ಒಬ್ಬ ಕಳ್ಳನನ್ನು ಸೋಲಿಸುವುದು ಹೇಗೆ ? - ಒಂದು ಝೆನ್ ಕಥೆ
ರೂಢಿಯಿಂದ ಕಳ್ಳನಾಗಿದ್ದ ಒಬ್ಬನು ಪದೇ ಪದೇ ಸಿಕ್ಕಿಬೀಳುತ್ತಿದ್ದ. ಅಂಥವನನ್ನು ಸರಿಮಾಡುವುದು ಹೇಗೆ? ಈ ಎರಡು ಕಥೆಗಳು ನಮಗೆ ಶಿಕ್ಷೆ, ಅನುಕಂಪ ಮತ್ತು ಮನುಷ್ಯ ಸ್ವಭಾವಗಳ ಕುರಿತು ಒಳನೋಟವನ್ನು ನೀಡುತ್ತವೆ.
ತಡೆಯಲಾಗದಷ್ಟು ಹಸಿವು ಮತ್ತು ಬಡತನದಲ್ಲಿ ಬೇಯುತ್ತಿದ್ದ ವ್ಯಕ್ತಿಯೊಬ್ಬ ಸಣ್ಣ ಪುಟ್ಟ ಕಳ್ಳತನಗಳಲ್ಲಿ ತೊಡಗಿದ್ದ. ಅವನನ್ನು ಜೈಲಿಗೆ ಹಾಕಲಾಯಿತು, ನಂತರ ಅವನು ಅಲ್ಲಿಂದ ಹಲವಾರು ಬಾರಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ, ಆದರೆ ಸಫಲನಾಗದೆ ಸಿಕ್ಕಿಬೀಳುತ್ತಿದ್ದ. ಪ್ರತಿ ಬಾರಿಯೂ ಅವನ ಸೆರೆಮನೆ ವಾಸದ ಅವಧಿ ಹೆಚ್ಚಾಗುತ್ತಿತ್ತು. ಕೊನೆಗೆ, ಅನೇಕ ವರ್ಷಗಳ ನಂತರ, ಅವನು ಮತ್ತೊಮ್ಮೆ ಹೊರ ಜಗತ್ತಿಗೆ ಬಂದ.
ಚಳಿ ಮತ್ತು ಹಸಿವು ಅವನನ್ನು ಹಿಂಸಿಸುತ್ತಿದ್ದವು. ಅವನ ಬಳಿ ಹಣವಿರಲಿಲ್ಲ ಮತ್ತು ಒಂದು ಹೊತ್ತಿನ ಊಟವನ್ನು ಗಳಿಸಲೂ ಸಹ ಯಾವುದೇ ದಾರಿಯಿರಲಿಲ್ಲ. ಯಾರೊಬ್ಬರೂ ಒಬ್ಬ ಮಾಜಿ ಅಪರಾಧಿಯನ್ನು ನಂಬಿ ಕೆಲಸ ಕೊಡಲು ತಯಾರಿರಲಿಲ್ಲ. ಅವನು ಹಲವು ಕಡೆಗಳಲ್ಲಿ ಅಲೆದಾಡಿದ, ಆದರೆ ಎಲ್ಲಿ ಹೋದರೂ ಅವನನ್ನು ಓಡಿಸಿಬಿಡುತ್ತಿದ್ದರು. ಒಂದು ಹಳ್ಳಿಯಲ್ಲಿ ಜನರಿಂದ ಪೆಟ್ಟು ತಿಂದಮೇಲೆ, ಆ ಹಳ್ಳಿಯ ಪುಜಾರಿ ಮನೆಯಲ್ಲಿ ಅವನಿಗೆ ಆಶ್ರಯ ಸಿಕ್ಕಿತು.
ಆ ಪೂಜಾರಿ ತನ್ನನ್ನು ಅಷ್ಟೊಂದು ಮರ್ಯಾದೆಯಿಂದ ಸ್ವಾಗತಿಸುತ್ತಾನೆಂದು ಅವನು ಎಣಿಸಿರಲಿಲ್ಲ: “ಇದು ದೇವರ ಮನೆ. ಪಾಪಿಯಾಗಲಿ ಅಥವಾ ಅಪರಾಧಿಯಾಗಲಿ, ಇಲ್ಲಿ ಆಶ್ರಯವನ್ನು ಹುಡುಕಿ ಬರುವ ಪ್ರತಿಯೊಬ್ಬರೂ ದೇವರ ಮಕ್ಕಳು.” ಎಂದ ಪೂಜಾರಿ ಅವನನ್ನು ಸಮಾಧಾನಪಡಿಸಿ, ತಿನ್ನಲು ಆಹಾರವನ್ನು, ಉಡಲು ಬಟ್ಟೆಯನ್ನು ಮತ್ತು ಉಳಿದುಕೊಳ್ಳಲು ಜಾಗವನ್ನೂ ನೀಡಿದ.
ಅವನು ಅಲ್ಲಿ ಚೆನ್ನಾಗಿ ತಿಂದು, ನಿದ್ದೆ ಮಾಡಿದ ಮತ್ತು ಮಧ್ಯರಾತ್ರಿಯಲ್ಲಿ ಹೊಸ ಹುರುಪಿನೊಂದಿಗೆ ಎದ್ದುಕೂತ. ಅವನ ಕಣ್ಣು ಕೋಣೆಯೊಂದರಲ್ಲಿದ್ದ ಬೆಳ್ಳಿಪಾತ್ರೆಯ ಮೇಲೆ ಬಿದ್ದಿತು. ಕದಿಯುವ ಅಭ್ಯಾಸದಿಂದ ಪ್ರೇರಿತನಾದ ಅವನು, ತನಗೆ ಅನ್ನಹಾಕಿದವನಿಗೆ ದ್ರೋಹ ಬಗೆಯುತ್ತಿದ್ದೇನೆ ಎಂಬ ಸಣ್ಣ ಆಲೋಚನೆಯೂ ಇಲ್ಲದೆ, ಆ ಬೆಳ್ಳಿಪಾತ್ರೆಯನ್ನು ಕದ್ದು ಪಲಾಯನ ಮಾಡಿದ.
ಹಳ್ಳಿಯ ಸುತ್ತಮುತ್ತ ಬೆಳ್ಳಿ ಪಾತ್ರೆಯನ್ನು ಹಿಡಿದು ಓಡಾಡುತ್ತಿದ್ದ ಅವನ ಬಗ್ಗೆ ಜನರಿಗೆ ಸಂಶಯ ಮೂಡಿತು. ಪೊಲೀಸರು ಅವನನ್ನು ಹಿಡಿದು ವಿಚಾರಣೆ ನಡೆಸಿದರು. ಅವನಿಂದ ಸರಿಯಾದ ಉತ್ತರ ಸಿಗದಿದ್ದಾಗ, ಅವನನ್ನು ಪೂಜಾರಿಯ ಮನೆಗೆ ಕರೆದುಕೊಂಡು ಹೋದರು. “ಇವನು ನಿಮ್ಮ ಮನೆಯಿಂದ ಈ ಬೆಳ್ಳಿಪಾತ್ರೆಯನ್ನು ಕದ್ದಿದ್ದಾನೆ ಎಂಬುದು ನಮ್ಮ ಸಂಶಯ. ಅದು ನಿಮ್ಮದಾಗಿದ್ದರೆ ದಯವಿಟ್ಟು ಹೇಳಿ” ಎಂದು ಪೊಲೀಸರು ಪೂಜಾರಿಯನ್ನು ಕೇಳಿದರು.
ತನ್ನ ಕಳ್ಳತನ ಗೊತ್ತಾಗಿ ಮತ್ತೆ ಅನೇಕ ವರ್ಷಗಳ ಕಾಲ ಜೈಲುಪಾಲಾಗುತ್ತೇನಲ್ಲ ಎಂದು ಹೆದರಿದ ಕಳ್ಳ, ಭಯದಿಂದ ನಡುಗಿದ.
ಆದರೆ ಪೂಜಾರಿಯ ಮುಖ ದಯೆಯಿಂದ ತುಂಬಿತ್ತು. ಅವನು, “ಗೆಳೆಯನೆ, ನಾನು ಬೆಳ್ಳಿಯ ಮೇಣದಬತ್ತಿಗಳನ್ನು ಈ ಬೆಳ್ಳಿಯ ಪಾತ್ರೆಯೊಂದಿಗೆ ನಿನಗೆ ಕೊಟ್ಟಿದ್ದೆ. ನೀನೇಕೆ ಮೇಣದಬತ್ತಿಗಳನ್ನು ಅಲ್ಲೇ ಬಿಟ್ಟುಬಂದೆ?” ಎಂದು ಕೇಳಿ, ಆ ಮೇಣದಬತ್ತಿಗಳನ್ನು ಕಳ್ಳನಿಗೆ ಕೊಟ್ಟ. ಆಗ ಪೊಲೀಸರು “ನಮ್ಮನ್ನು ಕ್ಷಮಿಸಿ, ನಾವು ಇದೊಂದು ಕಳ್ಳತನ ಎಂದು ಭಾವಿಸಿದ್ದೆವು” ಎಂದು ಹೇಳಿ ಕಳ್ಳನನ್ನು ಬಿಟ್ಟುಹೋದರು. ಮತ್ತು ಆ ಕಳ್ಳ ಪೂಜಾರಿಯ ಅನುಕಂಪದಿಂದ ಭಾವಪರವಶನಾದ.
ಝೆನ್ ಪರಂಪರೆಯಲ್ಲೂ ಸಹ ಇಂತದ್ದೇ ಒಂದು ಕಥೆಯಿದೆ, ಮತ್ತದು ಪಾಶ್ಚಾತ್ಯ ಕಥೆಗಾರರಿಗೆ ಸ್ಫೂರ್ತಿಯನ್ನು ನೀಡಿರಬೇಕು. ಅದೂ ಕೂಡ ಮೇಲಿನ ಸಂದೇಶವನ್ನೇ ನೀಡುತ್ತದೆ :
ಒಬ್ಬ ಝೆನ್ ಗುರುಗಳು ತನ್ನ ಶಿಷ್ಯಂದಿರ ಮಧ್ಯೆ ಏನೋ ಗದ್ದಲವಾಗುತ್ತಿರುವುದನ್ನು ಗಮನಿಸಿ ಏನಾಯಿತೆಂದು ಕೇಳಿದರು.
ಅವರು ಒಬ್ಬ ಶಿಷ್ಯನನ್ನು ಗುರುವಿನ ಮುಂದೆ ತಳ್ಳಿ “ಇವನು ಮತ್ತೆ ಕಳ್ಳತನ ಮಾಡಿದ್ದಾನೆ” ಎಂದರು. ಗುರುಗಳು “ಅವನನ್ನು ಕ್ಷಮಿಸಿಬಿಡಿ” ಎಂದರು.
ಅದಕ್ಕೆ ಶಿಷ್ಯರು “ಸಾಧ್ಯವೇ ಇಲ್ಲ. ನಿಮಗೋಸ್ಕರ ನಾವು ಇವನನ್ನು ಈಗಾಗಲೇ ಸಾಕಷ್ಟು ಬಾರಿ ಕ್ಷಮಿಸಿದ್ದೇವೆ. ನೀವೀಗ ಅವನನ್ನು ಹೊರಗೆ ಕಳುಹಿಸದಿದ್ದರೆ, ನಾವೆಲ್ಲರೂ ಇಲ್ಲಿಂದ ಹೊರಟುಹೋಗುತ್ತೇವೆ” ಎಂದು ಹೆದರಿಸಿದರು.
“ನೀವೆಲ್ಲ ಹೊರಟುಹೋದರೂ ಸಹ, ನನಗೆ ಅವನನ್ನು ಹೊರ ಕಳಿಸುವ ಇಂಗಿತವಿಲ್ಲ” ಎಂದು ಗುರುಗಳು ಹೇಳಿದರು.
ಆಗ ಅಪರಾಧವನ್ನೆಸಗಿದ ಶಿಷ್ಯ ಗುರುಗಳ ಪಾದಕ್ಕೆ ಬಿದ್ದು ಕಣ್ಣೀರಿಟ್ಟ.
ಸದ್ಗುರುಗಳ ವಿವರಣೆ
ಸದ್ಗುರು: ಒಬ್ಬ ಮನುಷ್ಯನಿಗೆ ತನಗೆ ವಿಧಿಸಲ್ಪಟ್ಟ ಯಾವುದೇ ರೀತಿಯ ಶಿಕ್ಷೆಯನ್ನಾದರೂ ಎದುರಿಸುವ ಶಕ್ತಿ ಇರಬಹುದು, ಆದರೆ ಅವನು ಅಪಾರವಾದ ಸಹಾನುಭೂತಿಗೆ ಸೋತುಹೊಗುತ್ತಾನೆ. ದಂಡನೆಗಳು ಒಬ್ಬ ಮನುಷ್ಯನನ್ನು ಕಲ್ಲಿನಂತೆ ಗಟ್ಟಿಯಾಗಿಸಬಹುದು, ಆದರೆ ತರ್ಕಕ್ಕೆ ಮೀರಿದ ಅನುಕಂಪವು ಅವನನ್ನು ಮೃದುವಾಗಿಸುತ್ತದೆ.ನೀವು ಒಬ್ಬ ಮನುಷ್ಯನ ಮೇಲೆ ಕಠಿಣವಾದಂತೆಲ್ಲಾ, ಅವನು ತನಗೆ ನೀಡಲಾದ ಶಿಕ್ಷೆಗಳನ್ನೆಲ್ಲಾ ನಿರ್ವಹಿಸಲು ಹೆಚ್ಚು ಸಮರ್ಥನಾಗುತ್ತಾನೆ. ಕೇವಲ ದಯೆಯೊಂದೇ ಅವನನ್ನು ಕರಗಿಸಬಲ್ಲದು. ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಅಥವಾ ಒಬ್ಬ ಗುರು ಯಾರನ್ನೂ ಸಹ ಸದ್ಯದ ಪರಿಸ್ಥಿತಿಯನ್ನಾಧರಿಸಿ ವಿಮರ್ಶಿಸುವುದಿಲ್ಲ. ತೆಂಗಿನ ಗಿಡವೊಂದನ್ನು ನೆಟ್ಟವರು ನಾಲ್ಕು ತಿಂಗಳ ನಂತರ ಅದು ಫಲ ನೀಡಲಿಲ್ಲ ಎಂದು ಕತ್ತರಿಸಿಹಾಕುವುದಿಲ್ಲ. ಅಂತೆಯೇ, ಒಬ್ಬ ಗುರುವೂ ಕೂಡ, ತನ್ನ ಪ್ರತಿಯೊಬ್ಬ ಶಿಷ್ಯನು ಯಾವ ರೀತಿಯ ಆಂತರಿಕ ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ಅದನ್ನು ಫಲಪ್ರದವಾಗಿಸುವುದು ಹೇಗೆ ಎಂಬುದನ್ನು ನೋಡುತ್ತಾರೆ. ಸದ್ಯದಲ್ಲಿ ಅವಶ್ಯಕವಿರುವ ಸಾಮರ್ಥ್ಯವಿಲ್ಲ ಎಂಬ ಕಾರಣಕ್ಕೆ ಅವರು ಯಾರನ್ನೂ ಕಡೆಗಣಿಸುವುದಿಲ್ಲ.
ತಮ್ಮನ್ನು ತಾವು ಶಿಷ್ಯರೆಂದು ಕರೆದುಕೊಳ್ಳುವವರು ತಮಗೆ ಸಿಗುವ ಪ್ರತಿಯೊಂದು ಅವಕಾಶವನ್ನೂ ತಮ್ಮ ಅಭಿವೃದ್ದಿ ಮತ್ತು ಪರಿವರ್ತನೆಗಾಗಿ ಉಪಯೋಗಿಸಿಕೊಳ್ಳಬೇಕು. ವಿಶೇಷವಾಗಿ, ಅವರಿಗೆ ಅನುಕೂಲಕರವಲ್ಲದ ಪರಿಸ್ಥಿತಿ ಬಂದೊದಗಿದಾಗ, ಅದು ಅವರನ್ನು ಪರಿವರ್ತಿಸಿಕೊಳ್ಳಲು ಅತ್ಯುತ್ತಮವಾದ ಸನ್ನಿವೇಶವಾಗಿರುತ್ತದೆ. ಅದಕ್ಕೆ ಬದಲು, ಅವರು ಅದನ್ನು ಮಾಡು ಇದನ್ನು ಮಾಡು ಎಂಬ ಬೇಡಿಕೆಗಳನ್ನು ಗುರುವಿನ ಮುಂದಿಟ್ಟರೆ, ತಮ್ಮ ಹೊಣೆಗಾರಿಕೆಯನ್ನು ಬೇರೆಯವರ ಮೇಲೆ ಹೊರಿಸುವುದಷ್ಟೇ ಅವರ ಉದ್ದೇಶ ಎಂದರ್ಥ. ಅವರಿಗೆ ಯಾವುದೇ ರೀತಿಯ ಪರಿವರ್ತನೆಯಲ್ಲಿ ನಿಜವಾಗಿಯೂ ಆಸಕ್ತಿಯಿಲ್ಲ. ಅಂತಹ ಜನರು ತಮ್ಮನ್ನು ತಾವು ಶಿಷ್ಯರೆಂದು ಹೇಳಿಕೊಳ್ಳಲು ಅರ್ಹರಲ್ಲ. ಸುಮ್ಮನೆ ಅವರೊಂದಿಗೆ ಸಮಯವನ್ನು ಹಾಳು ಮಾಡುವುದಕ್ಕಿಂತ ಅವರನ್ನು ಬಿಟ್ಟುಬಿಡುವುದೇ ಒಳ್ಳೆಯದು.