ಯಾರು ಏನು ಬೇಕಾದರೂ ತಯಾರಿಸುತ್ತಿರಲಿ, ಅದೊಂದು ಸೇಫ್ಟಿ ಪಿನ್ ಆಗಿರಬಹುದು, ಕಂಪ್ಯೂಟರ್ ಆಗಿರಬಹುದು, ಬಹ್ಯಾಕಾಶ ನೌಕೆಯಾಗಿರಬಹುದು, ಅಥವಾ ಜನರಿಗೆ ಧ್ಯಾನ ಮಾಡುವುದನ್ನು ಕಲಿಸುವುದಿರಬಹುದು - ಪ್ರಪಂಚದಲ್ಲಿರುವುದು ಒಂದೇ ಒಂದು ವ್ಯವಹಾರ, ಅದು ಮಾನವ ಸೌಖ್ಯ ಎಂದು ಸದ್ಗುರುಗಳು ಹೇಳುತ್ತಾರೆ.

ಸದ್ಗುರು: ವ್ಯವಹಾರ ಯಾವುದೇ ಆಗಿರಲಿ, ಎಲ್ಲದರ ಮೂಲ ಉದ್ದೇಶ ಮನುಕುಲ ಸೌಖ್ಯವೇ. ಮಾನವಸೌಖ್ಯದ ಕುರಿತಾದ ವ್ಯವಹಾರವಷ್ಟೇ ನಿಜವಾದ ವ್ಯವಹಾರ. ಬೇರಲ್ಲಾ ವ್ಯವಹಾರಗಳೂ ಇದಕ್ಕೆ ಪೂರಕ ವ್ಯವಹಾರಗಳು ಅಷ್ಟೇ. ವ್ಯಾಪಾರ ಮುಖಂಡರು ಎಲ್ಲಿಯವರೆಗೆ ಈ ವಾಸ್ತವದ ಅರಿವನ್ನು ಹೊಂದಿರುತ್ತಾರೋ ಮತ್ತು ಮಾನವ ಸೌಖ್ಯವೊಂದೇ ಎಲ್ಲಕ್ಕಿಂತ ಮಿಗಿಲಾದ ವ್ಯವಹಾರ ಎಂದು ನಂಬಿರುತ್ತಾರೋ ಅಲ್ಲಿಯವರೆಗೆ ವ್ಯವಹಾರಗಳು ಉತ್ತಮವಾಗಿರುತ್ತದೆ.

ಮಾನವಸೌಖ್ಯದ ಕುರಿತಾದ ವ್ಯವಹಾರವಷ್ಟೇ ನಿಜವಾದ ವ್ಯವಹಾರ. ಬೇರಲ್ಲಾ ವ್ಯವಹಾರಗಳೂ ಇದಕ್ಕೆ ಪೂರಕ ವ್ಯವಹಾರಗಳು ಅಷ್ಟೇ.

ಇಂದು, ಕಂಪನಿಗಳು ಎಷ್ಟು ದೊಡ್ಡದಾಗಿವೆಯೆಂದರೆ, ಸಣ್ಣ ಸಣ್ಣ ರಾಷ್ಟ್ರಗಳನ್ನೇ ಖರೀದಿ ಮಾಡುವಷ್ಟು ಸಾಮರ್ಥ್ಯ ಹೊಂದಿರುತ್ತದೆ. ಇಷ್ಟಾದರೂ ಇನ್ನೂ ವ್ಯವಹಾರದ ಆಗುಹೋಗುಗಳನ್ನು ಒಂದು ತ್ರೈಮಾಸಿಕ ಬ್ಯಾಲನ್ಸ್ ಶೀಟ್ ನಿಂದ ಇನ್ನೊಂದು ತ್ರೈಮಾಸದ ಬ್ಯಾಲನ್ಸ್ ಶೀಟ್ ಹಿಡಿದೇ ಮಾಪನ ಮಾಡುತ್ತಾರೆ. ಒಬ್ಬ ರೈತನು ಒಂದು ಗಿಡವನ್ನು ನೆಟ್ಟರೆ, ಎಂಟರಿಂದ ಒಂಭತ್ತು ವರ್ಷ ಅದು ಮರವಾಗಿ ಕೊಡುವ ಫಲಗಳಿಗಾಗಿ ಕಾಯುತ್ತಾನೆ. ಬಹಳಷ್ಟು ಕಂಪೆನಿಗಳಿಗೆ ಇಂತಹ ದೀರ್ಘಾವಧಿ ಹೂಡಿಕೆಗಳಿಗೆ ಅವಕಾಶವಿದೆ. ಅವರು ಇದನ್ನು ಮಾನವ ಅರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೂಡಿದರೆ, ಹದಿನೈದು ವರ್ಷಗಳಲ್ಲಿ ಬೃಹತ್ ಮಾನವ ಸಂಪನ್ಮೂಲವೇ ಅವರಿಗೆ ಲಭ್ಯವಾಗುತ್ತದೆ. ಉದ್ಯೋಗಕ್ಕೆ ಸೇರ್ಪಡೆ ಮಾಡಿಕೊಳ್ಳುವಂತಹ ಸಮರ್ಥ ಮಾನವ ಸಂಪನ್ಮೂಲದ ಲಭ್ಯತೆ, ಇಂದು ಮಾರುಕಟ್ಟೆಯಲ್ಲಿ ವ್ಯವಹಾರ ವಿಸ್ತರಿಸುವಷ್ಟೇ ದೊಡ್ಡ ಸವಾಲಾಗಿದೆ. ನಾವು ಈ ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯನ್ನು ಬಿಟ್ಟು ಬಿಟ್ಟಿದ್ದೇವೆ. ನಾವು ಈ ಪ್ರಪಂಚದ ಸಂಪೂರ್ಣ ಜನಸಂಖ್ಯೆಗೆ ಆರ್ಥಿಕ ವ್ಯವಹಾರದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸದಿದ್ದರೆ ಯಾವುದೇ ವಿಚಾರದಲ್ಲಿ ಸಂಪೂರ್ಣ ಸಮರ್ಥತೆಯನ್ನು ತಲುಪಲು ಸಾಧ್ಯವಿಲ್ಲ.

ಕಳೆದ ಒಂದು ದಶಕದಲ್ಲಿ, ಹಲವಾರು ವ್ಯವಹಾರ ಮುಖಂಡರು ಸೇರುವ ಆರ್ಥಿಕ ಮತ್ತು ವ್ಯಾವಹಾರಿಕ ವೇದಿಕೆಗಳಲ್ಲಿ ಮಾತನಾಡಿದ್ದೇನೆ. ನಾನು ಗಮನಿಸಿದ್ದೇನೆಂದರೆ, ಯಾವ ನಾಯಕರೂ ದೀರ್ಘಾವಧಿ ಹೂಡಿಕೆಗಳ ಬಗ್ಗೆ ಅಷ್ಟಾಗಿ ಗಮನ ಕೊಟ್ಟಿಲ್ಲ. ಅವರ ಆಲೋಚನೆಗಳೆಲ್ಲಾ ಕೇವಲ ಪ್ರಸ್ತುತ ಪ್ರವೃತ್ತಿಗಳ ಮೇಲೆ ಹಾಗು ಹೇಗೆ ಸ್ಪಾರ್ಧತ್ಮಕವಾಗಿ ಮುನ್ನುಗ್ಗಬೇಕು ಎಂಬುದರ ಕಡೆಯೇ ಇದೆ. ಆದರೆ ಈಗೀಗ ನಿಧಾನವಾಗಿ ಚಿಂತೆನೆಗಳು ಬದಲಾಗುತ್ತಿದೆ. ಬಹಳಷ್ಟು ವ್ಯವಹಾರ ಮುಖಂಡರು ಒಳಗೂಡುವಿಕೆಯ ಅರ್ಥಶಾಸ್ತ್ರವು ದೀರ್ಘಕಾಲದಲ್ಲಿ ಸಹಾಯಕ ಎಂದು ಮನಗಂಡಿದ್ದಾರೆ. ಒಳಗೂಡುವಿಕೆ ಎಂದರೆ ಕೇವಲ ಉಳಿದ ಜನಸಂಖ್ಯೆಯನ್ನು ಸೇರಿಸಿಕೊಳ್ಳುವುದಷ್ಟೇ ಅಲ್ಲ, ಪರಿಸರ ಕಾಳಜಿಯನ್ನೂ ಬೆಳೆಸಿಕೊಳ್ಳಬೆಕು.

ಹಾಗೆಂದು ವ್ಯವಹಾರವನ್ನು ಧಾರ್ಮಿಕ ಸಂಸ್ಥೆಯಾಗಿ ಬಳಸಬೇಕೆಂದಲ್ಲ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ದಿನಗಳು ಮುಗಿದವು. ಯಾರೇ ಆದರೂ ತಮ್ಮ ಸೌಖ್ಯವು ಬೇರೊಬ್ಬರ ದಾನ-ಧರ್ಮದ ಮೇಲೆ ಅವಲಂಬಿತವಾಗಿರುವುದನ್ನು ಒಪ್ಪುವುದಿಲ್ಲ. ತಾವು ಯೋಗ್ಯರೆನಿಸಿಕೊಳ್ಳಬೇಕು, ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ತಾವು ಭಾಗಿಗಳಾಗಬೇಕು, ಅಂದರೆ ತನ್ನ ಹಾಗು ವಿವಿಧ ನಿಗಮಗಳ ನಡುವೆ ಸಮಾನ ಪಾಲುದಾರಿಕೆಯಿರಬೇಕು ಎಂಬ ಆಶಯವಿರುತ್ತದೆ. ನಿಗಮಗಳು ಮತ್ತು ಜನರು ತಮ್ಮದೇ ಆದ ಕೆಲವು ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಮಾನವ ಸಾಮರ್ಥ್ಯ ಮತ್ತು ನಿಗಮಗಳ ಸಾಮರ್ಥ್ಯವನ್ನು ಜೊತೆಗೂಡಿಸಿ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸಬಹುದು ಎಂದು ಯೋಚಿಸುವುದು ಮುಖ್ಯ.

ಮಾನವ ಸಾಮರ್ಥ್ಯ ಮತ್ತು ನಿಗಮಗಳ ಸಾಮರ್ಥ್ಯವನ್ನು ಜೊತೆಗೂಡಿಸಿ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸಬಹುದು ಎಂದು ಯೋಚಿಸುವುದು ಮುಖ್ಯ.

ದೀರ್ಘಕಾಲದ ಹೂಡಿಕೆಯೆಂದು ಪರಿಗಣಿಸಿ, ಆರರಿಂದ ಎಂಟು ವರ್ಷಗಳಲ್ಲಿ ನೈಪುಣ್ಯತೆಯ ಫಲಿತಾಂಶವನ್ನು ನೀಡುವಂತಹ ಕುಶಲ ಕರ್ಮಿಗಳನ್ನು ರೂಪಿಸಲು ಹೂಡಿಕೆಯನ್ನು ಮಾಡಬೇಕು. ಬೇರೆ ಬೇರೆ ಶೈಕ್ಷಣಿಕ ಪದ್ಧತಿಗಳಲ್ಲಿ ದೀರ್ಘಕಾಲಿಕ ಹೂಡಿಕೆ ಮಾಡುವ ಅವಶ್ಯಕತೆಯಿದೆ ಮತ್ತು ಇದು ಹೂಡಿಕೆದಾರನಿಗೂ ಲಾಭದಾಯಕವಾಗಿದೆ. ಇಲ್ಲವಾದಲ್ಲಿ ಒಂದು ನಿರ್ದಿಷ್ಟ ಯೋಜನೆ, ರಚನಾತ್ಮಕ ಚಿಂತೆನೆಗಳಿಲ್ಲದೆ, ಅವ್ಯವಸ್ಥೆ, ಗೊಂದಲಗಳನ್ನು ಅನುಭವಿಸಬೇಕಾಗುತ್ತದೆ. ಈ ಗೊಂದಲಗಳು ಹೊರಗಷ್ಟೇ ಅಲ್ಲದೆ, ಮನುಷ್ಯರ ಆಂತರ್ಯದಲ್ಲೂ ಆಗುತ್ತದೆ.

ಈಗಾಗಲೇ ಆರ್ಥಿಕ ಬೆಳವಣಿಗೆ, ಮತ್ತು ಸದವಕಾಶಗಳನ್ನು ಒದಗಿಸುತ್ತಾ, ಯಶಸ್ವೀ ವ್ಯವಹಾರ ನಾಯಕರಾಗಿರುವವರು ಕೂಡ ಒಳ-ಹೊರಗಿನ ಪ್ರಪಂಚವೆರಡರಲ್ಲೂ ಸಮತೋಲನ ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು. ಈಗಿನದಷ್ಟೇ ಅಲ್ಲದೆ, ಇನ್ನು ಮುಂದಿನದರ ಬಗ್ಗೆ ಒಂದು ನಿರ್ದಿಷ್ಟ ಸ್ಪಷ್ಟತೆ ಇರಬೇಕು. ಆ ಸ್ಪಷ್ಟತೆ ತಲುಪಲು ಸಾಧ್ಯವಾಗುವುದು ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ತಲುಪಿದಾಗ ಮಾತ್ರ.

ಸಂಪಾದಕರ ಟಿಪ್ಪಣಿ: “ಇನ್ನರ್ ಮ್ಯಾನೇಜ್ ಮೆಂಟ್“ ಸದ್ಗುರುಗಳ ಇಂಗ್ಲಿಷ್ ಪುಸ್ತಕವು ನಮ್ಮನ್ನು ಬಾಹ್ಯ ಪ್ರಭಾವಗಳಿಂದ ಮುಕ್ತರನ್ನಾಗಿಸುವ ಹೊಸ ಆಯಾಮದ ಬಗೆಗಿನ ಸದ್ಗುರುಗಳ ಜ್ಞಾನವನ್ನು ಹೊಂದಿದೆ. ಉಚಿತವಾಗಿ ಡೌನ್ ಲೋಡ್ ಮಾಡಲು ಬೆಲೆಯ ಸ್ಥಳದಲ್ಲಿ "0" ಒತ್ತಿ.