ಸುಮಾರು 32 ದೇಶಗಳ 800 ಶಿಬಿರಾರ್ಥಿಗಳು ಆಂತರಿಕ ಬೆಳವಣಿಗೆಗಾಗಿ ಈಶಾ ಯೋಗ ಕೇಂದ್ರದ ಪ್ರಾಣಪ್ರತಿಷ್ಠೆಗೊಂಡ ಸ್ಥಳದಲ್ಲಿ ಏಳು ತಿಂಗಳುಗಳನ್ನು ಕಳೆಯಲು ಒಟ್ಟುಗೂಡಿದ್ದಾರೆ.

Life in Sadhanapada - All Articles

ಎಲ್ಲಿ ಬೆಂಕಿಯಿರುತ್ತದೋ ಅಲ್ಲಿ ಬೆಳಕಿರುತ್ತದೆ. ಆಧ್ಯಾತ್ಮಿಕ ಸಾಧನೆ ತೀವ್ರಗೊಂಡಂತೆಲ್ಲಾ, ಒಂದು ಆಂತರಿಕ ಬೆಳಗು ಹಳೆಯ ಮುಸುಕುಗಳನ್ನು ತೊಡೆದುಹಾಕಲು ಪ್ರಾರಂಭಿಸುತ್ತದೆ, ಒಂದು ಸ್ಪಷ್ಟತೆ ಮತ್ತು ಸಮತೋಲನವನ್ನು ತರುತ್ತದೆ. ಸಾಧನಪಾದದ ಶಿಬಿರಾರ್ಥಿಗಳು ಹಠಯೋಗದ ಅಭ್ಯಾಸಗಳು, ಶಕ್ತಿಚಾಲನಕ್ರಿಯೆ, ಶಾಂಭವಿ ಮಹಾಮುದ್ರೆ, ಭಕ್ತಿ ಸಾಧನ ಮತ್ತು ಆದಿಯೋಗಿ ಪ್ರದಕ್ಷಿಣೆ ಸೇರಿದಂತೆ ಅನೇಕ ಸಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ. ವಿಷೇಶವಾಗಿ ಸಾಧನಪಾದ ಶಿಬಿರಾರ್ಥಿಗಳಿಗೋಸ್ಕರ ಅವರ ಸಾಧನೆಯನ್ನು ಮತ್ತಷ್ಟು ಗಾಢವಾಗಿಸಲು ಒಂದು ಭಾವಸ್ಪಂದನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.

ನಾವು ಈಗ ಸಾಧನಪಾದದಲ್ಲಿ ಅರ್ಧದಾರಿ ಕ್ರಮಿಸಿದ್ದೇವೆ ಮತ್ತು ಶಿಬಿರಾರ್ಥಿಗಳು ಒಂದು ಪ್ರಾಣಪ್ರತಿಷ್ಠೆಗೊಂಡ ವಾತಾವರಣದಲ್ಲಿ ಕೈಗೊಳ್ಳುವ ಸಾಧನೆಯ ಪರಿಣಾಮಗಳನ್ನು ಮನಗಾಣಲು ಪ್ರಾರಂಭಿಸಿದ್ದಾರೆ.

ಅಂತರ್ಮುಖರಾಗುವುದು

ಆಧ್ಯಾತ್ಮಿಕ ಮಾರ್ಗದಲ್ಲಿ ವ್ಯಕ್ತಿಯು ಬೆಳೆದಂತೆಲ್ಲಾ, ಆಗಾಗ ಹಿಂತಿರುಗಿ ನೋಡುವುದು ಮತ್ತು ಆಂತರ್ಯದಲ್ಲಿ ಏನು ಬದಲಾವಣೆಯಾಗಿದೆ ಎಂಬುದನ್ನು ಮನನ ಮಾಡುವುದು ಉಪಯುಕ್ತ. ಹಿಂದಿನ ಕೆಲವು ತಿಂಗಳುಗಳ ತೀವ್ರ ಸಾಧನೆಯಿಂದ ತಮ್ಮ ಜೀವನದ ಅನುಭವ ಹೇಗೆ ಬದಲಾಯಿತು ಎನ್ನುವುದನ್ನು ಶಿಬಿರಾರ್ಥಿಗಳು ಇಲ್ಲಿ ಹಂಚಿಕೊಂಡಿದ್ದಾರೆ.

life-in-sadhanapada-when-sadhana-begins-to-catch-fire-ishablog-participants-meditating

ನನ್ನೊಳಗಿನ ತಿಕ್ಕಾಟ ಕಡಿಮೆಯಾಗಿದೆ

“ನನ್ನಲ್ಲಾದ ಒಂದು ಮಹತ್ವದ ಬದಲಾವಣೆಯೆಂದರೆ, ಏನಾದರೂ ‘ಸಮಸ್ಯೆ‘ಯುಂಟಾದಾಗ ನಾನು ನನ್ನ ಸುತ್ತಲೂ ನೋಡದೆ ತನ್ನೊಳಗೇ ನೋಡಿಕೊಳ್ಳಲು ಬಯಸುತ್ತಿದ್ದೇನೆ. ನನ್ನ ವ್ಯಕ್ತಿತ್ವ, ನನ್ನ ಮಾತುಗಳು ಮತ್ತು ನನ್ನ ಕೆಲಸಗಳನ್ನು ಪರಿಶೋಧಿಸಿಕೊಳ್ಳುವ ಸಾಮರ್ಥ್ಯ ಅಪಾರವಾಗಿ ವೃದ್ಧಿಸಿದೆ. ಇದರಿಂದ, ನನ್ನೊಳಗಿನ ಮತ್ತು ನನ್ನ ಸುತ್ತಲಿಗೆ ತಿಕ್ಕಾಟ ತೀವ್ರವಾಗಿ ಕಡಿಮೆಯಾಗಿದೆ. “ – – ವೈಷ್ಣವಿ, 26, ಆಂಧ್ರಪ್ರದೇಶ

ತೀವ್ರತರ ಶಕ್ತಿಗಳು

“ಇಡೀ ದಿನದಲ್ಲಿ ನನ್ನ ಶಕ್ತಿಯಲ್ಲಿ ಮಹತ್ವ ಬದಲಾವಣೆಯಾಗಿರುವುದನ್ನು ನಾನು ನೋಡುತ್ತಿದ್ದೇನೆ, ನಾನು ಹಿಂದಿಗಿಂತ ಹೆಚ್ಚು ಚೈತನ್ಯಶೀಲ, ಶಕ್ತಿಯುತ ಹಾಗೂ ಸಮರ್ಥನಾಗಿದ್ದೇನೆ ಮತ್ತು ನಾನು ಏನೇ ಮಾಡುಲಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳತ್ತೇನೆ. ಸಾಧನಪಾದ ಪ್ರಾರಂಭವಾದಾಗಿನಿಂದ ಖಂಡಿತವಾಗಿ ಹೆಚ್ಚು ಸಮತೋಲನ ಮತ್ತು ಸ್ಪಷ್ಟತೆಯನ್ನು ಹೊಂದಿದ್ದೇನೆ ಮತ್ತು ಅತ್ಯದ್ಭುತ ಬದಲಾವಣೆಯೆಂದರೆ ಶಕ್ತಿಗಳು ತೀವ್ರಗೊಂಡಿರುವುದು. ಇದು ಪವಾಡಸದೃಶ ಮತ್ತು ನಂಬಲಸಾಧ್ಯವಾದದ್ದು – ಅದನ್ನು ಅನುಭವಿಸಿಯೇ ತಿಳಿಯಬೇಕು. ಸಾಧನಪಾದವು ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ – ಕಪಿಲ್, 18, ಮಹಾರಾಷ್ಟ್ರ

ಆದಿಯೋಗಿ ಪ್ರದಕ್ಷಿಣೆ + ಏಕಾದಶಿ = ಒಂದು ಸ್ಪೋಟಕ ಸಂಯೋಜನೆ

life-in-sadhanapada-when-sadhana-begins-to-catch-fire-bakthi-sadhanapada

ಸಾಧನಪಾದದ ಒಂದು ಮುಖ್ಯಭಾಗವೆಂದರೆ ಆದಿಯೋಗಿ ಪ್ರದಕ್ಷಿಣೆ -ಅಂದರೆ ಧ್ಯಾನಲಿಂಗ ಮತ್ತು 112 ಅಡಿಗಳ ಆದಿಯೋಗಿ ಮೂರ್ತಿಯನ್ನು ಸುತ್ತುಹಾಕುವ ಸಾಧನೆ, ಸುಮಾರು ಎರಡು ಕಿಲೋ ಮೀಟರುಗಳ ನಡಿಗೆ. ಈ ಪ್ರದಕ್ಷಿಣೆಯು ಒಂದು ಮಂತ್ರವನ್ನು ಪಠಿಸುತ್ತಾ ಮತ್ತು ಒಂದು ಮುದ್ರೆಯನ್ನು ಧರಿಸಿ ಮಾಡುವ ಪ್ರಕ್ರಿಯೆಯಾಗಿದ್ದು, ಈಶ ಯೋಗ ಕೇಂದ್ರದಲ್ಲಿರುವ ಅನೇಕ ಪ್ರಾಣಪ್ರತಿಷ್ಠಿತ ಸ್ಥಳಗಳ ಶಕ್ತಿಯನ್ನು ಹೀರಿಕೊಳ್ಳುವ ವಿಧಾನವಾಗಿದೆ. ಉಪವಾಸವನ್ನು ಆಚರಿಸುವ ಏಕಾದಶಿ ದಿನದಂದು, ಆದಿಯೋಗಿ ಪ್ರದಕ್ಷಿಣೆಯು ಇನ್ನಷ್ಟು ತೀವ್ರತರವಾದ ಅನುಭವವನ್ನು ನೀಡುತ್ತದೆ.

ಈ ಅನುಭವವು ನನ್ನನ್ನು ಪರವಶಗೊಳಿಸಿತು

ಈ ಅನುಭವವು ನನ್ನನ್ನು ಪರವಶಗೊಳಿಸಿತು “ಏಕಾದಶಿ ಬಂದಾಗಲೆಲ್ಲಾ ನಾನು ಉತ್ತೇಜಿತಗೊಳ್ಳುತ್ತೇನೆ, ಅದು ನನ್ನೊಳಗೆ ಅಪಾರವಾದ ಶಕ್ತಿಯನ್ನುಂಟುಮಾಡುತ್ತದೆ ಮತ್ತು ಅರಿವಿನ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಏಕಾದಶಿಯ ದಿನ ನಾವು ಉಪವಾಸ ಮಾಡಬೇಕಾಗಿತ್ತು ಮತ್ತು ನಾನು ಅದಕ್ಕೆ ಮಾನಸಿಕವಾಗಿ ತಯಾರಾಗಿದ್ದೆ, ನನಗೆ ಹಸಿವೂ ಇರಲಿಲ್ಲ. ನಾನು ಪ್ರದಕ್ಷಿಣೆ ಮಾಡುತ್ತಿದ್ದಾಗ ನನಗೆ ಮತ್ತೇರಿದಂತೆನಿಸಿತು ಆದರೆ ನಾನು ಜಾಗೃತವಾಗಿ ಮತ್ತು ನಿಯಂತ್ರಣದಲ್ಲೇ ಇದ್ದೆ. ನಾನು ಭಕ್ತಿಯಿಂದ ಮಂತ್ರವನ್ನು ಹೇಳುತ್ತಿದ್ದಂತೆಯೇ, ನನ್ನೊಳಗೆ ಏನೋ ಒಂದು ಮೇಲೇರಲು ಪ್ರಾರಂಭಿಸಿತು. ಇದಕ್ಕಿದ್ದಂತೆಯೇ ನಾನು ಹಗರುವಾದಂತೆನಿಸಿತು ಮತ್ತು ನನ್ನ ಶರೀರದ ಅರಿವು ಕನಿಷ್ಠ ಮಟ್ಟಕ್ಕೆ ಬಂತು. ಒಂದು ನಿರ್ದಿಷ್ಟ ಹಂತದಲ್ಲಿ, ಕೆಲವು ಸೆಕೆಂಡುಗಳ ಕಾಲ ನನ್ನ ಶರೀರ ನನ್ನಿಂದ ಬೇರೆ ಎಂಬ ಅನುಭವವಾಯಿತು –ನಡೆಯುತ್ತಿರುವ ಮನುಷ್ಯ ಮತ್ತು ಈ ಜಾಗೃತವಾಗಿರುವ ಮನುಷ್ಯ ಎರಡೂ ಬೇರೆ ಬೇರೆಯಾದಂತೆ. ಆ ದಿನ ಈ ಅನುಭವ ನನ್ನನ್ನು ಪರವಶಗೊಳಿಸಿತು. ಅನೇಕ ಪ್ರದಕ್ಷಿಣೆಗಳ ನಂತರವೂ ನನಗೆ ಆಯಾಸವಾಗಲಿಲ್ಲ. ವಾಸ್ತವವಾಗಿ ಅದು ನನಗೆ ಇನ್ನಷ್ಟು ಶಕ್ತಿಯನ್ನು ನೀಡಿತು. ಪ್ರತಿ ಏಕಾದಶಿಯು ನನಗೆ ಹೊಸ ಅನುಭವಗಳನ್ನು ತೆರೆದಿಡುತ್ತಿತ್ತು ಮತ್ತು ನಾನು ಅದನ್ನು ಪ್ರತಿ ಬಾರಿ ಮಾಡಿದಾಗಲೆಲ್ಲಾ ನನಗೆ ಅಚ್ಚರಿಯನ್ನುಂಟುಮಾಡುತ್ತಿತ್ತು. ನಾನು ಇಂತಹ ಪ್ರಕ್ರಿಯೆಯಲ್ಲಿರುವುದಕ್ಕೆ ಕೃತಜ್ಞನಾಗಿದ್ದೇನೆ” -ಮೂರ್ಛನ, 24, ಅಸ್ಸಾಂ.

ಭಕ್ತಿ ಸಾಧನೆ

ಒಬ್ಬನ ಹೃದಯದಲ್ಲಿ ಭಕ್ತಿಯಿದ್ದರೆ ಯಾವ ಅಡೆತಡೆಗಳೂ ಸವಾಲಾಗುವುದಿಲ್ಲ. ಈ ಅಂಶವನ್ನು ವೃದ್ಧಿಸಿಕೊಳ್ಳಲು, ಸದ್ಗುರುಗಳು ಭಕ್ತಿ ಸಾಧನ ಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ.

ನಾನು ಹೆಚ್ಚು ಜೀವಂತಿಕೆಯಿಂದ ಇದ್ದೇನೆ

“ಭಕ್ತಿ ಸಾಧನೆಯು ಅತ್ಯಂತ ಸಂಪನ್ನಗೊಳಿಸುವಂತಹದ್ದು. ನಾನು ಜಗತ್ತನ್ನು ನೋಡುವ ಮತ್ತು ಗ್ರಹಿಸುವ ವಿಧಾನ ಮತ್ತು ನನ್ನ ದೃಷ್ಟಿಕೋನ ಪೂರ್ತಿಯಾಗಿ ಬದಲಾಗಿದೆ. ನಾನು ಯಾವುದನ್ನು ಗೌರವಿಸಬೇಕು ಮತ್ತು ಯಾವುದನ್ನು ಗೌರವಿಸಬಾರದು, ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂದು ವರ್ಗೀಕರಿಸುವ ಅಭ್ಯಾಸದವಳಾಗಿದ್ದೆ. ಭಕ್ತಿ ಸಾಧನೆಯಿಂದ, ನಾನು ನೋಡುವ, ತಿಳಿದುಕೊಳ್ಳುವ ಎಲ್ಲಕ್ಕೂ ಒಂದು ನಿರ್ದಿಷ್ಟ ಮಹತ್ವವಿದೆ ಮತ್ತು ಅದನ್ನು ಗೌರವಿಸಬೇಕು ಎಂಬುದನ್ನು ಮನಗಂಡಿದ್ದೇನೆ. ಭಕ್ತಿಸಾಧನೆ ನನ್ನ ಅಹಂಕಾರವನ್ನು ಬದಿಗೊತ್ತಿ ನನ್ನನ್ನು ಹೆಚ್ಚು ಜೀವಂತಿಕೆಯಿಂದಿಡುತ್ತದೆ. ನಾನು ಜೀವನಕ್ಕೆ ತಲೆಬಾಗಲು ಕಲಿಯುತ್ತಿದ್ದೇನೆ.” –ಮೃದುಲ, 24, ಮಹಾರಾಷ್ಟ್ರ

ಒಂದು ಮಹತ್ವದ ಪರಿಶೀಲನಾ ಕೇಂದ್ರ

life-in-sadhanapada-when-sadhana-begins-to-catch-fire-monthly-meet

ಪ್ರತಿ ತಿಂಗಳು, ಇಡೀ ತಂಡ ಸದ್ಗುರುಗಳ ವಿಡಿಯೋಗಳನ್ನು ನೋಡಲು, ತಮ್ಮ ಸಾಧನಕ್ರಮಗಳನ್ನು ಸರಿಪಡಿಸಿಕೊಳ್ಳಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಒಂದೆಡೆ ಸೇರುತ್ತದೆ. ಪ್ರತಿಯೊಬ್ಬರೂ ಒಟ್ಟಾಗಿ, ತಮ್ಮ ಹಿಂದಿನ ತಿಂಗಳು ಹೇಗಿತ್ತು ಎಂಬುದನ್ನು ಸಿಂಹಾವಲೋಕನ ಮಾಡುತ್ತಾ, ಮುಂದಿನ ತಿಂಗಳಿಗೆ ತಯಾರಾಗುತ್ತಾ ತಮ್ಮ ಉದ್ಧೇಶವನ್ನು ಮರುಪ್ರಚೋದಿಸಿಕೊಳ್ಳುವ ಅವಕಾಶವಿದು.

ಇದು ನಾನು ಎಲ್ಲಿರಬೇಕು ಎಂಬುದರ ಗತಿಯನ್ನು ನಿರ್ಧರಿಸುತ್ತಿದೆ

“ನಾವೆಲ್ಲರೂ ಒಟ್ಟಾಗಿ ಈ ಸ್ಥಳದಲ್ಲಿ ಸೇರಿರುವುದು ಇಡೀ ತಂಡದೊಂದಿಗೆ ಒಂದು ಬಾಂಧವ್ಯವನ್ನು ಸೃಷ್ಟಿಸಿದೆ. ಮತ್ತು ನಾವು ನಮ್ಮ ಅನುಭವಗಳನ್ನು ಹಂಚಿಕೊಂಡಾಗ, ಅದು ನಾನು ಇಲ್ಲಿ ಯಾಕೆ ಇದ್ದೇನೆ ಎಂಬುದರ ಉದ್ಧೇಶವನ್ನು ಪುನಶ್ಚೇತನಗೊಳಿಸುತ್ತದೆ. ಈ ಪ್ರಯಾಣದಲ್ಲಿ ಅದು ಬಹುತೇಕ ಒಂದು ಪರಿಶೀಲನಾ ಕೇಂದ್ರದಂತೆ ಇದ್ದು, ನಾನು ಒಂದು ತಿಂಗಳ ಹಿಂದೆ ಹೇಗಿದ್ದೆ ಮತ್ತು ಈಗ ಹೇಗಿದ್ದೇನೆ ಎನ್ನುವುದನ್ನು ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಮರುಹೊಂದಿಸಿಕೊಳ್ಳಲು ಸಹಾಯಮಾಡುತ್ತಿದೆ. ಇದು ಭವಿಷ್ಯದಲ್ಲಿ ನಾನು ಎಲ್ಲಿ ಇರಬಯಸುತ್ತೇನೆ ಎಂಬುದರ ಗತಿಯನ್ನು ನಿರ್ಧರಿಸುತ್ತಿದೆ. –ಇಂದ್ರದೀಪ್, 35, ಟೆಕ್ಸಾಸ್, ಅಮೆರಿಕ

ಬಾಳೆಹಣ್ಣಿನ ವಿವಾದ –ಒಂದೇ ನಾಣ್ಯದ ಎರಡು ಮುಖ

life-in-sadhanapada-when-sadhana-begins-to-catch-fire-edgardo-Baran-banana

ಯೋಗ ಕೇಂದ್ರದಲ್ಲಿ, ನಮ್ಮ ಇಷ್ಟ ಕಷ್ಟಗಳ ಆಧಾರದ ಮೇಲೆ ನಾವು ನಿರ್ಮಿಸಿಕೊಂಡ ಮಿತಿಗಳು ಮತ್ತು ಇತರರೊಂದಿಗಿನ ನಮ್ಮ ನಿರೀಕ್ಷೆಗಳನ್ನು ನಮಗೆ ನಿರಂತರವಾಗಿ ನೆನಪಿಸಲಾಗುತ್ತದೆ.

ತುಂಬಾ ಹಣ್ಣಾಗಿದೆ!

ಬರನ್, 35, ಆಸ್ಟ್ರೇಲಿಯಾ ಇವರಿಂದ

“ಭಿಕ್ಷಾ ಹಾಲ್ ನಲ್ಲಿ, ನಮ್ಮ ಪ್ರಾರ್ಥನೆಯ ನಂತರ, ನಾನು ನನ್ನ ಕಣ್ಣುಗಳನ್ನು ತೆರೆದಾಗ ಒಂದು ಪೂರ್ತಿ ಹಣ್ಣಾದ ಬಾಳೆಹಣ್ಣು ತನ್ನನ್ನು ತಾನು ನನಗೆ ಸ್ವಇಚ್ಛೆಯಿಂದ ಅರ್ಪಿಸಿಕೊಳ್ಳುವ ರೀತಿಯಲ್ಲಿ ಕಂಡಿತು. ನನ್ನಲ್ಲಿ ಧನ್ಯತಾಭಾವ ಮೂಡಿತು.

ಕಪ್ಪು ಚುಕ್ಕೆಗಳಿದ್ದ ಅದರ ಸಿಪ್ಪೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅದರ ಸಮಯ ಮುಗಿದಿತ್ತು ಅಥವಾ ಇದೊಂದು ಜ್ಞಾನಿ ಬಾಳೆಹಣ್ಣಾಗಿರಬೇಕು. ನೋಡೋಣ.

ಅದರ ಸಿಪ್ಪೆಯನ್ನು ತೆಗೆಯುವಾಗ ಅದರ ಹಳದಿ ಬಣ್ಣದ ಶರೀರದಲ್ಲಿ ಕಂದು ಮತ್ತು ಬಿಳಿ ಬಣ್ಣದ ಭಾಗಗಳನ್ನು ಕಂಡೆ. ನಾನು ಹಳದಿ ಬಣ್ಣದ ತಿರುಳನ್ನು ಕಚ್ಚಿ ತಿಂದೆ ಮತ್ತು ಅದು ಸ್ವಲ್ಪ ಹುಳಿಯಾಗಿತ್ತು

ಆಗ ನನ್ನ ಹಾಗೂ ಬಡಿಸುತ್ತಿದ್ದ ಸ್ವಯಂ ಸೇವಕರೊಬ್ಬನ ಮಧ್ಯೆ ಹೀಗೆ ಮಾತುಕತೆ ನಡೆಯಿತು :

ನಾನು : ಈ ಬಾಳೆಹಣ್ಣು ಕೆಟ್ಟುಹೋಗಿದೆ. ಬೇರೆಯದನ್ನು ಕೊಡುತ್ತೀರಾ?

ಸ್ವಯಂಸೇವಕ : ಇದು ಚೆನ್ನಾಗೇ ಇದೆ, ತಿನ್ನಿ.

ನಾನು : ನನಗೆ ಹಣ್ಣಾದ ಬಾಳೆಹಣ್ಣುಗಳು ಇಷ್ಟವೇ, ಆದರೆ ಇದು ವಿಪರೀತ ಹಣ್ಣಾಗಿದೆ. ಕೊಳೆತು ಹೋಗಿದೆ.

ಸ್ವಯಂಸೇವಕ (ಬಾಳೆಹಣ್ಣನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಾ) : ಅದು ತಿನ್ನಲು ಸೂಕ್ತವಾಗಿದೆ. ನಾನೂ ಅಂತಹದ್ದನ್ನೇ ತಿನ್ನೋದು.

ನಾನು : ಹಾಗಾದರೆ ಅದನ್ನು ನೀವೇ ತಿನ್ನಿ….

‘ಈ ಬಾಳೆಹಣ್ಣನ್ನು ನಾನೇ ತಿನ್ನುತ್ತೇನೆ’ ಎಂದು ನಾನು ಯೋಚಿಸಿದೆ ಮತ್ತು ನಾನು ಆಮೇಲೆ ನನ್ನ ನಡವಳಿಕೆಯ ಬಗ್ಗೆ ಆ ಸ್ವಯಂಸೇವಕನಲ್ಲಿ ಕ್ಷಮೆ ಕೇಳುತ್ತೇನೆ ಎಂದುಕೊಂಡೆ. ಹತ್ತಿರದಿಂದ ಪರೀಕ್ಷಿಸಿ ನೋಡಿ, ನಾನು ಬಹಳ ಎಚ್ಚರಿಕೆಯಿಂದ ಬಾಳೆಹಣ್ಣಿನ ಹಳದಿ, ಕಂದು ಮತ್ತು ಬಿಳಿ ಬಣ್ಣದ ಭಾಗಗಳನ್ನು ತಿಂದೆ. ಅದು ಬೆಟ್ಟದ ಅಂಚಿನಲ್ಲಿ, ಸಾವನ್ನು ತಪ್ಪಿಸಿಕೊಳ್ಳುತ್ತಾ ನಡೆದಂತಿತ್ತು.

ಹೌದು, ಅದು ಸ್ವಲ್ಪ ಹುಳಿಯಾಗಿತ್ತು, ಆದರೆ ಅದು ಪರವಾಗಿಲ್ಲ, ನನ್ನ ಇಷ್ಟಾನಿಷ್ಟಗಳು ಬಾಳೆಹಣ್ಣಿನ ಬಂಧನವನ್ನು ಸೃಷ್ಟಿಸುತ್ತಿದೆ ಎಂದು ಯೋಚಿಸಿದೆ. 

ಆ ದಿನ ಮತ್ತೆ ಆ ಸ್ವಯಂಸೇವಕನನ್ನು ಭೇಟಿಯಾದಾಗ ಹೀಗೆ ಮಾತುಕತೆಯಾಯಿತು :

ಸ್ವಯಂಸೇವಕ : ನನ್ನನ್ನು ಕ್ಷಮಿಸಿ

ನಾನು :ಇಲ್ಲ, ನನ್ನನ್ನು ಕ್ಷಮಿಸಿ. ನಾನು ಬಾಳೆಹಣ್ಣನ್ನು ತಿಂದೆ, ಅದು ಚೆನ್ನಾಗಿತ್ತು –ನೀವು ಹೇಳಿದ್ದೇ ಸರಿ.

ಸ್ವಯಂಸೇವಕ : ಇಲ್ಲ, ನನ್ನನ್ನು ಕ್ಷಮಿಸಿ.

ನಾನು : ಕ್ಷಮಿಸುವ ಅಗತ್ಯವಿಲ್ಲ. ನಾನು ನಿಮ್ಮೊಂದಿಗೆ ಹಾಗೆ ಮಾತನಾಡಿದ್ದಕ್ಕೆ ನನಗೆ ಬೇಸರವಾಯಿತು.

ಸ್ವಯಂಸೇವಕ : ಇಲ್ಲ, ಕ್ಷಮಿಸಿ ಏಕೆಂದರೆ ನಾನು ನಿವು ತಿಂದತಹದ್ದೆ ಹಣ್ಣನ್ನು ತಿಂದ ಮತ್ತು ಈಗ ನನ್ನ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ. ನಿಮಗೆ ಕೊಟ್ಟ ಬಾಳೆಹಣ್ಣು ಕೆಟ್ಟುಹೋಗಿತ್ತು, ನೀವದನ್ನು ತಿನ್ನಬಾರದಿತ್ತು!

ನಾನು : …

life-in-sadhanapada-when-sadhana-begins-to-catch-fire-edgardo-Baran

ಅದು ಅಷ್ಟು ಹಣ್ಣಾಗಿಲ್ಲ!

ಎಡ್ಗಾರ್ಡೋ, 22, ಪೋರ್ಟೋ ರಿಕೋ

“ಭಿಕ್ಷಾ ಹಾಲ್‍ನಲ್ಲಿ ಊಟಮಾಡುವ ಮೊದಲು, ನಾನು ಬಡಿಸಲು ಇಷ್ಟಪಡುತ್ತೇನೆ. ಹಾಗಾಗಿ ನಾನು ಒಬ್ಬರಿಗೆ ಬಾಳಹಣ್ಣನ್ನು ಕೊಟ್ಟೆ ಮತ್ತು ಅವರು ಅದು ತುಂಬಾ ಹಣ್ಣಾಗಿದೆ ಮತ್ತು ಕೆಟ್ಟುಹೋಗಿದೆ ಎಂದರು. ನನಗೆ ಹಣ್ಣಾದ ಬಾಳಹಣ್ಣು ಇಷ್ಟ, ಹಾಗಾಗಿ ನಾನು, “ಅದು ಚೆನ್ನಾಗಿಯೇ ಇದೆ!” ಎಂದೆ. ಅವರು “ಹಾಗಾದರೆ ಅದನ್ನು ನೀವೇ ತಿನ್ನಿ” ಎಂದರು. ಅವರು ಹಾಗೆ ಹೇಳಿದಾಗ, ನಾನು ಪರಿಸ್ಥಿತಿಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಮನಗಂಡೆ.

ನಂತರ, ನಾನು ನನ್ನ ಉಪಾಹಾರ-ಭೋಜನಕ್ಕೆ ಕುಳಿತಾಗ, ನಾನು ಹಣ್ಣಾಗಿ ಕಪ್ಪಾಗಿರುವ ಬಾಳಹಣ್ಣಿಗಾಗಿ ಹುಡುಕಿದೆ. ‘ಸರಿ, ನಾನು ಬೇರೆಯವರಿಗೆ ಇದನ್ನು ಕೊಡಬಹುದಾದರೆ, ನಾನು ಇದನ್ನು ತಿನ್ನಬೇಕು”, ಹಾಗಾಗಿ ನಾನು ಜಾಸ್ತಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಂಡೆ. ನಾನು ಅದರ ಸಿಪ್ಪೆ ತೆಗೆದಾಗ, ಅದರ ವಾಸನೆ ಸ್ವಲ್ಪ ಅಸಹಜವಾಗಿತ್ತು, ಆದರೆ ನಾನು ಅದನ್ನು ತಿನ್ನಬೇಕೆಂದು ನಿರ್ಧಿರಿಸಿದ್ದೆ ಯಾಕೆಂದರೆ ನಾನು ಆ ಬಾಳಹಣ್ಣು ಚೆನ್ನಾಗಿಯೇ ಇದೆ ಎಂದು ಭಾವಿಸಿದ್ದೆ. ನಾನು ಅದನ್ನು ಬಾಯೊಳಗಿಟ್ಟುಕೊಂಡ ಕೂಡಲೇ ನನ್ನ ಹೊಟ್ಟೆ ತೊಳಸತೊಡಗಿತು! ಏನಾದರೂ ಆಗಲಿ ಎಂದು ನಾನು ಅದನ್ನು ಪೂರ್ತಿ ತಿಂದುಬಿಟ್ಟೆ. ಆಮೇಲೆ ಮುಂದಿನ ಸಲ ನಾನು ಸೇವೆಗೆ ಹೋದಾಗ ನಾನು ಮಾಡಿದ ಮೊದಲ ಕೆಲಸವೆಂದರೆ ಆ ವ್ಯಕ್ತಿಯನ್ನು ಹುಡುಕಿ ಕ್ಷಮಾಪಣೆಯನ್ನು ಕೇಳಿದ್ದು. ನಾನು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ತಪ್ಪು ತೀರ್ಮಾನ ತೆಗೆದುಕೊಂಡೆ ಮತ್ತು ಅರಿವಿಲ್ಲದೇ ಪ್ರತಿಕ್ರಿಯಿಸಿದೆ ಎಂದು ನಾನು ಅವರಿಗೆ ಹೇಳಿದೆ. ಅವರೂ ಸಹ ಪರಿಸ್ಥಿತಿಯ ಬಗ್ಗೆ ನಿಜವಾಗಿಯೂ ಮುಕ್ತಮನಸ್ಸಿನಿಂದ ಸಂಪೂರ್ಣ ವಿಭಿನ್ನ ಮನೋಭಾವವನ್ನು ತಾಳಿದ್ದರು. ನಾವು ವಿಷಯವನ್ನು ನಗುವಿನೊಂದಿಗೆ ಕೊನೆಗೊಳಿಸಿ ಹರ್ಷದಿಂದ ಕಾಲ ಕಳೆದೆವು. ನನ್ನ ಸಾಧನೆ ಕೆಲಸ ಮಾಡುತ್ತಿದೆ ಎನ್ನುವುದನ್ನು ಇಂತಹ ಸಣ್ಣ ಸಣ್ಣ ಕ್ಷಣಗಳು ತೋರಿಸುತ್ತವೆ.”

ಕೆಲಸ ಪ್ರಗತಿಯಲ್ಲಿದೆ

ಇನ್ನೂ ತುಂಬಾ ದೂರ ಸಾಗಬೇಕಿದೆಯಾದರೂ, ಪ್ರತಿಯೊಬ್ಬ ಶಿಬಿರಾರ್ಥಿಯೂ ತಮ್ಮ ದಾರಿಯಲ್ಲಿ ತಾವು ಸರಿಯಾಗಿ ಸಾಗುತ್ತಿದ್ದೇವೆ ಎನ್ನುವುದನ್ನು ಮನಗಂಡಿದ್ದಾರೆ.

ನಿಜವಾದ ಸ್ವಾತಂತ್ರ್ಯ

“ನಾನು ಬಯಸಿದ್ದು ಏನೇ ಮಾಡಿದರೂ ಅದರಲ್ಲಿ ಸ್ವಾತಂತ್ರ್ಯವನ್ನು ಅನುಭವಿಸುತ್ತೇನೆ ಎಂದು ನಾನು ಯಾವಾಗಲೂ ಯೋಚಿಸುತ್ತಿದ್ದೆ, ಆದರೆ ನಾನು ಇಲ್ಲಿಗೆ ಬಂದ ಮೇಲೆ ನಿಧಾನವಾಗಿ ನಿಜವಾದ ಸ್ವಾತಂತ್ರ್ಯದ ಕಡೆ ಕೆಲಸ ಮಾಡುತ್ತಿದ್ದೇನೆ – ಅದೇನೆಂದರೆ ಆಯ್ಕೆಗಳಿಂದ ಸ್ವಾತಂತ್ರ್ಯ. ನನ್ನ ಪಾಲಿಗೆ ಏನೇ ಬಂದರೂ ಅದರಲ್ಲಿ ನಾನು ಇನ್ನಷ್ಟು ತೊಡಗಿಕೊಂಡು ಸಂತೋಷದಿಂದ ಕೆಲಸ ಮಾಡುತ್ತಿದ್ದೇನೆ. ನಿಜವಾಗಿಯೂ ಸ್ವತಂತ್ರನಾಗುವುದೆಂದರೇನು ಎಂಬುದರ ರುಚಿಯನ್ನು ನಾನು ಕಾಣುತ್ತಿದ್ದೇನೆ ಎಂದು ಅನಿಸುತ್ತೆ.” –ಹಿಮಾಂಶು, 24, ಉತ್ತರಾಖಂಡ.

life-in-sadhanapada-when-sadhana-begins-to-catch-fire-ishablog-participants-laughing

ಇನ್ನು ಅಷ್ಟು ಗಂಭೀರವಾಗಿರುವುದಿಲ್ಲ

“ನಾನು ನನ್ನದೇ ಆದ ಒಂದು ಪೆಟ್ಟಿಗೆಯಲ್ಲಿ ಜೀವಿಸುತ್ತಿದ್ದೆ. ನಾನು ಯಾವಾಗಲೂ ಒಂದು ಗಂಭೀರ ಮುಖವನ್ನು ಹೊತ್ತು ತಿರುಗುತ್ತಿದ್ದೆ ಮತ್ತು ಜನರು ನಾನು ಕಟ್ಟಿಕೊಂಡ ಗೋಡೆಗಳನ್ನು ಬೀಳಿಸುವ ಪ್ರಯತ್ನ ಮಾಡಬೇಕಾಗಿತ್ತು. ನಾನೀಗ ಸುಲಭವಾಗಿ ಎಲ್ಲರೊಂದಿಗೂ, ಬಾಲ್ಯದಲ್ಲಿ ಹೇಗಿದ್ದೆನೋ ಹಾಗೆ, ಸಂತೋಷದಿಂದ ಮತ್ತು ಪ್ರೀತಿಯಿಂದ ವರ್ತಿಸುತ್ತಿದ್ದೇನೆ. ಮತ್ತೊಂದು ಮಹತ್ವದ ಬದಲಾವಣೆಯೆಂದರೆ, ವ್ಯಕ್ತಿ ಹೇಗೇ ಇರಲಿ, ಪರಿಸ್ಥಿತಿ ಹೇಗೇ ಇರಲಿ, ನಾನು ಪ್ರಜ್ಞಾಪೂರ್ಣವಾಗಿ ಸ್ಪಂದಿಸಲು ಸಾಧ್ಯವಾಗುತ್ತಿದೆ ಅಥವಾ ಮರುಕ್ಷಣವೇ ನಾನು ವಿವಶತೆಯಿಂದ ವರ್ತಿಸುತ್ತಿರುವುದನ್ನು ಮನಗಾಣಲು ಸಾಧ್ಯವಾಗುತ್ತಿದೆ. ನನ್ನ ನಿರ್ಬಂಧಿತ ಪ್ರತಿಕ್ರಿಯೆಗಳು ನನ್ನ ಸಹಜ ಸ್ವಭಾವ ಎಂದು ತಿಳಿದ ನನಗೆ ಇದು ಸಾಧ್ಯ ಅಂತ ಎಂದೂ ಅನಿಸಿರಲ್ಲ, ಅದೊಂದು ಸುಳ್ಳಾಗಿತ್ತು” –ವಿನೀತ, 30, ಪಂಜಾಬ್

ಶರೀರ ಮತ್ತು ಮನಸ್ಸುಗಳನ್ನು ಮೀರಿದ ಸಂಗತಿ

- ಅಶ್ವನಿ, 27, ಓಹಿಯೋ, ಯು.ಎಸ್.ಎ

ಸಾಧನಪಾದ – ಜೀವನಕ್ಕೊಂದು ವಿಮೆ

life-in-sadhanapada-when-sadhana-begins-to-catch-fire-sadhguru-sathsang-with-sadhanapada

ಸದ್ಗುರು (ಸಾಧನಪಾದದ ಶಿಬಿರಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ): ಆಧ್ಯಾತ್ಮಿಕ ಹಂಬಲಿಗ ಮತ್ತು ಲೌಕಿಕ ಜೀವನದ ರೀತಿಗಳನ್ನು ಪಾಲಿಸುವವರ ನಡುವಿನ ವ್ಯತ್ಯಾಸ ಇಷ್ಟೆ – ಲೌಕಿಕ ಜೀವನವನ್ನು ನಡೆಸುವವರು ಜೀವನವು ಅವರಿಗೆ ಚಾಟಿ ಏಟು ನೀಡಿದಾಗ ಓಡುವರು. ಹಣಕಾಸಿನ ಸಂಕಷ್ಟ ಅಥವಾ ಕುಟುಂಬದ ಸದಸ್ಯರಿಗೆ ಖಾಯಿಲೆ ಅಥವಾ ಇನ್ನೇನೋ ದುರಂತ ಸಂಭವಿಸಿದಾಗ, ಅವರು ಓಡುವರು. ಆದರೆ ಆಧ್ಯಾತ್ಮಿಕ ಸಾಧಕನಾಗುವುದೆಂದರೆ ನಿಮಗೆ ನೀವೇ ಛಾಟಿ ಏಟು ಕೊಟ್ಟುಕೊಳ್ಳುವಿರಿ. ಬೇರೆಯವರು ನಿಮಗೆ ಅದನ್ನು ಮಾಡುವವರೆಗೆ ನೀವು ಕಾಯುವುದಿಲ್ಲ! ನಿಮಗಾಗುವುದೆಲ್ಲವನ್ನೂ ನಿಮಗೆ ನೀವೇ ಮಾಡಿಕೊಳ್ಳುವಿರಿ. ಹಾಗಾಗಿ ಬೇರೆ ಯಾರೂ ನಿಮಗೆ ಏನನ್ನೂ ಮಾಡಲಾಗುವುದಿಲ್ಲ. ಇದೇ ಸ್ವಾತಂತ್ರ್ಯ, ತಿಳಿಯಿತೇ. ನಾನು ಹಲವಾರು ವರ್ಷಗಳ ಕಾಲ ಕುಳಿತುಕೊಂಡು ನನ್ನನ್ನು ನಾನು ಸಾಧ್ಯವಿರುವ ಎಲ್ಲಾ ರೀತಿಗಳಲ್ಲಿ ಟೀಕಿಸಿಕೊಂಡಿರುವುದರಿಂದ, ಇವತ್ತು ಜನ ಏನು ಹೇಳಿದರೂ ಪರವಾಗಿಲ್ಲ. ಈಗಾಗಲೇ ಅದನ್ನು ನನಗೆ ನಾನೇ ಹೇಳಿಕೊಂಡಿದ್ದೇನೆ, ಹಾಗಾಗಿ ತೊಂದರೆಯಿಲ್ಲ.

ನಿಮ್ಮ ಶರೀರ, ನಿಮ್ಮ ಮನಸ್ಸು ಮತ್ತು ನಿಮ್ಮ ಶಕ್ತಿಗಳು ನಿಮ್ಮ ಜೀವನದಲ್ಲಿ ಒಂದು ತೊಡಕಾಗಬಾರದು – ಇದೊಂದನ್ನು ನೀವು ಮಾಡಬೇಕು. ಸಾಧನಪಾದವೆಂದರೆ ಇದೇ. ನಿಮಗೆ ಇರುವುದು ಸೀಮಿತ ಸಮಯ, ಇನ್ನು ಮೂರೂವರೆ ತಿಂಗಳು ಅಷ್ಟೆ. ನೀವು ಇದರಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ನೀವು ಇದನ್ನು ಸರಿಯಾಗಿ ಬಳಸಿಕೊಂಡರೆ, ಮುಂದಿನ ಜೀವನದಲ್ಲಿ ಹಿಂದಿರುಗಿ ನೋಡಿದಾಗ ನೀವು ಯಾವಾಗಲೂ ಇದನ್ನೊಂದು ವಿಮೆಯಂತೆ ಕಾಣುವಿರಿ. ಜೀವನ ನಿಮ್ಮೆಡೆಗೆ ಏನನ್ನು ಎಸೆದರೂ ಪರವಾಗಿಲ್ಲ, ಈಗ ನೀವು ನಿಮ್ಮನ್ನು ಚೆನ್ನಾಗಿ ಸಶಕ್ತಗೊಳಿಸಿಕೊಂಡರೆ, ಯಾವುದೂ ನಿಮ್ಮನ್ನು ನಿಜವಾಗಿಯೂ ಘಾಸಿಗೊಳಿಸಲಾಗದು ಎಂಬುದನ್ನು ನೀವು ಕಾಣುವಿರಿ. ಒಮ್ಮೆ ಆ ಆಶ್ವಾಸನೆ ನಿಮಗಿದೆಯಾದರೆ, ನೀವು ಈ ಜಗತ್ತಿನಲ್ಲಿ ಮಹತ್ವಪೂರ್ಣ ಸಂಗತಿಗಳನ್ನು ಮಾಡುವಿರಿ. ನೀವು ಹಾಗಾಗಬೇಕೆನ್ನುವುದೇ ನಮ್ಮ ಇಚ್ಛೆ.

ಮುಂದೆ ಬರಲಿದೆ…

ಎಲ್ಲಾ ರೀತಿಯ ಆಧ್ಯಾತ್ಮಿಕ ಅನ್ವೇಷಕರ ತವರಾದ ಈಶ ಯೋಗ ಕೇಂದ್ರವನ್ನು ಎಲ್ಲಾ ರೀತಿಯ ಸಾಧಕರ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಪೋಷಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ವೈವಿಧ್ಯಮಯ ಆಧ್ಯಾತ್ಮಿಕ ಪ್ರಕ್ರಿಯೆಗಳು ವೈಯಕ್ತಿಕ ಬೆಳವಣಿಗೆಗೆ ಲಭ್ಯವಿರುವುದು ಕಾಕತಾಳೀಯವೇನಲ್ಲ. “ಸಾಧನಪಾದದಲ್ಲಿನ ಜೀವನ” ಸರಣಿಯಲ್ಲಿ ಮುಂದಿನ ಆವೃತ್ತಿಯಲ್ಲಿ ಸಾಧನಪಾದದ ಶಿಬಿರಾರ್ಥಿಗಳಿಗೆ ನೀಡಲ್ಪಟ್ಟ ವಿವಿಧ ಸೇವೆಗಳ ಸವಿಗಳ ಮಾದರಿ ನಮಗೆ ಸಿಗಲಿದೆ!

Editor’s Note: Find out more about Sadhanapada and pre-register for the upcoming batch here