ದೀಪಗಳನ್ನು ಬೆಳಗಿಸುವುದರ ಮಹತ್ವ
ಒಂದು ಪುಟ್ಟ ಎಣ್ಣೆಯ ಹಣತೆ ಅಥವಾ ದೀಪವು ಕೇವಲ ಬೆಳಕು ಅಥವಾ ಸೌಂದರ್ಯವನ್ನಷ್ಟೇ ಕೊಡುವುದಲ್ಲದೇ, ತನ್ನದೇ ಆದ ವಿಶೇಷತೆಯನ್ನು ಹೊಂದಿದೆ ಎಂದು ಸದ್ಗುರುಗಳು ಹೇಳುತ್ತಾರೆ. ನಮ್ಮ ಮನೆಗಳಲ್ಲಿ ಒಂದು ಬಲವಾದ ಮತ್ತು ಸಕಾರಾತ್ಮಕ ವಾತಾವರಣವನ್ನು ಹೇಗೆ ಸೃಷ್ಟಿಸಬಹುದು ಎಂದು ತಿಳಿದುಕೊಳ್ಳಿ.
ವಿದ್ಯುದ್ದೀಪಗಳು ಬಳಕೆಗೆ ಬರುವ ಮೊದಲು ಎಣ್ಣೆಯ ದೀಪಗಳು ಪ್ರಪಂಚದಾದ್ಯಂತ ನಾನಾ ಸಂಪ್ರದಾಯ ಮತ್ತು ಸಂಸ್ಕೃತಿಗಳ ಭಾಗವಾಗಿತ್ತು. ಎಣ್ಣೆಯ ದೀಪಗಳ ಬಳಕೆ ಆರಂಭವಾದುದು ಚಾಲ್ಕೊಲಿಥಿಕ್ ಯುಗ ಅಥವಾ ತಾಮ್ರ ಯುಗ, ಅಂದರೆ ಸುಮಾರು ಕ್ರಿಸ್ತ ಪೂರ್ವ 4500 ರಿಂದ 3300 ರಲ್ಲಿ. ಇಂದು ಅವುಗಳ ಬಳಕೆ ಕೆಲವೇ ಮನೆಗಳಿಗೆ ಸೀಮಿತವಾಗಿದೆ, ಅದೂ ಅಲಂಕಾರಿಕ ದೃಷ್ಟಿಯಿಂದ.
ಸದ್ಗುರುಗಳು ಹೇಳುವಂತೆ, ಈ ಪುಟ್ಟ ದೀಪವು ಬೆಳಕು, ಸೌಂದರ್ಯ ಇವುಗಳನ್ನು ಮೀರಿ ಇನ್ನೂ ಹೆಚ್ಚಿನ ವಿಶಿಷ್ಟತೆಯನ್ನು ಹೊಂದಿದೆ. ಮನೆಗಳಲ್ಲಿ ಒಂದು ಬಲವಾದ ಮತ್ತು ಸಕಾರಾತ್ಮಕ ವಾತಾವರಣವನ್ನು ಹೇಗೆ ಸೃಷ್ಟಿಸಬಹುದು ಎಂದು ತಿಳಿದುಕೊಳ್ಳಿ.
ಸದ್ಗುರು: ನಮ್ಮ ದೃಷ್ಟಿ ಸಾಧನಗಳಿಗನುಸಾರವಾಗಿ ಬೆಳಕಿನ ಪ್ರಾಮುಖ್ಯತೆ ಇದೆ. ಉದಾಹರಣೆಗೆ ನಮ್ಮ ದೃಷ್ಟಿ ಸಾಧನ ಗೂಬೆಯ ತರಹದ್ದಾಗಿದ್ದರೆ, ನಮಗೆ ಬೆಳಕು ಮುಖ್ಯವಾಗುತ್ತಿರಲಿಲ್ಲ.
ಇಂದು ವಿದ್ಯುದ್ದೀಪಗಳಿರುವುದರಿಂದ ನಿಮಗೆ ಅದರ ವಿಶೇಷತೆ ಗೋಚರಿಸದಿರಬಹುದು. ಆದರೆ ಕೆಲವು ಶತಮಾನಗಳ ಹಿಂದೆ ದೀಪಗಳಿಲ್ಲದೆ ಮನೆಯ ಒಳಗೆ ಏನೂ ಮಾಡಲು ಸಾಧ್ಯವಿರಲಿಲ್ಲ. ಐತಿಹಾಸಿಕವಾಗಿ ಹೇಳಬೇಕೆಂದರೆ, ಎರಡು ಕಾರಣಗಳಿಗಾಗಿ ಅವು ನಮ್ಮ ಮನೆಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದವು. ಒಂದು, ಆಗ ವಿದ್ಯುದ್ದೀಪಗಳಿರಲಿಲ್ಲ. ಎರಡನೆಯದಾಗಿ ಅಂದಿನ ದಿನಗಳಲ್ಲಿ ಸಾವಯವ ವಸ್ತುಗಳಿಂದಲೇ ಮನೆ ಕಟ್ಟುತ್ತಿದ್ದುದರಿಂದ ದೊಡ್ಡ ದೊಡ್ಡ ಕಿಟಕಿಗಳನ್ನು ಇಡುವುದು ಸಾಧ್ಯವಾಗುತ್ತಿರಲಿಲ್ಲ. ಸಾಮಾನ್ಯವಾಗಿ ಪ್ರಾಚೀನ ಮನೆಗಳ ಒಳಗೆ ಬಹಳ ಕತ್ತಲಿರುತ್ತಿತ್ತು. ಇಂದು ಸಹ ಸಮಾನ್ಯವಾಗಿ ಹಳೆಯ ಮನೆಗಳಲ್ಲಿ ಮತ್ತು ಕೊಳಗೇರಿ ಮನೆಗಳಲ್ಲಿ ಕತ್ತಲೇ ಇರುವುದನ್ನು ಕಂಡಿದ್ದೀರಾ?. ಆದ್ದರಿಂದ ಹಗಲು ಕೂಡ ದೀಪವನ್ನು ಬೆಳಗಿಸಿ, ಅದರ ಸುತ್ತ ಒಂದು ಪಾವಿತ್ರ್ಯತೆಯನ್ನು ಪಾಲಿಸುತ್ತಾರೆ.
ನಮ್ಮ ಸಂಪ್ರದಾಯದ ಒಂದು ಮುಖ್ಯ ಅಂಶವೆಂದರೆ, ಒಳ್ಳೆಯ ವಾತಾವರಣ ಮೂಡಿಸಲು, ಮೊದಲು ಒಂದು ದೀಪವನ್ನು ಬೆಳಗಿಸುವುದು. ಆದರೆ, ಇಂದಿನ ದಿನಗಳಲ್ಲಿ ನಮ್ಮ ಉದ್ದುದ್ದ ಬೆಳೆಸಿರುವ ಬಣ್ಣ ಹಚ್ಚಿರುವ ಉಗುರುಗಳನ್ನು ಕಾಪಾಡುವುದಕ್ಕೋಸ್ಕರ ಕೇವಲ ವಿದ್ಯುದ್ದೀಪಗಳನ್ನೇ ಬಳಸುತ್ತೇವೆ! ಆದರೆ ದಿನನಿತ್ಯ, ಇಂದು ಕೂಡ ದೀಪ ಬೆಳಗಿಸುವವರು ಅದರ ಸುತ್ತ ಮುತ್ತ ನಿರ್ಮಾಣವಾಗುವ ವ್ಯತ್ಯಾಸವನ್ನು ಗಮನಿಸಿರಬಹುದು. ನೀವು ಯಾವುದೇ ದೇವರನ್ನು ನಂಬಬೇಕೆಂದೇನಿಲ್ಲ, ಕತ್ತಲೂ ಇರಬೇಕೆಂದೇನಿಲ್ಲ. ದೀಪವು ಕೇವಲ ದೃಷ್ಟಿಯ ಸಾಧನವಾಗಿರದೇ, ತನ್ನದೇ ಆದ ಒಂದು ಪ್ರತ್ಯೇಕತೆ ಹೊಂದಿರುವುದನ್ನು ಗಮನಿಸಿದ್ದಿರಾ? ಒಂದು ದೀಪವನ್ನು ಬೆಳಗಿದಾಗ ಅದರ ಬೆಳಕಷ್ಟೇ ಅಲ್ಲದೆ ಆ ಜ್ಯೋತಿಯ ಸುತ್ತಲೂ ಒಂದು ಅಲೌಕಿಕ ಪ್ರಭಾವಲಯವು ಮೂಡುತ್ತದೆ.
ಒಂದು ಅಲೌಕಿಕ ಪ್ರಭಾವಲಯ ಇರುವೆಡೆ ಉತ್ತಮ ಸಂವಹನ ಇರುತ್ತದೆ. ನೀವೆಲ್ಲ ಎಂದಾದರೂ ಕ್ಯಾಂಪ್-ಫೈರ್ ಸುತ್ತಲೂ ಕುಳಿತ್ತಿದ್ದೀರಾ? ಹಾಗೆ ಮಾಡಿದ್ದರೆ, ಕ್ಯಾಂಪ್-ಫೈರ್ ಸುತ್ತ ಕುಳಿತು ಹೇಳುವ ಕಥೆಗಳೂ, ಅನುಭವಗಳೂ ಬಹಳ ಪ್ರಭಾವ ಬೀರುತ್ತವೆ. ನಿವೆಲ್ಲಾ ಇದನ್ನು ಗಮನಿಸಿದ್ದೀರಾ? ಪ್ರಾಚೀನ ಕಾಲದ ಕಥನಕಾರರು ಇದನ್ನು ಅರಿತಿದ್ದರು- ಕ್ಯಾಂಪ್-ಫೈರ್ ಸುತ್ತ ಕುಳಿತಿದ್ದಾಗ ಹೇಳುವ ಕಥೆಗಳು ಪರಿಣಾಮಕಾರಿಯಾಗಿರುತ್ತವೆ ಎಂದು. ಆ ಸಮಯದಲ್ಲಿ ಗ್ರಹಣಾ ಶಕ್ತಿಯು ಅತ್ಯುತ್ತಮವಾಗಿರುತ್ತದೆ.
ಹಾಗಾಗಿ ನೀವು ಏನನ್ನಾದರೂ ಪ್ರಾರಂಭಿಸಬೇಕೆಂದರೆ ಅಥವಾ ಒಂದು ನಿರ್ದಿಷ್ಟ ಪರಿಸರವನ್ನು ಸೃಷ್ಟಿಸಬೇಕೆಂದರೆ, ಮೊದಲು ದೀಪವನ್ನು ಬೆಳಗಿಸಬೇಕು. ದೀಪವನ್ನು ಬೆಳಗಿಸುವುದು ಕೇವಲ ನೋಟಕ್ಕಷ್ಟೇ ಸಿಮೀತವಾಗಿರದೇ ಆ ಸಂಪೂರ್ಣ ಸ್ಥಳದಲ್ಲಿ ಪ್ರತ್ಯೇಕ ಶಕ್ತಿಯನ್ನು ತುಂಬುತ್ತದೆ ಎಂಬುದು ತಿಳಿದಿರುವ ವಿಷಯ. ಎಣ್ಣೆಯ ದೀಪ ಬೆಳಗಿಸುವುದರಲ್ಲಿ ಕೆಲವು ಪರಿಣಾಮಕರಿ ವಿಷಯಗಳಿವೆ. ಉದಾಹರಣೆಗೆ, ಎಳ್ಳೆಣ್ಣೆ, ಹರಳೆಣ್ಣೆ ಅಥವಾ ತುಪ್ಪದ ದೀಪ ಬೆಳಗಿಸುವುದರಿಂದ ಸಕಾರಾತ್ಮಕತೆಯನ್ನು ಪಸರಿಸುತ್ತದೆ. ತನ್ನದೇ ಆದ ಶಕ್ತಿಯ ವರ್ತುಲವನ್ನು ಹೊಂದಿರುತ್ತದೆ.
ಅಗ್ನಿ ಸ್ವಯಂ ಒಂದು ಶಕ್ತಿಯ ಮೂಲ ಮತ್ತು ಹಲವಾರು ರೀತಿಯಲ್ಲಿ ಜೀವನಾಧರವೂ ಆಗಿದೆ. ಸಾಂಕೇತಿಕವಾಗಿ, ಅಗ್ನಿಯೇ ಜೀವನಾಧಾರವೆಂದು ನಾವು ಯಾವಾಗಲೂ ಗುರುತಿಸುತ್ತೇವೆ. ಹಲವಾರು ಭಾಷೆಗಳಲ್ಲಿ ನಮ್ಮ ಜೀವವನ್ನು ಜೀವಾಗ್ನಿಯೆಂದು ಕರೆಯುತ್ತಾರೆ. ನಿಮ್ಮಲ್ಲಿರುವ “ಜೀವಾಗ್ನಿ”ಗಳೇ ನಿಮ್ಮನ್ನು ನಡೆಸುತ್ತದೆ. ಇಡೀ ಗ್ರಹದ ಜೀವನಾಧಾರವಾಗಿರುವ ಸೂರ್ಯನು ಒಂದು ಬೆಂಕಿಯ ಚೆಂಡಲ್ಲವೇ? ನೀವು ವಿದ್ಯುದ್ದೀಪವನ್ನೇ ಬಳಸಿ, ಅಥವಾ ಯಾವುದೇ ಸ್ಟೌವ್ ಅಥವಾ ಇಂಧನವನ್ನೇ ಬಳಸಿ ಅಡಿಗೆ ಮಾಡಿ ಅಥವಾ ನಿಮ್ಮ ಕಾರಿನ ಅಂತರ್ದಹನವಾಗಬಹುದು, ಇವೆಲ್ಲವೂ ಬೆಂಕಿಯೇ ಅಲ್ಲವೇ? ಈ ಪ್ರಪಂಚವನ್ನು ನಡೆಸುತ್ತಿರುವುದೇ ಬೆಂಕಿ ಅಥವಾ ಅಗ್ನಿ. ಹಾಗಾಗಿ ಅಗ್ನಿಯೇ ಜೀವನಾಧಾರ. ಅದು ತನ್ನ ಸುತ್ತಲೂ ಒಂದು ಶಕ್ತಿಯ ವರ್ತುಲವನ್ನು ಸೃಷ್ಟಿಸುತ್ತದೆ ಮತ್ತು ಅಗತ್ಯವಿರುವ ಪರಿಸರವನ್ನು ಸೃಷ್ಟಿಸುತ್ತದೆ. ನೀವು ನಿಮ್ಮ ದಿನಚರಿಯನ್ನು ದೀಪವನ್ನು ಬೆಳಗಿಸಿ ಪ್ರಾರಂಭಿಸುವುದರ ಉದ್ದೇಶವು ಕೂಡ ಅದೇ ಗುಣಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಇದು ನಿಮ್ಮ ಅಂತಃ ಪ್ರಕೃತಿಯನ್ನು ಜಾಗೃತಗೊಳಿಸುವ ಒಂದು ಮಾರ್ಗವಾಗಿದೆ.
ಸಂಪಾದಕರ ಟಿಪ್ಪಣಿ: ಇತ್ತೀಚಿನ ಅಪಡೇಟ್‍ಗಳನ್ನು ಈಶ ಬ್ಲಾಗ್‍ನಿಂದ ಪಡೆಯಿರಿ. Twitter, facebook, rss or browser extensions, ಆಯ್ಕೆ ನಿಮ್ಮದು.