நதிகளும் மண் வளமும் காக்கப்பட வேண்டிய அவசியம்!

ದೇಶಾದ್ಯಂತದ "ರ‍್ಯಾಲೀ ಫಾರ್ ರಿವರ್ಸ್" ಅಭಿಯಾನದ ಕೊನೆಯಲ್ಲಿ, ಭಾರತದ ನದಿಗಳ ಪುನರುಜ್ಜೀವನ ಕರಡು ನೀತಿ ಶಿಫಾರಸನ್ನು ಅಕ್ಟೋಬರ್ 3, 2017 ರಂದು ಸರ್ಕಾರಕ್ಕೆ ನೀಡಲಾಯಿತು. ಈ ಬಹುಮುಖಿ ವಿಧಾನವು ಭಾರತದ ನದಿಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ಪರಿಶೋಧಿಸಲು ನಿಮಗೆ ನಾವು ಪ್ರಸ್ತಾವನೆಯ ಆಯ್ದ ತುಣುಕುಗಳನ್ನು ಇಲ್ಲಿ ಒದಗಿಸಿದ್ದೇವೆ. ಭಾಗ 1-ರಲ್ಲಿ, ನಮ್ಮ ನದಿಗಳನ್ನು ರಾಷ್ಟ್ರೀಯ ಸಂಪತ್ತಾಗಿ ಪರಿಗಣಿಸಬೇಕು ಎಂಬ ಮನವಿಯೊಂದಿಗೆ ಸದ್ಗುರುಗಳು ನೀತಿ ಶಿಫಾರಸಿಗೆ ಮುನ್ನುಡಿ ಬರೆಯುತ್ತಾರೆ.

ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6 | ಭಾಗ 7

ಸದ್ಗುರು: ಬಾಲ್ಯದಿಂದಲೇ ಪರ್ವತಗಳು, ಕಾಡುಗಳು ಮತ್ತು ನದಿಗಳೊಂದಿಗಿನ ನನ್ನ ಒಡನಾಟ ಗಾಢವಾಗಿತ್ತು - ಪ್ರಕೃತಿ ಮತ್ತದರ ಸಂಪನ್ಮೂಲಗಳನ್ನು ಆನಂದಿಸುವ ದೃಷ್ಟಿಯಿಂದ ಮಾತ್ರವಲ್ಲ, ನಾನು ಅವುಗಳನ್ನು ನನ್ನ ಅವಿಭಾಜ್ಯ ಅಂಗವಾಗಿ ಅನುಭವಿಸುತ್ತಿದ್ದೆ. ನಾಲ್ಕು ಟ್ರಕ್ ಟ್ಯೂಬ್‌ಗಳು ಮತ್ತು ಬಿದಿರಿನ ಕೋಲುಗಳನ್ನು ಒಟ್ಟಿಗೆ ಕಟ್ಟಿ, ನಾನೊಬ್ಬನೇ 13 ದಿನಗಳ ಕಾಲ ಕಾವೇರಿ ನದಿಯಲ್ಲಿ ಸಂಚರಿಸಿದ್ದೇನೆ. ನದಿಯನ್ನು ನಾನು ನನಗಿಂತ ಮಹತ್ತಾದ ಜೀವವಾಗಿ ನೋಡಿದೆ. ನಿಮ್ಮಂತಹವರು ಮತ್ತು ನನ್ನಂತಹವರು ಬಂದು ಹೋಗುತ್ತಾರೆ, ಆದರೆ ನದಿ ಲಕ್ಷಾಂತರ ವರ್ಷಗಳಿಂದ ಹರಿಯುತ್ತಿದೆ ಮತ್ತು ನೀವು ಕಲ್ಪಿಸಿಕೊಳ್ಳಲಾಗದ ಪ್ರಮಾಣದಲ್ಲಿ ಜೀವವನ್ನು ಪೋಷಿಸುತ್ತಾ ಬಂದಿದೆ. ನನ್ನ ಪ್ರಕಾರ ನದಿ ಒಂದು ಸಂಪನ್ಮೂಲವಲ್ಲ; ಅದು ಅಗಾಧವಾದ ಜೀವ. ನಮ್ಮ ಅಸ್ತಿತ್ವದ ಸ್ವರೂಪ ಹೇಗಿದೆಯೆಂದರೆ, ನಮ್ಮ ದೇಹದ ಮುಕ್ಕಾಲು ಭಾಗ ನೀರು. ಆದ್ದರಿಂದ ನೀರು ಒಂದು ಸರಕಲ್ಲ - ನೀರು ಜೀವಸೆಲೆ. ಅದು ಈ ದೇಹದಲ್ಲಿದ್ದಾಗ, ನಮಗೆ ಅದರ ಬಗ್ಗೆ ಎಷ್ಟು ಆಸಕ್ತಿಯಿದೆ! ಆದರೆ ಅದು ಹೊರಗೆ ನದಿಯಾಗಿ ಹರಿಯುವಾಗ, ನಾವದನ್ನು ಏಕೆ ವಿಭಿನ್ನವಾಗಿ ಪರಿಗಣಿಸುತ್ತಿದ್ದೇವೆ?

ಕಳೆದ 25 ವರ್ಷಗಳಲ್ಲಿ ದೇಶಾದ್ಯಂತ ನಾನು ನದಿಗಳ ಹರಿವು ಕ್ರಮೇಣ ಕ್ಷೀಣಿಸುತ್ತಿರುವುದನ್ನು ಆತಂಕದಿಂದ ನೋಡುತ್ತಿದ್ದೇನೆ.

ಕಳೆದ 25 ವರ್ಷಗಳಲ್ಲಿ ದೇಶಾದ್ಯಂತ ನದಿಗಳ ಹರಿವು ಕ್ರಮೇಣ ಕ್ಷೀಣಿಸುತ್ತಿರುವುದನ್ನು ನಾನು ಆತಂಕದಿಂದ ನೋಡುತ್ತಿದ್ದೇನೆ. ಒಂದು ವರ್ಷ ಹೆಚ್ಚಿನ ಹರಿವು, ಇನ್ನೊಂದು ವರ್ಷ ಕಡಿಮೆ ಹರಿವು ಎನ್ನುವಂತಿಲ್ಲ, ನದಿ ನೀರಿನ ಹರಿವು ಏಕಪ್ರಕಾರವಾಗಿ ಕ್ರಮೇಣ ಕ್ಷೀಣಿಸುತ್ತಿದೆ. 2016-ರಲ್ಲಿ ಈ ಕ್ಷೀಣಿಸುವಿಕೆ ತೀವ್ರವಾಗಿ ಹೆಚ್ಚಾಗಿದೆ. ನಮ್ಮ ಜೀವಿತಾವಧಿಯಲ್ಲಿ ನದಿಗಳು ಈ ರೀತಿ ಬರಿದಾಗುತ್ತಿದ್ದರೆ, ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಮತ್ತು ಮುಂದಿನ ಪೀಳಿಗೆಗಳ ಹಿತದ ಬಗ್ಗೆ ನಮಗೆ ಆಸಕ್ತಿಯಿಲ್ಲವೆಂದು ನಾವು ಸ್ಪಷ್ಟವಾದ ಹೇಳಿಕೆ ನೀಡುತ್ತಿದ್ದೇವೆ.

ನಾನು ವಿಜ್ಞಾನಿಯಲ್ಲ ಮತ್ತು ಇದನ್ನು ನಿರೂಪಿಸಲು ಸೂಕ್ತವಾದ ವಿಜ್ಞಾನ ಅಥವಾ ಪದಗಳು ನನಗೆ ತಿಳಿದಿಲ್ಲ. ಆದರೆ ನಾನು ಗಮನಿಸಿದ ಹಾಗೆ, ಸಾಕಷ್ಟು ಗಿಡಮರಗಳು ಇಲ್ಲದಿರುವುದು ಮತ್ತು ಅತಿಯಾದ ಅಂತರ್ಜಲ ಬಳಕೆ ಒಟ್ಟಾಗಿ ನಮ್ಮ ನದಿಗಳನ್ನು ಅಳಿವಿನಂಚಿಗೆ ತಳ್ಳಿದೆ ಎಂದು ನನಗೆ ಕಾಣುತ್ತದೆ. ಸಾಕಷ್ಟು ವೃಕ್ಷಸಮೂಹ ಇಲ್ಲದಿರುವಾಗ, ವಿಶೇಷವಾಗಿ ಉಷ್ಣವಲಯದ ವಾತಾವರಣದಲ್ಲಿ, ಮಣ್ಣು ಮರಳಾಗಿ ಪರಿವರ್ತಿತವಾಗುತ್ತದೆ. ಮಣ್ಣು ಮತ್ತು ನದಿಗಳ ನಡುವೆ ಆಳವಾದ ಸಂಪರ್ಕವಿದೆ. ನಾವು ನಮ್ಮ ಮಣ್ಣನ್ನು ಬರಡಾಗಿಸಿದರೆ, ನಮ್ಮ ನದಿಗಳನ್ನೂ ನಾವು ಬರಿದಾಗಿಸುತ್ತೇವೆ. ಇಂದು ಇದೇ ಆಗಿರುವುದು - ನಮ್ಮ ಜಲಮೂಲಗಳು ಕ್ಷೀಣಿಸಿವೆ ಮತ್ತು ನಮ್ಮ ಮಣ್ಣು ಸವೆತಕ್ಕೊಳಗಾಗಿದೆ.

ಈ ದೇಶದ ಅತಿದೊಡ್ಡ ಸಾಧನೆಯೆಂದರೆ, ನಮ್ಮ ರೈತರು, ಹೆಚ್ಚಿನ ಮೂಲಸೌಕರ್ಯಗಳಿಲ್ಲದೆ, ಯಾವುದೇ ವಿಜ್ಞಾನವಿಲ್ಲದೆ, ಕೇವಲ ಸಾಂಪ್ರದಾಯಿಕ ಜ್ಞಾನದಿಂದಷ್ಟೆ ಈ ರಾಷ್ಟ್ರದ 1.3 ಶತಕೋಟಿ ಜನರಿಗೆ ಆಹಾರವನ್ನು ಒದಗಿಸಿದ್ದಾರೆ. ಆದರೆ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗುತ್ತಿರುವುದು ಮತ್ತು ನೀರಿನ ಕೊರತೆಯು ನಮ್ಮ ರೈತರನ್ನು ಪರಿಹಾರವೇ ಇಲ್ಲದಂತಹ ಇಕ್ಕಟ್ಟಿಗೆ ಸಿಲುಕಿಸಿದೆ; ಆತ್ಮಹತ್ಯೆಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಫಲವತ್ತಾಗಿರದ ಮತ್ತು ಸಾಕಷ್ಟು ನೀರಿಲ್ಲದ ಭೂಮಿಯಲ್ಲಿ ಬೆಳೆ ಬೆಳೆಯಲು ನಿಮ್ಮನ್ನು ಅಥವಾ ನನ್ನನ್ನು ಕೇಳಿದರೆ, ನಾವೂ ಸಹ ಅದನ್ನೇ ಮಾಡುತ್ತಿದ್ದೆವು. ನಮಗೆ ಆಹಾರ ಒದಗಿಸಿ ನಮ್ಮನ್ನು ಪೋಷಿಸುವ ಆ ರೈತನಿಗೇ ಸಾಕಷ್ಟು ಪೋಷಣೆ ಸಿಗುತ್ತಿಲ್ಲ; ಅವನ ಮಕ್ಕಳು ಹಸಿವಿನಿಂದ ಕಂಗೆಟ್ಟಿದ್ದಾರೆ. ನಮ್ಮ ಅನ್ನದಾತನು ತನ್ನ ಜೀವ ತೆಗೆದುಕೊಳ್ಳುವಂತಹ ಸ್ಥಿತಿಗೆ ಬರುವಷ್ಟು ಹಸಿದಿದ್ದಾನೆ ಎಂದು ನಮಗೆ ತಿಳಿದಿರುವಾಗ ನಾವು ತಲೆ ಎತ್ತಿ ನಡೆಯುವುದಾದರೂ ಹೇಗೆ? ಇದು ಬಹಳ ನಾಚಿಕಗೇಡಿನ ಸಂಗತಿ. ನಾವು ಇದಕ್ಕೊಂದು ಪರಿಹಾರ ಕಂಡುಕೊಂಡಿರದ ಕಾರಣ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ. ಇಂದು ದೇಶದ ಜನಸಂಖ್ಯೆಯ ಬಹುಪಾಲು ಕೃಷಿಯಲ್ಲಿ ತೊಡಗಿದೆ.

8,000 ರಿಂದ 12,000 ವರ್ಷಗಳ ಕೃಷಿಯ ಇತಿಹಾಸದಿಂದಾಗಿ ರೈತರಲ್ಲಿ ಅದ್ಭುತವಾದ ಜ್ಞಾನವಿದೆ. ಅವರಲ್ಲಿ ಕೃಷಿಯ ಸಂಸ್ಕಾರವಿದೆ. ಇದು ಕೇವಲ ಕಠಿಣ ಪರಿಶ್ರಮವಲ್ಲ - ಅಲ್ಲೊಂದು ಜ್ಞಾನವಿದೆ; ಆದರೆ ಅದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಇಂದು ಕೇವಲ 15% ಕ್ಕಿಂತ ಕಡಿಮೆ ರೈತರು ತಮ್ಮ ಮಕ್ಕಳು ಕೃಷಿಯಲ್ಲಿ ತೊಡಗಬೇಕೆಂದು ಬಯಸುತ್ತಾರೆ. ನಾವು ಅವರಿಗೆ ತಕ್ಕದಾದ ಪರಿಸ್ಥಿತಿಯನ್ನು ಸೃಷ್ಟಿಸಿದಿದ್ದರೆ, ನಾವು ಈ ಜ್ಞಾನವನ್ನು ಈಗ ಬಳಸದಿದ್ದರೆ, ಅದು ಶಾಶ್ವತವಾಗಿ ಕಳೆದುಹೋಗಬಹುದು. ಮಣ್ಣಿನ ಸುಧಾರಣೆಯಲ್ಲಿ ನಮ್ಮ ರೈತರ ಸಾಂಪ್ರದಾಯಿಕ ಜ್ಞಾನವನ್ನು ಬಳಸುವುದು, ಭೂಮಿಯಲ್ಲಿ ಎಲ್ಲಾ ರೀತಿಯ ಗಿಡಮರಗಳನ್ನು ನೆಡುವ ಮೂಲಕ ನೀರಿನ ಮೂಲವನ್ನು ವೃದ್ಧಿಸುವುದು ಮತ್ತು ಸೂಕ್ತವಾದ ಆಧುನಿಕ ತಂತ್ರಜ್ಞಾನಗಳೊಂದಿಗೆ ನೀರಿನ ಬಳಕೆಯನ್ನು ನಿರ್ವಹಿಸುವುದೇ ನಮ್ಮ ಮುಂದಿನ ಮಾರ್ಗವಾಗಿದೆ.

ನಮ್ಮ ನದಿಗಳು, ಜಲಮೂಲಗಳು ಮತ್ತು ಮಣ್ಣನ್ನು ರಾಷ್ಟ್ರೀಯ ನಿಧಿಯಾಗಿ ಪರಿಗಣಿಸುವ ಕಾನೂನನ್ನು ರೂಪಿಸುವತ್ತ ಸಾಗೋಣ.

ನಾವು ಪ್ರಸ್ತಾಪಿಸುತ್ತಿರುವ ಪರಿಹಾರವಿದು: ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್ ಅಗಲದಷ್ಟು ಭೂಮಿಗೆ, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್ ಅಗಲದಷ್ಟು ಭೂಮಿಗೆ ಹಸಿರು ಹೊದಿಕೆ ಇರಬೇಕು. ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳು ಹೆಚ್ಚಾಗುವಂತೆ ನೆಲ ನೆರಳಿನಲ್ಲಿರಬೇಕು. ಹಾಗಾದಾಗ ಮಾತ್ರ ಮಣ್ಣು ನೀರನ್ನು ಉಳಿಸಿಕೊಂಡು, ನೀರು ನದಿಯನ್ನು ಸೇರಲು ಅನುವು ಮಾಡಿಕೊಡುತ್ತದೆ. ಸರ್ಕಾರಿ ಭೂಮಿಯಲ್ಲಿ, ಮರು ಅರಣ್ಯೀಕರಣ ಅತ್ಯವಶ್ಯಕ. ಖಾಸಗಿ ಭೂಮಿಯಲ್ಲಿ, ರೈತರು ಸಾಮಾನ್ಯ ಬೆಳೆ ಕೃಷಿಯಿಂದ ಮರ ಆಧಾರಿತ ಕೃಷಿಗೆ ಬದಲಾಗಬೇಕು. ಮರ ಆಧಾರಿತ ಕೃಷಿಯು ರೈತರ ಆದಾಯವನ್ನು ಕನಿಷ್ಠ 3 ರಿಂದ 5 ಪಟ್ಟು ಹೆಚ್ಚಿಸಬಹುದಾದ್ದರಿಂದ ಇದು ಭಾರತದ ರೈತರಿಗೆ ಉತ್ತಮ ಆರ್ಥಿಕ ಪ್ರತಿಪಾದನೆಯಾಗಿದೆ.

ಈ ಕರಡು ನೀತಿ ಶಿಫಾರಸು ಪರಿಸರಕ್ಕೆ ಗಮನಾರ್ಹ ಒಳಿತನ್ನು ಮಾಡುವುದರೊಂದಿಗೆ ಪರಿಹಾರವನ್ನು ಆರ್ಥಿಕ ನೀತಿಯನ್ನಾಗಿ ಮಾಡುವ ಪ್ರಯತ್ನವಾಗಿದೆ. ಎಲ್ಲಾ ಪಾಲುದಾರರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು, ವಿವಿಧ ಕ್ಷೇತ್ರಗಳ ಪರಿಣತಿ ಮತ್ತು ಅನುಭವ ಹೊಂದಿರುವ ತಜ್ಞರೊಂದಿಗೆ ನಾವು ನಡೆಸಿದ ಸಮಾಲೋಚನೆಯ ಫಲಿತಾಂಶ ಇದು. ಮೊದಲ ಮತ್ತು ಅಗ್ರಗಣ್ಯ ಪಾಲುದಾರ ನದಿ; ನಂತರ ನದಿಯ ಕಾರಣದಿಂದ ಬದುಕುಳಿಯುವ ಜೀವಿಗಳು; ನಂತರ ರೈತರು; ನಂತರ ಸಮುದಾಯ; ಮತ್ತು ರಾಜ್ಯ ಮತ್ತು ಕೇಂದ್ರಸರ್ಕಾರಗಳು. ಇದನ್ನು ಕಾರ್ಯಗತಗೊಳಿಸಬಹುದಾದ ಮತ್ತು ಜಾರಿಗೊಳಿಸಬಹುದಾದ ನೀತಿಯನ್ನಾಗಿ ಮಾಡುವುದು ಮುಖ್ಯ ಗುರಿಯಾಗಿದೆ. ಹೆಚ್ಚಿನ ಮಾಹಿತಿ ಅಗತ್ಯವಿರುವ ಯಾವುದೇ ಅಂಶಗಳನ್ನು ಸ್ಪಷ್ಟಪಡಿಸಲು ವೈಜ್ಞಾನಿಕ ತಂಡ ಅಥವಾ ನಾನು ಯಾವಾಗಲೂ ಲಭ್ಯವಿರುತ್ತೇವೆ.

ಸಹಸ್ರಮಾನಗಳ ಕಾಲ, ತಲೆಮಾರುಗಳಿಂದ, ನಮ್ಮ ನದಿಗಳು ನಮ್ಮನ್ನು ತಮ್ಮ ಬೆಚ್ಚಗಿನ ಅಪ್ಪುಗೆಯಲ್ಲಿ ಪೋಷಿಸಿವೆ. ಈಗ ನಮ್ಮ ಈ ನದಿಗಳನ್ನು ನಮ್ಮ ಅಪ್ಪುಗೆಯಲ್ಲಿ ಪೋಷಿಸಬೇಕಾದ ಸಮಯ ಬಂದಿದೆ. ನಮ್ಮ ಸಲಹೆಗಳ ಪ್ರಕಾರ ಅಗತ್ಯವಾದ ಶಾಸಕಾಂಗ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ಅದನ್ನು ಕಡ್ಡಾಯ ಕಾನೂನನ್ನಾಗಿ ಮಾಡಲಾಗುವುದು ಎನ್ನವುದು ನಮ್ಮ ವಿನಮ್ರ ಆಶಯ. ನಮ್ಮ ನದಿಗಳು, ಜಲಮೂಲಗಳು ಮತ್ತು ಮಣ್ಣನ್ನು ರಾಷ್ಟ್ರೀಯ ನಿಧಿಯಾಗಿ ಪರಿಗಣಿಸುವ ಕಾನೂನನ್ನು ರೂಪಿಸುವತ್ತ ಸಾಗೋಣ.

ಸಂಪಾದಕರ ಟಿಪ್ಪಣಿ : ಮೇಲಿನ ಲೇಖನವು ಭಾರತದ ನದಿಗಳ ಪುನರುಜ್ಜೀವನ ಕರಡು ನೀತಿ ಶಿಫಾರಸಿನ ಆಯ್ದ ತುಣುಕು (Revitalization of Rivers in India Draft Policy Recommendation).ರಾಷ್ಟ್ರವ್ಯಾಪಿ ನದಿ ಅಭಿಯಾನದಲ್ಲಿ ನೀವು ಹೇಗೆ ಭಾಗವಹಿಸಬಹುದು ಮತ್ತು ತೊಡಗಿಸಿಕೊಳ್ಳಬಹುದು ಎಂದು ತಿಳಿಯಲು RallyForRivers.org ಪುಟಕ್ಕೆ ಭೇಟಿ ನೀಡಿ.