ಸುಖ ದಾಂಪತ್ಯ ಜೀವನಕ್ಕೆ ಸೂತ್ರಗಳೇನು? ಯೋಗಿ ಮತ್ತು ಅನುಭಾವಿಯಾದ ಸದ್ಗುರುರವರು, ನೀವು ನಿಮ್ಮ ಸಂಗಾತಿಯೊಡನೆ ಒಂದು ಮಧುರವಾದ ಮತ್ತು ಆನಂದಭರಿತ ಬಾಂಧ್ಯವ್ಯದ ನಿರಂತರ ಪೋಷಣೆಗಾಗಿ ನೀಡಿರುವ ಪ್ರಮುಖವಾದ ಐದು ಸೂತ್ರಗಳು ಇಲ್ಲಿವೆ.

#1 ಮೊದಲಿಗೆ ಎರಡು “ಹೃದಯ ಪೂರ್ತಿ” ಪ್ರೀತಿಯನ್ನು ತೆಗೆದುಕೊಳ್ಳಿ

ಇಂಗ್ಲೀಷ್‌ನಲ್ಲಿ ಹೇಳುವ, “Fall in love”, ಅಂದರೆ "ಪ್ರೀತಿಯಲ್ಲಿ ಬೀಳುವುದು" ಎಂಬ ಮಾತು ಮಹತ್ವವುಳ್ಳದ್ದು. ಏಕೆಂದರೆ, ನೀವು ಪ್ರೀತಿಯಲ್ಲಿ ಏಳುವುದಿಲ್ಲ, ನೀವು ಪ್ರೀತಿಯಲ್ಲಿ ಹಾರುವುದಿಲ್ಲ, ನೀವು ಪ್ರೀತಿಯಲ್ಲಿ ನಡೆಯುವುದಿಲ್ಲ. ನೀವು ಪ್ರೀತಿಯಲ್ಲಿ ನಿಲ್ಲುವುದೂ ಇಲ್ಲ. ನೀವು ಪ್ರೀತಿಯಲ್ಲಿ ಬೀಳುವಿರಿ. ಏಕೆಂದರೆ, ನೀವೇನಾಗಿದ್ದೀರೋ ಅದು ಒಂದು ಮಟ್ಟಿಗೆ ನಿರ್ಗಮಿಸಬೇಕು. ಅದರ ಅರ್ಥವೆಂದರೆ, ನಿಮಗೆ ನಿಮ್ಮ ಜೀವನದಲ್ಲಿ ನಿಮಗಿಂತಲೂ ಬೇರೆ ಇನ್ಯಾರೋ ತುಂಬಾ ಪ್ರಮುಖರಾಗಿದ್ದಾರೆ. ನೀವು ನಿಮ್ಮನ್ನು ಕುರಿತೇ ಅತಿಯಾಗಿ ಚಿಂತಿಸದಿದ್ದರೆ ಮಾತ್ರ ನೀವು ಪ್ರೀತಿಯಲ್ಲಿರಬಹುದು. ನೀವು ’ನಾನು’ ಅಂದುಕೊಂಡಿರುವುದು ಕಳಚಿಬಿದ್ದಾಗ, ನಿಮ್ಮ ಆಂತರ್ಯದಲ್ಲಿ ಪ್ರೀತಿಯ ಒಂದು ಗಾಢವಾದ ಅನುಭವ ಉಂಟಾಗುತ್ತದೆ.

#2 ಅದಕ್ಕೆ ’ಅರ್ಥಮಾಡಿಕೊಳ್ಳುವಿಕೆ’ಯನ್ನು ಧಾರಾಳವಾಗಿ ಸೇರಿಸಿ

ಯಾರೊಡನೆಯಾದರೂ ಗಾಢವಾದ ಸಂಬಂಧ ಹೊಂದಿದಷ್ಟೂ ಅವರನ್ನು ಅರಿತುಕೊಳ್ಳಲು ಮತ್ತಷ್ಟು ಹೆಚ್ಚು ಶ್ರಮ ಪಡಬೇಕಾಗುತ್ತದೆ. ವ್ಯಕ್ತಿಯು ನಿಮಗೆ ಬಹಳ ಹತ್ತಿರ ಹಾಗೂ ಪ್ರಿಯವಾಗುವುದು ನೀವು ಅವರನ್ನು ಚೆನ್ನಾಗಿ ಅರ್ಥೈಸಿಕೊಂಡಾಗ ಮಾತ್ರ. ಅವರೂ ಸಹ ನಿಮ್ಮನ್ನು ಅರ್ಥಮಾಡಿಕೊಂಡರೆ, ಅವರು ಸಂಬಂಧದ ನಿಕಟತೆಯನ್ನು ಹೆಚ್ಚು ಆನಂದಿಸುತ್ತಾರೆ. ಅವರನ್ನು ಉತ್ತಮವಾಗಿ ಅರ್ಥಮಾಡಿಕೊಂಡರೆ, ನೀವು ಅವರ ಸಾಮೀಪ್ಯವನ್ನು ಆನಂದಿಸುವಿರಿ. ಇನ್ನೊಬ್ಬರು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸದಾ ನಿಮ್ಮನ್ನು ಅನುಸರಿಸಬೇಕು ಎಂಬುದನ್ನು ಅವರಿಂದ ನಿರೀಕ್ಷಿಸುತ್ತಾ, ನೀವು ಆ ವ್ಯಕ್ತಿಯ ಮಿತಿಗಳನ್ನು, ಸಾಧ್ಯತೆಗಳನ್ನು, ಅಗತ್ಯಗಳನ್ನು ಹಾಗೂ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳದೇ ಹೋದಲ್ಲಿ ಕೇವಲ ಘರ್ಷಣೆಗಳಷ್ಟೇ ಉಂಟಾಗುತ್ತದೆ.

ಪ್ರತಿಯೊಬ್ಬರಲ್ಲಿಯೂ ಕೆಲವು ಧನಾತ್ಮಕ ಹಾಗೂ ಕೆಲವು ಋಣಾತ್ಮಕ ಅಂಶಗಳಿರುತ್ತವೆ; ನೀವು ಇವೆಲ್ಲವನ್ನೂ ಅರ್ಥಮಾಡಿಕೊಂಡು ಸ್ವೀಕರಿಸಿದರೆ, ಸಂಬಂಧವನ್ನು ನೀವು ಅಪೇಕ್ಷಿಸಿದ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ಆದರೆ ನೀವು ಅದನ್ನು ಅವರ ತಿಳುವಳಿಕೆಗೆ ಬಿಟ್ಟರೆ ಸಂಬಂಧದ ಏಳುಬೀಳುಗಳು ಆಕಸ್ಮಿಕವಾಗುತ್ತದೆ. ಅವರು ತುಂಬಾ ಉದಾರ ಹೃದಯಿಗಳಾಗಿದ್ದರೆ ಸಂಬಂಧವು ಒಳ್ಳೆಯ ರೀತಿಯಲ್ಲಿ ನಡೆಯಬಹುದೇನೋ. ಇಲ್ಲದೆ ಹೋದರೆ, ಸಂಬಂಧವು ಕಡಿದು ಬೀಳುತ್ತದೆ. ಆ ಇನ್ನೊಬ್ಬ ವ್ಯಕ್ತಿಯು ತಾವಾಗಿಯೇ ನಿಮ್ಮನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ ಎಂದಲ್ಲ. ಆದರೆ ನೀವು ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅವರೂ ಕೂಡ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ಸನ್ನಿವೇಶಗಳನ್ನು ನೀವು ಸ್ವತಃ ನಿರ್ಮಿಸಬಲ್ಲಿರಿ.

 

#3 ಅದನ್ನು ಆವಾಗಾವಾಗ ಮಗುಚುತ್ತಿರಿ

ವಿವಾಹವು ಒಮ್ಮೆ ಕೈಗೊಂಡು ನಂತರ ಮರೆತುಬಿಡಬಹುದಾದಂತಹ ವಿಷಯವಲ್ಲ. ಅದು ಒಂದು ಸಕ್ರಿಯವಾದ ಪಾರ್ಟ್‌ನರ್‌ಶಿಪ್. ಎರಡು ಪ್ರತ್ಯೇಕ ಜೀವಗಳು, ಒಂದು ಸಾಮಾನ್ಯ ಉದ್ದೇಶದಿಂದ ಜೊತೆಯಾಗಿರುವ ಆಯ್ಕೆಯನ್ನು ಮಾಡಿಕೊಂಡು, ತಮ್ಮ ಸುಖ-ಸಂತೋಷವನ್ನು ವೃದ್ಧಿಸುವುದಕ್ಕಾಗಿ ಒಟ್ಟಾಗಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಈರ್ವರು ವ್ಯಕ್ತಿಗಳು ತಮ್ಮ ಜೀವನವನ್ನು ಒಂದಾಗಿ ಹೊಸೆದುಕೊಳ್ಳುವುದು ಒಂದು ವಿಶಿಷ್ಟ ಸೌಂದರ್ಯವನ್ನು ಹೊಂದಿರುತ್ತದೆ. 

ನೀವು ಯಾಕೆ ಜೊತೆಯಾದಿರಿ ಎಂದು ನೆನಪಿಸಲು ಭಾರತೀಯ ಸಂಪ್ರದಾಯದಲ್ಲಿ, ಮದುವೆಯಾದ ನಂತರ ವರುಷಕ್ಕೊಮ್ಮೆ ಒಂದು ವಿಶೇಷ ಆಚರಣೆಯನ್ನು ಮಾಡಲಾಗುತ್ತಿತ್ತು. ಆ ದಿನ ಮತ್ತೆ ನೂತನ ವಿವಾಹವಾಗುತ್ತದೆ. ಇಲ್ಲದೆ ಹೋದಲ್ಲಿ, ನೀವು ಎಂದೆಂದಿಗೂ ಅದರಲ್ಲಿಯೇ ಸಿಲುಕಿಗೊಂಡ ಭಾವನೆಯಲ್ಲಿರುತ್ತೀರಿ. ಇಲ್ಲ. ನೀವು ಪ್ರಜ್ಞಾಯುತರಾಗಿ ಒಂದಾಗಿರುವಿರಿ ಮತ್ತು ಅದನ್ನು ಪ್ರಜ್ಞಾಪೂರ್ವಕವಾಗಿಯೇ ನಿರ್ವಹಿಸಬೇಕು.

#4 ಸಂತೋಷದಿಂದ ಅದನ್ನು ಹದವಾಗಿ ಬೆಚ್ಚಗಾಗಿಸಿ

ಸಂಬಂಧಗಳು ನಿಜವಾಗಲೂ ಸುಂದರವಾಗಿರಬೇಕೆಂದರೆ ಬೇರೆಯವರನ್ನು ಕಂಡುಕೊಳ್ಳುವ ಮುನ್ನ, ವ್ಯಕ್ತಿಯು ಅಂತರ್ಮುಖಿಯಾಗಿ ತನ್ನನ್ನೇ ತಾನು ಅತ್ಯಂತ ಗಾಢವಾಗಿ ಅವಲೋಕಿಸಿಕೊಳ್ಳಬೇಕು. ನೀವೇ ಒಂದು ಆನಂದದ ಮೂಲವಾಗಿದ್ದರೆ ಮತ್ತು ನಿಮ್ಮ ಸಂಬಂಧವು ಆನಂದವನ್ನು ಹಂಚಿಕೊಳ್ಳುವುದಾಗಿದ್ದರೆ, ನೀವು ಯಾರೊಡನೆ ಬೇಕಾದರೂ ಅದ್ಭುತವಾದ ಸಂಬಂಧವನ್ನು ಹೊಂದಬಹುದು. ನಿಮ್ಮ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳುವುದಾದರೆ, ಈ ಪ್ರಪಂಚದಲ್ಲಿ ನಿಮ್ಮೊಡನೆ ಇರಲು ಇಷ್ಟಪಡದ ಯಾರಾದರೂ ಓರ್ವ ವ್ಯಕ್ತಿ ಇರುವನೇ? ಇಲ್ಲ. ಇನ್ನೋರ್ವ ವ್ಯಕ್ತಿಯೊಡನೆ ಬಾಳುವ ಸಮೃದ್ಧತೆಯ ಅನುಭವನ್ನು ಪಡೆಯಲು ನೀವು ಅಪೇಕ್ಷಿಸುವಿರಾದರೆ, ನಿಮ್ಮ ಮದುವೆಯು ನಿಮ್ಮ ಬಗ್ಗೆಯಾಗಿರಬಾರದು - ಅದು ಯಾವಾಗಲೂ ಇನ್ನೊಂದು ವ್ಯಕ್ತಿಯ ಕುರಿತಾಗಿದ್ದಿರಬೇಕು. ನೀವೀರ್ವರೂ ಇದೇ ರೀತಿಯಲ್ಲಿ ಯೋಚಿಸಿದರೆ, ವಿವಾಹವೆನ್ನುವುದು ಬರೀ ಒಂದು ಏರ್ಪಾಡಾಗಿ ಉಳಿಯುವುದಿಲ್ಲ, ಅದು ಒಂದು ಐಕ್ಯತೆಯಾಗಿರುತ್ತದೆ.

#5 ಅದನ್ನು ಒಬ್ಬರಿಗೊಬ್ಬರು ಅರ್ಪಿಸಿ

ನಿಮಗೆ ವಿವಾಹವು ಮತ್ತೊಬ್ಬ ವ್ಯಕ್ತಿಯಿಂದ ಸಂತೋಷವನ್ನು ಹೇಗೆ ಪಡೆದುಕೊಳ್ಳುವುದು, ಅವರು ನಿಮ್ಮ ಬಾಳನ್ನು ಹೇಗೆ ಸ್ವರ್ಗವಾಗಿಸಬಲ್ಲರು ಎಂಬಿತ್ಯಾದಿ ನಿರೀಕ್ಷಣೆಗಳ ಮೂಟೆಯಷ್ಟೇ ಆದರೆ, ನೀವು ಖಂಡಿತವಾಗಿ ನಿರಾಶೆಗೊಳಗಾಗುತ್ತೀರಿ. ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸಲ್ಪಡುತ್ತವೆ ಎಂದು ಹೇಳುತ್ತಾರೆ. ಹಾಗೇಕೆ ಹೇಳುವುದೆಂದರೆ ಅಧಿಕಾಂಶ ಜನರು ಅವರ ಮದುವೆಯನ್ನು ನರಕಸದೃಶವಾಗಿಸಿಬಿಟ್ಟಿದ್ದಾರೆ! ಮತ್ತೋರ್ವ ವ್ಯಕ್ತಿಯಿಂದ ಏನನ್ನಾದರೂ ಪಡೆಯುವುದಕ್ಕಾಗಿಯೇ ಸಂಬಂಧಗಳು ಉಂಟಾಗಿದ್ದಲ್ಲಿ, ನೀವು ಶ್ರಮವಹಿಸಿ ನಿರ್ವಹಿಸಿದರೂ, ಅಲ್ಲಿ ನಿರಂತರವಾಗಿ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ನಿಮ್ಮ ಸಂಬಂಧವು ಮತ್ತೋರ್ವ ವ್ಯಕ್ತಿಗೆ ಒಂದು ನಿವೇದನೆಯಂತಾದರೆ ಆಗ ಎಲ್ಲವೂ ಅದ್ಭುತವಾಗಿರುವುದು.

ಸಂಪಾದಕರ ಟಿಪ್ಪಣಿ: ಸುಖದಾಂಪತ್ಯದ ಈ ಸೂತ್ರಗಳು ಎಲ್ಲ ವಿವಾಹಿತರಿಗೆ ಇಷ್ಟವಾಗುವುದೆಂದು ಹಾರೈಸುತ್ತೇವೆ.

ಇನ್ನೂ ಹೆಚ್ಚಿನ ಒಳನೋಟಕ್ಕಾಗಿ ಸದ್ಗುರುಗಳ ಕನ್ನಡ ಫೇಸ್‌ಬುಕ್ ಪೇಜ್ ನೋಡಿ ಅಥವಾ ಅವರ ಮಾತುಗಳನ್ನು ಕನ್ನಡದಲ್ಲಿ ಕೇಳಲು ಅವರ ಕನ್ನಡ ಯೂಟ್ಯೂಬ್ ಚಾನೆಲ್ ನೋಡಿ - youtube.com/SadhguruKannada