ನಿಮ್ಮ ವಿವಶತೆಗಳಿಂದ ಅಸಂತೋಷಗೊಂಡಿದ್ದೀರ?
ನಿಮ್ಮ ವಿವಶತೆಗಳಿಂದಾಗಿ ಅಸಂತೋಷಗೊಂಡಿದ್ದೀರ? ಕರ್ಮದ ಹೊರೆಯನ್ನು ಹೊತ್ತುಕೊಂಡು ಸಾಗುವಾಗ ಅದನ್ನು ಹೂಳಿಟ್ಟರೆ ಅದು ಇನ್ನಷ್ಟು ಬೆಳೆಯುತ್ತದೆ ಎಂದು ಸದ್ಗುರು ವಿವರಿಸುತ್ತಾರೆ.

ಪ್ರಶ್ನೆ: ಸದ್ಗುರು, ನಾನು ಸಾಧನೆ ಮಾಡುತ್ತಿದ್ದಾಗಲೂ ನನ್ನೊಳಗಿನಿಂದ ಹೊರಬರುತ್ತಿರುವ ವಿವಶತೆಗಳಿಂದ ನಾನು ಅಸಂತೋಷಗೊಂಡಿದ್ದೇನೆ.
ಸದ್ಗುರು: ನೀವು ನಿಮ್ಮ ವಿವಶತೆಗಳೊಂದಿಗೆ ಸಂತೋಷವಾಗಿರಲು ಕಲಿಯಬೇಕು. ಈಗಾಗಲೇ ವಿವಶತೆಗಳಿವೆ. ಜೊತೆಗೆ ಅದರಿಂದಾಗಿ ದುಃಖಿತರಾಗಿಯೂ ಇದ್ದೀರಿ. ಈಗ ನಿಮಗೆ ಎರಡು ಸಮಸ್ಯೆಗಳು - ವಿವಶತೆ ಮತ್ತು ಅಸಂತೋಷ! ಈಗಾಗಲೇ ನಿಮಗೆ ಒಂದು ಸಮಸ್ಯೆ ಇದೆ, ಮತ್ತೊಂದನ್ನು ಸೃಷ್ಟಿಸಬೇಡಿ. ಕನಿಷ್ಠ ಒಂದು ಸಮಸ್ಯೆ ಇದ್ದರೆ, ಅದನ್ನು ನಿಭಾಯಿಸುವುದು ಸುಲಭ.
ಅಸಂತೋಷವು ಅಹಿತಕರವಾದುದು. ನಾವು ಯಾವಾಗಲೂ ಆನಂದ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಿರುವುದು ನಿಮ್ಮ ಮನಸ್ಸು ಮತ್ತು ಭಾವನೆಗಳನ್ನು ಹಿತವಾಗಿಡುವ ಉದ್ದೇಶದಿಂದ. ಇವು ಹಿತವಾಗಿರುವಾಗ, ನೀವು ಸುಲಭವಾಗಿ ಹೊಂದಿಕೊಳ್ಳುತ್ತೀರಿ ಮತ್ತು ನಾವು ಕೊಟ್ಟ ಅನೇಕ ’ಸಾಧನೆ’ಗಳನ್ನು ಸುಲಭವಾಗಿ ಮಾಡಬಹುದು. ನಿಮ್ಮ ಮನಸ್ಸು ಮತ್ತು ಭಾವನೆಗಳು ಅಹಿತಕರವಾಗಿರುವಾಗ, ನೀವು ಯಾವುದಕ್ಕೂ ಬಗ್ಗುವುದಿಲ್ಲ; ನಿಮಗೆ ಯಾವುದೇ ’ಸಾಧೆನೆ’ಯನ್ನು ಮಾಡಲು ಸಾಧ್ಯವಾಗುವುದಿಲ್ಲ. ನೀವು ಹಿತಕರ ಸ್ಥಿತಿಯಲ್ಲಿದ್ದಾಗ, ಬೇರೆಯ ಆಕಾರಕ್ಕೆ ನಿಮ್ಮನ್ನು ತಿರುಗಿಸಿಕೊಳ್ಳಲು ನೀವು ಸಿದ್ಧರಿರುತ್ತೀರಿ. ನೀವು ಅಹಿತಕರ ಸ್ಥಿತಿಯಲ್ಲಿರುವಾಗ, ನಿಮ್ಮನ್ನ ಮುಟ್ಟಲೂ ಸಾಧ್ಯವಿಲ್ಲ.
ನಿಮ್ಮ ವಿವಶತೆಗಳನ್ನು ಆನಂದದಿಂದ ನೋಡಿ
ಅಸಂತೋಷವು ನಿಮ್ಮಲ್ಲಿರಬಹುದಾದ ಎಲ್ಲ ವಿವಶತೆಗಳಿಗಿಂತಲೂ ದೊಡ್ಡ ಸಮಸ್ಯೆ. ಇದು ಬಹಳ ದೊಡ್ಡ ಸಮಸ್ಯೆ ಏಕೆಂದರೆ ಈಗ ನಿಮ್ಮನ್ನು ಮುಟ್ಟಲಾಗುವುದಿಲ್ಲ, ತಿದ್ದಿ ರೂಪಿಸಲೂ ಸಾಧ್ಯವಿಲ್ಲ, ಅಥವಾ ನಿಮಗೆ ಸಹಾಯ ಮಾಡಲಾಗುವುದಿಲ್ಲ. ನೀವು ಏನೇ ಅಸಂಬದ್ಧವಾಗಿದ್ದರೂ, ಕಲಿಯಬೇಕಾದ ಮೊದಲ ವಿಷಯವೆಂದರೆ ಆನಂದದಿಂದ ಮತ್ತು ಪ್ರೀತಿಯಿಂದ ಇರುವುದು. ನಿಮಗೆ ನಿಮ್ಮ ವಿವಶತೆಗಳಿವೆ - ಅವುಗಳನ್ನು ಆನಂದದಿಂದ ನೋಡಲು ಕಲಿಯಿರಿ. ಆಗ ನಿಮ್ಮೊಂದಿಗೆ ಕೆಲಸ ಮಾಡಲು, ಸಹಾಯ ಮಾಡಲು, ನಿಮ್ಮನ್ನು ತಲುಪಲು - ನಿಮ್ಮ ಇಷ್ಟಾನಿಷ್ಟಗಳನ್ನು ಮೀರಿ ನಿಮ್ಮೊಂದಿಗೆ ಕೆಲಸ ಮಾಡಲು ಸುಲಭವಾಗುತ್ತದೆ. ಇಷ್ಟಾನಿಷ್ಟಗಳು ನಿಮ್ಮ ಅತ್ಯಂತ ಮೂಲಭೂತ ವಿವಶತೆಗಳು; ನಾವು ನಿಮ್ಮನ್ನು ಇವುಗಳಿಂದ ಹೊರತರಬೇಕಾದರೆ, ನೀವು ಹಿತಕರ ಸ್ಥಿತಿಯಲ್ಲಿರಬೇಕು. ನೀವು ಅಹಿತಕರ ಸ್ಥಿತಿಯಲ್ಲಿದ್ದರೆ, ನಿಮ್ಮಿಂದ ಇಷ್ಟವಿಲ್ಲದ್ದನ್ನು ಮಾಡಿಸಲು ನಮಗೆ ಸಾಧ್ಯವಿಲ್ಲ; ನಿಮಗೆ ಇಷ್ಟವಾದದ್ದನ್ನು ಮಾತ್ರ ನೀವು ಮಾಡುತ್ತೀರಿ. ಜನರು ಎಷ್ಟು ಅಸಂತೋಷದಿಂದಿರುತ್ತಾರೋ, ಅಷ್ಟು ಹೆಚ್ಚು ಅವರು, "ನಾನು ಇದನ್ನು ಮಾತ್ರ ಮಾಡುತ್ತೇನೆ. ನಾನು ಇರುವುದೇ ಹೀಗೆ!" ಎಂದು ಪಟ್ಟುಹಿಡಿಯುತ್ತಾರೆ. ಸಂತೋಷದಿಂದಿರುವ ಜನರು ಸುಲಭವಾಗಿ ಹೊಂದಿಕೊಳ್ಳುವವರಾಗಿರುತ್ತಾರೆ - ನೀವು ಅವರಿಂದ ನೃತ್ಯ ಮಾಡಿಸಬಹುದು, ಅವರನ್ನು ಅಳಿಸಬಹುದು, ಮೇಲೆ ಹಾರಿಸಬಹುದು, ಅವರಿಂದ ತಮಾಷೆಯ ಕೆಲಸಗಳನ್ನು ಮಾಡಿಸಬಹುದು, ತೆವಳಲು ಹೇಳಬಹುದು; ಅವರು ಸಂತೋಷದಿಂದಿರುವಾಗ ಎಲ್ಲವನ್ನೂ ಮಾಡುತ್ತಾರೆ. ಅವರು ಸುಲಭವಾಗಿ ಹೊಂದಿಕೊಳ್ಳುವವರಾಗಿರುತ್ತಾರೆ.
ನಿಮ್ಮ ಹೊಂದಿಕೊಳ್ಳುವ ಗುಣವನ್ನು ಕಳೆದುಕೊಳ್ಳಬೇಡಿ. ಅದು ಅತ್ಯಂತ ಮುಖ್ಯವಾದದ್ದು. ನಿಮ್ಮ ಮನಸ್ಸಿನಲ್ಲಿ ಅಥವಾ ಭಾವನೆಯಲ್ಲಿ ಯಾವುದೇ ರೀತಿಯ ಅಹಿತಕರ ಸ್ಥಿತಿ ಇದ್ದಾಗ ಹೊಂದಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಆನಂದದಿಂದ, ಪ್ರೀತಿಯಿಂದ ಮತ್ತು ಶಾಂತಿಯಿಂದ ಇರುವುದು ಮುಖ್ಯವಾಗಿದೆ - ಏಕೆಂದರೆ ನಿಮ್ಮಲ್ಲಿ ಅನೇಕ ವಿವಶತೆಗಳಿವೆ.
ಕರ್ಮದ ಆಲೂಗಡ್ಡೆಗಳು
ಕರ್ಮವು ಆಲೂಗಡ್ಡೆಯ ಚೀಲದಂತೆ. ಈ ವಿವಶತೆಗಳನ್ನು ನೀವು ಎಷ್ಟು ಆಳವಾಗಿ ಹೂಳುತ್ತೀರೋ, ಅಷ್ಟು ಹೆಚ್ಚು ಅವು ಬೆಳೆಯುತ್ತವೆ. ’ಸಾಧನ’ ಮಾಡುವುದರ ಉದ್ದೇಶ, ಅವುಗಳನ್ನು ಹೊರತೆಗೆದು ಮತ್ತೆ ಮೊಳೆಯದಂತೆ ಒಣಗಿಸುವುದಾಗಿದೆ. ನೀವು ಒಂದಿಷ್ಟು ಸಮಯದವರೆಗೆ ನಿಮ್ಮನ್ನು ತೀವ್ರವಾದ ‘ಸಾಧನೆ’ಯಲ್ಲಿ ತೊಡಗಿಸಿಕೊಂಡರೆ, ನೀವು ಹೊರಜಗತ್ತಿಗೆ ಕಾಲಿಟ್ಟಾಗ, ನಿಮ್ಮ ಅನೇಕ ಸರಳ ವಿವಶತೆಗಳು ಕಣ್ಮರೆಯಾಗಿರುವುದನ್ನು ಕಾಣುತ್ತೀರಿ. ಆದರೂ ಇನ್ನೂ ಅನೇಕ ಆಲೂಗಡ್ಡೆಗಳನ್ನು ಕಿತ್ತು ಹಾಕಬೇಕಾಗಿದೆ. ಪ್ರತಿದಿನ ನೀವು ಅವುಗಳನ್ನು ಕಿತ್ತು ಮತ್ತೆ ಮೊಳೆಯದಂತೆ ಒಣಗಿಸಬೇಕು.
ಒಂದೇ ಆಲೂಗಡ್ಡೆ ದಶಲಕ್ಷ ಸಂಖ್ಯೆಯಲ್ಲಿ ಬೆಳೆದರೆ, ಅದು ಅತಿಶಯದ ಆಲೂಗಡ್ಡೆ. ಉದಾಹರಣೆಗೆ ಐದು ನಿಮಿಷಗಳ ತೀವ್ರವಾದ - ನೋವು, ಭಯ, ಯಾತನೆಯ ಅನುಭವ ಅಥವಾ ನಿಮಗೆ ಅಸಹ್ಯವಾದ ಅನುಭವ ಏನಾದರೂ ಆಯಿತು ಎಂದುಕೊಳ್ಳೋಣ. ಈ ಐದು ನಿಮಿಷಗಳ ಆಲೂಗಡ್ಡೆಗಳಲ್ಲಿ, ಅವು ಹೆಚ್ಚುತ್ತಾ ಹೆಚ್ಚುತ್ತಾ ನಿಮ್ಮ ಇಡೀ ಜೀವನವನ್ನೇ ಆಳುತ್ತವೆ. ನೀವು ಎಲ್ಲಿಗೆ ಹೋದರೂ, ಅದರ ಬಗ್ಗೆ ಮಾತನಾಡುತ್ತೀರಿ, ಅದರ ಬಗ್ಗೆಯೇ ಯೋಚಿಸುತ್ತೀರಿ. ನೀವು ಅವುಗಳನ್ನು ಹೂಳಿಟ್ಟಿದ್ದೀರಿ ಹಾಗಾಗಿ ಅವು ಹೆಚ್ಚುತ್ತಿವೆ. ಅವು ಅದೇ ಅಸಹ್ಯಕರ ರೀತಿಯ ದಶಲಕ್ಷ ಸಂಖ್ಯೆಯ ಆಲೂಗಡ್ಡೆಗಳಾಗುತ್ತವೆ. ಈಗ ನೀವು ಈ ಆಲೂಗಡ್ಡೆಯನ್ನು ಒಣಗಿಸಿ ಇಟ್ಟರೆ, ಅದು ಒಳ್ಳೆಯ ಅನುಭವವಾಗುತ್ತದೆ. ನಿಮಗೆ ನಿಜವಾಗಿಯೂ ಒಂದು ಕೆಟ್ಟ ಅನುಭವವಾಗಿದ್ದರೆ, ಅದು ಒಳ್ಳೆಯ ಅನುಭವ - ಏಕೆಂದರೆ ನಿಮ್ಮ ಜೀವನದಲ್ಲಿ ಅಹಿತಕರ ಕ್ಷಣಗಳ ಮೂಲಕ ಏನನ್ನು ಕಲಿಯುತ್ತೀರಿ, ಅದು ಅಮೂಲ್ಯವಾದದ್ದು. ಮೂರ್ಖರು ಮಾತ್ರ ಅದನ್ನು ಮರೆಯಲು ಪ್ರಯತ್ನಿಸುತ್ತಾರೆ. ನೀವು ಬುದ್ಧಿವಂತರಾಗಿದ್ದರೆ, ನೀವು ಅನುಭವಿಸಿದ ಪ್ರತಿಯೊಂದು ಅಹಿತಕರ ಅನುಭವವನ್ನು - ದ್ವೇಷ ಅಥವಾ ಕೋಪವಿಲ್ಲದೆ - ಯಾವಾಗಲೂ ನೆನಪಿಟ್ಟುಕೊಳ್ಳಬೇಕು, ಆಗ ನೀವು ಮತ್ತೆಂದೂ ಅದೇ ಪರಿಸ್ಥಿತಿಗಳಲ್ಲಿ ಸಿಲುಕಿಕೊಳ್ಳುವುದಿಲ್ಲ.
ನಾವು ಆಲೂಗಡ್ಡೆಗಳನ್ನು ತೊರೆಯಲು ಬಯಸುವುದಿಲ್ಲ; ನಾವು ಕೇವಲ ಅವುಗಳನ್ನು ಹೊರತೆಗೆದು, ಅವು ಮತ್ತೆ ಮೊಳೆಯದಂತೆ ಒಣಗಿಸಲು ಬಯಸುತ್ತೇವೆ. ನಾವು ಆಲೂಗಡ್ಡೆಗಳನ್ನು ಸಂರಕ್ಷಿಸಲು ಬಯಸುತ್ತೇವೆ; ಇಲ್ಲದಿದ್ದರೆ ನಾವು ಮತ್ತೆ ಅದೇ ವಿಷಯಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವ ಅಜ್ಞಾನಿ ಮೂರ್ಖರಾಗುತ್ತೇವೆ. ಅತ್ಯಮೂಲ್ಯವಾದ ಜೀವನದ ಅನುಭವವನ್ನು ತ್ಯಜಿಸಬಾರದು. ಆದರೆ ನೀವು ಅದನ್ನು ನಿಮ್ಮೊಳಗೆ ಬೆಳೆಯಲು ಬಿಟ್ಟರೆ, ಅದು ನಿಮ್ಮ ಇಡೀ ಜೀವನವನ್ನು ವಿಷಮಯವನ್ನಾಗಿಸುತ್ತದೆ. ಕರ್ಮ, ಅಥವಾ ಅನುಭವದ ನೆನಪು, ನಿಮಗೆ ಜ್ಞಾನವನ್ನು ತರಬಲ್ಲ ಏಕೈಕ ವಿಷಯವಾಗಿದೆ, ಹಾಗೆಯೇ ಅದು ನಿಮ್ಮನ್ನು ಬಂಧಿಸಬಲ್ಲ ವಿಷಯವೂ ಆಗಿದೆ - ನಿಮ್ಮ ಜೀವನವನ್ನು ಎಷ್ಟು ಗಾಢವಾಗಿ ವಿಷಮಯಗೊಳಿಸಬಹುದೆಂದರೆ, ಅದು ನಿಮ್ಮನ್ನು ನಾಶಪಡಿಸಲೂಬಹುದು. ಆದ್ದರಿಂದ, ಕರ್ಮವು ಸಮಸ್ಯೆಯಲ್ಲ; ನೀವು ಅದನ್ನು ಹೇಗೆ ಹೊತ್ತು ಸಾಗುತ್ತೀರಿ ಎನ್ನುವುದೊಂದೇ ಸಮಸ್ಯೆ.
ಸಂಪಾದಕೀಯ ಸೂಚನೆ: ಈಶ ಕ್ರಿಯ ಸದ್ಗುರುಗಳು ರಚಿಸಿದ ಯೋಗ ಅಭ್ಯಾಸವಾಗಿದೆ. ಆನ್‌ಲೈನ್‌ನಲ್ಲಿ ಉಚಿತ ಮಾರ್ಗದರ್ಶಿತ ಧ್ಯಾನವಾಗಿ ಮತ್ತು ಲಿಖಿತ ಸೂಚನೆಗಳೊಂದಿಗೆ ಲಭ್ಯವಿದೆ, ಪ್ರತಿದಿನ ಕೆಲವು ನಿಮಿಷಗಳನ್ನು ಹೂಡಿಕೆ ಮಾಡಲು ಸಿದ್ಧರಿರುವ ಯಾರ ಜೀವನವನ್ನಾದರೂ ಪರಿವರ್ತಿಸುವ ಸಾಮರ್ಥ್ಯ ಇದರಲ್ಲಿದೆ.