ದೀರ್ಘಕಾಲಿಕ ಕಾಯಿಲೆಗಳಿಗೆ ಕಾರಣ – ಒಂದು ವಿಷಪೂರಿತ ರಸಾಯನ
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ನಾವು ಉತ್ಪಾದಿಸುವ ಆಲೋಚನೆಗಳು ಮತ್ತು ಭಾವನೆಗಳಿಂದ ನಮ್ಮ ಶರೀರದಲ್ಲಿರುವ ರಾಸಾಯನಿಕ ಮಿಶ್ರಣವು ವಿಷಪೂರಿತಗೊಳ್ಳುವ ಮೂಲಕ ಹೇಗೆ ರೋಗಗಳುಂಟಾಗುತ್ತವೆ ಎಂದು ವಿವರಿಸುತ್ತಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ನಾವು ಉತ್ಪಾದಿಸುವ ಆಲೋಚನೆಗಳು ಮತ್ತು ಭಾವನೆಗಳಿಂದ ನಮ್ಮ ಶರೀರದಲ್ಲಿರುವ ರಾಸಾಯನಿಕ ಮಿಶ್ರಣವು ವಿಷಪೂರಿತಗೊಳ್ಳುವ ಮೂಲಕ ಹೇಗೆ ರೋಗಗಳುಂಟಾಗುತ್ತವೆ ಎಂದು ವಿವರಿಸುತ್ತಾರೆ.
ಪ್ರಶ್ನೆ : ಸದ್ಗುರುಗಳೇ, ನೀವು ಹಿಂದಿನ ಸತ್ಸಂಗದಲ್ಲಿ ಶೇ.70ರಷ್ಟು ಖಾಯಿಲೆಗಳು ಮನಸ್ಸಿನಿಂದ ಸೃಷ್ಟಿಸಲ್ಪಡುತ್ತವೆ ಎಂದು ಹೇಳಿದ್ದೀರಿ. ಹಾಗಾದರೆ, ಅದರ ಹಿಂದಿನ ಭಾವನಾತ್ಮಕ ಮತ್ತು ಆಲೋಚನಾತ್ಮಕ ಮಾದರಿ ಏನಿರುತ್ತದೆ, ಮತ್ತು ಅದನ್ನು ಸರಿಪಡಿಸುವುದು ಹೇಗೆ?
ಸದ್ಗುರು :ನೀವು ಫ್ರಾಯ್ಡ್‍ನ ಶಿಷ್ಯರಂತೆ ಮಾತನಾಡುತ್ತಿದ್ದೀರಿ. ಇತ್ತೀಚೆಗೆ, ಸಾರ್ವಜನಿಕಗೊಂಡ ಕೆಲವು ಪತ್ರಗಳು ಆಧುನಿಕ ಮನೋವಿಶ್ಲೇಷಣಾಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಈ ಮನುಷ್ಯ ಎಷ್ಟೊಂದು ಟೊಳ್ಳು ಎನ್ನುವದನ್ನು ಬಯಲುಮಾಡಿವೆ. ಅದನ್ನು ಸಮೀಪಿಸುವ ವಿಧಾನ ಇದಲ್ಲ.
ನಿಮಗೊಂದು ಹೋಲಿಕೆಯನ್ನು ನೀಡುವುದಾದರೆ – ನಿಮ್ಮ ಬಲಗೈ ಹುಚ್ಚುಚ್ಚಾಗಿ ಆಡುತ್ತಿದೆ ಎಂದುಕೊಳ್ಳೋಣ, ಅದು ನಿಮ್ಮನ್ನು ಪ್ರತಿದಿನ ಹೊಡೆಯುವುದು, ಹಿಸುಕುವುದು ಮತ್ತು ಹಿಂಸಿಸುವುದನ್ನು ಮಾಡಿದರೆ ಅದು ರೋಗವಲ್ಲವೇ? ಖಂಡಿತವಾಗಿಯೂ ಹೌದು. ನಿಖರವಾಗಿ ನಿಮ್ಮ ಮನಸ್ಸು ಮಾಡುತ್ತಿರುವುದು ಇದನ್ನೇ. ಅದು ಹುಚ್ಚಾಗಿ ಆಡುತ್ತಿದೆ, ನಿಮ್ಮನ್ನು ನೋಯಿಸುತ್ತಿದೆ, ಚುಚ್ಚುತ್ತಿದೆ, ನಿಮ್ಮನ್ನು ಅಳಿಸುತ್ತಿದೆ, ಹಿಂಸಿಸುತ್ತಿದೆ – ಇದು ಖಾಯಿಲೆಯಲ್ಲವೇ? ಆದರೆ ನಿಮ್ಮ ಜೊತೆ ಬಹಳ ಜನ ಇದ್ದಾರೆ – ನೀವು ರೋಗಿಗಳ ಸೈನ್ಯವನ್ನೇ ಕಟ್ಟಬಹುದು ಅಷ್ಟು ಜನರಿದ್ದಾರೆ. ರೋಗಿಗಳಾಗಲೀ ಅಥವಾ ಬೇರೆಯವರಾಗಲಿ, ನಿಮ್ಮ ಮುಂದೆ ಒಂದು ಸೈನ್ಯವಿದ್ದಾಗ, ಅವರೊಂದಿಗೆ ವಾದ ಮಾಡುವುದು ವ್ಯರ್ಥವೇ ಸರಿ – ಅವರಿಗೆ ಒಂದು ನಮಸ್ಕಾರ ಮಾಡಿ, ಮುಂದೆ ಹೋಗಿ ಅಷ್ಟೆ. ಬಹಳ ಜನ ಜ್ಞಾನಿಗಳು ಮಾಡಿದ್ದು ಅದನ್ನೇ – ಅವರು ಸುಮ್ಮನೆ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಂಡರು.
ಅನಾರೋಗ್ಯವು ಶರೀರದಲ್ಲಿ ಹಲವಾರು ರೀತಿಗಳಲ್ಲಿ ಪ್ರಕಟಗೊಳ್ಳಬಹುದು. ಮನಸ್ಸಿನ ಮಟ್ಟದಲ್ಲಿ ನಡೆಯುವ ಪ್ರತಿಯೊಂದು ಆಲೋಚನೆ, ಪ್ರತಿಯೊಂದು ಕಂಪನವು ನಿಮ್ಮ ರಾಸಾಯನಿಕತೆಯನ್ನು ಬದಲಾಯಿಸುತ್ತದೆ. ನೀವು ಹುಲಿಗಳ ಬಗ್ಗೆ ಯೋಚಿಸುತ್ತಿರುವಿರಿ ಎಂದುಕೊಳ್ಳೋಣ, ಆಗ ಒಂದು ರೀತಿಯ ರಾಸಾಯನಿಕ ಬದಲಾವಣೆ ಆಗುತ್ತದೆ. ನೀವು ಹೂವುಗಳ ಬಗ್ಗೆ ಯೋಚಿಸಿದಾಗ, ಇನ್ನೊಂದು ರೀತಿಯ ರಾಸಾಯನಿಕ ಬದಲಾವಣೆ ಆಗುತ್ತದೆ. ನೀವು ಸೃಷ್ಟಿಸುವ ಆಲೋಚನೆಗಳ ರೀತಿಯನ್ನು ಆಧರಿಸಿ, ನೀವು ಒಂದು ಕೊಳಕಾದ, ವಿಷಯುಕ್ತ ಮಿಶ್ರಣವನ್ನು ತಯಾರಿಸಬಹುದು.
ನೀವು ಈ ವಿಷಮಯ ಮಿಶ್ರಣದಲ್ಲಿ ಪ್ರತಿನಿತ್ಯ ಮುಳುಗುತ್ತಿದ್ದರೆ, ನೀವು ಚೆನ್ನಾಗಿರಬಹುದೇ? ಇಂದು, ನಾವು ತಿನ್ನುವ, ಕುಡಿಯುವ, ಉಸಿರಾಡುವ ಪದಾರ್ಥಗಳ ಮೇಲೆ ಸೀಮಿತವಾದ ನಿಯಂತ್ರಣವನ್ನು ಹೊಂದಿದ್ದೇವೆ – ಎಲ್ಲವೂ ಸ್ವಲ್ಪವಾದರೂ ವಿಷಮಯವಾಗಿದೆ. ಜಗತ್ತು ಯಾವುದೋ ಒಂದು ರೀತಿಯಲ್ಲಿ ನಿಮಗೆ ವಿಷವುಣಿಸಲು ಪ್ರಯತ್ನಿಸುತ್ತಿದೆ, ಆದರೆ ನೀವು ಕಾರ್ಖಾನೆಗಳ ಸಹಾಯದ ಮೇಲೆ ಆಧರಿಸಿರದೇ, ನಿಮಗೆ ನೀವೇ ಸಹಾಯ ಮಾಡಿಕೊಂಡರೆ, ನಿಮ್ಮ ಪ್ರಯತ್ನವನ್ನಾಧರಿಸಿ ನಿಮಗೆ ಯಶಸ್ಸು ಲಭ್ಯವಾಗುತ್ತದೆ. “ಸ್ವ-ಸಹಾಯ ಎನ್ನುವುದು ಅತ್ಯುತ್ತಮ ಸಹಾಯ” ಎನ್ನುವುದು ಗೊತ್ತಲ್ಲವೇ..?
ಪ್ರಾಚೀನ ಸಮಾಜಗಳು ಯಾವಾಗಲೂ ಖಾಯಿಲೆಯನ್ನು ಒಂದು ಸಮಸ್ಯೆ ಎಂದು ಪರಿಗಣಿಸಿದ್ದರು – ಒಬ್ಬ ಮನುಷ್ಯ ಯಾವುದೇ ರೀತಿಯ ಖಾಯಿಲೆಯಿಂದ ನರಳಬಾರದು. ಆದರೆ ಆಧುನಿಕ ಸಮಾಜಗಳು ಖಾಯಿಲೆಯನ್ನು ಸಾಮಾನ್ಯವೆಂದು ತಿಳಿದಿವೆ, ಏಕೆಂದರೆ ಅದನ್ನು ಆಧರಿಸಿ ಒಂದು ಇಡೀ ಉದ್ಯಮವೇ ಇದೆ. ಭೂಮಿಯ ಮೇಲಿನ ಅತಿ ಬೃಹತ್ ಉದ್ಧಿಮೆಗಳಲ್ಲಿ ಔಷಧ ಉದ್ಯಮವೂ ಒಂದು, ಅಂದರೆ ಕೊಳಕಾದ ಮಿಶ್ರಣ ಹೆಚ್ಚಿನ ಪ್ರಮಾಣದಲ್ಲಿ ಇದೆ. ಪ್ರತಿದಿನ, ಅದು ಚೆನ್ನಾಗಿರಬೇಕೆಂದು ನೀವು ಏನನ್ನಾದರೂ ಅದಕ್ಕೆ ಸೇರಿಸುತ್ತಿರಬೇಕು. ನೀವು ಇಚ್ಛಿಸುವುದಾದರೆ, ನಾವು ಇದನ್ನು ಯಾವುದೇ ಹೊರಗಿನ ರಾಸಾಯನಿಕಗಳಿಲ್ಲದೇ, ಒಂದು ಅದ್ಭುತವಾದ ಮಿಶ್ರಣವನ್ನಾಗಿ ಮಾಡಬಹುದು. ಒಮ್ಮೆ ನಿಮ್ಮ ರಾಸಾಯನಿಕತೆ ಒಂದು ಅದ್ಭುತವಾದ ಸ್ಥಿತಿಯಲ್ಲಿದ್ದರೆ, ಆನಂದದಿಂದ ಇರುವುದು ಸಹಜವಾಗಿಬಿಡುತ್ತದೆ. ಆ ರೀತಿಯಲ್ಲಿ, ಈ ಭೂಮಿಯಿಂದ ಶೇ.70 ರಷ್ಟು ವ್ಯಾಧಿಗಳು ಮಾಯವಾಗಿಬಿಡುತ್ತವೆ. ಉಳಿದ 30% ರೋಗಗಳಿಗೆ ಅನೇಕ ಹೊರಗಿನ ಕಾರಣಗಳಿರುತ್ತವೆ, ಅವು ಯಾವಾಗಲೂ ನಮ್ಮ ಕೈಯಲ್ಲಿರುವುದಿಲ್ಲ. ಆದರೆ ನೀವು ಒಳಗಿನಿಂದ ಏನನ್ನು ಮಾಡುತ್ತಿದ್ದೀರೋ ಅದು ಶೇ.100 ರಷ್ಟು ನಿಮ್ಮ ನಿಯಂತ್ರಣದಲ್ಲಿದೆ.
ನೀವು ನಿಮ್ಮೊಳಗೆ ನಿರಂತರವಾಗಿ ಕೊಳಕಾದ ರಾಸಾಯನಿಕತೆಯನ್ನು ಸೃಷ್ಟಿಸುತ್ತಿದ್ದರೆ, ನಿಮ್ಮೊಳಗಿರುವ ಜೀವನವು ನೀವು ಶ್ರೇಯಸ್ಸನ್ನು ಅರಸುತ್ತಿದ್ದೀರಿ ಎಂಬುದನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ? ಅದು ನೀವು ರೋಗಗಳನ್ನು ಇಷ್ಟಪಡುತ್ತೀರಿ ಎಂದು ತಿಳಿದು ನಿಮಗೆ ಅವುಗಳನ್ನು ನೀಡುತ್ತದೆ ಅಷ್ಟೆ. ಕೆಲವರಿಗೆ ಸುಲಭಕ್ಕೆ ಜಗ್ಗದ ಗಟ್ಟಿಮುಟ್ಟಾದ ಶರೀರವಿರುತ್ತದೆ – ಇನ್ನು ಕೆಲವರಿಗೆ ಮೊದಲನೇ ಪೆಟ್ಟಿಗೇ ಉರುಳುವಷ್ಟು ಸೂಕ್ಷ್ಮವಾದ ಶರೀರವಿರುತ್ತದೆ. ಆದರೆ ನೀವು ನಿಮ್ಮೊಳಗಿನಿಂದ ಉತ್ಪಾದಿಸುವ ಆಲೋಚನೆ ಮತ್ತು ಭಾವನೆಗಳ ಮೂಲಕ ನಿಮ್ಮ ಶರೀರವನ್ನು ವಿಷಮಯಗೊಳಿಸಿದರೆ, ಇಂದೋ ನಾಳೆಯೋ, ಅದು ನಿಮ್ಮನ್ನು ಜರ್ಜರಿತಗೊಳಿಸುತ್ತದೆ.
Editor’s Note: Isha Kriya is a simple but powerful 15-minute guided meditation available online. Daily practice of Isha Kriya brings health, dynamism, peace and wellbeing. It is a powerful tool to cope with the hectic pace of modern life.
This article is based on an excerpt from the May 2014 issue of Forest Flower. Pay what you want and download. (set ‘0’ for free). Print subscriptions are also available.