ಪ್ರಶ್ನೆ : ಪ್ರಣಾಮ ಸದ್ಗುರು. ನನ್ನ ಪ್ರಶ್ನೆಯು ನನ್ನನ್ನು ನಿಜವಾಗಿಯೂ ಸುಡುತ್ತಿದೆ. ಸಣ್ಣ ಸಣ್ಣ ಆಸೆಗಳೊಂದಿಗೆ, ನನಗೆ ಪರತತ್ವದ ಬಯಕೆಯೂ ಇದೆ. ನನ್ನಲ್ಲಿ ಇನ್ನೂ ಸಣ್ಣ ಸಣ್ಣ ಆಸೆಗಳು ಇರುವುದರಿಂದ ನಾನು ದ್ವಂದ್ವದಲ್ಲಿದ್ದೇನೆ. ಈ ಸಣ್ಣ ಸಣ್ಣ ಆಸೆಗಳೊಂದಿಗೆ, ಮತ್ತು ಮನಸ್ಸಿನಲ್ಲಿ ಅತ್ಯುನ್ನತವಾದ ಆಸೆಯನ್ನೂ ಇಟ್ಟುಕೊಂಡು, ನಾನು ಎಲ್ಲಿಗಾದರೂ ತಲುಪಲು ಸಾಧ್ಯವೇ? ನನಗೆ ಮೀರುವಿಕೆಯ ಅರ್ಥ ತಿಳಿಯುತ್ತಿಲ್ಲ. ಜೀವನದಲ್ಲಿ ಈ ಸಣ್ಣ ಸಣ್ಣ ಸುಖಗಳನ್ನು ಮೀರುವುದು ಹೇಗೆ ಮತ್ತು ನನ್ನ ಹಾದಿ ತ್ವರಿತವಾಗಲು ಅತ್ಯುನ್ನತವಾದುದ್ದನ್ನು ಸ್ಪಷ್ಟವಾದ ಅರಿವಿನಿಂದ ಕಾಣುವುದು ಹೇಗೆ?  

ಸದ್ಗುರು : ಹಾಗಾದರೆ, ನೀವು ಸಣ್ಣ ಆಸೆಗಳಿಂದ ಬಾಧೆಗೊಳಗಾಗುತ್ತಿದ್ದೀರಿ. ಇಲ್ಲಿನ ಮೂಲಭೂತ ತಪ್ಪು ತಿಳುವಳಿಕೆಯೆಂದರೆ ನೀವು ತಕ್ಷಣದ ಶ್ರೇಯಸ್ಸು ಮತ್ತು ಅತ್ಯುನ್ನತ ಶ್ರೇಯಸ್ಸು ಎರಡನ್ನೂ ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವಿರಿ. ನೀವು ಅವುಗಳನ್ನು ಪ್ರತ್ಯೇಕಿಸಲಾಗದು. ಈ ನಗರದಲ್ಲಿ ಅನೇಕ ಸಂಪಂಗಿ ಮರಗಳಿರಬಹುದು. ಒಂದು ಬೀದಿಯಲ್ಲಿ? ಆ ಮರದಲ್ಲಿ ಒಂದು ಸಣ್ಣ ಹೂವು ಅರಳಿದರೆ, ಅದು ಅಷ್ಟೊಂದು ಸುಂಗಧವನ್ನು ಬೀರಿದರೂ ಮತ್ತು ಸುಂದರವಾಗಿದ್ದರೂ, ಬಹುಶಃ ನೀವದನ್ನು ಕಡೆಗಣಿಸಲು ಬಯಸುತ್ತೀರಿ. ನೀವು ಕಡೆಗಣಿಸಬಹುದಾದ ಈ ಸಣ್ಣ ಹೂವು, ಅದು ಅರಳಬೇಕಾದರೆ, ಅದರೊಳಗೆ ಸೃಷ್ಟಿಯ ಮೂಲ ಕೆಲಸ ಮಾಡುತ್ತಿರಬೇಕು. ಅದು ನಿಮ್ಮಲ್ಲಿಯೂ ಕೆಲಸ ಮಾಡುತ್ತಿದೆಯೆಂದು ನಿಮಗೆ ಅನಿಸುತ್ತದೆಯೇ? ಒಂದು ಇರುವೆಯಲ್ಲಿ? ನೀವು ಒಂದು ಇರುವೆಯನ್ನು ಗಮನಿಸಿದರೆ, ಅದರ ಆರು ಕಾಲುಗಳ ಮೂಲಕ ಅದರ ನಡೆಯುವ ಸಾಮರ್ಥ್ಯ ಅತ್ಯದ್ಭುತ. ಅದು ಅಷ್ಟು ಉತ್ಕೃಷ್ಟವಾದ ಯಾಂತ್ರ ವಿನ್ಯಾಸವಾಗಿದೆ. ಸೃಷ್ಟಿಯ ಮೂಲ ಅಲ್ಲಿ ಖಚಿತವಾಗಿ ತೊಡಗಿಕೊಂಡಿದೆ, ಮತ್ತು ಅದು ಒಂದು ಇರುವೆಯಲ್ಲಿ ತೊಡಗಿಕೊಂಡಿರುವಂತೆಯೇ ಬೇರೆಲ್ಲದರಲ್ಲೂ ತೊಡಗಿಕೊಂಡಿದೆ.
 

ಗಾಢವಾದ ಗಮನವನ್ನು ನೀಡುವುದು

ಸಣ್ಣ ಸಂಗತಿಯಿಂದ ಹಿಡಿದು ದೊಡ್ಡ ಸಂಗತಿಯವರೆಗೆ, ಪ್ರತಿಕ್ಷಣದಲ್ಲೂ, ದೈವಿಕತೆಯ ಕೈವಾಡವಿಲ್ಲದೇ ಯಾವುದೂ ಸಂಭವಿಸುತ್ತಿಲ್ಲ. ನಿಮ್ಮ ಸಣ್ಣ ಆಲೋಚನೆ, ನಿಮ್ಮ ಉದಾರ ಆಲೋಚನೆ, ನಿಮ್ಮ ಲೌಕಿಕ ಆಲೋಚನೆ, ನಿಮ್ಮ ಅಲೌಕಿಕ ಆಲೋಚನೆ, ಎಲ್ಲದರ ಹಿಂದೆಯೂ ಒಂದೇ ಶಕ್ತಿಯ ಆಟವಿದೆ. ನಿಮ್ಮ ಆಲೋಚನೆ ಎಷ್ಟೇ ಅಲಕ್ಷ್ಯ ಮಟ್ಟದ ಅಥವಾ ಮೇಲುಮೇಲಿನದಾಗಿದ್ದರೂ ಸಹ, ನೀವು ಅದರ ಬಗ್ಗೆ ಗಾಢವಾದ ಗಮನವನ್ನು ನೀಡಿದರೆ, ಅದು ಒಂದು ಆಧ್ಯಾತ್ಮಿಕ ಪ್ರಕ್ರಿಯೆಯಾಗುತ್ತದೆ. ನಿಮ್ಮ ಕಿರುಬೆರಳನ್ನು ಅಲ್ಲಾಡಿಸುವ ಒಂದು ಸರಳ ಕ್ರಿಯೆಯೂ - ಸಂಪೂರ್ಣ ಗಮನವನ್ನು ನೀಡುತ್ತಾ ನಿಮ್ಮ ಕಿರುಬೆರಳನ್ನು ಚಲಿಸಿ ನೋಡಿ -ಅದೊಂದು ನಿಮ್ಮ ಆಧ್ಯಾತ್ಮಿಕ ಪ್ರಕ್ರಿಯೆಯಾಗುತ್ತದೆ.

ನೀವು ಒಂದನ್ನು ಪವಿತ್ರ ಮತ್ತು ಇನ್ನೊಂದನ್ನು ಕೊಳಕು ಎಂದು ಭಾವಿಸಿದರೆ, ನೀವು ಕಳೆದು ಹೋಗುವಿರಿ.
 
 
ಲೌಕಿಕತೆ ಯಾವುದು ಮತ್ತು ಪವಿತ್ರವಾದದ್ದು ಯಾವುದು ಎನ್ನುವುದು ನಿಮ್ಮ ಸೃಷ್ಟಿ. ಅಸ್ತಿತ್ವದ ದೃಷ್ಟಿಯಲ್ಲಿ ಅದು ನಿಜವಲ್ಲ. ಸೃಷ್ಟಿಯ ಸ್ವರೂಪದಿಂದ ಲೌಕಿಕತೆ ಮತ್ತು ಪಾವಿತ್ರ್ಯ ಎನ್ನುವುದು ಅಸ್ತಿತ್ವದಲ್ಲಿಲ್ಲ, ಅದು ಇರುವುದು ನೀವು ಅದರ ಬಗ್ಗೆ ನೀಡುವ ಗಮನದ ರೀತಿಯಲ್ಲಿ. ನೀವು ಎಲ್ಲಾ ಸಂಗತಿಗಳಿಗೂ ಒಂದೇ ರೀತಿಯ ಗಮನವನ್ನು ನೀಡಿದರೆ, ಎಲ್ಲವೂ ಪವಿತ್ರವಾಗುತ್ತದೆ. ಭಾರತವೆಂದರೆ ಅದೇ. ಅದೇ ಭಾರತದ ಸೊಬಗು.

ಇಂದು, ನೀವು ಬೀದಿಯಲ್ಲಿ ಸಾಗಿದರೆ, ನೀವು ಕೆಲವು ಕಲ್ಲುಗಳಿರುವ ಒಂದು ಉದ್ಯಾನದ ಎದುರುಗಡೆಯಿಂದ ಹೋಗುತ್ತಿರಬಹುದು. ನಾಳೆ ಯಾರಾದರೂ ಒಬ್ಬರು ಬಂದು ಅಲ್ಲಿರುವ ಒಂದು ಕಲ್ಲಿಗೆ ವಿಭೂತಿ ಅಥವಾ ಕುಂಕುಮ ಹಚ್ಚಿ, ಒಂದು ಹೂವನ್ನಿಟ್ಟರೆ, ಮುಂದಿನ ಬಾರಿ ನೀವು ಆ ಕಲ್ಲಿನ ಹತ್ತಿರ ಹೋದರೆ, ಸಹಜವಾಗಿಯೇ ನೀವು ಅದಕ್ಕೆ ತಲೆಬಾಗುವಿರಿ. ನೀವು ನೀಡುವ ಗಮನದಿಂದ ಅದು ಕೂಡಲೇ ಪವಿತ್ರವಾಗುತ್ತದೆ. ಅದು ಯಾವಾಗಲೂ ಹಾಗೆಯೇ ಇತ್ತು, ಆದರೆ ನೀವು ಅದನ್ನು ಕಾಣುತ್ತಿರಲಿಲ್ಲ. ಈಗ, ಯಾರೋ ಒಬ್ಬರು ಅದರ ಮೇಲೆ ಒಂದು ಚಿಹ್ನೆಯನ್ನು ಇಟ್ಟರೆ, ನೀವದನ್ನು ಕಾಣುತ್ತಿರುವಿರಿ.

ಹೀಗಾಗಿಯೇ ಒಂದು ವಿಗ್ರಹಕ್ಕೆ ನೀವು ಅನ್ವಯಿಸುವುದೆಲ್ಲವನ್ನೂ, ನಿಮಗೆ ನೀವೇ ಅನ್ವಯಿಸಿಕೊಳ್ಳುತ್ತೀರಿ. ನೀವು ದೇವರಿಗೆ ಕುಂಕುಮವನ್ನು ಇಡುತ್ತೀರಿ, ನಿಮಗೂ ಇಟ್ಟುಕೊಳ್ಳುತ್ತೀರಿ; ನೀವು ದೇವರಿಗೂ ವಿಭೂತಿ ಇಡುತ್ತೀರಿ, ನಿಮಗೂ ಇಟ್ಟುಕೊಳ್ಳುತ್ತೀರಿ, ಏಕೆಂದರೆ ಪ್ರತಿಯೊಬ್ಬ ಮನುಷ್ಯನ ಬಗ್ಗೆಯೂ ಅದೇ ರೀತಿಯ ಗಮನವನ್ನು ನೀಡುವುದು ಅತ್ಯಂತ ಮಹತ್ವಪೂರ್ಣವಾದದ್ದು. ನೀವು ದೇವಸ್ಥಾನದಲ್ಲಿ ದೇವರ ಮುಂದೆ ನಿಂತ ಹಾಗೆಯೇ, ನೀವು ಇನ್ನೊಬ್ಬ ಮನುಷ್ಯನ ಮುಂದೆ ನಿಂತರೆ, ನಿಮಗೆ ಅಲ್ಲಿ ಏನಾಗುತ್ತದೋ ಅದೇ ಇಲ್ಲಿಯೂ ಆಗುವುದನ್ನು ಕಾಣುವಿರಿ.

ನೀವು ಒಂದನ್ನು ಪವಿತ್ರ ಮತ್ತು ಇನ್ನೊಂದನ್ನು ಕೊಳಕು ಎಂದು ಭಾವಿಸಿದರೆ, ನೀವು ಕಳೆದು ಹೋಗುವಿರಿ. ಜೀವನವನ್ನು ಸಮೀಪಿಸಲು ಕೇವಲ ಎರಡು ರೀತಿಗಳಿವೆ. ಎಲ್ಲವನ್ನೂ - ನೀವು, ನಿಮ್ಮ ತಾಯಿ, ನಿಮ್ಮ ತಂದೆ, ನಿಮ್ಮ ದೇವರು - ಎಲ್ಲವನ್ನೂ ಕೊಳಕು ಎಂದು ಭಾವಿಸಿಕೊಳ್ಳಿ. ನೀವು ಗುರಿಯನ್ನು ಸಾಧಿಸುವಿರಿ. ಅದು ಅತ್ಯಂತ ಕಠಿಣವಾದದ್ದು ಆದರೆ ತ್ವರಿತವಾದ ವಿಧಾನ. ಅಥವಾ ನೀವು ಎಲ್ಲವನ್ನೂ ಪವಿತ್ರವೆಂದು ಕಾಣಬಹುದು. ಆಗಲೂ ನೀವು ನಿಮ್ಮ ಗುರಿಯನ್ನು ಸಾಧಿಸುವಿರಿ. ಇದು ಒಂದು ಪ್ರಸನ್ನತೆಯ ಮಾರ್ಗ. ನಿಮಗೆ ಯಾವುದು ಸೂಕ್ತವೋ ಅದನ್ನು ಮಾಡಿರಿ.

Editor's Note: Find out more about the incredible potential every human being carries, in the free ebook, “From Creation to Creator”.