ಪ್ರಶ್ನೆ: ಯೋಗಾಸನ ಮಾಡುವಾಗ ನಾವು ಏಕೆ ಮಾತನಾಡಬಾರದು ಅಥವಾ ಇತರರು ಆಸನಗಳನ್ನು ಮಾಡುವಾಗ ನಾವು ಅವರನ್ನೇಕೆ ಸರಿಪಡಿಸಬಾರದು?

ಸದ್ಗುರು: ಒಂದು ಆಸನವನ್ನು ಮಾಡುವುದು ಧ್ಯಾನ ಮಾಡುವುದರ ಒಂದು ಕ್ರಿಯಾಶೀಲ ರೀತಿ. ನಿಮಗೆ ನಿಶ್ಚಲವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲದ ಕಾರಣ, ನೀವು ಧ್ಯಾನಸ್ಥರಾಗಲು ಬೇರೆ ಏನನ್ನಾದರೂ ಮಾಡುತ್ತೀರಿ. ಯೋಗ ಸೂತ್ರಗಳಲ್ಲಿ ಪತಂಜಲಿ ಮಹರ್ಷಿಗಳು ’ಸ್ಥಿರಮ್ ಸುಖಮ್ ಆಸನಮ್’ ಎಂದು ಹೇಳಿದ್ದಾರೆ. ಸಂಪೂರ್ಣವಾಗಿ ಸ್ಥಿರ ಹಾಗೂ ಆರಾಮದಾಯಕವಾಗಿರುವುದೇ ಆಸನ. ಇದರರ್ಥ ನಿಮ್ಮ ದೇಹವು ಹಾಯಾಗಿದೆ, ನಿಮ್ಮ ಮನಸ್ಸು ಹಿತಕರವಾಗಿದೆ ಮತ್ತು ನಿಮ್ಮ ಪ್ರಾಣಶಕ್ತಿಯು ಕಳೆಭರಿತವಾಗಿ ಸಮತೋಲನದಲ್ಲಿದೆ ಎಂದು. ಸ್ವಾಭಾವಿಕವಾಗಿ ಧ್ಯಾನಸ್ಥರಾಗುವ ಸ್ಥಿತಿಗೆ ತಲುಪಲು ಯೋಗಾಸನವು ಒಂದು ಪೂರ್ವಭಾವಿ ಹೆಜ್ಜೆಯಾಗಿದೆ.

ಒಂದು ರೀತಿಯಲ್ಲಿ, ಯೋಗಾಸನಗಳು ಧ್ಯಾನ ಮಾಡುವ ಒಂದು ಕ್ರಿಯಾಶೀಲ ರೀತಿ. ನೀವು ಧ್ಯಾನ ಮಾಡುವಾಗ, ಮಾತನಾಡಬಹುದು ಎಂದು ಯೋಚಿಸುವುದು ಹಾಸ್ಯಾಸ್ಪದ. ಆಸನಗಳಿಗೂ ಸಹ ಅದೇ ಅನ್ವಯಿಸುತ್ತದೆ. ಮಾತನಾಡುವುದು ನಿಮ್ಮ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪ್ರಚೋದಿಸುತ್ತದೆ. ಇದನ್ನು ನೀವೇ ಗಮನಿಸಬಹುದು. ಮೊದಲು ಸದ್ದಿಲ್ಲದೆ ಒಂದು ಕಡೆ ಕುಳಿತು ನಿಮ್ಮ ನಾಡಿಬಡಿತದ ಗತಿಯನ್ನು ಪರಿಶೀಲಿಸಿಕೊಳ್ಳಿ. ನಂತರ ಅತಿಯಾಗಿ ಮಾತನಾಡಿ. ತರುವಾಯ ಮತ್ತೊಮ್ಮೆ ನಿಮ್ಮ ನಾಡಿಬಡಿತದ ಗತಿಯನ್ನು ಪರಿಶೀಲಿಸಿ - ಅದು ತುಂಬಾ ಭಿನ್ನವಾಗಿರುತ್ತದೆ. ನಾಡಿಮಿಡಿತ ಕೇವಲ ಒಂದು ಉದಾಹರಣೆಯಷ್ಟೆ. ಮಾತನಾಡುವ ಪ್ರಕ್ರಿಯೆಯಿಂದ ಮಾರ್ಪಾಡಾಗುವುದು ಕೇವಲ ನಿಮ್ಮ ದೈಹಿಕ ನಿಯತಾಂಕಗಳಲ್ಲ, ಬದಲಿಗೆ ಪ್ರಾಣಶಕ್ತಿಯ ನಿಯತಾಂಕಗಳೂ ಸಹ ನಾಟಕೀಯವಾಗಿ ಬದಲಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಗಮನವೇ ಇರದೆ, ಯೋಗಾಸನವನ್ನು ಮಾಡುವುದಾದರೂ ಹೇಗೆ?

ಎಲ್ಲಕ್ಕಿಂತ ಹೆಚ್ಚಾಗಿ, ಆಸನಗಳು ಧ್ಯಾನಸ್ಥ ಸ್ಥಿತಿಯ ಪೂರ್ವಭಾವಿ ಹಂತಗಳು. ನೀವು ಧ್ಯಾನದಲ್ಲಿದ್ದಾಗ ಮಾತನಾಡಲು ಸಾಧ್ಯವಿಲ್ಲ.

ಒಮ್ಮೆ, ನನ್ನನ್ನು ಅಮೇರಿಕಾದ ಯೋಗ ಶಾಲೆಯೊಂದರಲ್ಲಿ ಮಾತನಾಡಲು ಆಹ್ವಾನಿಸಲಾಯಿತು. ಆ ಶಾಲೆಯನ್ನು ನಡೆಸುತ್ತಿದ್ದ ಮಹಿಳೆ ಈಶ ಮೆಡಿಟೇಟರ್ ಆಗಿದ್ದು, ಹಲವು ವರ್ಷಗಳಿಂದ ಯೋಗ ಶಿಕ್ಷಕಿಯಾಗಿದ್ದರು. ನಾನು ಅವರ ಯೋಗ ಶಾಲೆಗೆ ಹೋದಾಗ, ಅಲ್ಲಿ ಸಂಗೀತ ನುಡಿಯುತ್ತಿತ್ತು, ಮತ್ತು ಅವರು ಅರ್ಧ ಮತ್ಸ್ಯೇಂದ್ರಾಸನದಲ್ಲಿದ್ದರು, ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮೈಕ್ರೊಫೋನ್‌ನಲ್ಲಿ ಎಡೆಬಿಡದೆ ಮಾತನಾಡುತ್ತಿದ್ದರು. ನಾನದನ್ನು ಕಂಡಾಕ್ಷಣ, ಅಲ್ಲಿಂದ ಹೊರಡಲು ಬಯಸಿದೆ. ಆದರೆ ಅವರು ನನ್ನನ್ನು ಗುರುತಿಸಿ, “ಹಾಯ್” ಎನ್ನುತ್ತ, ಯೋಗಾಸನವನ್ನು ಅರ್ಧಕ್ಕೆ ಬಿಟ್ಟು ಹಾರಿ ನನ್ನ ಕಡೆಗೆ ಬಂದರು. ನಾನು ಅವರನ್ನು ಪಕ್ಕಕ್ಕೆ ಕರೆದೊಯ್ದು ಯೋಗವನ್ನು ಹೇಳಿಕೊಡುವ ರೀತಿ ಇದಲ್ಲ ಎಂದು ಹೇಳಿದೆ. ಏಕೆಂದರೆ ಅದು ಒಬ್ಬರ ಜೀವವ್ಯವಸ್ಥೆಯಲ್ಲಿ ಗಂಭೀರ ಅಸಮತೋಲನವನ್ನು ಉಂಟುಮಾಡುತ್ತದೆ, ಮತ್ತು ಆ ಮಹಿಳೆ ನಿಜವಾಗಿಯೂ ಆ ಅಸಮತೋಲನಗಳಿಂದ ಬಳಲುತ್ತಿದ್ದರು ಎಂಬುದು ತಿಳಿದುಬಂತು. ಸ್ವಲ್ಪ ದಿನಗಳ ನಂತರ ಅವರು ಯೋಗ ಹೇಳಿಕೊಡುವುದನ್ನು ಬಿಟ್ಟರು, ಮತ್ತು ಅವರಿಗಾದ ಸಮಸ್ಯೆಗಳು ದೂರಾದವು.

ಯೋಗಾಸನ ಮಾಡುವಾಗ ಅಲ್ಲಿ ಯಾವುದೇ ಮಾತುಕತೆಗಳು ಇರಬಾರದು ಮತ್ತು ನಿಮಗೆ ಇಷ್ಟವಾದಾಗಲೆಲ್ಲಾ ಯಾವುದೋ ಒಂದು ಆಸನವನ್ನು ಮಾಡಲು ನೀವು ಹೋಗಬಾರದು. ಜನರು ತಮ್ಮ ಬಾತ್ರೂಮ್ ಬ್ರೇಕ್ ನ ಸಮಯದಲ್ಲೂ ಕೆಲವು ಆಸನಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ, ಏಕೆಂದರೆ ಅವರಿಗೆ ತಾವು ಯೋಗ ಮಾಡುತ್ತಿದ್ದೇವೆ ಎನ್ನುವುದನ್ನು ಜಗತ್ತಿಗೇ ತಿಳಿಸಬೇಕೆಂಬ ಬಯಕೆಯಿರುತ್ತದೆ. ಇದು ಮೂರ್ಖತನ. ನೀವು ಬಾತ್ರೂಮಿಗೆ ಓಡುವ ಅಗತ್ಯವಿಲ್ಲದೆ, ಯಾರೊಂದಿಗೂ ಮಾತನಾಡುವ ಅಗತ್ಯವಿಲ್ಲದೆ, ಏನನ್ನೂ ಕುಡಿಯುವ ಅಗತ್ಯವಿಲ್ಲದೆ ಕುಳಿತುಕೊಳ್ಳಲು ಸಾಧ್ಯವಾದರೆ – ಅದು ನೀವು ಯೋಗ ಮಾಡುತ್ತಿದ್ದೀರಿ ಎನ್ನುವುದಕ್ಕೆ ಒಂದು ಅತ್ಯುತ್ತಮವಾದ ಜಾಹೀರಾತಾಗುತ್ತದೆ. ನೀವು ಯೋಗ ಮಾಡುತ್ತಿದ್ದೀರಿ ಎಂದು ಎಲ್ಲರಿಗೂ ಹೇಳಲು ಯಾವುದಾದರೊಂದು ಭಂಗಿಯಲ್ಲಿ ನೀವು ನಿಲ್ಲಬೇಕಿಲ್ಲ.

ನೀವು ಭಂಗಿಗಳಲ್ಲಿ ಇದ್ದಾಗ ಎಂದಿಗೂ ಮಾತನಾಡಬಾರದು, ಏಕೆಂದರೆ ನಿಮ್ಮ ಗಮನ, ಉಸಿರು ಮತ್ತು ನಿಮ್ಮ ಜೀವಶಕ್ತಿ ವ್ಯವಸ್ಥೆಗೆ ಏನಾಗುತ್ತದೆ ಎನ್ನುವುದು ಬಹಳ ಮುಖ್ಯ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಆಸನಗಳು ಧ್ಯಾನಸ್ಥ ಸ್ಥಿತಿಯ ಪೂರ್ವಭಾವಿ ಹಂತಗಳು. ನೀವು ಧ್ಯಾನದಲ್ಲಿದ್ದಾಗ ಮಾತನಾಡಲು ಸಾಧ್ಯವಿಲ್ಲ. ಆಸನಗಳನ್ನು ಮಾಡುವಾಗ ನೀವು ಮಾತನಾಡಿದರೆ, ಉಸಿರಾಟ, ಮನಸ್ಸಿನ ಗಮನ ಮತ್ತು ನಿಮ್ಮ ಜೀವಶಕ್ತಿ ವ್ಯವಸ್ಥೆಯ ಸ್ಥಿರತೆಗೆ ನೀವು ತೊಂದರೆಯನ್ನುಂಟು ಮಾಡುತ್ತೀರಿ.

ತಿದ್ದುಪಡಿಗಳ ವಿಷಯಕ್ಕೆ ಬಂದರೆ - ಒಂದು ರೀತಿಯಲ್ಲಿ, ಯಾರದಾದರೂ ದೈಹಿಕ ಭಂಗಿಯನ್ನು ಸರಿಪಡಿಸುವುದು ಅವರು ಪರಿಕರಗಳನ್ನು ಬಳಸುವುದಕ್ಕೆ ಸಮನಾಗಿರುತ್ತದೆ. ಶಿಕ್ಷಕರುಗಳು ತಿದ್ದುಪಡಿಗಳನ್ನು ಸ್ಪಷ್ಟವಾಗಿ ಹೇಳಿದರೆ, ಜನರು ಪ್ರಜ್ಞಾಪೂರ್ವಕವಾಗಿ ಆಸನವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವಂತಿರಬೇಕು. ಇಲ್ಲದೇ ಹೋದರೆ, ನಂತರದಲ್ಲಿ, ಅವರು ಪದೇಪದೆ ಅದೇ ತಪ್ಪುಗಳನ್ನು ಮಾಡುತ್ತಾರೆ. ಇನ್ನೊಂದು ಅಂಶವೆಂದರೆ, ಅವರು ಈಗಾಗಲೇ ಒಂದು ನಿರ್ದಿಷ್ಟ ಭಂಗಿಯಲ್ಲಿದ್ದು ಮತ್ತು ನೀವು ಆ ಭಂಗಿಯನ್ನು ಮುಟ್ಟಿ ಸರಿಪಡಿಸಲು ಪ್ರಯತ್ನಿಸಿದರೆ, ನೀವು ಅವರಿಗೆ ಹಾನಿಯನ್ನುಂಟುಮಾಡುವ ಸಾಧ್ಯತೆಯಿರುತ್ತದೆ.

ಒಂದು ಉದಾಹರಣೆ ನೀಡುವುದಾದರೆ – ನಾನು ಕೇವಲ ನನ್ನ ಬೆರಳನ್ನು ಆಡಿಸುವುದು ಹಲವು ವಿಷಯಗಳನ್ನು ಒಳಗೊಂಡಿರುತ್ತದೆ. ನನ್ನ ಸ್ನಾಯುಗಳು, ಮೂಳೆಕಟ್ಟುಗಳು, ಅಸ್ಥಿಪಂಜರದ ವ್ಯವಸ್ಥೆ, ಮನಸ್ಸು ಮತ್ತು ಶಕ್ತಿಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದೇ ನೀವು ನನ್ನ ಬೆರಳನ್ನು ಹಿಡಿದು ಅಲುಗಾಡಿಸಿದರೆ, ಅದು ಸಂಪೂರ್ಣವಾಗಿ ಬೇರೆಯದ್ದೇ ವಿಷಯವಾಗುತ್ತದೆ. ಆದ್ದರಿಂದ ಆಸನಗಳನ್ನು ಹೇಗೆ ಮಾಡಬೇಕೆಂದು ನೀವು ಅರ್ಥಮಾಡಿಕೊಳ್ಳುವವರೆಗೂ ಶಿಕ್ಷಕರು ನಿಮಗೆ ಹೇಳಬೇಕು, ಆದರೆ ತಿದ್ದುಪಡಿಗಳನ್ನು ನಿಮ್ಮೊಳಗಿನಿಂದ ಮಾಡಿಕೊಳ್ಳಲು ಸ್ವತಃ ನೀವೇ ಪ್ರಯತ್ನಿಸಬೇಕು.

ಸಂಪಾದಕರ ಟಿಪ್ಪಣಿ: ಈ ಲೇಖನವನ್ನು ಈಶ ಹಠಯೋಗ ಶಾಲೆಯ 21 ವಾರಗಳ ಹಠ ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ. ಈ ಕಾರ್ಯಕ್ರಮವು ಯೋಗ ವ್ಯವಸ್ಥೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಮತ್ತು ಹಠಯೋಗವನ್ನು ಕಲಿಸಿಕೊಡುವ ಪ್ರಾವೀಣ್ಯತೆಯನ್ನು ಪಡೆಯಲು ಸರಿಸಾಟಿಯಿಲ್ಲದ ಅವಕಾಶವನ್ನು ನೀಡುತ್ತದೆ. ಮುಂದಿನ 21 ವಾರಗಳ ಕಾರ್ಯಕ್ರಮವು ಜುಲೈ 16, 2019 ರಿಂದ ಪ್ರಾರಂಭವಾಗಿ ಡಿಸೆಂಬರ್ 11, 2019 ರಂದು ಕೊನೆಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ, www.ishahathayoga.com ಅಥವಾ info@ishahatayoga.comಗೆ ಭೇಟಿ ನೀಡಿ.