ರುದ್ರಾಕ್ಷ ಮಣಿಗಳ ಕುರಿತಾದ ಲೇಖನಕ್ಕೆ ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡು,  ಈಶ ಬ್ಲಾಗ್, ಈ ತಿಂಗಳ ಫಾರೆಸ್ಟ್ ಫ್ಲವರ್ (ಈಶ ಆಂಗ್ಲ ಮಾಸ ಪತ್ರಿಕೆ)ನಿಂದ ಮತ್ತೊಂದು ಲೇಖನವನ್ನು ಪ್ರಸ್ತುತ ಪಡಿಸುತ್ತಿದೆ. ಇತರೆ ಬೀಜಗಳಿಂದ ರುದ್ರಾಕ್ಷ ಮಣಿಯು ಏತಕ್ಕಾಗಿ ವೈಶಿಷ್ಟಪೂರ್ಣವಾಗಿದೆ ಎಂಬುದರ ಬಗ್ಗೆ ಮಾತಾಡುತ್ತಾ ಬೇರೆ ವಸ್ತುಗಳ ಕಂಪನವನ್ನು ಸಹ ಸದ್ಗುರುಗಳು ಪರಿಶೋಧಿಸುತ್ತಾರೆ.

Read in Hindi : रुद्राक्ष

ಪ್ರಶ್ನೆ: ಸದ್ಗುರುಗಳೇ, ರುದ್ರಾಕ್ಷದ ಬಗ್ಗೆ ಮತ್ತು ಇತರ ಬೀಜಗಳಿಂದ ಅದು ಹೇಗೆ ಭಿನ್ನವಾಗಿದೆ ಎಂಬುದರ ಬಗ್ಗೆ ಸ್ವಲ್ಪ ಮಾತನಾಡುತ್ತೀರಾ?

ಸದ್ಗುರು: ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟವಾದ ಕಂಪನವಿದೆ. ಒಂದು ನಿರ್ದಿಷ್ಟ ದಿಕ್ಕಿನಲ್ಲಿ ನಮ್ಮನ್ನು ಬೆಂಬಲಿಸುವ ವಿಷಯಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತೇವೆ. ರುದ್ರಾಕ್ಷ ಮಾತ್ರವಲ್ಲ - ಎಲ್ಲಾ ವಿಧದ ಸಸ್ಯಗಳು, ಹೂಗಳು, ಪ್ರಾಣಿಗಳು - ಯಾವುದು ನಮ್ಮನ್ನು ಆಧ್ಯಾತ್ಮಿಕ ಪಥದಲ್ಲಿ ಕರೆದೊಯ್ಯುತ್ತದೆ, ಯಾವುದು ಕರೆದೊಯ್ಯುವುದಿಲ್ಲವೆಂದು ಎಲ್ಲವನ್ನೂ ಗುರುತಿಸಲಾಗಿದೆ. ಉದಾಹರಣೆಗೆ, ಒಂದು ಮೇಕೆ ಉತ್ತಮ ಆಯ್ಕೆ ಅಲ್ಲ. ಎತ್ತು, ಹಾವು, ಅಥವಾ ನವಿಲು ಒಳ್ಳೆಯ ಆಯ್ಕೆಗಳು, ಏಕೆಂದರೆ ಈ ಜೀವಿಗಳು ಒಂದು ವಿಶಿಷ್ಟ ಸಂವೇದನತ್ವವನ್ನು ಹೊಂದಿರುತ್ತವೆ.

ನನಗೆ ಹತ್ತು-ಹನ್ನೊಂದು ವರ್ಷವಾಗಿದ್ದಾಗ, ನಾನು ಕಾಡುಗಳಲ್ಲಿ, ಚಾಮುಂಡಿ ಬೆಟ್ಟದಲ್ಲೆಲ್ಲ ತುಂಬಾ ಸಮಯವನ್ನು ಕಳೆಯುತ್ತಿದ್ದೆ. ನಾನು ಒಂದು ಜಾಗದಲ್ಲಿ ಸುಮ್ಮನೆ ಕುಳಿತರೆ, ಒಂದು ಮಧ್ಯಾಹ್ನದಲ್ಲಿ ಐದರಿಂದ ಹತ್ತು ನಾಗರಹಾವುಗಳನ್ನು ಹಿಡಿಯುತ್ತಿದ್ದೆ. ನಾನಿದಕ್ಕೊಂದು ಕುಶಲತೆಯನ್ನು ಬೆಳೆಸಿಕೊಂಡಿದ್ದೆ ಎನ್ನುವುದು ಇದಕ್ಕೆ ಕಾರಣವಾಗಿತ್ತು.

ಆ ಸಮಯದಲ್ಲಿ, ನನ್ನ ಕುಶಲತೆಯ ಬಗ್ಗೆ ನಾನು ತುಂಬಾ ಗರ್ವ ಪಡುತ್ತಿದ್ದೆ. ನಂತರದ ದಿನಗಳಲ್ಲಿ , ನಾನು ಧ್ಯಾನ(ನಿಜವಾಗಿಯೂ..!) ಮಾಡಲು ಆರಂಭಿಸಿದಾಗ, ನಾನು ಹಾವುಗಳನ್ನು ಹುಡುಕುವದರ ಬದಲು ಅವುಗಳೇ ನನ್ನ ಕಡೆಗೆ ಬರುತ್ತಿದ್ದವು ಎಂದು ನಾನು ಅರಿತುಕೊಂಡೆ. ಅನೇಕ ಬಾರಿ, ನಾನು ಕಾಡಿನಲ್ಲಿದ್ದಾಗ, ಸುಮ್ಮನೆ ಕುಳಿತಿದ್ದರೆ, ವಿಶೇಷವಾಗಿ ಮಧ್ಯಾಹ್ನ ಎರಡು ಮತ್ತು ಐದು ಗಂಟೆಯ ನಡುವೆ, ನಾನು ನನ್ನ ಕಣ್ಣು ತೆರೆದಾಗ, ಕನಿಷ್ಠ ಐದರಿಂದ ಎಂಟು ನಾಗರಹಾವುಗಳು ನನ್ನ ಸುತ್ತ ಇರುತ್ತಿದ್ದವು. ನೀವು ಧ್ಯಾನಸಕ್ತರಾದ ಕೂಡಲೆ, ಅವುಗಳು ನಿಮ್ಮ ಕಡೆ  ಸೆಳೆಯಲ್ಪಡುತ್ತವೆ. ಆ ರೀತಿಯ ಕಂಪನಗಳಿಗೆ ಆಕರ್ಷಿತವಾಗುವ  ಜೀವಿಗಳನ್ನು ಆಧ್ಯಾತ್ಮಿಕವಾದವುಗಳೆಂದು ಪರಿಗಣಿಸಲಾಗುತ್ತದೆ.

ಅಂತೆಯೇ, ಪವಿತ್ರ ಹೂವುಗಳ ವೈವಿಧ್ಯಮಯ ಬಗೆಗಳಿವೆ. ಒಂದು ನಿರ್ದಿಷ್ಟ ಹೂವು ಶಿವನಿಗೆ ಅಚ್ಚುಮೆಚ್ಚು, ಮತ್ತೊಂದು ವಿಷ್ಣುವಿಗೆ ಅಚ್ಚುಮೆಚ್ಚು ಎಂದು ಜನ ಹೇಳುವುದನ್ನು ನೀವು ಕೇಳಿದ್ದೀರಿ. ನಾವು ಶಿವ ಅಥವಾ ವಿಷ್ಣು ಅಥವಾ ಬೇರೆ ಯಾರನ್ನಾದರೂ ಉಲ್ಲೇಖಿಸುತ್ತೇವೋ, ಅವರುಗಳಿಗೆ ಸಮೀಪದ ಕಂಪನವಿರುವ ಹೂವುಗಳನ್ನು ಗುರುತಿಸಿದರು. ನೀವು ಅವುಗಳನ್ನು ಸ್ಪರ್ಶಿಸಿದರೆ ಅಥವಾ ಸ್ವೀಕರಿಸಿದರೆ, ಅವು ನಿಮ್ಮ ಮೇಲೊಂದು ನಿರ್ದಿಷ್ಟ ಪರಿಣಾಮ ಬೀರುತ್ತವೆ. ಆದ್ದರಿಂದ, ಕೆಲವು ವಿಧದ ಹೂವುಗಳನ್ನು  ಮಾತ್ರ ದೇವಾಲಯಗಳಲ್ಲಿ ನೀಡಲಾಗುತ್ತಿತ್ತು.

ನಾವಿದನ್ನು ಹಲವಾರು ವಿಧದ ಹೂವುಗಳನ್ನು ತಂದು, ರುದ್ರಾಕ್ಷ ಮಾಲೆಯನ್ನು ಅವುಗಳ ಮೇಲಿಟ್ಟು ನಿಮಗೆ ಇದನ್ನು ನಿರೂಪಿಸಬಹುದು. ರುದ್ರಾಕ್ಷ ಮಾಲೆಯು ಪ್ರದಕ್ಷಿಣಾಕಾರದಲ್ಲಿ ತಿರುಗಿದರೆ, ಅದು ಶಿವನಿಗೆ ಅರ್ಪಿಸಲು ಒಳ್ಳೆಯ ಹೂವು. ನೀವಿದನ್ನು ಕೇತಕಿ ಹೂವಿನೊಂದಿಗೆ ಪ್ರಯತ್ನಿಸಿದರೆ, ರುದ್ರಾಕ್ಷಿಗೆ ಇದು ಹಿಡಿಸುವುದಿಲ್ಲವೆಂದು ನೋಡುವಿರಿ. ಕೇತಕಿಯು ಶಿವನ ಮುಂದೆ ಸುಳ್ಳು ಸಾಕ್ಷಿಯನ್ನು ತಂದಿದ್ದು, ತರುವಾಯ ಆ ಹೂವನ್ನು ಶಿವನಿಗೆ ಅರ್ಪಿಸುವುದನ್ನು ನಿಷೇಧಿಸಿದ್ದರ ಬಗ್ಗೆ ಒಂದು ಕಥೆಯಿದೆ. ಜನರ ಮನಸ್ಸು ಮತ್ತು ಹೃದಯಗಳಲ್ಲಿ ಇದು ಆಳವಾಗಿ ಬೇರೂರಲಿ ಎಂದು ಇಂತ ಕಥೆಗಳನ್ನು ಹೇಳುವುದು, ಆದರೆ, ಇದರ ತಿರುಳಿಷ್ಟೆ - ಕಂಪನವು ಹೊಂದಿಕೆಯಾಗಬೇಕು – ಆಗ ಮಾತ್ರ ಸಂಪರ್ಕವು ಸ್ಥಾಪಿತವಾಗುತ್ತದೆ.

ರುದ್ರಾಕ್ಷವು ಅತ್ಯಂತ ವಿಶಿಷ್ಟವಾದ ಕಂಪನವನ್ನು ಹೊಂದಿರುವಂತಹ ವಸ್ತುಗಳಲ್ಲೊಂದು.

ಅದೇ ರೀತಿ, ಎಲ್ಲವನ್ನೂ ಅದರ ಕಂಪನದ ಪ್ರಕಾರ ಗುರುತಿಸಲಾಗಿದೆ. ರುದ್ರಾಕ್ಷವು ಅತ್ಯಂತ ವಿಶಿಷ್ಟವಾದ ಕಂಪನವನ್ನು ಹೊಂದಿರುವಂತಹ ವಸ್ತುಗಳಲ್ಲೊಂದು. ಅದನ್ನು ಕೇವಲ ನಿಮ್ಮ ಕೈಯಲ್ಲಿ ಹಿಡಿದುಕೊಂಡಾಗ, ನಿಮಗೆ ವ್ಯತ್ಯಾಸವು ತಿಳಿಯುತ್ತದೆ. ಆದರೆ, ನಿಮ್ಮ ರುದ್ರಾಕ್ಷವನ್ನು ನೀವು ಮೂರು ಅಥವಾ ಆರು ತಿಂಗಳ ಕಾಲ ಧರಿಸಿದ್ದರೆ, ಅದೊಂದು ರೀತಿಯಲ್ಲಿ ನಿಮ್ಮ ದೇಹದ ಜೊತೆ ಒಂದಾಗಿರುತ್ತದೆ. ಹಾಗಾಗಿ, ಪ್ರತಿ ವ್ಯಕ್ತಿಯ ರುದ್ರಾಕ್ಷವು ವಿಭಿನ್ನವಾಗಿರುತ್ತದೆ. ಆದಕ್ಕಾಗಿಯೇ ನಿಮ್ಮ ರುದ್ರಾಕ್ಷವನ್ನು ನೀವು ಯಾರಿಗೂ ಕೊಡಬಾರದು ಅಥವಾ ಬೇರೆಯವರ ರುದ್ರಾಕ್ಷವನ್ನು ತೆಗೆದುಕೊಳ್ಳಲೂ ಬಾರದು, ಏಕೆಂದರೆ ಅದು ನಿಮಗೆ ಅನುಕೂಲಕರವಾದ ನಿರ್ದಿಷ್ಟ ಕಂಪನವನ್ನು ಪಡೆದುಕೊಂಡಿರುತ್ತದೆ ಮತ್ತು ಅದರಲ್ಲಿ ನಿಮ್ಮದೇನೋ ಇರುತ್ತದೆ. ತಮಿಳುನಾಡು/ಕರ್ನಾಟಕ ಪ್ರದೇಶಗಳಲ್ಲಿ ಯಾರೂ ಬೇರೆಯವರ ಕೈಯಿಂದ ಉಪ್ಪು, ಎಳ್ಳು, ಅಥವಾ ಎಣ್ಣೆಯನ್ನು ತೆಗೆದುಕೊಳ್ಳುವುದಿಲ್ಲ. ಅವರು ಬೇರೆಯವರ ಕೈಯಿಂದ ಒಂದು ನಿಂಬೆ ಹಣ್ಣನ್ನೂ ಪಡೆಯುವುದಿಲ್ಲ. ಇದರ ಕಾರಣವೇನೆಂದರೆ, ಕೆಲವೊಂದು ವಸ್ತುಗಳು ಅವು ಸಂಪರ್ಕಕ್ಕೆ ಬರುವ ಯಾವುದೇ ವಸ್ತುವಿನ ಗುಣಲಕ್ಷಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ವಿಶೇಷವಾಗಿ ನಿಂಬೆಹಣ್ಣಿಗೆ  - ಧನಾತ್ಮಕ ಮತ್ತು ಋಣಾತ್ಮಕ - ಎಲ್ಲವನ್ನೂ ಸ್ಪಂಜಿನ ತರಹ ಹೀರಿಕೊಳ್ಳುವ ಸಾಮರ್ಥ್ಯವಿದೆ. ಅದಕ್ಕಾಗಿಯೇ ಅವನ್ನು ದೇವಸ್ಥಾನದಲ್ಲಿ ಮತ್ತು ವಾಮಾಚಾರದಲ್ಲಿಯೂ ಬಳಸುತ್ತಾರೆ.

ರುದ್ರಾಕ್ಷಕ್ಕೂ ಈ ಗುಣವಿದೆ - ಒಂದು ರೀತಿಯಲ್ಲಿ ಅದು ನಿಮ್ಮ ದೇಹದ ಭಾಗವಾಗುತ್ತದೆ. ನೀವದನ್ನು ಒಂದು ಅಥವಾ ಎರಡು ವರ್ಷ,  ದಿನದ ಇಪ್ಪತ್ತನಾಲ್ಕು ಗಂಟೆಗಳು ಧರಿಸಿದ್ದು, ಒಂದು ದಿನ ಅದನ್ನು ತೆಗೆದಿಟ್ಟು ಮಲಗಲು ಪ್ರಯತ್ನಿಸಿದರೆ, ನಿಮಗೆ ನಿದ್ರೆ ಬರುವುದಿಲ್ಲ. ನಿಮ್ಮ ದೇಹದ ಒಂದು ಭಾಗ ಕಾಣೆಯಾಗಿದೆ ಎಂದೆನಿಸುತ್ತದೆ, ಏಕೆಂದರೆ ಆ ರುದ್ರಾಕ್ಷವು ನಿಮ್ಮ ಭಾಗವಾಗಿ, ಒಂದು ಹೆಚ್ಚುವರಿ ಅಂಗವಾಗಿ ಕೆಲಸ ಮಾಡುತ್ತಿರುತ್ತದೆ. ಈ ಅಂಗದ ಮುಖ್ಯ ಉದ್ದೇಶವೇನೆಂದರೆ, ನಿಮ್ಮನ್ನು ಅನುಗ್ರಹಕ್ಕೆ ಲಭ್ಯವಾಗುವಂತೆ ಮಾಡುವುದು. ಏಕೆಂದರೆ, ನೀವು ಯಾವುದೇ ಯೋಗಾಭ್ಯಾಸಗಳನ್ನು ಮಾಡಿದರೂ, ಕೊನೆಗೆ ಅನುಗ್ರಹಕ್ಕೆ ಲಭ್ಯವಾದರೆ ಮಾತ್ರ ನೀವೊಂದು ಸಾಧ್ಯತೆಯಾಗಬಹುದು. ಈ ಕಾರಣಕ್ಕಾಗಿಯೇ ಭಕ್ತರು ಬಹುಬೇಗ ಅನುಗ್ರಹಕ್ಕೆ ಪಾತ್ರರಾಗುತ್ತಾರೆ, ಏಕೆಂದರೆ ಅವರು ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಆ ಸಮರ್ಪಣಾ ಭಾವ ಇಲ್ಲದಿದ್ದರೆ, ಯೋಗವು ಒಂದು ದೊಂಬರಾಟವಲ್ಲದೆ ಬೇರೇನೂ ಆಗಿರುವುದಿಲ್ಲ.

ರುದ್ರಾಕ್ಷದ ಇನ್ನೊಂದು ಗುಣವೆಂದರೆ, ಅದು ಆರೋಗ್ಯವನ್ನು ಉಂಟುಮಾಡುತ್ತದೆ. ಯಾರೆಲ್ಲರಿಗೂ ಕೇವಲ ಕತ್ತೆಯ ಹಾಗೆ ಹೆಚ್ಚು ವರ್ಷಗಳ ಕಾಲ ಬದುಕುವ ಆಸಕ್ತಿ ಇದೆಯೋ, ಅವರಿಗಿದು ಮುಖ್ಯವಾದ ಅಂಶ. ನಿಜವಾಗಿಯೂ ಇಂತಹವರಿಗೆ ಅವರು ಹೇಗೆ ಬದುಕುತ್ತಾರೆ ಎನ್ನುವುದರ ಬಗ್ಗೆ ಆಸಕ್ತಿ ಇಲ್ಲ - ಅವರಿಗೆ ಹೆಚ್ಚು ಕಾಲ ಬದುಕಬೇಕಷ್ಟೆ. ಏತಕ್ಕಾಗಿ? ನೀವು ಅವರ "ಸಂತೋಷದ ಮೀಟರ್"-ಅನ್ನು ನೋಡಿದರೆ, ಬೆಳಗ್ಗೆಯಿಂದ ಸಂಜೆವರೆಗೂ, ಅದರಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಅವರು ಸಾವಿನ ಭಯದಿಂದಾಗಿ ಮಾತ್ರ ಹೆಚ್ಚು ಕಾಲ ಬದುಕಲು ಇಚ್ಛಿಸುತ್ತಾರೆ. ತಮ್ಮ ಬದುಕನ್ನು ಹಿಡಿದಿಟ್ಟುಕೊಳ್ಳುವಂತಹ ಅಸಾಧಾರಣವಾದದ್ದೇನೂ ಅವರ ಜೀವನದಲ್ಲಿ ನಡೆಯುತ್ತಿರುವುದಿಲ್ಲ. ಮುಂದೆ ಏನಾಗುವುದೆಂದು ಅವರಿಗೆ ತಿಳಿದಿಲ್ಲದಿರುವುದರಿಂದ ಅವರು ಬದುಕನ್ನು ಹಿಡಿದಿಟ್ಟುಕೊಳ್ಳ ಬಯಸುತ್ತಾರೆ.

ನೀವು ಅನುಗ್ರಹಕ್ಕೆ ಲಭ್ಯವಾಗದಿದ್ದರೆ, ನೀವೇನೇ ಮಾಡಿದರೂ, ಜೀವನದ ಯಾವುದೇ ಭಾಗದಲ್ಲೂ ಯಶಸ್ಸಿರುವುದಿಲ್ಲ - ಅದು ಆಧ್ಯಾತ್ಮಿಕ ಪ್ರಕ್ರಿಯೆಯಾಗಿರಬಹುದು, ಆರೋಗ್ಯ, ಸಂಪತ್ತು ಅಥವಾ ಇನ್ನೇನೇ ಆಗಿರಬಹುದು. ಒಂದೋ, ನೀವದಕ್ಕೆ ಪ್ರಜ್ಞಾಪೂರ್ವಕವಾಗಿ ಅಥವಾ ನಿಮಗೆ ಅರಿವಿಲ್ಲದ ಹಾಗೆ ಲಭ್ಯವಾಗಬೇಕು, ನಿಮ್ಮದೇ ರೀತಿಯಲ್ಲಿ. ಸ್ವಲ್ಪ ಪ್ರಮಾಣದ ಅನಗ್ರಹವಿಲ್ಲದೆ, ಯಾವ ಮನುಷ್ಯ, ಯಾವ ಜೀವಿಗೂ ಬದುಕಿರಲು ಸಾಧ್ಯವಿಲ್ಲ. ಆದರೆ ನೀವು ಅನುಗ್ರಹವನ್ನು ಪ್ರಜ್ಞಾಪೂರ್ವಕವಾಗಿ ನಿಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಂಡರೆ, ಎಲ್ಲವೂ ಸುಲಭವಾಗಿ ಮತ್ತು ಸಲೀಸಾಗಿ ನಡೆಯುತ್ತದೆ, ಕೀಲೆಣ್ಣೆ ಹಾಕಿದ ಜೀವನದಂತಿರುತ್ತದೆ. ರುದ್ರಾಕ್ಷವು ಆ ಸಾಧ್ಯತೆಯನ್ನು ವರ್ಧಿಸುತ್ತದೆ. ನಮಗೆ ಲಭ್ಯವಿರುವ ಪ್ರತಿಯೊಂದು ಬೆಂಬಲವನ್ನು ನಾವು ಬಳಸಿಕೊಳ್ಳಬೇಕು.

ಸಂಪಾದಕರ ಟಿಪ್ಪಣಿ: ಈಶ ಕೇಂದ್ರದಲ್ಲಿ ರುದ್ರಾಕ್ಷ ಮಾಲೆಯನ್ನು ಹೆಚ್ಚು ಕಾಳಜಿಯಿಂದ ತಯಾರಿಸಲಾಗುತ್ತದೆ, ಮತ್ತು ಗರಿಷ್ಠ ಪ್ರಯೋಜನವನ್ನು ನೀಡಲು ಅವನ್ನು ಪ್ರತಿಷ್ಟೀಕರಿಸಲಾಗಿದೆ. ಇದು ಪವಿತ್ರವಾದುದು ಮತ್ತು ಶಕ್ತಿಯುಳ್ಳದಾಗಿರುತ್ತದೆ.
ರುದ್ರಾಕ್ಷ ಮಾಲೆಯನ್ನು ಈಶ ಶಾಪಿಯಲ್ಲಿ ishashoppe.com ಖರೀದಿಸಬಹುದು.

ಈ ಲೇಖನವು "ಫ಼ಾರೆಸ್ಟ್ ಫ಼್ಲವರ್" (ಈಶಾದ ಆಂಗ್ಲ ಮಾಸ ಪತ್ರಿಕೆ)ಯ 2014 ಸಂಚಿಕೆಯ (June 2014 issue of Forest Flower)ಆಯ್ದ ಭಾಗವನ್ನು ಆಧರಿಸಿದೆ. ನಿಮಗೆ ಬೇಕಾದ ಮೊತ್ತವನ್ನು ಪಾವತಿಸಿ ಮತ್ತು ಡೌನ್ಲೋಡ್ ಮಾಡಿ. ಮುದ್ರಿತ ಪ್ರತಿಗಳು (Print subscriptions) ಕೂಡ ಲಭ್ಯವಿದೆ.