ಯೋಗದ ಉದ್ದೇಶ “ಯಾವುದು ನೀವಲ್ಲ”ವೋ ಅದಕ್ಕೆ ಸ್ಥಳಾವಕಾಶವನ್ನು ಸೃಷ್ಟಿಸುವುದು ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ, ಮತ್ತು ಅವಧೂತರ ವಿಷಯದ ಬಗ್ಗೆಯೂ ಮಾತನಾಡುತ್ತಾರೆ.

Read in Telugu: అవధూతలు ఎటువంటివారు??

ಸದ್ಗುರು: ಯೋಗದ ಸಂಪೂರ್ಣ ಉದ್ದೇಶ "ನೀವು ಅಲ್ಲದಿರುವ" ವಿವಿಧ ಆಯಾಮಗಳನ್ನು ನಿಮ್ಮಲ್ಲಿ ಸ್ಥಾಪಿಸುವುದೇ ಆಗಿದೆ. “ನೀವಲ್ಲದಿರುವುದು” ಎಂದು ನಾನು ಹೇಳುವುದರ ಅರ್ಥ: ನಿಮ್ಮನ್ನು ನೀವು ಯಾವುದರೊಂದಿಗೆ ಗುರುತಿಸಿಕೊಂಡಿದ್ದೀರೋ ಅದೇ ಈಗ “ನೀವು” ಆಗಿದ್ದೀರಿ. ಆದರೆ ನಿಮ್ಮ ಸೀಮಿತ ಗುರುತುಗಳನ್ನು ಮೀರಿ ನಿಮ್ಮೊಳಗೊಂದು ಸ್ಥಳಾವಕಾಶವನ್ನು ಸ್ಥಾಪಿಸುವುದೇ ಯೋಗ. ಆರಂಭದಲ್ಲಿ, ಇದು ಒಂದು ಸಣ್ಣ ಕಣವಾಗಿ ಪ್ರಾರಂಭವಾಗುತ್ತದೆ. ಇದಕ್ಕಾಗಿ ನೀವು ಸ್ಥಳವನ್ನು ತೆರವುಗೊಳಿಸಲು ಪ್ರಾರಂಭಿಸಿದರೆ, ನಿಮ್ಮ ಅಸಂಬದ್ಧವನ್ನು ಕಡಿಮೆ ಮಾಡಿದರೆ, ಈ ಸ್ಥಳವು ವಿಸ್ತರಿಸಲಾರಂಭಿಸುತ್ತದೆ. ಅದು ಎಲ್ಲವನ್ನೂ ಆಕ್ರಮಿಸಿಕೊಳ್ಳುವಂತಹ ಒಂದು ದಿನ ಬರುತ್ತದೆ, ಮತ್ತು ಆಗ ನಿಮ್ಮ ಅಸಂಬದ್ಧತೆಗಳೆಲ್ಲಾ ನಿಮ್ಮ ಸುತ್ತ ತೇಲಾಡುತ್ತಿರುತ್ತವೆ. ನಿಮಗೆ ಬೇಕಿದ್ದರೆ, ನೀವು ಅವುಗಳನ್ನು ಹಿಡಿದು ಬಳಸಬಹುದು, ಬೇಡದೇ ಹೋದರೆ ಅವು ನಿಮ್ಮನ್ನು ಮುಟ್ಟುವುದಿಲ್ಲ. ನೀವು ಹಾಗಾದಾಗ, ನೀವು ನಿಜವಾಗಿಯೂ ಧ್ಯಾನಸ್ಥರಾಗಿದ್ದೀರಿ ಎಂದು ನಾವು ಹೇಳುತ್ತೇವೆ, ನೀವು ಸಮಾಧಿ ಸ್ಥಿತಿಯಲ್ಲಿರುತ್ತೀರಿ, ಅದು ಇದು ಯಾವುದೂ ನಿಮ್ಮನ್ನು ಮುಟ್ಟಲಾಗದಂತಹ ಸಮಾನ ಸ್ಥಿತಿಯಲ್ಲಿ ನೀವಿರುತ್ತೀರಿ.

ಅವಧೂತರು

ಕೆಲವು ಅಸಂಬದ್ಧತೆ ಹಾಗೂ ಕುತಂತ್ರದ ಬಾಣಗಳು ನಿಮ್ಮ ಬತ್ತಳಿಕೆಯಲ್ಲಿ ಇಲ್ಲದಿದ್ದರೆ ನಿಮಗೆ ಈ ಜಗತ್ತಿನಲ್ಲಿ ಬಾಳಲು ಸಾಧ್ಯವಿಲ್ಲ. ನಿಮಗೆ ಯಾವುದೇ ಕಪಟಗಳು ತಿಳಿದಿಲ್ಲವಾದರೆ, ನೀವೊಬ್ಬ ಅವಧೂತನಂತಾಗಿಬಿಡುತ್ತೀರಿ. ಈ ದಿನಗಳಲ್ಲಿ, ಎಲ್ಲರೂ "ನಾನು ಅವಧೂತ, ನೀವೂ ಅವಧೂತ." ಎಂಬ ಮಾತುಗಳನ್ನಾಡುತ್ತಿದ್ದಾರೆ. ಆ ವಿಷಯ ಬೇರೆ. ಅವಧೂತ ಎಂದರೆ, ಮಗುವಿನ ತರಹ ಆಗಿಬಿಡುವ ಒಂದು ನಿರ್ದಿಷ್ಟ ಸ್ಥಿತಿಯಲ್ಲಿರುವವರು - ಅವರಿಗೆ ಏನೂ ತಿಳಿದಿರುವುದಿಲ್ಲ. ನೀವು ಅವರಿಗೆ ಊಟ ಮಾಡಿಸಬೇಕು, ಅವರನ್ನು ಕೂರಿಸುವುದು ಎದ್ದೇಳಿಸುವುದನ್ನೂ ಸಹ ಮಾಡಬೇಕು. ಅವರೆಷ್ಟು ಭಾವೋತ್ಕರ್ಷರಾಗಿರುತ್ತಾರೆ ಎಂದರೆ, ಅವರ ಜೀವನದ ಬೇರೆ ಯಾವುದೇ ಅಂಶಗಳನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ತಿಳಿದಿರುವುದಿಲ್ಲ.

ಕೆಲವು ಅಸಂಬದ್ಧತೆ ಹಾಗೂ ಕುತಂತ್ರದ ಬಾಣಗಳು ನಿಮ್ಮ ಬತ್ತಳಿಕೆಯಲ್ಲಿ ಇಲ್ಲದಿದ್ದರೆ ನಿಮಗೆ ಈ ಜಗತ್ತಿನಲ್ಲಿ ಬಾಳಲು ಸಾಧ್ಯವಿಲ್ಲ. ನಿಮಗೆ ಯಾವುದೇ ಕಪಟಗಳು ತಿಳಿದಿಲ್ಲವಾದರೆ, ನೀವೊಬ್ಬ ಅವಧೂತನಂತಾಗಿಬಿಡುತ್ತೀರಿ.

ಅಂತಹವರು ತಮ್ಮ ಮನಸ್ಸನ್ನು ಸಂಪೂರ್ಣವಾಗಿ ಕೈಬಿಟ್ಟಿರುತ್ತಾರೆ - ಅವರು ಅಸಂಬದ್ಧತೆಗಳಿಂದ ಸಂಪೂರ್ಣವಾಗಿ ಮುಕ್ತರಾಗಿರುತ್ತಾರೆ. ನೀವರನ್ನು ಒಂದು ಮಗುವಿನ ತರಹ ನೋಡಿಕೊಳ್ಳಬೇಕು; ಇಲ್ಲದಿದ್ದರೆ ಅವರಿಗೆ ಜಗತ್ತಿನಲ್ಲಿ ಬಾಳಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿ ಶಾಶ್ವತವಾಗಿ ಉಳಿಯದೇ ಇರಬಹುದು ಆದರೆ ಕೆಲ ಕಾಲ ಇರುವ ಸಾಧ್ಯತೆ ಇರುತ್ತದೆ. ಹಲವಾರು ವರ್ಷಗಳ ಕಾಲ ಅವಧೂತರಾಗಿ ಉಳಿಯುವ ಜನರೂ ಇದ್ದಾರೆ. ಅದು ತುಂಬಾ ಆನಂದಭರಿತ ಹಾಗೂ ಅದ್ಭುತವಾದಂತಹ ಸ್ಥಿತಿ, ಆದರೆ ಅಂತಹ ಸ್ಥಿತಿಯಲ್ಲಿ ನಿಮ್ಮನ್ನು ನೋಡಿಕೊಳ್ಳಲು ಯಾರಾದರೂ ಇರಲೇಬೇಕು, ಇಲ್ಲದಿದ್ದರೆ ನಿಮಗೆ ಹಾಗೆ ಬದುಕಲು ಸಾಧ್ಯವಾಗುವುದಿಲ್ಲ.

ನನಗೆ, ಜನರನ್ನು ಆ ಸ್ಥಿತಿಗೆ ತಳ್ಳುವುದು ತುಂಬಾ ಸರಳ ಮತ್ತು ಸುಲಭ. ಅದು ತುಂಬಾ ಆನಂದ ಮತ್ತು ಅದ್ಭುತವಾದ ಸ್ಥಿತಿ, ಆದರೆ ಅಂತಹವರನ್ನು ನೋಡಿಕೊಳ್ಳುವ ಜನರನ್ನು ಎಲ್ಲಿಂದ ತರುವುದು? ಜಗತ್ತಿನಲ್ಲಿ ಇಂದಿರುವ ಸಾಮಾಜಿಕ ಸನ್ನಿವೇಶಗಳಿಂದಾಗಿ, ಇದನ್ನು ಒಂದು ಸಕಾರಾತ್ಮಕ ಬೆಳವಣಿಗೆಯಾಗಿ ನೋಡಲಾಗುವುದಿಲ್ಲ. ಅಂತಹ ವ್ಯಕ್ತಿ ತನ್ನ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡಿದ್ದಾನೆ ಮತ್ತು ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ಜನ ಯೋಚಿಸುತ್ತಾರೆ. ಅವಧೂತರು ಪರಮಾನಂದದ ಸ್ಥಿತಿಯಲ್ಲಿರುತ್ತಾರೆ, ಆದರೆ ನೋಡುವ ಜನರಿಗದು ಮುಖ್ಯವಾಗುವುದಿಲ್ಲ.

ಮನಸ್ಸಿನ ಅಂತಹ ಸ್ಥಿತಿಗಳನ್ನು ನಮ್ಮ ದೇಶದಲ್ಲಿ ಕೊಂಡಾಡಲಾಗುತ್ತಿತ್ತು ಮತ್ತು ಅವಧೂತರನ್ನು ಪೂಜಿಸಲಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ನಾವು ಸಂಪರ್ಕದಲ್ಲಿದ್ದ ಕೆಲವು ಅದ್ಭುತಾದ ಅವಧೂತರಿದ್ದರು. ಅವರು ಅತ್ಯದ್ಭುತವಾದ ಚೇತನಗಳು, ಆದರೆ ಬೇರೆಯವರ ಸಹಾಯವಿಲ್ಲದೆ, ಅವರು ಬದುಕಿರಲು ಸಾಧ್ಯವಿಲ್ಲ.

ನೀವು ಎಲ್ಲಾ ದ್ವಂದ್ವಗಳನ್ನು ಮೀರಿದರೆ, ಮತ್ತು ನಿಮ್ಮೊಳಗೆ ಒಂದು ಸ್ಪಷ್ಟವಾದ ಸ್ಥಳಾವಕಾಶವಿದ್ದರೆ, ದ್ವಂದ್ವಗಳು ನಿಮ್ಮ ಹೊರಗೆ ಮಾತ್ರ ಕಾರ್ಯನಿರ್ವಹಿಸುತ್ತವೆಯಷ್ಟೆ.

ಸಣ್ಣ ಕಾಲಾವಧಿಗೆ, ಜನರು ಇಂತಹ ಸ್ಥಿತಿಗಳಿಗೆ ಹೋಗುವುದು ಒಳ್ಳೆಯದು ಏಕೆಂದರೆ ಅದು ನಿಮ್ಮ ಕರ್ಮ ರಚನೆಯ ತೀರ ಕೆಳಗಿನ ಹಂತವನ್ನು ಸ್ವಚ್ಛಗೊಳಿದಂತೆ. ಇದು ಹೇಗೆಂದರೆ, ಕರ್ಮ ರಚನೆಯು 110 ಮಹಡಿಗಳನ್ನು ಹೊಂದಿದೆಯೆಂದಿಟ್ಟುಕೊಳ್ಳಿ. ಮತ್ತು ಆ ಸ್ಥಿತಿಯಲ್ಲಿ, ನೀವು ಅತ್ಯಂತ ಕೆಳಗಿನ ಮಹಡಿಯನ್ನು ಸ್ವಚ್ಛಗೊಳಿಸುತ್ತಿದ್ದೀರಿ ಎಂದರ್ಥ. ಇದನ್ನು ನಿಮಗೆ ಬೇರೆ ಸ್ಥಿತಿಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ; ಒಬ್ಬ ವ್ಯಕ್ತಿಗೆ ಅಷ್ಟು ಆಳವಾಗಿ ತನ್ನೊಳಗೆ ತಾನು ಹೋಗಿ, ತನ್ನನ್ನು ಸ್ವಚ್ಛಗೊಳಿಸಿಕೊಳ್ಳಲು ಅಗಾಧವಾದ ಜಾಗೃತಿ ಬೇಕಾಗುತ್ತದೆ. ಆದರೆ, ಅವಧೂತರ ಸ್ಥಿತಿಯಲ್ಲಿ, ಕೆಳ ಹಂತವನ್ನು ಬಹಳ ಸುಲಭವಾಗಿ ಕೆರೆದು ಸ್ವಚ್ಛಗೊಳಿಸಬಹುದು. ಅದಕ್ಕಾಗಿ ಅವರು ವಿಶೇಷವಾದ್ದೇನನ್ನೂ ಮಾಡುತ್ತಿರುವುದಿಲ್ಲ, ಮತ್ತು ಅವರಿಗೇನೂ ತಿಳಿದಿರುವುದಿಲ್ಲ, ಆದರೆ ಅವರಿಗೆ ಕರ್ಮ ಮತ್ತು ಬಂಧನವಿರುವುದಿಲ್ಲ. ಆದ್ದರಿಂದ, ಅವರಿಗಾಗಿ ಎಲ್ಲವನ್ನೂ ಸ್ವಚ್ಛಗೊಳಿಸಲಾಗುತ್ತದೆ.

ಯೋಗಿಗಳು ಅಂತಹ ಸ್ಥಿತಿಗಳಲ್ಲಿ ಕೆಲ ಕಾಲಾವಧಿಯವರೆಗೆ ಉಳಿಯುತ್ತಾರೆ ಏಕೆಂದರೆ ಅದು ಮುಕ್ತಿಯನ್ನು ಪಡೆಯಲು  ತ್ವರಿತವಾದ ಮಾರ್ಗ. ಆದರೆ, ಅವಧೂತರು ಎಂದಿಗೂ ತಮ್ಮ ದೇಹವನ್ನು ಅವಧೂತರಾಗಿಯೇ ತ್ಯಜಿಸಲು ಸಾಧ್ಯವಿಲ್ಲ. ಈ ಒಂದು ವಿಷಯ ಮಾತ್ರ ಮಾನವನ ಪ್ರಜ್ಞೆಯಲ್ಲಿ ಸ್ಥಾಪಿತವಾಗಿದೆ. ನೀವು ದೇಹವನ್ನು ತೊರೆಯಬೇಕಾದ ಸಮಯದಲ್ಲಿ, ನೀವು ಜಾಗೃತರಾಗಿರಬೇಕು. ಮತ್ತು ಅವಧೂತರ ಸ್ಥಿತಿಯಿಂದ ಹೊರಬಂದಿರುವ ಆ ಕೆಲವೇ ಕ್ಷಣಗಳಲ್ಲಿ, ನೀವು ಮತ್ತೊಮ್ಮೆ ಕರ್ಮವನ್ನು ಸೃಷ್ಟಿಸಬಹುದು. ಅವಧೂತರಾಗಿ, ಸಂಪೂರ್ಣ ಸ್ವತಂತ್ರರಾಗಿ ಬದುಕುತ್ತಿದ್ದಂತಹ ಜನರ ಬಗ್ಗೆ ನಮಗೆ ತಿಳಿದಿದೆ, ಆದರೆ ಕೊನೆಯ ಕ್ಷಣಗಳಲ್ಲಿ, ಅವರು ಆ ಸ್ಥಿತಿಯಿಂದ ಹೊರಬಂದಾಗ, ಮತ್ತೆ ಅವರು ತಮ್ಮ ಕರ್ಮ ರಚನೆಗೆ ವಾಪಾಸ್ಸಾದರು. ದೊಡ್ಡ ದೊಡ್ಡ ಸಂಗತಿಗಳೇನಲ್ಲ, ಕೇವಲ ಸರಳವಾದ ಕರ್ಮಗಳಷ್ಟೆ. ಆದರೆ ಅದರಿಂದ ತಮ್ಮನ್ನು ತಾವು ಹೇಗೆ ಬೇರ್ಪಡಿಕೊಳ್ಳಬೇಕೆಂದು ಅವರಿಗೆ ತಿಳಿದಿರಲಿಲ್ಲ.

ಅಸಂಬದ್ಧತೆಗಳ ಬತ್ತಳಿಕೆ 

ಕೆಲವು ಅಸಂಬದ್ಧತೆ ಹಾಗೂ ಕುತಂತ್ರದ ಬಾಣಗಳು ನಿಮ್ಮ ಬತ್ತಳಿಕೆಯಲ್ಲಿ ಇಲ್ಲದಿದ್ದರೆ ನಿಮಗೆ ಈ ಜಗತ್ತಿನಲ್ಲಿ ಬದುಕಲು ಸಾಧ್ಯವಿಲ್ಲ. ಈ “ಅಸಂಬದ್ಧತೆಯು” ನಿಮ್ಮೊಳಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ದ್ವಂದ್ವಗಳ ನಡುವಿನ ತಪ್ಪು ತಿಳುವಳಿಕೆಯಿಂದಾಗಿ ಹುಟ್ಟುತ್ತಿದೆ. ನೀವು ಎಲ್ಲಾ ದ್ವಂದ್ವಗಳನ್ನು ಮೀರಿದರೆ, ಮತ್ತು ನಿಮ್ಮೊಳಗೆ ಒಂದು ಸ್ಪಷ್ಟವಾದ ಸ್ಥಳಾವಕಾಶವಿದ್ದರೆ, ದ್ವಂದ್ವಗಳು ನಿಮ್ಮ ಹೊರಗೆ ಮಾತ್ರ ಕಾರ್ಯನಿರ್ವಹಿಸುತ್ತವೆಯಷ್ಟೆ. ನೀವು ಬಯಸಿದರೆ, ಜೀವನದ ವಿವಿಧ ಆಟಗಳನ್ನು ಆಡಬಹುದು, ಇಲ್ಲದಿದ್ದರೆ ನೀವು ಹೇಗಿರುವಿರೋ ಹಾಗೆಯೇ ಇದ್ದುಬಿಡಬಹುದು. ಆಗ, ಅಸಂಬದ್ಧತೆಯು ನಿಮ್ಮ ಭಾಗವಾಗಿರುವುದಿಲ್ಲ, ಆದರೆ ಅದರ ಸಂಗ್ರಹ ನಿಮ್ಮ ಬಳಿಯಿರುತ್ತದೆ. ನಿಮಗೆ ಬೇಕಿದ್ದಲ್ಲಿ ನೀವದನ್ನು ಬಳಸಬಹುದು, ಆದರೆ ಇನ್ನು ಮುಂದೆ, ಅದು ನೀವಾಗಿರುವುದಿಲ್ಲ.

ಸಂಪಾದಕರ ಟಿಪ್ಪಣಿ: “Encounter the Enlightened.” ಎಂಬ ಇಬುಕ್ ನಲ್ಲಿ ಸದ್ಗುರುಗಳು ಆತ್ಮಸಾಕ್ಷಾತ್ಕಾರ ಹೊಂದಿದವರ ಪ್ರಪಂಚವನ್ನು ಅನ್ವೇಷಿಸುತ್ತಾರೆ, ಮತ್ತು ಅವರ ಇನ್ನಷ್ಟು ಒಳನೋಟಗಳನ್ನು ಅದರಲ್ಲಿ ಓದಿ ತಿಳಿಯಿರಿ.

ಇ ಬುಕ್‌ಅನ್ನು ಇಲ್ಲಿ ಖರೀದಿಸಿ