ಪ್ರಶ್ನೆ: ಭಾವನೆಗಳು ನಮಗೆ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ತೊಂದರೆಯನ್ನು ನೀಡುವುದೇ ಜಾಸ್ತಿ ಎಂದು ತೋರುತ್ತದೆ. ಅವುಗಳಿಲ್ಲದಿದ್ದರೆ ಚೆನ್ನಾಗಿರುತ್ತಿತ್ತೇ?

ಸದ್ಗುರು: ಒಬ್ಬ ಮನುಷ್ಯನಲ್ಲಿ ಯಾವುದೇ ಭಾವನೆಗಳು ಇರದೇ ಹೋದರೆ, ನೀವು ಅವವನ್ನು ಮನುಷ್ಯ ಎಂದು ಕರೆಯಲು ಸಾಧ್ಯವಿಲ್ಲ. ಭಾವನೆಗಳು ಮನುಷ್ಯ ಜೀವನದ ಒಂದು ಸುಂದರವಾದ ಅಂಶ, ಅವುಗಳಿಲ್ಲದೆ ಮನುಷ್ಯ ಅಸಹ್ಯವೆನಿಸುತ್ತಾನೆ. ಆದರೆ ಎಲ್ಲದರಂತೆ, ನಿಮ್ಮ ಭಾವನೆಗಳು ನಿಯಂತ್ರಣ ತಪ್ಪಿದರೆ, ಅದು ಹುಚ್ಚಿಗೆ ತಿರುಗುತ್ತದೆ. ನಿಮ್ಮ ಆಲೋಚನೆಗಳು ಅನಿಯಂತ್ರಿತವಾದರೆ, ಅದು ಹುಚ್ಚುತನವಾಗುತ್ತದೆ. ನಿಮ್ಮ ಭಾವನೆಗಳು ಅನಿಯಂತ್ರಿತವಾದರೆ, ಅದೂ ಕೂಡ ಹುಚ್ಚುತನವಾಗುತ್ತದೆ.

ಭಾವನೆಗಳು ಸಮಸ್ಯೆಯಲ್ಲ

ಜನರು ಭಾವನೆಗಳನ್ನು ಸಮಸ್ಯೆಯೆಂದು ನೋಡುತ್ತಾರೆ, ಏಕೆಂದರೆ ಅವರು ನೋವಿನಿಂದ ತುಂಬಿದ ಭಾವನೆಗಳನ್ನು ಹೊಂದಿರುತ್ತಾರೆ. ಅವರಲ್ಲಿ ಮಧುರವಾದ ಭಾವನೆಗಳನ್ನು ಇದ್ದಿದ್ದರೆ, ಅವರದನ್ನು ಸಮಸ್ಯೆ ಎಂದು ಕರೆಯುತ್ತಿದ್ದರೆ? ನಿಮ್ಮೊಳಗೆ ನೀವು ಸಂತೋಷ, ಪ್ರೀತಿ ಮತ್ತು ಸಹಾನುಭೂತಿಯಿಂದ ತುಂಬಿದ್ದಿದ್ದರೆ, ನಿಮ್ಮ ಭಾವನೆಗಳು ಆ ರೀತಿಯಲ್ಲಿ ರೂಪುಗೊಂಡು ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದ್ದುದೇ ಆದರೆ, ಅವುಗಳನ್ನು ನೀವು ತೊಂದರೆ ಎಂದು ಭಾವಿಸುತ್ತಿದ್ದಿರಾ? ಇಲ್ಲ.

ನೀವು ನಿಮ್ಮ ಭಾವನೆಗಳನ್ನು ಇಲ್ಲವಾಗಿಸಲು ಪ್ರಯತ್ನಿಸಿದ್ದೇ ಆದರೆ, ನಿಮ್ಮ ಭಾವನೆಗಳು ಹತ್ತಿಕ್ಕಲ್ಪಟ್ಟು ಹುದುಗಿ ಹೋಗುತ್ತವೆ ಮತ್ತು ನೀವು ನೀರಸವಾಗಿಬಿಡುತ್ತೀರಿ.

ನಿಮ್ಮ ದೇಹ ಅತ್ಯುತ್ತಮವಾಗಿ ಮತ್ತು ಸುಂದರವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನೀವದನ್ನು ಒಂದು ಸಮಸ್ಯೆ ಎಂದು ಕರೆಯುತ್ತೀರಾ? ಇಲ್ಲ. ಅದು ನೋವು ಅಥವಾ ರೋಗಗ್ರಸ್ತವಾಗಿದ್ದರೆ, ಕೂರುವುದು, ನಿಲ್ಲುವುದು ಅಥವಾ ಬೆಳಿಗ್ಗೆ ಎದ್ದುಬಗ್ಗಿ ಮಾಡುವುದಕ್ಕೂ ತುಂಬಾ ನೋವುಂಟುಮಾಡಿದರೆ - ಆಗ ನಿಮ್ಮ ದೇಹ ಒಂದು ಸಮಸ್ಯೆ ಎಂದು ನೀವು ಯೋಚಿಸಬಹುದು. ಅಂತೆಯೇ, ನೀವೀಗ ನಿಮಗೆ ಯಾವುದೇ ಭಾವನೆಗಳು ಬೇಡವೆಂದು ಹೇಳುತ್ತಿರುವುದು ಏಕೆಂದರೆ ನೀವು ಅವುಗಳೊಂದಿಗೆ ಅವ್ಯವಸ್ಥೆಯನ್ನು ಮಾಡಿಕೊಂಡಿದ್ದೀರಿ. ನಿಮ್ಮ ಜೀವನವನ್ನು ಒಂದು ಹೂವಿನಂತೆ ಮಾಡುವಂತಹ ಸುಂದರವಾದ ಭಾವನೆಗಳನ್ನು ನೀವು ಹೊಂದಿದ್ದೇ ಆಗಿದ್ದರೆ, ಭಾವನೆಗಳು ಇರಬಾರದಿತ್ತು ಎಂಬುದಾಗಿ ನೀವು ಯೋಚಿಸುತ್ತಿರಲಿಲ್ಲ.

ನಾನು ನಿಮಗೆ ನಿಮ್ಮ ಭಾವನೆಗಳನ್ನು ಬಿಟ್ಟುಬಿಡಲು ಅಥವಾ ಅವುಗಳನ್ನು ಮೀರಿ ಹೋಗಲು ಹೇಳುತ್ತಿಲ್ಲ. ನಾನು ಹೇಳುತ್ತಿರುವುದೇನೆಂದರೆ ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಭಾವನೆ ಅಥವಾ ನಿಮ್ಮ ಪ್ರಾಣಶಕ್ತಿಗಳು - ಇದೀಗ ನಿಮ್ಮ ಅನುಭವದಲ್ಲಿರಬಹುದಾದ ಈ ನಾಲ್ಕು ಆಯಾಮಗಳು - ಅವುಗಳನ್ನು ಅತ್ಯಂತ ಆಹ್ಲಾದಕರ ರೀತಿಯಲ್ಲಿಟ್ಟುಕೊಳ್ಳುವುದೇ ಮೊದಲ ಮತ್ತು ಅಗ್ರಗಣ್ಯ ವಿಷಯ. ಅವುಗಳು ತುಂಬಾ ಆಹ್ಲಾದಕರವಾಗಿದ್ದರೆ, ಅವ್ಯಾವುವೂ ಸಹ ಇನ್ನು ಮುಂದೆ ಸಮಸ್ಯೆಯಾಗಿ ಉಳಿಯುವುದಿಲ್ಲ. ಭಾವನೆಗಳು ಸಮಸ್ಯೆಯಾಗಿಲ್ಲದಿದ್ದಾಗ, ಜನರು ಬೇರೆ ಯಾವುದಕ್ಕೂ ಹಂಬಲಿಸದಿದ್ದಾಗ ಮತ್ತು ಅವರು ತುಂಬಾ ಸಂತೋಷವಾಗಿದ್ದಾಗ ಮಾತ್ರ – ಜೀವಿತ ನಡೆಸುವ ಪ್ರಕ್ರಿಯೆಯಿಂದ ಮುಂದಕ್ಕೆ ಹೋಗುವ ಹಾತೊರೆತ ಬರುತ್ತದೆ.

ಇಲ್ಲೂ ಇಲ್ಲ ಅಲ್ಲೂ ಇಲ್ಲ

ಹಾಗಾಗದಿದ್ದರೆ, ನೀವು ಏನೇ ಮಾಡಲು ಪ್ರಯತ್ನಿಸಿದರೂ ಅದು ಬದುಕುಳಿಯುವ ಪ್ರಕ್ರಿಯೆಯಷ್ಟೇ. ನೀವು ದೇವರಿಗೆ ಮೊರೆ ಇಡುತ್ತಿದ್ದರೂ, ಅದು ನಿಮ್ಮ ಉಳಿವಿಗಾಗಿಯಾದ ಕರೆ ಮಾತ್ರವೇ ಆಗಿರುತ್ತದೆ, ಅಲ್ಲವೇ? ನೀವು ಇಲ್ಲಿ ಬದುಕಲು ವಿಫಲವಾದಾಗ, ನೀವು ಸ್ವರ್ಗದಲ್ಲಿ ಬದುಕುವ ಬಗ್ಗೆ ಯೋಚಿಸಲು ಶುರುಮಾಡುತ್ತೀರಿ. ನಿಮಗೆ ಇಲ್ಲಿ ಚೆನ್ನಾಗಿ ಬದುಕಲು ಸಾಧ್ಯವಾಗದಿದ್ದರೆ, ನೀವು ಅಲ್ಲಿ ಚೆನ್ನಾಗಿ ಬದುಕುತ್ತೀರಿ ಎಂಬುದಕ್ಕೆ ಏನು ಭರವಸೆ? ಇದನ್ನೇ ಬಸವಣ್ಣನವರು "ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ" ಎಂದು ಹೇಳಿರುವುದು. ಆದ್ದರಿಂದ, ಇದು ಭಾವನೆಯನ್ನು ಮೀರಿ ಹೋಗುವ ಬಗ್ಗೆಯಲ್ಲ. ನೀವು ಮೀರಿ ಹೋಗಬೇಕು, ಆದರೆ "ಮೀರಿ" ಹೋಗುವುದು ಎಂದರೆ ಭಾವನೆ ಅಥವಾ ಮನಸ್ಸು ಅಥವಾ ಇನ್ನೇನನ್ನೋ ಮೀರಿ ಹೋಗಬೇಕು ಎಂದರ್ಥವಲ್ಲ. ಇದೀಗ ನಿಮ್ಮನ್ನು ಹಿಡಿದಿಟ್ಟುಕೊಂಡಿರುವಂತಹ ಮಿತಿಗಳನ್ನು ಮೀರಿ ನೀವು ಹೋಗಬೇಕು. ಇದಕ್ಕಾಗಿ ನಿಮ್ಮ ಭಾವನೆ ಮತ್ತು ಆಲೋಚನೆಗಳು ನಿಮಗೊಂದು ಮಾರ್ಗವಾಗಬಹುದು ಮತ್ತು ನಿಮ್ಮ ದಾರಿಯನ್ನು ಸುಗಮಗೊಳಿಸಲು ಅವುಗಳು ಒಂದು ಸಾಧನವಾಗಿ ಪರಿಣಮಿಸಬಹುದು.

ನೀವು ನಿಮ್ಮ ಮಿತಿಗಳನ್ನು ಮೀರಿ ಹೋಗಲು ನಿಮ್ಮ ಮನಸ್ಸನ್ನು ಬಳಸಿದರೆ, ನಾವು ಅದನ್ನು ಜ್ಞಾನಯೋಗವೆಂದು ಕರೆಯುತ್ತೇವೆ. ಅದೇ ನೀವು ನಿಮ್ಮ ಮಿತಿಗಳನ್ನು ಮೀರಲು ನಿಮ್ಮ ಭಾವನೆಗಳನ್ನು ಬಳಸಿದರೆ, ನಾವದನ್ನು ಭಕ್ತಿಯೋಗವೆಂದು ಕರೆಯುತ್ತೇವೆ. ನೀವು ನಿಮ್ಮ ದೇಹವನ್ನು ಬಳಸಿ ನಿಮ್ಮ ಮಿತಿಗಳನ್ನು ಮೀರುವುದಾದರೆ, ನಾವದನ್ನು ಕರ್ಮಯೋಗವೆಂದು ಕರೆಯುತ್ತೇವೆ. ನಿಮ್ಮ ಪ್ರಾಣಶಕ್ತಿಯನ್ನು ಬಳಸುವುದಾದರೆ, ನಾವದನ್ನು ಕ್ರಿಯಾಯೋಗವೆಂದು ಕರೆಯುತ್ತೇವೆ. ಪ್ರತಿಯೊಂದೂ ಸಹ ಒಂದು ಬಾಗಿಲೇ ಆಗಿದೆ. ಬಾಗಿಲು ನಿಮ್ಮನ್ನು ನಿರ್ಬಂಧಿಸಬಹುದು ಅಥವಾ ಅದು ನಿಮ್ಮನ್ನು ಅದರಿಂದಾಚೆಗೆ ಹೋಗಲು ಅನುವುಮಾಡಿಕೊಡಬಹುದು. ಆದ್ದರಿಂದ, ನೀವು ನಿಮ್ಮ ಮಿತಿಗಳನ್ನು ಮೀರಲು ನಿಮ್ಮ ಭಾವನೆಗಳನ್ನು ತ್ಯಜಿಸುವ ಅಥವಾ ತಿರಸ್ಕರಿಸುವ ಹಾಗಿಲ್ಲ. ನಿಮಗೆ ಅವುಗಳನ್ನು ತ್ಯಜಿಸಲು ಸಾಧ್ಯವಿಲ್ಲ. ನೀವು ನಿಮ್ಮ ಭಾವನೆಗಳನ್ನು ಇಲ್ಲವಾಗಿಸಲು ಪ್ರಯತ್ನಿಸಿದ್ದೇ ಆದರೆ, ನಿಮ್ಮಲ್ಲಿ ಹತ್ತಿಕ್ಕಲ್ಪಟ್ಟ, ಹುದುಗಿದ ಭಾವನೆಗಳು ಮನೆಮಾಡುತ್ತವೆ ಮತ್ತು ನೀವು ನೀರಸವಾಗಿಬಿಡುತ್ತೀರಿ. ನಿಮ್ಮ ಭಾವನೆಗಳನ್ನು ನೀವು ತುಂಬಾ ಆಳವಾದ ರೀತಿಯಲ್ಲಿ ಸ್ವೀಕರಿಸಬೇಕು, ಹಾಗಾದಾಗ ಅವು ನಿಮ್ಮ ಸ್ನೇಹಿತರಾಗುತ್ತವೆ. ಮತ್ತು ಒಬ್ಬ ಸ್ನೇಹಿತ ಎಂದರೆ ಅವನು ನಿಮಗೆ ಹಿತವನ್ನು ತರುವವನಾಗಿರುತ್ತಾನೆ.

ಸಂಪಾದಕರ ಟಿಪ್ಪಣಿ: ಇದು ಸದ್ಗುರುಗಳ “ಭಾವನೆಗಳು: ಬದುಕಿನ ಸಾರ & ಸಂಬಂಧಗಳು: ನಂಟೋ ಕಗ್ಗಂಟೋ” ಎಂಬ 2-ಇನ್-1 ಪುಸ್ತಕದ ಆಯ್ದ ಭಾಗವಾಗಿದೆ. Flipkart ಮತ್ತು Amazon ನಲ್ಲಿ ಈ ಪುಸ್ತಕ ಲಭ್ಯವಿದೆ.