ಪ್ರಶ್ನೆ:ನಾನು ಮುಟ್ಟಿನ ಅವಧಿಯಲ್ಲಿ ಬಹಳಷ್ಟು ಭಾವನಾತ್ಮಕ ತಳಮಳಗಳನ್ನು ಅನುಭವಿಸುತ್ತಿದ್ದೇನೆ ಮತ್ತು ಇದಕ್ಕೆ ಸಹಾಯಕವಾಗಬಹುದಾದ ಯಾವುದಾದರು ಪರಿಹಾರಗಳು ಅಥವಾ ಅಭ್ಯಾಸಗಳು ಯೋಗದಲ್ಲಿ ಇವೆಯೇ ಎಂದು ತಿಳಿಯಲು ನಾನು ಉತ್ಸುಕಳಾಗಿದ್ದೇನೆ.

ಸದ್ಗುರುಗಳು: ಋತುಚಕ್ರಗಳು ಭೌತಿಕ ಸ್ವಭಾವದವುಗಳಾಗಿದ್ದು, ದುರದೃಷ್ಟವಶಾತ್ ಅನೇಕ ಮಹಿಳೆಯರಿಗೆ ಅವು ಬಹಳಷ್ಟು ಮಾನಸಿಕ ತೊಂದರೆಗಳನ್ನು ಉಂಟುಮಾಡುತ್ತವೆ. ನೀವು ಯಾರೆಂಬ ಎರಡು ಅಂಶಗಳ ನಡುವಿನ ಮೇಳೈಸುವಿಕೆಯಲ್ಲಿನ ಕೊರತೆಯ ಕಾರಣದಿಂದಾಗಿ ಆ ತೊಂದರೆಗಳು ಉಂಟಾಗುತ್ತವೆ. ಇದಕ್ಕೆ ಮೂಲಧಾತುವಿನ ಒಂದು ಆಯಾಮವೂ ಇದೆ. ದೇಹದ ಅತ್ಯಂತ ಮೂಲಭೂತವಾದ ಜ್ಯಾಮಿತಿಯನ್ನು ನಿರ್ಮಿಸುವ ಪಂಚ ಭೂತಗಳು ಸಹ ನಿಮ್ಮಲ್ಲಿ ಹೊಂದಾಣಿಕೆಯಲ್ಲಿರಬೇಕು. ಯೋಗದಲ್ಲಿನ ಪಂಚಭೂತ ಪ್ರಕ್ರಿಯೆಗಳು ಈ ಸಮಸ್ಯೆಗಳನ್ನು ಸುಲಭಗೊಳಿಸಬಹುದು ಏಕೆಂದರೆ ಅವು ನಿಮ್ಮ ವ್ಯವಸ್ಥೆಯೊಳಗಿನ ಧಾತುಗಳನ್ನು ಕ್ರಮಗೊಳಿಸುತ್ತವೆ. ಇದರ ಬಗ್ಗೆ ಆಶ್ಚರ್ಯಪಡುವಂತದ್ದೇನೂ ಇಲ್ಲ. ವಾಸ್ತವವಾಗಿ ಅನೇಕ ಮಹಿಳೆಯರು ಸಾಮಾನ್ಯ ಜೈವಿಕ ಪ್ರಕ್ರಿಯೆಯನ್ನು ಯಾವುದೋ ಅಸಹ್ಯಕರ ಸಂಗತಿಯಂತೆ ಅನುಭವಿಸುತ್ತಿರುವುದೇ ವಿಚಿತ್ರವಾದ ಸಂಗತಿ - ಏಕೆಂದರೆ ತಮ್ಮದೇ ಆದ ದೈಹಿಕ ವ್ಯವಸ್ಥೆಯೊಂದಿಗೆ ಹೇಗೆ ಹೊಂದಿಕೊಂಡಿರಬೇಕೆಂಬುದನ್ನು ಯಾರೊಬ್ಬರೂ ಅವರಿಗೆ ಎಂದಿಗೂ ಹೇಳಿಕೊಟ್ಟಿಲ್ಲ.

ಶಾರೀರಿಕ ಪ್ರಕ್ರಿಯೆಗಳ ಪರಿಣಾಮದಿಂದಾಗಿ ಉಂಟಾಗುವ ಮಾನಸಿಕ ತೊಂದರೆಗಳು ನೀವು ಯಾರೆಂಬ ವಿವಿಧ ಅಂಶಗಳ ನಡುವಿನ ಸಂಪರ್ಕದಲ್ಲಿ ಕಡಿತ ಉಂಟಾಗಿರುವುದನ್ನು ತೋರಿಸುತ್ತವೆ. ಋತುಚಕ್ರಗಳು ಸ್ವಲ್ಪಮಟ್ಟಿಗೆ ದೈಹಿಕ ನೋವನ್ನು ಉಂಟುಮಾಡಬಹುದು ಮತ್ತದನ್ನು ವೈದ್ಯಕೀಯವಾಗಿ ನಿರ್ವಹಿಸಬೇಕಾಗುತ್ತದೆ. ಆದರೆ ಅವು ಮಾನಸಿಕ ತೊಂದರೆಗಳನ್ನು ಉಂಟುಮಾಡಬಾರದು. ಕೇವಲ ಭೂತಶುದ್ಧಿ ಸಾಧನೆಯನ್ನು ಮಾಡುವ ಮೂಲಕ ಆ ಸಮಸ್ಯೆಗಳೆಡೆಗೆ ಸಂಪೂರ್ಣ ನೆಮ್ಮದಿಯನ್ನು ತಂದುಕೊಳ್ಳಬಹುದು.

ಸಂಪಾದಕರ ಟಿಪ್ಪಣಿ: ಭೂತಶುದ್ಧಿಯು ಮಾನವನ ವ್ಯವಸ್ಥೆಯೊಳಗಿನ ಪಂಚಭೂತಗಳನ್ನು ಶುದ್ಧೀಕರಿಸುವ ಒಂದು ಪ್ರಕ್ರಿಯೆಯಾಗಿದೆ (ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ). ಇದು ವ್ಯವಸ್ಥೆಯನ್ನು ಸಾಮರಸ್ಯ ಮತ್ತು ಸಮತೋಲನದಿಂದ ಇಡುತ್ತದೆ, ಪ್ರಾಣಶಕ್ತಿಯ ಪ್ರಬಲವಾದ ಸ್ಥಿತಿಯನ್ನು ನಿರ್ವಹಿಸಲು ದೇಹವನ್ನು ಅಣಿಗೊಳಿಸುತ್ತದೆ ಮತ್ತು ನಿಮ್ಮ ವ್ಯವಸ್ಥೆಯ ಮೇಲೆ ಪ್ರಾವಿಣ್ಯತೆಯನ್ನು ಪಡೆಯಲು ತಳಹದಿಯನ್ನು ಸೃಷ್ಟಿಸುತ್ತದೆ. ಮುಂಬರುವ ಭೂತಶುದ್ಧಿ ಕಾರ್ಯಕ್ರಮಕ್ಕಾಗಿ ishayoga.org ಯಲ್ಲಿ ಪ್ರೊಗ್ರಾಮ್ ಫ಼ೈಂಡರ್ ನಲ್ಲಿ ಹುಡುಕಿ.

ಈ ಲೇಖನದ ಒಂದು ಆವೃತ್ತಿಯನ್ನು ಮೂಲತಃ ಮಾರ್ಚ್ 2016 ರ ಈಶ ಫಾರೆಸ್ಟ್ ಫ್ಲವರ್‍‍ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.