ಪತಂಜಲಿಯ ಯೋಗ ಸೂತ್ರಗಳು – ಒಂದು ಪರಿಚಯ 

ಸದ್ಗುರು: ಪತಂಜಲಿ ಮುನಿಗಳು ಜ್ಞಾನೋದಯವನ್ನು ಹೊಂದಿದ್ದು ಹಾಗಿರಲಿ; ಆದರೆ ಅವರಿಗಿದ್ದ ಬುದ್ಧಿಶಕ್ತಿಯು, ಉನ್ನತವಾದ ವಿಜ್ಞಾನಿಗಳನ್ನೂ ಸಹ ಶಿಶುವಿಹಾರದ ಮಕ್ಕಳಂತೆ ಕಾಣುವ ಹಾಗೆ ಮಾಡುವ ಬಗೆಯದ್ದಾಗಿತ್ತು - ಜೀವನದ ಪ್ರತಿಯೊಂದು ಅಂಶದ ಬಗ್ಗೆ ಅವರು ಅರ್ಥಮಾಡಿಕೊಂಡಿದ್ದ ರೀತಿ ಅಂತಹದ್ದಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಪತಂಜಲಿ ಮುನಿಗಳ ಕಾಲದಲ್ಲಿ, ಯೋಗವು ಯಾವ ರೀತಿಯಲ್ಲಿ ಪರಿಣತಿಯನ್ನು ಹೊಂದಲು ಪ್ರಾರಂಭಿಸಿತ್ತೆಂದರೆ, ಅಲ್ಲಿ ಯೋಗದ ನೂರಾರು ಶಾಲೆಗಳು ಸ್ಥಾಪಿತವಾಗಿದ್ದವು. ಇದನ್ನು ಇಂದಿನ ವೈದ್ಯಕೀಯ ವಿಜ್ಞಾನದಲ್ಲಿ ಆಗಿರುವ ವಿಶೇಷಜ್ಞತೆಗೆ ಹೋಲಿಸಬಹುದು. ಮೂವತ್ತು ವರ್ಷಗಳ ಹಿಂದೆ, ನಿಮಗೇನೇ ಆದರೂ, ನೀವು ಕೇವಲ ಒಬ್ಬ ಕುಟುಂಬ ವೈದ್ಯರ ಬಳಿಗೆ ಹೋಗುತ್ತಿದ್ದಿರಿ. ಆದರೆ ಈಗ, ದೇಹದ ಪ್ರತಿಯೊಂದು ಭಾಗಕ್ಕೂ, ನೀವು ಬೇರೆ ಬೇರೆ ವೈದ್ಯರನ್ನು ಕಾಣುತ್ತಿದ್ದೀರಿ. ಬಹುಶಃ ಇನ್ನೊಂದು ಐವತ್ತು ವರ್ಷಗಳ ನಂತರ, ನೀವು ವೈದ್ಯಕೀಯ ತಪಾಸಣೆಯನ್ನೇನಾದರು ಬಯಸಿದರೆ, ನಿಮಗೆ ನೂರು ವೈದ್ಯರುಗಳು ಬೇಕಾಗಬಹುದು. ಈ ನೂರು ವೈದ್ಯರ ಸಮಯವನ್ನು ನೀವು ತೆಗೆದುಕೊಳ್ಳುವಷ್ಟರಲ್ಲಿ, ಒಂದೋ ನೀವು ಹುಷಾರಾಗಿರುತ್ತೀರಿ, ಇಲ್ಲವೇ ಸತ್ತು ಹೋಗಿರುತ್ತೀರಿ.

ಯೋಗದ ವಿಚಾರದಲ್ಲಿ ಆಗಿದ್ದು ಸಹ ಇದೇ - ಆ ಸಮಯದಲ್ಲಿ ಯೋಗದ ವಿಭಿನ್ನ ಆಯಾಮಗಳನ್ನು ನಿರ್ವಹಿಸುವ ನೂರಾರು ಶಾಲೆಗಳು ಹುಟ್ಟಿಕೊಂಡಿದ್ದವು. ಅವುಗಳು ಸಂಪೂರ್ಣವಾಗಿ ಅಪ್ರಾಯೋಗಿಕವಾಗಿರುವುದನ್ನು ಪತಂಜಲಿ ಮುನಿಗಳು ಕಂಡರು, ಆದ್ದರಿಂದ ಅವರು ಸುಮಾರು ಇನ್ನೂರು ಸೂತ್ರಗಳಲ್ಲಿ ಯೋಗದ ಸಂಹಿತೆಯನ್ನು ಬರೆದರು.

ವಿಶೇಷಜ್ಞತೆಯು ಒಂದು ನಿರ್ದಿಷ್ಟ ಹಂತವನ್ನು ದಾಟಿದಾಗ, ಪ್ರಾಯೋಗಿಕತೆಯ ವಿಷಯದಲ್ಲಿ ಅದು ಹಾಸ್ಯಾಸ್ಪದವಾಗಲು ಶುರುವಾಗಬಹುದು. ವಿವರಗಳನ್ನು ಅಧ್ಯಯನ ಮಾಡುವುದರಲ್ಲಿ ಮೌಲ್ಯವಿದೆ, ಆದರೆ ಜನರ ಕಲಿಕೆ ಹಾಗೂ ಬಳಕೆ ಮಾಡುವ ನಿಟ್ಟಿನಲ್ಲಿ ಅದು ನಗೆಪಾಟಲಿನ ವಿಷಯವಾಗಿ ಬಿಡುತ್ತದೆ. ಯೋಗದ ವಿಚಾರದಲ್ಲಿ ಆಗಿದ್ದು ಸಹ ಇದೇ - ಆ ಸಮಯದಲ್ಲಿ ಯೋಗದ ವಿಭಿನ್ನ ಆಯಾಮಗಳನ್ನು ನಿರ್ವಹಿಸುವ ನೂರಾರು ಶಾಲೆಗಳು ಹುಟ್ಟಿಕೊಂಡಿದ್ದವು. ಅವುಗಳು ಸಂಪೂರ್ಣವಾಗಿ ಅಪ್ರಾಯೋಗಿಕವಾಗಿರುವುದನ್ನು ಪತಂಜಲಿ ಮುನಿಗಳು ಕಂಡರು, ಆದ್ದರಿಂದ ಅವರು ಸುಮಾರು ಇನ್ನೂರು ಸೂತ್ರಗಳಲ್ಲಿ ಯೋಗದ ಸಂಹಿತೆಯನ್ನು ಬರೆದರು. 

ಯೋಗ ಸೂತ್ರಗಳು ತತ್ತ್ವಶಾಸ್ತ್ರವಲ್ಲ

ಇಂದು, ಪ್ರತಿಯೊಬ್ಬರೂ ಒಂದು ಪುಸ್ತಕವನ್ನು ಪ್ರಕಟಿಸಬಹುದಾದ ಕಾರಣ, ಯೋಗ ಸೂತ್ರಗಳ ನೂರಾರು ವಿವಿಧ ವ್ಯಾಖ್ಯಾನಗಳಿವೆ. ಆದರೆ ಯೋಗ ಸೂತ್ರಗಳು ಅರ್ಥೈಸಿಕೊಳ್ಳಬೇಕಾದ ತತ್ತ್ವಶಾಸ್ತ್ರಗಳಲ್ಲ. ಅಥವಾ ಯೋಗ ಸೂತ್ರಗಳು ಯಾವುದೇ ಅಭ್ಯಾಸಗಳನ್ನು ಸಹ ನೀಡುವುದಿಲ್ಲ. ಅವು ಒಂದು ವೈಜ್ಞಾನಿಕ ದಾಖಲೆ ಇದ್ದಂತೆ. ನಮ್ಮ ಮಾನವ ವ್ಯವಸ್ಥೆಯಲ್ಲಿ ಯಾವುದು ಏನು ಮಾಡುತ್ತದೆ ಎಂಬುದರ ಕುರಿತಾಗಿ ಮಾತ್ರ ಅವು ಮಾತನಾಡುತ್ತವೆ. ನಿಮ್ಮ ಉದ್ದೇಶವನ್ನು ಅವಲಂಬಿಸಿ ಅಥವಾ ನಿಮ್ಮ ವ್ಯವಸ್ಥೆಯಲ್ಲಿ ನೀವು ಏನನ್ನು ರಚಿಸಲು ಬಯಸುತ್ತೀರೋ ಅದರ ಪ್ರಕಾರವಾಗಿ ನೀವು ನಿರ್ದಿಷ್ಟ ಯೋಗಾಭ್ಯಾಸವನ್ನು ವಿನ್ಯಾಸಗೊಳಿಸಿಕೊಳ್ಳಬಹುದು.

ಸೂತ್ರ ಎಂಬ ಪದದ ಅಕ್ಷರಶಃ ಅರ್ಥ "ದಾರ" ಎಂದಾಗುತ್ತದೆ. ಒಂದು ಹಾರದಲ್ಲಿ ಒಂದು ದಾರ ಇದ್ದೇ ಇರುತ್ತದೆ, ಆದರೆ ನೀವು ಹಾರವನ್ನು ಅದರ ದಾರದ ಸಲುವಾಗಿ ಎಂದೂ ಧರಿಸುವುದಿಲ್ಲ. ನೀವು ಯಾವ ರೀತಿಯ ಹೂಗಳು, ಮಣಿಗಳು, ಮುತ್ತುಗಳು ಅಥವಾ ವಜ್ರದ ಹರಳುಗಳನ್ನು ಅದಕ್ಕೆ ಪೋಣಿಸಿಕೊಳ್ಳುತ್ತೀರಿ ಎನ್ನುವುದು ನಿಮ್ಮ ಕುಶಲತೆಯ ಮೇಲೆ ಅವಲಂಬಿಸಿರುತ್ತದೆ. ಪತಂಜಲಿ ಕೇವಲ ಸೂತ್ರವನ್ನು ಮಾತ್ರ ಒದಗಿಸುತ್ತಾರೆ, ಏಕೆಂದರೆ ದಾರವೇ ಇರದೆ ಹಾರವಿರಲು ಸಾಧ್ಯವಿಲ್ಲ. ಆದರೆ ನೀವೊಂದು ಹಾರವನ್ನು ಅದರ ದಾರಕ್ಕಾಗಿ ಧರಿಸುವುದಿಲ್ಲ. ಆದ್ದರಿಂದ ಬರಿ ದಾರವನ್ನು ನೋಡಿ ಯಾವುದೇ ತೀರ್ಮಾನಗಳಿಗೆ ಬರಬೇಡಿ. ಸೂತ್ರಗಳು ಓದಿ ತಾರ್ಕಿಕವಾಗಿ ಅರ್ಥೈಸಿಕೊಳ್ಳುವಂತವುಗಳಲ್ಲ. ನೀವು ಅವುಗಳನ್ನು ತರ್ಕಬದ್ಧವಾಗಿ ಅನುಸರಿಸಿ, ವಿಷಯಗಳನ್ನು ಬುದ್ಧಿವಂತಿಕೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅವು ಅಸಂಬದ್ಧವಾಗುತ್ತವೆ.  

ಅನುಭವದ ನಿರ್ದಿಷ್ಟ ಸ್ಥಿತಿಯಲ್ಲಿರುವ ಯಾರಿಗೇ ಆದರೂ, ಈ ದಾರ ಬಹಳಷ್ಟು ಮುಖ್ಯವಾಗುತ್ತದೆ; ಒಂದು ಹಾರವನ್ನು ತಯಾರಿಸಲು ಅವರದನ್ನು ಬಳಸುತ್ತಾರೆ. ಪತಂಜಲಿ ಮುನಿಗಳ ಯೋಗ ಸೂತ್ರಗಳನ್ನು ಒಂದು ಪುಸ್ತಕದಂತೆ ಓದುವಂತಿಲ್ಲ. ನೀವೊಂದು ಸೂತ್ರವನ್ನು ತೆಗೆದುಕೊಂಡು, ಅದನ್ನು ನಿಮ್ಮ ಜೀವನದ ಸತ್ಯತೆಯಾಗುವಂತೆ ನೋಡಿಕೊಳ್ಳಿ. ಅದರ ಒಂದು ಸೂತ್ರವು ನಿಮಗೆ ಜೀವಂತ ವಾಸ್ತವವಾದರೆ, ಇತರ ಸೂತ್ರಗಳನ್ನು ಅವಶ್ಯಕವಾಗಿ ಓದುವ ಅಗತ್ಯ ನಿಮಗಿರುವುದಿಲ್ಲ.

ಸೂತ್ರ 1: “... ಮತ್ತು ಈಗ, ಯೋಗ”

ಯೋಗ ಸೂತ್ರಗಳು ಜೀವನದ ಮೇಲೆ ಬರೆಯಲಾದ ಅದ್ಭುತ ದಾಖಲೆಗಳಾಗಿವೆ. ಮತ್ತು ಪತಂಜಲಿ ಈ ಮಹಾನ್ ದಾಖಲೆಯನ್ನು ಒಂದು ವಿಚಿತ್ರ ರೀತಿಯಲ್ಲಿ ಪ್ರಾರಂಭಿಸಿದರು. ಅವರ ಯೋಗ ಸೂತ್ರಗಳ ಮೊದಲ ಅಧ್ಯಾಯವು ಅರ್ಧ ವಾಕ್ಯವಾಗಿದೆ: "... ಮತ್ತು ಈಗ, ಯೋಗ." ಒಂದು ರೀತಿಯಲ್ಲಿ, ಅವರು ಹೇಳುತ್ತಿರುವುದೇನೆಂದರೆ, "ನಿಮ್ಮ ಜೀವನವು ಹೊಸ ಮನೆ, ಹೊಸ ಸಂಗಾತಿ, ಹೊಸ ಕಾರು, ಹೆಚ್ಚು ಹಣ, ಅಥವಾ ಬೇರೆ ಇನ್ಯಾವುದರಿಂದಲೋ ಉತ್ತಮವಾಗುತ್ತದೆ ಎಂದು ನೀವಿನ್ನೂ ತಿಳಿದಿದ್ದೇ ಆದರೆ, ಯೋಗಕ್ಕೆ ಇನ್ನೂ ಸಮಯ ಬಂದಿಲ್ಲ ಎಂದರ್ಥ. "ಅದೆಲ್ಲವನ್ನೂ ನೀವು ನೋಡಿಯಾಗಿದ್ದರೆ ಮತ್ತವುಗಳು ನಿಮ್ಮ ಜೀವನವನ್ನು ಯಾವುದೇ ರೀತಿಯಲ್ಲಿ ಸಾರ್ಥಕವಾಗಿಸುವುದಿಲ್ಲ ಎನ್ನುವುದನ್ನು ನೀವು ಮನಗಂಡಿದ್ದರೆ: "... ಮತ್ತು ಈಗ, ಯೋಗ."

ಸೂತ್ರ 2: ಯೋಗ, ಮತ್ತು ಮನಸ್ಸಿನ ಕೇಂದ್ರೀಕರಣ

ಪ್ರಶ್ನೆ: ಸದ್ಗುರು, ಪತಂಜಲಿ ಮುನಿಗಳ ಎರಡನೇ ಯೋಗ ಸೂತ್ರ “ಯೋಗಃ ಚಿತ್ತವೃತ್ತಿ ನಿರೋಧಃ” ಎಂದು ಹೇಳುತ್ತದೆ, ಮತ್ತು ಇದರ ಪ್ರಕಾರ “ಯೋಗವೆಂದರೆ ಮನಸ್ಸನ್ನು ಒಂದು ವಸ್ತುವಿನ ಕಡೆಗೆ ಎಡೆಬಿಡದೆ ನಿರ್ದೇಶಿಸುವ ಮತ್ತು ಆ ದಿಕ್ಕನ್ನು ಯಾವುದೇ ಚಂಚಲತೆಗಳಿಲ್ಲದೆ ಉಳಿಸಿಕೊಳ್ಳುವ ಸಾಮರ್ಥ್ಯವಾಗಿದೆ” ಎಂದಾಗುತ್ತದೆ. ಇದರ ನಿಜವಾದ ಅರ್ಥ ಏನು?

 

ಸದ್ಗುರು: ಇದನ್ನು ಧಾರಣ ಎಂದು ಕರೆಯಲಾಗುತ್ತದೆ. ಧಾರಣ ಎಂದರೆ ಅಲ್ಲಿ ನೀವು ಮತ್ತು ಒಂದು ವಸ್ತುವಿರುತ್ತದೆ, ಮತ್ತು ನೀವು ಆ ವಸ್ತುವಿನ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿರುತ್ತೀರಿ. ನೀವು ಆ ವಸ್ತುವನ್ನೇ ನಿಚ್ಚಳವಾಗಿ ಗಮನಿಸಿದರೆ, ಸ್ವಲ್ಪ ಸಮಯದ ನಂತರ, ಅಲ್ಲಿ ನೀವು ಮಾತ್ರ ಇರುತ್ತೀರಿ, ಅಥವಾ ಆ ವಸ್ತು ಮಾತ್ರ ಇರುತ್ತದೆ. ಇದನ್ನು ಧ್ಯಾನ ಎಂದು ಕರೆಯಲಾಗುತ್ತದೆ, ಮತ್ತು ಇದು ಗಮನದ ಮುಂದಿನ ಹಂತವಾಗಿದೆ. ನಿಮಗೆ ಧ್ಯಾನದ ಸ್ಥಿತಿಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದರೆ, ಸ್ವಲ್ಪ ಸಮಯದ ನಂತರ, ಅಲ್ಲಿ ನೀವು ಮತ್ತು ಆ ವಸ್ತು ಎರಡೂ ಇರುವುದಿಲ್ಲ. ಅಲ್ಲಿ ಬೇರೆ ಇನ್ಯಾವುದೋ ದೊಡ್ಡ ಉಪಸ್ಥಿತಿ ಇರುತ್ತದೆ. ಇದನ್ನು ಸಮಾಧಿ ಎಂದು ಕರೆಯಲಾಗುತ್ತದೆ. ಇವು ಅಭ್ಯಾಸದ ಪ್ರಗತಿಪರ ಹಂತಗಳಾಗಿವೆ.

"ಒಂದು ವಸ್ತುವಿನ ಮೇಲೆ ನಿಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳಿ" ಎಂದು ನಾವು ಹೇಳಿದಾಗ, ದೇವರನ್ನು ಆರಾಧಿಸಬೇಕೆಂದು ಅಥವಾ ನಿರ್ದಿಷ್ಟವಾಗಿ ಏನನ್ನಾದರೂ ಮಾಡಬೇಕೆಂದು ಜನರು ಭಾವಿಸುತ್ತಾರೆ. ಹಾಗೇನಿಲ್ಲ. ನೀವು ಒಂದು ಹೂವು, ಒಂದು ಎಲೆ, ಒಂದು ಮರಳಿನ ಕಣ ಅಥವಾ ಒಂದು ಹುಳವನ್ನು ಬೇಕಾದರೂ ಗಮನಿಸಬಹುದು – ನೀವು ಏನನ್ನು ಗಮನಿಸುತ್ತೀರಿ ಎನ್ನುವುದು ಮುಖ್ಯವಲ್ಲ. ಆದರೆ ನೀವು ಯಾವುದರ ಮೇಲಾದರೂ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಬಯಸುವುದಾದರೆ, ಅದು ನಿಮ್ಮಲ್ಲಿ ಒಂದು ನಿರ್ದಿಷ್ಟ ಮಟ್ಟದ ಭಾವೋದ್ರೇಕ ಮತ್ತು ಭಾವನೆಗಳನ್ನು ಪ್ರೇರೇಪಿಸುವಂತಿರಬೇಕು. ಆಗ ಮಾತ್ರ ನಿಮ್ಮ ಗಮನವು ಅಲ್ಲೇ ಉಳಿಯುತ್ತದೆ. ಉದಾಹರಣೆಗೆ, ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಪುಸ್ತಕದ ಮೇಲೆ ಗಮನವನ್ನು ನೀಡುವುದು ಕಷ್ಟಕರವಾಗಿರುತ್ತದೆ, ಆದರೆ ಅದೇ, ಪಕ್ಕದ ಮನೆಯಲ್ಲಿ ಒಬ್ಬ ಹುಡುಗನಿಗೆ ಆಸಕ್ತಿ ಇರುವ ಒಬ್ಬಳು ಹುಡುಗಿ ಇದ್ದರೆ, "ಅವಳ ಬಗ್ಗೆ ಯೋಚಿಸು" ಎಂದು ನೀವವನಿಗೆ ಹೇಳಬೇಕಾಗಿಲ್ಲ ಅಲ್ಲವೇ? ಅವನು ಹೇಗಿದ್ದರೂ ಅವಳ ಮೇಲೆ ಗಮನಹರಿಸುತ್ತಾನೆ, ಏಕೆಂದರೆ ಅದರ ಹಿಂದೆ ಒಂದು ರೀತಿಯ ಭಾವನೆ ಇರುತ್ತದೆ.

ನೀವು ಏನನ್ನಾದರೂ ನಿಜವಾಗಿಯೂ ಉಚ್ಛವಾದುದೆಂದು ಪರಿಗಣಿಸದ ಹೊರತು, ನಿಮ್ಮ ಗಮನವನ್ನು ಒಂದೇ ಕಡೆ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎನ್ನುವುದೇ ಇಲ್ಲಿನ ವಿಚಾರ.

ಇದೇ ಕಾರಣದಿಂದಾಗಿಯೇ ವಿವಿಧ ಪ್ರಕಾರಗಳ ದೇವರುಗಳು ಹುಟ್ಟಿಕೊಂಡಿದ್ದು. ನೀವು ಸಂಬಂಧ ಕಲ್ಪಿಸಿಕೊಳ್ಳಬಹುದಾದ ಯಾವುದೇ ವಿಷಯ ಅಥವಾ ವಸ್ತುವಿನ ಮೇಲೆ ನಿಮ್ಮ ಗಮನವನ್ನು ಇರಿಸಿ. ಬಹುಶಃ ನಿಮಗೆ ಈಗಿರುವ ಯಾವುದೇ ದೇವರೊಂದಿಗೆ ಸಂಬಂಧಿಸಿಕೊಳ್ಳಲು ಆಗದೇ ಇದ್ದರೆ, ನೀವು ಇನ್ನೊಂದು ದೇವರನ್ನು ತೆಗೆದುಕೊಳ್ಳಬಹುದು. ಅದೂ ಕೆಲಸ ಮಾಡದಿದ್ದರೆ, ಇನ್ನೊಂದನ್ನು ತೆಗೆದುಕೊಳ್ಳಿ. ಈಗಿರುವ ಯಾವ ದೇವರು ನಿಮಗೆ ಹೊಂದಿಕೆಯಾಗದಿದ್ದಲ್ಲಿ, ನೀವು ನಿಮ್ಮದೇ ಆದ ಸ್ವಂತ ದೇವರನ್ನು ಸೃಷ್ಟಿಸಿಕೊಳ್ಳಿ. ಇದನ್ನು ಇಷ್ಟದೈವ ಎಂದು ಕರೆಯಲಾಗುತ್ತದೆ. ನೀವು ಏನನ್ನಾದರೂ ನಿಜವಾಗಿಯೂ ಉಚ್ಛವಾದುದೆಂದು ಪರಿಗಣಿಸದ ಹೊರತು, ನಿಮ್ಮ ಗಮನವನ್ನು ಒಂದೇ ಕಡೆ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎನ್ನುವುದೇ ಇಲ್ಲಿನ ವಿಚಾರ. ನಿಮಗೆ ಆಸಕ್ತಿಯಿಲ್ಲದ ಯಾವುದರ ಮೇಲಾದರೂ ನೀವು ಕೇಂದ್ರೀಕರಿಸಿದರೆ, ಅದು ನಿಮ್ಮನ್ನು ಬಳಲಿಸುತ್ತದೆ. ಯಾವುದರ ಕಡೆಗಾದರೂ ನೀವು ನಿಜವಾಗಿಯೂ ಆಕರ್ಷಿತರಾದಾಗ ಮಾತ್ರ, ಮತ್ತು ನೀವದರತ್ತ ಗಮನವನ್ನು ನೀಡಿದಾಗ, ಅದು ನಿಮ್ಮನ್ನು ವರ್ಧಿಸುತ್ತದೆ. 

ನೀವಿದನ್ನು ಒಂದು ಚಲನಚಿತ್ರ ನೋಡುವುದು ಅಥವಾ ಒಂದು ಪುಸ್ತಕವನ್ನು ಓದುವುದಕ್ಕೆ ಹೋಲಿಸಬಹುದು. ಒಂದು ಪಠ್ಯಪುಸ್ತಕವನ್ನು ನೀವು ಓದಿದಿರಿ ಎಂದಿಟ್ಟುಕೊಳ್ಳೋಣ - ಪಠ್ಯಪುಸ್ತಕವನ್ನು ಸರಾಸರಿ ಬುದ್ಧಿವಂತಿಕೆ ಇರುವವರಿಗಾಗಿ ಬರೆಯಲಾಗಿರುತ್ತದೆ. ಅದರ ಹೊರತಾಗಿಯೂ, ನೀವದನ್ನು ಹತ್ತು ಬಾರಿ ಓದಿದರೂ ಸಹ, ಅದು ನಿಮ್ಮ ತಲೆಗೆ ಹತ್ತುವುದಿಲ್ಲ. ಅದೇ ನೀವೊಂದು ಪ್ರೇಮ ಕಥೆ ಅಥವಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಅನ್ನು ಗಂಟೆಗೆ ಎಪ್ಪತ್ತು ಪುಟಗಳ ವೇಗದಲ್ಲಿ ಓದಿರುತ್ತೀರಿ, ಮತ್ತು ಅದರ ಪ್ರತಿಯೊಂದು ಪದವನ್ನೂ ನೀವು ನಿಮ್ಮ ನೆನಪಿನಲ್ಲಿಟ್ಟುಕೊಂಡಿರುತ್ತೀರಿ. ಹಾಗಾಗಿ ಇಲ್ಲಿ ಹೇಳುತ್ತಿರುವುದೇನೆಂದರೆ, ನೀವು ಕೇಂದ್ರೀಕರಿಸುವ ವಸ್ತುವು ನಿಮ್ಮಲ್ಲಿ ಉತ್ಸಾಹವನ್ನು ಪ್ರೇರೇಪಿಸುವಂತಿರಬೇಕು. ಇಲ್ಲದೇ ಹೋದರೆ, ಏಕಾಗ್ರತೆ ಎನ್ನುವುದು ನಿಮ್ಮೊಳಗೊಂದು ನರಳುವಿಕೆಯ ಶಿಬಿರವಾಗಿಬಿಡುತ್ತದೆ.

ಸಂಪಾದಕರ ಟಿಪ್ಪಣಿ: ಈ ಲೇಖನದ ಮೂಲ ಆವೃತ್ತಿ ಆಗಸ್ಟ್ 2018 ರ ಈಶ ಫಾರೆಸ್ಟ್ ಫ್ಲವರ್‌ ಮ್ಯಾಗ್‌ಸೀನ್‌‌ನಲ್ಲಿ ಪ್ರಕಟವಾಗಿರುತ್ತದೆ.