ಪ್ರಜ್ಞೆಯೆಂದರೆ ಸ್ವ-ಪ್ರಜ್ಞೆಯಲ್ಲ. ಸ್ವ-ಪ್ರಜ್ಞೆ ಒಂದು ರೋಗ; ಮತ್ತು ಪ್ರಜ್ಞಾಹೀನತೆ ಎಂದರೆ ಸಾವು.  ಪ್ರಜ್ಞಾಪೂರ್ವಕರಾಗಿರುವುದೆಂದರೆ ನೀವು ನಿಮ್ಮ ಮೂಲಸ್ವಭಾವದೊಂದಿಗೆ ಸಂಪರ್ಕದಲ್ಲಿದ್ದೀರಿ ಎಂದರ್ಥ. ನೀವು ಯಾವುದನ್ನು ಪ್ರಜ್ಞೆ ಎಂದು ಕರೆಯುತ್ತೀರೋ ಅದು ಒಂದು ಕ್ರಿಯೆಯಲ್ಲ, ಅದೊಂದು ಸಿದ್ಧಾಂತವಲ್ಲ ಅಥವಾ ಅದು ಒಂದು ಗುಣವೈಶಿಷ್ಟ್ಯವೂ ಅಲ್ಲ – ಅದು ಈ ಸೃಷ್ಟಿಯ ಮೂಲ. ನಿಮ್ಮ ಪ್ರಜ್ಞೆ ಸುಧಾರಿಸಿದೆ ಎಂದು ನಾವು ಹೇಳಿದರೆ, ನೀವು ನಿಮ್ಮ ನಾಯಿಗಿಂತ ಹೆಚ್ಚು ಜಾಗೃತರಾಗಿದ್ದೀರಿ ಎಂದರ್ಥವಲ್ಲ. ಜಾಗೃತಿ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದು. ಪ್ರಜ್ಞೆಯು ಮನಸ್ಸಿನ ವಿಷಯವಲ್ಲ, ಆದರೆ ಪ್ರಜ್ಞೆಯಿದ್ದರೆ, ಅದು ಮನಸ್ಸನ್ನು ತಿಳಿಯಾಗಿಸುತ್ತದೆ. ಅದು ನಿಮ್ಮ ಮನಸ್ಸು ಮತ್ತು ಶರೀರದ ಮೂಲಕ ಅತ್ಯಂತ ಪ್ರಬಲವಾಗಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ನಿಮ್ಮ ಪ್ರತಿಯೊಂದು ಕಣ ಕಣದ ಮೂಲಕವೂ ಅದು ವ್ಯಕ್ತವಾಗುತ್ತದೆ.

 

ನೀವು ಏನನ್ನೋ ಮಾಡುತ್ತಿದ್ದೀರಿ ಎನ್ನುವ ಕಾರಣಕ್ಕೆ ನಿಮ್ಮಲ್ಲಿ ಪ್ರಜ್ಞೆ ಸಂಭವಿಸುವುದಿಲ್ಲ, ಆದರೆ ನೀವು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ ಎನ್ನುವ ಕಾರಣದಿಂದಾಗಿ ಅದು ಸಾಧ್ಯವಾಗುತ್ತದೆ. ನಿಮ್ಮ ಜೀವ ಮಿಡಿಯುತ್ತಿದೆ, ಆದರೆ ಅದನ್ನು ನೀವು ಮಾಡುತ್ತಿಲ್ಲ. ನಾವು ಪ್ರಜ್ಞೆ ಎಂದು ಯಾವುದನ್ನು ಕರೆಯುತ್ತಿದ್ದೇವೋ ಅದು ನಿಮ್ಮ ಜೀವ ಮತ್ತು ಅಸ್ತಿತ್ವದ ಮೂಲಾಧಾರವಾಗಿದೆ. ಅದು ನೀವು ಒಂದು ನಿರ್ದಿಷ್ಟ ಸಮಯದಲ್ಲಿ ಮಾಡುವಂತದ್ದಲ್ಲ ಅಥವಾ ಮಾಡದೇ ಇರುವಂತದ್ದಲ್ಲ. ಅದು ನಿಮಗೆ ಲಭ್ಯವಿದೆಯೋ ಅಥವಾ ಇಲ್ಲವೋ ಎನ್ನುವುದಷ್ಟೇ ಇಲ್ಲಿನ ಪ್ರಶ್ನೆ. ನೀವು ಪ್ರಜ್ಞೆಗೆ ಯಾವಾಗಲೂ ಲಭ್ಯವಾಗಿರುತ್ತೀರಿ – ನಿಮಗದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ – ಆದರೆ ಅದು ನಿಮಗೆ ಲಭ್ಯವಿದೆಯೇ?

ನೀವು ಯಾವುದನ್ನು ಪ್ರಜ್ಞೆ ಎಂದು ಕರೆಯುತ್ತೀರೋ ಅದು ಒಂದು ಕ್ರಿಯೆಯಲ್ಲ, ಅದೊಂದು ಸಿದ್ಧಾಂತವಲ್ಲ ಅಥವಾ ಅದು ಒಂದು ಗುಣವೈಶಿಷ್ಟ್ಯವೂ ಅಲ್ಲ – ಅದು ಈ ಸೃಷ್ಟಿಯ ಮೂಲ.

ನಿಮ್ಮ ಜೀವನದಲ್ಲಿ ಪ್ರಜ್ಞೆಯ ಪಾತ್ರ ಯಾವಾಗಲೂ ಇದ್ದೇ ಇರುತ್ತದೆ. ನಿಮಗೆ ಅದರೊಂದಿಗೆ ಸಂಪರ್ಕವಿದೆಯೋ ಇಲ್ಲವೋ ಎನ್ನುವುದೇ ಮುಖ್ಯ. ನೀವು ಅದರ ಸಂಪರ್ಕವನ್ನು ಏಕೆ ತಪ್ಪಿಸಿಕೊಳ್ಳುತ್ತಿದ್ದೀರಿ ಎಂದರೆ, ನೀವದನ್ನು ಸಂಪರ್ಕಿಸಿದರೆ, ನೀವೇ ಇಲ್ಲವಾಗುತ್ತೀರಿ – ನಿಮ್ಮ ಅಸ್ತಿತ್ವ ಉಳಿಯುವುದಿಲ್ಲ. ನಿಮಗೆ ಹಮ್ಮು ಅಥವಾ ನಾಚಿಕೆ, ನೋವು ಅಥವಾ ನಲಿವು, ಯಾವುದೂ ಇರುವುದಿಲ್ಲ, ಆದರೆ ನೀವು ಬಯಸಿದ್ದನ್ನೆಲ್ಲಾ ನೀವು ಮಾಡಬಹುದು. ನೋಡಿ, ನಾನು ಬಯಸಿದ್ದೆಲ್ಲವನ್ನೂ ನಾನು ಮಾಡುತ್ತಿದ್ದೇನೆ, ಆದರೆ ನಿಜವಾಗಿಯೂ ನಾನು ಏನನ್ನೂ ಮಾಡುತ್ತಿಲ್ಲ. ನಿಮ್ಮ ಜೀವನದಲ್ಲಿ ನೀವು ಏನನ್ನೂ ಸಾಧಿಸುವುದಿಲ್ಲ, ಆದರೆ ನೀವು ನಿಮ್ಮೊಳಗೆ ಯಾರಿಗಿಂತಲೂ ಮೇಲು ಅಥವಾ ಕೀಳಾಗಿರುವುದಿಲ್ಲ. ನೀವು ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ, ಆದರೆ ನೀವು ಬಯಸಿದ್ದನ್ನು ನೀವು ಮಾಡಬಹುದು. ನೀವು ಈ ಜೀವನದ ಅನುಭವವನ್ನು ನಿಮಗೆ ಬೇಕಾದ ಹಾಗೆ ಮಾಡಿಕೊಳ್ಳಬಹುದು.

ಜೀವನವನ್ನು ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳುವ ಸ್ವಾತಂತ್ರ್ಯ

ಸ್ವಾತಂತ್ರ್ಯವೇ ನಿಮ್ಮ ಅತ್ಯುನ್ನತ ಗುರಿಯಾಗಿದ್ದರೆ, ನೀವು ಸುಮ್ಮನೆ ಒಂದು ರೀತಿಯ ಪರಿತ್ಯಾಗದ ಸ್ಥಿತಿಯ ಕಡೆಗೆ ಸಾಗಬೇಕು.

ಇದೀಗ, ನಾನು ಮನಸ್ಸು ಮಾಡಿದರೆ, ಕೆಲವೇ ಕ್ಷಣಗಳಲ್ಲಿ ನನ್ನನ್ನು ನಾನು ಅತ್ಯಂತ ದುಃಖಿಯನ್ನಾಗಿಸಿಕೊಳ್ಳಬಹುದು, ಶೋಕದಿಂದ ಕಣ್ಣೀರು ಹರಿಸುವಂತೆ ಮಾಡಿಕೊಳ್ಳಬಹುದು, ಅಥವಾ ನನ್ನನ್ನು ನಾನು ಪರಮಾನಂದದ ಸ್ಥಿತಿಗೆ ಕೊಂಡೊಯ್ಯಬಹುದು, ಆದರೆ ಅವೆರಡೂ ಸಹ ನನ್ನದೇ ಕೃತ್ಯಗಳೆಂದು ನನಗೆ ತಿಳಿದಿದೆ. ನೀವು ಹೇಳುವ ಜೀವನದ ಏರಿಳಿತದ ಆಟಗಳ್ಯಾವುವೂ ಅಲ್ಲಿರುವುದಿಲ್ಲ, ಆದರೆ ಅಲ್ಲಿ ಸ್ವಾತಂತ್ರ್ಯವಿರುತ್ತದೆ. ನೀವದರಿಂದ ಏನನ್ನಾದರೂ ಮಾಡಬಹುದು.  ಸ್ವಾತಂತ್ರ್ಯವೇ ನಿಮ್ಮ ಅತ್ಯುನ್ನತ ಗುರಿಯಾಗಿದ್ದರೆ, ನೀವು ಸುಮ್ಮನೆ ಒಂದು ರೀತಿಯ ಪರಿತ್ಯಾಗದ ಸ್ಥಿತಿಯ ಕಡೆಗೆ ಸಾಗಬೇಕು. ಇದರರ್ಥ ನೀವು ನಿಮ್ಮ ಹೊಣೆಗಾರಿಕೆಯನ್ನು ತ್ಯಜಿಸಬೇಕೆಂದಲ್ಲ. ಜನರು ಮೊದಲು ತ್ಯಜಿಸಬೇಕೆಂದುಕೊಳ್ಳುವುದು ಅದನ್ನೇ, ಏಕೆಂದರೆ ಅವರು ತಮಗೆ ಅನನುಕೂಲವಾದದ್ದನ್ನೆಲ್ಲಾ ತ್ಯಜಿಸಬೇಕೆಂದು ಬಯಸುತ್ತಾರೆ – ಅವರ ಕುಟುಂಬ ಮತ್ತು ಬೇರೆಲ್ಲವನ್ನೂ ಕೂಡ. ಆದರೆ ತಮ್ಮ ಸಿದ್ಧಾಂತಗಳು, ಅಭಿಪ್ರಾಯಗಳು, ಕಲ್ಪನೆಗಳು ಮತ್ತು ಜೀವನದ ಬಗ್ಗೆ ಅವರಿಗಿರುವ ಅಹಂಭಾವದ ಧೋರಣೆಗಳನ್ನು ಮಾತ್ರ ಅವರು ತ್ಯಜಿಸುವುದಿಲ್ಲ.

ಪರಿತ್ಯಾಗವೆಂದರೆ ಇದನ್ನು ಅಥವಾ ಅದನ್ನು ತ್ಯಜಿಸುವುದಲ್ಲ – ನಿಮ್ಮನ್ನು ನೀವು ತ್ಯಜಿಸಬೇಕು. ನಿಮ್ಮನ್ನು ಬಿಟ್ಟು ಬೇರೆಲ್ಲವನ್ನೂ ನೀವು ಅಮೂಲ್ಯವೆಂದು ಭಾವಿಸಿಬೇಕು. ನೀವು ಹಾಗೆ ಮಾಡಿದರೆ, ಜೀವನ ಒಳ್ಳೆಯದೂ ಆಗಿರುವುದಿಲ್ಲ, ಕೆಟ್ಟದ್ದೂ ಆಗಿರುವುದಿಲ್ಲ. ಅದು ಸುಂದರವೂ ಅಲ್ಲ, ವಿಕಾರವೂ ಅಲ್ಲ – ಅದು ನೀವು ಹೆಸರಿಸಲಾಗದಂತದ್ದು. ಅದು ಜನರು ತಿಳಿದಿರುವ ಹಾಗಲ್ಲ. ಇದು ಹೇಗೆಂದರೆ, ನೀವು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರೆ, ಮುಂದಿನ ಹಂತಕ್ಕೆ ಹೋಗುವ ಸಮಯ.

ಸಂಪಾದಕರ ಟಿಪ್ಪಣಿ: ಸಂತೋಷ, ಶಾಂತಿ, ಯೋಗಕ್ಷೇಮ, ಯಶಸ್ಸು ಮತ್ತು ಇನ್ನೂ ಹೆಚ್ಚಿನದಕ್ಕಾಗಿ ಐದು ನಿಮಿಷಗಳ ಸರಳ ಉಪ-ಯೋಗದ ಅಭ್ಯಾಸಗಳನ್ನು ಇಲ್ಲಿ ನೋಡಿ ತಿಳಿಯಿರಿ "5-minute Yoga Tools for Transformation" ,ಅದನ್ನು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು download the app for Android and iOS.

ಈ ಲೇಖನದ ಒಂದು ಆವೃತ್ತಿಯು ಮೊದಲಿಗೆ ಅಕ್ಟೋಬರ್ 2018 ರ "ಈಶ ಫಾರೆಸ್ಟ್ ಫ್ಲವರ್" ನಲ್ಲಿ ಪ್ರಕಟವಾಗಿತ್ತು.