ಜುಲೈ 11 ವಿಶ್ವ ಜನಸಂಖ್ಯಾ ದಿನ. ಸದ್ಗುರುಗಳು 2010 ರ ಜೂನ್ 5 ರಂದು ನವದೆಹಲಿಯಲ್ಲಿ ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರವನ್ನು ಭಾರತ ಸರ್ಕಾರದಿಂದ ಸ್ವೀಕರಿಸಿದ ನಂತರ ನೀಡಿದ ಭಾಷಣದ ಈ ಆಯ್ದ ಭಾಗದಲ್ಲಿ, ಮಾನುಕುಲ ಇಂದು ಎದುರಿಸುತ್ತಿರುವ ಮೂಲಭೂತ ಸಮಸ್ಯೆಯು ಜನಸಂಖ್ಯೆಗೆ ಸಂಬಂಧಿಸಿದ್ದು ಹೇಗೆ ಎನ್ನುವುದರ ಬಗ್ಗೆ ವಿವರಿಸಿದ್ದಾರೆ.

ಸದ್ಗುರು:ನಾನು ಅನೇಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ ಅಲ್ಲಿ ಜನರು ನಾವು ಎದುರಿಸುತ್ತಿರುವ -ನೀರು ಮತ್ತು ಪರಿಸರ ಸಂರಕ್ಷಣೆಯಂತಹ ವಿವಿಧ ಅಪಾಯಗಳ ಬಗ್ಗೆ ಮಾತನಾಡುತ್ತಾರೆ, ಆದರೆ ನನಗೆ ನೋವು ತರುವ ಸಂಗತಿ ಏನಂದರೆ, ಯಾವುದೇ ಸರ್ಕಾರವು ಅತ್ಯಂತ ಮೂಲಭೂತ ಸಮಸ್ಯೆಯಾದ ಜನಸಂಖ್ಯೆಯನ್ನು ಪರಿಹರಿಸಲು ಇಚ್ಛಿಸುತ್ತಿಲ್ಲ. 20ನೇ ಶತಮಾನದ ಆರಂಭದಲ್ಲಿ ವಿಶ್ವದ ಜನಸಂಖ್ಯೆ 160 ಕೋಟಿಯಾಗಿತ್ತು. ಇಂದು, ಒಂದು ಶತಮಾನದ ನಂತರ, ನಾವು 720 ಕೋಟಿ ಜನರಿದ್ದೇವೆ. 2050 ರ ವೇಳೆಗೆ ನಾವು 960 ಕೋಟಿ ಜನರಾಗುತ್ತೇವೆ ಎಂದು ಅಂದಾಜಿಸುತ್ತಿದ್ದೇವೆ. ನನ್ನ ಪ್ರಕಾರ ಇದು ಮಾನವಕುಲದ ಬೇಜವಾಬ್ದಾರಿಯುತ ಸಂತಾನೋತ್ಪತ್ತಿಯಷ್ಟೆ. 1947ರಲ್ಲಿ ಭಾರತದಲ್ಲಿನ ನಮ್ಮ ಜನಸಂಖ್ಯೆ 33 ಕೋಟಿಯಾಗಿತ್ತು. ಇಂದು, ನಮ್ಮ ಜನಸಂಖ್ಯೆ 120 ಕೋಟಿ. ನೀವು ಎಷ್ಟು ಮರಗಳನ್ನಾದರೂ ನೆಡಿ, ಎಷ್ಟು ನೀತಿಗಳನ್ನು ಬದಲಾಯಿಸಿ, ಯಾವ ರೀತಿಯ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ಇದಾವುದೂ ಗಣನೆಗೆ ಬರುವುದಿಲ್ಲ. ನಾವು ಮಾನವ ಜನಸಂಖ್ಯೆಯ ಮೇಲೆ ಮಿತಿ ಹಾಕದ ಹೊರತು ಯಾವುದೇ ಪರಿಹಾರವಿಲ್ಲ.

ನಾವು ಇಂದು ತಿನ್ನುತ್ತಿರುವ ಅಕ್ಕಿ ಅಥವಾ ಗೋಧಿಯನ್ನು ಬೆಳೆದು ನಮಗೆ ಆಹಾರ ನೀಡುತ್ತಿರುವವರ ಮಕ್ಕಳೇ ಹೊಟ್ಟೆ ತುಂಬಾ ತಿನ್ನುವುದಿಲ್ಲ.

ಒಂದೋ ನಾವು ನಮ್ಮ ಜನಸಂಖ್ಯೆಯನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬೇಕು, ಇಲ್ಲವಾದರೆ ಪ್ರಕೃತಿಯೇ ಅದನ್ನು ಅತ್ಯಂತ ಕ್ರೂರವಾಗಿ ಮಾಡುತ್ತದೆ. ಇವೇ ನಮಗಿರುವ ಆಯ್ಕೆ. ವಿಶೇಷವಾಗಿ ಭಾರತದಲ್ಲಿ, ಈ 120 ಕೋಟಿ ಜನರ ಆಹಾರಕ್ಕಾಗಿ ನಮ್ಮ ಭೂಮಿಯ 60% ದಷ್ಟನ್ನು ಉಳುಮೆ ಮಾಡಲಾಗುತ್ತಿದೆ. ನಮ್ಮ ರೈತರು, ಪ್ರಾಥಮಿಕ, ಹಳೆಯ ಕಾಲದ ಮೂಲ ಸೌಕರ್ಯವನ್ನು ಬಳಸಿ, ಒಂದು ನೂರು ಕೋಟಿಗೂ ಹೆಚ್ಚು ಜನರಿಗೆ ಆಹಾರವನ್ನು ಉತ್ಪಾದಿಸುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ, ಆದರೆ ಅನ್ನದಾತನೇ ಸರಿಯಾಗಿ ತಿನ್ನುತ್ತಿಲ್ಲ. ಅದು ಒಳ್ಳೆಯ ವಿಷಯವಲ್ಲ; ಅದು ಹೆಮ್ಮೆಪಡುವ ವಿಷಯವಲ್ಲ. ನಾವು ಇಂದು ತಿನ್ನುತ್ತಿರುವ ಅಕ್ಕಿ ಅಥವಾ ಗೋಧಿಯನ್ನು ಬೆಳೆದು ನಮಗೆ ಆಹಾರ ನೀಡುತ್ತಿರುವವರ ಮಕ್ಕಳೇ ಹೊಟ್ಟೆ ತುಂಬಾ ತಿನ್ನುವುದಿಲ್ಲ. ಇದು ಮುಖ್ಯವಾಗಿ ನಾವು ನಿರ್ಧರಿಸುವಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳದ ಕಾರಣ. "ಸರಿ, ಇಷ್ಟು ಭೂಮಿಯಿದೆ; ಇಷ್ಟರಿಂದ ಎಷ್ಟು ಜನರನ್ನು ಬೆಂಬಲಿಸಬಹುದು?" ಅಷ್ಟು ಭೂಮಿ ಖಂಡಿತವಾಗಿಯೂ ಮಾನವ ಜನಸಂಖ್ಯೆಯ ಅಂತ್ಯವಿಲ್ಲದ ಬೆಳವಣಿಗೆಯನ್ನು ಬೆಂಬಲಿಸಲು ಸಾಧ್ಯವಿಲ್ಲ.

ವಿಶ್ವದ ಜನಸಂಖ್ಯೆ 1800-2100

 

ಭೂಗ್ರಹ ಇರುವುದು ಕೇವಲ ಮಾನವರಿಗೆ ಮಾತ್ರವಲ್ಲ

ಭೂಗ್ರಹವು ಮನುಷ್ಯರಿಗಾಗಿ ಮಾತ್ರ ಮಾಡಲ್ಪಟ್ಟಿದೆ ಎಂಬ ಈ ಕಲ್ಪನೆ ಬಹಳ ಅನುಚಿತ ಕಲ್ಪನೆ. “ನೀವು ದೇವರ ಪ್ರತಿರೂಪದಲ್ಲಿ ರಚಿಸಲ್ಪಟ್ಟಿದ್ದೀರಿ” ಎಂದು ಹೇಳಿ ಇದನ್ನು ಜನರ ಮನಸ್ಸಿನಲ್ಲಿ ಹಾಕಲಾಗಿದೆ. ದೇವರು ದೊಡ್ಡ ಹುಳದಂತೆ ಕಾಣುತ್ತಾನೆ ಎಂದು ಒಂದು ಹುಳವೂ ಯೋಚಿಸುತ್ತದೆ ಎಂದು ನನಗೆ ಖಾತ್ರಿಯಿದೆ! ಪರಿಸರ ಕಾರಣಗಳಿಗಾಗಲ್ಲ, ನಿಮ್ಮ ಮಾನವಿಯತೆಯ ಸಲುವಾಗಿ, ನೀವಿದನ್ನು ಅರ್ಥಮಾಡಿಕೊಳ್ಳಬೇಕು -ಈ ಭೂಮಿಯಲ್ಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಸಂಪೂರ್ಣ ಜೀವನವಿದೆ. ಒಂದು ಕೀಟಕ್ಕೂ ಸಹ ತನ್ನದೇ ಆದ ಸಂಪೂರ್ಣ ಜೀವನವಿದೆ - ಅದರ ಜೀವನದಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿವೆ. ಯಾರೋ ನಿಮಗಿಂತ ಚಿಕ್ಕದಾಗಿ ಅಥವಾ ನಿಮ್ಮಿಂದ ಭಿನ್ನವಾಗಿ ಕಾಣುತ್ತಾರೆ ಎಂಬ ಕಾರಣಕ್ಕೆ, ಅವರಿಗೆ ಬದುಕಲು ಯಾವುದೇ ಹಕ್ಕಿಲ್ಲ ಹಾಗೂ ಇಲ್ಲಿ ನಮಗೆ ಮಾತ್ರ ವಾಸಿಸುವ ಹಕ್ಕಿದೆ ಎಂದು ಭಾವಿಸುವುದು, ಮನುಷ್ಯರು ಬಹಳ ಅನುಚಿತ ರೀತಿಯಲ್ಲಿ ಅಸ್ತಿತ್ವದಲ್ಲಿ ಇರುವುದಾಗಿದೆ.

ಭಾರತದ ಜನಸಂಖ್ಯಾ ಹೆಚ್ಚಳ 1901-2011

 
ಮಾನವೀಯತೆ ಇಲ್ಲದ ಮನುಕುಲ, ಅದು ಇಂದಿನ ಮನುಕುಲದ ಸ್ಥಿತಿ. ಮಾನವೀಯತೆಯನ್ನು ಹೊರತರದಿದ್ದರೆ, ಮಾನವ ಜನಸಂಖ್ಯೆಯನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸುವಂತಹ ಸಂಗತಿಗಳು ಸಂಭವಿಸುತ್ತವೆ ಎಂದು ನಾನು ಭಾವಿಸುವುದಿಲ್ಲ. ಖಂಡಿತವಾಗಿಯೂ ಸರ್ಕಾರಗಳು ನೀತಿಗಳನ್ನು ರೂಪಿಸಬೇಕು, ಆದರೆ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ವಿಷಯಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಇದನ್ನು ಅಭಿಯಾನದ ಮೂಲಕ ಮತ್ತು ಅಗತ್ಯ ಜಾಗೃತಿ ಮೂಡಿಸುವ ಮೂಲಕ ಮಾತ್ರ ಮಾಡಬಹುದು, ಆದರೆ ಖಂಡಿತವಾಗಿಯೂ ಸರ್ಕಾರ ನಡೆಸುವವರು ಆ ವಿಚಾರವನ್ನು ಮುಂದಿಡಬೇಕು. ಖಾಸಗಿ ಏಜೆನ್ಸಿಗಳು ಮತ್ತು ಎನ್‌.ಜಿ.ಒ ಗಳು ಏನಾದರೂ ಮಾಡಬಹುದು, ಆದರೂ ಸಹ ಸರ್ಕಾರದ ಕ್ರಮ ಅಗತ್ಯ.

ಮಾನವ ಜನಸಂಖ್ಯೆಯನ್ನು ನಿಯಂತ್ರಿಸದೆ -ಪರಿಸರ, ಭೂ ಸಂರಕ್ಷಣೆ ಅಥವಾ ನೀರಿನ ಸಂರಕ್ಷಣೆಯ ಬಗ್ಗೆ ಮಾತನಾಡುವುದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ, ಏಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ರೂಪದಲ್ಲಿ ಇರುವ ರೀತಿಯ ಪ್ರಚೋದನೆಯು ಪ್ರತಿಯೊಬ್ಬ ಮನುಷ್ಯನನ್ನು ಅತ್ಯಂತ ಸಕ್ರಿಯನನ್ನಾಗಿಸಿದೆ. ನಿಮಗೆ ಮಾನವ ಚಟುವಟಿಕೆಗೆ ಮಿತಿ ಹಾಕಲು ಸಾಧ್ಯವಿಲ್ಲ ಏಕೆಂದರೆ ಅದು ಮಾನವನ ಆಕಾಂಕ್ಷೆಗಳ ಮೇಲೆ ಮಿತಿ ಹಾಕಿದಂತಾಗುತ್ತದೆ. ನೀವು ಮಾನವ ಜನಸಂಖ್ಯೆಗೆ ಮಾತ್ರ ಮಿತಿ ಹಾಕಬಹುದು.

ಜನನದ ಉಸ್ತುವಾರಿ ತೆಗೆದುಕೊಳ್ಳುವುದು

1947 ರಲ್ಲಿ, ಸಾಮಾನ್ಯ ಭಾರತೀಯನ ಜೀವಿತಾವಧಿ 32 ವರ್ಷಗಳಾಗಿತ್ತು. ಇಂದು ಅದು 65ನ್ನು ದಾಟಿದೆ. ಆದ್ದರಿಂದ ನಾವು ಸಾವನ್ನು ನಿಯಂತ್ರಿಸಿದ್ದೇವೆ, ಆದರೆ ನಾವು ಜನನವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕಾಗಿತ್ತು. ಇಂದು, ನಿಮ್ಮಲ್ಲಿ ಸಾಕಷ್ಟು ಬಸ್ಸುಗಳು, ಭೂಮಿ, ಶೌಚಾಲಯಗಳು, ದೇವಾಲಯಗಳೂ ಇಲ್ಲ ಅಥವಾ 120 ಕೋಟಿ ಜನರಿಗೆ ಸಾಕಷ್ಟು ಆಕಾಶದ ತುಣುಕೂ ಇಲ್ಲ. ನಾವು ಮಾಡಬಹುದಾದ ಏಕೈಕ ವಿಷಯವಿದು: ನಮ್ಮ ಜನಸಂಖ್ಯೆಯನ್ನು ನಮ್ಮಲ್ಲಿರುವ ಸಂಪನ್ಮೂಲಕ್ಕೆ ಹೊಂದಿಸಲು ಪ್ರಯತ್ನಿಸುತ್ತೇವೆಯೇ? ಅಗತ್ಯವಾದ ಶಿಕ್ಷಣ ಮತ್ತು ಜಾಗೃತಿಯನ್ನು ಜನರ ಜೀವನದಲ್ಲಿ ತಂದರೆ ಪ್ರತಿಯೊಬ್ಬರೂ ಮಾಡಬಹುದಾದ ಕೆಲಸ ಅದು. ಆ ಹೂಡಿಕೆ ಮಾಡಿದರೆ, ನಾವು ಮರಗಳನ್ನು ನೆಡಬೇಕಾಗಿಲ್ಲ. ಗ್ರಹವು ಆಪತ್ತಿನಲ್ಲಿಲ್ಲ, ಆಪತ್ತಿನಲ್ಲಿರುವುದು ಮಾನವ ಜೀವನ. ಇದು ಮನುಷ್ಯರು ಅರ್ಥಮಾಡಿಕೊಳ್ಳಬೇಕಾದ ವಿಷಯ. ನಾವು ಈ ವಾಸ್ತವತೆಗೆ ಎಚ್ಚರಗೊಂಡು ಅಗತ್ಯವಿರುವದನ್ನು ಮಾಡುತ್ತೇವೆ ಎಂದು ನಾನು ಆಶಿಸುತ್ತೇನೆ.

ಪರಿಸರ ಸಂರಕ್ಷಣೆ, ಹಸಿರು ತಂತ್ರಜ್ಞಾನಗಳು, ಇವೆಲ್ಲವು ಖಂಡಿತವಾಗಿಯೂ ಅಗತ್ಯವಾಗಿವೆ, ಆದರೆ ಅತ್ಯಂತ ಮೂಲಭೂತವಾದ ವಿಷಯ, ಅಂದರೆ, ನಮ್ಮ ಜನಸಂಖ್ಯೆಯನ್ನು ನಾವು ನಾಲ್ಕು ಪಟ್ಟು ಹೆಚ್ಚಿಸಿ ಅದರ ಬಗ್ಗೆ ಏನೂ ಮಾಡದೆ, ಅದನ್ನಿನ್ನೂ ಹೆಚ್ಚಿಸುವುದನ್ನು ಮಂದುವರೆಸುತ್ತಿರುವುದು, ಇದೇ ಅತಿ ದೊಡ್ಡ ಸಮಸ್ಯೆ.

 

ಸಂಪಾದಕರ ಟಿಪ್ಪಣಿ:ಪರಿಸರದ ಸ್ಥಿತಿ ಮತ್ತು ಅದರ ಬಗ್ಗೆ ನಾವೇನು ಮಾಡಬಹುದು ಎಂಬುದರ ಕುರಿತು ಇನ್ನಷ್ಟು ಓದಲು, ಎ ಟ್ರೀ ಕ್ಯಾನ್ ಸೇವ್ ದ ವರ್ಲ್ಡ್ (ಒಂದು ಮರ ಜಗತ್ತನ್ನುಉಳಿಸಬಲ್ಲದು)ಇಬುಕ್ ಅನ್ನು ಡೌನ್ಲೋಡ್ ಮಾಡಿ.