ಸದ್ಗುರು: “ವೀರಶೈವ” ಎಂಬ ಪದದ ಅರ್ಥ ಕೆಚ್ಚೆದೆಯ ಶಿವ ಭಕ್ತ ಎಂದು. ವೀರಶೈವರ ತತ್ತ್ವಶಾಸ್ತ್ರದಲ್ಲಿ, ಯಾವಾಗಲೂ ನದಿಗಳ ಮತ್ತು ಸಾಗರಗಳ ಸಾದೃಶ್ಯವನ್ನು ಬಳಸಲಾಗುತ್ತದೆ. ಶಿವನನ್ನು ಸಾಗರವೆಂದೂ, ಜನರನ್ನು ನದಿಗಳೆಂದೂ ವರ್ಣಿಸಲಾಗುತ್ತದೆ. ಅವರು ಹೇಳಲು ಪ್ರಯತ್ನಿಸುತ್ತಿರುವುದೇನೆಂದರೆ, ಅನಿವಾರ್ಯವಾಗಿ, ಪ್ರತಿಯೊಂದು ನದಿಯೂ ಸ್ವಾಭಾವಿಕವಾಗಿ ಸಮುದ್ರಕ್ಕೆ ಸೇರುತ್ತದೆಯೆಂದು. ಅದೆಷ್ಟು ಸುತ್ತಿಬಳಸಿ ಹರಿದು ಸಮುದ್ರ ಸೇರುತ್ತದೆ ಎನ್ನುವುದಷ್ಟೇ ಪ್ರಶ್ನೆ.

ಆದರೆ ನಮ್ಮ ಪೀಳಿಗೆಯವರು, ನದಿಗಳು ಸಮುದ್ರವನ್ನು ಸೇರಬೇಕಿಲ್ಲ, ಅವುಗಳು ದಾರಿಯಲ್ಲಿ ಒಣಗಬಹುದು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೇವೆ.

ಆದರೆ ನಮ್ಮ ಪೀಳಿಗೆಯವರು, ನದಿಗಳು ಸಮುದ್ರವನ್ನು ಸೇರಬೇಕಿಲ್ಲ, ಅವುಗಳು ದಾರಿಯಲ್ಲಿ ಒಣಗಬಹುದು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಅಂತಹ ಪೀಳಿಗೆಯವರು. ನಮ್ಮ ನದಿಗಳು ಬತ್ತುತ್ತಿರುವುದು ಮಾನವರ ಜೀವನ ಶೈಲಿಯ ಪರಿಣಾಮವಾಗಿದೆ. ಮಾನವತೆಯ ಬಹುದೊಡ್ಡ ಭಾಗ ಅವರ ಅಸ್ತಿತ್ವದ ಸ್ವರೂಪವನ್ನು ಮರೆತಿರುವುದರಿಂದಲೇ ಹೀಗಾಗುತ್ತಿರುವುದು.

ಇಡೀ ದೇಶದಲ್ಲಿ ಸಮುದ್ರವನ್ನು ತಲುಪದೇ ಇರುವ ಒಂದೇ ನದಿ ರಾಜಸ್ಥಾನದ ಲಾವನಾವತಿಯಾಗಿತ್ತು. ಅದು ಮರುಭೂಮಿಯಲ್ಲಿ ಒಣಗುತ್ತದೆ. ಆದರೆ ವರ್ಷದ ಕೆಲವು ತಿಂಗಳುಗಳು ಅನೇಕ ನದಿಗಳು ಸಮುದ್ರವನ್ನು ತಲುಪದೇ ಇರುವ ರೀತಿ ಮತ್ತು ಇನ್ನೂ ಅನೇಕ ನದಿಗಳು ವರ್ಷಪೂರ್ತಿ ಸಮುದ್ರವನ್ನು ತಲುಪದೇ ಇರುವ ರೀತಿ ನಾವಿಂದು ಮಾಡಿದ್ದೇವೆ. ಗಂಗಾ ಮತ್ತು ಸಿಂಧೂ ನದಿಗಳು ಈಗ ಅಳಿವಿನಂಚಿನಲ್ಲಿರುವ ನದಿಗಳ ಪಟ್ಟಿಯಲ್ಲಿದೆ. ಕಾವೇರಿಯ ನೀರು ಐವತ್ತು ವರ್ಷಗಳ ಹಿಂದಿಗಿಂತ ನಲವತ್ತು ಪ್ರತಿಶತದಷ್ಟು ಕಡಿಮೆಯಾಗಿದೆ. ಕ್ಷಿಪ್ರಾ ನದಿಯಲ್ಲಿ ನೀರು ಇರದ ಕಾರಣ ಉಜ್ಜಯಿನಿಯಲ್ಲಿ ನಡೆದ ಕುಂಭ ಮೇಳಕ್ಕಾಗಿ ಕೃತಕ ನದಿಯನ್ನು ರಚಿಸಲು ನರ್ಮದಾದಿಂದ ನೀರನ್ನು ಪಂಪ್ ಮಾಡಬೇಕಾಯಿತು. ಉಪ ನದಿಗಳು ಮುಖ್ಯ ನದಿಗಳನ್ನೂ ಸಹ ಸೇರುವುದಿಲ್ಲ. ಅವುಗಳು ದಾರಿಯಲ್ಲೆಲ್ಲೋ ಬತ್ತಿ ಹೋಗುತ್ತವೆ. ಅಮರಾವತಿಯಂತಹ ನದಿಗಳನ್ನು “ಶಾಶ್ವತ”ವಾದ ನದಿ ಎನ್ನಲಾಗುತ್ತದೆ. ಅದರಲ್ಲಿ ಕೇವಲ ಬಂಡೆಗಳಿದ್ದಾಗ, ಖಂಡಿತವಾಗಿಯೂ ಅದು ಶಾಶ್ವತವಾಗಬಹುದು!

ಇದು ಬರೀ ನಮ್ಮ ನದಿಗಳ ಬಗ್ಗೆಯಷ್ಟೆಯಲ್ಲ. ಇದು ನಾವು ನಮ್ಮೊಳಗೆ ಹೇಗಿದ್ದೇವೆ ಎಂದು ತೋರಿಸುತ್ತಿದೆ. ನಾವು ಸ್ವಾಭಾವಿಕವಾಗಿ ನಮ್ಮ ಅಂತಿಮ ನೆಲೆಯನ್ನು ಕಂಡುಕೊಳ್ಳುತ್ತೇವೆಯೇ ಅಥವಾ ದಾರಿಯಲ್ಲಿ ಕಳೆದುಹೋಗುತ್ತೇವೆಯೇ? ನಾವೆಷ್ಟು ಸಮಯ ಕಳೆದು ಹೋಗಿರಲು ನಿರ್ಧರಿಸಿದ್ದೇವೆ? ನಾವು ಪ್ರಕೃತಿಯಿಂದ ದೂರ ಸರಿದಷ್ಟೂ, ಅನೇಕ ವಿಧಗಳಲ್ಲಿ, ನಾವು ನಮ್ಮ ಸ್ವಭಾವದಿಂದಲೂ ದೂರ ಸರಿಯುತ್ತಿದ್ದೇವೆ. ಇನ್ನೊಂದು ಬದಿಯಿಂದಲೂ ಇದು ನಿಜ - ನಾವು ನಮ್ಮ ಸ್ವಭಾವದಿಂದ ದೂರ ಸರಿದಷ್ಟೂ, ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಜೀವದೆಡೆಗೂ ನಮ್ಮ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತೇವೆ.

ನಾವು ಪ್ರಕೃತಿಯಿಂದ ದೂರ ಸರಿದಷ್ಟೂ, ಅನೇಕ ವಿಧಗಳಲ್ಲಿ, ನಾವು ನಮ್ಮ ಸ್ವಭಾವದಿಂದಲೂ ದೂರ ಸರಿಯುತ್ತಿದ್ದೇವೆ.

ನೀರು ಒಂದು ಸರಕಲ್ಲ, ಅದು ಜೀವಸೆಲೆ. ಮಾನವ ದೇಹದಲ್ಲಿ 72% ನೀರಿದೆ. ನೀವೊಂದು ಜಲಾಶಯ. ಮತ್ತು ಈ ಭೂಮಿಯಲ್ಲಿ, ನಮಗೆ ಅತ್ಯಂತ ಹತ್ತಿರದ ಸಂಬಂಧವಿರುವ ಜಲಮೂಲಗಳೆಂದರೆ ನದಿಗಳು. ಸಾವಿರಾರು ವರ್ಷಗಳಿಂದ ಈ ನದಿಗಳು ನಮ್ಮನ್ನು ತಮ್ಮ ಬೆಚ್ಚಗಿನ ಅಪ್ಪುಗೆಯಲ್ಲಿ ಪೋಷಿಸಿವೆ. ಈಗ ನಮ್ಮ ಈ ನದಿಗಳನ್ನು ನಮ್ಮ ಅಪ್ಪುಗೆಯಲ್ಲಿ ಪೋಷಿಸಬೇಕಾದ ಸಮಯ ಬಂದಿದೆ.

ನಮ್ಮ ನದಿಗಳನ್ನು ಉಳಿಸಲು ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ದೇಶದ ಪ್ರತಿಯೊಬ್ಬರಲ್ಲೂ ನಾವು ಅರಿವು ಮೂಡಿಸಬೇಕು. ನಮ್ಮ ನದಿಗಳನ್ನು ಹೇಗೆ ಬಳಸಿಕೊಳ್ಳುವುದು ಎಂದು ಯೋಚಿಸುವ ಬದಲು ಅವುಗಳನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಎಂದು ನಾವು ತುರ್ತಾಗಿ ಯೋಚಿಸಬೇಕಾಗಿದೆ.

ಇದಕ್ಕೆ ಸರಳವಾದ ಪರಿಹಾರವೆಂದರೆ ನದಿಯ ಇಕ್ಕೆಲಗಳಲ್ಲೂ ಕನಿಷ್ಟ ಒಂದು ಕಿಲೋಮೀಟರ್ ಅಗಲಕ್ಕೆ ಮತ್ತು ಉಪನದಿಗಳ ಉದ್ದಕ್ಕೂ ಅರ್ಧ ಕಿಲೋಮೀಟರ್ ಅಗಲಕ್ಕೆ ಹಸಿರು ಹೊದಿಕೆ ಇದೆಯೆಂದು ಖಚಿತಪಡಿಸಿಕೊಳ್ಳುವುದು. ನೀರಿನಿಂದ ಮರಗಳಿವೆ ಎಂದು ಜನರು ಭಾವಿಸುತ್ತಾರೆ. ತಪ್ಪು, ನೀರಿರುವುದು ಮರಗಳಿಂದ. ಮರಗಳಿಲ್ಲದಿದ್ದರೆ, ಸ್ವಲ್ಪ ಸಮಯದ ನಂತರ ನದಿ ಇರುವುದಿಲ್ಲ. ಸರ್ಕಾರಿ ಜಮೀನು ಇದ್ದ ಕಡೆಯಲ್ಲ ನಾವು ಅರಣ್ಯ ಮರಗಳನ್ನು ನೆಡಬೇಕು. ಖಾಸಗಿ ಭೂಮಿ ಇದ್ದ ಕಡೆಯಲ್ಲ, ನಾವು ಮಣ್ಣನ್ನು ಕ್ಷೀಣಿಸುವ ಬೆಳೆಯನ್ನು ಬೆಳೆಯುವುದರಿಂದ ಮರ ಆಧಾರಿತ ತೋಟಗಾರಿಕೆಗೆ ಪರಿವರ್ತಿತಗೊಳಿಸಬೇಕು. ಇದು ರೈತರಿಗೆ ಗಮನಾರ್ಹ ಆರ್ಥಿಕ ಲಾಭವನ್ನೂ ಸಹ ನೀಡುತ್ತದೆ, ಮತ್ತು ಅವರ ಆದಾಯವು ಐದು ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ನಾವು ಇದನ್ನು ಜಾರಿಗೊಳಿಸಬಹುದಾದ ನೀತಿಯಾಗಿ ಕಾರ್ಯಗತಗೊಳಿಸಿದರೆ, ಹತ್ತು ಹದಿನೈದು ವರ್ಷಗಳ ಅವಧಿಯಲ್ಲಿ, ನಮ್ಮ ನದಿಗಳಲ್ಲಿ ಕನಿಷ್ಟ ಹದಿನೈದರಿಂದ ಇಪ್ಪತ್ತು ಪ್ರತಿಶತದಷ್ಟು ಹೆಚ್ಚಿನ ನೀರು ಹರಿಯುವುದನ್ನು ನಾವು ಕಾಣುತ್ತೇವೆ.

ಸಂಪಾದಕರ ಟಿಪ್ಪಣಿ: ಸದ್ಗುರು 2017 ರಲ್ಲಿ ವಿಶ್ವದ ಅತಿ ದೊಡ್ಡ ಪರಿಸರ ಆಂದೋಲನಗಳಲ್ಲಿ ಒಂದಾದ ರ‍್ಯಾಲೀ ಫಾರ್ ರಿವರ್ಸ್-ಅನ್ನು ಆರಂಭಿಸಿದರು. ಇದರ ಅಂಗವಾಗಿ ಒಂದು ತಿಂಗಳ ಅವಧಿಯಲ್ಲಿ ಸದ್ಗುರುಗಳು ಸ್ವತಃ 16 ರಾಜ್ಯಗಳ 23 ನಗರಗಳಿಗೆ ಭೇಟಿ ಇತ್ತರು. ಈ ಅಭಿಯಾನವು, ಅಭೂತಪೂರ್ವವಾದ ರೀತಿಯಲ್ಲಿ ರಾಜಕೀಯ ನಾಯಕರು, ರೈತರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು, ಮಾಧ್ಯಮಗಳು ಇನ್ನಿತರರು ಒಟ್ಟಾಗುವುದನ್ನು ಕಂಡಿತು. ಸದ್ಗುರುಗಳು ರ‍್ಯಾಲೀ ಫಾರ್ ರಿವರ್ಸ್-ನ ಕಾಯ್ದೆಯ ರೂಪುರೇಷೆಗಳನ್ನು ಶಿಫಾರಿಸುವ ಕೈಪಿಡಿಯ ಕರಡು ಪ್ರತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡುವಲ್ಲಿ ಇದು ಕೊನೆಗೊಂಡಿತು. ಸಮಾಜದ ಎಲ್ಲಾ ಕ್ಷೇತ್ರಗಳಿಂದ ಬಂದಂತಹ ಸುಮಾರು 162 ದಶಲಕ್ಷಕ್ಕೂ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಈ ಉಪಕ್ರಮವು ಬೃಹತ್ ಮಟ್ಟದ ಸಾರ್ವಜನಿಕ ಆಂದೋಲನವಾಗಿ ಪರಿವರ್ತಿತವಾಯಿತು. ತರುವಾಯ, ಪ್ರಧಾನಮಂತ್ರಿ ಕಾರ್ಯಾಲಯವು ನೀತಿ ಆಯೋಗದ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಿತು. ನದಿ ಪುನರುಜ್ಜೀವನ ನೀತಿಯ ಅನುಷ್ಠಾನವನ್ನು ಶಿಫಾರಸು ಮಾಡಿ, ನೀತಿ ಆಯೋಗವು 6 ಜೂನ್ 2018-ರಂದು ಎಲ್ಲಾ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಪ್ರಕಟಣೆಯನ್ನು ಕಳುಹಿಸಿತು. ಮಾರ್ಚ್ 2019 ರಲ್ಲಿ, ಮಹಾರಾಷ್ಟ್ರ ಯವತ್ಮಾಳ ಜಿಲ್ಲೆಯ ವಾಘರಿ ನದಿಯ ಪುನರುಜ್ಜೀವನಕ್ಕಾಗಿ ಪ್ರಾಯೋಗಿಕವಾಗಿ ರ‍್ಯಾಲೀ ಫಾರ್ ರಿವರ್ಸ್-ನ ಯೋಜನೆಯನ್ನು ಔಪಚಾರಿಕವಾಗಿ ಅನುಮೋದಿಸಿದ ಮೊದಲ ರಾಜ್ಯವಾಯಿತು. ರಾಷ್ಟ್ರವ್ಯಾಪಿ ನದಿ ಅಭಿಯಾನದಲ್ಲಿ ನೀವು ಹೇಗೆ ಭಾಗವಹಿಸಬಹುದು ಮತ್ತು ತೊಡಗಿಸಿಕೊಳ್ಳಬಹುದು ಎಂದು ತಿಳಿಯಲು RallyForRivers.org ಪುಟಕ್ಕೆ ಭೇಟಿ ನೀಡಿ.