ಚರ್ಮದ ಸಂರಕ್ಷಣೆಯಲ್ಲಿ, ಕ್ಯಾನ್ಸರ್ ಮತ್ತು ಬ್ಯಾಕ್ಟೀರಿಯಾಗಳನ್ನು ಎದುರಿಸಲು ಹಾಗೂ ಯೋಗ ಸಾಧನೆಯಲ್ಲಿ ಬಳಸಬಹುದಾದಂತಹ ಬೇವಿನ ಅನೇಕ ಔಷದೀಯಗುಣಗಳು ಮತ್ತು ಅದರ ಉಪಯೋಗಗಳ ಕುರಿತು ಸದ್ಗುರುಗಳು ತಿಳಿಸುತ್ತಾರೆ.

ಸದ್ಗುರು: ಬೇವು ಒಂದು ಅದ್ವಿತೀಯ ವೃಕ್ಷವಾಗಿದೆ. ಬೇರೆಲ್ಲಾ ಎಲೆಗಳಿಗೆ ಹೋಲಿಸಿದರೆ ಅದರ ಎಲೆಗಳು ಅತ್ಯಂತ ಸಂಕೀರ್ಣವಾದವು. ಬೇವಿನ ವೃಕ್ಷವು ಸುಮಾರು ೧೩೦ ವಿವಿಧ ಜೈವಿಕವಾಗಿ ಕ್ರಿಯಾಶೀಲ ಸಂಯುಕ್ತ ವಸ್ತುಗಳನ್ನು (compounds) ಹೊಂದಿದೆ ಮತ್ತು ಈ ಭೂಮಿಯ ಮೇಲೆ ನಾವು ಕಾಣಬಹುದಾದ ಅತ್ಯಂತ ಸಂಕೀರ್ಣವಾದ ಎಲೆಗಳಲ್ಲಿ ಒಂದಾಗಿದೆ.

Click Image to Enlarge
Embed this infographic

The Benefits and Uses of Neem, the "Wonder Leaf"

#1 ಕ್ಯಾನ್ಸರ್ ವಿರುದ್ಧ ಬೇವಿನ ಉಪಯೋಗಗಳು

ಪ್ರತಿದಿನವೂ ಬೇವಿನ ಎಲೆಯನ್ನು ಸೇವಿಸುತ್ತಿದ್ದರೆ ಕ್ಯಾನ್ಸರ್ ಜೀವಕೋಶಗಳು ಒಂದು ನಿರ್ದಿಷ್ಟ ಮಿತಿಯೊಳಗಿರುತ್ತವೆ

ಬೇವಿಗೆ ಅತ್ಯದ್ಭುತವಾದ ಔಷಧೀಯ ಗುಣಗಳಿವೆ. ಅದರಲ್ಲಿ ಅತ್ಯಂತ ಪ್ರಮುಖವಾದುದೆಂದರೆ, ಅದು ಕ್ಯಾನ್ಸರ್ ಜೀವಕೋಶಗಳನ್ನು ಸಂಹರಿಸುತ್ತದೆ. ಪ್ರತಿಯೋರ್ವರಲ್ಲಿಯೂ ಕ್ಯಾನ್ಸರ್ ಜೀವಕೋಶಗಳಿವೆ. ಆದರೆ, ಸಾಮಾನ್ಯವಾಗಿ ಅವು ಅವ್ಯವಸ್ಥಿತ ರೀತಿಯಲ್ಲಿರುತ್ತವೆ. ಆದರೆ ನೀವು ಒಂದು ರೀತಿಯ ಸನ್ನಿವೇಶವನ್ನು ದೇಹದೊಳಗೆ ರೂಪಿಸಿಕೊಂಡರೆ, ಅವು ವ್ಯವಸ್ಥಿತಗೊಳ್ಳುವುವು. ಅವು ತಮ್ಮ ಪಾಡಿಗೆ ತಾವು ಸುಮ್ಮನೆ ದೇಹದಲ್ಲಿ ಸುತ್ತಾಡುತ್ತಿರುವವರೆಗೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅವೆಲ್ಲವೂ ಒಟ್ಟಾಗಿ ಒಂದೇ ಕಡೆಯಲ್ಲಿ ಸೇರಿ ಒಂದಕ್ಕೊಂದು ಸಂಪರ್ಕಕ್ಕೆ ಬಂದಾಗ, ಆಗ ಸಮಸ್ಯೆಯು ಉದ್ಭವಿಸುತ್ತದೆ. ಇದು ಸಣ್ಣಪುಟ್ಟ ಅಪರಾಧಗಳಿಂದ, ಒಂದು ವ್ಯವಸ್ಥಿತ ಜಾಲಕ್ಕೆ ಬದಲಾಗುವಂತೆ. ಆಗ ಅದೊಂದು ಗಂಭೀರವಾದ ಸಮಸ್ಯೆಯಾಗುತ್ತದೆ. ನೀವು ಪ್ರತಿನಿತ್ಯವೂ ಬೇವಿನ ಎಲೆಗಳನ್ನು ಸೇವಿಸುತ್ತಿದ್ದರೆ, ಅವು ಶರೀರದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಒಂದು ನಿರ್ದಿಷ್ಟ ಮಿತಿಯೊಳಗೆ ಇರಿಸುತ್ತವೆ. ಆದ್ದರಿಂದ ಅವು ನಿಮ್ಮ ಶರೀರದ ವಿರುದ್ಧ ಗುಂಪುಕಟ್ಟಿ ಒಂದಾಗುವುದಿಲ್ಲ.

#2 ಬೇವಿನ ಬ್ಯಾಕ್ಟೀರಿಯಾ-ಮಾರಕ ಗುಣ

ಪ್ರಪಂಚವು ಬ್ಯಾಕ್ಟೀರಿಯಾಗಳಿಂದ ತುಂಬಿದೆ. ಶರೀರವೂ ಹಾಗೆಯೇ. ನೀವು ಕಲ್ಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಸೂಕ್ಷ್ಮಜೀವಿಗಳು ನಿಮ್ಮೊಳಗೆ ವಾಸಿಸುತ್ತಿವೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಿಮಗೆ ಸಹಾಯಕಾರಿ; ಅವುಗಳಿಲ್ಲದೆ ನೀವು ಏನನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ನಿಜಾಂಶವೆಂದರೆ ಅವುಗಳಿಲ್ಲದೆ ನೀವು ಜೀವಿಸಲಾರಿರಿ. ಆದರೆ ಕೆಲವು ಬ್ಯಾಕ್ಟೀರಿಯಾಗಳು ನಿಮಗೆ ತೊಂದರೆಯನ್ನುಂಟುಮಾಡಬಹುದು. ಈ ಬ್ಯಾಕ್ಟೀರಿಯಾಗಳನ್ನು ನಿರ್ವಹಿಸಲು ನಿಮ್ಮ ಶರೀರವು ನಿರಂತರವಾಗಿ ಶಕ್ತಿಯನ್ನು ವ್ಯಯಿಸುತ್ತದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಲು ಇದ್ದರೆ ನೀವು ಶಕ್ತಿ ಹೀನತೆಯನ್ನು ಅನುಭವಿಸುವಿರಿ. ಏಕೆಂದರೆ ನಿಮ್ಮ ರಕ್ಷಣಾ ವ್ಯವಸ್ಥೆಯು ಅವುಗಳೊಡನೆ ಹೋರಾಡಲು ಅಧಿಕ ಪ್ರಮಾಣದಲ್ಲಿ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಬೇವನ್ನು ಶರೀರದೊಳಗಡೆ ಮತ್ತು ಹೊರಗಡೆ ಬಳಸಿದಾಗ, ಈ ಬ್ಯಾಕ್ಟೀರಿಯಾಗಳು ಅಧಿಕವಾಗಿ ವೃದ್ಧಿಗೊಳ್ಳದಂತೆ ನಿಯಂತ್ರಿಸಬಹುದು. ಹೀಗಾದಾಗ ಶರೀರವು ಅವುಗಳೊಡನೆ ಹೋರಾಡಲು ಅಧಿಕ ಶಕ್ತಿಯನ್ನು ವ್ಯಯಿಸಬೇಕಾಗಿರುವುದಿಲ್ಲ. ನೀವು ಒಂದು ನಿರ್ದಿಷ್ಟ ಪ್ರಮಾಣದ ಬೇವನ್ನು ಪ್ರತಿನಿತ್ಯವೂ ಸೇವಿಸುತ್ತಿದ್ದರೆ, ಅದು ನಿಮ್ಮ ಕರುಳಿನಲ್ಲಿ ತೊಂದರೆ ನೀಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದು, ಮತ್ತು ದೊಡ್ಡ ಕರಳು ಸ್ವಚ್ಛವಾಗಿದ್ದು, ಯಾವುದೇ ಸೋಂಕಿಲ್ಲದೆ ಇರುತ್ತದೆ. 

ಶರೀರದ ಒಳಗಡೆ ಮತ್ತು ಹೊರಗಡೆ ಬೇವನ್ನು ಬಳಸಿದಾಗ, ಬ್ಯಾಕ್ಟೀರಿಯಾಗಳು ಅಧಿಕವಾಗಿ ವೃದ್ಧಿಗೊಳ್ಳುವುದನ್ನು ತಡೆಯಬಹುದು

ಶರೀರದ ನಿರ್ದಿಷ್ಟ ಪ್ರದೇಶಗಳಲ್ಲಿ ಸ್ವಲ್ಪ ವಾಸನೆ ಇದ್ದರೆ, ಬ್ಯಾಕ್ಟೀರಿಯಾಗಳು ಸ್ವಲ್ಪ ಹೆಚ್ಚು ಚಟುವಟಿಕೆಯಿಂದ ಕೂಡಿವೆ ಎಂದರ್ಥ. ಹೆಚ್ಚು ಕಡಿಮೆ ಪ್ರತಿಯೋರ್ವರಿಗೂ ಚರ್ಮದ ಕೆಲವು ಸಣ್ಣ ಸಮಸ್ಯೆಗಳಿರುತ್ತವೆ, ಅದರೆ ನೀವು ಬೇವಿನಿಂದ ಶರೀರವನ್ನು ತೊಳೆಯುತ್ತಿದ್ದರೆ ಅದು ಹೆಚ್ಚು ಶುದ್ಧವಾಗಿರುತ್ತದೆ ಹಾಗೂ ಹೊಳಪಿನಿಂದ ಕೂಡಿರುತ್ತದೆ. ನೀವು ಸ್ವಲ್ಪ ಬೇವನ್ನು ಅರೆದು ಪೇಸ್ಟ್ ಮಾಡಿಕೊಂಡು ಅದನ್ನು ಸ್ನಾನಕ್ಕಿಂತ ಮೊದಲು ಶರೀರಕ್ಕೆ ಲೇಪಿಸಿಕೊಂಡು ಸ್ವಲ್ಪ ಒಣಗಲು ಬಿಟ್ಟು ನಂತರ ಚೆನ್ನಾಗಿ ನೀರಿನಿಂದ ತೊಳೆದುಕೊಂಡರೆ, ಅದು ಬ್ಯಾಕ್ಟೀರಿಯಾಗಳ ವಿರುದ್ಧ ಶುದ್ಧಿಕಾರಕದಂತೆ ಕೆಲಸ ಮಾಡುತ್ತದೆ. ಮತ್ತೊಂದು ರೀತಿಯೆಂದರೆ, ರಾತ್ರಿಯಲ್ಲಿ ಕೆಲವು ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಆ ನೀರಿನಿಂದ ಸ್ನಾನ ಮಾಡುವುದು.

#3 ಯೋಗ ಸಾಧನೆಯಲ್ಲಿ ಬೇವು

ಎಲ್ಲದಕ್ಕಿಂತ ಹೆಚ್ಚಾಗಿ, ಬೇವು ಶರೀರದಲ್ಲಿ ಶಾಖವನ್ನುಂಟು ಮಾಡುತ್ತದೆ. ಅಂಗ ವ್ಯವಸ್ಥೆಯೊಳಗೆ ತೀವ್ರತರವಾದ ವಿವಿಧ ಶಕ್ತಿಗಳನ್ನು ಉತ್ಪಾದಿಸಲು, ಬೇವಿನಿಂದ ಉಂಟಾದ ಶಾಖವು ನೆರವಾಗುತ್ತದೆ. ವಿವಿಧ ಗುಣಗಳು ಶರೀರದಲ್ಲಿ ಪ್ರಧಾನವಾಗಿರಬಹುದು. ಅವುಗಳಲ್ಲಿ ಎರಡನ್ನು ಸಾಂಪ್ರದಾಯಿಕವಾಗಿ ಶೀತ ಮತ್ತು ಉಷ್ಣ ಎನ್ನಲಾಗಿದೆ. ಶೀತಕ್ಕೆ ಇಂಗ್ಲೀಷ್‌ನಲ್ಲಿ ಬಹಳ ಹತ್ತಿವಾಗಿರುವ ಶಬ್ದ “cold”, ಆದರೆ ಅದು ವಾಸ್ತವವಾಗಿ ಅದೇ ಅಲ್ಲ. ನಿಮ್ಮ ಶರೀರ ವ್ಯವಸ್ಥೆಯು ಶೀತದ ಕಡೆಗೆ ಸಾಗಿದರೆ, ಶರೀರದಲ್ಲಿ ಕಫದ ಮಟ್ಟವು ಅಧಿಕವಾಗುವುದು. ಶರೀರದಲ್ಲಿನ ಹೆಚ್ಚಿನ ಕಫವು ಅನೇಕ ತೊಂದರೆಗಳನ್ನು ಉಂಟುಮಾಡಬಹುದು. ಸಾಮಾನ್ಯ ನೆಗಡಿ ಮತ್ತು ಸೈನಸೈಟಿಸ್ ಹಿಡಿದು ಬೇರೆ ತೊಂದರೆಗಳೂ ಆಗಬಹುದು.

ಬೇವು ಶರೀರದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಇದು ಶರೀರದಲ್ಲಿ ತೀವ್ರತರನಾದ ವಿವಿಧ ಶಕ್ತಿಗಳನ್ನು ಹುಟ್ಟು ಹಾಕುತ್ತದೆ

ಒಬ್ಬ ಹಠಯೋಗಿಗೆ ಬೇವು ವಿಶೇಷವಾಗಿ ಪ್ರಮುಖವಾಗಿದೆ. ಏಕೆಂದರೆ ಅದು ಶರೀರವನ್ನು ಸ್ವಲ್ಪ ಉಷ್ಣದೆಡೆಗೆ ನೆಲೆಗೊಳಿಸುತ್ತದೆ. ’ಉಷ್ಣ’ ಎಂದರೆ ನಿಮ್ಮಲ್ಲಿ ಸ್ವಲ್ಪ ಅಧಿಕ ಇಂಧನ ಇದೆ ಎಂದರ್ಥ. ಅರಿಯದ ಆಯಾಮವನ್ನು ಅರಸುವ ಸಾಧಕನಿಗೆ ಅಧಿಕ ಪ್ರಮಾಣದ ಇಂಧನವನ್ನು ಹೊಂದಿರುವುದು ಕ್ಷೇಮಕರವಾಗಿದೆ, ಏಕೆಂದರೆ ಶರೀರಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದಾಗ ಅದರ ಪೂರೈಕೆಗಾಗಿ ಸಾಧಾರಣ ಮಟ್ಟದ ಅವಶ್ಯಕತೆಗಿಂತಲೂ ಸ್ವಲ್ಪ ಹೆಚ್ಚಿನ ಅಗ್ನಿಯನ್ನು ಧಾರಣೆಮಾಡಬೇಕಾಗುತ್ತದೆ. ನಿಮ್ಮ ದೇಹವು ಶೀತದ ಸ್ಥಿತಿಯಲ್ಲಿದ್ದರೆ ಅತಿ ಹೆಚ್ಚಿನ ಚಟುವಟಿಕೆಗಳನ್ನು ಮಾಡಲಾಗುವುದಿಲ್ಲ. ಆದರೆ ನಿಮ್ಮ ಶರೀರವನ್ನು ಅಗತ್ಯಕ್ಕಿಂತಲೂ ಸ್ವಲ್ಪ ಹೆಚ್ಚಿನ ಉಷ್ಣ ಸ್ಥಿತಿಯಲ್ಲಿಟ್ಟರೆ, ನೀವು ಪ್ರಯಾಣ ಮಾಡಿದರೂ ಸಹ, ಹೊರಗಡೆ ತಿಂದರೆ ಅಥವಾ ಬೇರೆ ಇನ್ಯಾವುದಕ್ಕೋ ಗುರಿಪಡಿಸಿಕೊಂಡರೆ ನಿಮ್ಮಲ್ಲಿನ ಹೆಚ್ಚಿನ ಅಗ್ನಿಯನ್ನು ನೀವು ವ್ಯಯಿಸಿ, ಬಾಹ್ಯ ಪ್ರಭಾವಗಳನ್ನು ನಿರ್ವಹಿಸುವಿರಿ. ಬೇವು ಈ ದಿಕ್ಕಿನಲ್ಲಿ ಒಳ್ಳೆಯ ಬೆಂಬಲವನ್ನು ನೀಡುವುದು.

ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಅತ್ಯಧಿಕವಾಗಿ ಸೇವಿಸಿದಾಗ ಬೇವು ವೀರ್ಯಾಣುಗಳನ್ನು ನಾಶಪಡಿಸುತ್ತದೆ. ಗರ್ಭವತಿಯರು ಗರ್ಭಧರಿಸಿದ ಮೊದಲ ನಾಲ್ಕರಿಂದ ಐದು ತಿಂಗಳವರೆಗೆ ಭ್ರೂಣವು ಬೆಳೆಯುತ್ತಿರುವಾಗ ಬೇವನ್ನು ಸೇವಿಸಬಾರದು. ಬೇವು ಅಂಡಾಣುಗಳಿಗೆ ಯಾವುದೇ ಹಾನಿ ಉಂಟುಮಾಡದೇ ಇದ್ದರೂ, ಅಧಿಕವಾದ ಶಾಖವನ್ನು ಉತ್ಪತ್ತಿ ಮಾಡುತ್ತದೆ. ಸ್ತ್ರೀಯು ಆಗತಾನೆ ಗರ್ಭಧಾರಣೆ ಮಾಡಿದ್ದರೆ, ಶರೀರದಲ್ಲಿನ ಅತಿಯಾದ ಶಾಖದಿಂದ ಆಕೆಯ ಭ್ರೂಣವನ್ನು ಕಳೆದುಕೊಳ್ಳಬಹುದು. ಸ್ತ್ರೀಯು ಗರ್ಭಧರಿಸುವ ಯೋಚನೆಯನ್ನು ಹೊಂದಿದ್ದರೆ, ಆಕೆಯು ಬೇವನ್ನು ಸೇವಿಸಬಾರದು. ಏಕೆಂದರೆ ಅಲ್ಲಿ ಅಧಿಕ ಶಾಖ ಉತ್ಪತ್ತಿಯಾಗಿ ಶರೀರವು ಶಿಶುವಿನ ಭ್ರೂಣವನ್ನು ಬಾಹ್ಯವಸ್ತುವನ್ನಾಗಿ ಪರಿಗಣಿಸುವುದು.

ಗರ್ಭಧರಿಸಲು ಯೋಚಿಸುತ್ತಿರುವ ಸ್ತ್ರೀಯು ಬೇವನ್ನು ಸೇವಿಸಬಾರದು ಏಕೆಂದರೆ, ಅದರಿಂದ ಹೆಚ್ಚಿನ ಶಾಖ ಉತ್ಪತ್ತಿಯಾಗುತ್ತದೆ

ಶಾಖವು ಹೆಚ್ಚಾದರೆ, ಶರೀರದಲ್ಲಿ ಕೆಲವು ನಿರ್ದಿಷ್ಟವಾದ ಬದಲಾವಣೆಗಳಾಗುವುದು - ಪುರುಷರಿಗಿಂತಲೂ ಸ್ತ್ರೀಯರಿಗೆ ಇದರ ಹೆಚ್ಚು ಅರಿವಾಗುತ್ತದೆ. ಉಷ್ಣವು ಶರೀರದ ಸಾಮಾನ್ಯ ಕ್ರಿಯೆಗಳ ಮೇಲೆ ಪರಿಣಾಮ ಬೀರಿದರೆ ನಾವು ಸಾಮಾನ್ಯವಾಗಿ ಉಷ್ಣವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುತ್ತೇವೆ. ಆದರೆ ಸಾಧನೆ ಮಾಡುವವರಿಗಾಗಿ ಸಾಮಾನ್ಯವಾಗಿ ನಾವು ಬೇವನ್ನು ವರ್ಜಿಸಲು ಅಪೇಕ್ಷಿಸುವುದಿಲ್ಲ. ಅವರಿಗೆ ಸ್ವಲ್ಪ ಪ್ರಮಾಣದ ಉಷ್ಣವು ಅಗತ್ಯವಾಗಿರುತ್ತದೆ. ಕೆಲವು ಸ್ತ್ರೀಯರು ಬೇವನ್ನು ಪ್ರತಿದಿನ ಸೇವಿಸುತ್ತಿದ್ದರೆ ಅವರ ಋತುಚಕ್ರದ ಅವಧಿಯು ಕಡಿಮೆಯಾಬಹುದು. ಹಾಗೆ ಆದಲ್ಲಿ ಅವರು ಹೆಚ್ಚು ನೀರನ್ನು ಕುಡಿಯಬೇಕು. ಉಷ್ಣವನ್ನು ಕಡಿಮೆ ಮಾಡಲು ಕೇವಲ ನೀರು ಸಾಲದಿದ್ದರೆ, ಒಂದು ನಿಂಬೆಹಣ್ಣಿನ ಚೂರು ಅಥವಾ ½ ನಿಂಬೆಹಣ್ಣಿನ ರಸವನ್ನು ನೀರಿಗೆ ಸೇರಿಸಬೇಕು. ಅದೂ ಸಾಲದಿದ್ದಲ್ಲಿ ಒಂದು ಲೋಟದಷ್ಟು ಬೂದುಗುಂಬಳಕಾಯಿಯ ರಸವನ್ನು ಸೇವಿಸಬೇಕು. ಅದು ತಂಪನ್ನು ನೀಡುತ್ತದೆ. ಮತ್ತೊಂದು ಆಯ್ಕೆ ಎಂದರೆ ಹರಳೆಣ್ಣೆ. ಅದನ್ನು ಸ್ವಲ್ಪ ನಿಮ್ಮ ಹೊಕ್ಕಳಿಗೆ, ಅನಾಹತದಲ್ಲಿ (ಶ್ವಾಸಕೋಶದ ಎಲುಬುಗಳು ಎದೆಯಲ್ಲಿ ಸೇರುವ ಸ್ವಲ್ಪ ಕೆಳಗೆ ಇರುವ ಕುಳಿ), ಗಂಟಲ ಕುಳಿಯಲ್ಲಿ ಮತ್ತು ಕಿವಿಗಳ ಹಿಂದೆ ಸವರಿದರೆ ಅದು ಶರೀರವನ್ನು ತಂಪಾಗಿಸುತ್ತದೆ.

ಸಂಪಾದಕರ  ಟಿಪ್ಪಣಿ: ಶೇಕಡ ನೂರರಷ್ಟು ಪ್ರಾಕೃತಿಕ ಬೇವಿನ ಪುಡಿ ಈಶ ಅಂಗಡಿಯಲ್ಲಿ ಲಭ್ಯ.

ಭಾರತದಲ್ಲಿ ಖರೀದಿಸಿ

ಅಮೇರಿಕಾದಲ್ಲಿ ಖರೀದಿಸಿ