೊಳ್ಳುವಿಕೆ ಅಲ್ಲ. ನೀವು ಅದನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಮಾತ್ರ ಇದನ್ನು ನೀವು ಅರಿತುಕೊಳ್ಳುವಿರಿ. ನೀವು ನಿನ್ನೆ ಯಾರೊಬ್ಬರ ಮೇಲೆ ತುಂಬಾ ಕೋಪಗೊಂಡಿದ್ದೀರಿ ಅಂದುಕೊಳ್ಳಿ, ಮತ್ತು ಇಂದು, "ನಾನು ಈ ವ್ಯಕ್ತಿಯ ಮೇಲೆ ಕೋಪಗೊಳ್ಳಲು ಬಯಸುವುದಿಲ್ಲ." ಎಂದು ನಿರ್ಧರಿಸಿದ್ದೀರಿ. ಆದರೆ ನೀವು ಅವನನ್ನು ಭೇಟಿಯಾದಾಗ ನೀವು ನೋಡುವಿರಿ, ಮತ್ತೊಮ್ಮೆ ನೀವು ಕೋಪಗೊಳ್ಳುತ್ತೀರಿ. ಸ್ಪಷ್ಟವಾಗಿ ಅದು ನಿಮ್ಮ ಮಾಡುವಿಕೆಯಲ್ಲ. ಹೆಚ್ಚಿನ ಸಮಯ, ನೀವು ಈಗಾಗಲೇ ಮಾಡಿದ್ದರ ಪ್ರತಿಕೂಲವಾದದ್ದನ್ನೇ ಮಾಡುತ್ತಿದ್ದೀರಿ. ನೀವು ನಿಮ್ಮನ್ನು ರೂಪಾಂತಿರಸಲು ಪ್ರಯತ್ನಿಸಿದಾಗ ಮಾತ್ರ, ನೀವು ಇದನ್ನು ಅರಿತುಕೊಳ್ಳುವಿರಿ. ಕರ್ಮದ ಪ್ರಕ್ರಿಯೆಯ ಈ ಅನಾವರಣವು ತುಂಬಾ ನಿಜವಾಗಿ ತೋರುತ್ತದೆ, ಇದನ್ನು ನೀವೇ ಮಾಡುತ್ತಿದ್ದೀರಿ ಎಂಬಂತೆ ತೋರುತ್ತದೆ. ನಾವು "ಕರ್ಮ" ಎಂದು ಹೇಳಿದಾಗ, ಅದು ನಿಮ್ಮ ಮಾಡುವಿಕೆ ಎಂದು ಹೇಳುತ್ತಿದ್ದೇವೆ. ಒಬ್ಬನು ತಾನು ಮಾಡುತ್ತಿರುವ ಎಲ್ಲವನ್ನೂ ತನ್ನದೇ ಸ್ವಂತ ಉದ್ದೇಶಗಳಿಂದ ಮಾಡುತ್ತಿದ್ದೇನೆ ಎಂದು ನಂಬಿದಾಗ, ಅದು ಅತ್ಯಂತ ಮೂಲ ಅಜ್ಞಾನವಾಗಿದೆ.
ಸ್ವ-ಹಿತಾಸಕ್ತಿಯನ್ನು ಕಳೆದುಕೊಳ್ಳುವುದು
ಒಂದು ಮಂತ್ರವಿದೆ ಅದು ಹೇಳುತ್ತದೆ, "ಎಲ್ಲವೂ ನೀನು ಮಹಾದೇವ, ಎಲ್ಲವೂ ನೀನು. ನನ್ನ ಕೆಟ್ಟತನ ನನ್ನ ಮನಸ್ಸಿನ ಮಾಡುವಿಕೆ, ನನ್ನ ಕ್ರಿಯೆಗಳು ನನ್ನ ದೇಹದ ಮಾಡುವಿಕೆ - ನಾನು ಎಲ್ಲಿದ್ದೇನೆ? ನಾನು ಅಸ್ತಿತ್ವದಲ್ಲಿಲ್ಲ. ಎಲ್ಲವೂ ನಿನ್ನದೇ." ನಿಜವಾದ ಭಕ್ತನು ಇದನ್ನು ಹೇಳಿದರೆ, ಅದು ಅರಿವಿನ ಬಹಳ ಸುಂದರವಾದ ಸ್ಥಿತಿಯಾಗಿದೆ. ಮನಸ್ಸು ಇದನ್ನು ಹೇಳಿದರೆ, ಅದು ಅತ್ಯಂತ ದೊಡ್ಡ ಕುಟಿಲತೆಯಾಗಿದೆ. ಹೆಚ್ಚಿನವರು ಸಂಭವಿಸುತ್ತಿರುವ ವಿಷಯಗಳು ತಮ್ಮ ಇಷ್ಟಗಳ ಅನುಸಾರ ನಡೆಯದಿದ್ದಾಗ ಯಾವಾಗಲೂ ಅದನ್ನು ಬೇರೆಯವರ ಮೇಲೆ ಅಥವಾ ಬೇರೆ ವಿಷಯದ ಮೇಲೆ ಹಾಕಲು ಕಲಿತಿದ್ದಾರೆ. ನಿಮಗೆ ಇಷ್ಟವಾದದ್ದು ಮತ್ತು ಆಗದೇ ಇರುವುದನ್ನು, ವಿಫಲತೆ ಮತ್ತು ಯಶಸ್ಸು ಎರಡನ್ನೂ ಬೇರೆಯವರಿಗೆ ವರ್ಗಾಯಿಸಲು ನೀವು ಸಿದ್ಧರಿದ್ದರೆ ಮಾತ್ರ, ಅದು ಸರಿ. ನಿಮ್ಮ ಯೋಗಕ್ಷೇಮ ಮತ್ತು ನಿಮ್ಮ ಸಂಕಟ ಎರಡನ್ನೂ ಯಾರ ಮೇಲೋ ಹಾಕುತ್ತಿದ್ದರೆ, ಅದು ಸರಿ. ನಿಮ್ಮ ಸಂಕಟವನ್ನು ಮಾತ್ರ ಬೇರೆಯವರ ಮೇಲೆ ಹಾಕಲು ಸಿದ್ಧರಿದ್ದರೆ, ನಿಮ್ಮ ಯೋಗಕ್ಷೇಮವನ್ನು ಹಾಕಲು ಸಿದ್ಧರಿಲ್ಲದೇ ಇದ್ದರೆ - ನೀವು ಅವರೊಡನೆ ಕೆಟ್ಟ ಒಪ್ಪಂದವನ್ನು ಮಾಡಲು ಪ್ರಯತ್ನಿಸುತ್ತಿದ್ದೀರಿ. ಅವನು ಸಂಪೂರ್ಣ ಮೂರ್ಖನಾದ ಹೊರತೂ ಯಾರೂ ಇದನ್ನು ಒಪ್ಪಿಕೊಳ್ಳುವುದಿಲ್ಲ.
ದಡ್ಡ ವ್ಯಕ್ತಿಯೂ ಸಹ ತನ್ನ ಹಿತಾಸಕ್ತಿಯ ವಿಷಯದಲ್ಲಿ ಬಹಳ ಬುದ್ಧಿವಂತನಾಗಿರುತ್ತಾನೆ. ಮಾನವರು ಹೆಚ್ಚು ಹೆಚ್ಚು ಬುದ್ಧಿವಂತರಾದಾಗ ಮಾತ್ರ, ಅವರು ತಮ್ಮ ಹಿತಾಸಕ್ತಿಯ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಾರೆ. ಅವರು ದಡ್ಡರಾಗಿದ್ದಷ್ಟೂ ತಮ್ಮ ಹಿತಾಸಕ್ತಿಯ ಬಗ್ಗೆ ಚತುರರಾಗಿರುತ್ತಾರೆ. ನೀವು ಇದನ್ನು ಗಮನಿಸಿದ್ದೀರಾ? ಈ ಸೀಮಿತ ಜೀವಿಯಲ್ಲಿ ಆಸಕ್ತಿ ಹೊಂದುವುದು ಮೂರ್ಖತನದ ವಿಷಯವಾಗಿದೆ. ಇದು ಒಬ್ಬ ವ್ಯಕ್ತಿಗೆ ಮತ್ತು ಸಮಗ್ರವಾಗಿ ಮಾನವೀಯತೆಗೆ ಸಂಭವಿಸುತ್ತಿರುವ ಭಯಾನಕ ನಷ್ಟವಾಗಿದೆ. ಅವನು ಬ್ರಹ್ಮಾಂಡದ ಭವ್ಯತೆಯಲ್ಲಿ ಆಸಕ್ತಿ ಹೊಂದಬಹುದಾಗಿರುವಾಗ, ತನ್ನನ್ನು ತೊಡಗಿಸಿಕೊಳ್ಳಬಹುದಾಗಿರುವಾಗ, ಯಾವುದೇ ಮೌಲ್ಯವಿಲ್ಲದ ಒಬ್ಬ ಸಣ್ಣ ವ್ಯಕ್ತಿಯಲ್ಲಿ ಆಸಕ್ತಿ ಹೊಂದಿದ್ದಾನೆ. ಬುದ್ಧಿವಂತಿಕೆ ವಿಸ್ತರಿಸಿ ವಿವಿಧ ವಿಷಯಗಳನ್ನು ನೋಡಲು ಪ್ರಾರಂಭಿಸಿದಾಗ, ಮಾನವನು ತನ್ನ ಹಿತಾಸಕ್ತಿಯ ಬಗ್ಗೆ ಅಷ್ಟು ಕಾಳಜಿ ವಹಿಸುವುದಿಲ್ಲ. ಒಬ್ಬನ ಬುದ್ಧಿಶಕ್ತಿ ನಿಜವಾಗಿಯೂ ಅರಳಿದರೆ, ಅವನಿಗೆ ಸ್ವ- ಹಿತಾಸಕ್ತಿಯಿರುವುದಿಲ್ಲ.


