ಸದ್ಗುರು: ಕೆಲವು ವರ್ಷಗಳ ಹಿಂದೆ ನಾನು ಜಾಗತಿಕ ಎಕನಾಮಿಕ್ ಫೋರಮ್‍ನಲ್ಲಿ ಭಾಗವಹಿಸಿದ್ದಾಗ, ಎಲ್ಲರೂ ಆಗಷ್ಟೇ ಶುರುವಾಗಿದ್ದ ಆರ್ಥಿಕ ಹಿಂಜರಿತದಿಂದ ಖಿನ್ನತೆಗೆ ಒಳಪಟ್ಟಿದ್ದರು. ಆಗ ಅವರು ನನಗೆ ಮಾತನಾಡಲು ಕೊಟ್ಟ ವಿಷಯ "ರಿಸೆಶನ್ ಮತ್ತು ಡಿಪ್ರೆಶನ್ - ಆರ್ಥಿಕ ಹಿನ್ನಡೆ ಮತ್ತು ಖಿನ್ನತೆ". ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ನಿರೀಕ್ಷೆಯು ಖಿನ್ನತೆಯಿಂದ ಹೇಗೆ ಹೊರಬರಬೇಕು ಎನ್ನುವುದಾಗಿತ್ತು, ಅದಕ್ಕೆ ನಾನು "ರಿಸೆಶನ್ ಇಂದ ಆಗಿರುವ ಪ್ರಮಾದವೇ ಸಾಕು, ಇನ್ನು ನೀವು ಡೆಪ್ರೆಷನ್‍(ಖಿನ್ನತೆ)ಗೆ ಹೋದರೆ ಅದು ಇನ್ನೂ ದೊಡ್ಡ ಪ್ರಮಾದವಾಗುತ್ತದೆ" ಎಂದೆ. ಈಗಿರುವ ಆರ್ಥಿಕ ವ್ಯವಸ್ಥೆಯ ಕಾರ್ಯಪ್ರವೃತ್ತಿ ಹೇಗಿದೆಯೆಂದರೆ, ಇದು ಯಶಸ್ಸನ್ನು ಕಾಣದಿದ್ದರೆ ನಾವು ಖಿನ್ನರಾಗುತ್ತೇವೆ, ಯಶಸ್ಸು ಸಿಕ್ಕರೆ ಹಾನಿಗೊಳಗಾಗುತ್ತೇವೆ. ಹಾಗಾಗಿ "ನೀವು ಖಿನ್ನರಾಗಿರುವುದೇ ಉತ್ತಮ ಎಂದು ನನ್ನ ಅಭಿಪ್ರಾಯ" ಎಂದು ಹೇಳಿದೆ.

ನಾವು ಹೀಗೆ "ಎಂದಿನಂತೆ ವ್ಯಾಪಾರ..." ಎನ್ನುವ ಮನೋಭಾವದಿಂದ ಮುಂದುವರಿದರೆ, ಇನ್ನು ಎರಡು ಅಥವಾ ಮೂರು ದಶಕದಲ್ಲಿ ಚೇತರಿಸಿಕೊಳ್ಳಲಾಗದ ದೊಡ್ಡ ದುರಂತ ನಡೆಯುವುದು ಖಚಿತ.

ದಿ ಲಿವಿಂಗ್ ಪ್ಲಾನೆಟ್ ರಿಪೋರ್ಟ್ ನ ಪ್ರಕಾರ ಈಗಿರುವ 700 ಕೋಟಿ ಜನಸಂಖ್ಯೆಯು ಒಬ್ಬ ಸಾಮಾನ್ಯ ಅಮೇರಿಕಾ ಪ್ರಜೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ, ನಮಗೆ ಇನ್ನೂ ನಾಲ್ಕೈದು ಭೂಮಿಗಳು ಬೇಕಾಗುತ್ತವೆ. ಆದರೆ ನಮ್ಮ ಬಳಿ ಇರುವುದು ಒಂದೇ ಭೂಮಿ. ನಾವು ಸಾಕಷ್ಟು ಸಮಯ ಈ ಪ್ರಪಂಚವನ್ನು ಸರಿಪಡಿಸುವುದರಲ್ಲಿ ತೊಡಗಿದ್ದೆವು. ಸಾಮಾನ್ಯವಾಗಿ ಸರಿಪಡಿಸುವುದೆಂದರೆ ಅದನ್ನು ಉತ್ತಮಗೊಳಿಸುವುದು. ಆದರೆ ನಾವು ಅದನ್ನು ಸರಿಪಡಿಸಿರುವುದು, ವಿನಾಶಕಾರಿ ರೀತಿಯಲ್ಲಿ. ನಾವು ಹೀಗೆ "ಎಂದಿನಂತೆ ವ್ಯಾಪಾರ...." ಎನ್ನುವ ಮನೋಭಾವದಿಂದ ಮುಂದುವರಿದರೆ, ಇನ್ನು ಎರಡು ಅಥವಾ ಮೂರು ದಶಕದಲ್ಲಿ ಚೇತರಿಸಿಕೊಳ್ಳಲಾಗದ ದೊಡ್ಡ ದುರಂತ ನಡೆಯುವುದು ಖಚಿತ.

ಈ ವೈರಸ್‍ನ ಕಾರಣದಿಂದಾದರೂ ಇದಕ್ಕೊಂದು ವಿರಾಮ ದೊರೆತಿದೆ, ಹಾಗೂ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಇದು ಸೂಕ್ತ ಸಮಯವಾಗಿದೆ. ಆರ್ಥಿಕ ವ್ಯವಸ್ಥೆಯು ತನ್ನದೇ ವೇಗದಲ್ಲಿ ಚಾಲ್ತಿಯಲ್ಲಿರುವಾಗ ನಾವು ಅದನ್ನು ಸರಿಪಡಿಸಲಾಗುವುದಿಲ್ಲ. ಆರ್ಥಿಕ ವ್ಯವಸ್ಥೆಯನ್ನು ಸರಿ ಪಡಿಸಲು ಹಾಗೂ ಜಗತ್ತನ್ನು ನಡೆಸಬಹುದಾದ ಪರ್ಯಾಯ ಉಪಾಯಗಳನ್ನು ಆಲೋಚಿಸಲು ಒಳ್ಳೆಯ ಸಮಯವಿದು.

ಪ್ರಜ್ಞಾಪೂರ್ವಕ ಬಳಕೆ

ಉತ್ಪಾದನಾ ವರ್ಗವು ನಿರಂತರವಾಗಿ ಬೆಳೆಯುತ್ತಿದೆ. ಆದರೆ ಎಲ್ಲಿಯವರೆಗು ಬೆಳೆಯಬೇಕು ಎಂಬ ಅಂಕೆ ಎಲ್ಲಿದೆ? ನಾವು ಬೆಳವಣಿಗೆ ಮತ್ತು ಸಮೃದ್ಧತೆಯ ಬಗೆಗಿನ ಆಲೋಚನೆಯ ಪುನರವಲೋಕನೆ ಮಾಡಬೇಕು. ಸಮೃದ್ಧತೆ ಎಂದರೆ ಕೇವಲ ಹೆಚ್ಚೆಚ್ಚು ಎಂದಲ್ಲ. ನಮ್ಮೆಲ್ಲರಿಗೂ ವಾಸಿಸಲು ಇರುವುದು ಕೇವಲ ಒಂದೇ ಭೂಮಿ. ನಾವು ನಿರಂತರವಾಗಿ ಕೊನೆಯಿಲ್ಲದೆ ಹೆಚ್ಚು ಹೆಚ್ಚು ಬೇಕು ಎಂಬ ಮನೋಭಾವದಲ್ಲಿ ಇರಬಾರದು. ಈಗಾಗಲೇ ನಮ್ಮ ಬಳಿ ಇರುವ ಸಂಪನ್ಮೂಲಗಳಲ್ಲೇ ಹೇಗೆ ಉತ್ತಮ ಸುಖೀ ಜೀವನ ಸಾಗಿಸಬಹುದು ಎಂಬುದರ ಬಗ್ಗೆ ಸಮಾಜವು ಗಮನ ಹರಿಸಬೇಕು.

ಉದಾಹರಣೆಗೆ, ಭಾರತದಂತಹ ದೇಶದಲ್ಲಿ 40 ಪ್ರತಿಶತ ಜನರು ತಮ್ಮ ಸ್ಮಾರ್ಟ್‍ಫೋನ್ ಅನ್ನು ಕೇವಲ ಒಂದು ವರ್ಷ ಮಾತ್ರ ಉಪಯೋಗಿಸುತ್ತಾರೆ. ಈಗ ಭಾರತದಲ್ಲಿ ಉಪಯೋಗಿಸದೆ ಇರುವ 50 ಕೋಟಿ ಸ್ಮಾರ್ಟ್‍ಫೋನ್‍ಗ. ಜನರು ಹೋಸ ಮೊಬೈಲ್ ಖರೀದಿಸಿದ ಕರಣ ಅವರ ಮನೆಯ ಯಾವುದೊ ಒಂದು ಮೂಲೆಯಲ್ಲಿ ಈ ಹಳೆ ಮೊಬೈಲುಗಳು ಶೇಖರಣೆಯಾಗಿವೆ.

ಹವಾಮಾನ ಬದಲಾವಣೆಯ ಸಮಸ್ಯೆ ಕೈಮೀರಿದಾಗ, ನಾವು ಅನುಭವಿಸಲಿರುವ ಪರಿಸ್ಥಿತಿ ಈ ವೈರಸ್ ನ ಪರಿಸ್ಥಿತಿಗಿಂತ ಅತಿ ಭೀಕರವಾಗಿರುತ್ತದೆ.

ಒಂದು ಮೊಬೈಲ್ ಖರೀದಿಸಿದ ನಂತರ ಕನಿಷ್ಠ ಇಷ್ಟು ವರ್ಷ ಬಳಸಲೇಬೇಕು ಎಂಬ ಕಾನೂನು ನಾವೇಕೆ ಮಾಡಬಾರದು? ಒಂದುವೇಳೆ ಆ ಮೊಬೈಲ್ನಲ್ಲಿ ಸಮಸ್ಯೆ ಎದುರಾದಲ್ಲಿ ಅದನ್ನು ಬದಲಿಸಿ ಹೊಸ ಮೊಬೈಲ್ ಖರೀದಿಸಬೇಕು ಎಂದಾದರೂ ಮಾಡಬೇಕು. ಹಾಗೆಯೇ ಕಾರ್ ವಿಷಯದಲ್ಲೂ ಕೂಡ ಕನಿಷ್ಠ ಇಷ್ಟು ವರ್ಷ ಅಥವಾ ಕನಿಷ್ಠ ಇಷ್ಟು ಕಿಲೋಮೀಟರ್ವರೆಗೂ ಉಪಯೋಗಿಸಲೇಬೇಕು ಎಂದು ಕಾನೂನು ಮಾಡಬೇಕು. ಕಬ್ಬಿಣ ಮತ್ತು ಅಲ್ಯೂಮಿನಿಯಂ ತಯಾರಿಸುವ ಕಾರ್ಖಾನೆಗಳ ಮೇಲೆ ಮುಂದಿನ ಇಪ್ಪತೈದು ವರ್ಷಗಳ ಕಾಲ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬಾರದು ಎಂಬ ಮಾನದಂಡವನ್ನು ವಿಧಿಸಬೇಕು. ಅಭಿವೃದ್ಧಿಪರ ದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆ ಕೊಡಬಹುದು ಆದರೆ ಅಲ್ಲ್ಲಿಯೂ ಆರ್ಥಿಕ ಪರಿಸ್ಥಿತಿ ಒಂದು ಹಂತ ತಲುಪಿದ ನಂತರ, ನಿರ್ಬಂಧಿಸಬೇಕು. ಇಲ್ಲವಾದಲ್ಲಿ ನಮ್ಮ ಬಳಕೆಯು ಅಂಕೆತಪ್ಪಿ ಮಿತಿಯೇ ಇಲ್ಲದಂತಾಗುತ್ತದೆ.

ಮೊದಲು ಎಲ್ಲರ ಮನೆಯಲ್ಲೂ ಆರರಿಂದ ಎಂಟು ಮಕ್ಕಳಿರುತ್ತಿದ್ದರು, ಈಗ ಒಂದು ಅಥವಾ ಎರಡು ಮಗು ಇರುತ್ತದೆ. ಇನ್ನು ಕೆಲವರು ಮಕ್ಕಳೇ ಬೇಡ ಎನ್ನುತ್ತಾರೆ. ಮಕ್ಕಳ ವಿಷಯದಲ್ಲಿ ನಾವು ಈ ರೀತಿಯ ನಿರ್ಧರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರೆ, ಕಾರ್ ಹಾಗು ಮೊಬೈಲ್ ಅಥವಾ ಬೇರೆ ವಿಷಯಗಳಲ್ಲಿ ಯಾಕೆ ಸಾಧ್ಯವಾಗುವುದಿಲ್ಲ? ನಾವು ಈ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಿಲ್ಲ ಅಂದರೆ ಇನ್ನು ಇಪ್ಪತೈದರಿಂದ ಮೂವತ್ತು ವರ್ಷಗಳಲ್ಲಿ ಚೇತರಿಸಿಕೊಳ್ಳಲಾಗದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಹವಾಮಾನ ಬದಲಾವಣೆಯ ಸಮಸ್ಯೆ ಕೈಮೀರಿದಾಗ, ನಾವು ಅನುಭವಿಸಲಿರುವ ಪರಿಸ್ಥಿತಿ ಈ ವೈರಸ್ ನ ಪರಿಸ್ಥಿತಿಗಿಂತ ಅತಿ ಭೀಕರವಾಗಿರುತ್ತದೆ.

ಸಹಜವಾಗಿಯೇ ಜನರು "ಮೊದಲೇ ನಮಗೆ ಈಗಿರುವ ಸಂಪನ್ಮೂಲಗಳಿಂದ ಬೇಡಿಕೆ ಪೂರೈಸಲಾಗುತ್ತಿಲ್ಲ ಹಾಗು ನಿರುದ್ಯೋಗದ ಸಮಸ್ಯೆಯು ಕೂಡ ಇದೆ, ಈಗ ಇದಕ್ಕೆಲ ಕಡಿವಾಣ ಹಾಕಬೆಂದು ಹೇಳುತ್ತಿದ್ದೀರಿ. ಸದ್ಗುರು ಅದು ಗಾಯದ ಮೇಲೆ ಉಪ್ಪು ಹಾಕಿದಂತಾಗುತ್ತದೆ" ಎಂದು ಕೇಳಬಹುದು. ಆದರೆ ಇದನ್ನು ನಾನು ಹೇಳುತ್ತಿರುವುದಲ್ಲ, ಪ್ರಕೃತಿಯೇ ಇಂತಹ ಘಟನೆಗಳ ಮೂಲಕ ಸಾರುತ್ತಿದೆ, ಪ್ರಕೃತಿಯ ಈ ಸಂದೇಶವನ್ನು ಸರಿಯಾಗಿ ತಿಳಿದುಕೊಂಡರೆ ಒಳಿತು..

ಶೈಕ್ಷಣಿಕ ವಿಕಾಸ

ಈಗಿನ ಶಾಲೆಗಳು ಹಾಗು ಶಿಕ್ಷಣದ ಪದ್ದತಿಯಲ್ಲಿ ಸಾಕಷ್ಟು ಲೋಪಗಳಿವೆ, ಈ ಲೋಪಗಳಿಂದಲೇ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳ ಸೃಷ್ಟಿ ಆಗುತ್ತಿರುವುದು. ಶಿಶು ವಿಹಾರದಿಂದಲೇ ಮಕ್ಕಳಿಗೆ "ಎಲ್ಲರಿಗಿಂತಲೂ ನೀನೇ ಮೊದಲಿಗನಾಗಬೇಕು" ಎನ್ನುವುದನ್ನು ಹೇಳಿಕೊಡಲಾಗುತ್ತಿದೆ. ಮೊದಲ ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರೆಯುತ್ತದೆ ಮತ್ತು ಅದು ಸದಾ ನಿಮಗೇ ದೊರೆಯಬೇಕು ಎನ್ನುವುದು ಬಹಳ ವಿನಾಶಕಾರಿ ಸಂಗತಿ. ಇದರ ಅರ್ಥ ನೀವು ಕೇವಲ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವಷ್ಟರಲ್ಲೇ ಸೀಮಿತರಾಗುತ್ತಿದ್ದೀರಿ ಎಂದು. ದುರದೃಷ್ಟವಶಾತ್ ಎಲ್ಲೆಡೆ ಇದೆ ರೀತಿಯ ವಿನಾಶ ನೆಡಯುತ್ತಿದೆ. ಈ ರೀತಿಯ ಮನೋಭಾವ ಶಾಲೆಯಲ್ಲಿ ಪ್ರಾರಂಭವಾದರೂ, ಹೊರ ಪ್ರಪಂಚದಲ್ಲಿ ಇನ್ನು ಹೆಚ್ಚಿನ ಅಭಿವ್ಯಕ್ತವಾಗುತ್ತದೆ.

ಈ ಸಾಮೂಹಿಕ ಶಿಕ್ಷಣ ಪದ್ಧತಿ, ಪಾಶ್ಚ್ಯತ್ಯ ದೇಶಗಳಲ್ಲಿ ಸರಿ ಸುಮಾರು ಎರಡು ಶತಮಾನಗಳ ಹಿಂದೆ ಶುರುವಾಯಿತು. ಆ ಸಮಯದಲ್ಲಿ ಅಲ್ಲಿ ನೆಡೆಯುತ್ತಿದ್ದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗುವಂತೆ ಈ ಶಿಕ್ಷಣ ವಿಧಾನವನ್ನು ರೂಪಿಸಲಾಗಿತ್ತು. ಇದರಲ್ಲಿ ಪ್ರತಿಯೊಬ್ಬರಿಗೂ ಅವರವರ ಪ್ರತಿಭೆ ಹಾಗು ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ಕೊಡದೆ, ಏಕರೀತಿಯ ಶಿಕ್ಷಣ ನೀಡಲಾಗುತ್ತಿತ್ತು. ಇದರಿಂದ ಯಂತ್ರದಿಂದ ಹೊರಬರುವ ಉತ್ಪನ್ನಗಳ ರೀತಿ ಎಲ್ಲರೂ ಆರ್ಥಿಕ ವ್ಯವಸ್ಥೆಯನ್ನು ಹೊಂದುವಂತೆ ಶಿಕ್ಷಣವನ್ನು ಪಡೆದು ಹೊರಬರಬೇಕಾಗುತ್ತಿತ್ತು. 

 

ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಕೂಡ, ಏಕೆ ಎಲ್ಲರೂ ಒಂದು ಕೋಣೆಯಲ್ಲಿ ಕುಳಿತುಕೊಂಡು ಒಬ್ಬ ವ್ಯಕ್ತಿ ಪುಸ್ತಕ ಓದುವುದನ್ನು ಕೇಳಿಸಿಕೊಳ್ಳಬೇಕು ಎನ್ನುವುದು ಅರ್ಥವಾಗುತ್ತಿರಲಿಲ್ಲ. ಹಾಗಾಗಿಯೇ ನಾನು ಹೆಚ್ಚಿನ ಕಾಲ ಮೈದಾನದಲ್ಲಿ ಕಳೆಯುತ್ತಿದ್ದೆ. ನಾವು ಜನರ ಶಿಕ್ಷಣಕ್ಕಾಗಿ ಇಂದು ಎಷ್ಟು ಲಕ್ಷ ಚದರಡಿಗಳಷ್ಟು ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ? ಒಂದು ಸಮಯದಲ್ಲಿ, ಶಿಕ್ಷಣ ವ್ಯವಸ್ಥೆಯಾಗಲಿ ಅಥವಾ ಕೈಗಾರಿಕೆಯಾಗಲಿ, ಎಲ್ಲವನ್ನೂ ಅಧಿಕವಾಗಿ ಉತ್ಪಾದಿಸುವ ನಿಟ್ಟಿನಲ್ಲಿ ನಾವಿದ್ದುದರಿಂದ ಇದು ಅವಶ್ಯಕವಾಗಿತ್ತು. ಆದರೆ ಈಗ ಮಾಹಿತಿ ಹಾಗು ಜ್ಞಾನ ಎಲ್ಲೆಡೆ ಲಭ್ಯವಿದೆ. ಇಂದು ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನಶೈಲಿಗೆ ಹೊಂದುವಂತಹ ಜ್ಞಾನವನ್ನು ಪಡೆಯಲು ಹುರಿದುಂಬಿಸುವಂತಹ ಹಾಗು ಪ್ರೋತ್ಸಾಹಿಸುವಂತಹ ಒಬ್ಬ ವ್ಯಕ್ತಿಯ ಅವಶ್ಯಕತೆಯಿದೆಯಷ್ಟೇ.

ಶಿಕ್ಷಣ ಕೇವಲ ಉದ್ಯೋಗ ಪಡೆಯುವ ನಿಟ್ಟಿನಲ್ಲಷ್ಟೇ ಸೀಮಿತವಾಗಬಾರದು. ಅದು ಒಬ್ಬ ಮನುಷ್ಯನನ್ನು ಉತ್ಕೃಷ್ಟರನ್ನಾಗಿಸಬೇಕು.

ಶಿಕ್ಷಣವೆಂದರೆ ನಮ್ಮೊಳಗೆ ಕೇವಲ ಮಾಹಿತಿಯ ಉಗ್ರಾಣವನ್ನು ನಿರ್ಮಿಸುವಂತಾಗಬಾರದು, ಬದಲಾಗಿ ಅದರಿಂದ ಮನುಷ್ಯರ ಸರ್ವತೋಮುಖ ಬೆಳವಣಿಗೆ ಕಾಣುವಂತಾಗಬೇಕು. ಆದರೆ ಈಗ ಶಿಕ್ಷಣದಿಂದ ವ್ಯಕ್ತಿಗಳ ಸರ್ವತೋಮುಖ ಬೆಳವಣಿಗೆಯಾಗಲಿ ಅಥವಾ ಸಾಮರ್ಥ್ಯ ವೃದ್ಧಿಸುವ ಕಾರ್ಯವಾಗಲಿ ಆಗುತ್ತಿಲ್ಲ. ಬಹುತೇಕವಾಗಿ ಶಿಕ್ಷಣ ಎಂದರೆ ಕೇವಲ ಮಾಹಿತಿ ತಿಳಿದುಕೊಂಡು, ಪರೀಕ್ಷೆಯಲ್ಲಿ ಪಾಸ್ ಆಗಿ ಉದ್ಯೋಗ ಪಡೆಯುವುದಾಗಿದೆ. ಕೆಲ ದಶಕಗಳ ಹಿಂದೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಉದ್ಯೋಗವನ್ನು ಸಂಪಾದಿಸುವುದೇ ಶಿಕ್ಷಣದ ಪ್ರಮುಖ ಗುರಿಯಾಗಿತ್ತು. ಆದರೆ ಈಗ ಆರ್ಥಿಕ ಸ್ಥಿರತೆ ಒಂದು ಹಂತಕ್ಕೆ ತಲುಪಿರುವ ಕಾರಣ, ಶಿಕ್ಷಣದ ಬಗೆಗಿನ ದೃಷ್ಟಿಕೋನವು ಬದಲಾಗಬೇಕು. ಶಿಕ್ಷಣ ಕೇವಲ ಉದ್ಯೋಗ ಪಡೆಯುವ ನಿಟ್ಟಿನಲ್ಲಷ್ಟೇ ಸೀಮಿತವಾಗಬಾರದು. ಅದು ಒಬ್ಬ ಮನುಷ್ಯನನ್ನು ಉತ್ಕೃಷ್ಟರನ್ನಾಗಿಸಬೇಕು.

10% ಹೆಚ್ಚು ಪ್ರಜ್ಞಾವಂತ ಪ್ರಪಂಚ

ನಮ್ಮ ಜೀವನ ಶೈಲಿ ಈ ದಿನ ಹೇಗಿದೆ ಎಂದರೆ, ಪ್ರತಿದಿನ ಸುಮಾರು 8,000 ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಸಾಯುತ್ತಿದ್ದಾರೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮಲಗುವ 80 ಕೋಟಿ ಜನರಿಗೆ ಆಹಾರ ದೊರಕಿಸಬೇಕಾದರೆ, ಪ್ರತಿ ತಿಂಗಳು 970 ರಿಂದ 980 ಕೋಟಿ ಡಾಲರ್‍ಗಳಷ್ಟು ಬೇಕಾಗುತ್ತದೆ. ಜನರು ಪ್ರತಿ ವರ್ಷ ವಿಡಿಯೋ ಗೇಮ್ಸ್‍ನ ಮೇಲೆ ಕೂಡ ಇಷ್ಟೇ ಖರ್ಚನ್ನು ಮಾಡುತ್ತಿದ್ದಾರೆ. ಆಹಾರದ ಮೇಲೆ ಎಷ್ಟು ಖರ್ಚು ಜನ ಮಾಡುತ್ತಿದ್ದಾರೆಯೋ, ಸುಮಾರು ಅಷ್ಟೇ ಖರ್ಚನ್ನು ತಂಬಾಕು, ಮದ್ಯ ಹಾಗು ಮಾದಕ ವ್ಯಸನದ ಮೇಲೆಯೂ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಇಂದು ಜನರು ಉಪವಾಸದಿಂದ ಬಳಲುತ್ತಿರುವುದು ಆಹಾರದ ಕೊರತೆಯಿಂದಲ್ಲ, ಬದಲಾಗಿ ನಮ್ಮ ವಿಕೃತ ಮನೋಭಾವದಿಂದಷ್ಟೇ..  

ನಾವು ಈಗ ಹಿಂದೆಂದಿಗಿಂತಲೂ ಸಂಪನ್ಮೂಲಗಳಲ್ಲಿ, ತಂತ್ರಜ್ಞಾನದಲ್ಲಿ, ಸಾಮರ್ಥ್ಯದಲ್ಲಿ, ಹಾಗೂ ವಿಜ್ಞಾನದಲ್ಲಿ ಶ್ರೀಮಂತರಾಗಿದ್ದೇವೆ. ಈ ದಿನ ನಮಗೆ ಯಾವುದೇ ಸಮಸ್ಯೆ ಎದುರಾದರೂ, ಅದಕ್ಕೆ ಅಗತ್ಯವಿರುವ ಪರಿಹಾರ ಕಂಡುಕೊಳ್ಳಲು ಬೇಕಾಗಿರುವ ಸಂಪನ್ಮೂಲ, ಜ್ಞಾನ, ತಂತ್ರಜ್ಞಾನ ನಮ್ಮ ಬಳಿ ಇದೆ. ಇತಿಹಾಸದಲ್ಲಿ ಹಿಂದೆಂದಿಗೂ ಮನುಷ್ಯ ಇಷ್ಟು ಸಮರ್ಥನಾಗಿರಲಿಲ್ಲ. ಈಗ ಇಲ್ಲದೇ ಇರುವುದು ಒಂದೇ ಒಂದು ವಿಷಯವೆಂದರೆ ಅದು ಮಾನವ ಪ್ರಜ್ಞೆ. ನಮ್ಮಿಂದ ಒಂದು ಪ್ರಜ್ಞಾವಂತ ಮಾನವ ಸಮಾಜ, ಪ್ರಜ್ಞಾವಂತ ಪ್ರಪಂಚ ನಿರ್ಮಾಣವಾಗಬೇಕಿದೆ. ನಮ್ಮ ಕಾರ್ಯವೈಖರಿಯ ವಿಧಾನ ಇಂದಿಗಿಂತ 10% ಹೆಚ್ಚು ಪ್ರಜ್ಞಾವಂತವಾದರೆ, ಈ ಸಾಂಕ್ರಾಮಿಕ ಪಿಡುಗಿನ ನಂತರದ ಕಾಲದಲ್ಲಿ ಅತ್ಯದ್ಭುತ ಜಗತ್ತನ್ನು ನಾವು ಕಾಣಬಹುದು.

 

Editor's Note: : ಸವಾಲಿನ ಸಮಯಗಳಲ್ಲಿ ಬೆಂಬಲಕ್ಕಾಗಿ ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ 50% ಗೆ ಲಭ್ಯ. ನಿಮ್ಮ ಬದುಕನ್ನು ನಿಮಗೆ ಬೇಕಾದಂತೆ ರೂಪಿಸಿಕೊಳ್ಳುವಲ್ಲಿ ಮೊದಲ ಹೆಜ್ಜೆಯನ್ನುಇಡಿ. ಇಲ್ಲಿ ನೋಂದಾಯಿಸಿ.

 

IEO