ಪ್ರಶ್ನೆ: ನಾನು ನನ್ನ ಕ್ರಿಯಾಗಳನ್ನು ಮಾಡುವ ಸಮಯದಲ್ಲಿ ಗಮನವನ್ನು ಕೇಂದ್ರೀಕರಿಸಲು ಹೆಣಗಾಡುತ್ತಿದ್ದೇನೆ. ತಕ್ಕ ಮಟ್ಟಿಗೆ ಸುಧಾರಣೆಯಿದೆಯಾದರೂ, ಪ್ರಬಲವಾದ ಗಮನವನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಸಮಾಧಿಯ ಆಳವಾದ ಸ್ಥಿತಿಗಳನ್ನು ಹೇಗೆ ಅನುಭವಿಸುವುದು ಎಂದು ತಿಳಿಸಬಲ್ಲಿರಾ? 

ಸದ್ಗುರು: ಗಮನವನ್ನು ’ತರಲು ಪ್ರಯತ್ನಿಸ’ಬೇಡಿ, ತೊಡಗಿಸಿಕೊಳ್ಳಲು ನೋಡಿ. ಯಾವುದರಲ್ಲೇ ಆಗಲಿ ಆಳವಾಗಿ ತೊಡಗಿಸಿಕೊಂದರೆ ಗಮನವು ಸಹಜವಾಗಿ ಉಂಟಾಗುತ್ತದೆ. ತೊಡಗಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಗಮನವನ್ನು ತರಲು ಪ್ರಯತ್ನಿಸಿದರೆ, ಅದೊಂದು ಚಿತ್ರಹಿಂಸೆ; ಗಮನವು ಬರುವುದಿಲ್ಲ.

ಉದಾಹರಣೆಗೆ, ಬಹಳಷ್ಟು ಮಕ್ಕಳು ತಮ್ಮ ಪಠ್ಯಪುಸ್ತಕಗಳನ್ನು ಚಿತ್ರಹಿಂಸೆಯನ್ನಾಗಿ ನೋಡುತ್ತಾರೆ. ಇದರರ್ಥ ಅದರಲ್ಲಿರುವ ವಿಷಯಗಳು ಆಸಕ್ತಿದಾಯಕ ಎಂದಲ್ಲ. ಅನೇಕ ಅದ್ಭುತ ವಿಷಯಗಳನ್ನು ಆ ಸಣ್ಣ ಪುಸ್ತಕದಲ್ಲಿ ಇರಿಸಲಾಗಿದೆಯಾದರೂ, ಮಕ್ಕಳಲ್ಲಿ ಆಸಕ್ತಿ ಮೂಡಿಸುವ ರೀತಿಯಲ್ಲಿ ಬರೆಯಲ್ಪಟ್ಟಿರದೇ ಇರಬಹುದು. ಮಕ್ಕಳನ್ನು ಒಂದು ವಿಷಯದಲ್ಲಿ ತೊಡಗಿಸಿಕೊಳ್ಳುವಂತೆ ನೀವು ಮಾಡಿದರೆ, ಆಗ ಗಮನದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ. ಅವರು ಯಾವಾಗಲೂ ಸಂಪೂರ್ಣ ಗಮನದಿಂದಿರುತ್ತಾರೆ. ಅದೇ ನಿಮಗೂ ಅನ್ವಯವಾಗುತ್ತದೆ.

ಯಾವುದೇ ವಿಷಯದ ಕುರಿತು ನೀವು ತೊಡಗಿಸಿಕೊಳ್ಳುವಿಕೆಯಿಲ್ಲದೇ, ಕೇವಲ ಮಾನಸಿಕವಾಗಿ ಗಮನವನ್ನು ತಂದುಕೊಳ್ಳಲು ಪ್ರಯತ್ನಿಸಿದರೆ, ಅದು ಕೇವಲ ಚಿತ್ರಹಿಂಸೆಗೆ ಕಾರಣವಾಗುತ್ತದೆ. ಯಾವುದೇ ರೀತಿಯಲ್ಲಿ ಅದು ನಿಮ್ಮ ಯೋಗಕ್ಷೇಮಕ್ಕೆ ಕಾರಣವಾಗುವುದಿಲ್ಲ. ನಿಮ್ಮ ಗಮನವನ್ನು ನೆಲೆಸಬೇಕೆಂದಿರುವ ಯಾವುದಾದರೂ ವಿಷಯವಾಗಲಿ, ಅದರ ಕುರಿತು ಗಮನ ಹರಿಸಲು ಪ್ರಯತ್ನಿಸುವ ಬದಲಾಗಿ ಅದನ್ನು ನಿಮ್ಮ ಜೀವನದ ಪ್ರೀತಿಯ ಸಂಬಂಧವನ್ನಾಗಿಸಿ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ, ಆದರೆ ಬಹುಶಃ ಆಗ ನೀವು ಗಮನಹರಿಸಿಲ್ಲವೇನೋ!
 
ನೀವು ನಿಮ್ಮ ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದೀರಿ ಎಂದು ಭಾವಿಸೋಣ. ಆ ಹುಡುಗಿಯ ಮೇಲೆ ಗಮನ ಹರಿಸಲು ನಾನು ನಿಮಗೆ ಹೇಳಬೇಕೇ? ಇಲ್ಲ. ಅವಳು ನಿಮ್ಮ ಮನಸ್ಸನ್ನು ಆಳುವಳು. ಆದ್ದರಿಂದ, ನೀವು ಏನನ್ನಾದರೂ ಪ್ರೀತಿಸಬೇಕು ಅಷ್ಟೇ. ಆರಂಭಿಕವಾಗಿ, ನಿಮ್ಮಲ್ಲಿನ ಹಾರ್ಮೋನ್‍ನ ಕಿಚ್ಚಿನಿಂದಾಗಿ ನಿಮಗೆ ಕೆಲವು ರೀತಿಯ ವಿಷಯಗಳಲ್ಲಿ ಪ್ರೀತಿ ಮೂಡಬಹುದು. ಅದೇ, ನಿಮ್ಮ ಬುದ್ದಿವಂತಿಕೆಯ ಕಿಚ್ಚು ಹತ್ತಿತೆಂದರೆ, ನೀವು ಬಯಸಿದಂತಹ ಯಾವುದೇ ವಿಷಯವನ್ನು ಪ್ರೀತಿಸಬಹುದು ಎಂಬುದನ್ನು ಮನಗಾಣುತ್ತೀರಿ. ನಂತರ, ಗಮನ ನಿಮ್ಮಲ್ಲಿ ಸ್ವಾಭಾವಿಕವಾಗಿಯೇ ನೆಲೆಸುತ್ತದೆ.

Editor’s Note: In the ebook “A Guru Always Takes You For a Ride”, Sadhguru delivers rare insights into the Guru-shishya relationship. Name your price and download.