ಸದ್ಗುರು: 16 ನೇ ವಯಸ್ಸಿನಲ್ಲಿ, ಕಂಸನ ವಧೆಯ ಮಾಡಿದ ನಂತರ, ಕೃಷ್ಣನನ್ನು ನಾಯಕನನ್ನಾಗಿ ಪರಿಗಣಿಸಲಾಯಿತು. ಅದಾಗ್ಯೂ, ಗುರುಗಳಾದ ಗರ್ಗಾಚಾರ್ಯರು, “ನೀನು ನಿನ್ನ ಭವಿಷ್ಯದಲ್ಲಿ ಏನು ಮಾಡಲು ಹೊರಟಿರುವಿಯೋ, ಅದಕ್ಕಾಗಿ ಒಂದು ಶಿಕ್ಷಣ ನಿನಗೆ ಬೇಕು. ಉಳಿದಂತೆ ಎಲ್ಲವನ್ನೂ ಹೊಂದಿದ್ದೀಯ, ಆದರೆ ನೀನು ಒಂದು ನಿರ್ದಿಷ್ಟ ಶಿಸ್ತಿನ ಮೂಲಕ ಸಾಗಬೇಕು. ಸಂದೀಪನಿಯ ವಿದ್ಯಾರ್ಥಿಯಾಗು” ಎಂದರು. ಕೃಷ್ಣನು ಹಾಗೆಯೇ ಮಾಡಿದನು. ಅವನು ಬ್ರಹ್ಮಚರ್ಯಕ್ಕೆ ದೀಕ್ಷೆ ಪಡೆವ ಸಂಧರ್ಭದಲ್ಲಿ, ಬಲರಾಮ ಮತ್ತು ಕೆಲವು ರಾಜಕುಮಾರರು ನಗುತ್ತಾ, “ನೀನು ಎಂತಹ ಹುಡುಗಾಟಿಕೆಯ ವರ್ಣರಂಜಿತ ಜೀವನವನ್ನು ನಡೆಸಿದ್ದೀಯ, ಬ್ರಹ್ಮಚಾರಿ ಹೇಗೆ ಆಗಬಲ್ಲೆ?” ಎಂದರು. ಕೃಷ್ಣನು ಉತ್ತರಿಸತ್ತಾ, “ಸಂಧರ್ಭಾನುಸಾರವಾಗಿ ನಾನೇನು ಮಾಡಬೇಕೋ ಅದನ್ನೇ ಮಾಡಿದ್ದೇನೆ. ಆದರೆ ನಾನು ಯಾವಾಗಲೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇನೆ . ಈಗ ನಾನು ಈ ಪ್ರತಿಜ್ಞೆಯನ್ನು ತೆಗೆದುಕೊಂಡು ಅದನ್ನು ಹೇಗೆ ಸಂಪೂರ್ಣವಾಗಿ ಪೂರೈಸುತ್ತೇನೆ ಎಂದು ನೀವು ನೋಡುತ್ತೀರಿ” ಎಂದನು.

ಆರು ವರ್ಷಗಳ ಕಾಲ, ಕೃಷ್ಣನು ವಿವಿಧ ಕಲೆ ಮತ್ತು ಇತರ ರೀತಿಯ ಶಿಕ್ಷಣದಲ್ಲಿ ತರಬೇತಿ ಪಡೆದು ಸಂದೀಪನಿಯ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಬ್ರಹ್ಮಚಾರಿಯಾಗಿ ವಾಸಿಸುತ್ತಿದ್ದನು. ಅವನು ಪ್ರತಿಯೊಂದು ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಲು ಕಲಿತನು ಮತ್ತು ಡಿಸ್ಕಸ್ ಥ್ರೋನಲ್ಲಿ ನಿರ್ದಿಷ್ಟ ಪರಿಣತಿಯನ್ನು ಹೊಂದಿದನು. ಡಿಸ್ಕಸ್ ಎನ್ನುವುದು ಲೋಹದ ಡಿಸ್ಕ್(ಬಿಲ್ಲೆ) ಆಗಿದ್ದು ಅದನ್ನು ಸರಿಯಾಗಿ ಬಳಸಿದಲ್ಲಿ ಮಾರಕ ಆಯುಧವಾಗಬಹುದು. ಕೃಷ್ಣ ಅದನ್ನು ಸಂಪೂರ್ಣವಾಗಿ ಬೇರೆ ಆಯಾಮಕ್ಕೆ ಕೊಂಡೊಯ್ದನು.

ಕೃಷ್ಣನು ತಾನು ಯಾವಾಗ ಬೇಕಾದರೂ ಚಕ್ರವರ್ತಿ ಪದವಿಯನ್ನು ಆರಿಸಿಕೊಳ್ಳಬಹುದಿತ್ತು, ಆದರೆ ಅವನು ತನ್ನ ಜೀವನದ ಆರು ವರ್ಷಗಳ ಕಾಲ ಭಿಕ್ಷೆ ಬೇಡುವ ಸಲುವಾಗಿ ಬೀದಿಗಳಲ್ಲಿ ಅಲೆದನು.

ಆ ಸಮಯದಲ್ಲಿ, ಕೃಷ್ಣನು ಮತ್ತೆಲ್ಲ ಬ್ರಹ್ಮಚಾರಿಗಳಂತೆ ಆಹಾರಕ್ಕಾಗಿ ಭಿಕ್ಷೆ ಬೇಡಲು ಬೀದಿಗಿಳಿದನು. ನೀವು ಭಿಕ್ಷಾಟನೆಗೆ ಹೋದರೆ, ನಿಮ್ಮ ಆಹಾರವನ್ನು ನೀವು ಆರಿಸಿಕೊಳ್ಳುವಂತಿಲ್ಲ. ಅವರು ನಿಮ್ಮ ಬಟ್ಟಲಿನಲ್ಲಿ ಹಾಕುವ ಆಹಾರವು ಚೆನ್ನಾಗಿರಲಿ ಅಥವಾ ಕೊಳೆತು ಹೋಗಿರಲಿ ಮತ್ತಾವುದೇ ರೀತಿಯಲ್ಲಿ ಇರಲಿ, ನೀವು ಅದನ್ನು ಭಕ್ತಿಯಿಂದ ತಿನ್ನಬೇಕು. ಒಬ್ಬ ಬ್ರಹ್ಮಚಾರಿ ತನಗೆ ನೀಡಲಾಗುವ ಆಹಾರದ ಬಗೆಯನ್ನು ಎಂದಿಗೂ ನೋಡಬಾರದು. ಅವನಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದರ ಕುರಿತು ಆಯ್ಕೆಗಳಿರಬಾರದು. ನೀವು ಬ್ರಹ್ಮಚಾರಿ ಎಂದು ಕರೆಸಿಕೊಂಡಾಗ, ನೀವು ದೈವಿಕ ಹಾದಿಯಲ್ಲಿರುತ್ತೀರಿ. ಆಹಾರದ ಅಗತ್ಯವಿದೆ ನಿಜ, ಆದರೆ ನಿಮ್ಮ ಪೋಷಣೆ ಆಹಾರದಲ್ಲಷ್ಟೇ ಇರುವುದಿಲ್ಲ.

ಆದ್ದರಿಂದ, ಕೃಷ್ಣನು ಪರಿಪೂರ್ಣ ಬ್ರಹ್ಮಚಾರಿಯಾದನು. ಯಾವಾಗಲೂ ವಜ್ರಖಚಿತ ಆಭರಣ, ನವಿಲು ಗರಿಗಳು ಮತ್ತು ರೇಷ್ಮೆ ಬಟ್ಟೆಗಳಿಂದ ಅಲಂಕೃತನಾಗಿರುತ್ತಿದ್ದ ಕೃಷ್ಣ, ಇದ್ದಕ್ಕಿದ್ದಂತೆ ಕೇವಲ ಜಿಂಕೆಯ ಚರ್ಮದ ಒಂದು ಪಟ್ಟಿಯನ್ನಷ್ಟೇ ದರಿಸಿಕೊಂಡು, ನೂರಕ್ಕೆ ನೂರರಷ್ಟು ತನ್ನ ಹೊಸ ಸಾಧನೆಗೆ ಸಮರ್ಪಿತನಾಗಿದ್ದನು. ಪ್ರಪಂಚವು ಅಂತಹ ಶೋಭಾಯಮಾನವಾದ ಭಿಕ್ಷುಕನನ್ನು ಕಂಡ ಸಾಕ್ಷಿಯಿರಲ್ಲಿಲ್ಲ, ಕೇವಲ ಅವನ ಸೌಂದರ್ಯವನ್ನು, ಅವನ ಇರುವಿಕೆಯ ವಿಧಾನವನ್ನು, ಎಷ್ಟು ಅನುಗ್ರಹಪೂರ್ವವಾಗಿ, ಸಮರ್ಪಣೆಯಿಂದ ಮತ್ತು ಶ್ರದ್ಧೆಯಿಂದ ತನ್ನ ಅಗತ್ಯತೆಗಾಗಿನ ಅಲ್ಪ ಆಹಾರಕ್ಕಾಗಿ ಬೀದಿಯಲ್ಲಿ ನಡೆದು ಬರುವುದನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಕೃಷ್ಣನು ತಾನು ಯಾವಾಗ ಬೇಕಾದರೂ ಚಕ್ರವರ್ತಿ ಪದವಿಯನ್ನು ಆರಿಸಿಕೊಳ್ಳಬಹುದಿತ್ತು, ಆದರೆ ಅವನು ತನ್ನ ಜೀವನದ ಆರು ವರ್ಷಗಳ ಕಾಲ ಭಿಕ್ಷೆ ಬೇಡುವ ಸಲುವಾಗಿ ಬೀದಿಗಳಲ್ಲಿ ಅಲೆದನು

ಕೃಷ್ಣ ದ್ವೈಪಾಯನ

ಅದೇ ರೀತಿ ಕೃಷ್ಣ ದ್ವೈಪಾಯನ ಎಂಬ ಹೆಸರಿನ ಮತ್ತೊಬ್ಬ ಸುಂದರವಾದ ಬ್ರಹ್ಮಚಾರಿ ಇದ್ದರು. ಕಾಲಾನಂತರ ವ್ಯಾಸ ಎಂದು ಹೆಸರಾದ ಕೃಷ್ಣ ದ್ವೈಪಾಯನರು, ಆರನೇ ವಯಸ್ಸಿನಲ್ಲಿಯೇ ಬ್ರಹ್ಮಚಾರಿ ಆಗಿದ್ದರು.

ತನ್ನ ಬ್ರಹ್ಮಚರ್ಯದ ಮೊದಲ ದಿನವೇ, ಬೋಳಿಸಿದ ತಲೆ ಮತ್ತು ಮರದ ತೊಗಟೆಯಿಂದ ಮಾಡಿದ ಬಟ್ಟೆಗಳನ್ನು ಧರಿಸಿ ಈ ಪುಟ್ಟ ಹುಡುಗ ಆಹಾರಕ್ಕಾಗಿ ಭಿಕ್ಷೆ ಬೇಡಲು ಹೊರಟನು. ತನ್ನ ಬಾಲಿಶವಾದ ಧ್ವನಿಯಲ್ಲಿ “ಭಿಕ್ಷಾಂ ದೇಹಿ” ಎಂದು ಬೇಡಲಾರಂಭಿಸಿದನು. ಜನರು ಈ ಮುದ್ದಾದ ಪುಟ್ಟ ಹುಡುಗನನ್ನು ನೋಡಿದಾಗ, ಅವನಲ್ಲಿನ ಶಕ್ತಿಯನ್ನು ಗುರುತಿಸಿ, ಹೇಗೆ ತನಗಾಗಿಯೂ ತನ್ನ ಗುರಗಳಿಗಾಗಿಯೂ ಬೀದಿಯಲ್ಲಿ ಏಕಾಂಗಿಯಾಗಿ ಬೇಡುತ್ತಿದ್ದಾನೆಂದು ಗಮನಿಸಿ, ಅವನಿಗೆ ಅಪಾರ ಪ್ರಮಾಣದ ಆಹಾರವನ್ನೂ, ನೀಡಬಹುದಾದ ಅತ್ಯುತ್ತಮ ವಸ್ತುಗಳನ್ನೂ ಕೊಡುತ್ತಿದ್ದರು. ಅವನು ಹೊರಲೂ ಸಾಧ್ಯವಾಗದಂತ ಹೆಚ್ಚಿನ ಭಿಕ್ಷೆ ಪಡೆಯುತ್ತಿದ್ದನು. ಅವನು ಮರಳಿ ಹಿಂದಿರುಗುತ್ತಿದ್ದಾಗ, ಬೀದಿಯಲ್ಲಿ ಊಟ ಮಾಡದ ಅನೇಕ ಮಕ್ಕಳನ್ನು ಗಮನಿಸುತ್ತಿದ್ದನು. ಅವರ ಹಸಿವನ್ನು ಅವರ ಮುಖಭಾವದಲ್ಲಿಯೇ ಅರ್ಥೈಸಿಕೊಂಡು ಎಲ್ಲಾ ಆಹಾರವನ್ನು ಆ ಮಕ್ಕಳಿಗೆ ಕೊಟ್ಟು ಖಾಲಿ ಬಟ್ಟಲಿನೊಂದಿಗೆ ಹಿಂತಿರುಗುತ್ತಿದ್ದನು.

ಕಾಲಾನಂತರ ವ್ಯಾಸ ಎಂದು ಹೆಸರಾದ ಕೃಷ್ಣ ದ್ವೈಪಾಯನರು, ಆರನೇ ವಯಸ್ಸಿನಲ್ಲಿಯೇ ಬ್ರಹ್ಮಚಾರಿ ಆಗಿದ್ದರು.

ಅವನ ಗುರು ಮತ್ತು ತಂದೆಯಾದ ಪರಾಶರರು, ಅವನನ್ನು ನೋಡಿ, “ಏನಾಯಿತು? ಬೇಡಲು ಹೋಗಲ್ಲಿಲ್ಲವೇ? ಅಥವಾ ಯಾರೂ ಏನನ್ನೂ ಭಿಕ್ಷೆ ನೀಡಲಿಲ್ಲವೇ? ” ಎಂದು ಕೇಳಿದಾಗ ಕೃಷ್ಣ ದ್ವೈಪಾಯನ, “ಅವರು ನನಗೆ ಆಹಾರವನ್ನು ನೀಡಿದರು. ಆದರೆ ಊಟ ಮಾಡದ ಪುಟ್ಟ ಮಕ್ಕಳನ್ನು ನಾನು ನೋಡಿದೆ, ಹಾಗಾಗಿ ಎಲ್ಲಾ ಆಹಾರವನ್ನು ಅವರಿಗೇ ಕೊಟ್ಟೆ” ಎಂದು ಹೇಳಿದನು. ಪರಾಶರರು ಅವನನ್ನು ನೋಡಿ “ಒಳ್ಳೆಯದು” ಎಂದರು. ಆದ ಕಾರಣ ಅವರಿಬ್ಬರಿಗೂ ಯಾವುದೇ ಆಹಾರವಿರುತ್ತಿರಲಿಲ್ಲ.

ದಿನದಿಂದ ದಿನಕ್ಕೆ ಇದೇ ರೀತಿ ಮುಂದವರಿಯುತ್ತಿತ್ತು. ಹುಡುಗ ಊಟವನ್ನೇ ಮಾಡುತ್ತಿರಲ್ಲಿಲ್ಲ. ಈ ಆರು ವರ್ಷದ ಮಗು ಮೂರು, ನಾಲ್ಕು ದಿನಗಳ ಕಾಲ ಆಹಾರವಿಲ್ಲದೆಯೇ ಇದ್ದರೂ ತನ್ನ ಎಲ್ಲ ಕರ್ತವ್ಯಗಳನ್ನು ಮತ್ತು ಅಧ್ಯಯನವನ್ನು ಮುಂದುವರೆಸುತ್ತಿದ್ದದನ್ನು ನೋಡಿದ ಪರಾಶರರು, ಈ ಹುಡುಗನಲ್ಲಿನ ಪ್ರಚಂಡ ಸಾಧ್ಯತೆಯನ್ನು ಅರಿತುಕೊಂಡರು ಮತ್ತು ಅವನಿಗೆ ತನ್ನಲ್ಲಿದ್ದ ಸಂಪೂರ್ಣ ಜ್ಞಾನವನ್ನು ಧಾರೆಯೆರೆದರು. ನೂರು ವರ್ಷಗಳಲ್ಲಿ ಬೇರೆಯವರಿಗೆ ಏನು ಕಲಿಸಬಹುದೋ, ಅದನ್ನು ಅತ್ಯಂತ ಕಡಿಮೆ ಸಮಯದಲ್ಲಿ ಆ ಹುಡುಗನಿಗೆ ಕಲಿಸಿದರು.

ಲೀಲಾ

ಅನೇಕ ಸಂಪ್ರದಾಯಗಳು ಮತ್ತು ವ್ಯವಸ್ಥೆಗಳು ಮನುಷ್ಯನನ್ನು ಹೆಚ್ಚಿನ ಸಾಧ್ಯತೆಗಾಗಿ ತೆರೆಯಲು ಹಲವು ಮಾರ್ಗಗಳನ್ನು ರೂಪಿಸಿವೆ. ಅದರಲ್ಲಿ ಬ್ರಹ್ಮಚರ್ಯ ಒಂದು ದಾರಿ. ಲೀಲಾ ಮತ್ತೊಂದು ದಾರಿ. ಲೀಲಾ ಎಂದರೆ ನಿಮ್ಮ ದೇಹದಿಂದ, ನಿಮ್ಮ ಮನಸ್ಸಿನಿಂದ, "ನಾನು" ಎಂದು ನೀವು ಪರಿಗಣಿಸುವ ಎಲ್ಲದರಿಂದಲೂ ಸರ್ವವನ್ನೂ ಮೋಹಿಸಲು ಬಳಸುವುದು. ನೀವು ಜಪ, ನೃತ್ಯ, ಊಟ, ಹಾಡು, ಅಥವಾ ಏನೇ ಮಾಡಿದರೂ, ನಿಮ್ಮನ್ನು ಆ ಪ್ರಕ್ರಿಯೆಗೆ ಸಮರ್ಪಿಸುವುದು, ಅದಕ್ಕೆ ಶರಣಾಗುವದು. ಇದಕ್ಕೆ ನಿಮ್ಮೊಳಗಿನ ಸ್ತ್ರೀತತ್ವದ ಅವಶ್ಯಕತೆಯಿರುತ್ತದೆ..

ಸ್ತ್ರೀತತ್ವದ ಸ್ವರೂಪವೇ ಶರಣಾಗುವುದು, ವಿಲೀನಗೊಳ್ಳುವುದು, ಸ್ವೀಕರಿಸುವುದು.

ಸ್ತ್ರೀತತ್ವದ ಸ್ವರೂಪವೇ ಶರಣಾಗುವುದು, ವಿಲೀನಗೊಳ್ಳುವುದು, ಸ್ವೀಕರಿಸುವುದು. ಚಂದ್ರನಿಗೆ ತನ್ನದೇ ಆದ ಗುಣವಿಲ್ಲ. ಕೇವಲ ಸೂರ್ಯನನ್ನು ಪ್ರತಿಬಿಂಬಿಸುತ್ತಿದೆ - ಆದರೂ ಎಷ್ಟು ಸುಂದರವಾಗಿದೆ ಎಂದು ಗಮನಿಸಿ. ಚಂದ್ರನು ತನ್ನದೇ ಗುಣದಿಂದ ಏನನ್ನಾದರೂ ಮಾಡಿದರೆ, ಆ ಸೌಂದರ್ಯವಿರುವುದಿಲ್ಲ. ಸೂರ್ಯನು ಜೀವವನ್ನು ನೀಡುವವನು ಮತ್ತು ಸಂರಕ್ಷಿಸುವವನು - ಅದು ವಿಭಿನ್ನವಾದುದು. ಆದರೂ ಹಲವು ಕವನಗಳು ಅಥವಾ ಪ್ರೀತಿಯ ಮೂಲಕ ನಿಮ್ಮನ್ನು ಪ್ರೇರೇಪಿಸುವ ದೃಷ್ಟಿಯಿಂದ, ಚಂದ್ರನು ಸೂರ್ಯನಿಗಿಂತ ದೊಡ್ಡ ಪಾತ್ರ ವಹಿಸುತ್ತದೆ, ಅಲ್ಲವೇ? ಏಕೆಂದರೆ ಅದು ತನ್ನದೇ ಆದ ಗುಣವನ್ನು ಹೊಂದಿಲ್ಲ - ಅದು ಕೇವಲ ಪ್ರತಿಫಲಿಸುತ್ತದೆ.

ನೀವು ದೈವವನ್ನು ತಿಳಿದುಕೊಳ್ಳಲು ಬಯಸಿದರೆ, ಅದಕ್ಕಾದ ಒಂದೇ ಮಾರ್ಗವೆಂದರೆ ನಿಮ್ಮದೇ ಆದ ಗುಣವನ್ನು ನೀವು ಹೊಂದಿಲ್ಲದಿರುವುದು. ನೀವು ಕೇವಲ ಪ್ರತಿಬಿಂಬವಾಗಿರಿ. ನೀವು ಪ್ರತಿಬಿಂಬವಾದರೆ, ಏನನ್ನು ಪ್ರತಿಬಿಂಬಿಸುತ್ತೀರಿ? ನಿಮ್ಮ ಪರಮ ಮೂಲವನ್ನು ಮಾತ್ರ ಅಲ್ಲವೇ

Editor’s Note: Watch the Leela series, for more of Sadhguru’s talks on Krishna.