ಪರಶಿವನ ಅರ್ಧನಾರೀಶ್ವರ ಸ್ವರೂಪದ ಸಾಂಕೇತಿಕತೆಯ ಹಿಂದಿರುವ ಪುರಾಣ, ವಿಜ್ಞಾನ ಮತ್ತು ಸತ್ಯವನ್ನು ಕುರಿತು ಸದ್ಗುರುಗಳ ದೃಷ್ಟಿಕೋನವನ್ನು ನೋಡೋಣ.

ಸದ್ಗುರು: ಸಾಮಾನ್ಯವಾಗಿ ಶಿವನನ್ನು ಪರಮ ಪುರುಷನೆಂದು ಕರೆಯಲಾಗುತ್ತದೆ, ಅವನು ಸರ್ವೋತ್ಕೃಷ್ಟ ಪುರುಷತ್ವದ ಸಂಕೇತ. ಆದರೆ, ಅರ್ಧನಾರೀಶ್ವರನ ಸ್ವರೂಪದಲ್ಲಿ, ಅವನ ಒಂದರ್ಧವು ಸಂಪೂರ್ಣವಾಗಿ ಬೆಳೆದು ನಿಂತ ಸ್ತ್ರೀ ಎನ್ನುವುದನ್ನು ನೀವು ನೋಡುತ್ತೀರಿ. ಇದು ಹೇಗಾಯಿತು? ಇದರ ಹಿಂದಿನ ಕಥೆಯನ್ನು ನೋಡೋಣ, ಶಿವನು ಸಾಮಾನ್ಯವಾಗಿ ಭಾವಪರವಶನಾದ ಸ್ಥಿತಿಯಲ್ಲಿ ಇರುತ್ತಿದ್ದನು. ಇದರಿಂದಾಗಿ ಪಾರ್ವತಿಯು ಅವನತ್ತ ಆಕರ್ಷಿತಳಾದಳು. ಅವಳು ಶಿವನನ್ನು ತನ್ನತ್ತ ಸಳೆಯಲು ಸಾಕಷ್ಟು ಉಪಾಯಗಳನ್ನು ಮಾಡಿ, ಹಲವಾರು ರೀತಿಯ ಸಹಾಯಗಳನ್ನು ಪಡೆದುಕೊಂಡ ನಂತರ ಅವರಿಬ್ಬರು ಮದುವೆಯಾದರು. ಅವರ ಮದುವೆಯಾದ ಬಳಿಕ, ಸಹಜವಾಗಿಯೇ, ಶಿವನು ತನ್ನ ಅನುಭವವನ್ನೆಲ್ಲಾ ಅವಳೊಂದಿಗೆ ಹಂಚಿಕೊಳ್ಳಲು ಬಯಸಿದ. ಪಾರ್ವತಿಯು ಶಿವನನ್ನು “ನಿನ್ನೊಳಗೆ ನೀನಿರುವ ಸ್ಥಿತಿಯು ನನ್ನ ಅನುಭವಕ್ಕೂ ಬರಬೇಕು. ಅದಾಗಬೇಕಾದರೆ ನಾನು ಏನು ಮಾಡಬೇಕೆಂದು ಹೇಳು, ನಾನು ಯಾವ ರೀತಿಯ ತಪಸ್ಸನ್ನಾದರೂ ಮಾಡಲು ಸಿದ್ಧಳಿದ್ದೇನೆ." ಎಂದು ಕೇಳಿದಳು. ಅದನ್ನು ಕೇಳಿ ಶಿವನು ನಗುತ್ತಾ, "ನೀನು ಯಾವ ತಪಸ್ಸನ್ನೂ ಮಾಡುವ ಅಗತ್ಯವಿಲ್ಲ. ಸುಮ್ಮನೆ ಬಂದು ನನ್ನ ತೊಡೆಯ ಮೇಲೆ ಕುಳಿತುಕೋ." ಎಂದನು. ಯಾವುದೇ ವಿರೋಧವಿಲ್ಲದೆ ಪಾರ್ವತಿಯು ಅವನೆಡೆಗೆ ಬಂದು ಅವನ ಎಡ ತೊಡೆಯ ಮೇಲೆ ಕುಳಿತುಕೊಂಡಳು. ಅವಳು ಅಷ್ಟೊಂದು ಇಚ್ಛಾಭಾವದಿಂದ ಬಂದು, ತನ್ನನ್ನು ತಾನು ಸಂಪೂರ್ಣವಾಗಿ ಅವನ ಅಧೀನಕ್ಕೆ ಸಮರ್ಪಿಸಿಕೊಂಡಿದ್ದರಿಂದ, ಶಿವ ಅವಳನ್ನು ತನ್ನೊಳಕ್ಕೆ ಸೆಳೆದುಕೊಂಡನು ಹಾಗೂ ಪಾರ್ವತಿ ಅವನ ಅರ್ಧಭಾಗವಾಗಿ ಹೋದಳು.

ನೀವಿದನ್ನು ಅರ್ಥಮಾಡಿಕೊಳ್ಳಬೇಕು: ಶಿವ ಪಾರ್ವತಿಯನ್ನು ತನ್ನ ಶರೀರದ ಭಾಗವಾಗಿ ಮಾಡಿಕೊಳ್ಳಬೇಕಾದರೆ, ಅವನು ತನ್ನ ಶರೀರದ ಅರ್ಧವನ್ನು ತೊರೆಯಬೇಕಿತ್ತು. ಆದ್ದರಿಂದ, ಅವನು ತನ್ನರ್ಧವನ್ನು ತ್ಯಜಿಸಿ ಅವಳನ್ನು ಸೇರಿಸಿಕೊಂಡನು. ಇದು ಅರ್ಧನಾರೀಶ್ವರನ ಕಥೆ. ಈ ಕಥೆಯ ಒಳಾರ್ಥವೆಂದರೆ, ಪುರುಷ ಮತ್ತು ಸ್ತ್ರೀ ಅಂಶಗಳು ನಿಮ್ಮೊಳಗೆ ಸಮಾನವಾಗಿ ವಿಂಗಡಣೆಯಾಗಿದೆ. ಶಿವ ಪಾರ್ವತಿಯನ್ನು ತನ್ನೊಳಗೆ ಸೇರಿಸಿಕೊಂಡಾಗ ಅವನು ಪರಮಾನಂದಭರಿತನಾದನು. ಇಲ್ಲಿ ಹೇಳುತ್ತಿರುವುದೇನೆಂದರೆ, ನಿಮ್ಮೊಳಗಿನ ಪುರುಷ ಮತ್ತು ಸ್ತ್ರೀ ಅಂಶಗಳ ಮಿಲನವಾದಾಗ ನೀವು ನಿರಂತರವಾದ ಪರಮಾನಂದದ ಸ್ಥಿತಿಯಲ್ಲಿರುತ್ತೀರಿ ಎಂದು. ನೀವು ಆ ಮಿಲನವನ್ನು ಹೊರಗಿನಿಂದ ಮಾಡಲು ಯತ್ನಿಸಿದರೆ, ಅದು ಬಹಳ ಕಾಲ ಉಳಿಯುವುದಿಲ್ಲ, ಮತ್ತು ಅದರೊಂದಿಗೆ ಬರುವ ಎಲ್ಲಾ ತೊಂದರೆಗಳು, ಸದಾ ಕಾಲ ನಡೆಯುವ ನಾಟಕಗಳಾಗಿ ಉಳಿಯುತ್ತವೆ.

 

ಪೂರ್ಣ ಪ್ರಮಾಣದ ಪುರುಷ ಮತ್ತು ಸ್ತ್ರೀ

ಮೂಲತಃ, ಇಲ್ಲಿ ಇಬ್ಬರು ವ್ಯಕ್ತಿಗಳು ಒಂದಾಗಲು ಹಾತೊರೆಯುತ್ತಿದ್ದಾರೆ ಎಂದಲ್ಲ, ಬದಲಿಗೆ ಜೀವನದ ಎರಡು ಆಯಾಮಗಳು ಒಂದಾಗಲು ಹಾತೊರೆಯುತ್ತಿವೆ ಎಂದರ್ಥ - ಹೊರಗೆ ಮತ್ತು ಒಳಗೆ. ನೀವಿದನ್ನು ಆಂತರ್ಯದಲ್ಲಿ ಸಾಧಿಸಿದರೆ, ಹೊರಗಿನಿಂದ ನಡೆಯುವ ಮಿಲನ ನೂರಕ್ಕೆ ನೂರರಷ್ಟು ಆಯ್ಕೆಯಿಂದ ನಡೆಯುತ್ತದೆ. ನೀವಿದನ್ನು ಆಂತರ್ಯಲ್ಲಿ ಸಾಧಿಸದೇ ಹೋದರೆ, ಹೊರಗಿನಿಂದ ನಡೆಯುವ ಮಿಲನ ತೀರ ಕೆಟ್ಟದಾದ ಪ್ರಚೋದನೆಯಾಗಿರುತ್ತದೆ. ಇದು ಜೀವನದ ರೀತಿ. ಈ ಸತ್ಯಾಂಶವನ್ನೇ ಆಡುಭಾಷೆಯಲ್ಲಿ ಸುಂದರವಾಗಿ ವ್ಯಕ್ತಪಡಿಸಲಾಗುತ್ತಿರುವುದು – ಶಿವ ಪಾರ್ವತಿಯನ್ನು ತನ್ನದೇ ಒಂದು ಭಾಗವಾಗಿ ಸೇರಿಸಿಕೊಂಡು, ಅರ್ಧ ನಾರಿ, ಅರ್ಧ ನರನಾದನು.

ಇದು ಏನನ್ನು ಸಂಕೇತಿಸುತ್ತದೆಯೆಂದರೆ - ನೀವು ನಿಮ್ಮ ’ಸರ್ವೋತ್ಕೃಷ್ಟ ಸ್ಥಿತಿಗೆ’ ತಲುಪಿದರೆ, ನೀವು ಅರ್ಧ ಪುರುಷ ಮತ್ತು ಅರ್ಧ ಸ್ತ್ರೀಯಾಗಿರುತ್ತೀರಿಯೇ ವಿನಃ ನಪುಂಸಕರಾಗುವುದಿಲ್ಲ, ಒಬ್ಬ ಪೂರ್ಣ ಪ್ರಮಾಣದ ಪುರುಷ ಮತ್ತು ಒಬ್ಬ ಪೂರ್ಣ ಪ್ರಮಾಣದ ಸ್ತ್ರೀಯಾಗುತ್ತೀರಿ ಎಂದು ತೋರಿಸುವ ಸಾಂಕೇತಿಕತೆಯೇ ಇದಾಗಿದೆ. ನಿಮ್ಮದು ಓರೆಯಾದ ಬೆಳವಣಿಗೆಯಲ್ಲ, ನೀವು ಕೇವಲ ಪುರುಷ ಅಥವಾ ಸ್ತ್ರೀಯಷ್ಟೇ ಅಲ್ಲ, ನೀವು ಈ ಎರಡೂ ಆಯಾಮಗಳನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಇದರರ್ಥ. ಪುರುಷ ಮತ್ತು ಸ್ತ್ರೀ ಅಂಶಗಳೆಂದರೆ ಗಂಡಸು ಮತ್ತು ಹೆಂಗಸು ಎಂದಲ್ಲ. ಇವೆರಡು ನಿರ್ದಿಷ್ಟವಾದ ಗುಣಗಳು. ಈ ಎರಡು ಗುಣಗಳು ಆಂತರ್ಯದಲ್ಲಿ ಸಮತೋಲನವಾಗಿದ್ದಾಗ ಮಾತ್ರ ಮಾನವರು ಸಾರ್ಥಕತೆಯ ಜೀವನವನ್ನು ನಡೆಸಬಲ್ಲರು.

ಪುರುಷ ಮತ್ತು ಪ್ರಕೃತಿ

ನೀವು ಅರ್ಧನಾರೀಶ್ವರನ ಕಥೆಯನ್ನು ಸೃಷ್ಟಿಯ ಸಾಂಕೇತಿಕತೆಯಾಗಿ ನೋಡಿದರೆ, ಶಿವ ಮತ್ತು ಪಾರ್ವತಿ ಅಥವಾ ಶಿವ ಮತ್ತು ಶಕ್ತಿ - ಈ ಎರಡು ಆಯಾಮಗಳನ್ನು ಪುರುಷ ಮತ್ತು ಪ್ರಕೃತಿ ಎಂದು ಕರೆಯಲಾಗುತ್ತದೆ. "ಪುರುಷ" ಎಂಬ ಪದವನ್ನು ಇಂದು ಸಾಮಾನ್ಯವಾಗಿ "ಗಂಡಸು" ಎಂದು ಅರ್ಥೈಸಲಾಗುತ್ತದೆಯಾದರೂ, ಅದು ಇದರ ಅರ್ಥವಲ್ಲ. ಪ್ರಕೃತಿಯೆಂದರೆ "ಸೃಷ್ಟಿ". ಪುರುಷ ಎನ್ನುವುದು ಸೃಷ್ಟಿಯ ಮೂಲ. ಸೃಷ್ಟಿಯ ಮೂಲವಿದ್ದ ಕಾರಣ ಸೃಷ್ಟಿಯು ಸಂಭವಿಸಿತು, ಮತ್ತದು ಸೃಷ್ಟಿಯ ಮೂಲದೊಂದಿಗೆ ಪರಿಪೂರ್ಣ ರೀತಿಯಲ್ಲಿ ಹೊಂದಿಕೊಂಡಿತು. "ನಿಮಿತ್ತ"ವನ್ನು ಪುರುಷ ಎಂದು ಕರೆಯಲಾಗುತ್ತದೆ,  ಅದು ಸೃಷ್ಟಿಯನ್ನು ಆರಂಭಿಸುವ ಮುಖ್ಯ ಕರ್ತೃ. ಅಸ್ತಿತ್ವವು ಆದಿಸ್ವರೂಪದಲ್ಲಿದ್ದಾಗ, ಅದಿನ್ನೂ ಸೃಷ್ಟಿಯಾಗುವ ಸ್ಥಿತಿಯಲ್ಲಿಲ್ಲದಿದ್ದಾಗ, ಅದನ್ನು ಹಠಾತ್ತಾಗಿ ಸೃಷ್ಟಿಯಾಗುವಂತೆ ಮಾಡಿದ ಅಂಶವನ್ನು "ಪುರುಷ" ಎಂದು ಕರೆಯಲಾಗುತ್ತದೆ. ಒಬ್ಬ ಮನುಷ್ಯನೇ ಆಗಲಿ ಅಥವಾ ಒಂದು ಇರುವೆಯೇ ಹುಟ್ಟಲಿ, ಅಥವಾ ಒಂದು ಬ್ರಹ್ಮಾಂಡವೇ ಸೃಷ್ಟಿಯಾಗಲಿ, ಎಲ್ಲವೂ ಒಂದೇ ರೀತಿಯಲ್ಲಿ ನಡೆಯುತ್ತದೆ. ಮಾನವನ ತಿಳುವಳಿಕೆಯ ಪರಿಭಾಷೆಯಲ್ಲಿ, ಇದನ್ನು ಗಂಡು ಅಥವಾ ಪುರುಷ ಎಂದು ಕರೆಯಲಾಗುತ್ತದೆ.

ಇಡೀ ಮಾನವ ಜನಾಂಗವು ಹುಟ್ಟಿದ್ದು ಮನುಷ್ಯನ ಒಂದೇ ಒಂದು ಕೃತ್ಯದಿಂದ – ಅದು ಮೈಥುನದ ಕ್ರಿಯೆಯಿಂದ, ಅಲ್ಲವೇ?  ಅದೇನು ಒಂದು ಮಹಾನ್ ಕಾರ್ಯವಲ್ಲ. ಅದು ಯಾವ ರೀತಿಯಲ್ಲಾದರೂ ಆಗಬಹುದು - ಬೇಜವಾಬ್ದಾರಿಯಿಂದ, ನಿರ್ಲಕ್ಷ್ಯದಿಂದ, ಬಲವಂತದಿಂದ, ಕೋಪದಿಂದ, ದ್ವೇಷದಿಂದ ಆಗಬಹುದು - ಅದು ಸುಂದರವಾಗಿಯೇ ನಡೆಯಬೇಕೆಂಬ ಅಗತ್ಯವೇನೂ ಇಲ್ಲ. ನೀವು ಹೇಗೇ ಮಾಡಿದರೂ ಸಹ, ಜನಸಂಖ್ಯೆ ಬೆಳೆಯುತ್ತದೆ. ಆದರೆ ಗರ್ಭದಲ್ಲಿ ನಡೆಯಬೇಕಾಗಿರುವುದು ಬೇಕಾಬಿಟ್ಟಿಯಾಗಿ ನಡೆಯಲು ಸಾಧ್ಯವಿಲ್ಲ. ಅದು ತುಂಬ ಕ್ರಮಬದ್ಧ ಹಾಗೂ ಸುಂದರ ರೀತಿಯಲ್ಲಿ ನಡೆಯಬೇಕು. ಅದು ತಪ್ಪಾದರೆ ಅಥವಾ ಹಿಂಸಾತ್ಮಕ ರೀತಿಯಲ್ಲಾದರೆ, ಅಲ್ಲಿ ಜೀವ ಹುಟ್ಟುವುದಿಲ್ಲ.

ಹಾಗಾಗಿ ಸೃಷ್ಟಿಯನ್ನು ಆರಂಭಿಸಿದ ಈ ಮೂಲಭೂತ ಪ್ರಕ್ರಿಯೆಯನ್ನು ನೋಡಿದಾಗ, ಅದು ಕೇವಲ ಒಂದು ಕ್ರಿಯೆಯಾಗಿದೆ ಅಷ್ಟೆ. ಅದನ್ನು ಪುರುಷ ಎನ್ನಲಾಗುತ್ತದೆ, ಆದರೆ ಇದನ್ನು ನಿಧಾನವಾಗಿ ಒಂದು ಜೀವವಾಗಿ ವಿಕಾಸಗೊಳಿಸುವುದನ್ನು ಪ್ರಕೃತಿಯೆಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಪ್ರಕೃತಿಯನ್ನು ಸ್ತ್ರೀಯಾಗಿ ಪ್ರತಿನಿಧಿಸಲಾಗುತ್ತದೆ.

ಇಂದಿನ ಸಮಾಜದಲ್ಲಿ ಸ್ತ್ರೀ-ತತ್ವ

ಇಂದು, ಸಮಾಜ ಮತ್ತು ಮಹಿಳೆಯರು ಕೂಡ ಸ್ತ್ರೀತತ್ವವನ್ನು ದೌರ್ಬಲ್ಯವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆರ್ಥಿಕ ಶಕ್ತಿಯು ವಿಶ್ವದ ಪ್ರಮುಖ ಶಕ್ತಿಯಾಗಿರುವ ಕಾರಣ ಮಹಿಳೆಯರು ಪುರುಷರಂತೆ ಇರಲು ಪ್ರಯತ್ನಿಸುತ್ತಿದ್ದಾರೆ. "ಬಲಶಾಲಿಯ ಉಳಿವು" ಎಂಬ ಕಾಡಿನ ನಿಯಮಕ್ಕೆ ಎಲ್ಲವೂ ವಾಪಸ್ಸಾದಂತಿದೆ. ಒಮ್ಮೆ ಹೀಗಾದರೆ, ಪುರುಷತ್ವವು ಪ್ರಬಲವಾಗುತ್ತದೆ. ಪ್ರೀತಿ ಕರುಣೆಯ ಸೂಕ್ಷ್ಮತೆ ಮತ್ತು ಜೀವನವನ್ನು ಆದರದಿಂದ ಅಪ್ಪಿಕೊಳ್ಳುವ ಬದಲಾಗಿ ನಾವು ಒರಟಾದ ಗೆಲುವಿನ ಶಕ್ತಿಯನ್ನು ಆರಿಸಿಕೊಂಡಿದ್ದೇವೆ.

ನಿಮ್ಮಲ್ಲಿ ಕೇವಲ ಪುರುಷತ್ವದ ಅಂಶವಿದ್ದರೆ, ನಿಮ್ಮ ಬಳಿ ಎಲ್ಲಾ ಇದ್ದೂ ಏನೂ ಇಲ್ಲದ ಹಾಗಿರುತ್ತದೆ ಎನ್ನುವುದನ್ನು ನೀವೇ ನೋಡುತ್ತೀರಿ. ಸಮಾಜದಲ್ಲಿ ಸ್ತ್ರೀತತ್ವದ ಗುಣಗಳನ್ನು ಪ್ರಜ್ಞಾಪೂರ್ವಕವಾಗಿ ಪೋಷಿಸಿ, ಸಂಭ್ರಮಿಸುವುದು ಅತ್ಯಗತ್ಯ. ಇದು ಶಾಲೆಯಿಂದಲೇ ಆರಂಭವಾಗಬೇಕು. ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕಲಿಯುವಷ್ಟೇ, ಸಂಗೀತ, ಕಲೆ, ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನೂ ಕಲಿಯಬೇಕು. ಹೀಗಾಗದೇ ಇದ್ದರೆ, ಜಗತ್ತಿನಲ್ಲಿ ಸ್ತ್ರೀ ಅಂಶಕ್ಕೆ ಸ್ಥಾನವಿರುವುದಿಲ್ಲ. ನಮ್ಮ ಜೀವನದ ನಿರ್ಮಾಣದಲ್ಲಿ, ಪುರುಷ ಮತ್ತು ಸ್ತ್ರೀ ಅಂಶಗಳು ಸಮಾನವಾದ ಪಾತ್ರಗಳನ್ನು ಕಂಡುಕೊಳ್ಳುವ ಹಾಗೆ ಮಾಡುವುದು ಹೇಗೆಂಬುದರ ಬಗ್ಗೆ ನಾವು ಎಚ್ಚರವಹಿಸದೇ ಹೋದರೆ, ತುಂಬ ಅಪೂರ್ಣವಾದ ಹಾಗೂ ಏರುಪೇರಾದ ಬದುಕನ್ನು ನಾವು ಬದುಕುತ್ತೇವೆ.

ಸಂಪಾದಕರ ಟಿಪ್ಪಣಿ: ಈಶ ಕೇಂದ್ರದ ಅರ್ಪಣೆ - ಸದ್ಗುರುಗಳ ಇಬುಕ್  “Shiva – Ultimate Outlaw”  ಮತ್ತು Vairagya “ವೈರಾಗ್ಯ” ಎಂಬ ಐದು ಶಕ್ತಿಶಾಲಿ ಮಂತ್ರಗಳಿರುವ ’ಸಿಡಿ’ಯನ್ನೊಳಗೊಂಡ ‌ಆನ್‌ಲೈನ್ ಪ್ಯಾಕೇಜ್ ಈಗ ಉಚಿತವಾಗಿ ಲಭ್ಯ.

The ebook ಈ ಪುಸ್ತಕವು ಸೊಗಸಾದ ಗ್ರಾಫಿಕ್ಸ್ ಹಾಗೂ ಸದ್ಗುರುಗಳ ಜಾಣ್ನುಡಿಗಳಿಂದ ತುಂಬಿದ್ದು, ಶಿವನ ಬಗ್ಗೆ ನಮಗೆ ವಾಸ್ತವವಾಗಿ ಗೊತ್ತಿಲ್ಲದ ಅಂಶಗಳನ್ನು ಬಯಲು ಮಾಡುತ್ತದೆ. ಶಿವನನ್ನು ಯೋಗದ ಮೂಲ ಹಾಗೂ ಮೊದಲ ಯೋಗಿ – ಆದಿಯೋಗಿಯಾಗಿ ಮತ್ತು ಇನ್ನೂ ಹಲವಾರು, ಹಿಂದೆಂದು ಕಾಣದ ರೀತಿಗಳಲ್ಲಿ ಸಂಧಿಸಿ!

The Vairagya ವೈರಾಗ್ಯದ ಪ್ರತಿ ಮಂತ್ರಗಳು ತಮ್ಮದೇ ಆದ ಛಾಯೆಯನ್ನು ಪಡೆದಿದ್ದು, ನಮ್ಮ ಅಂತರಾಳಕ್ಕೆ ತಲುಪುವ ಶಕ್ತಿಯನ್ನು ಹೊಂದಿವೆ. Isha Chants appನ ಭಾಗವಾಗಿಯೂ ಸಹ ಇವು ಲಭ್ಯವಿವೆ.