2020 ರ ನವರಾತ್ರಿ ಹಬ್ಬದ ಅಂಗವಾಗಿ ಅಕ್ಟೋಬರ್ 17, ಅಕ್ಟೋಬರ್ 22 ಮತ್ತು ಅಕ್ಟೋಬರ್ 24 ರಂದು ದೇವೀ ಉಪಾಸನೆಯಲ್ಲಿ ಪಾಲ್ಗೊಳ್ಳಿರಿ. ನವರಾತ್ರಿ ಪೂಜೆಯನ್ನು ಲಿಂಗ ಭೈರವಿ ಫೇಸ್‍ಬುಕ್ ಮತ್ತು ಲಿಂಗಭೈರವಿ ಯೂಟ್ಯೂಬ್  ಚಾನಲ್‍ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು.

ಸದ್ಗುರು: ಸ್ತ್ರೀ ತತ್ವದ ಉಪಾಸನೆ ಭೂಮಿಯ ಮೇಲಿನ ಅತ್ಯಂತ ಪ್ರಾಚೀನ ಪದ್ಧತಿಯಾಗಿದೆ. ಇದು ಭಾರತದಲ್ಲಷ್ಟೇ ಅಲ್ಲದೆ, ಯುರೋಪ್, ಅರೇಬಿಯಾ ಮತ್ತು ಆಫ್ರಿಕಾದ ಬಹುಪಾಲು ಭಾಗಗಳಲ್ಲಿ ವ್ಯಾಪಕವಾಗಿ ನಡೆಯುತ್ತಿತ್ತು. ದುರದೃಷ್ಟವಶಾತ್, ಪಾಶ್ಚಿಮಾತ್ಯ ದೇಶಗಳಲ್ಲಿ, ನಾಸ್ತಿಕತೆ, ಬಹುದೇವತಾ ಪೂಜೆ ಮತ್ತು ವಿಗ್ರಹಾರಾಧನೆ ಮುಂತಾದ ಕಾರಣಗಳನ್ನು ಮುಂದಿಟ್ಟು ದೇವಿ ದೇವಸ್ಥಾನಗಳನ್ನು ಯಾವುದೇ ಕುರುಹುಗಳಿಲ್ಲದಂತೆ ನಾಶಪಡಿಸಲಾಗಿದೆ. ಪ್ರಪಂಚದ ಇನ್ನುಳಿದ ಭಾಗಗಳಲ್ಲಿಯೂ ಹೀಗೆಯೇ ಸಂಭವಿಸಿದೆ.

ಆದಾಗ್ಯೂ, ಭಾರತದ ಸಂಸ್ಕೃತಿಯಲ್ಲಿ ದೇವೀ ಉಪಾಸನೆಯನ್ನು ಇವತ್ತಿಗೂ ಉಳಿಸಿಕೊಳ್ಳಲಾಗಿದೆ. ನಮ್ಮ ಅಗತ್ಯಗಳಿಗೆ ಅನುಗುಣವಾಗಿ ನಮ್ಮದೇ ದೇವತಾ ಸ್ವರೂಪಗಳನ್ನು ಸೃಷ್ಟಿಸುವಂತಹ ಸ್ವಾತಂತ್ರ್ಯವನ್ನು ಈ ಸಂಸ್ಕೃತಿ ನಮಗೆ ನೀಡಿದೆ. ಪ್ರತಿಷ್ಠಾಪನೆ ಮಾಡುವ ವಿಜ್ಞಾನದ ಅರಿವಿನಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ತನ್ನದೇ ಆದ ದೇವಾಲಯವನ್ನು ನಿರ್ಮಿಸುವಂತೆ ನಮ್ಮ ಸಂಸ್ಕೃತಿ ಅನುವು ಮಾಡಿಕೊಟ್ಟಿದೆ. ಹಳ್ಳಿ ಹಳ್ಳಿಗಳಲ್ಲೂ ದೇವಿ ಅಥವಾ ಅಮ್ಮನವರ ದೇವಾಲಯಗಳನ್ನು ನಾವು ಕಾಣಬಹುದಾಗಿದೆ.

ಸ್ತ್ರೀ ತತ್ವದ ಕಣ್ಮರೆಯಾಗುತ್ತಿರುವ ದುರಂತ

ನಮ್ಮ ಜೀವನದಲ್ಲಿ ಬದುಕುಳಿಯುವ ಪ್ರಕ್ರಿಯೆಯೇ ಪ್ರಮುಖ ಅಂಶವಾಗಿರುವುದರಿಂದ, ಪುರುಷತ್ವಕ್ಕೆ ಸಮಾಜದಲ್ಲಿ ಮಹತ್ವ ಸಿಕ್ಕಿದೆ. ಕೇವಲ ಆರ್ಥಿಕತೆಯಷ್ಟೇ ಪ್ರೇರಕ ಶಕ್ತಿಯಾಗಿ ಮಾರ್ಪಟ್ಟಿದೆಯೇ ಹೊರತು ಸೌಂದರ್ಯಶಾಸ್ತ್ರವೋ, ನೃತ್ಯವೋ, ಸಂಗೀತವೋ, ಪ್ರೀತಿಯೋ, ದೈವತ್ವವೋ ಅಥವಾ ಧ್ಯಾನವೋ ಅಲ್ಲ. ಕೇವಲ ಅರ್ಥಶಾಸ್ತ್ರ ಸಮಾಜವನ್ನು ಆಳುತ್ತದೆಯೆಂದರೆ, ಜೀವನದ ಸೂಕ್ಷ್ಮಾತಸೂಕ್ಷ್ಮ ಅಂಶಗಳು ನಿರ್ಲಕ್ಷಿಸಿಲ್ಪಡುತ್ತದೆ. ಅಂತಹ ಜಗತ್ತನಲ್ಲಿ ಸ್ತ್ರೀ ತತ್ವವನ್ನು ಅಧೀನವಾಗಿಸುವುದು ಅನಿವಾರ್ಯವಾಗುತ್ತದೆ. ಇನ್ನೂ ದೊಡ್ಡ ದರಂತವೆಂದರೆ, ಅನೇಕ ಮಹಿಳೆಯರು ತಾವು ಪುರುಷರಂತೆ ಆಗಬೇಕು ಎಂದು ಭಾವಿಸುತ್ತಾರೆ, ಏಕೆಂದರೆ, ಪುರುಷತ್ವವು ಶಕ್ತಿಯನ್ನು ಉಚ್ಚರಿಸುತ್ತದೆ ಎಂದು ಅವರು ಭಾವಿಸತ್ತಾರೆ. ಸ್ತ್ರೀ ತತ್ವ ಕಳೆದುಹೋದರೆ, ಸುಂದರವಾದ, ಸೌಮ್ಯವಾದ, ಸ್ಪರ್ಧಾತ್ಮಕತೆಯಿಲ್ಲದ ಮತ್ತು ಜೀವನವನ್ನು ಪೋಷಿಸುವಂತಹ ಎಲ್ಲ ಅಂಶಗಳೂ ಕಣ್ಮರೆಯಾಗುತ್ತದೆ. ಜೀವನದ ಕಿಚ್ಚು ಶಾಶ್ವತವಾಗಿ ಕಳೆದುಹೋಗುತ್ತದೆ. ಇದು ಭರಿಸಲಾಗದಂತಹ ನಷ್ಟವಾಗಿದೆ, ಪುನಃ ಪಡೆದುಕೊಳ್ಳುವುದು ಸುಲಭವಲ್ಲ.

ಆಧುನಿಕ ಶಿಕ್ಷಣ ವ್ಯವಸ್ಥೆಯ ದುರದೃಷ್ಟಕರ ಪರಿಣಾಮವೆಂದರೆ ನಮ್ಮ ತರ್ಕಕ್ಕೆ ಅಥವಾ ಕಾರಣಕ್ಕೆ ಮನವರಿಕೆಯಾಗದ ಎಲ್ಲವನ್ನೂ ನಾವು ನಾಶ ಮಾಡಲು ಬಯಸುತ್ತೇವೆ. ನಾವು ಹೆಚ್ಚು ಪುರುಷ ಪ್ರಧಾನವಾಗಿರುವುದರಿಂದ, ದೇವತೆಗಳ ಪೂಜೆ ಹೆಚ್ಚಾಗಿ ಗುಪ್ತ ರೀತಿಯಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ದೇವಿ ದೇವಾಲಯಗಳಲ್ಲಿ, ಪ್ರಮುಖ ಪೂಜೆಯನ್ನು ಕೇವಲ ಒಂದು ಸಣ್ಣ ವರ್ಗದ ಜನರು ನಡೆಸುತ್ತಾರೆ. ಆದರೆ ಅದು ತುಂಬಾ ಆಳವಾಗಿ ಬೇರೂರಿರುವುದರಿಂದ ಅದನ್ನು ಸಂಪೂರ್ಣವಾಗಿ ಅಳಿಸಲಾಗುವುದಿಲ್ಲ.

ನವರಾತ್ರಿಯ ಹಬ್ಬ

ಭಾರತದಲ್ಲಿ ಆಚರಿಸಲಾಗುವ ನವರಾತ್ರಿ ಹಬ್ಬ ದೇವಿ ಪೂಜೆಗೆಂದೇ ಸಮರ್ಪಿಸಲಾಗಿದೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಸ್ತ್ರೀ ತತ್ವದ ಮೂರು ಆಯಾಮಗಳಾಗಿ ನೋಡಲಾಗತ್ತದೆ. ಇವು ಭೂಮಿ, ಸೂರ್ಯ ಮತ್ತು ಚಂದ್ರನ ಸಂಕೇತಗಳಾಗಿವೆ ಅಥವಾ ತಮಸ್ (ಜಡತ್ವ), ರಜಸ್ (ಚಟುವಟಿಕೆ, ಉತ್ಸಾಹ) ಮತ್ತು ಸತ್ವ (ಮೀರಿ ಹೋಗುವ, ಜ್ಞಾನ, ಶುದ್ಧತೆ) ಎಂದು ಕ್ರಮಬದ್ದವಾಗಿ ನೋಡಲಾಗುತ್ತದೆ. ಶಕ್ತಿ ಅಥವಾ ಅಧಿಕಾರಕ್ಕಾಗಿ ಆಶಿಸುವವರು, ಭೂಮಿತಾಯಿ ಅಥವಾ ದುರ್ಗಾ ಅಥವಾ ಕಾಳಿಯಂತಹ ಸ್ತ್ರೀ ರೂಪಗಳನ್ನು ಪೂಜಿಸುತ್ತಾರೆ. ಸಂಪತ್ತು, ಉತ್ಸಾಹ ಅಥವಾ ವಸ್ತು ಉಡುಗೊರೆಗಳಿಗಾಗಿ ಆಶಿಸುವವರು ಲಕ್ಷ್ಮಿ ಅಥವಾ ಸೂರ್ಯನನ್ನು ಪೂಜಿಸುತ್ತಾರೆ. ಜ್ಞಾನ, ಅಥವಾ ಮೃತ್ಯುವನ್ನೂ ಮೀರುವಂತಹ ಜ್ಞಾನವನ್ನು ಆಶಿಸುವವರು ಸರಸ್ವತಿ ಅಥವಾ ಚಂದ್ರನನ್ನು ಪೂಜಿಸುತ್ತಾರೆ.

ಜೀವನವು ನಿಗೂಢ ಮತ್ತು ಸದಾ ಕಾಲಕ್ಕೂ ತನ್ನ ನಿಗೂಢತೆಯನ್ನು ಉಳಿಸಿಕೊಂಡೇ ಇರುತ್ತದೆ. ನವರಾತ್ರಿ ಹಬ್ಬ ಈ ಒಂದು ಮೂಲಭೂತ ಒಳನೋಟವನ್ನು ಆಧರಿಸಿದೆ.

ನವರಾತ್ರಿಯ ಒಂಬತ್ತು ದಿನಗಳನ್ನು ಈ ಮೂಲ ಅಂಶಗಳ ಪ್ರಕಾರ ವರ್ಗೀಕರಿಸಲಾಗಿದೆ. ಮೊದಲ ಮೂರು ದಿನಗಳನ್ನು ದುರ್ಗಾ, ಮುಂದಿನ ಮೂರು ದಿನಗಳನ್ನು ಲಕ್ಷ್ಮಿಗೆ ಮತ್ತು ಕೊನೆಯ ಮೂರು ದಿನಗಳನ್ನು ಸರಸ್ವತಿಗೆ ಅರ್ಪಿಸಲಾಗಿದೆ. ಹತ್ತನೇ ದಿನ, ವಿಜಯದಶಮಿ, ಜೀವನದ ಈ ಮೂರು ಅಂಶಗಳ ಮೇಲಿನ ವಿಜಯವನ್ನು ಅದು ಸೂಚಿಸುತ್ತದೆ.

ಇದು ಕೇವಲ ಸಾಂಕೇತಿಕವಲ್ಲ, ಆದರೆ ಶಕ್ತಿಯ ಮಟ್ಟದಲ್ಲಿಯೂ ನಿಜವಾದ ಸಂಗತಿ. ಮನುಷ್ಯರಾಗಿ ನಾವು ಈ ಭೂಮಿಯ ಮೇಲೆ ಹುಟ್ಟುತ್ತೀವಿ ಮತ್ತು ಕ್ರಿಯಾಶೀಲರಾಗಿರುತ್ತೀವಿ. ಸ್ವಲ್ಪ ಸಮಯದ ನಂತರ, ಜಡತ್ವಕ್ಕೆ ಜಾರುತ್ತೀವಿ. ಇದು ನಮ್ಮೊಬ್ಬರಿಗೆ ಮಾತ್ರವಲ್ಲ, ಇಡೀ ನಕ್ಷತ್ರಪುಂಜಕ್ಕೂ ಮತ್ತು ಇಡೀ ಬ್ರಹ್ಮಾಂಡಕ್ಕೂ ಹೀಗೆಯೇ ಸಂಭವಿಸುತ್ತದೆ. ಬ್ರಹ್ಮಾಂಡವು ಜಡತ್ವದ ಸ್ಥಿತಿಯಿಂದ ಹೊರಹೊಮ್ಮುತ್ತದೆ, ಕ್ರಿಯಾತ್ಮಕವಾಗುತ್ತದೆ ಮತ್ತು ಮತ್ತೊಮ್ಮೆ ಜಡತ್ವಕ್ಕೆ ಇಳಿಯುತ್ತದೆ. ಆದಾಗ್ಯೂ, ಈ ಪುನರಾವೃತ್ತಿಯನ್ನು ಮುರಿಯುವಂತಹ ಸಾಮರ್ಥ್ಯ ನಮ್ಮಲ್ಲಿದೆ. ದೇವಿಯ ಮೊದಲ ಎರಡು ಆಯಾಮಗಳು ಮಾನವ ಉಳಿವು ಮತ್ತು ಯೋಗಕ್ಷೇಮಕ್ಕೆ ಅಗತ್ಯವಾಗಿವೆ. ಮೂರನೆಯದು ಎಲ್ಲವನ್ನೂ ಮೀರಿ ಹೋಗಬೇಕೆಂಬ ಆಕಾಂಕ್ಷೆ. ನೀವು ಸರಸ್ವತಿಯನ್ನು ಓಲೈಕೆ ಮಾಡಬೇಕೆಂದರೆ, ನೀವು ಬಹಳ ಶ್ರಮಿಸಬೇಕು. ಇಲ್ಲದಿದ್ದರೆ, ನೀವು ಅವಳನ್ನು ತಲುಪಲು ಸಾಧ್ಯವಿಲ್ಲ.

ನವರಾತ್ರಿಯನ್ನು ಆಚರಿಸುವ ಉತ್ತಮ ಮಾರ್ಗ ಯಾವುದು? ಉತ್ಸಾಹಭರಿತವಾಗಿ ಆಚರಿಸುವುದು. ಯಾವಾಗಲೂ ಜೀವನದ ಈ ಒಂದು ರಹಸ್ಯವನ್ನು ಎಲ್ಲರೂ ತಿಳಿಯಬೇಕು: ಯಾವುದೇ ವಿಷಯವಾಗಲಿ ಒಣ ಗಂಭೀರವಿಲ್ಲದೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಸಾಂಪ್ರದಯಿಕವಾಗಿ ಸದಾಕಾಲ ಪೂಜಿಸುತ್ತಾ ಬಂದವರಿಗೆ, ಈ ಅಸ್ತಿತ್ವದಲ್ಲಿ ಜೀವನ ನಿಗೂಢ ಮತ್ತು ಸದಾ ಕಾಲಕ್ಕೂ ತನ್ನ ನಿಗೂಢತೆಯನ್ನು ಉಳಿಸಿಕೊಂಡೇ ಇರುತ್ತದೆ ಎಂಬ ವಿಷಯ ತಿಳಿದಿರುತ್ತದೆ. ನೀವು ಅದನ್ನು ಆನಂದಿಸಬಹುದು, ಸಂಭ್ರಮ ಪಡಬಹುದು, ಆದರೆ ಅರ್ಥೈಸಲು ಸಾಧ್ಯವಿಲ್ಲ. ನವರಾತ್ರಿ ಹಬ್ಬದ ಆಚರಣೆ ಈ ಒಂದು ಮೂಲಭೂತ ಒಳನೋಟವನ್ನು ಆಧರಿಸಿದೆ.

ಸಂಪಾದಕರ ಟಿಪ್ಪಣಿ: 2020 ರ ನವರಾತ್ರಿ ಹಬ್ಬದ ಅಂಗವಾಗಿ ಅಕ್ಟೋಬರ್ 17, ಅಕ್ಟೋಬರ್ 22 ಮತ್ತು ಅಕ್ಟೋಬರ್ 24 ರಂದು ದೇವೀ ಉಪಾಸನೆಯಲ್ಲಿ ಪಾಲ್ಗೊಳ್ಳಿರಿ. ನವರಾತ್ರಿ ಪೂಜೆಯನ್ನು ಲಿಂಗ ಭೈರವಿ ಫೇಸ್‍ಬುಕ್ ಮತ್ತು ಲಿಂಗಭೈರವಿ ಯೂಟ್ಯೂಬ್  ಚಾನಲ್‍ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು.