ಸದ್ಗುರು: ನೀವು ಕೊಯಮತ್ತೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋಗುವಾಗ ಪ್ರತಿ ಐದು ನಿಮಿಷಕ್ಕೊಮ್ಮೆ ಕಿಟಕಿಯಿಂದ ಕೆಳಗೆ ನೋಡಿದರೆ, ಪಶ್ಚಿಮ ಘಟ್ಟಗಳನ್ನು ಬಿಟ್ಟು ಮತ್ತೆಲ್ಲವೂ ಕಂದುಬಣ್ಣದ ಮರುಭೂಮಿಯಂತೆ ಕಾಣಿಸುತ್ತದೆ. ಅದಕ್ಕೆ ಕಾರಣ ಬುದ್ಧಿಹೀನ ಕೃಷಿಗಾರಿಕೆ. ಇಂದು, ಭಾರತದ 84 ಪ್ರತಿಶತದಷ್ಟು ನೆಲದಲ್ಲಿ ಕೃಷಿ ನಡೆಯುತ್ತಿದೆ. ನಮಗೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ 93% ಜನತೆ ಕೃಷಿಯಲ್ಲಿ ತೊಡಗಿತ್ತು. ಆದರೆ, ಅವರೆಲ್ಲರೂ ಸಾಂಪ್ರದಾಯಿಕವಾಗಿ ಕೃಷಿಕರು ಅಥವಾ ಬೇಸಾಯಗಾರರಾಗಿದ್ದರು ಎಂದರ್ಥವಲ್ಲ. ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, 250 ವರ್ಷಗಳ ಹಿಂದೆ ನಾವು ಜಗತ್ತಿನಲ್ಲಿಯೇ ಅತಿದೊಡ್ಡ ಜವಳಿ ರಫ಼್ತುದಾರರಾಗಿದ್ದೆವು. ಜಗತ್ತಿನ 33 ಪ್ರತಿಶತದಷ್ಟು ಜವಳಿ ರಫ಼್ತು ಭಾರತದಿಂದಾಗುತಿತ್ತು. ಸರಿಸುಮಾರು 40-45% ಜನರು ನೇಯ್ಗೆ ಕೆಲಸದಲ್ಲಿ ತೊಡಗಿದ್ದರು. ನಾವು ಎಂದಿಗೂ ಕಚ್ಚಾ ಹತ್ತಿಯನ್ನು ಹೊರಕಳಿಸುತ್ತಿರಲಿಲ್ಲ, ಏಕೆಂದರೆ, ಇಲ್ಲಿ ಬೆಳೆಯುತ್ತಿದ್ದ ಹತ್ತಿಯ ಗುಣಮಟ್ಟ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ, ಅದೇ ಹತ್ತಿಯನ್ನು ಉಪಯೋಗಿಸಿ ಮತ್ತು ರೇಷ್ಮೆ, ಕತ್ತಾಳೆ, ಸೆಣಬು ಮತ್ತಿತರ ಯಾವುದೇ ನೂಲನ್ನಾದರೂ ಉಪಯೋಗಿಸಿ ನಮ್ಮ ಜನ ಬಟ್ಟೆಗಳ ರೂಪದಲ್ಲಿ ಚಮತ್ಕಾರವನ್ನೇ ಸೃಷ್ಟಿಸುತ್ತಿದ್ದರು. ನಾವು 140ಕ್ಕೂ ಹೆಚ್ಚಿನ ವಿವಿಧ ರೀತಿಯ ನೇಯ್ಗೆಗಳನ್ನು ರೂಪಿಸಿದ್ದೆವು ಮತ್ತು ಅವುಗಳಿಂದ ಅದೆಷ್ಟು ಮನಮೋಹಕ ವಸ್ತ್ರಗಳನ್ನು ತಯಾರಿಸುತ್ತಿದ್ದೆವೆಂದರೆ, ಇಡೀ ಜಗತ್ತೇ ಅವುಗಳಿಗೆ ಮನಸೋತಿತ್ತು.

ಆದರೆ 1800 ಮತ್ತು 1860ರ ಇಸವಿಯ ಮಧ್ಯೆ, ನಮ್ಮ ಜವಳಿ ರಫ಼್ತು ಶೇಕಡ 94ರಷ್ಟು ಕುಸಿದುಹೋಯಿತು. ಈ ಭಾರೀ ಕುಸಿತ ಆಕಸ್ಮಿಕವಾಗಿ ಆಗಿದ್ದಲ್ಲ ಆದರೆ ವ್ಯವಸ್ಥಿತವಾಗಿ ಮಾಡಲಾಗಿದ್ದು. ಬ್ರಿಟಿಷರು ನಮ್ಮ ಮಗ್ಗಗಳನ್ನು ಮುರಿದುಹಾಕಿ, ಮಾರುಕಟ್ಟೆಯನ್ನು ನಾಶ ಮಾಡಿದರು, ಮತ್ತು ಎಲ್ಲದರ ಮೇಲೂ ತೆರಿಗೆಯನ್ನು ಮೂರುಪಟ್ಟು ಹೆಚ್ಚಿಸಿ ತಮ್ಮ ದೇಶದಿಂದ ಬಟ್ಟೆಗಳನ್ನು ಆಮದು ಮಾಡಿಕೊಂಡರು. ’ಹತ್ತಿ ನೇಕಾರರ ಮೂಳೆಗಳಿಂದ ಭಾರತದ ನೆಲ ಬಿಳಿಚಿಕೊಳ್ಳುತ್ತಿದೆ.’ ಎಂದು ಆಗಿನ ಬ್ರಿಟಿಷ್ ಗವರ್ನರ್ ಜನರಲ್ ವಿಲಿಯಮ್ ಬೆಂಟಿಂಕ್ ಹೇಳಿದ್ದ. ಲಕ್ಷಗಟ್ಟಲೆ ಜನ ತಮ್ಮ ಜೀವನೋಪಾಯವನ್ನು ಕಳೆದುಕೊಂಡು ಹೊಟ್ಟೆಗಿಲ್ಲದೆ ಹಸಿವಿನಿಂದ ಸತ್ತರು. ಉಳಿದವರು ಬೇರೆ ದಾರಿಯಿಲ್ಲದೆ ಭೂಮಿಯನ್ನು ಹಾಗೋ ಹೀಗೋ ಉಳುಮೆ ಮಾಡತೊಡಗಿದರು. ಹೊಟ್ಟೆಪಾಡಿಗಾಗಿನ ಕೃಷಿ ಎಲ್ಲೆಡೆ ಹರಡಿತು.

ನಾನು ಒಂದು ಕಾನೂನನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅದರ ಪ್ರಕಾರ, ನೀವು ಒಂದು ಹೆಕ್ಟೇರಿನಷ್ಟು ಭೂಮಿಯನ್ನು ಹೊಂದಿದ್ದರೆ, ಕಡೇಪಕ್ಷ ನಿಮ್ಮ ಬಳಿ ಐದು ದನಗಳಾದರೂ ಇರಲೇಬೇಕು.

ಅವರ‍್ಯಾರೂ ಸಹ ಪಾರಂಪಾರಿಕ ಕೃಷಿಕರಾಗಿರಲಿಲ್ಲ ಆದರೆ ವಸ್ತ್ರ ತಯಾರಿಕೆಯಲ್ಲಿನ ವಿವಿಧ ಹಂತಗಳಲ್ಲಿ ನುರಿತಂತಹ ಜನರಾಗಿದ್ದರು ಮತ್ತು ವಿಧಿಯಿಲ್ಲದೆ ಬೇಸಾಯಕ್ಕಿಳಿದಿದ್ದರು. 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆತಾಗ, 90% ಜನ ಕೃಷಿಕರಾಗಿದ್ದರು. ಇಂದು ಅದು 70% ಗೆ ಇಳಿದಿದೆ. ಇದರರ್ಥ ಹತ್ತು ಜನರ ಆಹಾರವನ್ನು ಏಳು ಜನ ಬೆಳೆಯುತ್ತಿದ್ದಾರೆ ಎಂದು. ಇದು ಅಷ್ಟೇನು ಸಮರ್ಥವಾದ ರೀತಿಯಲ್ಲ, ಅಲ್ಲವೇ? ಒಂದಡಿ ಭೂಮಿಯನ್ನೂ ಬಿಡದೆ ನಾವು ಉಳುತ್ತಿದ್ದರೂ ಸಹ ನಮಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ನಮ್ಮ ಬೇಸಾಯದ ಪದ್ಧತಿಯಲ್ಲಿ ಮೂಲಭೂತ ಬದಲಾವಣೆಯನ್ನು ನಾವು ಮಾಡದ ಹೊರತಾಗಿ, ನಮಗೆ ಬೇರೆ ದಾರಿಯೇ ಇಲ್ಲ.

ಭಾರತದಲ್ಲಿ, ಜನ ಸಾವಿರಾರು ಪೀಳಿಗೆಗಳಿಂದ ಅದೇ ನೆಲವನ್ನೇ ಉತ್ತು ಬಿತ್ತುತ್ತಿದ್ದಾರೆ. ಆದರೆ ಕಳೆದ ಒಂದು ಪೀಳಿಗೆಯಲ್ಲಿ, ಮಣ್ಣಿನ ಗುಣಮಟ್ಟ ಎಷ್ಟು ಕ್ಷೀಣಿಸಿಬಿಟ್ಟಿದೆ ಎಂದರೆ ನೆಲ ಬಂಜರಾಗುವ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ, ಮರಗಳೆಲ್ಲವನ್ನೂ ಕಡಿದಿರುವುದು ಮತ್ತು ಲಕ್ಷಗಟ್ಟಲೆ ಜಾನುವಾರುಗಳನ್ನು ವಿದೇಶಕ್ಕೆ ರಫ಼್ತು ಮಾಡುತ್ತಿರುವುದೇ ಆಗಿದೆ. ನಮಗಿದು ಅರ್ಥವಾಗಬೇಕು - ಇಲ್ಲಿಂದ ಹೊರಹೋಗುತ್ತಿರುವುದು ರಾಸುಗಳಲ್ಲ, ನಮ್ಮ ನೆಲದ ಸಾರ. ಹೀಗಾದರೆ, ಮಣ್ಣಿನ ಸಾರವನ್ನು ಮತ್ತೆ ತುಂಬುವುದು ಹೇಗೆ? ನೀವು ಮಣ್ಣನ್ನು ಸಂರಕ್ಷಿಸಬೇಕೆಂದರೆ, ಅದರಲ್ಲಿ ಜೈವಿಕ ಅಂಶಗಳು ಬೀಳಬೇಕು. ಮರದ ಎಲೆಗಳಿಲ್ಲದೆ, ದನಗಳ ಸಗಣಿಯಿಲ್ಲದೆ ನೀವು ಮಣ್ಣನ್ನು ಫಲವತ್ತಾಗಿಸಲು ಸಾಧ್ಯವಿಲ್ಲ. ನಿಗದಿತ ವಿಸ್ತಾರದ ನೆಲದಲ್ಲಿ ಎಷ್ಟು ಮರಗಳಿರಬೇಕು ಮತ್ತು ಎಷ್ಟು ದನಗಳಿರಬೇಕು ಎಂಬುದು ಪ್ರತಿಯೊಂದು ಕೃಷಿಕ ಕುಟುಂಬಕ್ಕೂ ತಿಳಿದಿದ್ದ ಸಾಮಾನ್ಯ ತಿಳುವಳಿಕೆಯಾಗಿತ್ತು.

ಫಲವತ್ತಾಗಿರುವ ಒಂದು ಪ್ರದೇಶದಲ್ಲಿನ ಒಂದು ಕ್ಯೂಬಿಕ್ ಮೀಟರ್ ಮಣ್ಣನ್ನು ತೆಗೆದುಕೊಂಡು ಪರಿಶೀಲಿಸಿದರೆ, ಅದರಲ್ಲಿ ಸುಮಾರು 10,000 ಜಾತಿಯ ವಿವಿಧ ಜೀವಿಗಳಿರುವುದು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಈ ಅಗಾಧಸಂಖ್ಯೆಯಲ್ಲಿ ಜೀವಿಗಳು ಒಂದೆಡೆ ಕೇಂದ್ರೀಕೃತವಾಗಿರುವುದು ಈ ಭೂಗ್ರಹದಲ್ಲೇ ಅತಿಹೆಚ್ಚಿನದು.

ನಮ್ಮ ಹಳೆಯ ಪಂಚವಾರ್ಷಿಕ ಯೋಜನೆಯಲ್ಲಿ ಭಾರತದ 33% ನೆಲ ಹಸಿರಿನಿಂದ ಕೂಡಿರಬೇಕು ಎಂದು ಈಗಾಗಲೇ ನಿರ್ಧರಿಸಲಾಗಿದೆ, ಏಕೆಂದರೆ ನೀವು ಮಣ್ಣನ್ನು ರಕ್ಷಿಸಬೇಕಿದ್ದರೆ, ಇರುವುದು ಅದೊಂದೇ ಮಾರ್ಗ. ಮತ್ತು ನಾನು ಒಂದು ಕಾನೂನನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅದರ ಪ್ರಕಾರ, ನೀವು ಒಂದು ಹೆಕ್ಟೇರಿನಷ್ಟು ಭೂಮಿಯನ್ನು ಹೊಂದಿದ್ದರೆ, ಕಡೇಪಕ್ಷ ನಿಮ್ಮ ಬಳಿ ಐದು ದನಗಳಾದರೂ ಇರಲೇಬೇಕು. ಇಲ್ಲವಾದರೆ ನಿಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು, ಏಕೆಂದರೆ, ನೀವು ಆ ನೆಲವನ್ನು ಕೊಂದು ನಿಷ್ಪ್ರಯೋಜನಗೊಳಿಸುತ್ತಿದ್ದೀರಿ.

ಭಾರತದ ನೆಲದ ಒಂದು ವಿಶೇಷತೆಯೇನೆಂದರೆ, ಫಲವತ್ತಾಗಿರುವ ಒಂದು ಪ್ರದೇಶದಲ್ಲಿನ ಒಂದು ಕ್ಯೂಬಿಕ್ ಮೀಟರ್ ಮಣ್ಣನ್ನು ತೆಗೆದುಕೊಂಡು ಪರಿಶೀಲಿಸಿದರೆ, ಅದರಲ್ಲಿ ಸುಮಾರು 10,000 ಜಾತಿಯ ವಿವಿಧ ಜೀವಿಗಳಿರುವುದು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಈ ಅಗಾಧಸಂಖ್ಯೆಯಲ್ಲಿ ಜೀವಿಗಳು ಒಂದೆಡೆ ಕೇಂದ್ರೀಕೃತವಾಗಿರುವುದು ಈ ಭೂಗ್ರಹದಲ್ಲೇ ಅತಿಹೆಚ್ಚಿನದು. ಇದು ವೈಜ್ಞಾನಿಕ ಮಾಹಿತಿ; ಆದರೆ ಇದಕ್ಕೆ ತಕ್ಕ ವೈಜ್ಞಾನಿಕ ಕಾರಣ ನಮಗಿನ್ನೂ ದೊರೆತಿಲ್ಲ. ಆದ್ದರಿಂದ ಇಲ್ಲಿನ ಮಣ್ಣಿಗೆ ಸ್ವಲ್ಪ ಸಹಾಯ ಬೇಕು ಅಷ್ಟೆ. ನೀವು ಆ ಸಣ್ಣ ಸಹಾಯವನ್ನು ನೀಡಿದರೆ, ಅದು ಬಹು ಬೇಗನೆ ಎಂದಿನಂತೆ ಫಲವತ್ತಾಗುತ್ತದೆ. ಆದರೆ ಈ ಪೀಳಿಗೆಯ ಪ್ರಜೆಗಳಾಗಿ, ನಮ್ಮಲ್ಲಿ ಆ ಚಿಕ್ಕ ಸಹಾಯವನ್ನು ನೀಡುವ ಮನಸ್ಸು ಮತ್ತು ಬುದ್ಧಿ ಇದೆಯೇ? ಅಥವಾ ಅದು ಸಾಯುತ್ತಿರುವುದನ್ನು ನೋಡುತ್ತಾ ನಾವು ಹೀಗೆ ಸುಮ್ಮನೆ ಕೂರುತ್ತೇವೆಯೇ?

ಉದಾಹರಣೆಗೆ, ಕಾವೇರಿಯ ಜಲಾನಯನ ಪ್ರದೇಶ ಸುಮಾರು 85 ಸಾವಿರ ಚದರ ಕಿಲೋಮೀಟರ್ ನಷ್ಟಿದೆ. ಕಳೆದ ಐವತ್ತು ವರ್ಷಗಳಲ್ಲಿ ಅಲ್ಲಿನ 87% ಹಸಿರು ಹೊದಿಕೆಯನ್ನು ನಾಶಮಾಡಲಾಗಿದೆ. ಆದ್ದರಿಂದ, ಕಾವೇರಿ ನದಿಯ ಪುನಶ್ಚೇತನಕ್ಕಾಗಿ ನಾನೀಗ ’ಕಾವೇರಿ ಕೂಗು’ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ. ಕಾವೇರಿಯ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಹಸಿರಿನಡಿ ತರಲು ನಾವು 242 ಕೋಟಿ ಮರಗಳನ್ನು ನೆಡಬೇಕಾಗಿದೆ. ಇದರರ್ಥ 2.42 ಬಿಲಿಯನ್ ಮರಗಳು! ಈಶ ಸಂಸ್ಥೆ ಈ ಮರಗಳನ್ನು ನೆಡುವುದೆಂದಲ್ಲ. ನಾವು ಅರಣ್ಯ ಕೃಷಿ (ಆಗ್ರೋಫ಼ಾರೆಸ್ಟ್ರಿ) ಆಂದೋಲನವನ್ನು ತರಬೇಕೆಂದಿದ್ದೇವೆ, ಮತ್ತು ರೈತರಿಗೆ ಅದು ಅತ್ಯುತ್ತಮವಾದ ಆರ್ಥಿಕ ಮಾದರಿ ಎಂಬ ಬಗ್ಗೆ ಮನವರಿಕೆ ಮಾಡಿಕೊಡಲಿದ್ದೇವೆ.

ಕರ್ನಾಟಕದಲ್ಲಿ ಒಬ್ಬ ಸಾಧಾರಣ ರೈತ ವರ್ಷಕ್ಕೆ ಪ್ರತಿ ಹೆಕ್ಟೇರಿಗೆ ಸುಮಾರು 42 ಸಾವಿರ ರೂಪಯಿಗಳನ್ನು ಗಳಿಸಿದರೆ ತಮಿಳುನಾಡಿನಲ್ಲಿನ 46 ಸಾವಿರ ಗಳಿಸುತ್ತಿದ್ದಾನೆ. ಮೊದಲ ಐದು ವರ್ಷಗಳಲ್ಲಿ, ಐದು ವರ್ಷಗಳ ಸರಾಸರಿ ಆದಾಯವನ್ನು, ನಾವು ವರ್ಷಕ್ಕೆ ಸರಾಸರಿ ನಲವತ್ತೈದು ಸಾವಿರದಿಂದ ಮೂರು ಲಕ್ಷ ಅರವತ್ತು ಸಾವಿರಕ್ಕೆ ಏರಿಸಬಹುದಾಗಿದೆ. ಒಮ್ಮೆ ರೈತರು ಈ ಬದಲಾವಣೆಯ ಆರ್ಥಿಕ ಲಾಭವನ್ನು ಮನಗಂಡರೆ ಸಾಕು, ಮುಂದಿನ ವರ್ಷಗಳಲ್ಲಿ ನಾವು ಅವರ ಮನವೊಲಿಸಬೇಕಾಗಿಲ್ಲ. ಅವರು ಹೇಗಿದ್ದರೂ ಅದನ್ನು ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಜಮೀನಿನ ಮೂರನೇ ಒಂದು ಭಾಗವನ್ನು ಅರಣ್ಯ ಕೃಷಿಗೆ ಬದಲಾಯಿಸಿಕೊಂಡರೆ, ಅವರ ಆದಾಯ ಬಹಳಷ್ಟು ಹೆಚ್ಚಿಗೆಯಾಗುವುದರ ಜೊತೆಗೆ ಭೂಮಿಯೂ ಸಹ ಫಲವತ್ತಾಗುತ್ತದೆ.

ಸಂಪಾದಕರ ಟಿಪ್ಪಣಿ: ನಮ್ಮ ನದಿಗಳನ್ನು ಪುನರುಜ್ಜೀವನಗೊಳಿಸುವ ರಾಷ್ಟ್ರವ್ಯಾಪಿ ಅಭಿಯಾನ - ನೀವು ರ‍್ಯಾಲೀ ಫಾರ್ ರಿವರ್ಸ್-ನಲ್ಲಿ ಹೇಗೆ ಭಾಗವಹಿಸಬಹುದು ಮತ್ತು ತೊಡಗಿಸಿಕೊಳ್ಳಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ RallyForRivers.org

"ಕಾವೇರಿ ಕೂಗು" - ಕಾವೇರಿಯನ್ನು ಉಳಿಸಲು ಇಂದೇ ಕಣಕ್ಕೆ CauveryCalling.Org ಪುಟಕ್ಕೆ ಭೇಟಿ ನೀಡಿ ಅಥವಾ 80009 80009 ಕ್ಕೆ ಕರೆ ಮಾಡಿ