ಒಬ್ಬ ಮಹಿಳೆ ಗುರುವಾಗಬಹುದೇ?
ಒಬ್ಬ ಮಹಿಳೆ ಗುರುವಾಗಬಹುದೇ? ಒಬ್ಬ ಗುರು ಗಂಡು ಅಥವಾ ಹೆಣ್ಣು ಎನ್ನುವುದಕ್ಕೆ ಮಾನ್ಯತೆ ಇದೆಯೇ?
ಪ್ರಶ್ನೆ: ಒಬ್ಬ ಮಹಿಳೆ ಗುರುವಾಗಬಹುದೇ? ಒಬ್ಬ ಗುರು ಗಂಡು ಅಥವಾ ಹೆಣ್ಣು ಎನ್ನುವುದಕ್ಕೆ ಮಾನ್ಯತೆ ಇದೆಯೇ?
ಸದ್ಗುರು:
ಸಾಮಾನ್ಯವಾಗಿ ಮಹಿಳೆಯ ‘ಸ್ತ್ರೀ’ ಸಹಜಗುಣ ಅವಳನ್ನು ಒಬ್ಬ ಒಳ್ಳೆಯ ಗುರುವಾಗಲು ಬಿಡುವುದಿಲ್ಲ. ಆದರೆ ಅವಳು ಆ ದಾರಿಯನ್ನು ಅನುಸರಿಸಲು ಸಕ್ಷಮಳು. ಒಬ್ಬ ಪುರುಷ ತನ್ನನ್ನು ತಾನು ಸಿದ್ಧಪಡಿಸಿಕೊಂಡು ಹಲವಾರು ಕೆಲಸಗಳನ್ನು ಮಾಡಬಲ್ಲ ಆದರೆ ಅವನ ಗ್ರಹಿಸುವ ಶಕ್ತಿ ಕಡಿಮೆ. ಅದೇ ಸ್ತ್ರೀಯರಲ್ಲಿ ಗ್ರಹಿಸುವ ಶಕ್ತಿ ಪ್ರಕೃತಿದತ್ತವಾಗಿ ಬಂದಿದೆ. ಆದ್ದರಿಂದ ಎಲ್ಲೆಲ್ಲಿ ಗುರುಗಳು ಇರುತ್ತಾರೋ ಅಲ್ಲೆಲ್ಲಾ ಮಹಿಳೆಯರು ಸಹ ಹೆಚ್ಚಿರುತ್ತಾರೆ, ಯಾಕೆಂದರೆ ಅವರಲ್ಲಿ ಗ್ರಹಿಸುವ ಮತ್ತು ಸ್ವೀಕರಿಸುವ ಗುಣಗಳು ಹೆಚ್ಚಾಗಿರುತ್ತವೆ. ಈ ಹಿಂದೆ ಬಹಳಷ್ಟು ಅದ್ಭುತವಾದ ಮಹಿಳಾ ಗುರುಗಳು ಇದ್ದರು. ಅವರು ಪುರುಷ ಗುರುಗಳ ರೀತಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವರು ಸರಿಯಾದ ಸಂಧರ್ಭ ಮತ್ತು ಸಾಮಾಜಿಕ ಬೆಂಬಲಕ್ಕಾಗಿ ಎದುರು ನೋಡಬೇಕಾಗಿತ್ತು. ಇಲ್ಲಿಯವರೆಗೂ ಸಮಾಜವು ಮಹಿಳಾ ಗುರುವನ್ನು ಬೆಂಬಲಿಸಲಿಲ್ಲ. ವಿಶೇಷವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ತ್ರೀಯೊಬ್ಬಳು ತನ್ನ ಬುದ್ದಿವತಿಕೆಯನ್ನು ತೋರಿಸಿದಲ್ಲಿ ಅಥವ ಸಾಮಾನ್ಯ ಮನುಷ್ಯರಿಗಿಂತ ಭಿನ್ನವಾಗಿದ್ದಲ್ಲಿ ಅವಳನ್ನು ಮಾಟಗಾತಿ ಎಂದು ಪಟ್ಟ ಕಟ್ಟಿ ಸುಟ್ಟು ಹಾಕುತ್ತಿದ್ದರು.
ಹಾಗಿದ್ದರೂ ಕೆಲವು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಪುರುಷತ್ವದ ಕಿಚ್ಚು ಇದೆ. ಅಂತಹ ಮಹಿಳೆಯರು ಸಾಮಾಜಿಕ ಬೆಂಬಲ ಸಿಕ್ಕಲ್ಲಿ ಅದ್ಭುತವಾದ ಗುರುಗಳಗಬಹುದು. ಶತಮಾನಗಳಿಂದಲೂ ಮನುಷ್ಯನ ಇತಿಹಾಸದಲ್ಲಿ ಇಲ್ಲಿಯವರೆಗೂ ಅಂತಹ ಮಹಿಳೆಯರಿಗೆ ಎಂದಿಗೂ ಬೆಂಬಲ ಸಿಕ್ಕಿಲ್ಲ. ಭವಿಷ್ಯದಲ್ಲಿ ಇದು ಸಾಧ್ಯವಾಗಬಹುದು. ಮುಂದೊಂದು ದಿನ ಬಹಳಷ್ಟು ಮಹಿಳೆಯರು ಆಧ್ಯಾತ್ಮಿಕ ಗುರುಗಳಾಗಿ ಇರಬಹುದು.