ಸದ್ಗುರುಗಳ ಆರೋಗ್ಯದಲ್ಲಿ ಇತ್ತೀಚೆಗೆ ಗಂಭೀರ ಸಮಸ್ಯೆಯಾಗಿ ಪ್ರಾಣಾಪಾಯದ ಸನ್ನಿವೇಶ ಉಂಟಾಗಿದ್ದು, ಸದ್ಯ ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕು ವಾರಗಳಿಂದ ಸದ್ಗುರುಗಳು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ತೀವ್ರ ನೋವಿನ ನಡುವೆಯೂ ಅವರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ಮಾರ್ಚ್ 8, 2024 ರಂದು ಮಹಾಶಿವರಾತ್ರಿಯ ಕಾರ್ಯಕ್ರಮವನ್ನು ಕೂಡ ನಡೆಸಿಕೊಟ್ಟಿದ್ದರು.

ಮಾರ್ಚ್ 15 ಕ್ಕೆ ದೆಹಲಿಗೆ ಆಗಮಿಸಿದ ಸದ್ಗುರುಗಳಿಗೆ ತಲೆನೋವು ಇನ್ನೂ ಹೆಚ್ಚು ತೀವ್ರಗೊಂಡ ಕಾರಣ, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಆದ ಡಾ. ವಿನೀತ್ ಸೂರಿಯವರ ಸಲಹೆಯ ಮೇರೆಗೆ ಅದೇ ದಿನ ಸಂಜೆ 4.30ಕ್ಕೆ ಎಮ್.ಆರ್.ಐ ಮಾಡಿಸಿದಾಗ ಮೆದುಳಿನಲ್ಲಿ ಅತಿಯಾದ ರಕ್ತಸ್ರಾವವು ಕಂಡುಬಂದಿತು. ಮೂರ್ನಾಲ್ಕು ವಾರಗಳ ಹಿಂದೆ ರಕ್ತಸ್ರಾವವಾಗಿದ್ದ ಅಂಶವು ಕಂಡುಬಂದಿದ್ದಲ್ಲದೇ, ಕಳೆದ 24 ರಿಂದ 48ಗಂಟೆಗಳ ಅವಧಿಯಲ್ಲೂ ಮತ್ತೆ ಹೊಸದಾಗಿ ರಕ್ತಸ್ರಾವವಾಗಿತ್ತು.

ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕೆಂಬ ವೈದ್ಯರ ಸಲಹೆಗೆ ಸದ್ಗುರುಗಳು, “ಕಳೆದ ನನ್ನ ನಲವತ್ತು ವರ್ಷಗಳಲ್ಲಿ ನಾನು ಒಂದೇ ಒಂದು ಕಾರ್ಯಕ್ರಮವನ್ನೂ ತಪ್ಪಿಸಿಕೊಂಡಿಲ್ಲ” ಎಂದಿದ್ದರು. ಗಂಭೀರವಾದ ಹಾಗೂ ಯಾತನಾಮಯ ರೋಗಲಕ್ಷಣಗಳ ನಡುವೆಯೂ, ಅತಿ ಹೆಚ್ಚಿನ (ಡೋಸೇಜಿನ) ನೋವುನಿವಾರಕ ಔಷಧಗಳನ್ನು ತೆಗೆದುಕೊಳ್ಳುತ್ತಲೇ, ಮಾರ್ಚ್ 15 ಕ್ಕೆ ನಿಗದಿಯಾಗಿದ್ದ ಮೀಟಿಂಗನ್ನು ಪೂರೈಸಿ, ಮಾರ್ಚ್ 16ನೇ ತಾರೀಖಿನಂದು ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಕೂಡ ಭಾಗವಹಿಸಿದರು.

ಮಾರ್ಚ್ 17 ರಂದು ಸದ್ಗುರುಗಳ ನರವೈಜ್ಞಾನಿಕ ಸ್ಥಿತಿಯು ಎಡ ಕಾಲಿನ ದೌರ್ಬಲ್ಯದೊಂದಿಗೆ ವೇಗವಾಗಿ ಹದಗೆಟ್ಟಿತು, ತಲೆನೋವಿನಲ್ಲಿ ತೀವ್ರ ಏರಿಕೆ ಹಾಗೂ ಪದೇ ಪದೇ ವಾಂತಿಯಾಗಲು ಆರಂಭಗೊಂಡು, ಸ್ಥಿತಿ ಬಿಗಡಾಯಿಸಲು ಶುರುವಾಯಿತು. ಕೊನೆಗೂ ಆಸ್ಪತ್ರೆಗೆ ದಾಖಲಾದಾಗ, ಸಿಟಿ ಸ್ಕ್ಯಾನ್‌ನಲ್ಲಿ ಮೆದುಳಿನ ಊತವು ಗಣನೀಯವಾಗಿ ಹೆಚ್ಚಾಗಿದ್ದು ಕಂಡುಬಂದ್ದಿದ್ದಲ್ಲದೇ, ಮೆದುಳು ಒಂದು ಬದಿಗೆ ಸರಿದು ಪ್ರಾಣಾಪಾಯದ ಪರಿಸ್ಥಿತಿ ಉಂಟಾಗಿತ್ತು.

ನುರಿತ ವೈದ್ಯರ ತಂಡದ ನಿರ್ವಹಣೆಯಲ್ಲಿ (ಡಾ .ವಿನೀತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ. ಎಸ್. ಚಟರ್ಜಿ) , ದಾಖಲಾದ ಕೆಲವೇ ಗಂಟೆಗಳಲ್ಲಿ ತಲೆಬುರುಡೆಯಲ್ಲಿ ಆಗುತ್ತಿರುವ ರಕ್ತಸ್ರಾವವನ್ನು ತಡೆಯಲು ತುರ್ತಾಗಿ ಮೆದುಳಿಗೆ ಸರ್ಜರಿಯನ್ನು ಮಾಡಲಾಯಿತು. ಸರ್ಜರಿಯ ನಂತರ ವೆಂಟಿಲೇಟರ್‌ನಿಂದ ಹೊರತರಲಾಯಿತು.

ಸದ್ಗುರುಗಳ ಆರೋಗ್ಯದಲ್ಲಿ ಸ್ಥಿರವಾದ ಸುಧಾರಣೆ ಕಂಡುಬಂದಿದ್ದು, ಅವರ ಮೆದುಳು, ದೇಹ ಹಾಗೂ ಉಸಿರಾಟ, ರಕ್ತದೊತ್ತಡದಂತಹ ಪ್ರಮುಖ ಅಂಶಗಳು ಸುಧಾರಿಸಿ ಸಾಮಾನ್ಯ ಮಟ್ಟಕ್ಕೆ ಬಂದಿವೆ. ಸದ್ಗುರುಗಳು ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾಗಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಡಾ. ಸೂರಿಯವರು “ನಾವು ನೀಡಿದ ವೈದ್ಯಕೀಯ ನೆರವುಗಳಿಂದಷ್ಟೇ ಅಲ್ಲ, ಸದ್ಗುರುಗಳೂ ತಮ್ಮನ್ನು ಗುಣಪಡಿಸಿಕೊಳ್ಳುತ್ತಿದ್ದಾರೆ” ಎಂದಿದ್ದಾರೆ.