ಪ್ರಶ್ನೆ: ಸದ್ಗುರುಗಳೇ, ನಾನು ಕಾರ್ಯ ಅಥವಾ ಕರ್ಮ ಯೋಗವನ್ನು ಮೀರಿ ಹೇಗೆ ಹೋಗಬಹುದು? ವೈಯಕ್ತಿಕವಾಗಿ, ನನಗೆ ಏನನ್ನೂ ಮಾಡುವ ಇಚ್ಛೆ ಇಲ್ಲ. ನನಗೆ ನಾನು ನಿಷ್ಕ್ರಿಯತೆಯ ಸ್ಥಿತಿಯ ಕಡೆಗೆ ಸಾಗುತ್ತಿರುವಂತೆ ಅನಿಸುತ್ತಿದೆ.

ಸದ್ಗುರು: ಒಬ್ಬರು ತಮ್ಮ ಜೀವನದಲ್ಲಿ ಪರಮ ಸತ್ಯವನ್ನು ಗುರಿಯನ್ನಾಗಿ ಮಾಡಿಕೊಂಡಾಗ, ಕಾರ್ಯವು ಅರ್ಥಹೀನವಾಗುತ್ತದೆ. ಒಮ್ಮೆ ಕಾರ್ಯವು ಅರ್ಥಹೀನವಾದಾಗ, ಯಾವುದೇ ರೀತಿಯ `ಸ್ವಯಂ ನಿರ್ಮಿತ ವ್ಯಕ್ತಿತ್ವ’ವು ದೊಡ್ಡ ಮಹತ್ವವನ್ನು ಹೊಂದಿರುವುದಿಲ್ಲ; ಆದರೆ ಈಗ, ನೀವು ಇರುವ ಸ್ಥಿತಿಯಲ್ಲಿ, ಇನ್ನೂ ಕಾರ್ಯದ ಅವಶ್ಯಕತೆ ಇದೆ. ನೀವು ಇನ್ನೂ ಕಾರ್ಯವನ್ನು ಮೀರಿದ ಹಂತವನ್ನು ತಲುಪಿಲ್ಲ. ನೀವು ಕಾರ್ಯವಿಲ್ಲದೆ ಇರಲು ಅಸಮರ್ಥರಾಗಿದ್ದೀರಿ. ಆದ್ದರಿಂದ, ಈಗ ನೀವು ಉತ್ತಮ ಎಂದು ಭಾವಿಸುವ ಕಾರ್ಯವನ್ನು, ಮತ್ತು ಪರಿಸ್ಥಿತಿಗೆ ಅಗತ್ಯವಿರುವುದನ್ನು ಮಾಡಬೇಕು.

ಯಾರಿಗೆ ನಿಜವಾದ, ತೀವ್ರತರವಾದ ಕಾರ್ಯದಲ್ಲಿ ತೊಡಗುವುದು ಗೊತ್ತಿಲ್ಲವೋ ಅವರು ಎಂದಿಗೂ ಕಾರ್ಯರಹಿತ ಸ್ಥಿತಿಗೆ ಹೋಗಲಾರರು. ನೀವು ಪ್ರಯತ್ನಿಸಿ ನೋಡಿದರೆ, ಕಾರ್ಯರಹಿತ ಸ್ಥಿತಿ ಕೇವಲ ಜಡತೆಯಾಗುತ್ತದೆ. ಜೀವನ ಪೂರ್ತಿ ವಿಶ್ರಮಿಸುತ್ತ ಕಳೆದವರು, ವಿಶ್ರಾಂತಿಯ ತಜ್ಞರಾಗಿರಬೇಕು, ಆದರೆ ಅದು ನಿಜವಲ್ಲ. ಬೆಂಕಿಯ ತೀವ್ರ ಶಾಖವನ್ನು ಅರಿಯದವರು ನೀರಿನ ತಂಪನ್ನು ತಿಳಿಯರು. ಅರ್ಧಹೃದಯದಿಂದ, ಜಡವಾಗಿ ತಮ್ಮ ಜೀವನವನ್ನು ಬದುಕಿದವರಿಗೆ, ಅದರ ವಿರುದ್ಧ ರೀತಿಯನ್ನು ಎಂದಿಗೂ ತಿಳಿಯಲಾಗುವುದಿಲ್ಲ. ಆದ್ದರಿಂದ ತೀವ್ರ ಚಟುವಟಿಕೆ, ಕೊನೆಪಕ್ಷ ಸ್ವಲ್ಪ ಸಮಯದವರೆಗಾದರೂ, ನಿಮ್ಮ ಶಕ್ತಿ ಚಲನಶೀಲತೆ ಪಡೆದು ಚಲಿಸುವವರೆಗೆ-ನಡೆಸುವುದು ಉಪಯುಕ್ತ. ಆಗ, ಅದನ್ನು ಇನ್ನೊಂದು ರೂಪಕ್ಕೆ ಪರಿವರ್ತಿಸುವುದು ತುಂಬಾ ಸುಲಭ. ಕರ್ಮ ಅಥವಾ ಕಾರ್ಯದ ಉದ್ದೇಶವೇ ಅದು. ಸಾಧಕರು ಈ ಕಾರಣಕ್ಕಾಗಿ ಚಟುವಟಿಕೆಯನ್ನು ಆಯ್ದುಕೊಳ್ಳುತ್ತಾರೆ. ನಾವು ಹೇಗೂ ಚಟುವಟಿಕೆಯಲ್ಲಿ ತೊಡಗುತ್ತೇವೆ. ಆದರೆ ನಮಗಿರುವ ಆಯ್ಕೆಯೆಂದರೆ - ಅಡಾಲ್ಫ್ ಹಿಟ್ಲರ್ ನಂತೆ ಅಥವಾ ಮಹಾತ್ಮ ಗಾಂಧಿಯವರಂತೆ ಕಾರ್ಯ ಮಾಡುವುದು. ಹೇಗೂ ಚಟುವಟಿಕೆಯಲ್ಲಿ ತೊಡಗುತ್ತೇವೆ, ಆದ್ದರಿಂದ ಅದನ್ನು ಹೃತ್ಪೂರ್ವಕವಾಗಿ ಮಾಡೋಣ ಮತ್ತು ಸೂಕ್ತವಾದ ಆಯ್ಕೆ ಮಾಡಿಕೊಳ್ಳೋಣ.

ಯಜಮಾನಿಕೆ ಅಥವಾ ಸೇವಾ ಮನೋಭಾವ - ನಿಮ್ಮ ಆಯ್ಕೆ ಏನು?

ನೀವು ಜಗತ್ತನ್ನು ಆಳಲು ಬಯಸುತ್ತೀರಾ ಅಥವಾ ಸೇವೆ ಮಾಡಲು ಬಯಸುತ್ತೀರಾ? ಅಂತಿಮವಾಗಿ, ಅದೇ ಆಯ್ಕೆ. ಸಾಮಾನ್ಯವಾಗಿ, ಎಲ್ಲರೂ ಜಗತ್ತನ್ನು ಆಳಲು ಬಯಸುತ್ತಾರೆ. ಆದರೆ, ಬಹುತೇಕ ಜನರು ಅರೆಮನಸ್ಕರಾಗಿದ್ದಾರೆ, ಅವರಿಗೆ ಕೇವಲ ತಮ್ಮ ಕುಟುಂಬವನ್ನಷ್ಟೇ ಆಳಲು ಸಾಧ್ಯವಾಗುತ್ತಿದೆ! ಆದರೆ ಅವರು ನಿಜಕ್ಕೂ ಬಯಸಿರುವುದು ಜಗತ್ತನ್ನು ಆಳಲು. ಅವರಲ್ಲಿ ಸಾಮರ್ಥ್ಯ ಅಥವಾ ತೀವ್ರತೆ ಇಲ್ಲ. ಇಲ್ಲದಿದ್ದರೆ ಅವರೊಬ್ಬ ಹಿಟ್ಲರ್ ಆಗುವ ಸಂಭವ ಇತ್ತು.

ಆದ್ದರಿಂದ, ಆಳುವ ಅಥವಾ ಸೇವೆ ಮಾಡುವ ಆಯ್ಕೆಯಿದೆ. ನಿಮಗೆ ಅತ್ಯಂತ ಸಾಮರಸ್ಯವೆನಿಸುವ ಮತ್ತು ದಿವ್ಯತೆ ಹಾಗೂ ಸಾಕ್ಷಾತ್ಕಾರಕ್ಕೆ ಹತ್ತಿರವಾಗಿರುವಂತಹ ಯಾವುದೇ ರೀತಿಯ ಕಾರ್ಯವನ್ನು ಆರಿಸಿಕೊಳ್ಳಿ. ಪ್ರತಿ ಕ್ಷಣ, ಅದನ್ನು ಅಪಾರ ತೀವ್ರತೆಯಿಂದ, ಒಂದು ಕ್ಷಣವೂ ವಿರಾಮ ಕೊಡದೆ ಮಾಡಿ. ಸ್ವಲ್ಪ ಸಮಯದ ನಂತರ ಇನ್ನು ಏನನ್ನೂ ಮಾಡುವ ಅಗತ್ಯವಿರದಂತಹ ಸಮಯ ಬರುವುದು, ಆಗ. ಈ “ಕ್ರಿಯೆರಹಿತ" ವಿಷಯವನ್ನು ನಿಜವಾಗಿ ಅರಿಯಬೇಕೆಂದಿದ್ದರೆ, ಮೊದಲು ನೀವು ಕೆಲಸ ಮಾಡುವುದೆಂದರೇನು ಎಂಬುದನ್ನು ಕಂಡುಕೊಳ್ಳಬೇಕು. ನೀವು ಇನ್ನೂ ಅದನ್ನು ಮಾಡಿಲ್ಲ. ಎಚ್ಚರವಿರುವ ಪ್ರತಿ ಕ್ಷಣ ಮತ್ತು ನನ್ನ ನಿದ್ರೆಯಲ್ಲಿ ಸಹ, ನಿರಂತರವಾಗಿ ಭೌತಿಕ ಮತ್ತು ಮಾನಸಿಕವಾಗಿ ನನ್ನನ್ನು ನಾನು ಅರ್ಪಿಸುವ ಕಾರ್ಯವನ್ನು ಮಾಡುತ್ತಾ ಇರುತ್ತೇನೆ. ಈ ಕಾರಣದಿಂದಲೇ ಇವೆಲ್ಲವೂ ನನ್ನ ಜೀವನದಲ್ಲಿ ಸಂಭವಿಸಿದೆ. ಇದು ಅಷ್ಟೊಂದು ಶಕ್ತಿಯುತವಾಗಿರಲು ಕಾರಣ ನನ್ನ ಮಟ್ಟಿಗೆ ಇದಕ್ಕೆ ಯಾವ ಅರ್ಥವೂ ಇಲ್ಲ, ಆದರೆ ನಾನು ಇಪ್ಪತ್ನಾಲ್ಕು ಗಂಟೆಯೂ ಅದರಲ್ಲಿ ತೊಡಗಿರುತ್ತೇನೆ. ಇದಕ್ಕೆ ಒಂದು ಭಿನ್ನ ಬಗೆಯ ಶಕ್ತಿ ಇದೆ. ತ್ಯಾಗದ ಸಂಪೂರ್ಣ ಅರ್ಥ ಅದೇ. ಅದರಿಂದಲೇ ಒಳಗಿನಲ್ಲಿ ಮತ್ತು ಹೊರಗಿನಲ್ಲಿ - ಅದನ್ನು ಶಬ್ದಗಳಲ್ಲಿ ಹೇಳಲಾಗದಂತಹ ಇನ್ನೇನೊ ಒಂದು ಸಂಭವಿಸುತ್ತದೆ.

ನಿಜವಾದ, ತೀವ್ರತರ ಕಾರ್ಯವನ್ನು ಅರಿಯದ ವ್ಯಕ್ತಿ, ಎಂದಿಗೂ ಕ್ರಿಯಾರಹಿತ ಸ್ಥಿತಿಗೆ ತಲುಪಲಾರರು. ನೀವು ಪ್ರಯತ್ನಿಸಿದರೆ, ಅದು ಕ್ರಿಯಾರಹಿತವಾಗದೆ ಕೇವಲ ಆಲಸ್ಯವಾಗಿಬಿಡುತ್ತದೆ.

ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಶಕ್ತಿಶಾಲಿ ವ್ಯಕ್ತಿಯು ಹೀಗೆಯೇ ನಿರ್ಮಾಣಗೊಳ್ಳುವುದು. ನಿಜವಾಗಿ ಶಕ್ತಿಶಾಲಿ ಮಾನವರನ್ನು ನಿರ್ಮಿಸುವ ವಿಜ್ಞಾನ ಇದಾಗಿದೆ. ಇದು ಆಳಲಿಕ್ಕಿರುವ ಶಕ್ತಿ ಅಲ್ಲ. ಇದನ್ನು ಯಾವುದೇ ಸಮಯದಲ್ಲೂ ಸಹ ಕಳ್ಳತನ ಮಾಡಲಾಗದು. ಏಕೆಂದರೆ ನೀವೆಲ್ಲೇ ಇದ್ದರೂ, ನೀವು ಅದನ್ನೇ ಮಾಡುತ್ತೀರಿ. ನೀವು ಆಳಬೇಕೆಂದಿದ್ದರೆ, ಆಸನದ ಮೇಲೆ ಕೂರಬೇಕು. ಯಾರಾದರೂ ನಿಮ್ಮನ್ನು ಆಸನದಿಂದ ಎಳೆದರೆ, ನೀವು ದುಃಖಪಡುತ್ತೀರಿ. ಇದು ಹಾಗಲ್ಲ. ನಿಮ್ಮನ್ನು ಎಲ್ಲೇ ಇರಿಸಲಿ – ಸ್ವರ್ಗ ಅಥವಾ ನರಕ – ಕೇವಲ ನಿಮ್ಮ ಕೆಲಸ ಮಾಡಿ. ಇದು ನಿಮ್ಮನ್ನು ಕ್ರಿಯೆಯ ಫಲಿತಾಂಶಗಳಿಂದ ಮುಕ್ತಗೊಳಿಸುತ್ತದೆ. ಒಮ್ಮೆ ನೀವು ಕ್ರಿಯೆಯ ಫಲಿತಾಂಶಗಳಿಂದ ಮುಕ್ತಗೊಂಡರೆ, ಕ್ರಿಯೆ ತಾನಾಗಿಯೇ ನಡೆಯುತ್ತದೆ. ನೀವು ಕ್ರಿಯೆಯಿಂದ ಮುಕ್ತಗೊಳ್ಳಲು ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗಿಲ್ಲ. ಅದು ತಾನಾಗಿಯೇ ಕರಗಿ, ಮರೆಯಾಗುತ್ತದೆ. ಒಮ್ಮೆ ನಿಮ್ಮ ಜೀವನದಲ್ಲಿ ಫಲಾಪೇಕ್ಷೆ ಸಂಪೂರ್ಣ ಇಲ್ಲವಾದಾಗ ಕ್ರಿಯೆ ತಾನಾಗಿಯೇ ನಡೆಯುತ್ತದೆ. ನೀವು ಇದಕ್ಕಾಗಿ ಏನನ್ನೂ ಮಾಡಬೇಕಿಲ್ಲ.

"ಕೆಲಸವಿಲ್ಲದೆ ಆಹಾರವಿಲ್ಲ"

ಒಂದು ಝೆನ್ ಮಠದಲ್ಲಿ, ಎಂಬತ್ತು ವರ್ಷವನ್ನು ದಾಟಿದ ಒಬ್ಬ ಹಿರಿಯ ಗುರುಗಳಿದ್ದರು. ಪ್ರತಿದಿನ ಅವರು ತೋಟಗಳಲ್ಲಿ ಅತ್ಯಂತ ಹೃದಯಪೂರ್ವಕವಾಗಿ ಕೆಲಸ ಮಾಡುತ್ತಿದ್ದರು. ಝೆನ್ ಮಠಗಳಲ್ಲಿ, ತೋಟಗಾರಿಕೆಯು ಸಾಧನೆಯ ಅತ್ಯಂತ ಮಹತ್ವಪೂರ್ಣ ಭಾಗಗಳಲ್ಲೊಂದಾಗಿದೆ. ಹಗಲಿರುಳು ಜನರು ತೋಟದಲ್ಲಿ ಸಮಯ ಕಳೆಯುತ್ತಾರೆ. ಈ ಗುರುಗಳು ಅದನ್ನು ಬಹಳ ವರ್ಷಗಳಿಂದ ಮಾಡುತ್ತಾ ಬಂದಿದ್ದರು. ಈಗ ಅವರು ಎಂಬತ್ತು ವರ್ಷ ವಯಸ್ಸು ದಾಟಿದ್ದರು, ಬಲಹೀನರಾಗಿದ್ದರೂ ಸಹ, ಅವರು ನಿಲ್ಲಿಸಲಿಲ್ಲ. ಇಡೀ ದಿನ, ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಶಿಷ್ಯರು ಅನೇಕ ಬಾರಿ ತಡೆಯುತ್ತಿದ್ದರು, "ಕೆಲಸ ಮಾಡುವುದನ್ನು ನಿಲ್ಲಿಸಿ, ಇಲ್ಲಿ ನಾವೆಲ್ಲರೂ ಇದ್ದೇವೆ, ನಾವು ಮಾಡುತ್ತೇವೆ", ಎಂದು. ಆದರೆ ಅವರು ತಮ್ಮಿಂದ ಸಾಧ್ಯವಾದದ್ದನ್ನು ಮಾಡುತ್ತಲೇ ಇದ್ದರು. ಅವರ ಶಾರೀರಿಕ ಸಾಮರ್ಥ್ಯ ಕಡಿಮೆಯಾಗಿದ್ದರೂ, ಅವರ ತೀವ್ರತೆ ಮಾತ್ರ ಕಡಿಮೆಯಾಗಲಿಲ್ಲ.

ನೀವು ಓಡಿ ಹೋಗಿ ಪರ್ವತದಲ್ಲಿ ಕುಳಿತರೆ, ನೀವು ಮುಕ್ತರಾಗುವುದಿಲ್ಲ, ಅದಕ್ಕಾಗಿ ಪರಿಶ್ರಮ ಪಡಬೇಕು. ಅದಕ್ಕೆ ಇದೇ ದಾರಿ.

ಒಂದು ದಿನ ಶಿಷ್ಯರು ಅವರ ಉಪಕರಣಗಳನ್ನು ತೆಗೆದುಕೊಂಡು ಹೋಗಿ ಎಲ್ಲೋ ಅಡಗಿಸಿಟ್ಟರು, ಏಕೆಂದರೆ ಅವರು ಈ ಉಪಕರಣಗಳಿಂದ ಮಾತ್ರ ಕೆಲಸ ಮಾಡುತ್ತಿದ್ದರು. ಆ ದಿನ ಅವರು ಊಟ ಮಾಡಲಿಲ್ಲ. ಮರುದಿನವೂ ಉಪಕರಣಗಳು ಇರಲಿಲ್ಲ, ಆದ್ದರಿಂದ ಅವರು ಊಟ ಮಾಡಲಿಲ್ಲ. ಮೂರನೆಯ ದಿನವೂ ಉಪಕರಣಗಳಿಲ್ಲ; ಅಂದೂ ಅವರು ಊಟ ಮಾಡಲಿಲ್ಲ. ಆಗ ಶಿಷ್ಯರಿಗೆ ಭಯವಾಯಿತು, "ಅಯ್ಯೋ! ನಾವು ಉಪಕರಣಗಳನ್ನು ಅಡಗಿಸಿದ್ದರಿಂದ ಅವರು ಕೋಪಗೊಂಡಿದ್ದಾರೆ. ಅವರು ಊಟ ಮಾಡುತ್ತಿಲ್ಲ" ಎಂದು. ಮತ್ತೆ ಅವರು ಉಪಕರಣಗಳನ್ನು ಸಾಮಾನ್ಯವಾಗಿ ಇಡುವ ಸ್ಥಳದಲ್ಲಿ ಇಟ್ಟರು. ನಾಲ್ಕನೆಯ ದಿನ ಗುರುಗಳು ಕೆಲಸ ಮಾಡಿದರು ಮತ್ತು ಊಟ ಮಾಡಿದರು. ನಂತರ ಸಂಜೆ ಅವರು "ಕೆಲಸವಿಲ್ಲದೆ ಆಹಾರವಿಲ್ಲ," ಎಂದು ತಮ್ಮ ಉಪದೇಶವನ್ನು ನೀಡಿದರು. ಮತ್ತು ಅಲ್ಲಿಂದ ಹಿಂತಿರುಗಿ ಮರಣಹೊಂದಿದರು. ಅದು ಅವರ ಕೊನೆಯ ದಿನವಾಗಿತ್ತು. ನಾಲ್ಕು ದಿನಗಳ ಉಪವಾಸವು ಅವರಿಗೆ ತುಂಬಾ ಹೆಚ್ಚಾಗಿತ್ತು; ಆದರೆ ಕೊನೆಯ ದಿನ ಅವರು ಕೆಲಸ ಮಾಡಿದರು, ಊಟ ಮಾಡಿದರು, ನಂತರ ಅವರು ತಮ್ಮ ದೇಹವನ್ನು ತ್ಯಜಿಸಿದರು, ಮತ್ತು "ಕೆಲಸವಿಲ್ಲದೆ ಆಹಾರವಿಲ್ಲ” ಎಂಬ ಈ ಉಪದೇಶವನ್ನು ಮಾತ್ರ ನೀಡಿದರು. ಈ ರೀತಿಯ ವ್ಯಕ್ತಿಗೆ ಕಾರ್ಯವು ಹೀಗಿರುತ್ತದೆ. ನರಕ, ಸ್ವರ್ಗ ಅಥವಾ ಭೂಮಿ, ಎಲ್ಲೇ ಇರಿಸಿದರೂ ಅವರು ಒಂದೇ ರೀತಿ ಇರುತ್ತಾರೆ. ನೀವು ಈ ರೀತಿ ಆದಾಗ, ನೀವು ಬಾಹ್ಯ ಸನ್ನಿವೇಶದಿಂದ ಮುಕ್ತರಾಗುತ್ತೀರಿ.

ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದರಿಂದ ನೀವು ಮುಕ್ತರಾಗಲಾರಿರಿ. ಕಣ್ಣು ತೆರೆದ ಕೂಡಲೆ ಎಲ್ಲವೂ ಮರಳಿ ಬರುತ್ತದೆ, ಮತ್ತು ನೀವದರಲ್ಲಿ ಸಿಕ್ಕಿಕೊಳ್ಳುತ್ತೀರಿ. ನೀವು ಓಡಿ ಹೋಗಿ ಪರ್ವತದಲ್ಲಿ ಕುಳಿತರೆ, ನೀವು ಮುಕ್ತರಾಗುವುದಿಲ್ಲ, ಅದಕ್ಕಾಗಿ ಪರಿಶ್ರಮ ಪಡಬೇಕು. ಅದಕ್ಕೆ ಇದೇ ದಾರಿ.

Editor’s Note: Excerpted from Mystic’s Musings. Not for the faint-hearted, this book deftly guides us with answers about reality that transcend our fears, angers, hopes, and struggles. Sadhguru keeps us teetering on the edge of logic and captivates us with his answers to questions relating to life, death, rebirth, suffering, karma, and the journey of the Self. Download the sample pdf or purchase the ebook.