ದೇವರು ಅಥವಾ ಕರ್ಮ - ಯಾವುದನ್ನು ನಂಬಬೇಕು?
ದೇವರನ್ನು ನಂಬಬೇಕೇ ಅಥವಾ ಕರ್ಮವನ್ನು ನಂಬಬೇಕೇ? ನಿರ್ಣಯಗಳನ್ನು ಮಾಡುವ ಬದಲು, ಸದ್ಗುರು ಹೇಳುತ್ತಾರೆ, ಒಬ್ಬ ಅನ್ವೇಷಕನಾಗಲು ಧೈರ್ಯ ಮತ್ತು ಬದ್ಧತೆಯನ್ನು ಹೊಂದಿರಬೇಕು.

ಈ ಕೆಳಗಿನ ಭಾಗವನ್ನು ಈಶ ಯೋಗ ಕೇಂದ್ರದಲ್ಲಿ ನಡೆದ 21 ದಿನಗಳ ಹಠ ಯೋಗ ಕಾರ್ಯಕ್ರಮದ ಸಂದರ್ಭದಲ್ಲಿ ಸದ್ಗುರುಗಳೊಂದಿಗಿನ ಸಂದರ್ಶನದಿಂದ ಆಯ್ಕೆ ಮಾಡಲಾಗಿದೆ. ನಿರ್ಣಯ ಮತ್ತು ಊಹೆಗಳನ್ನು ಮಾಡುವ ಬದಲು, ಸದ್ಗುರುಗಳು ಹೇಳುತ್ತಾರೆ, ಒಬ್ಬ ಅನ್ವೇಷಕನಾಗಲು ಧೈರ್ಯ ಮತ್ತು ಬದ್ಧತೆಯನ್ನು ಹೊಂದಿರಬೇಕು.
ಪ್ರಶ್ನೆ: ಬಾಲ್ಯದಿಂದಲೂ, ದೇವರು ಇದ್ದಾನೆ ಎಂದು ನನಗೆ ನಂಬಿಸಲಾಗಿದೆ, ಮತ್ತು ಅದರ ಪರಿಣಾಮವಾಗಿ, ನಾನು ಭಕ್ತನಾದೆ. ಆದರೆ ನಂತರ ನಾನು ಇಲ್ಲಿ ಹಠ ಯೋಗ ಕಾರ್ಯಕ್ರಮವನ್ನು ಆರಂಭಿಸಿದೆ ಮತ್ತು ಈಶದ ಸಂಪೂರ್ಣ ವಿಧಾನವು ಕರ್ಮ-ಕೇಂದ್ರಿತವಾಗಿದೆ ಎಂದು ಗಮನಿಸಿದ್ದೇನೆ. ಇದರರ್ಥ ಎಲ್ಲಿಯೂ ದೇವರು ಭಾಗಿಯಾಗಿಲ್ಲ. ಇಪ್ಪತ್ತೊಂದು ವರ್ಷಗಳಿಂದ, ನಾನು ದೇವರನ್ನು ನಂಬಿದ್ದೇನೆ - ಈಗ ಅದನ್ನು ಮುರಿಯುವುದು ನಿಜವಾಗಿಯೂ ಸುಲಭವಲ್ಲ. ದಯವಿಟ್ಟು ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿ.
ಸದ್ಗುರು: ಶಂಕರನ್ ಪಿಳ್ಳೈನ ಮದುವೆ ವಿಚ್ಛೇದನದತ್ತ ಸಾಗುತ್ತಿತ್ತು. ಮದುವೆ ಸಲಹೆಗಾರನ ಬಳಿ ಹೋಗಿ
ಕೇಳಿದನು, "ನಾನು ಏನು ಮಾಡಬೇಕು? ನಾನು ಏನೇ ಪ್ರಯತ್ನಿಸಿದರೂ ಎಲ್ಲವೂ ತಪ್ಪಾಗುತ್ತಿದೆ.” ಮದುವೆ ಸಲಹೆಗಾರರು ಹೇಳಿದರು, "ನಿಜವಾಗಿಯೂ ಅವಳಿಗೆ ಏನು ಬೇಕು ಎಂದು ನೀವು ಅವಳನ್ನು ಕೇಳಬೇಕು”, ಮತ್ತು ಅದನ್ನು ಹೇಗೆ ಮಾಡಬೇಕೆಂದು ಅವರು ಅವನಿಗೆ ಕೆಲವು ಸಲಹೆಗಳನ್ನು ನೀಡಿದರು.
ಶಂಕರನ್ ಪಿಳ್ಳೈ ಮನೆಗೆ ಹಿಂತಿರುಗಿದಾಗ, ಅವನ ಹೆಂಡತಿ ಮಹಿಳಾ ಮಾಸಪತ್ರಿಕೆಯನ್ನು ಓದುತ್ತಿದ್ದಳು ಹಾಗೂ ತಲೆಯೆತ್ತಿ ನೋಡಲು ಚಿಂತಿಸಲಿಲ್ಲ. ಯಾವ ಪದಗಳನ್ನು ಬಳಸಬೇಕೆಂದು ಒಂದು ಕ್ಷಣ ಯೋಚಿಸಿದನು; ನಂತರ ಅವನು ಹೇಳಿದನು, "ಪ್ರಿಯೇ, ನಿನಗೆ ಬುದ್ಧಿವಂತ ಪುರುಷ ಬೇಕೇ ಅಥವಾ ಸುಂದರ ಪುರುಷ ಬೇಕೇ?" ಅವಳು ಏನೂ ಹೇಳಲಿಲ್ಲ. ನಂತರ ಅವನು ಹತ್ತಿರ ಹೋದನು, ಅವಳ ಪಕ್ಕದಲ್ಲಿ ಕುಳಿತು, ಮತ್ತೆ ಹೇಳಿದನು, "ಪ್ರಿಯೇ, ನಿನಗೆ ಬುದ್ಧಿವಂತ ಪುರುಷ ಬೇಕೇ ಅಥವಾ ಸುಂದರ ಪುರುಷ ಬೇಕೇ?" ಪತ್ರಿಕೆಯಿಂದ ತಲೆಯೆತ್ತದೆ, ಅವಳು ಹೇಳಿದಳು, “ಎರಡೂ ಅಲ್ಲ – ನಾನು ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ." ಮದುವೆಯನ್ನು ಉಳಿಸಿಕೊಳ್ಳಲು ಅವಳು ಸಾಕಷ್ಟು ಬುದ್ಧಿವಂತಳಾಗಿದ್ದಳು, ಪ್ರೇಮ ಸಂಬಂಧವನ್ನು ಮುಂದುವರಿಸುವ ಬದಲು.
ನಿಮ್ಮ ಭಕ್ತಿಯನ್ನು ನೋಡೋಣ. ಈ ಮೊದಲು, ನೀವು ದೇವರಿದ್ದಾನೆ ಎಂದು ನಿರ್ಣಯಿಸಿದ್ದಿರಿ. ಈಗ ನೀವು ಇಲ್ಲಿ ಕಾರ್ಯಕ್ರಮಕ್ಕೆ ಬಂದು ಈಶಾ ಕರ್ಮ-ಕೇಂದ್ರಿತ ಎಂಬ ತೀರ್ಮಾನಕ್ಕೆ ಬಂದಿದ್ದೀರಿ! ಕಾರ್ಯಕ್ರಮ ಮುಗಿಸಿ ನೀವು ಹೊರಟುಹೋದ ನಂತರ, ಯಾವ ತೀರ್ಮಾನಗಳನ್ನು ನೀವು ತೆಗೆದುಕೊಳ್ಳುತ್ತೀರಿ ಎಂದು ಯಾರಿಗೆ ತಿಳಿದಿದೆ. ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಯೋಗ ಎಂದರೆ ಹುಡುಕುವುದು. ಹುಡುಕುವುದು ಎಂದರೆ ನಿಮಗೆ ತಿಳಿದಿಲ್ಲ ಎಂದು ನೀವು ಅರಿತುಕೊಂಡಿದ್ದೀರಿ ಎಂದರ್ಥ, ಮತ್ತು ನೀವು ನಿಮ್ಮೊಳಗೆ ಆ ಮಟ್ಟದ ಸಮಗ್ರತೆಯನ್ನು ತಲುಪಿದ್ದೀರಿ. ಈ ಹಂತದಲ್ಲಿ ಅದು ಅನುಕೂಲಕರವಾಗಿದೆ ಎಂಬ ಕಾರಣಕ್ಕಾಗಿ ನೀವು ಏನನ್ನಾದರೂ ಊಹಿಸಲು ಸಿದ್ಧರಿಲ್ಲ.
ಒಂದು ಊಹೆಯಿಂದ ಇನ್ನೊಂದಕ್ಕೆ
ನಿಮ್ಮ ಸಮುದಾಯದಲ್ಲಿ, ನಿಮ್ಮ ಕುಟುಂಬದಲ್ಲಿ, ದೇವರನ್ನು ನಂಬುವುದು ಅನುಕೂಲಕರವಾಗಿದೆ, ಅಥವಾ ಅದಕ್ಕಿಂತ ಹೆಚ್ಚಾಗಿ, ಅವರೆಲ್ಲರೂ ನಂಬುವ ದೇವರನ್ನು ನಂಬುವುದು ಅನುಕೂಲಕರವಾಗಿದೆ, ಆದ್ದರಿಂದ ನೀವೂ ಅದನ್ನು ಮಾಡಿದ್ದೀರಿ. ನಂತರ ನೀವು ಇಲ್ಲಿಗೆ ಬಂದಿದ್ದೀರಿ ಮತ್ತು ನೀವು "ರಾಮ್, ರಾಮ್," "ಶಿವ, ಶಿವ" ಅಥವಾ ಇನ್ನಾವುದನ್ನೋ ಹೇಳುತ್ತಲೇ ಇದ್ದರೆ ಜನರು ನಿಮ್ಮನ್ನು ನೋಡಿ ನಗಬಹುದು ಎಂದು ನೀವು ಭಾವಿಸಿದ್ದೀರಿ. ಆದ್ದರಿಂದ ಈಗ ನೀವು "ಕರ್ಮ-ಕೇಂದ್ರಿತ"ರಾಗಿದ್ದೀರಿ! ನೀವು ಹೀಗೆ ಬದಲಾಗಲು ಎಷ್ಟು ಸಮಯ ಬೇಕಾಯಿತು? ನಿಮಗೆ ನೀವು ಹೀಗೆ ಮಾಡಿಕೊಳ್ಳಬೇಡಿ. ನೀವು ಇಷ್ಟು ಸುಲಭವಾಗಿ ಬದಲಾಗಲು ಕಾರಣವೇನೆಂದರೆ, ನೀವು ಒಬ್ಬ ಅನ್ವೇಷಕನಾಗಲು ಧೈರ್ಯ ಮತ್ತು ಬದ್ಧತೆಯನ್ನು ಹೊಂದುವ ಬದಲು ಒಂದು ಊಹೆಯಿಂದ ಇನ್ನೊಂದರೆಡೆಗೆ ಸಾಗುತ್ತಿದ್ದೀರಿ. ಅನ್ವೇಷಕನಾಗಿರುವುದು ಎಂದರೆ ನಿಮಗೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುವುದು. ದೇವರು ಈ ಜಗತ್ತನ್ನು ಆಳುತ್ತಾನೋ ಅಥವಾ ಕರ್ಮ ಈ ಜಗತ್ತನ್ನು ಆಳುತ್ತದೋ ಎಂದು ನಿಮಗೆ ತಿಳಿದಿಲ್ಲ - ಅದು ವಾಸ್ತವ.
ಆರಂಭದಲ್ಲಿ, ಇದು ನಿಮ್ಮನ್ನು ಭಯಭೀತರನ್ನಾಗಿ ಮಾಡುತ್ತದೆ, ಆದರೆ ನೀವು ಯಾವುದಕ್ಕೆ ಹೆದರುತ್ತೀರೋ, ಸ್ವಲ್ಪ ಸಮಯದ ನಂತರ ನೀವು ಅದಕ್ಕೆ ಒಗ್ಗಿಕೊಳ್ಳಬಹುದು. ಬೆಂಕಿಯನ್ನು ಉಗುಳುವ ಡ್ರ್ಯಾಗನ್ ಇರುವ ಕೋಣೆಯಲ್ಲಿ ನೀವು ಬಂಧಿಸಲ್ಪಟ್ಟಿದ್ದೀರಿ ಎಂದು ಭಾವಿಸೋಣ. ನೀವು ಸುಟ್ಟು ಸಾಯದಿದ್ದರೆ, ಮೂರು ದಿನಗಳ ನಂತರ, ನಿಧಾನವಾಗಿ, ನೀವು ಡ್ರ್ಯಾಗನ್ ಜೊತೆ ಸಂಭಾಷಣೆಯನ್ನು ಪ್ರಾರಂಭಿಸುತ್ತೀರಿ. ಆದ್ದರಿಂದ ಊಹೆಗಳನ್ನು ಮಾಡಬೇಡಿ ಅಥವಾ ಒಂದರಿಂದ ಇನ್ನೊಂದಕ್ಕೆ ಬದಲಾಯಿಸುತ್ತಲೇ ಇರಬೇಡಿ. ನಿಮಗೆ ತಿಳಿದಿಲ್ಲ ಎಂಬುದು ವಾಸ್ತವ ಸಂಗತಿ. ಇದು ಬೆಳಿಗ್ಗೆ ಎದ್ದು ನೀವು ಯೋಗ ಮಾಡುವಂತೆ ಮಾಡುತ್ತದೆ. ಮೇಲೆ ಸ್ವರ್ಗವಿದೆಯೇ ಅಥವಾ ನರಕವಿದೆಯೇ, ದೇವರು ಅಥವಾ ದೆವ್ವವಿದೆಯೇ ಎಂದು ಯಾರಿಗೆ ತಿಳಿದಿದೆ. ಕನಿಷ್ಠ ಪಕ್ಷ ನಿಮಗೆ ತಿಳಿದಿರುವ ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಶಕ್ತಿ, ನಿಮ್ಮ ಭಾವನೆಗಳನ್ನು ಚೆನ್ನಾಗಿ ಇಟ್ಟುಕೊಳ್ಳಿ.
ನೀವು ಸ್ವರ್ಗಕ್ಕೆ ಹೋಗುತ್ತೀರಿ ಎಂದು ಭಾವಿಸೋಣ - ಅದನ್ನು ಆನಂದಿಸಲು, ನೀವು ಉತ್ತಮ ಸ್ಥಿತಿಯಲ್ಲಿರಬೇಕು. ನೀವು ನರಕಕ್ಕೆ ಹೋಗುತ್ತೀರಿ ಎಂದು ಭಾವಿಸೋಣ - ಆಗ ನೀವು ಅದನ್ನು ತಡೆದುಕೊಳ್ಳಲು ಮತ್ತು ಬದುಕಲು ಉತ್ತಮ ಸ್ಥಿತಿಯಲ್ಲಿರಬೇಕು! ಹೇಗಾದರೂ, ನೀವು ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ಈ ಗ್ರಹದಲ್ಲಿ ಜೀವಿಸುತ್ತ ಚೆನ್ನಾಗಿರಲು ಸಹ ನೀವು ಉತ್ತಮ ಸ್ಥಿತಿಯಲ್ಲಿರಬೇಕು. ಆದ್ದರಿಂದ ನೀವು ದೇವರನ್ನು ನಂಬುತ್ತೀರೋ ಇಲ್ಲವೋ ಎಂಬುದು ಮುಖ್ಯವಲ್ಲ, ನೀವು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಶಕ್ತಿಯಲ್ಲಿ ಉತ್ತಮ ಸ್ಥಿತಿಯಲ್ಲಿರಬೇಕು.