ಸದ್ಗುರು: ಭೀಮ್ ರಾವ್ ಅಂಬೇಡ್ಕರ್ ಅವರ ಜೀವನದ ಒಂದು ನೋವಿನ ಕಥೆ ನನ್ನ ಮನಸ್ಸಿಗೆ ಬರುತ್ತದೆ. ಅವರು ಒಂಬತ್ತು ವರ್ಷದವರಾಗಿದ್ದಾಗ, ಗೋರೆಗಾಂವ್-ನಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಬೇಸಿಗೆ ರಜಾದಿನಗಳಲ್ಲಿ ಅವರನ್ನು ಭೇಟಿ ಮಾಡುವಂತೆ ಅಂಬೇಡ್ಕರ್ ರವರಿಗೆ ಹೇಳಿದರು. ಅವರ ಹಿರಿಯ ಸಹೋದರ ಮತ್ತು ಇನ್ನೊಬ್ಬ ಸಂಬಂಧಿಯ ಜೊತೆಯಲ್ಲಿ, ಅಂಬೇಡ್ಕರ್ ಅವರು ಸತಾರಾದಿಂದ ರೈಲನ್ನು ಹತ್ತಿದ್ದರು. ಹುಡುಗರು ಹೊಸ ಇಂಗ್ಲಿಷ್-ಶೈಲಿಯ ಶರ್ಟ್‌ಗಳನ್ನು ಹಾಕಿಕೊಂಡು, ರೇಷ್ಮೆ ಅಂಚಿನ ಧೋತಿಗಳು ಮತ್ತು ಹೊಳೆಯುವ ಹೊಸ ಟೋಪಿಗಳನ್ನು ಧರಿಸಿ ಮಿಂಚುತ್ತಿದ್ದರು. ಅದು ಅವರ ಮೊದಲ ರೈಲು ಪ್ರಯಾಣವಾಗಿದ್ದ ಕಾರಣ ಅವರು ರೋಮಾಂಚಿತರಾಗಿದ್ದರು.

ನಾವು ಜನರನ್ನು ಒಂದು ಸಮುದಾಯ, ಒಂದು ಜಾತಿ, ಅಥವಾ ಒಂದು ಧರ್ಮದವರಂತೆ ನೋಡುವುದನ್ನು ನಿಲ್ಲಿಸಬೇಕು, ಏಕೆಂದರೆ ಭಾರತದಲ್ಲಿ ನಮಗೆಲ್ಲರಿಗೂ ಕೇವಲ ಒಂದೊಂದು ವೋಟ್ ಇದೆ. ಇದರರ್ಥ, ಕಾನೂನಿನ ಪ್ರಕಾರ, ನಾವೆಲ್ಲರೂ ಸಮನಾಗಿದ್ದೇವೆ. 

ಅವರ ತಂದೆಗೆ ಅವರು ಬರುವ ದಿನಾಂಕವಿದ್ದ ಪತ್ರ ತಲುಪದೆ ಇದಿದ್ದರಿಂದ ಹುಡುಗರು ಸತಾರಾ ತಲುಪಿದಾಗ, ಅವರನ್ನು ಸ್ವೀಕರಿಸಲು ಯಾರೂ ಸ್ಟೇಷನ್ನಿಗೆ ಬಂದಿರ್ರುವುದಿಲ್ಲ. ಅವರ ಹೊಸ ಬಟ್ಟೆಗಳ ಕಾರಣದಿಂದಾಗಿ ಅಲ್ಲಿನ ಸ್ಟೇಷನ್-ಮಾಸ್ಟರ್ ಆರಂಭದಲ್ಲಿ ಅವರನ್ನು ಮೇಲ್ಜಾತಿಯ ಹುಡುಗರೆಂದು ತಪ್ಪಾಗಿ ಅರ್ಥಮಾಡಿಕೊಂಡು, ನಂತರ ಅವರು ಕೆಳ ಜಾತಿಯವರು ಎಂದು ತಿಳಿದ ಕೂಡಲೆ, ಅವರನ್ನು ಕಾಯುವ ಕೋಣೆಯಿಂದ ಹೊರದಬ್ಬಿಬಿಡುತ್ತಾರೆ. ಆಗ ಅವರೊಂದು ಎತ್ತಿನಗಾಡಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಯಾರೊಬ್ಬರೂ ಅವರನ್ನು ಕರೆದುಕೊಂಡು ಹೋಗಲು ಒಪ್ಪುವುದಿಲ್ಲ.

ಅಂತಿಮವಾಗಿ, ಎತ್ತಿನಗಾಡಿಯ ಮಾಲೀಕನೊಬ್ಬ ಅವರನ್ನು ಕರೆದೊಯ್ಯಲು ಒಪ್ಪುತ್ತಾನೆ, ಆದರೆ ಅವನು ಗಾಡಿಯಲ್ಲಿ ಕುಳಿತುಕೊಳ್ಳುವ ಬದಲು, ಅದರ ಪಕ್ಕದಲ್ಲಿ ನಡೆದುಬರುತ್ತಾನೆ. ದಲಿತರ ಜೊತೆ ಕುಳಿತುಕೊಳ್ಳುವುದು ಆತನನ್ನು ಅಪವಿತ್ರಗೊಳಿಸುತ್ತದೆ ಎಂದವನು ನಂಬಿದ್ದನು. ಅದೊಂದು ಸುದೀರ್ಘ ಸವಾರಿಯಾಗಿತ್ತು, ಮತ್ತು ಯಾರೂ ಸಹ ದಾರಿಯಲ್ಲಿ ಅವರಿಗೆ ಕುಡಿಯಲು ನೀರು ಕೊಡುವುದಿಲ್ಲ. ಮರುದಿನ ಬೆಳಿಗ್ಗೆ ಅವರು ಗೋರೆಗಾಂವ್-ಗೆ ತಲುಪುತ್ತಾರೆ. ಆದರೆ ಆ ಪ್ರಯಾಣದ ಅನುಭವಗಳು ಅಂಬೇಡ್ಕರ್ ಅವರಿಗೆ ತೀವ್ರವಾದ ಮಾನಸಿಕ ಆಘಾತವನ್ನು ಉಂಟುಮಾಡುತ್ತವೆ.

ಇದು 1901 ರಲ್ಲಿ ನಡೆದ ಘಟನೆ. ಇಂದು, ಒಂದಿಡೀ ಶತಮಾನದ ನಂತರ, ಅದೇ ವಾಸ್ತವತೆ ಗ್ರಾಮೀಣ ಭಾರತದಲ್ಲಿ ಇನ್ನೂ ಸಹ ಮುಂದುವರಿಯುತ್ತಲೇ ಇದೆ. ಬಹುಶಃ ಅದೇ ಮಟ್ಟಿಗಿಲ್ಲದಿರಬಹುದು, ಆದರೆ ಇನ್ನೊಬ್ಬ ಮನುಷ್ಯನ ಸ್ಪರ್ಶ ನಮ್ಮನ್ನು ಅಪವಿತ್ರಗೊಳಿಸಬಹುದು ಎಂಬ ಮನೋಭಾವನೆ ಇಂದಿಗೂ ಅಸ್ತಿತ್ವದಲ್ಲಿದೆ.

ನಮ್ಮ ಸಮಾಜದಲ್ಲಿ ಇಂತಹ ಭಯಾನಕ ಪರಿಸ್ಥಿತಿ ಇದ್ದರೂ ಕೂಡ, ಮೀಸಲಾತಿಗಳನ್ನು ತೆಗೆದುಕಾಕುವ ಅಗತ್ಯತೆಯ ಬಗ್ಗೆ ನಾವು ಪದೇಪದೇ ಕೇಳುತ್ತಲೇ ಇರುತ್ತೇವೆ. ಅದು ಎಲ್ಲಿಂದ ಬರುತ್ತಿದೆ ಎಂದು ನನಗೆ ಅರ್ಥವಾಗುತ್ತದೆ. ಭಾರತದಂತಹ ದೇಶದಲ್ಲಿ, ನೀವು ಮಾಡುವ ಯಾವುದೇ ಕಾನೂನುಗಳನ್ನು, ವಿಶೇಷವಾಗಿ ಕೆಲವು ಸವಲತ್ತುಗಳನ್ನು ಹೊಂದಿದವರು ದುರುಪಯೋಗಪಡಿಸಿಕೊಳ್ಳುತ್ತಾರೆ. ಅದು ಸತ್ಯ. ಆದರೆ ದಲಿತರಿಗೆ ನೀಡಲಾಗಿರುವ ಮೀಸಲಾತಿಯ ವಿಷಯದಲ್ಲಿ, ನಾವು "ಬಳಕೆ" ಮತ್ತು "ದುರುಪಯೋಗ"ದ ನಡುವೆ ತೂಗಿ ನೋಡಬೇಕು.

ಸಮಸ್ಯೆಯನ್ನು ಕಡಿಮೆ ಅಂದಾಜಿಸುವುದು

ದಲಿತ ಸಮುದಾಯ, ಸಹಸ್ರಾರು ವರ್ಷಗಳವರೆಗೆ, ತಾರತಮ್ಯವನ್ನು ಎದುರಿಸಿದೆ. ಸಮಾಜದ ಉಳಿದ ವರ್ಗದ ಜನರ ಮಟ್ಟಕ್ಕೆ ಅವರೂ ತಲುಪಲು ನಾವವರಿಗೆ ಕೆಲವು ಸೌಲಭ್ಯಗಳನ್ನು ನೀಡದೇ ಹೋದರೆ, ಅದು ಅನ್ಯಾಯವಾಗುತ್ತದೆ. ಈ ಸಮಸ್ಯೆಯ ಅಗಾಧತೆಯನ್ನು ಕಡಿಮೆ ಅಂದಾಜು ಮಾಡುವವರು ತಮ್ಮನ್ನು ತಾವು ಗ್ರಾಮೀಣ ಸಮಾಜಕ್ಕೆ ಒಡ್ಡಿಕೊಳ್ಳಬೇಕು ಮತ್ತು ಅದು ಎಷ್ಟು ಭಯಾನಕ ರೀತಿಯಲ್ಲಿ ತಾರತಮ್ಯವನ್ನು ನಡೆಸುತ್ತಿದೆ ಎನ್ನುವುದನ್ನು ನೋಡಬೇಕು. ಮುಖ್ಯ ಬಾಗಿಲಿನಿಂದ ದಲಿತರು ನಿಮ್ಮ ಮನೆಯನ್ನು ಪ್ರವೇಶಿಸುವಂತಿಲ್ಲ; ಅವರು ಸ್ಥಳೀಯ ಚಹಾ ಅಂಗಡಿಯಲ್ಲಿ ಚಹಾ ಕುಡಿಯುವಂತಿಲ್ಲ; ದಲಿತರ ಮಕ್ಕಳು ದಲಿತರಲ್ಲದವರ ಜೊತೆ ಕುಳಿತುಕೊಳ್ಳುವಂತಿಲ್ಲ... ಇದು ಯಾವುದೇ ಮನುಷ್ಯನಿಗೆ ಸ್ವೀಕಾರಾರ್ಹವಲ್ಲ! ಆದ್ದರಿಂದ, ಮೀಸಲಾತಿಯು ದೇಶದ ಮೇಲಿನ ಶಾಪವಲ್ಲ.

ಯಾರೋ ಒಬ್ಬರು ಯಾವುದೋ ಮೀಸಲಾತಿಯನ್ನು ಪಡೆಯುತ್ತಿದ್ದಾರೆ ಮತ್ತು ಇತರರಿಗೆ ಒಂದು ಕಾಲೇಜು ಅಥವಾ ಕೋರ್ಸ್‌ಗೆ ಪ್ರವೇಶ ದೊರೆಯಲಿಲ್ಲ ಎಂಬ ಕಾರಣಕ್ಕಾಗಿ ಮೀಸಲಾತಿ ನ್ಯಾಯೋಚಿತವಲ್ಲ ಎಂದು ಭಾವಿಸಿದರೆ, ನಾವು ಒಂದು ಸಮಾಜವಾಗಿ ಎದುರಿಸುತ್ತಿರುವ ಈ ಬೃಹತ್ ಸಮಸ್ಯೆಯನ್ನು ತೊಡೆದುಹಾಕಿದಂತಾಗುವುದಿಲ್ಲ. ನಾವು ನಿರ್ಮಿಸಲು ಪ್ರಯತ್ನಿಸುವ ಯಾವುದೇ ಮೂಲಭೂತ ಸೌಕರ್ಯ ಅಥವಾ ಶಿಕ್ಷಣ ಅಥವಾ ಸೌಲಭ್ಯಗಳಲ್ಲಿ ಅಂತಹ ಕೆಲವು ಸಮಸ್ಯೆಗಳು ಉಂಟಾಗುತ್ತವೆ ಎಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ, ಏಕೆಂದರೆ ನಾವು ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದ್ದೇವೆ.

ವಿಮರ್ಶೆಯ ಸಮಯ

ಈ ದೇಶದಲ್ಲಿ ದಲಿತರ ಇಂದಿನ ಅಭಿವೃದ್ಧಿಯ ಮಟ್ಟವನ್ನು ಪರಿಗಣಿಸಿ, ಅವರಿಗೆ ಇನ್ನೂ ಮೀಸಲಾತಿಯ ಅವಶ್ಯಕತೆ ಇದೆ ಎಂದು ನನಗೆ ಬಲವಾಗಿ ಅನ್ನಿಸುತ್ತದೆ. ಆದರೆ ಬಹುಶಃ ನಮ್ಮ ಮೀಸಲಾತಿಯ ನೀತಿಯನ್ನು ಪರಿಶೀಲಿಸಲು ಇದು ಒಳ್ಳೆಯ ಸಮಯ. ಪ್ರಜಾಪ್ರಭುತ್ವದಲ್ಲಿ, ಎಲ್ಲವೂ ಸಹ ಚುನಾವಣೆಯನ್ನು ಗೆಲ್ಲುವುದರ ಸುತ್ತಲೇ ತಿರುಗುತ್ತದೆ. ಹಾಗಾಗಿ ಯಾವುದೇ ಧನಾತ್ಮಕ ಅಥವಾ ನಕಾರಾತ್ಮಕ ಬದಲಾವಣೆಯ ಬಗ್ಗೆ ಮಾತನಾಡಲು ಯಾರಿಗೂ ಧೈರ್ಯವಿಲ್ಲ, ವಿಶೇಷವಾಗಿ ಅದು ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಯಾವುದಾದರೂ ವಿಷಯವಾಗಿದ್ದರೆ, ಅದು ನಂತರದಲ್ಲಿ ಚುನಾವಣೆಯನ್ನು ಗೆಲ್ಲುವ ಅಥವಾ ಅದರಲ್ಲಿ ಸೋಲುವ ವಿಷಯವಾಗಿ ಬಹುಬೇಗ ಮಾರ್ಪಾಡಾಗಿಬಿಡುತ್ತದೆ. ಆದರೆ ನಾವು ಈ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬ ಮಾಡಬಾರದು.

ಒಂದು ರೀತಿಯ ಅನ್ಯಾಯ ಅಸ್ತಿತ್ವದಲ್ಲಿರುವ ಕಾರಣದಿಂದಾಗಿ ಈ ಸವಲತ್ತುಗಳನ್ನು ನೀಡಲಾಗುತ್ತಿದೆ. ನಾವು ಸವಲತ್ತುಗಳೇ ಮತ್ತೊಂದು ಅನ್ಯಾಯಕ್ಕೆ ಎಡೆಮಾಡಿಕೊಡುವಂತೆ ಮಾಡಬಾರದು.

ಗ್ರಾಮೀಣ ಭಾರತದಲ್ಲಿ ಗರಿಷ್ಠ ತಾರತಮ್ಯ ಮತ್ತು ಅನಾನುಕೂಲತೆ ನಡೆಯುವ ಕಾರಣ, ನಗರದ ದಲಿತರು ಮತ್ತು ಗ್ರಾಮೀಣ ದಲಿತರ ನಡುವೆ ಸಲೀಸಾಗಿ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಈಗಾಗಲೇ ನಗರದಲ್ಲಿ ವಾಸಿಸುತ್ತಿರುವವರಿಗಿಂತ ಗ್ರಾಮೀಣ ಭಾಗದಲ್ಲಿ ವಾಸಿಸುವ ದಲಿತರಿಗೆ ಹೆಚ್ಚು ಅನುಕೂಲಗಳನ್ನು ನೀಡಬೇಕು.

ಸಮಾಜದ ಜಾತಿ ಪದ್ಧತಿಯ ಕಂದಕದಲ್ಲಿ ದುರದೃಷ್ಟವಶಾತ್ ಬಿದ್ದ ಮೊದಲ ತಲೆಮಾರಿನವರಿಗೆ ಅದರಿಂದ ಹೊರಬರಲು ಮೀಸಲಾತಿಯನ್ನು ನೀಡಬೇಕು; ಎರಡನೆಯ ತಲೆಮಾರಿನವರಿಗೆ, ಅದನ್ನು ಸ್ವಲ್ಪಮಟ್ಟಿಗೆ ಕಡಿಮೆಮಾಡಬೇಕು; ಮೂರನೇ ತಲೆಮಾರಿನ ಹೊತ್ತಿಗೆ, ಅವರಿಗೆ ಅದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗುವಂತಿರಬೇಕು. ಅದರಿಂದ ಹೊರಬಂದ ಎರಡು ತಲೆಮಾರಿನ ಜನರು ಸ್ವಯಂಪ್ರೇರಿತರಾಗಿ ಇನ್ನೂ ಅದರಿಂದ ಹೊರಬಂದಿಲ್ಲದಿರುವವರ ಜೊತೆ ತಮ್ಮ ಮೀಸಲಾತಿಯನ್ನು ಹಂಚಿಕೊಳ್ಳಬೇಕು. ಇದು ಜವಾಬ್ದಾರಿಯ ಒಂದು ಭಾವನೆಯಿಂದ ಮಾತ್ರ ಬರಬಹುದಾಗಿದೆ. ಒಂದು ರೀತಿಯ ಅನ್ಯಾಯ ಅಸ್ತಿತ್ವದಲ್ಲಿರುವ ಕಾರಣದಿಂದಾಗಿ ಈ ಸವಲತ್ತುಗಳನ್ನು ನೀಡಲಾಗುತ್ತಿದೆ. ನಾವು ಸವಲತ್ತುಗಳೇ ಮತ್ತೊಂದು ಅನ್ಯಾಯಕ್ಕೆ ಎಡೆಮಾಡಿಕೊಡುವಂತೆ ಮಾಡಬಾರದು. ಹಾಗಾಗಿ, ನಮಗೆ ಹೆಚ್ಚು ಜಾಗೃತವಾದ ಸಮಾಜ ಬೇಕು.

ಸಾಮರ್ಥ್ಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ

ಒಂದು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮೀಸಲಾತಿ ಅಗತ್ಯವಾಗಿದ್ದರೂ ಸಹ, ನೀವು ಒಬ್ಬ ವಿದ್ಯಾರ್ಥಿಯನ್ನು ಅವನು ಒಂದು ನಿರ್ದಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಸುಮ್ಮನೆ ತೇರ್ಗಡೆ ಮಾಡಿಬಿಡಬಾರದು. ಹಾಗೆ ಮಾಡುವ ಮೂಲಕ, ನೀವು ದೇಶದಲ್ಲಿನ ಸಾಮರ್ಥ್ಯದ ಮಟ್ಟವನ್ನು ತಗ್ಗಿಸುತ್ತೀರಿ ಅಷ್ಟೆ. ಅದರ ಬದಲಿಗೆ, ಸರಿಯಾದ ಶಿಕ್ಷಣದ ಕೊರತೆಯಿಂದಾಗಿ ಅವರಿಗಾದ ಯಾವುದೇ ರೀತಿಯ ನಷ್ಟವನ್ನು ಭರಿಸುವ ಸಲುವಾಗಿ, ಅವರಿಗೆ ಅವಕಾಶಗಳನ್ನು ಮತ್ತು ಹೆಚ್ಚುವರಿ ತರಬೇತಿಗಳನ್ನು ನೀಡಬೇಕು. ಆದರೆ ಸಾಮರ್ಥ್ಯದ ವಿಷಯದಲ್ಲಿ ಯಾವುದೇ ರಾಜಿ ಬೇಡ. ಅಂತೆಯೇ, ಉದ್ಯೋಗಗಳನ್ನು ಪಡೆಯುವಾಗ, ಮೀಸಲಾತಿಗಳು ಅವರಿಗೆ ಸಹಾಯ ಮಾಡಬಹುದು, ಆದರೆ ಬಡ್ತಿಗಳನ್ನು ಮಾತ್ರ ಅವರವರ ಸಾಮರ್ಥ್ಯದ ಆಧಾರದ ಮೇಲೆ ನೀಡಬೇಕು.

ಅಂತಿಮವಾಗಿ, ನಾವು ಜನರನ್ನು ಒಂದು ಸಮುದಾಯ, ಒಂದು ಜಾತಿ, ಅಥವಾ ಒಂದು ಧರ್ಮದವರಂತೆ ನೋಡುವುದನ್ನು ನಿಲ್ಲಿಸಬೇಕು, ಏಕೆಂದರೆ ಭಾರತದಲ್ಲಿ ನಮಗೆಲ್ಲರಿಗೂ ಕೇವಲ ಒಂದೊಂದು ವೋಟ್ ಇದೆ. ಇದರರ್ಥ, ಕಾನೂನಿನ ಪ್ರಕಾರ, ನಾವೆಲ್ಲರೂ ಸಮನಾಗಿದ್ದೇವೆ. ಈ ಸಮಾನತೆಯು ಸಾಮಾಜಿಕವಾಗಿ ಸ್ವತಃ ಪ್ರಕಟವಾಗಬೇಕಿದೆ.

ಮೂಲಭೂತವಾಗಿ, ನಮ್ಮ ದೇಶ ಮತ್ತು ಪ್ರಪಂಚಕ್ಕಾಗಿ ಅಂಬೇಡ್ಕರ್ ಅವರ ದೂರದೃಷ್ಟಿ ಅದೇ ಆಗಿತ್ತು. ಅವರು ಕೇವಲ ರಾಜಕೀಯ ಪ್ರಜಾಪ್ರಭುತ್ವವನ್ನಷ್ಟೇ ಅಲ್ಲ ಸಾಮಾಜಿಕ ಪ್ರಜಾಪ್ರಭುತ್ವವನ್ನು ಕೂಡ ಜಯಿಸಿದ್ದರು. ನಿಮಗೊಂದು ವೋಟ್ ಇದೆ, ನನಗೊಂದು ವೋಟ್ ಇದೆ; ಇದರರ್ಥ ನಾವಿಬ್ಬರೂ ಆ ಮಟ್ಟದಲ್ಲಿ ಸಮಾನರಾಗಿದ್ದೇವೆ. ದುರದೃಷ್ಟವಶಾತ್, ನಮ್ಮ ದೇಶದಲ್ಲಿ ದಲಿತರು ಕಾನೂನಿನಲ್ಲಿ ಸಮಾನ ಹಕ್ಕುಗಳನ್ನು ಹೊಂದಿದ್ದರೂ, ಸಾಮಾಜಿಕ ಸಮಾನತೆಯನ್ನು ಅವರಿನ್ನೂ ಸಾಧಿಸಬೇಕಾಗಿದೆ. ಕನಿಷ್ಠ ಪಕ್ಷ ಈ ಪೀಳಿಗೆಯ ಜನರಾದರೂ ಅದನ್ನು ಮಾಡಬೇಕು, ಏಕೆಂದರೆ ನಾವದನ್ನು ಸರಿಪಡಿಸದಿದ್ದಲ್ಲಿ, ಒಂದು ಗಣತಂತ್ರ ರಾಷ್ಟ್ರವಾಗಿ ಭಾರತದ ಕಲ್ಪನೆಯು ವಿಫಲವಾಗುತ್ತದೆ. ಪೂರ್ವಾಗ್ರಹದಲ್ಲಿ ಹೂಡಿಕೆ ಮಾಡುವ, ತನ್ನದೇ ಆದ ನಾಗರೀಕರ ದಬ್ಬಾಳಿಕೆಯಿಂದ ರೂಪತಾಳುವ ಯಾವುದೇ ರಾಷ್ಟ್ರವು, ಯಶಸ್ವಿ ಪ್ರಜಾಪ್ರಭುತ್ವವಾಗಲಾರದು.

ಸಂಪಾದಕರ ಟಿಪ್ಪಣಿ: "Bha Ra Ta: the Rhythm of a Nation," (ಭಾ ರ ತ – ಒಂದು ದೇಶದ ತಾಳ’) ಲೇಖನದಲ್ಲಿ, ಸದ್ಗುರುಗಳು ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯದ ಕುರಿತು ಮಾತನಾಡುತ್ತಾರೆ, ಮತ್ತು ಈ ಸಂಸ್ಕೃತಿಯು ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೆ ಏಕೆ ಅನ್ವಯಿಸುತ್ತದೆ ಎಂಬುದನ್ನು ಪರಿಶೋಧಿಸುತ್ತಾರೆ. ಚಿತ್ರಗಳು, ಗ್ರಾಫಿಕ್ಸ್ ಮತ್ತು ಸದ್ಗುರು ಅವರ ಸ್ಪೂರ್ತಿದಾಯಕ ಮಾತುಗಳೊಂದಿಗೆ, ನೀವೆಂದೂ ತಿಳಿಯದೇ ಇರುವಂತೆ ಭಾರತ ಇಲ್ಲಿದೆ! 


ಈ ಲೇಖನದ ಮೂಲ ಆವೃತ್ತಿ ಹಿಂದೂಸ್ತಾನ್ ಟೈಮ್ಸ್-ನಲ್ಲಿHindustan Times ಪ್ರಕಟಿತವಾಗಿತ್ತು.