ಯೋಗದ ಸಂಪೂರ್ಣ ಪ್ರಕ್ರಿಯೆಯು ಮನಸ್ಸಿನ ಮಿತಿಗಳನ್ನು ಮೀರುವ ಸಲುವಾಗಿದೆ. ನೀವು ನಿಮ್ಮ ಮನಸ್ಸಿನಲ್ಲಿ ಬೇರೂರಿರುವವರೆಗೂ, ಗತಕಾಲವು ನಿಮ್ಮನ್ನು ಆಳುತ್ತದೆ, ಏಕೆಂದರೆ ಮನಸ್ಸೆನ್ನುವುದು ಕೇವಲ ಗತಕಾಲದ ಒಂದು ಸಂಗ್ರಹವಾಗಿದೆಯಷ್ಟೆ. ನೀವು ಜೀವನವನ್ನು ಮನಸ್ಸಿನ ಮೂಲಕವಷ್ಟೇ ನೋಡುತ್ತಿದ್ದರೆ, ನಿಮ್ಮ ಭವಿಷ್ಯವನ್ನು ನೀವು ಹಿಂದಿನಂತೆಯೇ ಸೃಷ್ಟಿಸಿಕೊಳ್ಳುತ್ತೀರಿ, ಅಷ್ಟೆ. ಜಗತ್ತೇ ಇದಕ್ಕೆ ಸಾಕಷ್ಟು ಸಾಕ್ಷಿಯಾಗಿಲ್ಲವೇ? ವಿಜ್ಞಾನ, ತಂತ್ರಜ್ಞಾನ ಮತ್ತು ಇತರ ಹಲವು ವಿಷಯಗಳ ಮೂಲಕ ನಮಗೆ ಎಂತೆಂತಹ ಅವಕಾಶಗಳು ದೊರೆಯುತ್ತಿದ್ದರೂ, ನಾವುಗಳು ಪದೇ ಪದೇ ಮತ್ತದೇ ಹಿಂದಿನ ಅವಾಂತರಗಳನ್ನು ಪುನರಾವರ್ತಿಸುತ್ತಿಲ್ಲವೇ?

ಗತಕಾಲವು ಅಸ್ತಿತ್ವದಲ್ಲಿಲ್ಲ, ಆದರೆ ನೀವು ಅಸ್ತಿತ್ವದಲ್ಲಿ ಇಲ್ಲದಿರುವುದರ ಜೊತೆ ಹೋರಾಡುತ್ತಿದ್ದೀರಿ, ಮತ್ತು ಅದು ಒಂದು ವಾಸ್ತವದಂತೆಯೇ ನಡೆಯುತ್ತಿರುತ್ತದೆ.

ನಿಮ್ಮ ಸ್ವಂತ ಜೀವನವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅದೇ ಪುನರಾವರ್ತನೆಗಳು ಆಗುತ್ತಿರುವುದನ್ನು ನೀವು ನೋಡುತ್ತೀರಿ, ಏಕೆಂದರೆ ಮನಸ್ಸಿನ ಕನ್ನಡಿಯ ಮೂಲಕ ಮಾತ್ರ ಕಾರ್ಯನಿರ್ವಹಿಸುವವರೆಗೂ, ನೀವು ಹಳೆಯ ಮಾಹಿತಿಗಳ ಆಧಾರದ ಮೇಲೆ ಮಾತ್ರ ಕೆಲಸ ಮಾಡುತ್ತಿರುತ್ತೀರಿ. ಗತಕಾಲವನ್ನು ನಿಮ್ಮ ಮನಸ್ಸು ಮಾತ್ರ ಹೊತ್ತುಕೊಂಡಿದೆ. ನಿಮ್ಮ ಮನಸ್ಸು ಸಕ್ರಿಯವಾಗಿರುವ ಕಾರಣದಿಂದಷ್ಟೆ, ಗತಕಾಲ ಅಸ್ತಿತ್ವದಲ್ಲಿದೆ. ಒಂದುವೇಳೆ ನಿಮ್ಮ ಮನಸ್ಸು ಈಕ್ಷಣವೇ ನಿಂತುಹೋಗುತ್ತದೆ ಎಂದಿಟ್ಟುಕೊಳ್ಳೋಣ. ಆಗ ನಿಮ್ಮ ಗತಕಾಲವು ಇರುತ್ತದೆಯೇ? ಇಲ್ಲಿ ಗತಕಾಲವಿಲ್ಲ, ಇರುವುದು ವರ್ತಮಾನ ಮಾತ್ರ. ವರ್ತಮಾನವಷ್ಟೇ ವಾಸ್ತವ, ಆದರೆ ಗತಕಾಲ ನಮ್ಮ ಮನಸ್ಸಿನ ಮೂಲಕ ಅಸ್ತಿತ್ವದಲ್ಲಿದೆ. ಅಥವಾ ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮನಸ್ಸೆನ್ನುವುದು ಕರ್ಮ. ನೀವು ಮನಸ್ಸನ್ನು ಮೀರಿದರೆ, ನೀವು ಕರ್ಮಬಂಧನವನ್ನು ಸಂಪೂರ್ಣವಾಗಿ ಮೀರಿ ಹೋಗುತ್ತೀರಿ. ನೀವು ನಿಮ್ಮ ಕರ್ಮಗಳನ್ನು ಒಂದೊಂದಾಗಿ ಸವೆಸಲು ಬಯಸಿದರೆ, ಅದು ಲಕ್ಷಾಂತರ ವರ್ಷಗಳನ್ನು ತೆಗೆದುಕೊಳ್ಳಬಹುದು. ಕರ್ಮವನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ, ನೀವು ಇನ್ನಷ್ಟು ಹೊಸ ಕರ್ಮದ ಬುತ್ತಿಯನ್ನು ನಿರ್ಮಿಸುತ್ತಿರುತ್ತೀರಿ.

ನಿಮ್ಮ ಹಳೆಯ ಕರ್ಮದ ಬೆಟ್ಟ ಇಲ್ಲಿ ಸಮಸ್ಯೆಯೇ ಅಲ್ಲ. ಹೊಸ ಕರ್ಮಗಳನ್ನು ಹೇಗೆ ಸೃಷ್ಟಿಸಿಕೊಳ್ಳಬಾರದು ಎಂಬುದನ್ನು ನೀವು ಕಲಿಯಬೇಕು. ಅದು ತುಂಬಾ ಮುಖ್ಯ. ಹಳೆಯ ಸ್ಟಾಕ್ ಸ್ವತಃ ಸವೆದುಹೋಗುತ್ತದೆ; ಅದಕ್ಕಾಗಿ ದೊಡ್ಡದೇನನ್ನೂ ಮಾಡಬೇಕಾಗಿಲ್ಲ. ಆದರೆ ಇಲ್ಲಿ ಮೂಲಭೂತ ವಿಷಯವೆಂದರೆ, ಹೊಸ ಸ್ಟಾಕ್ ಅನ್ನು ಹೇಗೆ ಸೃಷ್ಟಿಸಬಾರದು ಎಂಬುದನ್ನು ನೀವು ಕಲಿಯುವುದಾಗಿದೆ. ಅಷ್ಟಾದರೆ, ಹಳೆಯ ಸ್ಟಾಕ್ ಅನ್ನು ಕಳೆದುಕೊಳ್ಳುವುದು ತುಂಬಾ ಸುಲಭ.

ನೀವು ನಿಮ್ಮ ಮನಸ್ಸನ್ನು ಮೀರಿದರೆ, ನಿಮ್ಮ ಕರ್ಮಬಂಧನವನ್ನೂ ಸಹ ಸಂಪೂರ್ಣವಾಗಿ ಮೀರುತ್ತೀರಿ. ನಿಮ್ಮ ಕರ್ಮಗಳನ್ನು ಕಳೆದುಕೊಳ್ಳಲು ನೀವು ನಿಜವಾಗಿಯೂ ಏನನ್ನೂ ಮಾಡಬೇಕಾಗಿಲ್ಲ, ಏಕೆಂದರೆ ನೀವು ನಿಮ್ಮ ಕರ್ಮಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ನೀವು ಅಸ್ತಿತ್ವದಲ್ಲಿ ಇಲ್ಲದಿರುವುದರೊಂದಿಗೆ ಗುದ್ದಾಡುತ್ತಿರುತ್ತೀರಿ. ಇದು ಮನಸ್ಸು ಹೆಣೆದಂತಹ ಒಂದು ಬಲೆ. ಗತಕಾಲವು ಅಸ್ತಿತ್ವದಲ್ಲಿಲ್ಲ, ಆದರೆ ನೀವು ಅಸ್ತಿತ್ವದಲ್ಲಿ ಇಲ್ಲದಿರುವುದರ ಜೊತೆ ಹೋರಾಡುತ್ತಿದ್ದೀರಿ, ಮತ್ತು ಅದು ಒಂದು ವಾಸ್ತವದಂತೆಯೇ ನಡೆಯುತ್ತಿರುತ್ತದೆ. ಇದು ಸಂಪೂರ್ಣ ಭ್ರಮೆ. ಮನಸ್ಸೇ ಇದಕ್ಕೆ ಆಧಾರ. ನೀವು ಮನಸ್ಸನ್ನು ಮೀರಿ ಹೋದರೆ, ನೀವು ಎಲ್ಲವನ್ನೂ ಒಂದೇ ಏಟಿನಲ್ಲಿ ಮೀರಿಬಿಡುತ್ತೀರಿ.

ಆಧ್ಯಾತ್ಮದ ವಿಜ್ಞಾನಗಳ ಸಂಪೂರ್ಣ ಪ್ರಯತ್ನವು ಯಾವಾಗಲೂ ಸಹ ಮನಸ್ಸನ್ನು ಹೇಗೆ ಮೀರುವುದು, ಮನಸ್ಸಿನ ಮಿತಿಗಳಿಂದಾಚೆಗೆ ಜೀವನವನ್ನು ಹೇಗೆ ನೋಡುವುದು ಎಂಬ ಬಗ್ಗೆಯಾಗಿದೆ. ಅನೇಕ ಜನರು ಯೋಗವನ್ನು ಹಲವು ರೀತಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. “ನೀವು ವಿಶ್ವದೊಂದಿಗೆ ಒಂದಾದರೆ ಅದು ಯೋಗ.”, “ನೀವು ನಿಮ್ಮನ್ನು ಮೀರಿ ಹೋದರೆ ಅದು ಯೋಗ.”, “ನೀವು ಭೌತಿಕ ನಿಯಮಗಳಿಗೆ ಒಳಪಡದಿದ್ದರೆ, ಅದು ಯೋಗ.” ಎಂದೆಲ್ಲಾ ಜನ ಹೇಳುತ್ತಾರೆ. ಇವೆಲ್ಲವೂ ಅತ್ಯದ್ಭುತವಾದ ನಿರೂಪಣೆಗಳಾಗಿವೆ, ಮತ್ತು ಅವುಗಳಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಿಮ್ಮ ಅನುಭವದ ಪ್ರಕಾರ, ನಿಮಗದರೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. “ನೀವು ದೇವರೊಂದಿಗೆ ಐಕ್ಯರಾದರೆ, ನೀವು ಯೋಗದಲ್ಲಿದ್ದೀರಿ.” ಎಂದು ಯಾರೋ ಹೇಳಿದ್ದಾರೆ. ಆದರೆ ನೀವು ಎಲ್ಲಿದ್ದೀರಿ ಎನ್ನುವುದೇ ನಿಮಗೆ ತಿಳಿದಿಲ್ಲ. ದೇವರು ಎಲ್ಲಿದ್ದಾನೆಂದೂ ಸಹ ನಿಮಗೆ ತಿಳಿದಿಲ್ಲ. ಹೀಗಿದ್ದಾಗ ಒಂದಾಗುವುದಾದರೂ ಹೇಗೆ?

“ನೀವು ನಿಮ್ಮ ಮನಸ್ಸಿನ ಮಾರ್ಪಾಡುಗಳಿಂದ ಮೇಲೇರಿದಾಗ, ನೀವು ನಿಮ್ಮ ಮನಸ್ಸನ್ನು ನಿಲ್ಲಿಸಿದಾಗ, ನೀವು ನಿಮ್ಮ ಮನಸ್ಸಿನ ಭಾಗವಾಗಿರುವುದು ನಿಂತುಹೋದಾಗ, ಅದೇ ಯೋಗ.” ಎಂದು ಪತಂಜಲಿ ಮಹರ್ಷಿಗಳು ನಿಖರವಾಗಿ ಹೇಳಿದ್ದಾರೆ. ಪ್ರಪಂಚದ ಎಲ್ಲಾ ಪ್ರಭಾವಗಳು ನಿಮ್ಮನ್ನು ಪ್ರವೇಶಿಸುತ್ತಿರುವುದು ನಿಮ್ಮ ಮನಸ್ಸೆಂಬ ಸಾಧನದ ಮೂಲಕ. ಸಂಪೂರ್ಣ ಅರಿವಿನಿಂದ ನಿಮ್ಮ ಮನಸ್ಸಿನ ಪ್ರಭಾವವನ್ನು ಮೀರಿ ಹೋಗಲು ನಿಮಗೆ ಸಾಧ್ಯವಾದರೆ, ನೀವು ಸ್ವಾಭಾವಿಕವಾಗಿಯೇ ಎಲ್ಲದರೊಂದಿಗೆ ಒಂದಾಗುತ್ತೀರಿ. ನೀವು ಮತ್ತು ನಾನು, ಸಮಯ ಮತ್ತು ಸ್ಥಳ ಎನ್ನುವ ಪ್ರತ್ಯೇಕತೆಗಳು ಮನಸ್ಸಿನಿಂದ ಮಾತ್ರ ಬಂದಿವೆ. ಅವೆಲ್ಲಾ ಮನಸ್ಸಿನ ಬಂಧನಗಳು. ನೀವು ಮನಸ್ಸನ್ನು ಕೈಬಿಟ್ಟರೆ, ನೀವು ಸಮಯ ಮತ್ತು ಸ್ಥಳವನ್ನು ಕೈಬಿಟ್ಟಿದ್ದೀರಿ ಎಂದರ್ಥ. ‘ಇದು, ಅದು’, ‘ಇಲ್ಲಿ, ಅಲ್ಲಿ’ ಎನ್ನುವುದೆಲ್ಲಾ ಇಲ್ಲ. ಈಗ ಮತ್ತು ಆಗ ಎನ್ನುವಂತದ್ದೂ ಇಲ್ಲ. ಎಲ್ಲವೂ ಇಲ್ಲಿಯೇ ಇದೆ ಮತ್ತು ಈ ಕ್ಷಣವೇ ಇದೆ.

ನೀವು ಮನಸ್ಸಿನ ಎಲ್ಲಾ ಮಾರ್ಪಾಡುಗಳು ಮತ್ತು ಅಭಿವ್ಯಕ್ತಿಗಳಿಗಿಂತ ಮೇಲೇರಿದರೆ, ನೀವು ಬಯಸಿದ ರೀತಿಯಲ್ಲಿ ನೀವು ನಿಮ್ಮ ಮನಸ್ಸಿನೊಂದಿಗೆ ಆಟವಾಡಬಹುದು. ನಿಮ್ಮ ಮನಸ್ಸನ್ನು ನಿಮ್ಮ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು, ಆದರೆ ನೀವು ಅದರ ‘ಒಳಗೆ’ ಜೀವಿಸಿದರೆ, ನೀವು ಎಂದಿಗೂ ಮನಸ್ಸಿನ ಸ್ವರೂಪವನ್ನು ಅರಿತುಕೊಳ್ಳುವುದಿಲ್ಲ.

ಈ ಲೇಖನವು “Mind Is Your Business,” ಎಂಬ ಈಶದವರ ಹೊಚ್ಚಹೊಸ ಪುಸ್ತಕದಿಂದ ಆಯ್ದ ಭಾಗವಾಗಿದ್ದು, ಈ ಪುಸ್ತಕ ಖರೀದಿ ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು Isha Downloadsನಲ್ಲಿ ಲಭ್ಯವಿದೆ

ಸಂಪಾದಕರ ಟಿಪ್ಪಣಿ: ಈ ಲೇಖನವನ್ನು ಈಶ ಹಠ ಯೋಗ ಶಾಲೆಯ 21 ವಾರಗಳ ಹಠ ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ. ಈ ಕಾರ್ಯಕ್ರಮವು ಯೋಗ ವ್ಯವಸ್ಥೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಮತ್ತು ಹಠ ಯೋಗವನ್ನು ಕಲಿಸಿಕೊಡುವ ಪ್ರಾವೀಣ್ಯತೆಯನ್ನು ಪಡೆಯಲು ಸರಿಸಾಟಿಯಿಲ್ಲದ ಅವಕಾಶವನ್ನು ನೀಡುತ್ತದೆ. ಮುಂದಿನ 21 ವಾರಗಳ ಕಾರ್ಯಕ್ರಮವು ಜುಲೈ 16, 2019 ರಿಂದ ಪ್ರಾರಂಭವಾಗಿ ಡಿಸೆಂಬರ್ 11, 2019 ರಂದು ಕೊನೆಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ,  www.ishahathayoga.com ಅಥವಾ info@ishahatayoga.com ಗೆ ಭೇಟಿ ನೀಡಿ.