ನಿಮ್ಮ ಅಭ್ಯಾಸಗಳನ್ನು ಬಿಡುವುದು - ಪ್ರಜ್ಞಾಪೂರ್ವಕವಾಗಿ ಜೀವಿಸುವುದು
ತೊಟ್ಟಿಲಲ್ಲಿ ರೂಪುಗೊಂಡ ಅಭ್ಯಾಸಗಳು ನಮ್ಮನ್ನು ಸಮಾಧಿಯವರೆಗೆ ಹಿಂಬಾಲಿಸುತ್ತವೆಯೇ? ಒಂದು ಅಭ್ಯಾಸ ಸಹಾಯಕವಾಗಿ ಕಂಡರೂ, ಅದು, ಜೀವನದ ಕೆಲವು ಭಾಗಗಳನ್ನು ಅಪ್ರಜ್ಞಾಪೂರ್ವಕವಾಗಿ ಜೀವಿಸುವಂತೆ ಮಾಡುತ್ತದೆ. ಸದ್ಗುರುಗಳು ಕರ್ಮ, ಆವರ್ತನಶೀಲತೆಯ ಸ್ವಭಾವ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯ ಬಗ್ಗೆ ಆಳವಾದ ಅರಿವು ಮೂಡಿಸುತ್ತಾರೆ.

ಪ್ರಶ್ನೆ: ಅಭ್ಯಾಸಗಳು ಸುಲಭವಾಗಿ ಸಾಯುವುದಿಲ್ಲ ಎಂದು ಹೇಳುತ್ತಾರೆ. ತೊಟ್ಟಿಲಲ್ಲಿ ನೀವು ಬೆಳೆಸಿಕೊಂಡ ಗುಣಗಳು ನೀವು ಸಾಯುವಾಗ ಮಾತ್ರ ಸಾಯುತ್ತವೆಯೇ?
ಸದ್ಗುರು: ಇದನ್ನು ಬೇರೊಂದು ದೃಷ್ಟಿಕೋನದಿಂದ ನೋಡೋಣ. ಒಂದು ಅಭ್ಯಾಸ ರೂಪುಗೊಳ್ಳುವುದು ಮುಖ್ಯವಾಗಿ ಅದು ನಿಮ್ಮ ಜೀವನಕ್ಕೆ ಒಂದು ನಿರ್ದಿಷ್ಟ ಸೌಲಭ್ಯವನ್ನು ತರುವುದರಿಂದ - ಅದು ನಿಮ್ಮ ಜೀವನದ ಕೆಲವು ಭಾಗಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ನೀವು ಅದರ ಬಗ್ಗೆ ಯೋಚಿಸಬೇಕಾಗಿಲ್ಲ ಅಥವಾ ಏನನ್ನೂ ಪರಿಗಣಿಸಬೇಕಾಗಿಲ್ಲ. ನೀವು ಅದನ್ನು ಹಾಗೆಯೇ ಮಾಡುತ್ತಿರಬಹುದು.
ಸ್ವಾಭಾವಿಕವಾಗಿ, ಮಾನವನ ರಕ್ಷಣಾ ವ್ಯವಸ್ಥೆಯ ಭಾಗವಾಗಿ, ಅವನು ಕೆಲವು ಅಭ್ಯಾಸಗಳನ್ನು ರೂಪಿಸಿಕೊಳ್ಳುತ್ತಾನೆ ಏಕೆಂದರೆ ಇತರ ಪ್ರಾಣಿಗಳಂತೆ ನಮ್ಮ ಅನೇಕ ಗುಣಲಕ್ಷಣಗಳು ನಿಗದಿತವಾಗಿ ಬಂದಿಲ್ಲ. ಇತರ ಪ್ರಾಣಿಗಳಿಗೆ, ಅವುಗಳ ಹೆಚ್ಚಿನ ಗುಣಲಕ್ಷಣಗಳು ನಿಗದಿತವಾಗಿವೆ. ಒಂದು ನಾಯಿ ಹಾಗೂ ಮತ್ತೊಂದು ನಾಯಿಯ ನಡುವೆ, ಒಂದು ಬೆಕ್ಕು ಹಾಗೂ ಮತ್ತೊಂದು ಬೆಕ್ಕಿನ ನಡುವೆ ನೀವು ಸ್ವಲ್ಪ ಮಾತ್ರ ವ್ಯತ್ಯಾಸವನ್ನು ಗಮನಿಸಬಹುದು. ಅವುಗಳಿಗೆ ಅವುಗಳದ್ದೇ ಆದ ಸ್ವಂತ ವ್ಯಕ್ತಿತ್ವವಿದೆ, ಆದರೆ ಅವುಗಳ ಹೆಚ್ಚಿನ ಗುಣಲಕ್ಷಣಗಳು ನಿಗದಿತವಾಗಿವೆ. ನಮಗೋ, ನಿಗದಿತವಾಗಿರುವುದು ಅತಿ ಕಡಿಮೆ ಇದೆ. ಮಾನವ ಜೀವಿಗೆ ಮಾತ್ರ ಬಹುತೇಕ ಎಲ್ಲವೂ ವಿಶಾಲವಾಗಿ ತೆರೆದಿಡಲ್ಪಟ್ಟಿದೆ. ಅದಕ್ಕಾಗಿಯೇ ನೀವು ಮಗುವಾಗಿರುವಾಗ, ನಿಮ್ಮದೇ ಸ್ವಂತ ಆವೃತ್ತಿಗಳನ್ನು ಸೃಜಿಸುವಲ್ಲಿ, ನಿಮ್ಮೊಳಗೇ ಒಂದು ರಕ್ಷಣಾ ಆವೃತ್ತಿಯನ್ನು ರೂಪಿಸಲು ಪ್ರಯತ್ನಿಸುತ್ತೀರಿ.
ಆವರ್ತನಶೀಲತೆಯನ್ನು ತ್ಯಜಿಸುವುದು
ಪ್ರತಿಯೊಂದು ಮಗುವೂ ಬದುಕುಳಿಯುವ ಸಲುವಾಗಿ ಕೆಲವು ಅಭ್ಯಾಸಗಳನ್ನು ರೂಪಿಸಿಕೊಳ್ಳುತ್ತದೆ. ಅದು ಅಸ್ತಿತ್ವದಲ್ಲಿರುವಿಕೆಯ ಪ್ರವೃತ್ತಿ. ಈ ಪ್ರವೃತ್ತಿಗಳ ಸಹಾಯದಿಂದ ಅದು ಸ್ವಲ್ಪ ಸುಲಭವಾಗಿ ಕಾರ್ಯನಿರ್ವಹಿಸಬಹುದು. ಇದು ಮಗುವಿಗೆ ಬಹಳ ಪ್ರಸ್ತುತವಾಗಿದೆ. ಆದರೆ ಸಾಮಾನ್ಯವಾಗಿ, ತಾವು ಬೆಳೆದಂತೆ ಮಕ್ಕಳು ಈ ಪ್ರವೃತ್ತಿಗಳನ್ನು ಬಿಟ್ಟು ಬಿಡುತ್ತಾರೆ. ಇದು ನೀವು ಅವರಿಗಾಗಿ ನಿರ್ಮಿಸುವ ಅರಿವಿನ ಪರಿಸರ ಹಾಗೂ ಅನುಭವಗಳ ಅನಾವರಣದ ಮಟ್ಟವನ್ನು ಅವಲಂಬಿಸಿದೆ. ಅನುಭವಗಳ ಅನಾವರಣ ಅಥವಾ ವಿದ್ಯಾಭ್ಯಾಸದಿಂದ, ಜನರು ಬದಲಾಗುತ್ತಾರೆ. ಎಷ್ಟು ನಾಟಕೀಯವಾಗಿ ಬದಲಾಗುತ್ತಾರೆ ಎಂದರೆ ಮೂರು ವರ್ಷಗಳ ಕಾಲ ಹೊರಹೋಗಿ ಹಿಂತಿರುಗಿ ಬಂದ ಮಕ್ಕಳನ್ನು ತಂದೆ ತಾಯಿಯರು ಗುರುತು ಹಿಡಿಯದಷ್ಟು. ವಿಭಿನ್ನ ಮಟ್ಟದ ಒಡನಾಟದ ಪ್ರಮಾಣದಿಂದ ಅವರ ಬಗೆಗಿನ ಪ್ರತಿಯೊಂದೂ ಸಹ ಬದಲಾಗಿರುತ್ತದೆ.
ಭಯಭೀತರಾಗಿರುವವರಿಗೆ ಮತ್ತು ನಿರಂತರವಾಗಿ ಸ್ವ-ಸಂರಕ್ಷಣೆಯಲ್ಲಿ ಮಗ್ನರಾಗಿರುವವರಿಗೆ ಮಾತ್ರ ತಮ್ಮ ಹಳೆಯ ಅಭ್ಯಾಸಗಳನ್ನು ಸುಲಭವಾಗಿ ಬಿಡಲು ಸಾಧ್ಯವಾಗುವುದಿಲ್ಲ. ಉತ್ಸಾಹ, ಜೀವನ, ಸಾಹಸಗಳನ್ನು ಹುಡುಕುವವರು - ಅವರು ತಮ್ಮ ಅಭ್ಯಾಸಗಳನ್ನು ಬಹಳ ಸುಲಭವಾಗಿ ಬಿಡುತ್ತಾರೆ ಏಕೆಂದರೆ ಅವರು ಪ್ರಸ್ತುತದಲ್ಲಿ ಇರುವ ಸಂದರ್ಭಗಳಿಗೆ ಅನುಗುಣವಾಗಿ, ಅಗತ್ಯವಿರುವ ರೀತಿಯಲ್ಲಿ ತಮ್ಮ ಜೀವನವನ್ನು ಯಾವಾಗಲೂ ಮರುರೂಪಿಸಿಕೊಳ್ಳುತ್ತಿರುತ್ತಾರೆ.
ಎಲ್ಲಕ್ಕಿಂತ ಮಿಗಿಲಾಗಿ, ಒಬ್ಬ ವ್ಯಕ್ತಿ ಆಧ್ಯಾತ್ಮಿಕ ಮಾರ್ಗವನ್ನು ಕೈಗೊಂಡರೆ, ಅವನ ಎಲ್ಲ ಅಭ್ಯಾಸಗಳು ಕಳಚಿ ಬೀಳುತ್ತವೆ ಏಕೆಂದರೆ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸ ಎಂಬುದು ಏನೂ ಇಲ್ಲ. ಎಲ್ಲ ಅಭ್ಯಾಸಗಳೂ ಕೆಟ್ಟವೇ. ನಿಮ್ಮ ಜೀವನದ ಒಂದು ನಿರ್ದಿಷ್ಟ ಹಂತದಲ್ಲಿ ಅವು ಬದುಕುಳಿಯುವಿಕೆಯ ಸಾಧನಗಳಾಗಿರಬಹುದು, ಆದರೆ ನೀವು ಬೆಳೆದ ನಂತರ ನಿಮಗೆ ಯಾವುದೇ ಅಭ್ಯಾಸ, ಒಳ್ಳೆಯದು ಅಥವಾ ಕೆಟ್ಟದು, ಇರಬಾರದು, ಏಕೆಂದರೆ ಅಭ್ಯಾಸ ಎಂದರೆ ನೀವು ನಿಮ್ಮ ಜೀವನವನ್ನು ಅಪ್ರಜ್ಞಾಪೂರ್ವಕವಾಗಿ ನಡೆಸಲು ಕಲಿಯುತ್ತಿದ್ದೀರಿ ಎಂದರ್ಥ. ಅದು ಸುರಕ್ಷಿತವಾಗಿ ಕಾಣಬಹುದು, ಆದರೆ ಅದು ಅನೇಕ ವಿಭಿನ್ನ ರೀತಿಗಳಲ್ಲಿ ನಿಮ್ಮನ್ನು ಜೀವನದಿಂದ ವಂಚಿತರನ್ನಾಗಿಸುತ್ತದೆ.
ಅಭ್ಯಾಸಗಳು ಮತ್ತು ಕರ್ಮ
ಆಧ್ಯಾತ್ಮಿಕತೆಯು ನಮ್ಮೊಳಗಿರುವ ಎಲ್ಲ ಅಪ್ರಜ್ಞಾಪೂರ್ವಕ ಆವರ್ತನಶೀಲತೆಯನ್ನು ಮುರಿಯಲು ಮೂಲಭೂತ ಸಾಧನವಾಗಿದೆ. ನಾವು ಕರ್ಮ ಎಂದು ಉಲ್ಲೇಖಿಸುವುದು ಕೂಡ ಇದನ್ನೇ. ಕರ್ಮ ಎಂದರೆ ನೀವು ಅಪ್ರಜ್ಞಾಪೂರ್ವಕವಾಗಿ ನಿಮಗಾಗಿ ಪ್ರವೃತ್ತಿಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೀರಿ, ನಿಮ್ಮ ನಡವಳಿಕೆಯ ಬಗ್ಗೆ ಮಾತ್ರವಲ್ಲ, ನಿಮ್ಮ ಜೀವನ ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆಯೂ. ಜನರು ತಮ್ಮ ಜೀವನಗಳನ್ನು ಅವಲೋಕಿಸಿದಲ್ಲಿ, ಸಂದರ್ಭಗಳು ಸಂಭವಿಸುವ ರೀತಿ, ಅವಕಾಶಗಳು ಬರುವ ರೀತಿ, ಜನರನ್ನು ಭೇಟಿಯಾಗುವ ರೀತಿ, ಈ ಎಲ್ಲವೂ ಹೇಗೆ ಕೆಲವು ರೀತಿಯ ಆವರ್ತನಗಳಲ್ಲಿ ಸಂಭವಿಸುತ್ತಿವೆ ಎನ್ನುವುದನ್ನು ಗಮನಿಸಬಹುದು. ಇದು ಕೇವಲ ನೀವೇ ಸೃಷ್ಟಿಸಿಕೊಂಡಿರುವ ಕರ್ಮದ ಆವರ್ತನಗಳ ಕಾರಣದಿಂದ ಉಂಟಾಗುತ್ತವೆ.
ಅಭ್ಯಾಸವು ಕರ್ಮದ ಆವರ್ತನಶೀಲತೆಯ ಒಂದು ಚಿಕ್ಕ ಅಭಿವ್ಯಕ್ತಿ. ನೀವು ಒಂದು ನಿರ್ದಿಷ್ಟ ಮಾಹಿತಿಯನ್ನು ತೆಗೆದುಕೊಂಡು ಅದರಿಂದ ಒಂದು ಆವೃತ್ತಿಯನ್ನು ಸೃಜಿಸುತ್ತೀರಿ. ಅದು ನಿಮ್ಮ ಅಭ್ಯಾಸವಾಗುತ್ತದೆ. ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ನಿಮ್ಮೊಳಗೆ ಯಾವುದೂ ಅಪ್ರಜ್ಞಾಪೂರ್ವಕವಾಗಿ ಸಂಭವಿಸುವುದನ್ನು ನೀವು ಬಯಸುವುದಿಲ್ಲ ಎಂದರ್ಥ. ನಿಮ್ಮ ಜೀವನವನ್ನು ಅಪ್ರಜ್ಞಾಪೂರ್ವಕವಾಗಿ ನಡೆಸುವುದು ಬುದ್ಧಿವಂತಿಕೆಯ ವಿಧಾನವಲ್ಲ. ನೀವು ಆ ಅಭ್ಯಾಸವನ್ನು ನಿಮ್ಮ ತೊಟ್ಟಿಲಲ್ಲಿ ಅಥವಾ ನಿಮ್ಮ ತಾಯಿಯ ಗರ್ಭದಲ್ಲಿ ಅಥವಾ ಅದಕ್ಕೂ ಮುಂಚೆ ಪಡೆದುಕೊಂಡಿದ್ದರೂ, ಅದು ಮುಖ್ಯವಲ್ಲ. ನೀವು ವಿಕಾಸವನ್ನು ಬಯಸುತ್ತಿದ್ದರೆ, ನೀವು ಮೋಕ್ಷ ಅಥವಾ ಮುಕ್ತಿಯನ್ನು ಬಯಸುತ್ತಿದ್ದರೆ, ನೀವು ನಿಮ್ಮ ಎಲ್ಲ ಪ್ರವೃತ್ತಿಗಳನ್ನು ಬಿಟ್ಟು ಬಿಡಬೇಕು - ಒಳ್ಳೆಯದಲ್ಲ, ಕೆಟ್ಟದಲ್ಲ, ಆದರೆ ಎಲ್ಲವನ್ನೂ. ನೀವು ಸಮಾಧಿಯವರೆಗೆ ಕಾಯಬೇಕಾಗಿಲ್ಲ. ಸಮಾಧಿಯೂ ಕೂಡ ಎಲ್ಲ ಪ್ರವೃತ್ತಿಗಳನ್ನು ತೊಡೆದು ಹಾಕುವುದಿಲ್ಲ.
ನೀವು ಸ್ಮಶಾನಕ್ಕೆ ಹೋದರೂ, ನಿಮ್ಮ ದೇಹವನ್ನು ಸುಟ್ಟರೂ, ನಿಮ್ಮ ಪ್ರವೃತ್ತಿಗಳು ನಿಮ್ಮನ್ನು ಬಿಡುವುದಿಲ್ಲ. ಕರ್ಮ ಎಂದರೆ ಇದೇ. ಅದು ಎಲ್ಲವನ್ನೂ ಮೀರುತ್ತದೆ ಏಕೆಂದರೆ ನಿಮ್ಮ ದೇಹವನ್ನು ಕಳೆದುಕೊಳ್ಳುವುದರಿಂದ ನೀವು ಈ ಪ್ರವೃತ್ತಿಗಳನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ ನೀವು ಜೀವಂತವಾಗಿರುವಾಗ ಮತ್ತು ಎಚ್ಚರವಾಗಿರುವಾಗ ಈ ಪ್ರವೃತ್ತಿಗಳನ್ನು ಮೀರಲು ಪ್ರಯತ್ನಿಸುವುದು ಅತ್ಯಂತ ಮುಖ್ಯ.
ಆವರ್ತನಶೀಲತೆಯನ್ನು ಕೆಡವಿ ನಿಮ್ಮ ಜೀವನವನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿ. ಉದಾಹರಣೆಗೆ, ನಾನು ಈಗ ಮಾತನಾಡುತ್ತಿದ್ದೇನೆ - ನಾನು ಅಭ್ಯಾಸದಿಂದ ಅಥವಾ ಪ್ರಜ್ಞಾಪೂರ್ವಕವಾಗಿ ಮಾತನಾಡಬಹುದು. ಅದೇ ದೊಡ್ಡ ವ್ಯತ್ಯಾಸ. ನಾನು ಕೇವಲ ಕುಳಿತು ಹರಟೆಯಂತೆ ಮಾತಾಡಿದರೂ, ಹತ್ತು ಸಾವಿರ ಜನರು ಕೇಳಲು ಬಯಸುತ್ತಾರೆ ಏಕೆಂದರೆ ಪ್ರತಿಯೊಂದು ಪದವೂ ಪ್ರಜ್ಞಾಪೂರ್ವಕವಾಗಿ ಉಚ್ಚರಿಸಲ್ಪಡುತ್ತದೆ, ಅಭ್ಯಾಸದಿಂದಲ್ಲ. ಇದರಲ್ಲಿ ಏನೂ ಅಭ್ಯಾಸದ್ದಲ್ಲ. ನಾನು ಹೇಳುತ್ತಿರುವುದರ ವಿಷಯ ಏನೇ ಇರಲಿ, ಜನರು ಇನ್ನೂ ಕೇಳಲು ಬಯಸುತ್ತಾರೆ ಏಕೆಂದರೆ ಪ್ರತಿಯೊಂದು ಪದವೂ ಪ್ರಜ್ಞಾಪೂರ್ವಕವಾಗಿ ಹೊರಬರುತ್ತದೆ, ಆದ್ದರಿಂದ ಅದಕ್ಕೆ ಶಕ್ತಿ ಇದೆ. ನೀವು ಪ್ರತಿಯೊಂದು ಉಸಿರನ್ನು ಒಳಗೆ ಮತ್ತು ಹೊರಗೆ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡರೆ, ಇದ್ದಕ್ಕಿದ್ದಂತೆ ನಿಮ್ಮ ಉಸಿರಿಗೆ ವಿಭಿನ್ನ ರೀತಿಯ ಶಕ್ತಿ ಇರುತ್ತದೆ. ನಿಮ್ಮ ಜೀವನದಲ್ಲಿ ಪ್ರತಿಯೊಂದು ಚಲನೆಯನ್ನು, ನೀವು ಪ್ರಜ್ಞಾಪೂರ್ವಕವಾಗಿ ಮಾಡಿದರೆ, ಪ್ರತಿಯೊಂದು ಚಲನೆಗೂ ಅಪಾರ ಶಕ್ತಿ ಇರುತ್ತದೆ. ನೀವು ಜೀವನದ ಶಕ್ತಿಯನ್ನು ತಿಳಿಯಬೇಕೆಂದರೆ, ನೀವು ಅದರ ಬಗ್ಗೆ ಪ್ರಜ್ಞಾಪೂರ್ವಕವಾಗಿರಬೇಕು, ಇಲ್ಲದಿದ್ದರೆ ಅದು ನಿಮ್ಮಅಸ್ತಿತ್ವದಲ್ಲಿಯೇ ಇರುವುದಿಲ್ಲ.
ಸಂಪಾದಕೀಯ ಟಿಪ್ಪಣಿ: ಸದ್ಗುರುಗಳ ಹೆಚ್ಚಿನ ಅಂತರ್ದೃಷ್ಟಿಗಳನ್ನು "ಆಫ್ ಮಿಸ್ಟಿಕ್ಸ್ ಅಂಡ್ ಮಿಸ್ಟೇಕ್ಸ್" ಪುಸ್ತಕದಲ್ಲಿ ಕಾಣಬಹುದು. ಮುನ್ನುಡಿ ಅಧ್ಯಾಯವನ್ನು ಡೌನ್‌ಲೋಡ್ ಮಾಡಿ ಅಥವಾ ಇ-ಪುಸ್ತಕವನ್ನು ಈಶಾ ಡೌನ್‌ಲೋಡ್‌ಗಳಲ್ಲಿ ಖರೀದಿಸಿ.