ಪ್ರಶ್ನೆ : ಮೊಟ್ಟ ಮೊದಲ ಬಾರಿಗೆ ನಿಜವಾದ ಅರಿವನ್ನು ಹೊಂದಿದ ವ್ಯಕ್ತಿ ಯಾರು ? ಅವನು ಕಾಣಿಸಿಕೊಂಡಾಗ ಜಗತ್ತಿನಲ್ಲಿ ಮಾನವ ಪ್ರಜ್ಞೆ ಯಾವ ಸ್ಥಿತಿಯಲ್ಲಿತ್ತು?

ಸದ್ಗುರು : ಯೋಗ ಪರಂಪರೆಯ ಪ್ರಕಾರ, ಶಿವನನ್ನು ದೇವರು ಎಂಬಂತೆ ನೋಡಲಾಗುವುದಿಲ್ಲ, ಬದಲಾಗಿ ಆದಿಯೋಗಿ ಅಥವಾ ಮೊದಲ ಯೋಗಿ ಮತ್ತು ಆದಿ ಗುರು ಅಥವಾ ಮೊದಲ ಗುರು ಎಂದು ಪರಿಗಣಿಸಲಾಗುತ್ತದೆ.  ಅವನು ಯೋಗವಿಜ್ಞಾನಗಳನ್ನು, ಸಪ್ತರ್ಷಿಗಳೆಂದು ಪ್ರಸಿದ್ಧರಾದ ತನ್ನ ಏಳು ಜನ ಶಿಷ್ಯರಿಗೆ, ಹಿಮಾಲಯದಲ್ಲಿರುವ ಕೇದಾರನಾಥದಿಂದ ಕೆಲವು ಕಿಲೋಮೀಟರುಗಳಷ್ಟು ಮೇಲಿರುವ ಕಾಂತಿಸರೋವರದ ದಡದಲ್ಲಿ ಪ್ರಸರಿಸುತ್ತಾನೆ.  ಇದು ಮೊದಲ ಯೋಗ ತರಗತಿಯಾಗಿತ್ತು.  ಕೆಲವರು ಇದು ಸುಮಾರು 60,000 ವರ್ಷಗಳ ಹಿಂದೆ ನಡೆಯಿತು ಎಂದು ಹೇಳುತ್ತಾರೆ, ಇನ್ನು ಕೆಲವರು 30 ಅಥವಾ 35,000 ವರ್ಷಗಳ ಹಿಂದೆ ಆಯಿತು ಎನ್ನುತ್ತಾರೆ, ಆದರೆ ಅದು ಕೊನೆಯಪಕ್ಷ 15000 ವರ್ಷಗಳ ಹಿಂದೆ ಆಗಿರಬೇಕೆಂಬುದು ನಮ್ಮ ದೃಢವಿಶ್ವಾಸವಾಗಿದೆ.

ಅದಿಯೋಗಿ-ಶಿವನು 112 ಮೂಲಭೂತ ಮಾರ್ಗಗಳನ್ನು ನೀಡಿದನು, ಮತ್ತು ಅದರಿಂದ ಹಲವು ರೀತಿಯ ಸಂಯೋಜನೆಗಳು ಇಂದು ವಿಕಸನಗೊಂಡಿವೆ.

ಆದಿಯೋಗಿಗಿಂತ ಹಿಂದೆ ಅರಿವನ್ನು ಹೊಂದಿದವರು ಯಾರೂ ಇರಲಿಲ್ಲವೇ? ಅರಿವನ್ನು ಹೊಂದಿದವರು ಆಗಲೂ ಇದ್ದಿರಬೇಕು.  ಆದಾಗ್ಯೂ, ಅರಿವು ಎನ್ನುವುದು ಒಂದು ವಿಷಯ, ಜ್ಞಾನ ಮತ್ತೊಂದು ವಿಷಯ, ಮತ್ತು ಜ್ಞಾನವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗೆಗಿನ ಒಂದು ಸಂಘಟಿತ ವ್ಯವಸ್ಥೆ ಒಂದು ಸಂಪೂರ್ಣ ವಿಭಿನ್ನ ಸಂಗತಿಯಾಗಿದೆ.

ಆದಿಯೋಗಿ-ಶಿವನು ಮಹತ್ವಪೂರ್ಣವಾಗುವುದುದು ಅವನು ಕೇವಲ ಜ್ಞಾನೋದಯವನ್ನು ಹೊಂದಿದ್ದಾನೆ ಎಂಬುದರಿಂದಲ್ಲ, ಬದಲಾಗಿ ಅವನು ತಾನು ರೂಪಿಸಿದ ವಿಧಾನಗಳ ಮೂಲಕ ಸಾಕ್ಷಾತ್ಕಾರದ ಸಾಧ್ಯತೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದರಿಂದ.  ಅವನು ವೈಜ್ಞಾನಿಕವಾದ ರೀತಿಯಲ್ಲಿ ನಿಮ್ಮ ಪರಮಸ್ವಭಾವವನ್ನು ಸಮೀಪಿಸಲು ಸಾಧ್ಯವಾಗುವಂತೆ ಮಾಡಿದ, ವಿವಿಧ ಆಯಾಮಗಳನ್ನು ಸ್ಪಷ್ಟವಾಗಿ ಅನ್ವೇಷಿಸಿ ಒಂದು ವ್ಯವಸ್ಥಿತ ಪ್ರಕ್ರಿಯೆ – ಆಂತರಿಕ ಶ್ರೇಯಸ್ಸಿನ ಶಾಸ್ತ್ರ ಅಥವಾ ವಿಜ್ಞಾನವನ್ನು ಸೃಷ್ಟಿಸಿದ.  ಅವನು ಮೂಲಭೂತವಾಗಿ 112 ವಿಧಾನಗಳನ್ನು ನೀಡಿದ, ಮತ್ತು ಇಂದು ಅವುಗಳಿಂದ ಅನೇಕ ವಿನ್ಯಾಸಗಳು ಮತ್ತು ಸಂಯೋಜನೆಗಳು ವಿಕಾಸಗೊಂಡಿವೆ.  ಅವನಿಗಿಂತ ಮೊದಲು ಅಥವಾ ನಂತರದಲ್ಲಿ ಯಾರೂ ಅವನಷ್ಟು ವಿವರವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿಲ್ಲ.  ಅದಕ್ಕಾಗಿಯೇ ನಾವು ಅವನಿಗೆ ಮಹತ್ವವನ್ನು ನೀಡುತ್ತಿರುವುದು.

ಕಾರ್ಯಸನ್ನದ್ದ!

ಆದಿಯೋಗಿ ಕಾಣಿಸಿಕೊಂಡಾಗ ಯಾವ ರೀತಿಯ ಪರಿಸ್ಥಿತಿ ಇತ್ತು? ಯೋಗ ಪರಂಪರೆಯಲ್ಲಿ, ಕುಳಿತಿದ್ದಾಗ ಹೊರತುಪಡಿಸಿ, ಆದಿಯೋಗಿಯು ಯಾವಾಗಲೂ ಕಾರ್ಯಸನ್ನದ್ಧವಾಗಿರುವಂತೆ ಕಾಣಬರುತ್ತಿತ್ತು.  ಅವನು ಒಂದು ಆಯುಧವನ್ನು ಹಿಡಿದಿರುವಂತೆ ಚಿತ್ರಿಸಲಾಗಿದ್ದು, ಅದು ಅಂದಿನ ಸಮಾಜದ ಸ್ವರೂಪವನ್ನು ಬಿಂಬಿಸುತ್ತದೆ.  ನೀವು ಅವನು ಇದ್ದ ಕಾಲವನ್ನು ನೋಡಿದರೆ, ಜನರು ಸ್ಪಷ್ಟವಾಗಿ ಪಂಗಡಗಳು ಮತ್ತು ಜನಾಂಗಗಳಾಗಿ ವಿಂಗಡಣೆಯಾಗಿ ಜೀವಿಸುತ್ತಿದ್ದದ್ದು ಕಂಡುಬರುತ್ತದೆ.  ಆಗಿನ ಪರಿಸ್ಥಿತಿಯ ಬಗ್ಗೆ ನಮಗೆ ಬಹಳ ಕಡಿಮೆ ಮಾಹಿತಿಯಿದೆ, ಆದರೆ ನಮಗೆ ಮಾನವನ ಮನಸ್ಸು ಹೇಗಿತ್ತು ಎಂಬುದು ಗೊತ್ತಿದೆ.  ಜನರನ್ನು ನಿರ್ದಿಷ್ಟ  ಪರಿಸ್ಥಿತಿಗಳಲ್ಲಿ ಇರಿಸಿದಾಗ ಅವರು ಹೇಗೆಲ್ಲಾ ವರ್ತಿಸುತ್ತಾರೆ ಎಂಬುದನ್ನು ನಾವು ಊಹಿಸಬಹುದು.  ಆಗಿನ ಕಾಲದಲ್ಲಿ ಬದುಕುಳಿಯುವ ಪ್ರವೃತ್ತಿ ಬಹಳ ಪ್ರಬಲವಾಗಿದ್ದಿರಬೇಕು.  ಜನರು ಮಿತಿಗಳನ್ನು ಮೀರಿದಾಗ, ಸಹಜವಾಗಿಯೇ, ಸಾವು ಸಂಭವಿಸುತ್ತಿತ್ತು.  ಆಗ ಖಂಡಿತವಾಗಿಯೂ ದೈಹಿಕ ಹಿಂಸೆ ಇತ್ತು, ಮತ್ತು ಆದಿಯೋಗಿಯು ತನ್ನನ್ನು ತಾನು ಆಗಿನ ಪರಿಸ್ಥಿತಿಗೆ ಹೊಂದಿಸಿಕೊಂಡಿದ್ದ.  ಅವನು ನಿಶ್ಚಲವಾಗಿ ಕುಳಿತಿದ್ದಾಗ ಹೇಗೆ ಯೋಗಿಯಾಗಿದ್ದನೋ, ಹಾಗೆಯೇ ಒಬ್ಬ ಯುದ್ಧಸನ್ನದ್ದ ಪುರುಷನೂ ಆಗಿದ್ದ.

ಬದುಕುಳಿಯುವ ಪ್ರವೃತ್ತಿ ಪ್ರಬಲವಾಗಿದ್ದರೂ, ಈ ಸಂಸ್ಕೃತಿಯಲ್ಲಿ ಎಲ್ಲೋ ಒಂದು ಕಡೆ, ಜನರಲ್ಲಿ ಅನ್ವೇಷಣೆಯ ಹಂಬಲವನ್ನು ಪ್ರಚೋದಿಸಿರಬೇಕು.

ಆದರೆ ಬದುಕುಳಿಯುವ ಪ್ರವೃತ್ತಿ ಪ್ರಬಲವಾಗಿದ್ದರೂ, ಈ ಸಂಸ್ಕೃತಿಯಲ್ಲಿ ಎಲ್ಲೋ ಒಂದು ಕಡೆ, ಜನರಲ್ಲಿ ಅನ್ವೇಷಣೆಯ ಹಂಬಲವನ್ನು ಪ್ರಚೋದಿಸಿರಬೇಕು.  ಅವನು ಮೊದಲು ಕಾಣಿಸಿಕೊಂಡಾಗ, ಹಲವಾರು ಜನರು – ನಾವು ಇಂದು ಸಪ್ತ ಋಷಿಗಳೆಂದು ಕರೆಯುವ ಏಳು ಜನರನ್ನೂ ಒಳಗೊಂಡು – ಆಸಕ್ತಿಯಿಂದ ಬಂದು ಸೇರುತ್ತಾರೆ.  ತಿಳಿವಳಿಕೆಯ ಇತಿಹಾಸವೇ ಇಲ್ಲದಿದ್ದರೆ ಅವರು ಅಲ್ಲಿ ಸೇರುತ್ತಿರಲಿಲ್ಲ.  “ನಮಗೆ ತಿಳಿಯದ್ದೇನೋ ನಿನಗೆ ತಿಳಿದಿರುವಂತೆ ತೋರುತ್ತದೆ” ಎಂದು ಹೇಳಲು ನಿಶ್ಚಿತವಾಗಿಯೂ ಅವರಲ್ಲಿ ಯಾವದೋ ಒಂದು ರೀತಿಯಲ್ಲಿ ಅನ್ವೇಷಣೆಯ ಪ್ರವೃತ್ತಿ ಇದ್ದಿರಬೇಕು.

ವ್ಯಕ್ತಿಯು ತನ್ನ ಪರಮ ಸ್ವಭಾವವನ್ನು ತಲುಪುವ ಹಂಬಲವು ಜಗತ್ತಿನ ಬಹುತೇಕ ಭಾಗಗಳಲ್ಲಿ ಅಭಿವ್ಯಕ್ತವಾಗಲಿಲ್ಲ, ಆದರೆ ಈ ಸಂಸ್ಕೃತಿಯಲ್ಲಿ ಅದು ಸಾಧ್ಯವಾಯಿತು.  ಆಗಿನ ಸಮಾಜ ಒಂದು ಸದೃಢ ಸಮಾಜವಾಗಿದ್ದಿರಬೇಕು ಎನ್ನುವುದು ನನ್ನ ಭಾವನೆ, ಅಲ್ಲಿ ಕಾಲಾಂತರದಲ್ಲಿ ಅವರು, ಬದುಕುಳಿಯುವ ಪ್ರವೃತ್ತಿಯು ಜೀವನದಲ್ಲಿ ಸಾರ್ಥಕತೆಯನ್ನು ಉಂಟುಮಾಡುವುದಿಲ್ಲ-ನಾವು ನಮ್ಮೊಳಗೆ ಯಾವಾಗಲೂ ಅನಂತವಾಗುವ ಹಂಬಲವನ್ನು ಹೊಂದಿರುವ ಬೇರೆ ಒಂದು ಆಯಾಮವನ್ನು ಸಶಕ್ತಗೊಳಿಸಬೇಕು ಮತ್ತು ಅಮಿತವಾಗಿ ವಿಸ್ತಾರಗೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಂಡು ಪ್ರಬುದ್ಧರಾಗಿದ್ದರು. ಜನರು ಅವನ ಸುತ್ತಲೂ ಭಯದಿಂದ ಸೇರಿಕೊಳ್ಳಲಿಲ್ಲ, ಅವರು ಅವನಲ್ಲಿ ನೀಡಲು ಏನೋ ಇದೆ ಎಂಬುದನ್ನು ತಿಳಿದುಕೊಂಡು ಅಲ್ಲಿ ಸೇರಿದ್ದರು.   ಅಂದರೆ, ಯಾವುದೋ ಒಂದು ರೀತಿಯಲ್ಲಿ, ಅಲ್ಲೊಂದು ಉನ್ನತ ಸಾಧ್ಯತೆ ಇದೆ ಎಂಬುದರ ಅರಿವು ಅವರಿಗಿತ್ತು.

ಸಂಪಾದಕರ ಟಿಪ್ಪಣಿ: ಗುರು ಪೂರ್ಣಿಮಾ - ತಮ್ಮ ಅಸ್ತಿತ್ವದಿಂದ ಜಗತ್ತನ್ನು ಅಲಂಕರಿಸಿದ ಪ್ರಬುದ್ಧ ಜೀವಿಗಳ ಪ್ರಾಚೀನ ವಂಶಾವಳಿಯನ್ನು ಗೌರವಿಸುವ ಪವಿತ್ರ ಹಬ್ಬವು ಈ ವರ್ಷ ಜುಲೈ 9 ರಂದು ನಡೆಯಿತು. ಸದ್ಗುರು ಅವರೊಂದಿಗೆ ಈಶ ಯೋಗ ಕೇಂದ್ರದಲ್ಲಿ ಈ ವಿಶೇಷ ಸತ್ಸಂಗವು ನಡೆಯಿತು.

ಗುರು ಪೂರ್ಣಿಮಾ ಆಚರಣೆಯನ್ನು ವೀಕ್ಷಿಸಿ