ಸದ್ಗುರು : ನಮ್ಮ ಅಂತರಂಗವನ್ನು ಮುಟ್ಟುವ ವಿಷಯದಲ್ಲಿ, ಹಿಂದಿನಿಂದಲೂ ಸಹ ಜಗತ್ತಿನ ಬಹುತೇಕ ಎಲ್ಲಾ ಆಧ್ಯಾತ್ಮಿಕ ಮಾರ್ಗಗಳು ಭಕ್ತಿಯ ಕುರಿತಾಗಿ ಮಾತನಾಡಿವೆ. ಭಕ್ತಿಯು ಅತಿ ಶೀಘ್ರವಾದ ಮಾರ್ಗ ಏಕೆಂದರೆ ಬಹುತೇಕ ಜನರಿಗೆ ಅವರೊಳಗಿನ ಭಾವನೆಯೇ ಜೀವನದ ಅತ್ಯಂತ ತೀವ್ರತೆರನಾದ ಅನುಭವವಾಗಿರುತ್ತದೆ.

ಇಂದಿಗೂ ಸಹ, ಜನರು ತಮ್ಮನ್ನು ತಾವು ಬುದ್ಧಿವಂತರೆಂದು ಭಾವಿಸಿಕೊಂಡಿದ್ದರೂ, ಭಾವನೆಗಳೇ ಅವರ ಜೀವನದ ಪ್ರಧಾನವಾದ ಅಂಶವಾಗಿವೆ. ಬಹುತೇಕ ಜನರಿಗೆ ತಮ್ಮ ಭೌತಿಕ ಶರೀರಕ್ಕೆ ಸಂಬಂಧಿಸಿದ ನಿಜವಾದ ತೀವ್ರತೆಯ ಅನುಭವದ ಅರಿವಿರುವುದಿಲ್ಲ. ಕೆಲವರಿಗೆ ತಮ್ಮ ಮನಸ್ಸಿನ ತೀವ್ರತೆಯ ಅರಿವಿರುತ್ತದೆ. ಕೆಲವೇ ಕೆಲವು ಜನರಿಗೆ ಮಾತ್ರ ತಮ್ಮ ಜೀವಶಕ್ತಿಯ ತೀವ್ರತೆಯ ಅರಿವಿರುತ್ತದೆ. ಆದರೆ ಪ್ರತಿಯೊಬ್ಬರಲ್ಲೂ, ಸ್ವಲ್ಪಮಟ್ಟಿಗಾದರೂ ಭಾವನೆಗಳ ತೀವ್ರತೆಯ ಅನುಭವವಿರುತ್ತದೆ. ಅವರ ಪ್ರೀತಿ ಅಥವಾ ಕಾರುಣ್ಯದ ಭಾವನೆಗಳು ತೀವ್ರವಾಗಿಲ್ಲದಿದ್ದರೂ, ಕೊನೇಪಕ್ಷ ಅವರಿಗೆ ಕೋಪ ಬಂದಾಗಲಾದರೂ, ಅದರಲ್ಲಿ ತೀವ್ರತೆಯಿರುತ್ತದೆ. ಅವರು ಭಾವನೆಗಳ ಸಹಾಯದಿಂದ, ತೀವ್ರತೆಯ ಅನುಭವವನ್ನು ಹೊಂದಬಲ್ಲರು. ಈ ಕಾರಣದಿಂದಾಗಿಯೇ, ಭಕ್ತಿಗೆ ಅಪಾರವಾದ ಪ್ರಾಧಾನ್ಯತೆಯನ್ನು ನೀಡಲಾಗಿದೆ.

ಯಾವುದೇ ರೀತಿಯ ಆಧ್ಯಾತ್ಮಿಕ ಉನ್ಮತ್ತತೆಯನ್ನು ತೋರಿಸಿದ ಜನರನ್ನು ಸಮಾಜ ಯಾವಾಗಲೂ ಸಹ ಹಿಂಸೆಗೆ ಗುರಿಪಡಿಸಿದೆ.

ಭಾರತದಲ್ಲಿ, ಭಕ್ತಿ ಚಳುವಳಿ ಇಡೀ ಉಪಖಂಡವನ್ನು ವ್ಯಾಪಿಸಿತ್ತು. ರಾಮಕೃಷ್ಣ ಪರಮಹಂಸ, ಅಕ್ಕಮಹಾದೇವಿ ಮತ್ತು ಮೀರಾಬಾಯಿಯಂತಹ ಅನೇಕರು ತಮ್ಮೊಳಗೆ ಭಾವನೆಯ ಪ್ರವಾಹವನ್ನೇ ಸೃಷ್ಟಿಸಿಕೊಳ್ಳುವ ಮೂಲಕ ಉನ್ನತಸ್ಥರಕ್ಕೇರಿದ್ದರು.

ಮತ್ತು ಇಲ್ಲಿ ನಡೆಯುತ್ತಿದ್ದ ಸಂಗತಿಗಳಿಂದಾಗಿ ಆಕರ್ಷಿತರಾದ ಇತರ ಸಂಸ್ಕೃತಿಗಳ ಅನೇಕ ಜನರು ಇಲ್ಲಿಗೆ ಬಂದರು. ಅವರಲ್ಲಿ ಸೂಫಿ ಸಂತರಾದ ಮನ್ಸೂರ್ ಅಲ್ ಹಲ್ಲಜ್ರವರೂ ಸಹ ಒಬ್ಬರು. ಅವರು ಹತ್ತನೇ ಶತಮಾನದ ಆಸುಪಾಸಿನಲ್ಲಿ ಪರ್ಷಿಯಾದಲ್ಲಿ ಜೀವಿಸಿದ್ದರು. ಅವರು ದೇಶ ವಿದೇಶಗಳನ್ನು ಸುತ್ತುತ್ತಾ, ಭಾರತದ ಗುಜರಾತಿಗೆ ಬಂದು ಇಲ್ಲಿನ ಒಬ್ಬ ಗುರುವಿನ ಬಳಿ ಹಲವಾರು ವರ್ಷಗಳನ್ನು ಕಳೆದರು. ಆ ಸಮಯದಲ್ಲಿ ಅವರು ಭಕ್ತಿ ಪಂಥಕ್ಕೆ ಸೇರಿದ, ಸಂಪೂರ್ಣವಾಗಿ ವಿಭಿನ್ನವಾದ ಪರಮಾನಂದದ ಸ್ಥಿತಿಗಳಲ್ಲಿದ್ದ ಕೆಲವು ನೈಜ ಹಾಗೂ ಉನ್ಮತ್ತ ಯೋಗಿಗಳನ್ನು ಭೇಟಿಮಾಡಿದರು. ನಂತರ ಅವರು ಪಂಜಾಬಿಗೆ ಹೋಗಿ ಬಹುಶಃ ಅಲ್ಲಿ ಇನ್ನಷ್ಟು ಯೋಗಿಗಳನ್ನು ಭೇಟಿ ಮಾಡಿರಬೇಕು.

ಮನ್ಸೂರರು ಪರ್ಷಿಯಾಗೆ ಮರಳಿದಾಗ, ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಬಯಸಿದರು. ಅವರು ಯೋಗಿಗಳ ಉಡುಪಾದ ಲಂಗೋಟಿಯನ್ನು ಧರಿಸಿ ಹೋದರು, ಮತ್ತವರು “ಅನಲ್ ಹಕ್” ಎಂದು ಹೇಳಿದರು. ಅದರರ್ಥ “ನಾನು ದೇವರು, ನಾನೇ ಅಂತಿಮ ಸತ್ಯ” ಎಂದು. ಅದು ಸಂಸ್ಕೃತದ “ಅಹಂ ಬ್ರಹ್ಮಾಸ್ಮಿ” ವಾಕ್ಯಕ್ಕೆ ಸಮನಾದ ಅರ್ಥವನ್ನು ನೀಡುತ್ತದೆ.

ಜನ ಅವರನ್ನು ಹುಚ್ಚನೆಂದು ತಿಳಿದರು – ಅವರು ವಿಚಿತ್ರವಾದ ಲಂಗೋಟಿಯನ್ನು ಧರಿಸಿದ್ದರಲ್ಲದೆ ತಾನೇ ದೇವರೆಂದು ಸಾಧಿಸುತ್ತಿದ್ದರು. ಮತ್ತವರು ತಮ್ಮ ನಡವಳಿಕೆಯನ್ನು ಮುಂದುವರಿಸಿದರು. ಬೀದಿಗಳ ತುಂಬೆಲ್ಲಾ ಹುಚ್ಚರಂತೆ ಹಾಡುತ್ತಾ ಕುಣಿಯುತ್ತಾ ಸಾಗುತ್ತಿದ್ದರು.

ಮೆಕ್ಕಾಗೆ ಹೋದ ಅವರು ಅಲ್ಲಿ ತಮ್ಮದೇ ಆದ ಒಂದು ದೈವವನ್ನು ಸ್ಥಾಪಿಸಿದರು – ಬಹುಶಃ ಅವರು ಅದನ್ನು ಯಾವುದೋ ಒಂದು ರೀತಿಯಲ್ಲಿ ಪ್ರತಿಷ್ಠಾಪಿಸಿರಬೇಕು. ಹಲವು ಜನ ಅಲ್ಲಿಗೆ ಭೇಟಿನೀಡಲು ಪ್ರಾರಂಭಿಸಿದರು. ಇದರಿಂದ ಕೆರಳಿದ ಅಲ್ಲಿನ ಜನ ಅವರನ್ನು ಭಯಾನಕ ರೀತಿಯಲ್ಲಿ ಹಿಂಸಿಸಿ ಕೊಂದರು.

ಹಿಂಸೆಯ ಭಾಗವಾಗಿ, ಬದುಕಿರುವಾಗಲೇ ಅವರ ಚರ್ಮವನ್ನು ಸುಲಿದು ಸೊಂಟದವರೆಗೆ ಅವರನ್ನು ಹೂಳಲಾಯಿತು. ಅಲ್ಲಿ ಹಾದುಹೋಗುವ ಪ್ರತಿಯೊಬ್ಬರೂ ಅವರಿಗೆ ಒಂದು ಕಲ್ಲಿನಿಂದ ಹೊಡೆದು ಹೋಗಬೇಕೆಂದು ಆದೇಶಿಸಲಾಯಿತು. ಮನ್ಸೂರರ ಆತ್ಮೀಯ ಸ್ನೇಹಿತನಾದ ಶೆಬ್ಲಿ ಎಂಬುವವನು ಆ ದಾರಿಯಲ್ಲಿ ಹೋಗುತ್ತಿದ್ದ, ಮತ್ತು ಅವನು ಏನಾದರೊಂದನ್ನು ಅವರತ್ತ ಎಸೆಯಬೇಕಿತ್ತು. ಆದರೆ ಕಲ್ಲು ಹೊಡೆಯುವ ಮನಸ್ಸಾಗದೆ ಅವನೊಂದು ಹೂವನ್ನು ಮನ್ಸೂರರತ್ತ ಎಸೆದ.

ಮನ್ಸೂರರು ಆಗೊಂದು ಕವನವನ್ನು ಹಾಡಲು ಶುರುಮಾಡುತ್ತಾರೆ : “ಜನಗಳು ತೂರಿದ ಕಲ್ಲುಗಳಿಂದ ನನಗೆ ನೋವಾಗಲಿಲ್ಲ ಏಕೆಂದರೆ ಅವರು ಅಜ್ಞಾನಿಗಳು. ನೀನು ಈ ಹೂವನ್ನು ಎಸೆದಿರುವೆ. ಎಲ್ಲಿಕ್ಕಿಂತ ಹೆಚ್ಚಾಗಿ ಇದು ನನಗೆ ಅತೀವವಾದ ನೋವನ್ನು ಉಂಟುಮಾಡಿದೆ, ಏಕೆಂದರೆ ನಿನಗೆ ವಿಷಯ ತಿಳಿದಿದ್ದರೂ ಸಹ ನೀನು ನನ್ನತ್ತ ಏನೋ ಒಂದನ್ನು ಎಸೆದಿರುವೆ.” ಎನ್ನುತ್ತಾರೆ.

ಯಾವುದೇ ರೀತಿಯ ಆಧ್ಯಾತ್ಮಿಕ ಉನ್ಮತ್ತತೆಯನ್ನು ತೋರಿಸಿದ ಜನರನ್ನು ಸಮಾಜ ಯಾವಾಗಲೂ ಸಹ ಹಿಂಸೆಗೆ ಗುರಿಪಡಿಸಿದೆ. ಸಮಾಜ ಭಕ್ತರನ್ನು ಯಾವಾಗಲೂ ಅನುಮಾನದಿಂದ ನೋಡುತ್ತದೆ ಏಕೆಂದರೆ ಭಕ್ತರಾದವರು ಯಾವುದೇ ರೀತಿಯ ತರ್ಕವನ್ನು ಅನುಸರಿಸುವುದಿಲ್ಲ. ಅವರು ಸ್ವಭಾವತಃ ಬಹಳ ಅದ್ಭುತವಾದ ಜನ, ಆದರೆ ಅವರು ಸಾಮಾಜಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದಿಲ್ಲ ಏಕೆಂದರೆ ನೀವೊಬ್ಬ ಭಕ್ತನಾಗಬೇಕೆಂದರೆ ನೀವೊಂದು ನಿರ್ದಿಷ್ಟ ಮಟ್ಟದ ಉನ್ಮತ್ತತೆಯನ್ನು ಹೊಂದಿರಬೇಕಾಗುತ್ತದೆ. ಅದು ಒಂದು ಸುಂದರವಾದ ಹುಚ್ಚುತನ, ಆದರೆ ಅದು ಹುಚ್ಚೇ.

ನೀವು ನಿಮ್ಮ ಮನಸ್ಸಿನಿಂದ ಹೊರಗಿದ್ದರೆ, ನೀವು ಪರಿಪೂರ್ಣವಾಗಿ ಸಮಚಿತ್ತದವರಾಗುತ್ತೀರಿ, ನೀವು ಮನ್ಸೂರರಂತೆ ಆಗುತ್ತೀರಿ – ಇದು ಬಹುತೇಕ ಜನರ ತಿಳುವಳಿಕೆಯನ್ನು ಮೀರಿದ ಸಂಗತಿಯಾಗಿದೆ.

ಸ್ವಲ್ಪವಾದರೂ ಉನ್ಮತ್ತತೆ ಸಂಭವಿಸದಿದ್ದರೆ, ಹೊಸತೇನೂ ಜರುಗುವುದಿಲ್ಲ. ಹೊಸತೇನಾದರೂ ಆಗಬೇಕಾದರೆ, ತಾರ್ಕಿಕ ಯೋಚನೆ ಹೋಗಬೇಕು. ಅದರರ್ಥ ನೀವು ಹುಚ್ಚರಾಗಬೇಕೆಂದೇನು? ಅಲ್ಲ! ಸಾಮಾನ್ಯವಾಗಿ, ನಾವು ಬುದ್ಧಿಭ್ರಮಣೆಯನ್ನು ಹುಚ್ಚು ಎಂದು ಕರೆಯುತ್ತೇವೆ. ಬುದ್ಧಿಭ್ರಮಣೆಯಾಗುವುದು ತಾರ್ಕಿಕ ಆಲೋಚನಾಕ್ರಮ ಹೊರಟುಹೋಗುವುದರಿಂದಲ್ಲ. ಅಲ್ಲಿ ಇನ್ನೂ ತರ್ಕವಿರುತ್ತದೆ, ಆದರೆ ಅದು ಅಸಮಂಜಸವಾಗಿಬಿಟ್ಟಿರುತ್ತದೆ ಅಷ್ಟೆ. ಹುಚ್ಚನು ತನ್ನ ತರ್ಕ ಸರಿಯಾಗಿದೆ ಎಂದೇ ಭಾವಿಸುತ್ತಾನೆ. ಅವನ ಪ್ರಕಾರ ಬೇರೆಯವರು ತರ್ಕಬದ್ಧರಾಗಿರುವುದಿಲ್ಲ. ಅವನು ಬೇರೆಯವರ ಮಾತಿಗೆ ಅವಕಾಶ ಮಾಡಿಕೊಡುವುದಿಲ್ಲ. “ಯಾರೂ ಸರಿಯಿಲ್ಲ, ನಾನೊಬ್ಬನೇ ಸರಿ” ಎಂದು ನೀವು ಭಾವಿಸಿಕೊಳ್ಳಲು ಪ್ರಾರಂಭಿಸಿದರೆ, ಅದು ಹುಚ್ಚುತನದ ಮೊದಲ ಸುಳಿವು.

ಬುದ್ಧಿಭ್ರಮಣೆ ತರ್ಕಾತೀತವಲ್ಲ, ಅದು ತಿರುಚಿದ ತರ್ಕ. ಆದರೆ ಜ್ಞಾನೋದಯ ಎನ್ನುವುದು ತರ್ಕಾತೀತ – ಅದರಲ್ಲಿ ತರ್ಕವಿಲ್ಲ. ನಿಮ್ಮೊಳಗೆ ಏನೂ ಇಲ್ಲದಿದ್ದಾಗ, ಎಲ್ಲವೂ ನಿಮ್ಮ ಮೂಲಕ ಹರಿದು ಹೋಗುತ್ತದೆ. ಎಲ್ಲವೂ ನಿಮ್ಮ ಗ್ರಹಿಕೆಯ ಒಳಗೆ ಬರುತ್ತದೆ.

 

ಸಾಮಾನ್ಯವಾಗಿ, ಬುದ್ಧಿಭ್ರಮಣೆಯಾದ ಮನುಷ್ಯನನ್ನು ಇಂಗ್ಲೀಷ್ ಭಾಷೆಯಲ್ಲಿ ವರ್ಣಿಸುವಾಗ, He is out of his mind ಎನ್ನುತ್ತಾರೆ. ನೀವು ನಿಮ್ಮ ಮನಸ್ಸಿನಿಂದ ಹೊರಗಿದ್ದರೆ, ನೀವು ಹೇಗೆ ಹುಚ್ಚರಾಗುತ್ತೀರಿ? ಹುಚ್ಚು ಯಾವಾಗಲೂ ಮನಸ್ಸಿಗೆ ಸಂಬಂಧಿಸಿದ್ದಾಗಿರುತ್ತದೆ. ನೀವು ನಿಮ್ಮ ಮನಸ್ಸಿನೊಳಗಿದ್ದರೆ ಮಾತ್ರ ಹುಚ್ಚರಾಗುತ್ತೀರಿ. ನೀವು ನಿಮ್ಮ ಮನಸ್ಸಿನಿಂದ ಹೊರಗಿದ್ದರೆ, ನೀವು ಪರಿಪೂರ್ಣವಾಗಿ ಸಮಚಿತ್ತದವರಾಗುತ್ತೀರಿ, ನೀವು ಮನ್ಸೂರರಂತೆ ಆಗುತ್ತೀರಿ – ಇದು ಬಹುತೇಕ ಜನರ ತಿಳುವಳಿಕೆಯನ್ನು ಮೀರಿದ ಸಂಗತಿಯಾಗಿದೆ. 

ನೀವು ಮಾಡುವ ವಿಷಯವು ನಿಮ್ಮ ಸುತ್ತಲಿನ ಜನರಿಗೆ ಅರ್ಥವಾಗದೇ ಇದ್ದಾಗ, ಸಮಾಜದಿಂದ ಕಿರುಕುಳ ಉಂಟಾಗುತ್ತದೆ.  ನೀವು ನಿಮ್ಮ ಮನಸ್ಸು, ಭಾವನೆ ಅಥವಾ ಶರೀರವನ್ನು ಒಂದು ರೀತಿಯ ಉನ್ಮತ್ತತೆಯಲ್ಲಿಟ್ಟುಕೊಂಡರೆ, ಆ ಕೂಡಲೇ ನೀವು ಸಾಮಾಜಿಕವಾಗಿ ಅನರ್ಹರಾಗಿಬಿಡುತ್ತೀರಿ. ಆದ್ದರಿಂದಲೇ ಪ್ರಾಣಶಕ್ತಿಯನ್ನು ಮುಂಚೂಣಿಯಲ್ಲಿಡುವುದು ಅತ್ಯಂತ ಮುಖ್ಯವಾಗಿದೆ.  ನಿಮ್ಮ ಪ್ರಾಣಶಕ್ತಿಯ ವಿಷಯಕ್ಕೆ ಬಂದರೆ, ಅಲ್ಲಿ ನಿಮಗೆ ಸಾಮಾಜದೊಂದಿಗೆ ಯಾವ ವ್ಯವಹಾರವೂ ಇರುವುದಿಲ್ಲ. ಹಾಗಾಗಿ ನಿಮ್ಮ ಪ್ರಾಣಶಕ್ತಿಯು ಯಾವುದೇ ರೀತಿಯ ಉನ್ಮತ್ತತೆಯಲ್ಲಿದ್ದರೂ ಸಹ, ನೀವು ನಿಮ್ಮ ಮನಸ್ಸು, ಭಾವನೆ ಮತ್ತು ಶರೀರಗಳನ್ನು ಸಾಮಾಜ ಒಪ್ಪುವ ರೀತಿಯಲ್ಲಿಟ್ಟುಕೊಳ್ಳಬಹುದು.

ಹಾಗಾಗಿ, ಸಹಜವೆಂದು ಪರಿಗಣಿಸಲ್ಪಟ್ಟಿರುವುದರ ಮಿತಿಗಳನ್ನು ಮೀರಿಹೋಗಿಯೂ ಸಹ ಸಾಮಾಜವು ಒಪ್ಪುವ ರೀತಿಯಲ್ಲಿ ನೀವಿರಬೇಕೆಂದರೆ, ಎಲ್ಲಾ ನಾಲ್ಕು ಅಂಶಗಳಾದ ಶರೀರ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿಗಳನ್ನು ಪೋಷಿಸುವುದು ತುಂಬಾ ಮುಖ್ಯ. ಆಗ ಮಾತ್ರ ಜನರು ಅಪರಿಮಿತವಾದ ಆನಂದದಲ್ಲಿ ತೇಲಾಡಬಹುದು, ಮತ್ತು ಹಾಗಿದ್ದರೂ ಸಹ ತಾವು ಮಾಡುತ್ತಿರುವ ಎಲ್ಲದರಲ್ಲೂ ಪರಿಪೂರ್ಣವಾದ ದಕ್ಷತೆ ಮತ್ತು ಸಾಮರ್ಥ್ಯವನ್ನು ತೋರಿಸಬಹುದು – ಇಂದಿನ ಜಗತ್ತಿನಲ್ಲಿ ಇದು ಅತ್ಯಂತ ಅವಶ್ಯಕವಾಗಿದೆ.

ನಿಮ್ಮ ಪ್ರಾಣಶಕ್ತಿಯು ಉನ್ಮತ್ತ ಸ್ಥಿತಿಯಲ್ಲಿದ್ದರೂ ನಿಮ್ಮ ಮನಸ್ಸು ಸ್ಥಿರವಾಗಿದ್ದರೆ, ನೀವು ನಿಮ್ಮೊಳಗೆ ಸಂಪೂರ್ಣವಾದ ಮತ್ತಿನಲ್ಲಿರಬಹುದು. ಆದರೆ ಹೊರಗಿನ ಪ್ರಪಂಚದಲ್ಲಿ ಮಾತ್ರ ಸಮಚಿತ್ತರಾಗಿ ಬದುಕಬಹುದು. ಇಂದಿನ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ನಿರ್ವಹಿಸುವ ಅತ್ಯುತ್ತಮ ವಿಧಾನ ಇದಾಗಿದೆ.

ಸಂಪಾದಕರ ಟಿಪ್ಪಣಿ: ಸದ್ಗುರುಗಳು ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯದ ಕುರಿತು ಮಾತನಾಡುತ್ತಾರೆ, ಮತ್ತು ಈ ಸಂಸ್ಕೃತಿಯು ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೆ ಏಕೆ ಅನ್ವಯಿಸುತ್ತದೆ ಎಂಬುದನ್ನು ಪರಿಶೋಧಿಸುತ್ತಾರೆ. ಚಿತ್ರಗಳು, ಗ್ರಾಫಿಕ್ಸ್ ಮತ್ತು ಸದ್ಗುರುಗಳ ಸ್ಪೂರ್ತಿದಾಯಕ ಮಾತುಗಳೊಂದಿಗೆ, ನೀವೆಂದೂ ತಿಳಿಯದೇ ಇರುವಂತೆ ಭಾರತ ಇಲ್ಲಿದೆ! Download Bha-ra-ta.