ಕರ್ಮದಿಂದ ಮೋಕ್ಷದೆಡೆಗೆ
ಕರ್ಮ ಎಂದರೇನು ಮತ್ತು ಅದು ಮೋಕ್ಷ ಅಥವಾ ಪರಮ ವಿಮೋಚನೆಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ಸದ್ಗುರುಗಳು ಅವಲೋಕಿಸುತ್ತಾರೆ.

ಪ್ರಶ್ನೆ: ಸದ್ಗುರು, ನೀವು ಕರ್ಮದ ಸಿದ್ಧಾಂತದ ಮೇಲೆ ಸ್ವಲ್ಪ ಬೆಳಕು ಚೆಲ್ಲುತ್ತೀರಾ ಮತ್ತು ಒಬ್ಬರು ಮೋಕ್ಷವನ್ನು ಹೇಗೆ ಪಡೆಯಬಹುದು ಮತ್ತು ಜನ್ಮ ಮತ್ತು ಪುನರ್ಜನ್ಮದ ಚಕ್ರದಿಂದ ಹೇಗೆ ಮುಕ್ತರಾಗಬಹುದು?
ಸದ್ಗುರು: ಕರ್ಮ ಎಂದರೆ ಕ್ರಿಯೆ. ನೀವು ಇಲ್ಲಿ ಕುಳಿತಿರುವಂತೆ, ನೀವು ನಾಲ್ಕು ರೀತಿಯ ಕಾರ್ಯಗಳನ್ನು ಮಾಡುತ್ತಿದ್ದೀರಿ. ನಿಮ್ಮ ದೇಹವು ಏನನ್ನಾದರೂ ಮಾಡುತ್ತಿದೆ - ಇಲ್ಲದಿದ್ದರೆ, ನೀವು ಜೀವಂತರಾಗಿರುತ್ತಿರಲಿಲ್ಲ. ಅಂತೆಯೇ, ನಿಮ್ಮ ಮನಸ್ಸು, ಭಾವನೆಗಳು ಮತ್ತು ಜೀವ ಶಕ್ತಿಗಳು ಸಹ ಕೆಲವು ಕ್ರಿಯೆಗಳನ್ನು ಮಾಡುತ್ತಿವೆ. ಈ ನಾಲ್ಕು, ನಿಮ್ಮ ಜೀವನದ ಪ್ರತಿ ಕ್ಷಣವೂ ಸಂಭವಿಸುತ್ತಿರುತ್ತವೆ - ಎಚ್ಚರಿಕೆ ಮತ್ತು ನಿದ್ರಾವಸ್ಥೆಗಳಲ್ಲಿ. 99%ಕ್ಕೂ ಹೆಚ್ಚಿನ ನಿಮ್ಮ ಕರ್ಮ, ನಿಮ್ಮ ಕ್ರಿಯೆಗಳು, ಅಪ್ರಜ್ಞಾಪೂರ್ವಕವಾಗಿರುತ್ತವೆ. ಆದರೆ ಈ ಕ್ರಿಯೆಗಳ ಉಳಿದ ಸ್ಮರಣೆಯು ನಿಮ್ಮೊಳಗೆ ವರ್ಧಿಸುತ್ತದೆ.
ಉದಾಹರಣೆಗೆ, ನೀವು ಒಂದು ಸ್ಥಳದಿಂದ ಇನ್ನೊಂದಕ್ಕೆ ನಡೆದುಕೊಂಡು ಹೋಗುವಾಗ, 10 ವಿವಿಧ ರೀತಿಯ ಸುಗಂಧಗಳು ಇರಬಹುದು, ಆದರೆ ಏನಾದರೂ ತೀವ್ರವಾಗಿ ಅನಿಸದ ಹೊರತು ನೀವು ಅವುಗಳನ್ನು ಗಮನಿಸದೇ ಇರಬಹುದು. ಆದರೆ ನಿಮ್ಮ ಮೂಗಿನ ಹೊಳ್ಳೆಗಳನ್ನು ಪ್ರವೇಶಿಸಿದ ಎಲ್ಲಾ ೧೦ ವಿಭಿನ್ನ ಸುಗಂಧಗಳೂ ನಿಮ್ಮೊಳಗೆ ದಾಖಲಾಗಿರುತ್ತವೆ. ಮಾನವ ವ್ಯವಸ್ಥೆಯು ಒಂದು ಅಸಾಧಾರಣ ಯಂತ್ರ. ಅದು ಏನನ್ನೂ ಕಳೆದುಕೊಳ್ಳುವುದಿಲ್ಲ. ನೀವು ಅದರ ಬಗ್ಗೆ ಪ್ರಜ್ಞಾಪೂರ್ವಕರಾಗಿರಲಿ ಅಥವಾ ಇಲ್ಲದಿರಲಿ, ಅದು ಎಲ್ಲವನ್ನೂ, ಎಲ್ಲ ಸಮಯದಲ್ಲೂ ಗ್ರಹಿಸುತ್ತದೆ ಮತ್ತು ದಾಖಲಿಸುತ್ತದೆ. ಈ ಸ್ಮರಣೆಯ ಆಧಾರದ ಮೇಲೆ, ನೀವು ಕೆಲವು ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುತ್ತೀರಿ. ಈ ಪ್ರವೃತ್ತಿಗಳಿಗೆ ಸಾಂಪ್ರದಾಯಿಕ ಪದವೆಂದರೆ ವಾಸನಾ.
ನೀವು ಹೊಂದಿರುವ ವಾಸನಾದ ಅನುಗುಣವಾಗಿ, ನೀವು ಕೆಲವು ರೀತಿಯ ಜೀವನ ಸನ್ನಿವೇಶಗಳತ್ತ ಸಾಗುತ್ತೀರಿ. ನಾವು "ಇದು ನಿಮ್ಮ ಕರ್ಮ" ಎಂದು ಹೇಳುತ್ತೇವೆ - ಅಂದರೆ "ಇದು ನಿಮ್ಮಿಂದ ಮಾಡಲ್ಪಟ್ಟದ್ದು." ದುರದೃಷ್ಟವಶಾತ್, ಕರ್ಮವನ್ನು ಶಿಕ್ಷೆ ಅಥವಾ ಯಾವುದರದ್ದೋ ಪ್ರತಿಫಲವೆಂಬಂತೆ ವರ್ಣಿಸಲಾಗುತ್ತಿದೆ. ಕರ್ಮವು ಶಿಕ್ಷೆಯೂ ಅಲ್ಲ, ಪ್ರತಿಫಲವೂ ಅಲ್ಲ. ಇದರರ್ಥ ನೀವು ಸ್ಮರಣೆಯನ್ನು ಶೇಖರಿಸುತ್ತಿದ್ದೀರಿ; ನೀವು ಅಪ್ರಜ್ಞಾಪೂರ್ವಕವಾಗಿ ನಿಮ್ಮ ಜೀವನದ ಪ್ರತಿ ಕ್ಷಣ "ಸಾಫ್ಟ್‌ವೇರ್"ಅನ್ನು ರೂಪಿಸುತ್ತಿದ್ದೀರಿ. ನಿಮ್ಮ ಸಾಫ್ಟ್‌ವೇರ್ ಹೇಗೆ ಆಗಿದೆಯೋ, ಅದಕ್ಕೆ ಅನುಗುಣವಾಗಿ ನೀವು ವರ್ತಿಸುತ್ತೀರಿ, ಕಾರ್ಯನಿರ್ವಹಿಸುತ್ತೀರಿ ಮತ್ತು ನಿಮ್ಮ ಜೀವನವನ್ನು ಅನುಭವಿಸುತ್ತೀರಿ.
ಕರ್ಮ ಎಂದರೆ ಜೀವನವು ಸಂಪೂರ್ಣವಾಗಿ ನಿಮ್ಮದೇ ರಚನೆ. ನೀವು ಅದನ್ನು ಪ್ರಜ್ಞಾಪೂರ್ವಕವಾಗಿ ರೂಪಿಸುತ್ತೀರೋ ಅಥವಾ ಅಪ್ರಜ್ಞಾಪೂರ್ವಕವಾಗಿ ರೂಪಿಸುತ್ತೀರೋ ಎಂಬುದು ಪ್ರಶ್ನೆ. ಸ್ವರ್ಗದಲ್ಲಿರುವ ಯಾರೂ ನಿಮ್ಮ ಜೀವನವನ್ನು ನಡೆಸುತ್ತಿಲ್ಲ. ಕರ್ಮ ಎಂದರೆ ನಿಮ್ಮ ಜೀವನವನ್ನು ನೀವೇ ರೂಪಿಸುತ್ತಿದ್ದೀರಿ. ನೀವು ನಿಮ್ಮ ಜೀವನವನ್ನು ಹೆಚ್ಚಾಗಿ ಅಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳುತ್ತಿದ್ದೀರಿ ಎಂದು ನೀವು ಅರ್ಥಮಾಡಿಕೊಂಡ ನಂತರ, ನಿಮ್ಮ ಬುದ್ಧಿವಂತಿಕೆಯು ಸಾಧ್ಯವಾದಷ್ಟು ಜಾಗೃತವಾಗಿರಲು ಪ್ರಯತ್ನಿಸುವುದು ಸ್ವಾಭಾವಿಕವಲ್ಲವೇ? ಪ್ರಜ್ಞೆಯು ಬೆಳಕಿನ ಬಲ್ಬ್‌ನ ವೋಲ್ಟೇಜ್‌ನಂತೆ. ನೀವು ವೋಲ್ಟೇಜ್ ಅನ್ನು ಹೆಚ್ಚಿಸಿದರೆ, ಅದು ನಿಮಗೆ ಎಲ್ಲವನ್ನೂ ತೋರಿಸುತ್ತದೆ. ನೀವು ವೋಲ್ಟೇಜ್ ಅನ್ನು ಕಡಿಮೆ ಮಾಡಿದರೆ, ಅದು ನಿಮಗೆ ಸ್ವಲ್ಪ ಮಾತ್ರ ತೋರಿಸುತ್ತದೆ. ಪ್ರಜ್ಞಾಪೂರ್ವಕರಾಗಲು ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ. ನಿಮ್ಮ ಜೀವ ಶಕ್ತಿಗಳನ್ನು ನೀವು ತುಂಬಾ ತೀವ್ರಗೊಳಿಸಿದರೆ, ಪ್ರಜ್ಞೆಯು ನಿಮ್ಮೊಳಗೆ ಜ್ವಲಿಸುತ್ತದೆ. ಯಾವುದೇ ತೀವ್ರತೆ ಇಲ್ಲದೆ, ನೀವು ಕೇವಲ ಪ್ರಜ್ಞೆಯ ಬಗ್ಗೆ ಮಾತನಾಡುತ್ತಿದ್ದರೆ ಮತ್ತು ಓದುತ್ತಿದ್ದರೆ ಸಾಧ್ಯವಾಗುವುದಿಲ್ಲ.
ಕರ್ಮವನ್ನು ಅಳಿಸಿ ಹಾಕುವುದು
ನಾವು ಅರ್ಥಮಾಡಿಕೊಳ್ಳಬೇಕು, ಭಾರತೀಯ ಸಂಸ್ಕೃತಿಯಲ್ಲಿ, ದೇವರು ನಮ್ಮ ಗುರಿಯಲ್ಲ. ದೇವರು ಮತ್ತೊಂದು ಸಾಧನ. ನಮಗೆ ಅಂತಿಮ ಗುರಿ ಮತ್ತು ಅತ್ಯುನ್ನತ ಮೌಲ್ಯವೆಂದರೆ ವಿಮೋಚನೆ, ಸ್ವಾತಂತ್ರ್ಯ, ಮುಕ್ತಿ ಅಥವಾ ಮೋಕ್ಷ. ಸದ್ಯಕ್ಕೆ ಸ್ವರ್ಗವೇ ಶ್ರೇಷ್ಠ ಸ್ಥಳದಂತೆ ಕಾಣಿಸಬಹುದು ಆದರೆ ಅಲ್ಲಿಗೆ ಹೋದರೆ ಸ್ವಲ್ಪ ಸಮಯದ ನಂತರ ಬೇಸರವಾಗುತ್ತದೆ. ಅದು ಹಾಗಿರಲಿ, ನೀವು ಈಗಾಗಲೇ ಸ್ವರ್ಗದಲ್ಲಿಲ್ಲ ಎಂಬುದಕ್ಕೆ ನಿಮ್ಮ ಬಳಿ ಪುರಾವೆ ಇದೆಯೇ? ನೀವು ಈಗಾಗಲೇ ಸ್ವರ್ಗದಲ್ಲಿರುವಿರಿ ಮತ್ತು ಅದನ್ನು ಫಜೀತಿ ಮಾಡುತ್ತಿದ್ದೀರಿ! ನೀವು ಸಿದ್ಧರಿದ್ದರೆ, ದಿವ್ಯವಾದುದರ ಸಾನ್ನಿಧ್ಯವು ಬೇರೆಡೆ ಇರುವಂತೆ ಇಲ್ಲಿಯೂ ಇರುತ್ತದೆ.
ಮುಕ್ತಿ ಎಂದರೆ ಆವರ್ತನಗಳನ್ನು ಮೀರಿ ಹೋಗುವುದು. ನೀವು ಆವರ್ತನಗಳನ್ನು ಮೀರಲು ಏಕೆ ಬಯಸುತ್ತೀರಿ? ನೀವು ದುಃಖಿತರಾಗಿದ್ದರೆ, ನೀವು ಆವರ್ತನಗಳನ್ನು ಮೀರಲು ಬಯಸುತ್ತೀರಿ ಎಂದು ಜನರು ಭಾವಿಸುತ್ತಾರೆ. ಅಲ್ಲವೇ ಅಲ್ಲ. ಶೋಚನೀಯ ವ್ಯಕ್ತಿಯು, ಶ್ರೀಮಂತ, ಉತ್ತಮ, ಆರೋಗ್ಯಕರ, ಎತ್ತರ, ಹೆಚ್ಚು ಸುಂದರ ಅಥವಾ ಬೇರೆ ಹೆಚ್ಚಿನದೇನಾದರೂ ಆಗಿ, ಮರಳಿ ಬರಲು ಬಯಸುತ್ತಾನೆ. ಜೀವನವನ್ನು ಅದರ ಎಲ್ಲಾ ಆಯಾಮಗಳಲ್ಲಿ ನೋಡಿದ ವ್ಯಕ್ತಿ ಮಾತ್ರ ಇದನ್ನು ಮೀರಿ ಹೋಗಲು ಬಯಸುತ್ತಾನೆ. ಮುಕ್ತಿ ಎಂದರೆ ನಾವು ಸಂಗ್ರಹಿಸಿದ ಕರ್ಮದ ಮಾಹಿತಿಯನ್ನು ನಾವು ಅಳಿಸಿಹಾಕಲು ಬಯಸುತ್ತೇವೆ, ಏಕೆಂದರೆ ಅದು ಜೀವವನ್ನು ತನ್ನೊಳಗೆ ಬಂಧಿಸಿ, ತನ್ನ ಸುತ್ತಲೂ ಶರೀರವನ್ನು ನಿರ್ಮಿಸುತ್ತದೆ. ನೀವು ಈ ಕರ್ಮದ ಮಾಹಿತಿಯನ್ನು ಕಳಚಿದರೆ, ಒಳಗಿನ ಜೀವವು ನೀವು ಅಥವಾ ನಾನು ಆಗಿರುವುದಿಲ್ಲ - ಅದು ಕೇವಲ ಜೀವವಾಗಿರುತ್ತದೆ. ಇದು ಜೀವಂತ ಬ್ರಹ್ಮಾಂಡ. ಒಂದು ಸಾದೃಶ್ಯವನ್ನು ನೀಡುವುದಾದರೆ - ನೀವು ಸೋಪ್ ಗುಳ್ಳೆಯನ್ನು ಸ್ಫೋಟಿಸಿದರೆ, ಗುಳ್ಳೆ ನಿಜವಾಗಿದೆ, ಆದರೆ ಗುಳ್ಳೆ ಒಡೆದಾಗ ಒಂದು ಹನಿ ನೀರು ಮಾತ್ರ ಕೆಳಗೆ ಬೀಳುತ್ತದೆ. ಗುಳ್ಳೆಯ ಉಳಿದೆಲ್ಲವೂ ಇಲ್ಲದಾಗುತ್ತದೆ. ಗುಳ್ಳೆಯಲ್ಲಿದ್ದ ಗಾಳಿಯು ಸುತ್ತಲಿನ ಗಾಳಿಯೊಂದಿಗೆ ವಿಲೀನಗೊಳ್ಳುತ್ತದೆ.
ಜೀವವು ನಿಮ್ಮೊಳಗೆ ಮಾತ್ರವಲ್ಲ, ಅದು ನಿಮ್ಮ ಹೊರಗಡೆಯೂ ಇದೆ. ಅದಕ್ಕಾಗಿಯೇ ನೀವು ಉಸಿರನ್ನು ಒಳಗೆ ಎಳೆದುಕೊಳ್ಳುತ್ತಿದ್ದೀರಿ ಮತ್ತು ಹೊರಗೆ ಬಿಡುತ್ತಿದ್ದೀರಿ. ಅದು ಇಲ್ಲದೆ ನೀವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ನೀವು ಅದನ್ನು ಆಮ್ಲಜನಕ ಅಥವಾ ಬೇರೆ ಏನೆಂದಾದರೂ ಕರೆಯಬಹುದು, ಆದರೆ ಅದು ಅಪ್ರಸ್ತುತ. ಮೂಲಭೂತವಾಗಿ, ನೀವು ಜೀವ ಎಂದು ಕರೆಯುವುದು ಸರ್ವವ್ಯಾಪಿಯಾಗಿದೆ. ಅದು ಯಾವ ರೀತಿಯ ಮಾಹಿತಿಯೊಂದಿಗೆ ಸಿಕ್ಕಿಹಾಕಿಕೊಳ್ಳುತ್ತದೆಯೋ ಅದರಂತೆ ವರ್ತಿಸುತ್ತದೆ. ಅದನ್ನೇ ನಾವು ಕರ್ಮ ಎಂದು ಕರೆಯುತ್ತೇವೆ. ಕರ್ಮ ಎನ್ನುವುದು ಒಂದು ಸಾಫ್ಟ್‌ವೇರ್ ಇದ್ದಂತೆ. ಇದು ಒಂದೇ ಜೀವ ಶಕ್ತಿಯಾಗಿದೆ, ಆದರೆ ವಿಭಿನ್ನ ಸಾಫ್ಟ್‌ವೇರ್‌ನೊಂದಿಗೆ ಇದೆ. ಆದ್ದರಿಂದ, ಇದು ಸಂಪೂರ್ಣವಾಗಿ ವಿಭಿನ್ನವಾಗಿ ವರ್ತಿಸುತ್ತದೆ. ನೀವು ಕರ್ಮದ ಸಾಫ್ಟ್‌ವೇರನ್ನು ಸಂಪೂರ್ಣವಾಗಿ ಕಳಚಿದರೆ, ಜೀವ ಎಲ್ಲಿಗೆ ಹೋಗುತ್ತದೆ? ಎಲ್ಲಿಯೂ ಇಲ್ಲ - ಅದು ಅಲ್ಲಿಯೇ ಇದೆ. ವೈಯಕ್ತಿಕ ಗುರುತು ಮಾತ್ರ ಕಳೆದುಹೋಗುತ್ತದೆ. ವಾಸ್ತವವಾಗಿ, ನಿಮ್ಮೊಳಗಿನ ಜೀವವು ಎಂದಿಗೂ ವೈಯಕ್ತಿಕ ಗುರುತನ್ನು ಹೊಂದಿಲ್ಲ. ವೈಯಕ್ತಿಕವಾದುದು ನಿಮ್ಮ ಸಾಫ್ಟ್‌ವೇರ್ ಮಾತ್ರ. ನೀವು ಅದನ್ನು ಅರಿವಿಲ್ಲದೆ ಬರೆದರೆ, ಅದು ಎಲ್ಲಾ ರೀತಿಯ ರೂಪಗಳನ್ನು ಪಡೆದುಕೊಳ್ಳುತ್ತದೆ - ಕೆಲವು ನಿಮಗೆ ಇಷ್ಟವಾಗಬಹುದು, ಇತರವು ನಿಮಗೆ ಇಷ್ಟವಾಗದಿರಬಹುದು. ನೀವು ಕರ್ಮದ ಸಾಫ್ಟ್‌ವೇರನ್ನು ಪ್ರಜ್ಞಾಪೂರ್ವಕವಾಗಿ ಬರೆದರೆ, ನಿಮಗೆ ಬೇಕಾದುದನ್ನು ನೀವು ರೂಪಿಸುತ್ತೀರಿ.