ನಿಮ್ಮ ಭೂತ, ಭವಿಷ್ಯತ್ ಮತ್ತು ವರ್ತಮಾನಗಳೆಲ್ಲವೂ ನಿಮ್ಮ ಮೇಲೆ ಎಲ್ಲೆಲ್ಲೂ ಬರೆಯಲಾಗಿರುತ್ತದೆ.

ಸದ್ಗುರು: ಒಂದು ರೀತಿಯಲ್ಲಿ ಹೇಳಬೇಕೆಂದರೆ, ಕರ್ಮವು ಒಬ್ಬ ವ್ಯಕ್ತಿಯ ಶರೀರ, ಮನಸ್ಸು, ಭಾವನೆಗಳು ಮತ್ತು ಪ್ರಾಣಶಕ್ತಿಯ ಮೇಲೆ ಆಗುವ ನಾನಾ ಘಟನೆಗಳ ನೆನಪಿನ ಅವಶೇಷಗಲಾಗಿರುತ್ತವೆ. ಅದು ವಿವಿಧ ಸನ್ನಿವೇಶಗಳಲ್ಲಿ ನಡೆದಿರುವ ನಾನಾ ಘಟನೆಗಳ ಅವಶೇಷ. ನೀವು ದೈಹಿಕವಾಗಿ ಒಬ್ಬ ವ್ಯಕ್ತಿ ಎಂದು ಉಂಟಾಗುವುದಕ್ಕೆ ಬಹಳ ಮುಂಚೆಯೇ, ‘ನಿಮ್ಮ’ ಒಂದು ದೊಡ್ಡ ಭಾಗವು ನಿಮಗಿಂತ ಬಹಳ ಮೊದಲೇ ಇರುತ್ತದೆ. ಹಾಗೆಂದು ನೀವು ಇದನ್ನು ಪುನರ್ಜನ್ಮ ಎಂದು ಕೊಳ್ಳುವುದೆಲ್ಲ ಬೇಡ. ನೀವು ಇಂದಿನ ಆಧುನಿಕ ಭಾಷೆಯಲ್ಲಿ ಹೇಳುವ ಅನುವಂಶೀಯತೆ ಎಂದರೆ, ನಿಸ್ಸಂದೇಹವಾಗಿ ನಿಮ್ಮ ತಂದೆ-ತಾಯಿಯರು ಇನ್ನೂ ನಿಮ್ಮ ಮೂಲಕ ಜೀವಿಸುತ್ತಿದ್ದಾರೆ ಎಂದರ್ಥ. ‘ನಾನು ಬೇರೆ’ ಎಂದು ನೀವು ಯೋಚಿಸುತ್ತೀರಿ ಅಷ್ಟೇ. ಇದು ಬಹಳ ಜನರಿಗೆ ಆಗುತ್ತದೆ, ಅವರು ಜಾಗೃತರಾಗಿ ತಮ್ಮದೇ ಆದ ಒಂದು ನಿರ್ದಿಷ್ಟ ಮಾರ್ಗವನ್ನು ರೂಪಿಸಿಕೊಂಡಿದ್ದರೆ ಸರಿ, ಇಲ್ಲದಿದ್ದರೆ, ಅವರು 40–45 ವರ್ಷ ಆಗುವಷ್ಟರಲ್ಲಿ ಬಹಳಷ್ಟು ತಮ್ಮ ಹೆತ್ತವರಂತೆಯೇ ವರ್ತಿಸಲು ಪ್ರಾರಂಭಿಸಿರುತ್ತಾರೆ. ನಿಮ್ಮ ತಂದೆ-ತಾಯಿಯರು ತಮ್ಮದೇ ರೀತಿಯಲ್ಲಿ ಬದುಕಿರುತ್ತಾರೆ, ಅದನ್ನೇ ನೀವೂ ಏಕೆ ಅನುಸರಿಸಬೇಕು?

ಕರ್ಮ ಎಂದರೆ, ನೀವು ಏನು ಮಾಡಿದಿರಿ, ಏನು ಮಾಡಲಿಲ್ಲ ಎಂದಲ್ಲ, ಅದು ಬರೀ ನೆನಪುಗಳ ಶೇಷ, ಅಷ್ಟೇ. ಕರ್ಮವು ಸೃಷ್ಟಿಯ ಮೂಲಕ್ಕೇ ಹೋಗುತ್ತದೆ. ನೀವು ನಿಮ್ಮ ಶರೀರದಿಂದ ಸ್ವಲ್ಪ ವ್ಯತಿರಿಕ್ತರಾದರೂ, ಎಚ್ಚರಿಕೆಯಿಂದ ಗಮನಿಸಿದರೆ, ನೀವು ಸೃಷ್ಟಿಯ ಆರಂಭವನ್ನೇ ಕಾಣಬಹುದು. ಯಾವಾಗ ಏನೇ ಘಟಿಸಿದರೂ ಅದು ಎಲ್ಲದರಲ್ಲಿಯೂ ಇರುತ್ತದೆ, ಅದೂ ವಿಶೇಷವಾಗಿ ಮಾನವ ವ್ಯವಸ್ಥೆಯಲ್ಲಿ. ನಾವು ಇದನ್ನು ಅನುಭವದಿಂದ ಅರಿತುಕೊಂಡಿದ್ದೇವೆ.

ಇವತ್ತು, ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ, ನೀವು ಸಿಕ್ವೋಯ (ಶಂಖುಪರ್ಣಿ) ಮರವನ್ನು ಕಡಿದರೆ, ವಿಜ್ಞಾನಿಗಳು ಕಳೆದ 3000 ವರ್ಷಗಳಲ್ಲಿ ಘಟಿಸಿರುವುದನ್ನೆಲ್ಲಾ ತಿಳಿದುಕೊಳ್ಳಬಲ್ಲರು- ಎಷ್ಟು ಮಳೆಯಾಗಿದೆ, ತಾಪಮಾನ ಎಷ್ಟಿತ್ತು, ಬೆಂಕಿಯ ಅವಘಡಗಳು, ದುರಂತಗಳು, ಪ್ರತಿಯೊಂದೂ. ಇದು ಹೇಗೆಂದರೆ, ಯಾರಾದರೂ ನಿಮ್ಮ ಕೈಯನ್ನು ನೋಡಿ, ನಿಮ್ಮ ಭೂತ ಹಾಗೂ ವರ್ತಮಾನ ಎಲ್ಲವನ್ನೂ ಹೇಳುವಂತೆ. ಇದು ಎಷ್ಟೋ ರೀತಿಯಲ್ಲಿ ಸೂಚಕವಾಗಿದೆ.

 ನಿಜ ಹೇಳಬೇಕೆಂದರೆ, ನಾನು ನಿಮ್ಮ ಕೈಯನ್ನು ನೋಡಿ ನಿಮ್ಮ ಜೀವನದಲ್ಲಿ ಏನೇನು ಘಟಿಸಿದೆ, ಮುಂದೆ ಏನೇನು ಆಗಬಹುದು ಎಂಬುದನ್ನೆಲ್ಲಾ ಹೇಳಬಲ್ಲೆ. ಇವೆಲ್ಲ ನಿಮ್ಮ ಕೈಯಲ್ಲಿ ಹೇಗೆ ಮೂಡಿತು? ವಾಸ್ತವವಾಗಿ ನಿಮ್ಮ ಮೇಲೆಲ್ಲಾ ಮೂಡಿರುತ್ತದೆ. ನಾನು ನಿಮ್ಮ ದೇಹದ ಯಾವುದೇ ಭಾಗವನ್ನು ನೋಡಿದರೂ, ಅದರಲ್ಲೂ ಸೂಚಕವಾಗಿರುವ ಕೆಲವು ನಿಶ್ಚಿತ ಭಾಗಗಳನ್ನು ನೋಡಿದರೆ, ನಾನು ನಿಮ್ಮ ಭೂತ ಹಾಗೂ ವರ್ತಮಾನವನ್ನು ಹೇಳಬಲ್ಲೆ. ಅದರಲ್ಲೂ ನಾನು ನಿಮ್ಮ ಕಿವಿಯ ಹಾಲೆಯ ಹಿಂದೆ ಇಣುಕಿದರೆ, ನಾನು ಎಲ್ಲವನ್ನೂ ಹೇಳಬಲ್ಲೆ, ನಾನು ತಮಾಷೆ ಮಾಡುತ್ತಿಲ್ಲ. ನಾನೇನಾದರೂ ಮುಖ್ಯವಾದ ಸ್ಥಳಗಳಿಗೆ ಭೇಟಿ ಕೊಟ್ಟರೆ, ಆ ಸ್ಥಳದ ವಿಶೇಷವನ್ನು ತಿಳಿಯಲು ನಾನು ಯಾವುದೇ ಸ್ಥಳೀಯರ ಅಥವಾ ಮಾರ್ಗದರ್ಶಕರ ಸಹಾಯವನ್ನಾಗಲೀ ಪಡೆಯುವುದಿಲ್ಲ. ನಾನು ಮಾಡುವ ಒಂದೇ ಕೆಲಸವೆಂದರೆ, ಅಲ್ಲಿ ಯಾರೂ ಮುಟ್ಟಿರದ ಕಲ್ಲನ್ನು ಹುಡುಕುವುದು. ನಾನು ಸುಮ್ಮನೆ ಅದರ ಜೊತೆ ಹೋಗಿ ಕುಳಿತುಕೊಳ್ಳುತ್ತೇನೆ ಅಷ್ಟೇ, ನನಗೆ ಇಡೀ ಜಾಗದ ಬಗ್ಗೆ ತಿಳಿಯುತ್ತದೆ, ಏಕೆಂದರೆ, ಆ ಕಲ್ಲಿನಲ್ಲೂ ಅದರ ಸುತ್ತಮುತ್ತ ನಡೆದಿರುವ ಎಲ್ಲಾ ಘಟನೆಗಳ ನೆನಪುಗಳೂ ಅಡಗಿರುತ್ತವೆ. 

 

ಈ ಗ್ರಹದ ಮೇಲೆ ಇರುವ ಪ್ರತಿಯೊಂದು ವಸ್ತುವೂ ತನ್ನದೇ ಅದ ಕಂಪನಗಳನ್ನು ಪಸರಿಸುತ್ತದೆ ಮತ್ತು ಈ ಕಂಪನಗಳು ಗ್ರಹದ ಸ್ಥಾನದ ಪ್ರಕಾರ ಬದಲಾಗುತ್ತದೆ. ಇವೆಲ್ಲವನ್ನೂ ಮಾಪನ ಮಾಡಲಾಗಿದೆ, ಆದರೂ ಇದು ಏನು ಹೇಳುತ್ತದೆ ಎಂದು ಯಾರೂ ಸ್ಫುಟವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಪ್ರತಿಯೊಂದು ಕಲ್ಲೂ, ಹರಳುಗಳು, ಏನೋ ಒಂದನ್ನು ಹೇಳುತ್ತದೆ, ಈ ವಿಷಯವನ್ನು ಆಧುನಿಕ ವಿಜ್ಞಾನವೂ ಸಮರ್ಥಿಸುತ್ತದೆ. ಇದು ನೀವು ಸ್ಫುಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಅಥವಾ ಎಲ್ಲವನ್ನೂ ಕ್ರೋಢೀಕರಿಸಲು ಸಾಧ್ಯವೇ ಎಂಬುದೇ ಪ್ರಶ್ನೆ. ಏಕೆಂದರೆ, ನಿಮಗೆ ಯಾರಾದರೂ, ಏನಾದರೂ ಹೇಳಿದರೆ, ಅದು ನಿಮಗೆ ಅರ್ಥವಾಗಬೇಕೆಂದರೆ, ಮೊದಲು ನಿಮಗೆ ಅವರ ಭಾಷೆ ಗೊತ್ತಿರಬೇಕು ಮತ್ತು ನೀವು ಆ ಭಾಷೆಯ ಬಗ್ಗೆ ಸೂಕ್ಷ್ಮಗ್ರಾಹಿಗಳೂ ಆಗಿರಬೇಕು. ಇಲ್ಲವೆಂದರೆ ನಿಮಗೆ ಅದು ಅರ್ಥವಾಗುವುದಿಲ್ಲ. ಎಲ್ಲರೂ ಬಹಳ ವಿಷಯಗಳ ಬಗ್ಗೆ ಮಾತನಾಡುತ್ತಿರುತ್ತಾರೆ, ಆದರೆ ಅದನ್ನು ಕೇಳುವವರು ಯಾರಿದ್ದಾರೆ?

ನಿಮ್ಮ ಶರೀರವೇ ಒಂದು ಚಿಕ್ಕ ಬ್ರಹ್ಮಾಂಡ

 

ನೀವು ನಿಮ್ಮ ಸುತ್ತಮುತ್ತಾ ಇರುವ ಜೈವಿಕವಸ್ತುಗಳಿಗೆಲ್ಲಾ ಸಂವೇದನಾಶೀಲರಾಗಿದ್ದರೆ, ಅದು ಏನು ಹೇಳುತ್ತದೆಎಂಬುದು ನಿಮಗೆ ಅರಿವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಇದೇ ಜೀವನ ಎಂದು ಹೇಳುವ “ನಾನು “ ಎಂಬುದಕ್ಕೆ ಸೃಷ್ಟಿಯ ಮೊದಲಿನಿಂದ ಇಂದಿನವರಿಗೂ ಅಂಟಿಕೊಂಡಿದ್ದರೆ, ಎಲ್ಲವೂ ಈ ನಿಮ್ಮ ಭೌತಿಕ ಶರೀರದಲ್ಲಿಯೇ ಇದೆ- ಏಕೆಂದರೆ ಈ ಶರೀರವೇ ಒಂದು ಚಿಕ್ಕ ಬ್ರಹ್ಮಾಂಡ. ಆದ್ದರಿಂದಲೇ ಇದನ್ನು “ಸೂಕ್ಷ್ಮಾಂಡ” ಎಂದು ಹೇಳುತ್ತಾರೆ. ಬ್ರಹ್ಮಾಂಡವು ಇದರದೇ ವಿಸ್ತೃತ ರೂಪ- ಬ್ರಹ್ಮಾಂಡದಲ್ಲಿ ಸೂಕ್ಷ್ಮವಾಗಿ ನಡೆಯುವ ಚಟುವಟಿಕೆಗಳೇ, ಇಲ್ಲೂ ನಡೆಯುವುದು, ಮತ್ತು ನಡೆಯುತ್ತಲೇ ಇರುವುದು. 

 

ನಾನು ಏಕೆ ಇದು ‘ನಡೆಯುತ್ತಲೇ ಇದೆ’ ಎನ್ನುತ್ತೇನೆ ಎಂದರೆ – ‘ಈ ಸೃಷ್ಟಿ ‘ಉಂಟಾಗಿದೆ’, ಅದೂ ಕೇವಲ ಆರೇಳು ದಿನಗಳಲ್ಲಿ’ ಎನ್ನುವ ಕಲ್ಪನೆಯೇ ಬಹಳ ಬಾಲಿಶವಾದುದು. ಏಕೆಂದರೆ ಸೃಷ್ಟಿಯೆಂದರೆ ಎಂದೋ ಆಗಿ ಹೋಗಿರುವುದಲ್ಲ ಅದು ಆಗುತ್ತಲೇ ಇರುವಂತಹುದು. ಸಮಯ ಎನ್ನುವುದೇ ಒಂದು ಬಾಲಿಶ ಕಲ್ಪನೆ; “ಲಕ್ಷಾಂತರ ವರ್ಷಗಳ ಹಿಂದೆ” ಎನ್ನುವುದೆಲ್ಲ ಏನು ಇಲ್ಲ. ಅಸ್ತಿತ್ವವನ್ನು ಅಳವಾಗಿ ನೋಡುವಂತಹವರಿಗೆ ಎಲ್ಲವೂ ಈ ಕ್ಷಣ ಆಗುತ್ತಿರುವುದು ಮತ್ತು ಇಲ್ಲಿಯೇ ಆಗುತ್ತಿರುವುದು. ಹಾಗಾದರೆ ಆ “ಇಲ್ಲಿ” ಯಾವುದು? ನೀವು ಈಗ ಕುಳಿತಿರುವ ಜಾಗವೇ? ಅಲ್ಲ, ಇದು ನಿಮ್ಮೊಳಗೆ ಇದೆ, ಏಕೆಂದರೆ, ಇದನ್ನಷ್ಟೇ ನೀವು ಅನುಭವಿಸಲು ಸಾಧ್ಯ. ನೀವು ಇದನ್ನು ಅರ್ಥ ಮಾಡಿಕೊಳ್ಳಬೇಕು, ನಿಮಗೆ ಗೋಚರವಾಗುವ ಇದೊಂದನ್ನೇ ನೀವು ವಾಸ್ತವದಲ್ಲಿ ಅನುಭವಿಸಲು ಸಾದ್ಯ. ಬೇರೇನೂ ನಿಮಗೆ ಗೋಚರಿಸುವುದಿಲ್ಲ. ವಸ್ತುಗಳನ್ನು ನಿಮ್ಮಕಣ್ಣುಗಳು ಬಿಂಬಿಸುವಂತೆ ಅಲ್ಲದೆ, ಅದು ವಾಸ್ತವವಾಗಿ ಇರುವಂತೆಯೇ ನೋಡಲು ಬಹಳ ಶ್ರಮ ಪಡಬೇಕಾಗುತ್ತದೆ. 

ಆದ್ದರಿಂದ ಕರ್ಮ ಎಂಬುದು ಒಂದು ಸರಳ ಪದವಲ್ಲ. “ಇದು ನಿಮ್ಮ ಕರ್ಮ”, ಹಾಗೆಂದರೆ ಬಿಗ್ ಬ್ಯಾಂಗ್ ಅಥವ ‘ಆ’ ಮಹಾ ಸ್ಫೋಟವೂ ಕೂಡ ಒಂದು ಕರ್ಮವೇ. ಸೃಷ್ಟಿಯ ಪ್ರಾರಂಭವೂ ಕೂಡ ನಿಮ್ಮ ಕರ್ಮ ಫಲವೇ ಏಕೆಂದರೆ, ಎಲ್ಲವೂ ನಿಮ್ಮಲ್ಲೇ ಇದೆ. ಎಲ್ಲವೂ ಜಾಗೃತಾವಸ್ಥೆಯಲ್ಲೇ ಆಗುವುದು. ಇದೇನೂ ನಿಮಗೆ ಬೇರೆಯದೇ ಗ್ರಹದಿಂದ ಆದದ್ದು ಅಲ್ಲಾ ಅಥವಾ ಪರಕೀಯವಾದದ್ದೂ ಅಲ್ಲ. ಇದೇ ನಿಮ್ಮ ಮೂಲ ಅಸ್ಥಿತ್ವ. ಆದ್ದರಿಂದ ಸೃಷ್ಟಿಯ ಪ್ರಾರಂಭವೂ ನೀವೇ ಆಗಿದ್ದೀರಿ.

ಸಂಪಾದಕರ ಸೂಚನೆ : ಈಲೇಖನದಒಂದು ಆವೃತ್ತಿ, ಜನವರಿ 2011ರ ಫಾರೆಸ್ಟ್ ಫ್ಲವರ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು