ಕೃಷ್ಣನ ಕುರಿತು ಸದ್ಗುರು - ಇಲ್ಲಿವೆ 32 ನುಡಿಮುತ್ತುಗಳು
ತುಂಟ, ಮುದ್ದು ಮಗುವಿನಿಂದ ಹಿಡಿದು, ಒಬ್ಬ ದೈವಸ್ವರೂಪಿಯಾಗಿ ಗುರುತಿಸಿಕೊಳ್ಳುವವರೆಗೆ - ಕೃಷ್ಣನ ಮೋಹಕ ಜೀವನದ ಮೂಲಕ ಕರೆದೊಯ್ಯುವ, ಸದ್ಗುರುಗಳು ಕೃಷ್ಣನ ಕುರಿತು ಹೇಳಿರುವ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.
ArticleAug 29, 2021
ಕೃಷ್ಣನೊಬ್ಬ ಅದಮ್ಯ ಮಗು, ಓರ್ವ ಪ್ರೇಮಮಯಿ ತುಂಟ, ಮೋಹಕ ಕೊಳಲುವಾದಕ, ಸುಲಲಿತ ನಾಟ್ಯಗಾರ, ಓರ್ವ ಆಕರ್ಷಕ ಪ್ರೇಮಿ, ಓರ್ವ ನೈಜ ವೀರಯೋಧ, ತನ್ನ ಶತೃಗಳ ಪಾಲಿನ ನಿರ್ದಯ ಪರಾಕ್ರಮಿ, ಪ್ರತಿಯೊಂದು ಮನೆಯಲ್ಲೂ ಒಂದು ಭಗ್ನ ಹೃದಯವನ್ನು ಉಳಿಸಿಹೋದ ಪುರುಷ, ಒಬ್ಬ ಚತುರ ರಾಜನೀತಿಜ್ಞ , ಓರ್ವ ಪರಿಪೂರ್ಣ ಸಜ್ಜನ, ಒಬ್ಬ ಅತ್ಯುನ್ನತ ಸ್ಥರದ ಯೋಗಿ, ಮತ್ತು ದೈವದ ಅತ್ಯಂತ ವರ್ಣಮಯ ಅವತಾರವಾಗಿದ್ದಾನೆ.
ಕೃಷ್ಣ ಎಂದು ಹೇಳುವ ಪ್ರಜ್ಞೆಯು ನಮ್ಮನ್ನು ಸ್ಪರ್ಶಿಸಬೇಕೆಂದು ನಾವು ಬಯಸಿದರೆ, ನಮಗೆ ಬೇಕಾಗಿರುವುದು ಲೀಲೆ - ಒಂದು ವಿನೋದಮಯ ಹರ್ಷೋಲ್ಲಾಸದ ಮಾರ್ಗ.
ಕೃಷ್ಣ – ಪ್ರೇಮಮಯಿ ತುಂಟ
ಕೃಷ್ಣನ ಜೀವನದ ಪೂರ್ವಭಾಗದ ಸಾರವೆಂದರೆ ಒಂದು ಇಡೀ ಸಮುದಾಯವನ್ನು ತನ್ನ ಕುರಿತಾದ ಆನಂದದ ಹುಚ್ಚಿಗೆ ಒಳಪಡಿಸಿದ್ದು. ಅವನ ಅತ್ಯಂತ ಮೋಹಕ ನೋಟಗಳು, ಅವನ ಆಕರ್ಷಕ ಮುಗುಳುನಗೆ, ಅವನ ಕೊಳಲು, ಮತ್ತು ತನ್ನ ನಡಿಗೆಯಲ್ಲಿನ ನೃತ್ಯದಿಂದ ಅವನು ಜನರನ್ನು, ಅವರಿಗೆ ತಿಳಿಯದ ಒಂದು ನವೀನ ರೀತಿಯ ಉನ್ಮಾದದಲ್ಲಿ ಮುಳುಗಿಸಿದ.
ಕೃಷ್ಣನು ಹುಟ್ಟಿದ ದಿನದಿಂದ, ಜನರು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಅವನು ಅನೇಕ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬಂದರೂ, ಅವನು ತನ್ನ ಜೀವನದಲ್ಲಿ ನಲಿದಾಡುತ್ತಾ ಸಾಗಿದ. ಈ ಗುಣವೇ ಅವನನ್ನು ಭಾರತದ ಸಾಂಸ್ಕೃತಿಕ ಮೌಲ್ಯಗಳ ಅವಿಭಾಜ್ಯ ಅಂಗವನ್ನಾಗಿಸಿದೆ.
ಕೃಷ್ಣನು ತನ್ನ ಜೀವನವನ್ನು ಒಂದು ಹಬ್ಬದಂತೆ ಜೀವಿಸಿದ. ಮಗುವಾಗಿದ್ದಾಗಲೂ, ಅವನು ತನ್ನ ಕುರಿತು ಅನೇಕ ಸುಂದರ ಸಂಗತಿಗಳನ್ನು ಹೇಳುತ್ತಿದ್ದ. ಅವುಗಳಲ್ಲಿ ಒಂದು, “ನಾನು ಬೆಳಿಗ್ಗೆ ಎದ್ದಾಗ, ಹಸುಗಳು ಅಂಬಾ ಎನ್ನುವ ಶಬ್ದ ಕೇಳುವಾಗ ಮತ್ತು ನನ್ನ ಅಮ್ಮ ಹಾಲು ಕರೆಯುವ ಮುನ್ನ ಪ್ರತಿಯೊಂದು ಹಸುವನ್ನೂ ಅದರ ಹೆಸರಿನಿಂದ ಕರೆಯುವಾಗ, ಅದು ನಾನು ಕಣ್ಣುಜ್ಜಿಕೊಂಡು ಮುಗುಳುನಗುವ ಸಮಯ ಎಂದು ಭಾವಿಸುತ್ತೇನೆ.”
ಕೃಷ್ಣನು ಯುದ್ಧಕ್ಕೆ ಹೋದಾಗಲೂ ನವಿಲುಗರಿಯನ್ನು ಧರಿಸುತ್ತಿದ್ದ. ಅವನೇನೂ ಒಬ್ಬ ನೀರಸವ್ಯಕ್ತಿಯಾಗಿರಲಿಲ್ಲ , ಅವನು ತನ್ನ ಜೀವನದ ಪ್ರತಿಯೊಂದು ಆಯಾಮವನ್ನೂ ಒಂದು ಸಂಭ್ರಮಾಚರಣೆಯನ್ನಾಗಿಸಲು ಸಂಪೂರ್ಣವಾಗಿ ಬದ್ಧನಾಗಿದ್ದ. ಅದು ಅವನ ಭಾವನೆ, ಮನಸ್ಸು, ಕೆಲಸ, ಅಥವಾ ವಸ್ತ್ರಗಳು ಯಾವುದೇ ಆದರೂ ಅದನ್ನು ತನ್ನ ಸುತ್ತಲಿನ ಪ್ರತಿಯೊಬ್ಬರಿಗೂ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳುತ್ತಿದ್ದ. ಪ್ರೀತಿಯೆಂದರೆ ಇದೇ.
ಗೋಪಾಲ – ಮೋಹಕ ಗೊಲ್ಲ
ಜನರು ಕೇವಲ ಮಹಾಯೋಗಿಗಳು ಅಥವಾ ರಾಜರಲ್ಲಿ ಮಾತ್ರ ದಿವ್ಯತೆಯನ್ನು ಕಾಣುತ್ತಿದ್ದರು. ಕೃಷ್ಣನು ಕೇವಲ ಒಬ್ಬ ಗೊಲ್ಲನಾಗಿದ್ದರೂ, ಅವರು ಅವನ ಸೌಂದರ್ಯ, ವಿವೇಕ, ಬಲ ಮತ್ತು ಪರಾಕ್ರಮವನ್ನು ನಿರ್ಲಕ್ಷಿಸಲಾಗಲಿಲ್ಲ.
ನಾವು ಕೃಷ್ಣನನ್ನು ಗೋಪಾಲ ಎಂದಾಗ, ನಾವು ಅವನ್ನು ಪ್ರೀತಿಯಿಂದ ಕರೆಯುತ್ತೇವೆ. ನಾವು ಅವನನ್ನು ಗೋವಿಂದ ಎಂದು ಕರೆದಾಗ, ನಾವು ಅವನ ದಿವ್ಯಸ್ವರೂಪಕ್ಕೆ ತಲೆಬಾಗುತ್ತೇವೆ.
ಕೃಷ್ಣನ ಸರಳತೆ ಮತ್ತು ಲಾಲಿತ್ಯ, ಅವನ ಸುತ್ತಲಿದ್ದ ಪ್ರತಿಯೊಂದು ಸಂಗತಿಗಳಿಗೂ ಅವನು ಸ್ಪಂದಿಸುತ್ತಿದ್ದ ರೀತಿ, ಅವನ ನಡವಳಿಕೆ ಮತ್ತು ಶರೀರ ಮತ್ತು ಮನಸ್ಸಿನ ಸಮತೆ – ಇವೆಲ್ಲ ಕಾರಣಗಳಿಂದ ಜನರು ತಮ್ಮ ದೃಷ್ಟಿ ಮತ್ತು ಗಮನವನ್ನು ಅವನಿಂದ ಕೀಳಲಾಗುತ್ತಿರಲಿಲ್ಲ.
ಕೃಷ್ಣನ ಪ್ರಭಾವಳಿಯ ಹೊರಅಂಚಿನ ನೀಲವರ್ಣವೇ ಅವನನ್ನು ಅತ್ಯಂತ ಆಕರ್ಷಣೀಯನನ್ನಾಗಿಸಿದ್ದು.
ಕೃಷ್ಣನು ಎಷ್ಟು ಆಕರ್ಷಕನಾಗಿದ್ದನೆಂದರೆ, ಅವನನ್ನು ಕೊಲ್ಲಲು ಬಂದ ಪೂತನಿಯೂ ಆ ಬಾಲಕೃಷ್ಣನನ್ನು ಕಂಡು ಅವನಿಗೆ ಮನಸೋತು ಹೋಗಿದ್ದಳು.
ತಿಳಿದೋ ತಿಳಿಯದೆಯೋ, ಕೃಷ್ಣನ ಸುತ್ತಲಿದ್ದ ಜನರು ಅತ್ಯಂತ ಪ್ರೇಮಮಯಿ ಮತ್ತು ಮಧುರ ಸ್ವಭಾವದವರಾದರು. ಅವರು ಮಾಧುರ್ಯವನ್ನು ಸಾಧಿಸಲು ಅವನು ಪ್ರೇರೇಪಿಸಿದ.
ಕೃಷ್ಣನು ತನ್ನ ಸುತ್ತಲಿನ ಜೀವನದೊಂದಿಗೆ ಪರಿಪೂರ್ಣ ಹೊಂದಾಣಿಕೆಯಿಂದ ಇದ್ದ – ಅದೇ ಅವನ ಸಾಧನೆಯಾಗಿತ್ತು. ನೀವು ಯಾರೊಂದಿಗಾದರೂ ಹೊಂದಾಣಿಕೆಯನ್ನು ಅನುಭವಿಸಿದಾಗ ಮಾತ್ರ ನೀವು ಅವರ ಉಪಸ್ಥಿತಿಯಲ್ಲಿ ಆಹ್ಲಾದತೆಯನ್ನು ಅನುಭವಿಸುತ್ತೀರಿ. ಇಲ್ಲವಾದರೆ ಅದು ಅಹಿತಕರವಾಗಬಹುದು.
ಕೃಷ್ಣನು ಶ್ಯಾಮಸುಂದರ ಎಂದು ಕರೆಯಲ್ಪಡುತ್ತಿದ್ದ, ಅಂದರೆ ಸಂಜೆಯ ಸೌಂದರ್ಯ. ಅವನು ಸಂಧ್ಯಾಕಾಲದಂತಿದ್ದ. ಸೂರ್ಯ ಮುಳುಗುವಾಗ ದಿನದ ಆಗಸದ ತಿಳಿನೀಲಿ ಬಣ್ಣವು ಗಾಢ ಕಪ್ಪುನೀಲಿ ಬಣ್ಣಕ್ಕೆ ಎಡೆಮಾಡಿಕೊಡುತ್ತದೆ – ಅದು ಅವನ ಬಣ್ಣವಾಗಿತ್ತು.
ರಾಧೆಯು ಕೃಷ್ಣನ ಬಾಲ್ಯಕಾಲದ ಪ್ರೇಮಿಯಾಗಿದ್ದಳು. ರಾಧೆಯ ಗ್ರಹಿಕೆ ಎಂತಹುದೆಂದರೆ, ಅವಳು ‘ಕೃಷ್ಣ ಯಾವಾಗಲೂ ನನ್ನೊಂದಿಗೆ ಇರುತ್ತಾನೆ. ಅವನೆಲ್ಲಿದ್ದರೂ, ಯಾರೊಂದಿಗಿದ್ದರೂ, ನನ್ನೊಂದಿಗಿರುತ್ತಾನೆ’ ಎಂದು ಹೇಳುತ್ತಿದ್ದಳು.
ಕೃಷ್ಣನ ಬೆಳವಣಿಗೆ
ಕೃಷ್ಣನು ತನ್ನ ಕೊಳಲಿನಿಂದ ಎಂತಹ ವ್ಯಕ್ತಿಯನ್ನಾದರೂ ಕರಗಿಸಿ ಮೋಡಿಮಾಡಿಬಿಡುತ್ತಿದ್ದ, ಪ್ರಾಣಿಗಳನ್ನೂ ಸಹ. ಆದರೆ ಅವನು ಧರ್ಮವನ್ನು ಸ್ಥಾಪಿಸಲು ಹಳ್ಳಿಯನ್ನು ತೊರೆದಾಗ, ತನ್ನ ಕೊಳಲನ್ನು ರಾಧೆಗೆ ಕೊಟ್ಟುಹೋಗುತ್ತಾನೆ ಮತ್ತು ಅದನ್ನು ಮತ್ತೆಂದೂ ನುಡಿಸುವುದಿಲ್ಲ. ಆ ದಿನದಿಂದ ರಾಧೆಯು ಕೃಷ್ಣನಂತೆ ಕೊಳಲನ್ನು ನುಡಿಸಲು ಪ್ರಾರಂಭಿಸುತ್ತಾಳೆ.
ಯಾವಾಗಲೂ ರೇಷ್ಮೆಯ ವಸ್ತ್ರಗಳು, ನವಿಲುಗರಿಯ ಕಿರೀಟವನ್ನು ಧರಿಸಿರುತ್ತಿದ್ದ ಕೃಷ್ಣನು ಒಂದು ಜಿಂಕೆಯ ಚರ್ಮದ ತುಂಡನ್ನು ಧರಿಸಿ ತನ್ನ ಹೊಸ ಸಾಧನೆಗೆ ನೂರಕ್ಕೆ ನೂರು ಬದ್ಧನಾಧ ಪರಿಪೂರ್ಣವಾದ ಬ್ರಹ್ಮಚಾರಿಯಾಗಬಲ್ಲವನಾಗಿದ್ದ. ಇಂತಹ ವೈಭವೋಪೇತ ಭಿಕ್ಷುಕನನ್ನು ಜಗತ್ತು ಹಿಂದೆಂದೂ ಕಂಡಿರಲಿಲ್ಲ.
ಕೃಷ್ಣನ ಗುರು ಸಾಂದೀಪಾನಿ, ಬೋಧಿಸುವ ಸಲುವಾಗಿ ತಮ್ಮ ಬಾಯಿಯನ್ನು ತೆರೆಯುವುದೇ ಬೇಕಾಗಿರಲಿಲ್ಲ. ಎಲ್ಲವನ್ನೂ ಆಂತರಿಕವಾಗಿ ದಾಟಿಸಲಾಯಿತು, ಗ್ರಹಿಸಲಾಯಿತು ಮತ್ತು ಪಡೆಯಲಾಯಿತು.
ಧರ್ಮಗೋಪ್ತ – ಸದಾಚಾರದ ಸಾಮ್ರಾಟ
ಕೃಷ್ಣನನ್ನು ಧರ್ಮಗೋಪ್ತ ಎಂದು ಕರೆಯುತ್ತಾರೆ, ಅಂದರೆ ಧರ್ಮ ಮತ್ತು ಸದಾಚಾರದ ಸಾಮ್ರಾಟ, ಆದರೆ ರಾಜ್ಯವಾಳಲು ಬೇಕಾದ ಎಲ್ಲಾ ಶಕ್ತಿ ಸಾಮರ್ಥ್ಯಗಳಿದ್ದರೂ ಅವೆನಂದೂ ಯಾವ ರಾಜ್ಯವನ್ನೂ ಆಳಲಿಲ್ಲ.
ಅವನ ಕಾಲದಲ್ಲಿ ಮತ್ತು ಈಗಲೂ, ಅನೇಕರು ಕೃಷ್ಣನನ್ನು ಒಬ್ಬ ಕಪಟಿ, ಅಥವಾ ಮುಗುಳ್ನಗೆಯ ಧೂರ್ತ ಎನ್ನುತ್ತಾರೆ – ಏಕೆಂದರೆ ಅವನು ಅಂದಿನ ನೈತಿಕ ಕಟ್ಟಳೆಗಳನ್ನು ಅನುಸರಿಸಲಿಲ್ಲ; ಅವನು ಒಂದು ಸನ್ನಿವೇಶದಲ್ಲಿ ಯಾವುದೆಲ್ಲ ಸೂಕ್ತ ಫಲಿತಾಂಶ ನೀಡುತ್ತದೋ ಅದನ್ನು ಮಾತ್ರ ಮಾಡುತ್ತಿದ್ದ.
ಗೋವಿಂದ – ಕೃಷ್ಣನ ಪರಮೋಚ್ಛ ಸ್ವರೂಪ
ಕೃಷ್ಣನ ಒಳಗೂಡಿಸಿಕೊಳ್ಳುವಿಕೆಯ ಗುಣ ಹೇಗಿತ್ತೆಂದರೆ ಅವನ ಪರಮ ಶತೃಗಳೂ ಸಹ ಅವನೊಂದಿಗೆ ಕುಳಿತುಕೊಳ್ಳುತ್ತಿದ್ದರು ಮತ್ತು ತಮಗೆ ಗೊತ್ತಿಲ್ಲದೇ ಅವನಿಗೆ ಶರಣಾಗುತ್ತಿದ್ದರು. ಅನೇಕ ಸಲ, ಅವನು ತನ್ನನ್ನು ಬೈದವರು ಮತ್ತು ಕೊಲ್ಲಲು ಬಂದವರನ್ನೂ ಬದಲಾಯಿಸಿಬಿಡುತ್ತಿದ್ದ.
“ಓ ಪ್ರಭು! ಜನರು ನೀನೊಬ್ಬ ವಿಮೋಚಕ ಎನ್ನುವರು. ಹಾಗಾದರೆ ನಮ್ಮ ಮಾರ್ಗ ಯಾವುದು?’ ಕೃಷ್ಣನು ತುಂಟತನದಿಂದ ಅವರನ್ನು ನೋಡುತ್ತಾ “ಯಾವ ಮಾರ್ಗ? ನಾನೇ ಮಾರ್ಗ’ ಎಂದನು.
ಕೃಷ್ಣನು ಜನರ ಜೊತೆ ಎಲ್ಲ ರೀತಿಯ ತುಂಟಾಟಗಳನ್ನು ಮಾಡುತ್ತಿದ್ದ, ಆದರೂ ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು, ಏಕೆಂದರೆ ಅವನು ಅವರೊಂದಿಗೆ ಮತ್ತು ಸುತ್ತಲಿನ ಜೀವನದೊಂದಿಗೆ ಪರಿಪೂರ್ಣವಾದ ಹೊಂದಾಣಿಕೆಯನ್ನು ಹೊಂದಿದ್ದನು.
ರಾಧೆ ಎಂದರೆ, ಜೀವನದ ರಸವನ್ನು ಅಥವಾ ಪ್ರೇಮವನ್ನು ನೀಡುವವಳು ಎಂದರ್ಥ. ರಾಧೆಯು ತನ್ನ ಪ್ರೇಮದಲ್ಲಿ ಕೃಷ್ಣನನ್ನು ತನ್ನ ಭಾಗವೆಂದು ತಿಳಿದಿದ್ದಳು. ರಾಧೆಯಿಲ್ಲದೆ ಕೃಷ್ಣನಿಲ್ಲ ಎಂದು ಜನರು ಹೇಳುತ್ತಾರೆ, ಕೃಷ್ಣನಿಲ್ಲದೆ ರಾಧೆಯಿಲ್ಲ ಎನ್ನುವುದಿಲ್ಲ. ರಾಧೇಕೃಷ್ಣ ಅಥವಾ ರಾಧೇಯ.
ಸ್ತ್ರೀ ಅಂಶವೆನ್ನುವುದು ಒಂದು ನಿರ್ದಿಷ್ಟ ಗುಣ; ಅದು ಹೆಂಗಸರಲ್ಲಿ ಹೇಗೆ ಜೀವಂತಿಕೆಯಿಂದ ಇರುವುದೋ, ಹಾಗೆಯೇ ಗಂಡಸರಲ್ಲೂ ಇರುತ್ತದೆ. ನೀವು ಕೃಷ್ಣನನ್ನು ತಿಳಿಯಬೇಕೆಂದಿದ್ದರೆ, ನೀವು ಸಂಪೂರ್ಣವಾದ ಸ್ತ್ರೀ ಅಂಶವಾಗಲು ಸಿದ್ಧರಿರಬೇಕು. ಇದು ಅನ್ಯೋನ್ಯತೆ ಮತ್ತು ಅಪಾರವಾದ ಭಾವಪರವಶತೆಯ ಮಾರ್ಗವಾಗಿದೆ, ಅದು ಯಾವುದನ್ನೂ ಪ್ರತ್ಯೇಕಿಸುವುದಿಲ್ಲ.
ಕೃಷ್ಣನು ಏನಾದರೂ ಮಾಡಬೇಕೆಂದು ಇಚ್ಛಿಸಿದಾಗ, ಯಾರು ಏನೇ ಹೇಳಿದರೂ, ಅದನ್ನು ಹೇಗೆ ಮಾಡಬೇಕೋ ಹಾಗೆ ಮಾಡುತ್ತಿದ್ದ, ಅವನ ಜೀವನದಲ್ಲಿ ನಡೆದ ಅಂತಹ ಅನೇಕ ಘಟನೆಗಳು ಸಮುದಾಯದಲ್ಲಿ ಅವನನ್ನು ಒಬ್ಬ ಸಹಜ ನಾಯಕನನ್ನಾಗಿಸಿದ್ದವು.
ಕೃಷ್ಣನು - ಪಾಂಡವರು ಸಂಪೂರ್ಣವಾಗಿ ಶುದ್ಧ ಜನರು, ಕೌರವರೆಲ್ಲ ಪೂರ್ತಿ ಕೆಟ್ಟವರು ಎಂದು ನಂಬಿಕೊಂಡಿರಲಿಲ್ಲ. ಅವನು ಯಾರ ಬಗ್ಗೆಯೂ ಕಪ್ಪು-ಬಿಳುಪಿನ ತೀರ್ಪು ನೀಡುವ ನೈತಿಕ ವ್ಯಕ್ತಿಯಾಗಿರಲಿಲ್ಲ.
ಕೃಷ್ಣನು ಕೆಲವರೊಂದಿಗೆ ಅತ್ಯಂತ ದಯಾಳುವಾಗಿದ್ದನು ಮತ್ತು ಇನ್ನು ಕೆಲವರೊಂದಿಗೆ ಸಂಪೂರ್ಣವಾಗಿ ನಿರ್ದಯನಾಗಿದ್ದನು. ಅವನು ಸಂದರ್ಭ ಬಂದಾಗ ಕೊಲ್ಲುತ್ತಿದ್ದ ಮತ್ತು ಅಗತ್ಯವಿದ್ದಾಗ ಪೋಷಿಸುತ್ತಿದ್ದ. ಅವನು ಜೀವನವನ್ನು ಹೇಗೆ ನಡೆಸಬೇಕೋ ಹಾಗೆ ನಡೆಸುತ್ತಿದ್ದ, ಏಕೆಂದರೆ ಅವನಿಗೆ ತನ್ನದೇ ಆದ ನಿಯಮವೇನೂ ಇರಲಿಲ್ಲ. ಅವನು ಕೇವಲ ಜೀವಂತಿಕೆಯಾಗಿದ್ದ.
ನಾವು ಕೃಷ್ಣ ಎಂದು ಯಾವುದನ್ನು ಹೇಳುತ್ತೇವೆಯೋ ಅದು ಒಬ್ಬ ವ್ಯಕ್ತಿಯಲ್ಲ ಅದೊಂದು ಪ್ರಜ್ಞೆ.
ಉದ್ಧವನು ಒಮ್ಮೆ ಕೃಷ್ಣನನ್ನು ‘ಯಾಕೆ ನೀನು ದೇವರ ಅವತಾರವಾಗಿಯೂ ಜನರ ಸಮಸ್ಯೆಗಳನ್ನು ಚಿಟಿಕೆ ಹೊಡೆದಂತೆ ಪರಿಹರಿಸುವುದಿಲ್ಲ’ ಎಂದು ಕೇಳುತ್ತಾನೆ. ಕೃಷ್ಣನು ಮುಗುಳ್ನಗುತ್ತಾ ಹೇಳುತ್ತಾನೆ, ‘ಪಡೆಯುವವರು ಪರಿಪೂರ್ಣ ಶರಣಾಗತಿಯನ್ನು ಹೊಂದದೇ ಯಾರೂ ಪವಾಡವನ್ನು ಮಾಡಲಾಗುವುದಿಲ್ಲ.’
ಅವನ ಜೀವಿತಾವಧಿಯಲ್ಲಿ, ಕೃಷ್ಣನು ಅನೇಕ ಜನರಲ್ಲಿ ವಿಶ್ವಾಸವನ್ನು ಮೂಡಿಸಿದ್ದರೂ, ಅದು ಅವನ ಪೂರ್ಣಸ್ವರೂಪಕ್ಕೆ ತಕ್ಕಷ್ಟಾಗಿರಲಿಲ್ಲ. ಅದು ಯಾವಾಗಲೂ ಹಾಗೇ ಆಗುತ್ತದೆ – ಮಹಾನ್ ಚೇತನಗಳು ಬಂದಾಗ, ಮಹಾನ್ ಸಂಗತಿಗಳು ಸಂಭವಿಸಲಿಲ್ಲ, ಏಕೆಂದರೆ ಅವರು ತಮ್ಮ ಕಾಲಕ್ಕಿಂತ ಎಷ್ಟೋ ಮುಂದಿದ್ದರು.