ಪ್ರ: ಸದ್ಗುರು, ಕೆಲವು ಅಭ್ಯಾಸಗಳನ್ನು ಸೂರ್ಯೋದಯದ ಮೊದಲು ಅಥವಾ ಸೂರ್ಯಾಸ್ತದ ನಂತರ ಮಾಡುವುದರ ಮಹತ್ವವೇನು?

ಸದ್ಗುರು: ಸೂರ್ಯ ನಮಸ್ಕಾರ ಮತ್ತು ಶಿವ ನಮಸ್ಕಾರದಂತಹ ಅಭ್ಯಾಸಗಳನ್ನು ಹಗಲು-ರಾತ್ರಿಗಳ ನಡುವಿನ ಸಂಧಿಸಮಯವಾದ ಪರಿವರ್ತನಾ ಸಮಯದಲ್ಲಿಯೇ ಅಭ್ಯಾಸ ಮಾಡಬೇಕು. ಸಂಧ್ಯಾಕಾಲಗಳಲ್ಲಿ, ಅಂದರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಸಮಸ್ತವೂ ಪರಿವರ್ತಿತವಾಗುವ ಸಮಯ. ನಿಮ್ಮ ಅಭ್ಯಾಸಗಳನ್ನು ಈ ಸಮಯದಲ್ಲಿ ಮಾಡುವುದರಿಂದ, ಸೀಮಿತತೆಯನ್ನು ದಾಟುವ ನಿಮ್ಮ ಸಾಮರ್ಥ್ಯ ಉತ್ತಮವಾಗಿರುತ್ತದೆ ಏದೆಂದರೆ ನಿಮ್ಮ ಪ್ರಾಣಶಕ್ತಿಯು ಪರಿವರ್ತನ ಅವಸ್ಥೆಯಲ್ಲಿ ಇರುತ್ತದೆ. ಇದು ಅನೇಕ ಅಂಶಗಳಲ್ಲಿ ಒಂದು.

ಬಹಳ ಶೆಖೆಯೇ? ಹಾಗಾದರೆ ಅಭ್ಯಾಸಕ್ಕೆ ಒಳ್ಳೆಯ ಸಮಯವಲ್ಲ!

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಎಲ್ಲ ಅಭ್ಯಾಸಗಳನ್ನು ಮಾಡಿದಾಗ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಉಷ್ಣವು ಉತ್ಪತ್ತಿಯಾಗುತ್ತದೆ. ಇಂಗ್ಲೀಷಿನಲ್ಲಿ “ಉಷ್ಣ” ಪದಕ್ಕೆ ಸಮಾನಾರ್ಥಕ ಪದವಿಲ್ಲ. ಆದರೆ ಹೀಟ್ ಎಂಬ ಪದವನ್ನು ಬಳಸುತ್ತಾರೆ. ಉಷ್ಣವೆಂದರೆ ತಾಪಮಾನವೆಂದು ಅರ್ಥ ಮಾಡಿಕೊಳ್ಳಬಾರದು. ಇದು ಮನುಷ್ಯನ ವ್ಯವಸ್ಥೆಯ ನಾನಾ ಕಾರ್ಯಗಳನ್ನು ನಿಯಂತ್ರಿಸುವ ಮೂರು ಅಂಶಗಳಲ್ಲಿ ಒಂದು, ಇನ್ನೆರಡು ಅಂಶಗಳು ಶೀತ ಮತ್ತು ಪಿತ್ತ. ಒಂದು ವೇಳೆ ನಿಮ್ಮ ಶರೀರದಲ್ಲಿ ಉಷ್ಣಾಂಶ ಹೆಚ್ಚಿದ್ದಲ್ಲಿ ಅಥವಾ ನಿಮ್ಮ ಸಮತ್ ಪ್ರಾಣ ಹೆಚ್ಚಿದ್ದಾಗ ನಿಮಗೆ ನಿಮ್ಮ ದೇಹ ಬಿಸಿಯಾಗಿದೆ ಎನಿಸುತ್ತದೆ. ಆದರೆ, ನಿಮ್ಮ ತಾಪಮಾನ ಪರೀಕ್ಷಿಸಿದಾಗ ಅದು ಮಾಮೂಲಿಯಾಗೆ ಇರುತ್ತದೆ. ಉಷ್ಣ ಎಂದರೆ ಜ್ವರ ಇರುವುದು ಎಂದಲ್ಲ, ಅದೊಂದು ಅನುಭವ ಅಷ್ಟೇ.

ಭಾರತದ ಉಷ್ಣ ವಲಯಗಳಲ್ಲಿ ಯೋಗದ ವಿಕಾಸನವಾಗಿದ್ದರಿಂದ ನಾವು ಪ್ರಾತಃಕಾಲ 8:30ರ ಮೊದಲು ಅಥವಾ ಸಾಯಂಕಾಲ 4:00 ಅಥವಾ 4:30ರ ನಂತರ ಯಾವುದೇ ಯೋಗಾಭ್ಯಾಸ ಮಾಡಲು ಒಳ್ಳೆಯ ಸಮಯ ಎಂದು ಹೇಳುತ್ತೇವೆ.

ಸಮತ್ ಪ್ರಾಣ ಅಥವಾ ಸಮಾನ ವಾಯು ದೇಹದ ಉಷ್ಣತೆಯನ್ನು ನಿರ್ವಹಿಸುತ್ತದೆ. ಒಬ್ಬ ಯೋಗಿಯು ತನ್ನ ಶರೀರವನ್ನು ಯಾವಾಗಲು ಸ್ವಲ್ಪ ಬೆಚ್ಚಗೇ ಇರಿಸಿಕೊಳ್ಳಲು ಬಯಸುತ್ತಾನೆ ಏಕೆಂದರೆ, ಉಷ್ಣತೆಯು ತೀವ್ರತೆ ಮತ್ತು ಚೈತನ್ಯವನ್ನು ಸೂಚಿಸುತ್ತದೆ. ಶರೀರವು ಒಂದು ನಿಗದಿತ ಹಂತಕ್ಕಿಂತ ಹೆಚ್ಚು ತಣ್ಣಗಾದರೆ, ಜಡತ್ವವನ್ನು ಉಂಟು ಮಾಡುತ್ತದೆ. ಬಹುತೇಕ ಎಲ್ಲಾ ಅಭ್ಯಾಸಗಳು ನಿಮ್ಮನ್ನು ಸಾಮಾನ್ಯ ಜನರ ಮಟ್ಟವನ್ನು ಮೀರಿ ಎತ್ತರದ ಮಟ್ಟಕ್ಕೆ ಕೊಂಡಯ್ಯಲು ರೂಪಿತವಾಗಿವೆ. ಉನ್ನತ ಮಟ್ಟವೆಂದರೆ ಹೆಚ್ಚಿನ ಜೀರ್ಣ ಶಕ್ತಿಯೆಂದಲ್ಲ. ಹಾಗೇನಾದರೂ ಜೀರ್ಣ ಶಕ್ತಿ ಹೆಚ್ಚಾದರೆ, ನೀವು ಶಾರೀರಿಕವಾಗಿ ಬಳಲುತ್ತೀರಿ.

ನಿಮ್ಮ ಚೈತನ್ಯವು ಉನ್ನತ ಸ್ಥಾಯಿಯಲ್ಲಿದ್ದರೆ, ನಿಮ್ಮ ಶರೀರವು ಬಹಳ ಸುಲಭವಾಗಿ ಕೆಲಸ ಮಾಡುತ್ತದೆ. ನಾವು ಇದನ್ನು ಮೂರರಿಂದ ಆರು ವಾರಗಳಲ್ಲಿ ನಿಮಗೆ ನಿರೂಪಿಸುತ್ತೇವೆ. ನೀವು ಕೆಲವು ಅಭ್ಯಾಸಗಳನ್ನು ಮಾಡಿ ನಿಮ್ಮ ಚೈತನ್ಯವನ್ನು ಒಂದು ಮಟ್ಟಕ್ಕೆ ತರಲು ಸಾಧ್ಯವಾದರೆ, ನಿಮ್ಮ ಭೌತಿಕ ಅಂಶಗಳು ನಿರಾಯಾಸವಾಗಿ ಸಾಗುತ್ತವೆ. ನಿಮ್ಮ ಚೈತನ್ಯವು ಕಡಿಮೆ ಇದ್ದರೆ, ನಿಮ್ಮ ದೇಹವು ಜೀವನ ಪ್ರಕ್ರಿಯೆಗಳನ್ನು ನಡೆಸಲು ಹೆಚ್ಚಿನ ಒತ್ತಡದಿಂದ ಕೆಲಸ ಮಾಡುತ್ತದೆ, ನಿಮ್ಮ ವ್ಯವಸ್ಥೆಯು ಕುಗ್ಗುತ್ತದೆ. ನಿಮ್ಮ ಶಾರೀರಿಕ ಸಂಚಲನ ತನ್ನದೇ ಗತಿಯಲ್ಲಿದ್ದರೆ, ನಿಮ್ಮ ಮನಸ್ಸು ಕ್ಷೋಭೆಗೊಳ್ಳುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ.

ನಾವು ಯೋಗಾಭ್ಯಾಸಗಳನ್ನು ಮಾಡುವುದರಿಂದ ನಮ್ಮ ಶಾರೀರಿಕ ಉಷ್ಣಾಂಶವು ಹೆಚ್ಚುತ್ತದೆ ಎಂಬ ಅರಿವು ನಮಗಿದೆ. ಹೊರಗಿನ ತಾಪಮಾನವೂ ಹೆಚ್ಚಿದ್ದು ನಮ್ಮ ಉಷ್ಣಾಂಶವೂ ಒಂದು ಹಂತಕ್ಕಿಂತ ಹೆಚ್ಚಾದಾಗ ಜೀವಕೋಶಗಳಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ಯೋಗಾಭ್ಯಾಸಗಳನ್ನು ಯಾವಾಗಲೂ ತಂಪಾದ ಹೊತ್ತಿನಲ್ಲಿ ಮಾಡುತ್ತದೆ. ಹಗಲು-ರಾತ್ರಿ ನಡುವಿನ ಪರ್ವಕಾಲದಲ್ಲಿ ಆಗುವ ಪರಿವರ್ತನೆಯು ನಮ್ಮ ವ್ಯವಸ್ಥೆಯಲ್ಲುಂಟಾಗುವ ಘರ್ಷಣೆಯನ್ನು ನಿಗ್ರಹಿಸುತ್ತದೆ. ಆಗ ಉಷ್ಣಾಂಶವು ಕಡಿಮೆ ಉತ್ಪತ್ತಿಯಾಗುತ್ತದೆ. ಯೋಗದ ವಿಕಸನವು ಭಾರತದ ಉಷ್ಣ ವಲಯಗಳಲ್ಲಿ ಆಗಿದ್ದರಿಂದ ನಾವು ಪ್ರಾತಃಕಾಲ 8:30ರ ಮೊದಲು ಅಥವಾ ಸಾಯಂಕಾಲ 4:00 ಅಥವಾ 4:30ರ ನಂತರ ಯಾವುದೇ ಯೋಗಾಭ್ಯಾಸಗಳನ್ನು ಮಾಡಲು ಒಳ್ಳೆಯ ಸಮಯ ಎಂದು ಹೇಳುತ್ತೇವೆ.

ಯೋಗ ಮತ್ತು ಧ್ಯಾನದಲ್ಲಿ ಸಂಧಿಕಾಲ

Click Image to Enlarge

Infographic - The Sadhaka's Timings

ಯೋಗಾಭ್ಯಾಸದಿಂದ ನಿಮ್ಮನ್ನು ನೀವೇ ಮರುರೂಪಿಸಿಕೊಳ್ಳುತ್ತೀರಿ. ನಿಮಗೆ ನಿಮ್ಮ ತಂದೆ-ತಾಯಿಯರ ಬಗ್ಗೆ ಅಪಾರವಾದ ಗೌರವ ಇದೆಯಾದರೂ, ಅವರು ನಿಮ್ಮನ್ನು ರೂಪಿಸಿದ ರೀತಿಯಲ್ಲೇ ಅಥವಾ ಅವರಂತೆಯೇ ಇರುವುದೂ ಸಾಧ್ಯವಿಲ್ಲ. ನೀವು ಅದಕ್ಕಿಂತ ಹೆಚ್ಚಾಗಿ ಅಥವಾ ಬೇರೆಯೇ ರೀತಿಯಲ್ಲಿ ಇರಲು ಬಯಸುತ್ತೀರಿ. ನೀವು ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಮಾತ್ರ ಮಾರ್ಪಾಡಾದರೆ, ನಿಮ್ಮ ಜೀವನದ ಒಂದು ಹಂತದಲ್ಲಿ ಮತ್ತೆ ಯಥಾಸ್ಥಾನಕ್ಕೆ ಬಂದಿರುತ್ತೀರಿ. ಬಹಳ ಜನರು ತಮ್ಮ ಹದಿನೆಂಟನೇ ವಯಸ್ಸಿನಲ್ಲಿ, “ಇಲ್ಲ, ಸಾಧ್ಯವೇಇಲ್ಲ” ಎಂದು ತಮ್ಮ ತಂದೆ-ತಾಯಿಯರ ವಿರುದ್ಧ ಹೋದವರು, 45 ತಲುಪವಷ್ಟರಲ್ಲಿ ಅವರ ನಡೆ, ನುಡಿ, ವರ್ತನೆ ಎಲ್ಲವೂ ಅವರಂತೆಯೇ ಆಗಿರುತ್ತದೆ, ಏಕೆಂದರೆ ಮಾನಸಿಕ ಬದಲಾವಣೆಗಳು ಅಲ್ಲಿಯವರೆಗಷ್ಟೇ ಉಳಿಯುವುದು.

ನೀವು ಭವಿಷ್ಯದ ಜೀವಿಯಾಗಲು ಬಯಸಿದರೆ, ನಿಮ್ಮ ಮೂಲ ಮರುರೂಪಾಂತರ ಅನಿವಾರ್ಯ. ಯೋಗಾಭ್ಯಾಸದಿಂದ ಇದನ್ನು ಸಾಧ್ಯವಾಗಿಸುವುದೇ ನಮ್ಮ ಪ್ರಯತ್ನ- ನಾವು ನಮ್ಮನ್ನು ಸಂಪೂರ್ಣವಾಗಿ ಬೇರೆಯೇ ರೀತಿಯಲ್ಲಿ ಮರುರೂಪಾಂತರಗೊಳಿಸುವುದು.

ನಮ್ಮ ಮನೋಭಾವದ ಬದಲಾವಣೆಗಳು ದೀರ್ಘಕಾಲಿಕವಲ್ಲ. ಕೆಲವು ಸಮಯದ ನಂತರ ಜೀವನದಲ್ಲಿ ಪರಿಸ್ಥಿತಿಗಳು ಬದಲಾದಂತೆ ನಿಮ್ಮ ಅರಿವು ಕಡಿಮೆಗೊಳ್ಳುತ್ತದೆ, ಮತ್ತೆ ಯಥಾಸ್ಥಾನದಲ್ಲಿ ತಂದು ನಿಲ್ಲಿಸುತ್ತದೆ. ನೀವು ಹೀಗಿರುವುದಕ್ಕೆ ಕಾರಣ ನಿಮ್ಮ ತಂದೆ ಅಥವಾ ವಂಶವಾಹಿ ಎಂದೆಲ್ಲಾ ಹೇಳಿಕೊಂಡರೆ, ನೀವೊಂದು ಪೂರ್ವಕಾಲದ ಜೀವಿ ಎಂದಾಗುತ್ತದೆ. ನೀವು ಭವಿಷ್ಯದ ಜೀವಿಯಾಗಲು ಬಯಸಿದರೆ, ನಿಮ್ಮ ಮೂಲ ಮರುರೂಪಾಂತರ ಅತ್ಯಗತ್ಯ. ಯೋಗಾಭ್ಯಾಸದಿಂದ ಇದನ್ನು ಸಾಧ್ಯವಾಗಿಸುವುದೇ ನಮ್ಮ ಪ್ರಯತ್ನ- ನಾವು ನಮ್ಮನ್ನೇ ಸಂಪೂರ್ಣವಾಗಿ ಬೇರೆಯೇ ರೀತಿಯಲ್ಲಿ ಮರುರೂಪಾಂತರಗೊಳಿಸುವುದು.

ಗ್ರಹಗಳ ಶಕ್ತಿಯ ಒಂದು ನಿಖರವಾದ ಪರಿವರ್ತನಾ ಸಮಯವಾದ ಸಂಧ್ಯಾಕಾಲ ಇದನ್ನು ಮಾಡಲು ಸೂಕ್ತವಾದ ಸಮಯ, ಆಗ ನಮ್ಮ ವ್ಯವಸ್ಥೆಯಲ್ಲಿನ ಘರ್ಷಣೆಗಳೂ ಕಡಿಮೆಯಾಗಿ ನಮ್ಮ ಮರುರೂಪಾಂತರವು ಸುಲಭವಾಗಿ ಆಗುತ್ತದೆ. ಬೇರೆ ಬೇರೆ ಅಂಶಗಳೂ ಇವೆ, ಆದರೆ ಯೋಗಾಭ್ಯಾಸವನ್ನು ಪ್ರಾತಃಕಾಲ ಮತ್ತು ಸಂಧ್ಯಾ ಕಾಲದಲ್ಲಿ ಮಾಡುವ ಮೂಲ ಕಾರಣಗಳೇ ಇವು.

ಬಹ್ಮ ಮುಹೂರ್ತ - ಅಧ್ಯಾತ್ಮ ಪ್ರಕ್ರಿಯೆಗಳಿಗೆ ಅತ್ಯಂತ ಸೂಕ್ತ ಸಮಯ

ನಿಮ್ಮ ಅಧ್ಯಾತ್ಮ ಪ್ರಗತಿಯಲ್ಲಿ ನೀವು ಅನಿರೀಕ್ಷಿತ ಬೆಳವಣಿಗೆಯನ್ನು ಕಾಣಬೇಕೆಂದರೆ, ನಿಮ್ಮ ಯೋಗಾಭ್ಯಾಸವನ್ನು ಸೂರ್ಯೋದಯಕ್ಕಿಂತ ಮೊದಲು ಮಾಡಬೇಕು, ಅಂದರೆ ಸಾಮಾನ್ಯವಾಗಿ ಯೋಗಾಭ್ಯಾಸ ಪ್ರಾರಂಭಿಸುವ ಸಮಯ ಬ್ರಹ್ಮ ಮುಹೂರ್ತ- ರಾತ್ರಿಯ ಕೊನೆಯ ಯಾಮ - ಬೆಳಗಿನ ಜಾವ 3:30 ರಿಂದ 5:30, ಅಥವಾ 6:00 ಅಥವಾ ಸೂರ್ಯೋದಯ ಸಮಯ. ಆ ಸಮಯದಲ್ಲಿ ನೀವು ಅಭ್ಯಾಸವನ್ನು ನಿರ್ದಿಷ್ಟ ರೀತಿಯಲ್ಲಿ ಮಾಡಿದರೆ, ನೀವು ಒಂದು ನಿರ್ದಿಷ್ಟ ಪ್ರಕ್ರಿಯೆಗೆ ಸಹಜವಾಗಿಯೇ ಜಗೃತರಾಗುತ್ತೀರಿ. ನೀವು ಯೋಗಾಸನಗಳನ್ನು ಅಭ್ಯಾಸ ಮಾಡುತ್ತಿದ್ದು ಒಮ್ಮೆ ನಿಮ್ಮ ಜೈವಿಕ ವ್ಯವಸ್ಥೆಯು ಈ ಗ್ರಹದ ಜೈವಿಕ ವ್ಯವಸ್ಥೆಯೊಂದಿಗೆ ಹೊಂದಿಕೊಂಡುಬಿಟ್ಟರೆ, ಪ್ರತಿ ಮುಂಜಾನೆ, ನೀವಾಗಿಯೇ ನಿರಾಯಾಸವಾಗಿ 3:20 ರಿಂದ 3:40ರ ಒಳಗೆ ಎದ್ದುಬಿಡುತ್ತೀರಿ.

ನೀವು ನಿಮ್ಮ ಭೌತಿಕ ಸ್ವಭಾವದ ಎಲ್ಲೆಮೀರಬೇಕಾದಲ್ಲಿ ಅಥವಾ ನಾವು ‘ಅಧ್ಯಾತ್ಮ’ವೆನ್ನುವ ಆಯಾಮದ ಅರಿವು ನಿಮಗೆ ಆಗಬೇಕೆಂದರೆ, ನಿಮ್ಮಅಭ್ಯಾಸಕ್ಕೆ ಬ್ರಹ್ಮ ಮಹೂರ್ತವು ಅತ್ಯಂತ ಸೂಕ್ತವಾದ ಸಮಯ

ಇದೊಂದು ತಪ್ಪೊಪ್ಪಿಗೆ ಎಂದುಕೊಳ್ಳಬೇಡಿ, ಆದರೆ ಇದು ನನಗೆ ಹೆಮ್ಮೆಯ ವಿಷಯ.- ಏನೆಂದರೆ, ಚಿಕ್ಕವನಿದ್ದಾಗ, ಅಲ್ಲದೇ ಸ್ವಲ್ಪ ದೊಡ್ಡವನಾದ ನಂತರವೂ ಕೂಡ, ಅದೇನೇ ಆಗಲಿ - ಬೆಳಗ್ಗೆ ಎದ್ದೇಳಲು ಆಗುತ್ತಿರಲಿಲ್ಲ. ನನ್ನ ಪರಿವಾರದ ಎಲ್ಲರಿಗೂ ನನ್ನನ್ನು ಎಬ್ಬಿಸಲು ಏನಿಲ್ಲವೆಂದರೂ ಒಂದು ಘಂಟೆ ಸಮಯ ಆಗುತ್ತಿತ್ತು. ಸ್ವಲ್ಪ ಸಮಯದ ನಂತರ ನನ್ನನ್ನು ಕೂಗುವುದಾಗಲೀ, ಅಲುಗಾಡಿಸುವುದಾಗಲೀ ಬಿಟ್ಟು ಬಿಟ್ಟರು, ಏಕೆಂದರೆ ಏನು ಮಾಡಿದರೂ ನಾನು ಏಳುತ್ತಿರಲಿಲ್ಲ. ಹಾಗಾಗಿ ಅವರು ನನ್ನನ್ನು ಅನಾಮತ್ತಾಗಿ ಕೂರಿಸುತ್ತಿದ್ದರು. ನಾನು ಎದ್ದು ಕೂರುತ್ತಿದ್ದೆ, ಮತ್ತೆ ಹಾಗೆಯೆ ನಿದ್ದೆ ಮಾಡುತ್ತಿದ್ದೆ.

ನಂತರ ಅವರು ನನ್ನನ್ನು ಹಾಸಿಗೆಯಿಂದ ಎಳೆದುಕೊಂಡು ಹೋಗುತ್ತಿದ್ದರು. ನನ್ನ ತಾಯಿಯು ಬ್ರಶ್ ಗೆ ಟೂತ್-ಪೇಸ್ಟ್ ಹಾಕಿ ನನ್ನ ಕೈಗೆ ಕೊಡುತ್ತಿದ್ದರು. ಅದನ್ನು ಬಾಯಲ್ಲಿಟ್ಟುಕೊಂಡು ನಿದ್ದೆ ಮಾಡಿಬಿಡುತ್ತಿದ್ದೆ. ಬ್ರಶ್ ಮಾಡಿದ ನಂತರ, ನನ್ನ ಅಮ್ಮ “ಶಾಲೆಗೆ ಹೋಗುವ ಮುಂಚೆ ಸ್ನಾನ ಮಾಡು” ಎನ್ನುತ್ತಿದ್ದರು. ನಾನು ಬಚ್ಚಲು ಮನೆಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ, ಹಾಗೆಯೇ ನಿದ್ದೆಗೆ ಜಾರುತ್ತಿದ್ದೆ. ಆದರೆ, ಒಮ್ಮೆ ಎಚ್ಚರವಾದರೆ ನನ್ನನ್ನು ಯಾರೂ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನನ್ನನ್ನು ಎಬ್ಬಿಸುವುದು ಮಾತ್ರ ಸಾಹಸವೇ ಆಗಿತ್ತು. ಯಾರೂ ಎಬ್ಬಿಸದೇ ಹೋದರೆ, ಮಧ್ಯಾಹ್ನದವರಿಗೂ ಮಲಗಿರುತ್ತಿದ್ದೆ. ಬಹಳ ಹಸಿವಾದಾಗ ಮಾತ್ರ ಎದ್ದೇಳುತ್ತಿದ್ದೆ - ಇಲ್ಲವಾದರೆ, ನಾನು ಏಳುವುದೇ ಅಸಾಧ್ಯವಾಗಿತ್ತು.

ನಾನು 11ನೇ ವಯಸ್ಸಿನಲ್ಲಿ ಯೋಗಾಭ್ಯಾಸವನ್ನು ಪ್ರಾರಂಭಿಸಿದೆ. 12 ರಿಂದ 18 ತಿಂಗಳ ನಂತರ, ಮತ್ತು ಅವಾಗಿನಿಂದಲೂ ಹೇಗಾಗುತ್ತಿದೆಯೆಂದರೆ, ನಾನು ಯಾವಾಗಲೂ 3:40 ಕ್ಕಿಂತ ಮೊದಲೇ ಎಚ್ಚರಗೊಂಡಿರುತ್ತೇನೆ. ನಾನು ಮತ್ತೆ ಮಲಗವುದು ಅಥವಾ ಎದ್ದಿರುವುದು ನಾನು ರಾತ್ರಿ ಎಷ್ಟು ಹೊತ್ತಿಗೆ ಮಲಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಆದರೆ, ಪ್ರತಿದಿನ, ನಾನು ಯಾವುದೇ ಸಮಯ ವಲಯದಲ್ಲಿರಲಿ, ಆ ಸಮಯಕ್ಕೆ ಸರಿಯಾಗಿ ನನಗೆ ಎಚ್ಚರವಾಗುತ್ತದೆ. ಏಕೆಂದರೆ, ನೀವು ಕೆಲವು ನಿಗದಿತ ಅಭ್ಯಾಸವನ್ನು ರೂಢಿಸಿಕೊಂಡರೆ, ನಿಮ್ಮ ಜೈವಿಕ ವ್ಯವಸ್ಥೆಯು ಈ ಗ್ರಹದ ಜೈವಿಕ ವ್ಯವಸ್ಥೆಯೊಂದಿಗೆ ಏಕವಾಗುತ್ತದೆ. 3:40 ಯಾರೋ ನಿಗದಿ ಪಡಿಸಿರುವ ಸಮಯವಲ್ಲ. ಮಾನವ ವ್ಯವಸ್ಥೆಯಲ್ಲಿರುವ ಒಂದು ಅಂಶವು ಈ ಗ್ರಹದ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ನೀವು ಆ ಸಮಯಕ್ಕೆ ಎಚ್ಚರಗೊಳ್ಳುವಂತೆ ಮಾಡುತ್ತದೆ.

ನೀವು ನಿಮ್ಮ ಭೌತಿಕ ಸ್ವಭಾವದ ಎಲ್ಲೆಮೀರಬೇಕಾದಲ್ಲಿ ಅಥವಾ ನಾವು ‘ಅಧ್ಯಾತ್ಮ’ವೆನ್ನುವ ಆಯಾಮದ ಅರಿವು ನಿಮಗೆ ಆಗಬೇಕೆಂದರೆ, ನಿಮ್ಮಅಭ್ಯಾಸಕ್ಕೆ ಬ್ರಹ್ಮ ಮಹೂರ್ತವು ಅತ್ಯಂತ ಸೂಕ್ತವಾದ ಸಮಯ. ಆದರೆ ಭೌತಿಕ ಆರೋಗ್ಯವಷ್ಟೇ ನಿಮ್ಮ ಉದ್ದೇಶವಾಗಿದ್ದರೆ, ಆಗ ಸೂರ್ಯೋದಯದ ಸಮಯದ್ಲಲಿ ಬರುವ ಸಂಧ್ಯಾ ಕಾಲವು ಅಭ್ಯಾಸಗಳನ್ನು ಮಾಡಲು ಸೂಕ್ತ ಸಮಯವಾಗುತ್ತದೆ.

ಸಂಪಾದಕರ ಟಿಪ್ಪಣಿ: ಈಶಾ ಹಠ ಯೋಗ ಶಾಲೆಯ 21- ವಾರಗಳ ಹಠ ಯೋಗ ಅಧ್ಯಾಪಕರ ತರಬೇತಿ ಕಾರ್ಯಕ್ರಮದಲ್ಲಿ ಸದ್ಗುರುಗಳು ನಡೆಸಿದ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ. ಈ ಕಾರ್ಯಕ್ರಮವು ಯೋಗ ವ್ಯವಸ್ಥೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಅಪ್ರತಿಮವಾದ ಒಂದು ಅವಕಾಶವನ್ನು ಒದಗಿಸುತ್ತದೆ ಮತ್ತು ಹಠ ಯೋಗವನ್ನು ಹೇಳಿಕೊಡುವ ಪ್ರಾವೀಣ್ಯತೆಯನ್ನು ಒದಗಿಸುತ್ತದೆ. ಮುಂದಿನ 21- ವಾರಗಳ ಹಠ ಯೋಗ ಕಾರ್ಯಕ್ರಮವು ಜುಲೈ 16ರಿಂದ ಡಿಸೆಂಬರ್ 11, 2019ರವರೆಗೆ. ಮತ್ತಷ್ಟು ಮಾಹಿತಿಗಾಗಿ www.ishahathayoga.com ಗೆ ಭೇಟಿ ಕೊಡಿ ಅಥವಾ info@ishahatayoga.comಮೇಲ್ ಮಾಡಿ.

ಈ ಲೇಖನದ ಒಂದು ಆವೃತ್ತಿ ಮೂಲತಃ ಈಶಾ ಫಾರೆಸ್ಟ್ ಫ್ಲವರ್, ಅಕ್ಟೊಬರ್ 2015ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು PDF ಆಗಿ ಡೌನ್ ಲೋಡ್ ಮಾಡಿಕೊಳ್ಳಿ “ನಿಮ್ಮ ದರವನ್ನು ನಮೂದಿಸಿ, ಯಾವುದೇ ಕನಿಷ್ಠ ದರ ಇಲ್ಲ” ಅಥವಾ ಮುದ್ರಿತ ಆವೃತ್ತಿಗಾಗಿ ಚಂದಾದಾರರಾಗಿ.