ಪ್ರಶ್ನೆ: ಬ್ರಹ್ಮ ಮುಹೂರ್ತದ ನಿರ್ದಿಷ್ಟ ಸಮಯ ಯಾವುದು? ಅದರ ಪ್ರಾಮುಖ್ಯತೆ ಏನು, ಮತ್ತು ಆ ಸಮಯದಲ್ಲಿ ನಾವು ಗರಿಷ್ಠ ಶಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು?

ಬ್ರಹ್ಮ ಮುಹೂರ್ತದ ಕಾಲಾವಧಿ

ಸದ್ಗುರು: ನಾವು ರಾತ್ರಿಯನ್ನು ಸೂರ್ಯಾಸ್ತದಿಂದ ಸೂರ್ಯೋದಯದ ಅವಧಿಯವರೆಗೆ ಎಂದು ಪರಿಗಣಿಸಿದರೆ, ರಾತ್ರಿಯ ಕೊನೆಯ ಪಾದವೇ ಬ್ರಹ್ಮ ಮುಹೂರ್ತವಾಗುತ್ತದೆ. ಇದು ಮುಂಜಾನೆ ಸುಮಾರು 3:30 ರಿಂದ 5:30 ಅಥವಾ 6:00 ರವರೆಗೆ, ಅಥವಾ ಅ ದಿನದ ಸೂರ್ಯೋದಯದ ಸಮಯದ ವರೆಗಿನ ಸಮಯ ಬ್ರಹ್ಮ ಮುಹೂರ್ತವಾಗುತ್ತದೆ.

ಬ್ರಹ್ಮ ಮುಹೂರ್ತದಲ್ಲಿ ಏನಾಗುತ್ತದೆ?

ಭೂಮಿಯ ಜೊತೆ ಸೂರ್ಯ ಮತ್ತು ಚಂದ್ರನೊಂದಿಗಿನ ಸಂಬಂಧದ ಸ್ವರೂಪ ಹೇಗಿದೆಯೆಂದರೆ ಈ ಸಮಯದಲ್ಲಿ ಮಾನವರಲ್ಲಿ ಕೆಲವು ದೈಹಿಕ ಬದಲಾವಣೆಗಳು ಸಂಭವಿಸುತ್ತವೆ. ನಿಮ್ಮ ದೇಹದಲ್ಲಿನ ತ್ಯಾಜ್ಯ ವಸ್ತುಗಳು, ಉದಾಹರಣೆಗೆ ಮೂತ್ರ ಮುಂತಾದವುಗಳ ಕೆಲವು ಗುಣಗಳು ಆ ಸಮಯದಲ್ಲಿ ಹೊಂದಿರುವ ರೀತಿ ದಿನದ ಬೇರೆ ಯಾವುದೇ ಸಮಯದಲ್ಲಿ ಇರುವುದಿಲ್ಲ ಎಂದು ವೈದ್ಯಕೀಯ ವಿಜ್ಞಾನವು ಕಂಡುಹಿಡಿದಿದೆ.

ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಇಡೀ ದೇಹವು ಒಂದು ನಿರ್ದಿಷ್ಟ ಅನುಕೂಲಕರ ವಾತಾವರಣದಲ್ಲಿದ್ದರೆ, ನಮ್ಮ ದೆಹದಲ್ಲಿನ ಪೀನಲ್ ಗ್ರಂಥಿಯ ಸ್ರವಿಸುವಿಕೆಯಾದ ಮೆಲಟೋನಿನ್ ಎಂದು ಕರೆಯಲ್ಪಡುವ ರಾಸಾಯನಿಕವು ನೈಸರ್ಗಿಕವಾಗಿ ಉತ್ಪಾದನೆಯಾಗುತ್ತದೆ. ಇದರ ಪೂರ್ಣ ಪ್ರಯೋಜನವನ್ನು ನಾವು ಪಡೆಯಬಹುದು. ಬ್ರಹ್ಮ ಮುಹೂರ್ತದಲ್ಲಿ ಪೀನಲ್ ಗ್ರಂಥಿಯು ಗರಿಷ್ಠ ಮಟ್ಟದಲ್ಲಿ ಈ ರಾಸಾಯನಿಕವನ್ನು ಸ್ರವಿಸುತ್ತದೆ, ಅಂದರೆ ನೀವು ನಿಮ್ಮ ದೇಹವನ್ನು ಸ್ಥಿರಗೊಳಿಸಿಕೊಳ್ಳಬಹುದು.

ಆಧುನಿಕ ಔಷಧ ವಿಜ್ಞಾನದಲ್ಲಿ, ಮೆಲಟೋನಿನ್ ಅನ್ನು ಮೂಡ್ ಸ್ಟೆಬಿಲೈಜರ್ ಅಥವಾ ಮನಸ್ಥಿತಿ ವರ್ಧಕವನ್ನಾಗಿ ನೋಡಲಾಗುತ್ತದೆ. ನಾನು ಬಹಳ ಸಮಯದಿಂದ ನಿಮ್ಮನ್ನು ನಿರಾಳರನ್ನಾಗಿಸುವ ಬಗ್ಗೆ ಮಾತನಾಡುತ್ತಿದ್ದೇನೆ! ನಿಮ್ಮನ್ನು ನಿರಾಳರನ್ನಾಗಿಸುವುದು ಎಂದರೆ ನಿಮ್ಮಲ್ಲಿ ಯಾವುದೇ ಏರಿಳಿತವಿಲ್ಲದಂತೆ ಮಾಡುವುದು. ಬ್ರಹ್ಮ ಮುಹೂರ್ತದಲ್ಲಿ ನಿರಾಳತೆ ಸ್ವಾಭಾವಿಕವಾಗಿ ಸಂಭವಿಸುತ್ತದೆ.

ಈ ಸಮಯದಲ್ಲಿ, ಜನರು, ಎದ್ದುಕುಳಿತು ತಮ್ಮ ಆಧ್ಯಾತ್ಮಿಕ ಅಬ್ಯಾಸಗಳನ್ನು ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನು ಪಡೆಯಲು ಬಯಸುತ್ತಾರೆ. ಬ್ರಹ್ಮ ಮುಹೂರ್ತ ಎಂದರೆ ಸೃಷ್ಟಿಕರ್ತನ ಸಮಯ. ನೀವು ಇದನ್ನು ಈ ರೀತಿಯೂ ನೋಡಬಹುದು: ನೀವೇ ಸ್ವತಃ ನಿಮ್ಮನ್ನು ಸೃಷ್ಟಿಸಿಕೊಳ್ಳಬಹುದಾದ ಸಮಯವಿದು. ನೀವು ಬೆಳಿಗ್ಗೆ ಈ ಸಮಯದಲ್ಲಿ ಸ್ವತಃ ಸೃಷ್ಟಿಕರ್ತನಾಗುತ್ತೀರಿ, ಆದ್ದರಿಂದ ನಿಮ್ಮ ಜೀವನವನ್ನು ನೀವು ಬಯಸಿದ ರೀತಿಯಲ್ಲಿ ಸ್ವತಃ ನಿರ್ಮಿಸಿಕೊಳ್ಳಬಹುದು.