ಪ್ರಶ್ನೆ : ಇನ್ನರ್ ಇಂಜಿನಿಯರಿಂಗ್ ಎಂದರೆ ಏನು; ತಾವು ಅದನ್ನು ನನಗೆ ಸರಳವಾಗಿ ತಿಳಿಸಿ ಹೇಳಬಹುದೇ? ಅದು ಯಶಸ್ವಿ ಜೀವನದ ಅಡಿಪಾಯ ಏಕೆ ?
ಸದ್ಗುರು: ಬಾಹ್ಯ ಯೋಗಕ್ಷೇಮವನ್ನು ಸೃಷ್ಟಿಸುವ ತಂತ್ರಜ್ಞಾನ ಇರುವಂತೆ, ಆಂತರಿಕ ಯೋಗಕ್ಷೇಮವನ್ನು ಸೃಷ್ಟಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಸಂಪೂರ್ಣ ಆಯಾಮವಿದೆ. ನಾವು ತತ್ವಜ್ಞಾನ, ನೈತಿಕತೆ ಅಥವಾ ಸದಾಚಾರ ಬೋಧಿಸುತ್ತಿಲ್ಲ. ಇವು ಸರಳ, ಶಕ್ತಿಯುತ ವಿಧಾನಗಳಾಗಿವೆ. ಇವುಗಳಿಂದ ನಿಮ್ಮ ದೇಹ ಮತ್ತು ಮನಸ್ಸು, ಸ್ವಾಭಾವಿಕವಾಗಿ ಪೂರ್ಣ ಸಾಮರ್ಥ್ಯದಲ್ಲಿ, ಶಾಂತಿಯುತವಾಗಿ ಮತ್ತು ಆನಂದದಿಂದ ಕಾರ್ಯ ನಿರ್ವಹಿಸುತ್ತವೆ. ತಂತ್ರಜ್ಞಾನ ಎಂದರೆ ಯಾವುದನ್ನಾದರೂ ಅದು ಕೆಲಸ ಮಾಡುವ ರೀತಿಯಲ್ಲಿ ಮಾಡುವುದು. ನಿಮ್ಮೊಳಗೆ ನೀವು ಸರಿಯಾದ ಕೆಲಸಗಳನ್ನು ಮಾಡದಿದ್ದರೆ, ಸರಿಯಾದ ಸಂಗತಿಗಳು ಆಗುವುದಿಲ್ಲ. ಶಾಂತಿ, ಸಂತೋಷ ಮತ್ತು ಭಾವಪರವಶತೆ ನಿಮ್ಮಲ್ಲಿ ಇರದಿದ್ದರೆ, ನೀವು ಈ ಜೀವನದೊಂದಿಗೆ ಸರಿಯಾದ ಸಂಗತಿಗಳನ್ನು ಮಾಡಿಲ್ಲ ಎಂದರ್ಥ. ಇನ್ನರ್ ಇಂಜಿನಿಯರಿಂಗ್ ಈ ಸಂಗತಿಗಳನ್ನು ಹೇಗೆ ಸರಿಯಾಗಿ ಮಾಡಬೇಕು ಎನ್ನುವುದರ ಅನ್ವೇಷಣೆಯಾಗಿದೆ.

ಪ್ರಶ್ನೆ: ಇನ್ನರ್ ಇಂಜಿನಿಯರಿಂಗ್ ನ ವಿನ್ಯಾಸದ ಅಂಶಗಳು ಯಾವುವು ಮತ್ತು ಅವುಗಳನ್ನು ನನ್ನ ಯೋಗಕ್ಷೇಮಕ್ಕಾಗಿ ಹೇಗೆ ಬಳಸಬಹುದು?
ಸದ್ಗುರು: ನಿಮ್ಮ ಅನುಭವದ ಸ್ವರೂಪ ಮತ್ತು ಆಧಾರ ನಿಮ್ಮೊಳಗೇ ಇದೆ. ನೋವು, ಸಂತೋಷ, ಉಲ್ಲಾಸ, ದುಃಖ, ಸಂಕಟ ಮತ್ತು ಭಾವಪರವಶತೆ ನಿಮ್ಮೊಳಗೆಯೇ ಸಂಭವಿಸುತ್ತವೆ. ನಿಮ್ಮ ಅನುಭವದ ಮೂಲ ನಿಮ್ಮೊಳಗೇ ಇದೆ. ನಿಮ್ಮ ಅನುಭವದ ಮೂಲ ಹೇಗೆ ಸಂಭವಿಸುತ್ತದೆ ಎನ್ನುವುದರ ಅರಿವು ನಿಮಗಿದ್ದರೆ, ಜೀವನದ ಅನುಭವವನ್ನು ನೀವು ಆಹ್ಲಾದಕರ ಮಾಡುತ್ತೀರೋ ಅಥವಾ ಅಹಿತಕರ ಮಾಡುತ್ತೀರೋ? ಉತ್ತರ ಸ್ಪಷ್ಟ.

ಪ್ರಶ್ನೆ: ಒತ್ತಡ ನಿವಾರಿಸಲು ನನ್ನ ಮನೋಭಾವನೆಯಲ್ಲಿ ಯಾವ ರೀತಿಯ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ?
ಸದ್ಗುರು: ಜೀವನಶೈಲಿ, ಕೆಲಸ, ಕುಟುಂಬ ಅಥವಾ ಪರಿಸ್ಥಿತಿಗಳು ನಿಮ್ಮ ಒತ್ತಡಕ್ಕೆ ಕಾರಣವಲ್ಲ. ನೀವು ಯಾವುದನ್ನು ಒತ್ತಡ, ಭಯ ಅಥವಾ ಕೋಪ ಎಂದು ಕರೆಯುತ್ತೀರೋ, ಅದು ಮೂಲಭೂತವಾಗಿ ನಿಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಶಕ್ತಿಯನ್ನು ನಿರ್ವಹಿಸಲು ನಿಮ್ಮ ಅಸಮರ್ಥತೆಯಾಗಿದೆ. ಮಾನವ ದೇಹವು ಈ ಗ್ರಹದ ಅತ್ಯಾಧುನಿಕ ಉಪಕರಣ. ಆದರೆ ನೀವು ಅದರ ಬಳಕೆದಾರರ ಕೈಪಿಡಿಯನ್ನು ಓದಿದ್ದೀರಾ?

ಒತ್ತಡವು ಯಂತ್ರದಲ್ಲಿ ಘರ್ಷಣೆಯಿದ್ದಂತೆ. ಯಂತ್ರದ ಭಾಗಗಳ ಚಲನೆ ಸರಿಯಾಗಿ ಆಗದಿದ್ದರೆ ಅಥವಾ ಸಾಕಷ್ಟು ಲ್ಯೂಬ್ರಿಕೇಷನ್ ಇಲ್ಲದಿದ್ದರೆ ಘರ್ಷಣೆ ಉಂಟಾಗುತ್ತದೆ. ನಾನು ಒತ್ತಡವನ್ನು ನಿರ್ವಹಿಸುವ ಬಗ್ಗೆ ಅಥವಾ ಅದನ್ನು ಹಿಡಿತದಲ್ಲಿ ಇಡುವುದರ ಬಗ್ಗೆ ಮಾತನಾಡುತ್ತಿಲ್ಲ. ನಾನು ಅದನ್ನು ಹೇಗೆ ಸೃಷ್ಟಿಸಬಾರದು ಎಂಬುದರ ಕುರಿತು ಮಾತನಾಡುತ್ತಿದ್ದೇನೆ, ಏಕೆಂದರೆ ಒತ್ತಡವು ನಿಮ್ಮ ಸೃಷ್ಟಿಯಾಗಿದೆ. ನೀವು ಸರಳವಾದ ಯೋಗ ಪ್ರಕ್ರಿಯೆಗಳನ್ನು ಪ್ರಾರಂಭಿಸಿದರೆ, ನಿಮ್ಮ ಇಡೀ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸುವುದನ್ನು ಗಮನಿಸುತ್ತೀರಿ. ನಂತರ ಒತ್ತಡ ಎನ್ನುವ ವಿಷಯವೇ ಇರುವುದಿಲ್ಲ.

ಪ್ರಶ್ನೆ: ಆಹಾರದೊಂದಿಗೆ ನಾನು ಸಮತೋಲನವನ್ನು ಹೇಗೆ ಪಡೆಯುವುದು? ಮತ್ತು ನನ್ನ ಒಟ್ಟಾರೆ ಯೋಗಕ್ಷೇಮದಲ್ಲಿ ಇದು ಏಕೆ ಮುಖ್ಯವಾಗಿದೆ?
ಸದ್ಗುರು: ನಿಮ್ಮ ದೇಹದಲ್ಲಿ ಜಡತ್ವ ಮತ್ತು ಬಿಗಿತ ಉಂಟು ಮಾಡದೆ ನಿಮಗೆ ಅಗತ್ಯವಾದ ಶಕ್ತಿ ಮತ್ತು ಚುರುಕುತನವನ್ನು (ಕಾರ್ಯಶೀಲತೆ) ನೀಡುವ ಆಹಾರವೇ ಉತ್ತಮ ಆಹಾರ. ಇದನ್ನು ಪ್ರಯೋಗ ಮಾಡಿ ನೋಡಿ - 50% ಬೇಯಿಸದ ತರಕಾರಿಗಳು ಮತ್ತು ಹಣ್ಣುಗಳು ಮತ್ತು 50% ಬೇಯಿಸಿದ ಸಸ್ಯಾಹಾರಿ ಆಹಾರವು ಹೆಚ್ಚಿನ ಜನರಿಗೆ ಸರಿ ಹೊಂದುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸರಿಹೊಂದುವ ಆಹಾರದ ಸಮತೋಲನವನ್ನು ನಿರ್ಧರಿಸಬೇಕು, ಪ್ರತಿಜ್ಞೆಗಳಿಂದಲ್ಲ, ಅವಲೋಕನ ಮತ್ತು ಅರಿವಿನಿಂದ.

ಎಲ್ಲಕ್ಕಿಂತ ಹೆಚ್ಚಾಗಿ, ನೀವು ತಿನ್ನುವ ಆಹಾರ ಜೀವನವಾಗಿದೆ. ನಮ್ಮನ್ನು ಪೋಷಿಸಲು ತಮ್ಮ ಪ್ರಾಣವನ್ನು ಕೊಡುವ ಎಲ್ಲಾ ಜೀವಿಗಳಿಗೆ ನಾವು ಕೃತಜ್ಞತೆ ಅರ್ಪಿಸಿ ಸೇವಿಸಲು ಸಾಧ್ಯವಾದರೆ, ಆಹಾರವು ನಿಮ್ಮೊಳಗೆ ವಿಭಿನ್ನವಾಗಿ ವರ್ತಿಸುತ್ತದೆ.

ಪ್ರಶ್ನೆ: ನನ್ನ ಮನಸ್ಸನ್ನು ನಿರಂತರ ಶಾಂತ ಸ್ಥಿತಿಯಲ್ಲಿಡುವುದು ಹೇಗೆ? ಇದು ಸಾಧ್ಯವಿದೆಯಾ ?
ಸದ್ಗುರು: ಈಗ ನಿಮ್ಮ ಮನಸ್ಸು ಮಾಲಿಕ ಮತ್ತು ನೀವು ಗುಲಾಮರಾಗಿದ್ದೀರಿ. ಧ್ಯಾನದ ಮುಖ್ಯ ಅಂಶವೆಂದರೆ ನೀವು ಮಾಲಿಕರಾಗಬೇಕು ಮತ್ತು ನಿಮ್ಮ ಮನಸ್ಸು ಗುಲಾಮವಾಗಬೇಕು. ಧ್ಯಾನ ಒಂದು ನಿರ್ದಿಷ್ಟ ಗುಣವಾಗಿದೆ, ಅದು ಕ್ರಿಯೆಯಲ್ಲ. ಧ್ಯಾನ ನೀವು ಮಾಡಬಹುದಾದ ಕೆಲಸವಲ್ಲ. ಆದರೆ ನೀವು ಧ್ಯಾನಸ್ಥರಾಗಬಹುದು. ನಿಮ್ಮ ದೇಹ, ಮನಸ್ಸು, ಶಕ್ತಿ ಮತ್ತು ಭಾವನೆಗಳನ್ನು ಒಂದು ನಿರ್ದಿಷ್ಟ ಮಟ್ಟದ ಪ್ರಬುದ್ಧತೆಗೆ ಬೆಳೆಸಿಕೊಂಡರೆ, ಧ್ಯಾನವು ಸ್ವಾಭಾವಿಕವಾಗಿ ಸಂಭವಿಸುತ್ತದೆ.

ಪ್ರಶ್ನೆ: ಈ ಸಂತೋಷ ಎಂಬ ವಿಷಯಕ್ಕೆ ಬಂದರೆ, ನಾನು ನಿಜವಾದ ಸಂತೋಷದ ಕಡೆ ಹೇಗೆ ಸಾಗಬೇಕು ಮತ್ತು ಇತರರೊಂದಿಗೆ ಅದನ್ನು ಹಂಚಿಕೊಳ್ಳುವುದನ್ನು ನಾನು ಹೇಗೆ ಕಲಿಯಬೇಕು?
ಸದ್ಗುರು: ನೀವು ನಿಮ್ಮ ಜೀವನವನ್ನು ನೋಡಿದರೆ, ಸಂತೋಷವು ನಿಮಗೆ ಸಂಭವಿಸಿದಾಗಲೆಲ್ಲಾ - ಬಹುಶಃ ನೀವು ಸೂರ್ಯೋದಯವನ್ನು ನೋಡಿದಿರಿ ಅಥವಾ ಸ್ವಲ್ಪ ಸಂಗೀತವನ್ನು ಕೇಳಿದಿರಿ ಅಥವಾ ಸ್ವಲ್ಪ ಯಶಸ್ಸನ್ನು ಸಾಧಿಸಿದಿರಿ - ಪ್ರಚೋದನೆ ಯಾವುದೇ ಇದ್ದರೂ, ಸಂತೋಷ ನಿಮಗೆ ಸಂಭವಿಸಿದಾಗ ಅದು ಯಾವಾಗಲೂ ನಿಮ್ಮೊಳಗಿನಿಂದ ಹೊರ ಹೊಮ್ಮಿತು. ಅದು ಬೇರೆ ಎಲ್ಲಿಂದಲೋ ನಿಮ್ಮ ಮೇಲೆ ಸುರಿಯಲಿಲ್ಲ.

ಸಂತೋಷದ ಮೂಲ ನಿಮ್ಮೊಳಗೆ ಇದೆ ಆದರೆ ಈಗ, ಅದರ ಪ್ರಚೋದನೆ ಹೊರಗಿದೆ. ನಮಗಿರುವ ಆಯ್ಕೆಯೆಂದರೆ, ಪ್ರಚೋದನೆ ಹೊರಗಿರಬೇಕೋ ಅಥವಾ ನಿಮ್ಮೊಳಗೆ. ಈಗ, ನಿಮ್ಮೊಳಗೆ ಏನಾಗಬೇಕು ಎನ್ನುವುದನ್ನು ಬೇರೆಯವರು ಅಥವಾ ಬೇರೇನೋ ನಿರ್ಧರಿಸುತ್ತಿದೆ. ಇದು ಅತ್ಯಂತ ಉಚ್ಛ ಮಟ್ಟದ ಗುಲಾಮಗಿರಿ. ಈ ಗುಲಾಮಗಿರಿಯನ್ನು ಅಳಿಸಿ ಹಾಕದಿದ್ದರೆ, ನೀವು ಉತ್ತಮ ಪ್ರಪಂಚವನ್ನು ನೋಡುವುದಿಲ್ಲ. ಆದ್ದರಿಂದ ನಿಮ್ಮನ್ನು ಒಂದು ಅದ್ಭುತವಾದ ಜೀವಿಯನ್ನಾಗಿ ಮಾಡಲು ನಾವು ಸ್ವಲ್ಪ ಇನ್ನರ್(ಆಂತರ್ಯದ) ಇಂಜಿನಿಯರಿಂಗ್ ಮಾಡಬೇಕು.

ಪ್ರಶ್ನೆ: ತೀವ್ರ ಗತಿಯ ಈ ಜೀವನದಲ್ಲಿ, ನನ್ನನ್ನು ಸಂಪೂರ್ಣವಾಗಿ ಕೆಲಸದಲ್ಲಿ ಹೇಗೆ ತೊಡಗಿಸಿಕೊಳ್ಳುವುದು ಮತ್ತು ಅದರ ಜೊತೆಗೆ ನನ್ನ ಪ್ರೀತಿಪಾತ್ರರಿಗೆ ಸಮಯವನ್ನು ಹೇಗೆ ನೀಡುವುದು? ಉದ್ಯೋಗ ಮತ್ತು ವಯ್ಯುಕ್ತಿಕ ಜೀವನದ ಸಮತೋಲನ ಏಕೆ ಮುಖ್ಯ
ಸದ್ಗುರು: ಉದ್ಯೋಗ ಮತ್ತು ವಯ್ಯುಕ್ತಿಕ ಜೀವನ ಎಂದೇನು ಬೇರೆ ಇಲ್ಲ, ಇರುವುದು ಬರೀ ಜೀವನ ಮತ್ತು ಜೀವನ. ನಿಮ್ಮ ಉದ್ಯೋಗ ಜೀವನವಾಗಬೇಕು, ಮತ್ತು ನಿಮ್ಮ ಜೀವನವನ್ನು ಉತ್ತಮಗೊಳಿಸುವ ಪ್ರಯತ್ನ ಮಾಡಬೇಕು. ಉದ್ಯೋಗ ಮತ್ತು ಜೀವನ ಎಂದು ಎರಡು ಭಾಗ ಮಾಡಬೇಡಿ. ಜೀವನಕ್ಕೆ ಬೇರೆ ಬೇರೆ ಮಗ್ಗಲುಗಳಿವೆ, ಮತ್ತು ಅವುಗಳನ್ನು ನಿಭಾಯಿಸಬೇಕಾಗಿದೆ. ನಾನು ವಾರದಲ್ಲಿ ಏಳು ದಿನ, 365 ದಿನ ಕೆಲಸ ಮಾಡುತ್ತೇನೆ - ಆದರೆ ನನಗೆ ರಜೆಯ ಅಗತ್ಯವಿಲ್ಲ. ನಿಮಗೆ ಮುಖ್ಯವಾದದ್ದನ್ನು ನೀವು ನಿಜವಾಗಿಯೂ ಮಾಡಿದರೆ, ನಿಮ್ಮ ಇಡೀ ಜೀವನ ರಜೆಯಂತೆ ಆನಂದಮಯವಾಗುತ್ತದೆ. ಆದ್ದರಿಂದ ನಿಮಗೆ ಮಹತ್ವವಾದದ್ದನ್ನು ಮಾಡುವುದರ ಮೂಲಕ ನಿಮ್ಮ ಜೀವನವನ್ನು ರಜೆಯನ್ನಾಗಿ ಮಾಡಿ. ಎಲ್ಲಕ್ಕಿಂತ ಹೆಚ್ಚಾಗಿ, ಅತ್ಯಂತ ಮುಖ್ಯವಾದ ಕೆಲಸವೆಂದರೆ, ನಿಮ್ಮ ಮೇಲೆ ಕೆಲಸ ಮಾಡಿಕೊಳ್ಳುವುದು.

Editor’s Note: Sadhguru is in Dubai today for a Meet, Mingle and Meditate event at the Dubai World Trade Center, which will also see the UAE launch of “Inner Engineering: A Yogi’s Guide to Joy”, a New York Times and Amazon bestseller.

The above article was first published in the Gulf News