ರಣ್-ವೀರ್ ಸಿಂಗ್: ಸರ್, ತಂತ್ರಜ್ಞಾನವು ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದೆ ಮತ್ತು ಮೋಬೈಲ್ ಫೋನ್‌ಗಳು ನಾವಿರುವ ರೀತಿಯನ್ನು ನಿಜವಾಗಿಯೂ ಬದಲಾಯಿಸಿವೆ ಎಂದು ನನ್ನ ಭಾವನೆ. ಇವುಗಳು, ಬಹುತೇಕ ಎಲ್ಲದರ ಮೇಲೂ ಪರಿಣಾಮವನ್ನು ಬೀರಿವೆ. ಮನುಷ್ಯರು ಈ ರೀತಿಯಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕಾಗಿತ್ತೆ, ಎಂದು ನಾನು ಕೆಲವೊಮ್ಮೆ ಅಚ್ಚರಿಪಡುತ್ತೇನೆ. ನಾನು ಆಫ್ರಿಕಾದ ಕಾಡುಗಳಲ್ಲಿ ಅಲೆದಾಡುತ್ತಾ ಉತ್ತರ ಧ್ರುವದಲ್ಲಿರುವವರ ಜೊತೆ ಮಾತನಾಡಬಹುದು. ಅವರ ಮುಖವನ್ನೂ ಸಹ ನೋಡಬಹುದು! 

ಅದರೊಂದಿಗೆ, ಈಗ ಸಾಮಾಜಿಕ ಜಾಲತಾಣಗಳೂ ಸೇರಿಕೊಂಡಿವೆ. ಅದು ಎಲ್ಲವನ್ನೂ ಬದಲಿಸುತ್ತಿದೆ. ಹದಿನೆಂಟು, ಹತ್ತೊಂಬತ್ತು ವಯಸ್ಸಿನ ಮಕ್ಕಳು ಬಹಳವಾಗಿ ಅದರಲ್ಲೆ ಇರುತ್ತಾರೆ. ಇವುಗಳನ್ನು ಉಪಯೋಗಿಸುವ ಪರಿ ಅವರಿಗೆ ನಮಗಿಂತ ಚೆನ್ನಾಗಿಯೇ ತಿಳಿದಿದೆ. ಸ್ಥಿರ ದೂರವಾಣಿಗಳಿದ್ದ ಸಮಯದಲ್ಲಿ ನಾನು ಹುಟ್ಟಿದ್ದು, ಫೇಸ್‌ಟೈಮ್ ಎಂದರೆ ನನಗಿನ್ನೂ ಅರಗಿಸಿಕೊಳ್ಳಕ್ಕಾಗುತ್ತಿಲ್ಲ. ಮೋಬೈಲ್ ಫೋನ್ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸದ್ಗುರು: ನಾವು ಸೃಷ್ಟಿಸಿರುವ ಎಲ್ಲಾ ಯಂತ್ರಗಳೂ ನಮ್ಮ ಸ್ವಾಭಾವಿಕ ಶಕ್ತಿಗಳನ್ನು ವಿಸ್ತರಿಸುತ್ತವೆ ಅಷ್ಟೆ.
ನಮಗೆ ದೃಷ್ಟಿಯ ಸಾಮರ್ಥ್ಯವಿದೆ, ಆದ್ದರಿಂದ ನಮ್ಮ ಬಳಿ ದುರ್ಬೀನು ಮತ್ತು ಮೈಕ್ರೋಸ್ಕೋಪಿದೆ. ನಾವು ಮಾತನಾಡಬಹುದು, ಆದ್ದರಿಂದ ನಮ್ಮ ಬಳಿ ಮೈಕ್ರೊಫೋನ್ ಮತ್ತು ದೂರವಾಣಿ ಇವೆ. ನಾನು ಸ್ಥಿರ ದೂರವಾಣಿ ಬಳಸಿ ಮಾತನಾಡಿದಾಗ, ಅದು ಚೆನ್ನಾಗಿತ್ತು. ಈಗ, ನನ್ನ ಬಳಿ ಮೊಬೈಲ್ ಫೋನ್, ಅದು ಇನ್ನೂ ಹೆಚ್ಚು ಆರಾಮದಾಯಕ. ಅದು ಯಾಕೆ ಚೆನ್ನಾಗಿಲ್ಲ ಅನ್ನುತ್ತೀರಿ? ಇಲ್ಲ, ಅದು ಕೂಡ ಚೆನ್ನಾಗಿಯೇ ಇದೆ.

ನಾವು ನಿಭಾಯಿಸಬೇಕಾಗಿರುವುದು ನಮ್ಮದೇ ಅನಿಯಂತ್ರಿತತೆಯನ್ನು. ತಂತ್ರಜ್ಞಾನವು ಒಂದು ಮಹತ್ತರವಾದ ಸಶಕ್ತೀಕರಣ – ಅದನ್ನು ಯಾರೂ ದೂರಬಾರದು.

ಸುಮಾರು ಮೂವತ್ತೈದು ವರ್ಷಗಳ ಹಿಂದೆ, ನಾನು ಯಾವಾಗಲೂ ಮನೆಯಿಂದ ಆಚೆಯೇ ಇರುತ್ತಿದ್ದೆ. ಈಶ ಫೌಂಡೇಶನ್-ಅನ್ನು ಕಟ್ಟುವುದಕ್ಕೆ ನಾನು ಭಾರತದೆಲ್ಲೆಡೆ – ಹಳ್ಳಿಯಿಂದ ಹಳ್ಳಿಗೆ, ಪಟ್ಟಣದಿಂದ ಪಟ್ಟಣಕ್ಕೆ ತಿರುಗುತ್ತಿದ್ದೆ. ಯಾವುದೋ ಕೆಲವು ದಿನಗಳಲ್ಲಿ ಮಾತ್ರ ನಾನು ದೂರವಾಣಿಯನ್ನು ಉಪಯೋಗಿಸಬಹುದಿತ್ತು. ಆ ಕೆಟ್ಟದಾದ ನೀಲಿ ಡಬ್ಬಗಳನ್ನು ನೀವು ನೋಡಿದ್ದೀರೋ ಇಲ್ಲವೋ, ನನಗೆ ಗೊತ್ತಿಲ್ಲ – ಆ ಟೆಲಿಫೋನ್ ಬೂತ್-ಗಳು – "ಲೋಕಲ್, ಎಸ್ ಟಿ ಡಿ, ಐ ಎಸ್ ಡಿ" ಅಂತ ಇದ್ದಿದ್ದು. ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಅಲ್ಲೆಲ್ಲೋ ಒಂದು ನೀಲಿ ಡಬ್ಬ ಸಿಗುತ್ತಿತ್ತು. ಅದು ನನ್ನ ಪೋನ್ ಕರೆಗಳ ದಿನವಾಗಿರುತ್ತಿತ್ತು. 

ನನ್ನ ಬಳಿ ಎಂದೂ ಫೋನ್ ಬುಕ್ ಇರಲಿಲ್ಲ, ಆದರೆ, ನನಗೆ ೮೦೦ – ೯೦೦ ಫೋನ್ ನಂಬರ್ ಮತ್ತು ಹೆಸರುಗಳು ಸುಲಭವಾಗಿ ನೆನಪಿರುತ್ತಿದ್ದವು. ನಾನು ಅಲ್ಲಿಗೆ ಹೋದ ತಕ್ಷಣ, ಐದು ಸಾವಿರ ರೂಪಾಯಿಗಳನ್ನು ತೆಗದು ಆ ಫೋನ್ ಬೂತ್ ಮಾಲಿಕನಿಗೆ ಕೊಡುತ್ತಿದ್ದೆ. ಅವನಿಗೆ ಯಾಕೆಂದು ಅರ್ಥವಾಗುತ್ತಿರಲಿಲ್ಲ, ನಾನು “ ಸುಮ್ಮನೆ ಇಟ್ಟುಕೊಳ್ಳಿ, ಇದು ಡೌನ್ ಪೇಮೆಂಟ್” ಎಂದು ಹೇಳುತ್ತಿದ್ದೆ.  ಸಾಮಾನ್ಯವಾಗಿ ಒಂದು ಫೋನ್ ಕರೆಗೆ ಐದರಿಂದ ಹತ್ತು ರೂಪಾಯಿಗಳಾಗುತ್ತಿತ್ತು. ನಾನವನಿಗೆ ಐದು ಸಾವಿರ ಕೊಟ್ಟಿರುತ್ತಿದ್ದೆ – ಮುಂದೆನಾಗುತ್ತದೆ ಎಂದು ಅವನಿಗೆ ತಿಳಿದಿರಲಿಲ್ಲ!

ಕಪ್ಪಗಾಗಿರುವ, ಕೆಟ್ಟದಾಗಿ ವಾಸನೆ ಬರುತ್ತಿದ್ದ ಆ ಬೂತ್-ನೊಳಗೆ ಹೋಗುತ್ತಿದ್ದೆ. ಕೆಲವೊಂದನ್ನು ಸ್ವಚ್ಛ ಮಾಡಿ ಪರ್ಫ್ಯೂಮ್‌ನಿಂದ ಹಾಕಿರುತ್ತಿದ್ದರು, ಉಳಿದವುಗಳೆಲ್ಲ ದುರ್ಗಂಧದಿಂದ ನಾರುತ್ತಿದ್ದವು. ನಂತರ, ೫ – ೬ ಗಂಟೆಗಳ ಕಾಲ ಫೋನ್ ಕರೆಗಳನ್ನು ಮಾಡುತ್ತಿದ್ದೆ. ಒಂದು ತಿಂಗಳಿಗೆ ಆಗುವಷ್ಟು ಫೋನ್ ಕರೆಗಳನ್ನು ಮಾಡುತ್ತಿದ್ದೆ.

ಫೋನ್ ಕರೆಗಳನ್ನು ಮಾಡಬೇಕಾದ ಬೇರೆ ಜನರು ಅಲ್ಲಿಗೆ ಬರುತ್ತಿದ್ದರು. ನಾನು ಹೊರ ಬರದ ಕಾರಣ ಸನ್ನೆ ಮಾಡಿ ನನ್ನ ಮೇಲೆ ರೇಗಾಡುತ್ತಿದ್ದರು. ಆದರೆ, ಆ ಫೋನ್ ಬೂತ್ ಮಾಲಿಕನಿಗೆ ಐದು ಸಾವಿರ ರೂಪಾಯಿಗಳನ್ನು ಈಗಾಗಲೇ ಕೊಟ್ಟಿದ್ದ ಕಾರಣ, ಅವನು ಇದನ್ನೆಲ್ಲಾ ನಿಭಾಯಿಸುತ್ತಿದ್ದ. ನಾನು ನನ್ನ ಫೋನ್ ಕರೆಗಳನ್ನು ಮುಗಿಸಿ, ಕಾರ್ ಹತ್ತಿ ಮುಂದಕ್ಕೆ ಹೋಗುತ್ತಿದ್ದೆ. ಆ ಕರೆಗಳನ್ನೆಲ್ಲ ಮುಗಿಸಿದ ನಂತರ, ನನ್ನ ಕೈ ಬೆರಳುಗಳು ಕೂಡ ನೋಯುತ್ತಿದ್ದವು. 

ಆದರೆ ಇವತ್ತು, ನಾನು ಯಾರಿಗೆ ಕರೆ ಮಾಡಬೇಕೋ, ಅವರ ಹೆಸರನ್ನು ಹೇಳಿದರೆ ಸಾಕು, ನನ್ನ ಫೋನ್ ತಾನೇ ಕರೆ ಮಾಡುತ್ತದೆ.

ರಣ್-ವೀರ್ ಸಿಂಗ್: ಹೌದು!

ಸದ್ಗುರು: ಆ ಕೆಲಸ ಮುಗಿದ ಹಾಗೆ. ನಾನು ತಂತ್ರಜ್ಞಾನವನ್ನು ಬಹಳವಾಗಿ ಪ್ರಶಂಸಿಸುತ್ತೇನೆ. ಕೆಲವರು ಆಕ್ಷೇಪಿಸುತ್ತಿದ್ದಾರೆ, ಆದರೆ, ಅವರ ಆಕ್ಷೇಪಣೆ ತಂತ್ರಜ್ಞಾನದ ಬಗ್ಗೆ ಆಗಿಲ್ಲ. ಆದರೆ ಅವರಿಗೆ ತಿಳಿದಿಲ್ಲ - ಅವರು ನಿಜವಾಗಿ ಆಕ್ಷೇಪಿಸುತ್ತಿರುವುದು ತಮ್ಮದೇ ಆಂತರಿಕ ಅನಿಯಂತ್ರಿತತೆ ಬಗ್ಗೆ.

ಅನಿಯಂತ್ರಿತ ಬಳಕೆಯು, ಬರೀ ಫೋನ್‌ನೊಂದಿಗಿರುವ ಸಮಸ್ಯೆಯಲ್ಲ. ತಿನ್ನಲು ಆರಂಭಿಸಿದರೆ, ಯಾವಾಗ ನಿಲ್ಲಿಸಬೇಕೆಂದು ಅವರಿಗೆ ತಿಳಿಯದು. ಕುಡಿಯಲು ಆರಂಭಿಸಿದರೆ, ಕುಡಿಯುವುದನ್ನು ಯಾವಾಗ ನಿಲ್ಲಿಸಬೇಕೆಂದು ಅವರಿಗೆ ತಿಳಿಯದು. ಈ ಅನಿಯಂತ್ರಿತತೆಯು ಜೀವನದ ಎಲ್ಲಾ ಆಯಾಮದಲ್ಲೂ ಇದೆ. ಈಗ, ಗ್ಯಾಜೆಟ್ (gadget) ಕೂಡ  ಒಂದು ಮಾದಕ ವಸ್ತುವಾಗಿದೆ. ಆದರೆ, ಒಂದು ವಿಧದಲ್ಲಿ ನೋಡಿದರೆ, ಅದು ಬಹಳಷ್ಟು ಜನರನ್ನು ಕುಡಿತದಿಂದ ದೂರವಿಟ್ಟಿದೆ.¬¬

ರಣ್-ವೀರ್ ಸಿಂಗ್: ಇದರಿಂದ ಏನೋ ಸ್ವಲ್ಪವಾದರೂ ಒಳ್ಳೆಯದಾಗಿದೆ. 

ಸದ್ಗುರು: ನಾವು ನಿಭಾಯಿಸಬೇಕಾಗಿರುವುದು ನಮ್ಮದೇ ಅನಿಯಂತ್ರಿತತೆಯನ್ನು. ತಂತ್ರಜ್ಞಾನವು ಒಂದು ಮಹತ್ತರವಾದ ಸಶಕ್ತೀಕರಣ – ಅದನ್ನು ಯಾರೂ ದೂರಬಾರದು. ಇಲ್ಲದಿದ್ದರೆ, ನಿಮ್ಮನ್ನು ಕಪ್ಪು ಫೋನ್ ಇರುವ ಆ ನೀಲಿ ಡಬ್ಬದೊಳಗೆ ಹಾಕಬೇಕು. ಆವಾಗ, ನಿಮಗೆ ಅರ್ಥವಾಗುತ್ತದೆ!
 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image