ಸೂರ್ಯ ಕ್ರಿಯಾ, ಸೂರ್ಯ ನಮಸ್ಕಾರ ಮತ್ತು ಸೂರ್ಯ ಶಕ್ತಿ - ಸೂರ್ಯನಿಗೆ ಸಂಬಂಧಿಸಿದಂತೆ ಇರುವ ಈ ಮೂರೂ ಪ್ರಕ್ರಿಯೆಗಳಿಗೆ ಪ್ರಸ್ತುತವಿರುವ ಪ್ರಧಾನ ಅಂಶವನ್ನು ಸದ್ಗುರುಗಳು ಪ್ರಸ್ತಾಪಿಸುತ್ತಾರೆ.

ಪ್ರಶ್ನೆ: ಸೂರ್ಯ ಕ್ರಿಯೆಯಲ್ಲಿ ಹೆಬ್ಬೆರಳಿನ ಗೆಣ್ಣುಗಳನ್ನು ಅನಹತಕ್ಕೆ ಒತ್ತಿ ಹಿಡಿಯುವುದರ ಮಹತ್ವವೇನು?

ಸದ್ಗುರು: ಸದ್ಗುರು: ಸೂರ್ಯ ಕ್ರಿಯಾ, ಸೂರ್ಯ ನಮಸ್ಕಾರ ಅಥವಾ ಸೂರ್ಯ ಶಕ್ತಿ, ಯಾವುದೇ ಆದರೂ ಸೂರ್ಯನ ಬಗ್ಗೆ ಒಂದು ಭಾವಾನುಬಂಧವನ್ನು ನೀವು ಬೆಳೆಸಿಕೊಳ್ಳಬೇಕು. ನೀವು ಯಾವುದರ ಬಗ್ಗೆ ಭಾವಾನುಬಂಧವನ್ನು ಬೆಳೆಸಿಕೊಳ್ಳುತ್ತಿರೋ, ಅಲ್ಲೇ ನಿಮ್ಮ ಮನಸ್ಸನ್ನು ಸ್ಥಿರವಾಗಿಸಬಹುದು. ಭಕ್ತಿಯು ಕೆಲಸ ಮಾಡುವ ರೀತಿಯೇ ಇದು. ನೀವು ಯಾವುದರ ಜೊತೆಯಾದರೂ ಭಾವನಾತ್ಮಕವಾಗಿ ಹೊಂದಿಕೊಂಡಾಗ ನಿಮ್ಮ ಗಮನ ಮತ್ತು ಮನಸ್ಸನ್ನು ಅದರತ್ತಲೇ ಸ್ಥಿರವಾಗಿಸಬಹುದು ಮತ್ತು ಆಗ ಸ್ವಾಭಾವಿಕವಾಗಿಯೇ ನಿಮ್ಮ ಪ್ರಾಣಶಕ್ತಿಯ ಹರಿವೂ ಅದೇ ದಿಕ್ಕಿನಲ್ಲಿರುತ್ತದೆ.

ಈ ಸೂರ್ಯ ಮಂಡಲದಲ್ಲಿರುವ ಎಲ್ಲ ಪ್ರಾಣಶಕ್ತಿಯೂ ಅಗತ್ಯವಾಗಿ ಸೂರ್ಯನಿಂದಲೇ ಉತ್ಪತಿಯಾದುದು. ಸೂರ್ಯನಿಲ್ಲದೇ ಜೀವವಿಲ್ಲ.

ಸೂರ್ಯನು ಸದಾಕಾಲ ನಿಮ್ಮ ಸಂಪರ್ಕದಲ್ಲಿಯೇ ಇರುತ್ತಾನೆ. ಇಡೀ ಸೂರ್ಯ ಮಂಡಲದ ಶಕ್ತಿಯೇ ಸೂರ್ಯನು. ಇದರಿಂದಷ್ಟೇ ಈ ಗ್ರಹದಲ್ಲಿ ಜೀವನ ಸಾಧ್ಯವಾಗಿರುವುದು. ನಮ್ಮ ಶರೀರ ರಚನೆಯೇ ಇದರ ಮೇಲೆ ಅವಲಂಬಿತವಾಗಿದೆ. ಹಠ ಯೋಗದ ಮುಖ್ಯ ಅಂಶಗಳೇ ಸೂರ್ಯ ಮತ್ತು ಚಂದ್ರ. ಭೂಗ್ರಹವು ಮನುಷ್ಯ ದೇಹವನ್ನು ಸೃಷ್ಠಿಸಿರುವುದು ಇವೆರಡರ ಸಮ್ಮಿಳಿತದ ಪ್ರಭಾವದಿಂದ.

ಜೀವ ಶಕ್ತಿಯ ಮೂಲವೇ ಸೂರ್ಯನು. ನೀವು ಪ್ರಾಣ ಎಂದು ಕರೆಯುವ ಅಂಶವು ಶಕ್ತಿಯ ಭೌತಿಕ ರೂಪ. ಮಾನವ ದೈಹಿಕ ವ್ಯವಸ್ಥೆಯ ಸೃಷ್ಟಿಯ ಪ್ರಕ್ರಿಯೆಯಲ್ಲಿ, ಶಕ್ತಿಯು ಮೊದಲು ಸ್ವರೂಪ ಪಡೆಯುವ ಭೌತಿಕ ರೂಪವೇ ಪ್ರಾಣವೆಂದು ಉಲ್ಲೇಖಿಸಲಾಗಿದೆ. ಮಾನವ ವ್ಯವಸ್ಥೆಯಲ್ಲಿ ಭೌತಿಕ ಸ್ವರೂಪವಲ್ಲದ, ಪ್ರಾಣಮಯವಲ್ಲದ ಮತ್ತೊಂದು ಆಯಾಮವೂ ಇದೆ. ಪ್ರಾಣವು ಭೌತಿಕವೇ. ಈ ಸೌರಮಂಡಲದಲ್ಲಿರುವ ಎಲ್ಲಾ ಪ್ರಾಣಶಕ್ತಿಯು ಉಂಟಾಗಿರುವುದೇ ಸೂರ್ಯನಿಂದ. ಸೂರ್ಯನಿಲ್ಲದೇ ಪ್ರಾಣವಿಲ್ಲ. ಸೂರ್ಯನಿಲ್ಲದೆ ಶಾಖವಿಲ್ಲ. ಶಾಖವಿಲ್ಲದೇ ಜೀವ ಇರುವುದಿಲ್ಲ. ನೀವು ಬದುಕಿದ್ದೀರೋ ಇಲ್ಲವೋ ಎಂದು ನಾವು ಪರೀಕ್ಷಿಸುವುದೇ ನಿಮ್ಮ ದೇಹದ ಉಷ್ಣಾಂಶದಿಂದ. ಅಂದರೆ ನೀವು ಬೆಚ್ಚಗಿದ್ದೀರೋ ತಣ್ಣಗಿದ್ದೀರೋ ಎನ್ನುವುದರಿಂದ.

ಸಮತ್ ಪ್ರಾಣದ ಏರಿಕೆ

ನಾವು ನಮ್ಮಲ್ಲಿರುವ ಸೂರ್ಯನ ಅಂಶವನ್ನು ಸಕ್ರಿಯಗೊಳಿಸಬೇಕು. ನಾವು ಏನನ್ನಾದರೂ ಸೂರ್ಯನ ಬೆಳಕಿನಲ್ಲಿ ಒಣಗಿಸಿದರೆ, ಅದು ಸುಡಲೂಬಹುದು. ಒಂದು ಅರ್ಥದಲ್ಲಿ ಯಾವುದೇ ಪದಾರ್ಥವು ಸೂರ್ಯನ ಕಿರಣಗಳನ್ನು ಹೀರಿಕೊಂಡು ಶಕ್ತಿ ಉತ್ಪತ್ತಿ ಮಾಡಲು ಸಮರ್ಥವಾಗುತ್ತದೆ. ಸೂರ್ಯನ ಶಕ್ತಿಯ ಹೀರುವಿಕೆ ಸಾಧ್ಯವಾಗದಿದ್ದರೆ, ಯಾವುದನ್ನೂ ಸುಡಲೂ ಆಗುತ್ತಿರಲಿಲ್ಲ, ಬೆಳಕನ್ನಾಗಲೀ, ಉಷ್ಣತೆಯನ್ನಾಗಲೀ ನೀಡುವುದೂ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಶರೀರದ ಸ್ವ-ಉಪಶಮನ ಸಾಮರ್ಥ್ಯಕ್ಕೆ ಉಷ್ಣೋತ್ಪತ್ತಿ ಅತ್ಯಗತ್ಯ. ಈ ಎಲ್ಲಾ ಅಂಶಗಳಿಂದ ನಮ್ಮ ವ್ಯವಸ್ಥೆಯ ಅರೋಗ್ಯ ಕಾಯ್ದುಕೊಳ್ಳಲು ಸಮತ್ ಪ್ರಾಣ ಅತ್ಯಗತ್ಯ.

ಸಮತ್ ಪ್ರಾಣವು ಉತ್ತಮವಾಗಿದ್ದರೆ ಜೀವಕೋಶಗಳ ನಷ್ಟವನ್ನು ತೀವ್ರವಾಗಿ ಕಡಿಮೆಗೊಳಿಸಬಹುದು.

ಬದುಕುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಜೀವಕೋಶವೂ ನಿರಂತರವಾಗಿ ಬೆಲೆತೆರುತ್ತಿದೆ. ವಯಸ್ಕರಲ್ಲಿ ಒಂದು ಜೀವಕೋಶದ ಆಯಸ್ಸು, ಅಂದಾಜು 7 ರಿಂದ 10 ವರ್ಷ ಎಂದು ಹೇಳುತ್ತಾರೆ. ಪ್ರತಿದಿನವೂ ಹಳೆಯ ಜೀವಕೋಶಗಳು ಸತ್ತು ಹೊಸ ಜೀವಕೋಶಗಳು ಜೀವತೆಳೆಯುತ್ತಿರುತ್ತವೆ. ದಿನನಿತ್ಯದ ಜೀವಕೋಶಗಳ ನಶಿಸುವಿಕೆಯನ್ನು ಸಮತ್ ಪ್ರಾಣದ ಗರಿಷ್ಟತೆಯಿಂದ ಗಣನೀಯವಾಗಿ ಕಡಿಮೆಗೊಳಿಸಬಹುದು. ಹಾಗೆಯೇ ಹೊಸ ಜೀವಕೋಶಗಳ ಉತ್ಪತ್ತಿಯನ್ನೂ ಇದರಿಂದ ಹೆಚ್ಚಿಸಬಹುದು. ನಿಮ್ಮ ಸಮತ್ ಪ್ರಾಣವು ನಿಮ್ಮ ಸೂರ್ಯಶಕ್ತಿಯ ಹಿರುವೆಕೆಯನ್ನು ಅವಲಂಬಿಸಿದೆ. ನಿಮ್ಮೊಳಗೇ ಇದನ್ನು ಉತ್ಪಾದಿಸುಲು ಪ್ರಯತ್ನಿಸುವುದು ಒಂದು ಮಾರ್ಗ. ಇನ್ನೊಂದು ಮಾರ್ಗವೆಂದರೆ ಹೊರಗಿರುವ ಸೂರ್ಯನನ್ನು ಬಳಸಿ ನಿಮ್ಮೊಳಗೆ ಈ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುವುದು.

ನಮ್ಮಲ್ಲಿರುವ ಅಂತಃ ಸೂರ್ಯನನ್ನು ಉತ್ತೇಜಿಸುವುದು

ಸೂರ್ಯಕ್ರಿಯೆಯು ಅಂತಃ ಸೂರ್ಯನನ್ನು ಸಕ್ರಿಯಗೊಳಿಸುವುದಕ್ಕಾಗಿ ಇರುವುದು, ಆದರೆ ನೀವು ಇದನ್ನು ಜಾಗೃತಗೊಳಿಸುವುದು ಹೊರಗಿನ ಸೂರ್ಯನಿಂದ. ಹೊರಗಿನ ಸೂರ್ಯನೊಂದಿಗೆ, ಅಷ್ಟೇ ಏಕೆ, ಯಾವುದರೊಂದಿಗಾದರೂ ಸಂಪರ್ಕ ಬೆಳೆಸಬೇಕೆಂದರೂ ನಿಮ್ಮ ಗಮನ, ಭಾವಪರವಶತೆ, ಶಕ್ತಿ ಎಲ್ಲದರ ಹರಿವೂ ಅದರತ್ತಲೇ ಇರಬೇಕು. ಇಲ್ಲವಾದಲ್ಲಿ ನೀವು ಯಾವುದರೊಂದಿಗೂ ಸಂಪರ್ಕದಲ್ಲಿರಲು ಸಾಧ್ಯವಿಲ್ಲ - ಅದು ಸಾಟಿ ಮನುಷ್ಯರಾಗಲೀ, ಗಿಡಮರಗಳಾಗಲೀ, ಪಶುಪಕ್ಷಿಗಳಾಗಲೀ, ಏನಾದರೂ ಆಗಲಿ. ನಿಮ್ಮ ಗಮನ, ಭಾವಪರವಶತೆ, ಶಕ್ತಿಯ ಹರಿವೂ ಯಾವುದೂ ನಿಮ್ಮ ಸುತ್ತಲಿನ ಯಾವುದರೊಂದಿಗೂ ಹೊಂದಾಣಿಕೆಯಲ್ಲಿಲ್ಲದ್ದಿದ್ದರೇ, ನೀವು ಒಂದು ಬೇರೆಯೇ ಅಸ್ತಿತ್ವವಾಗಿಬಿಡುತ್ತೀರಿ. ಮತ್ತು ಬಹಳಷ್ಟು ಜನರು ಇಂದು ಹಾಗೆಯೆ ಬದುಕುತ್ತಿದ್ದಾರೆ.

ಸೂರ್ಯಕ್ರಿಯೆಯು ಅಂತಃ ಸೂರ್ಯನನ್ನು ಸಕ್ರಿಯಗೊಳಿಸುವುದಕ್ಕಾಗಿ ಇರುವುದು, ಆದರೆ ನೀವು ಇದನ್ನು ಜಾಗೃತಗೊಳಿಸುವುದು ಹೊರಗಿನ ಸೂರ್ಯನಿಂದ.

ಮುಖ್ಯವಾದ ಅಂಶವೆಂದರೆ, ಮಾನವ ವ್ಯವಸ್ಥೆಯಲ್ಲಿ ಯಾವುದು ಮುಖ್ಯವಾದ ಭಾಗ ಎಂಬುದು. ಅದು ಕೆಳಭಾಗದ ಮೂರೂ ಚಕ್ರಗಳೂ ಮತ್ತು ಮೇಲ್ಭಾಗದ ಮೂರೂ ಚಕ್ರಗಳೂ ಕೂಡುವ ಕೇಂದ್ರ ಬಿಂದು. ಎರಡು ಸಮಭುಜ ತ್ರಿಕೋನಗಳು ಇದರ ಚಿಹ್ನೆ. ಒಂದು ಮೇಲ್ಮುಖ ತ್ರಿಕೋನ ಮತ್ತು ಇನ್ನೊಂದು ಕೆಳಮುಖ ತ್ರಿಕೋನ, ಇವೆರಡೂ ಸೇರಿ ಒಂದು ಕ್ಲಿಷ್ಟ ಸ್ವರೂಪವನ್ನು ರಚಿಸುತ್ತವೆ. ಒಂದು ಹಂತದಲ್ಲಿ, ಭೌತಿಕ ಆಯಾಮವಲ್ಲ, ಆದರೆ ನಿಮ್ಮನ್ನು ಮನುಷ್ಯರೆಂದು ಪ್ರತ್ಯೇಕಿಸುವ ಸೃಷ್ಟಿಯ ಬೇರೊಂದು ಆಯಾಮ ಆರಂಭವಾಗುವುದೇ ಇಲ್ಲಿಂದ.

ಆದ್ದರಿಂದಲೇ ಇದನ್ನು ‘ಅನಾಹತ’ ಎಂದು ಕೆರೆಯುತ್ತೇವೆ. ಅದರ ಅರ್ಥ ಅಂದರೆ “ಬಡಿತ"ವಿಲ್ಲದ್ದು ಎಂದು. ಸಾಮಾನ್ಯವಾಗಿ ಒಂದು ವಸ್ತು ಇನ್ನೊಂದು ವಸ್ತುವಿಗೆ ಬಡಿದಾಗ ಅಥವಾ ತಾಕಿದಾಗ ಶಬ್ದವು ಉಂಟಾಗುತ್ತದೆ. ಆದರೆ ಅನಾಹತದಲ್ಲಿ ಬಡಿತವಿಲ್ಲದೇ ಶಬ್ದವುಂಟಾಗುತ್ತದೆ. ಇದನ್ನು ಸಕ್ರಿಯಗೊಳಿಸಲು ನೀವು ನಿಮ್ಮ ಹೆಬ್ಬೆರಳುಗಳನ್ನು ಹೇಗೆ ಮಡಚಬೇಕೆಂದರೆ, ನಿಮ್ಮ ಗೆಣ್ಣುಗಳು ಚೂಪಾಗಿ ರೂಪುಗೊಳ್ಳಬೇಕು ಮತ್ತು ನೀವು ಅದನ್ನು ಅನಾಹತಕ್ಕೆ ಒತ್ತಬೇಕು. ಹೀಗೆ ಮಾಡುವುದರಿಂದ ನೀವು ಸೂರ್ಯನೆಡೆಗೆ ಒಂದು ಭಾವನೆಯನ್ನು ಹುಟ್ಟು ಹಾಕುತ್ತಿರಿ.

ಹಾಗೆಯೇ, ಒಂದು ಒಳ್ಳೆಯ ಭಾವನೆ ಮೂಡಿದಾಗ, ನೀವು ಸಹಜವಾಗಿಯೇ ನಿಮ್ಮ ಕೈಗಳನ್ನು ಅನಾಹತದ ಮೇಲೆ ಇರಿಸುತ್ತೀರಿ, ಏಕೆಂದರೆ, ಅದು ಪ್ರಾರಂಭವಾಗುವುದೇ ಅಲ್ಲಿಂದ. ನೀವು ನಿಮ್ಮ ಭಾವನಾತ್ಮಕ ಆಯಾಮವನ್ನು ಸಕ್ರಿಯಗೊಳಿಸಲು ಬಯಸುವುದು ಏಕೆಂದರೆ, ನಿಮ್ಮ ಭಾವನೆಗಳನ್ನು ಸಂಪೂರ್ಣವಾಗಿ ಒಂದು ವಿಷಯದ ಬಗ್ಗೆ ಕೇಂದ್ರೀಕರಿಸದಿದ್ದರೆ, ನಿಮ್ಮ ಮನಸ್ಸು ಯಾವುದಕ್ಕೂ ಹೊಂದಿಕೊಳ್ಳುವುದಿಲ್ಲ. ನೀವು ನಿಮ್ಮ ಮನಸ್ಸನ್ನು ಎಲ್ಲಿ ಕೇಂದ್ರೀಕರಿಸುತ್ತಿರೋ, ಅದು ಅಲ್ಲಿಯೇ ಇರುತ್ತದೆ. ಇಲ್ಲವಾದಲ್ಲಿ ನಿಮ್ಮ ಮನಸ್ಸನ್ನು ಒಂದು ಕಡೆ ಸ್ಥಿರಗೊಳಿಸುವುದು ಬಹಳ ಕಷ್ಟ.

ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠಯೋಗದ ವ್ಯಾಪಕ ಪರಿಶೋಧನೆ. ಇದು ಇಂದಿನ ದಿನಗಳಲ್ಲಿ ಕಾಣಸಿಗದ ಈ ಪ್ರಾಚೀನ ವಿಜ್ಞಾನದ ನಾನಾ ಆಯಾಮಗಳನ್ನು ಪುನಃಶ್ಚೇತನಗೊಳಿಸುತ್ತದೆ. ಈ ಕಾರ್ಯಕ್ರಮಗಳು ಪ್ರಬಲವಾದ ಯೋಗಾಭ್ಯಾಸದ ಪ್ರಕ್ರಿಯೆಗಳಲ್ಲಿ ಕೆಲವು ಪ್ರಕ್ರಿಯೆಗಳಾದ ಉಪಯೋಗ, ಅಂಗ ಮರ್ದನ, ಸೂರ್ಯಕ್ರಿಯ, ಸೂರ್ಯ ಶಕ್ತಿ, ಯೋಗಾಸನ, ಭೂತಶುದ್ಧಿ ಮುಂತಾದ ಯೋಗ ಪ್ರಕ್ರಿಯೆಗಳನ್ನು ಅನ್ವೇಷಿಸಲು ಒಂದು ಅದ್ಭುತವಾದ ಅವಕಾಶವನ್ನು ಒದಗಿಸುತ್ತದೆ.

Find Hatha Yoga Program Near You

A version of this article was originally published in Isha Forest Flower May 2015. Download as PDF on a “name your price, no minimum” basis or subscribe to the print version.