ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕರಾದ ಸದ್ಗುರುಗಳು ಹೇಳಿರುವ ಐದು ಅವಶ್ಯಕವಾದ ಪಾಲನೆಯ ಉಪಾಯಗಳು, ಮಕ್ಕಳಾಗಿರಬಹುದು ಅಥವಾ ಹದಿಹರೆಯದವರಾಗಿರಬಹುದು, ಅವರನ್ನು ಬೆಳೆಸುವಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ಪೋಷಕರು ಮತ್ತು ಮಕ್ಕಳ ನಡುವೆ, ಆರೋಗ್ಯಕರ ಸಂಬಂಧವನ್ನು ಸೃಷ್ಟಿಸುವಲ್ಲಿ ಈ ಅವಶ್ಯಕವಾದ ಪಾಲನೆಯ ಸಲಹೆಗಳು ಬಹಳ ಸಹಾಯಕಾರಿಯಾಗಬಹುದು. ಒಂದೊಂದಾಗಿ ಈ ಉಪಾಯಗಳನ್ನು ನೋಡೋಣ, ಬನ್ನಿ.

ಸದ್ಗುರು: ಮಕ್ಕಳ ಪೋಷಕರಾಗುವುದು ಬಹಳ ವಿಚಿತ್ರವಾದ ವಿಷಯ. ಇದನ್ನು ಸರಿಯಾಗಿ ಹೇಗೆ ಮಾಡಬೇಕೆಂದು ಇಲ್ಲಿಯ ತನಕ ಯಾರಿಗೂ ತಿಳಿಯದಿದ್ದನ್ನ, ನೀವು ಮಾಡಲು ಪ್ರಯತ್ನಿಸುತ್ತಿದ್ದೀರಿ. ನಿಮಗೆ ಹನ್ನೆರಡು ಮಕ್ಕಳು ಇದ್ದರೂ ಸಹ, ನೀವು ಇನ್ನೂ ಕಲಿಯತ್ತಲೇ ಇರುವಿರಿ. ಮೊದಲ ಹನ್ನೊಂದು ಮಕ್ಕಳನ್ನು ಸರಿಯಾಗಿ ಬೆಳೆಸಿರಬಹುದು, ಆದರೆ, ಹನ್ನೆರಡನೆಯದು ನಿಮಗೆ ತೊಂದರೆ ಕೊಡಬಹುದು.

#1 ಸರಿಯಾದ ವಾತಾವರಣವನ್ನು ಸೃಷ್ಟಿಸಿ

ಸರಿಯಾದ ವಾತಾವರಣವನ್ನು ಸೃಷ್ಟಿಸುವುದು ಪೋಷಣೆಯ ಬಹು ದೊಡ್ಡ ಭಾಗವಾಗಿದೆ. ನಿಮ್ಮೊಳಗೆ ಹಾಗೂ ನಿಮ್ಮ ಮನೆಯಲ್ಲಿ - ಸಂತೋಷ, ಪ್ರೀತಿ, ಆರೈಕೆ ಮತ್ತು ಒಂದು ಶಿಸ್ತಿನ ವಾತಾವರಣವನ್ನು ನೀವು ಹುಟ್ಟುಹಾಕಲೇ ಬೇಕು. ನಿಮ್ಮ ಮಗುವಿಗೆ ನೀವು ಮಾಡಲಿಕ್ಕಾಗುವುದು ಒಂದೇ - ಪ್ರೀತಿ ಮತ್ತು ಬೆಂಬಲವನ್ನು ಕೊಡುವುದು ಮಾತ್ರ. ಅವರ ಬುದ್ದಿವಂತಿಕೆಯು ಸಹಜವಾಗಿ ಅರಳಲು ಸಾಧ್ಯವಾಗುವಂತಹ ಪ್ರೀತಿಯ ವಾತಾವರಣವನ್ನು ಸೃಷ್ಟಿಸಿ . ಮಕ್ಕಳು ಜೀವನನ್ನು ನಿಷ್ಕಳಂಕವಾದ ದೃಷ್ಟಿಯಲ್ಲಿ ನೋಡುತ್ತಾರೆ. ನೀವು ಕೂಡಾ ಅವರೊಂದಿಗೆ ಕುಳಿತುಕೊಂಡು, ಅವರುಗಳು ನೋಡುವ ಹಾಗೆ ಜೀವನವನ್ನು ’ಹೊಸದಾದ’ ರೀತಿಯಲ್ಲಿ ನೋಡಿ. ಬದುಕಿನಲ್ಲಿ, ನೀವು ಮಾಡಿದ್ದನ್ನು ನಿಮ್ಮ ಮಗು ಮಾಡಬೇಕಿಲ್ಲ. ಯಾವುದನ್ನು ಯೋಚಿಸುವುದಕ್ಕೆ ಕೂಡ ನಿಮಗೆ  ಧೈರ್ಯವಿರಲಿಲ್ಲವೋ, ನಿಮ್ಮ ಮಗು, ಅಂತಹದನ್ನೇನಾದರೂ ಮಾಡಬೇಕು. ಆಗ ಮಾತ್ರ ಈ ಪ್ರಪಂಚವು ಪ್ರಗತಿಯನ್ನು ಹೊಂದುತ್ತದೆ, ಏನಾದರೂ ಸಾಧ್ಯವಾಗುತ್ತದೆ.

ಮುಂದಿನ ಪೀಳಿಗೆಯ ಮಾನವತೆಯು, ನಮಗಿಂತ ಕನಿಷ್ಠಪಕ್ಷ, ಒಂದು ಹೆಜ್ಜೆ ಮುಂದಿದೆ ಎಂದು ಖಚಿತಪಡಿಸುವುದು ಮಾನವಕುಲವು ಪೂರೈಸಬೇಕಾದ ಮೂಲಭೂತ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಯು, ಸ್ವಲ್ಪ ಹೆಚ್ಚಿನ ಸಂತೋಷ, ಕಡಿಮೆ ಭಯ, ಕಡಿಮೆ ಪೂರ್ವಾಗ್ರಹ, ಕಡಿಮೆ ಗೋಜಲು, ಕಡಿಮೆ ದ್ವೇಷ, ಕಡಿಮೆ ದುಃಖದಿಂದ ಬದುಕುವುದು ಬಹಳ ಮುಖ್ಯ. ಇದು ನಮ್ಮ ಗುರಿಯಾಗಿರಬೇಕು. ಒಬ್ಬ ಕಿಡಿಗೇಡಿಯನ್ನು ಮುಂದಿನ ತಲೆಮಾರಿಗೆ ಬಿಟ್ಟುಹೋಗದೆ ಇರುವುದೇ ನಿಮ್ಮ ಬಹು ದೊಡ್ಡ ಕೊಡುಗೆಯಾಗಿರಬೇಕು. ನೀವು ನಿಮಗಿಂತ ಸ್ವಲ್ಪಮಟ್ಟಿಗಾದರೂ ಉತ್ತಮವಾದ ವ್ಯಕ್ತಿಯನ್ನು ಕೊಡಬೇಕು.


 

#2 ನಿಮ್ಮ ಮಕ್ಕಳ ಅವಶ್ಯಕತೆ ಏನೆಂದು ತಿಳಿಯಿರಿ

ಕೆಲವು ಪೋಷಕರು, ತಮ್ಮ ಮಕ್ಕಳನ್ನು ಅತ್ಯಂತ ಶಕ್ತಿವಂತರು/ಬುದ್ಧಿವಂತರನ್ನಾಗಿ ಮಾಡುವ ಹಂಬಲ ಮತ್ತು ಮಹತ್ವಾಕಾಂಕ್ಷೆಯಿಂದ, ಅನಗತ್ಯವಾಗಿ ತಮ್ಮ ಮಕ್ಕಳನ್ನು ಹೆಚ್ಚು ಕಷ್ಟಕ್ಕೆ ಗುರಿ ಪಡಿಸಿದ್ದಾರೆ. ತಮ್ಮಿಂದ ಆಗದೆ ಇದ್ದದ್ದನ್ನು ತಮ್ಮ ಮಕ್ಕಳಾದರೂ ಮಾಡಲಿ ಎಂದು ಬಯಸುತ್ತಾರೆ. ಮಕ್ಕಳ ಮೂಲಕ ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತಾ, ಕೆಲವು ಪೋಷಕರು ತಮ್ಮ ಮಕ್ಕಳ ಜೊತೆ ಬಹಳ ಕ್ರೂರವಾಗಿ ವರ್ತಿಸುತ್ತಾರೆ. ಇನ್ನು ಕೆಲವು ಪೋಷಕರು, ತಾವು ತಮ್ಮ ಮಕ್ಕಳನ್ನು ತುಂಬಾ  ಪ್ರೀತಿಸುತ್ತಿದ್ದೀವಿ ಎಂದು ನಂಬಿ, ಅತಿಯಾಗಿ ಮುದ್ದುಮಾಡಿ, ಅವರನ್ನು ಬಲಹೀನ  ಹಾಗೂ ನಿಷ್ಪ್ರಯೋಜಕರನ್ನಾಗಿಸುತ್ತಿದ್ದಾರೆ. 

ಒಮ್ಮೆ, ಕಾಶ್ಮೀರ ಶೈವ ಸಿದ್ಧಾಂತಕ್ಕೆ ಸೇರಿದ ಓರ್ವ ಯೋಗಿ ಇದ್ದ. ಯೋಗದ ಏಳು ಪ್ರಕಾರಗಳಲ್ಲಿ ಒಂದಾದ ಇದು, ಅತ್ಯಂತ ಶಕ್ತಿಯುತ ಪ್ರಕಾರವಾಗಿದೆ. ಆದರೆ ಇದು ಹೆಚ್ಚಾಗಿ ಕಾಶ್ಮೀರ ಪ್ರದೇಶದಲ್ಲಿ ಉಳಿದುಕೊಂಡಿರುವ ಕಾರಣದಿಂದ ಈ ಹೆಸರನ್ನು ಪಡೆದುಕೊಂಡಿದೆ. ಒಂದು ದಿನ, ಈ ಯೋಗಿಯು, ಸಣ್ಣಾದಾಗಿ ಬಿರುಕು ಬಿಟ್ಟ ರೇಷ್ಮೆಯ ಗೂಡೊಂದನ್ನು ನೋಡಿದ. ಗೂಡಿನ ಚಿಪ್ಪು ತುಂಬಾ ಗಟ್ಟಿಯಾಗಿದ್ದರಿಂದ, ಒಳಗಿದ್ದ ಚಿಟ್ಟೆಯು ಹೊರಬರಲು ಬಹಳ ಪ್ರಯಾಸ ಪಡುತಿತ್ತು. ಸಾಮಾನ್ಯವಾಗಿ, ಚಿಟ್ಟೆಯು ಹೊರಗೆ ಬರಲು ಸರಿಸುಮಾರು ನಲವತ್ತೆಂಟು ಗಂಟೆಗಳವರೆಗೆ ನಿರಂತರವಾಗಿ ಹೋರಾಡುತ್ತದೆ. ಹೊರಗೆ ಬರದಿದ್ದರೆ, ಅದು ಸಾಯುತ್ತದೆ. ಇದನ್ನು ನೋಡಿದ ಯೋಗಿ, ಕರುಣೆಯಿಂದ,  ಚಿಟ್ಟೆಯನ್ನು ಬಿಡಿಸಲು ತನ್ನ ಉಗುರಿನಿಂದ ಗೂಡನ್ನು ಒಡೆದು ತೆರೆದನು). ಆದರೆ, ಹೊರಕ್ಕೆ  ಬಂದಾಗ, ಚಿಟ್ಟೆಗೆ ಹಾರಲು ಸಾಧ್ಯವಾಗಲಿಲ್ಲ. ಗೂಡಿನಿಂದ ಹೊರಬರಲು ಮಾಡುವ ಆ ಹೋರಾಟವೇ , ಚಿಟ್ಟೆಗೆ ಅದರ ರೆಕ್ಕೆಗಳನ್ನು ಉಪಯೋಗಿಸಿ ಹಾರಲು ಶಕ್ತಿ ಕೊಡುತ್ತದೆ. ಹಾರಲು ಸಾಧ್ಯವಿಲ್ಲದ ಚಿಟ್ಟೆಯ ಪ್ರಯೋಜನವೇನು? ಬಹಳಷ್ಟು ಜನರು, ತಾವು ಮಕ್ಕಳನ್ನು ಪ್ರೀತಿಸುತ್ತಿದ್ದೀವಿ ಎಂದು ಭಾವಿಸಿ, ಮಕ್ಕಳನ್ನು ಹೀಗೆ ಮಾಡಿದ್ದಾರೆ. ಅಂತಹ ಮಕ್ಕಳು ಜೀವನದಲ್ಲಿ ಮೇಲೇರಲು ಬಹಳ ಕಷ್ಟಪಡುತ್ತಾರೆ

ಎಲ್ಲಾ ಮಕ್ಕಳಿಗೂ ಅನ್ವಯಿಸುವಂತಹ ಯಾವುದೇ ನಿರ್ದಿಷ್ಟವಾದ ನಿಯಮವಿಲ್ಲ. ಪ್ರತಿಯೊಂದು ಮಗುವು ವಿಭಿನ್ನವಾಗಿರುತ್ತದೆ. ಇದಕ್ಕೊಂದು ವಿವೇಚನೆ ಬೇಕಾಗಿರುತ್ತದೆ. ಎಷ್ಟು ಮಾಡಬಹುದು ಮತ್ತು ಮಾಡಬಾರದು ಎಂಬುದರ ಕುರಿತು ನಿಖರವಾದ ಗೆರೆಯನ್ನು ಎಳೆಯಲಾಗುವುದಿಲ್ಲ. ಬೇರೆ ಬೇರೆ ಮಕ್ಕಳಿಗೆ ಬೇರೆ ಬೇರೆ ಮಟ್ಟದಲ್ಲಿ ಗಮನ, ಪ್ರೀತಿ ಮತ್ತು ದೃಢತೆ ಬೇಕಾಗಬಹುದು. ನಾನು ತೆಂಗಿನ ತೋಟದಲ್ಲಿದ್ದಾಗ, ನೀವು ಬಂದು “ನಾನು ಪ್ರತಿ ಗಿಡಕ್ಕೆ ಎಷ್ಟು ನೀರು ಹಾಕಬೇಕು? ಎಂದು ನನ್ನನ್ನು ಕೇಳಿದರೆ, ನಾನು "ಕನಿಷ್ಠ ಐವತ್ತು ಲೀಟರ್" ಎಂದು ಹೇಳಬಹುದು. ಆದರೆ, ನೀವು ಮನೆಗೆ ಹೋಗಿ ನಿಮ್ಮ ಗುಲಾಬಿ ಗಿಡಕ್ಕೆ ಐವತ್ತು ಲೀಟರ್ ಸುರಿದರೆ, ಅದು ಸಾಯುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಯಾವ ರೀತಿಯ ’ಗಿಡ’ ಇದೆಯೆಂದು ನೀವು ನೋಡಿಕೊಳ್ಳಬೇಕು.

#3 ನಿಮ್ಮ ಮಗುವಿನಿಂದ ಕಲಿಯಿರಿ

ಒಂದು ಮಗವು ಜನಿಸಿದ ತಕ್ಷಣ, ಸುತ್ತಲಿರುವ ಬಹಳ ಮಂದಿ, ವಯಸ್ಕರು, ಅವರ ಮಗುವಿನ ಶಿಕ್ಷಕರಾಗಲು ಸಮಯವೆಂದು ಭಾವಿಸುತ್ತಾರೆ. ನಿಮ್ಮ ಮನೆಗೆ ಮಗುವು ಬಂದಾಗ, ಅದು, ಕಲಿಸುವ ಸಮಯವಲ್ಲ, ಕಲಿಯವ ಸಮಯ. ನಿಮ್ಮ ಮಗುವನ್ನು ನೋಡಿ, ಹಾಗೂ ನಿಮ್ಮನ್ನು ನೀವೇ ನೋಡಿಕೊಳ್ಳಿ, ನಿಮಗಿಂತ ನಿಮ್ಮ ಮಗುವು ಹೆಚ್ಚು ಖುಷಿಯಾಗಿರುತ್ತದೆ, ಅಲ್ಲವೇ? ಆದ್ದರಿಂದ, ಜೀವನದ ಬಗ್ಗೆ, ನೀವು ಅವರಿಂದ ಕಲಿಯುವ ಸಮಯವದು, ಅವರಿಗೆ ಕಲಿಸುವ ಸಮಯವಲ್ಲ. ನಿಮ್ಮ ಮಗುವಿಗೆ ನೀವು ಕಲಿಸಬಹುದಾದ ಒಂದೇ  ವಿಷಯವೇನೆಂದರೆ – ಸ್ವಲ್ಪ ಮಟ್ಟಿಗೆ ನೀವು  ಇದನ್ನು ಕಲಿಸಲೇಬೇಕು – ಹೇಗೆ ಬದುಕುಳಿಯುವುದು ಎಂದು. ಆದರೆ, ಜೀವನದ ವಿಷಯಕ್ಕೆ ಬಂದಾಗ, ಮಗು ತನ್ನ ಅನುಭವಗಳಿಂದ ಜೀವನದ ಬಗ್ಗೆ  ಹೆಚ್ಚು ತಿಳಿದುಕೊಂಡಿರುತ್ತದೆ. ಅವರೇ ಜೀವನ; ಅದು ಅವರಿಗೆ ಗೊತ್ತು. ನಿಮ್ಮೊಂದಿಗೂ ಸಹ, ನಿಮ್ಮ ಮನಸ್ಸಿನ ಮೇಲೆ ನೀವೇ ಹೇರಿಕೊಂಡ ಪ್ರಭಾವವನ್ನು ದೂರ ಮಾಡಿಕೊಂಡರೆ, ನಿಮ್ಮ ಪ್ರಾಣಶಕ್ತಿಗೆ ಹೇಗೆ ಬದುಕಬೇಕೆಂದು ತಿಳಿದಿದೆ. ನಿಮ್ಮ ಮನಸ್ಸಿಗೆ ಮಾತ್ರ ಹೇಗಿರಬೇಕೆಂದು ತಿಳಿದಿಲ್ಲ. ವಯಸ್ಕರು, ಎಲ್ಲಾ ವಿಧದ ಬಾಧೆಗಳನ್ನು  ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನು  ಹೊಂದಿದ್ದಾರೆ – ಮಕ್ಕಳು ಆ ಪರಿಸ್ಥಿತಿಗೆ ಇನ್ನೂ ತಲುಪಿಲ್ಲ. ಆದ್ದರಿಂದ ಇದು ಕಲಿಸಲು ಅಲ್ಲ, ಕಲಿಯುವ ಸಮಯ.

#4 ಅವರನ್ನು ಅವರ ರೀತಿಯಲ್ಲಿ ಇರಲು ಬಿಡಿ

ಪೋಷಕರು ನಿಜವಾಗಿಯೂ ತಮ್ಮ ಮಕ್ಕಳ ಬಗ್ಗೆ ಕಾಳಜಿ  ಹೊಂದಿದ್ದರೆ , ಆ ಮಗುವಿಗೆ ಎಂದಿಗೂ ಪೋಷಕರ ಅಗತ್ಯವೇ ಇರದ  ರೀತಿಯಲ್ಲಿ ಬೆಳೆಸಬೇಕು. ಪ್ರೀತಿಸುವ ಪ್ರಕ್ರಿಯೆಯು  ಯಾವಾಗಲೂ ಸ್ವತಂತ್ರಗೊಳಿಸುವ ಪ್ರಕ್ರಿಯಾಗಿರಬೇಕೇ  ವಿನಃ  ಬಲೆಯಲ್ಲಿ ಸಿಕ್ಕಿಸಿಹಾಕುವ  ಪ್ರಕ್ರಿಯೆಯಾಗಬಾರದು . ಹಾಗಾಗಿ, ಮಗು ಹುಟ್ಟಿದಾಗ, ಆ ಮಗುವಿಗೆ, ತನ್ನ ಸುತ್ತಮುತ್ತಲೂ ನೋಡಲು, ಪ್ರಕೃತಿಯ ಜೊತೆ ಕಾಲ ಕಳೆಯಲು, ತನ್ನೊಂದಿಗೆ ತಾನು ಕಾಲ ಕಳೆಯಲು ಅವಕಾಶ ಕೊಡಿ. ಮಗು ಬೆಳೆಯಲು, ಪ್ರೀತಿ ಮತ್ತು ಬೆಂಬಲದ ವಾತಾವರಣವನ್ನು ಸೃಷ್ಟಿಸಿ . ನಿಮ್ಮ ನೈತಿಕ ಮೌಲಗಳು, ವಿಚಾರಗಳು, ಧರ್ಮವನ್ನು ಅವರ ಮೇಲೆ ಹೇರಲು ಪ್ರಯತ್ನಿಸಬೇಡಿ. ಅವರನ್ನು ಹಾಗೆ ಬೆಳೆಯಲು ಅವಕಾಶ ಮಾಡಿಕೊಡಿ, ಅವರ ಬುದ್ಧಿವಂತಿಕೆ ಬೆಳೆಯಲು ಅವಕಾಶ ಮಾಡಿಕೊಡಿ. ನಿಮ್ಮ ಕುಟುಂಬ, ನಿಮ್ಮ ಸಂಪತ್ತು ಅಥವಾ ಬೇರೆ ಇನ್ಯಾವುದರ ಜೊತೆಯೋ ತನ್ನನ್ನು ತಾನು ಗುರುತಿಸಿಕೊಳ್ಳದೆ, ತನ್ನ ಜೀವನವನ್ನು ತನ್ನದೇ ಧಾಟಿಯಲ್ಲಿ  – ಕೇವಲ ಒಂದು ವ್ಯಕ್ತಿಯಂತೆ , ನೋಡಲು ಅವರಿಗೆ ಸಹಾಯ ಮಾಡಿ. ಕೇವಲ ಮಾನವನಂತೆ ಜೀವನವನ್ನು ನೋಡಲು ಅವರಿಗೆ ಸಹಾಯ ಮಾಡುವುದು, ಅವರ ಯೋಗಕ್ಷೇಮ ಮತ್ತು ಪ್ರಪಂಚದ ಯೋಗಕ್ಷೇಮಕ್ಕೆ ಅತ್ಯಗತ್ಯ.

ಮಗುವು ಚೆನ್ನಾಗಿ ಬೆಳೆಯುಲೋಸುಗ ಪೋಷಕರ ಬಳಿ ಇರುವ ಅತ್ಯುತ್ತಮ ಭದ್ರತೆಯೆಂದರೆ, ಮಗುವು ತಾನೇ ಯೋಚಿಸುವುದನ್ನು ಕಲಿಯಲು ಉತ್ತೇಜಿಸುವುದು, ತನಗೆ ಉತ್ತಮವಾದದ್ದೇನೆಂದು ಕಂಡುಕೊಳ್ಳಲು ತನ್ನ ಸ್ವಂತ ಬುದ್ಧಿವಂತಿಕೆಯನ್ನು ಉಪಯೋಗಿಸಲು  ಪ್ರೋತ್ಸಾಹಿಸುವುದು. 

#೫ ಆನಂದ ಹಾಗೂ ಶಾಂತಿಯಿಂದ ಇರುವ ವ್ಯಕ್ತಿಯಾಗಿರಿ

ನಿಮ್ಮ ಮಗುವನ್ನು ಚೆನ್ನಾಗಿ ಬೆಳೆಸಲು ಬಯಸಿದರೆ, ಮೊದಲನೆಯದಾಗಿ, ನೀವು ಸಂತೋಷವಾಗಿರಬೇಕು. ಆದರೆ, ನಿಮಗೆ ಸಂತೋಷವಾಗಿರುವುದು ಹೇಗೆ ಎಂಬುದೇ ತಿಳಿದಿಲ್ಲ. ನಿಮ್ಮ ಮಗುವಿಗೆ, ಪ್ರತಿ ದಿನ ನಿಮ್ಮ ಮನೆಯಲ್ಲಿ ಉದ್ವೇಗ, ಕೋಪ, ಭಯ, ಆತಂಕ ಮತ್ತು ಅಸೂಯೆಗಳು, ತೋರುವ ವಿಷಯಗಳಾದರೆ, ಆ ಮಗುವಿಗೆ  ಏನಾಗಬಹುದು? ಮಕ್ಕಳು ನಿಸ್ಸಂಶಯವಾಗಿ ಇವುಗಳನ್ನೇ ಕಲಿಯುತ್ತಾರೆ, ಅಲ್ಲವೇ? ನಿಮ್ಮ ಮಗುವನ್ನು ಚೆನ್ನಾಗಿ ಬೆಳೆಸುವ ಉದ್ದೇಶವನ್ನು ನೀವು ನಿಜವಾಗಿಯೂ ಹೊಂದಿದ್ದಲ್ಲಿ, ನೀವು ಪ್ರೀತಿ, ಸಂತೋಷ ಹಾಗೂ ಶಾಂತಿಯಿಂದ ಇರುವಂತೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕು. ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳಲು ಅಸಮರ್ಥರಾಗಿದ್ದರೆ, ನೀವು ಮಗುವನ್ನು ಬೆಳೆಸುವ ಪ್ರಶ್ನೆಯೆಲ್ಲಿದೆ?

ನಾವು ನಿಜವಾಗಿಯೂ ನಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಲು ಬಯಸಿದರೆ, ಮೊದಲನೆಯದಾಗಿ ನಾವು ನಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆಯೆ ಎಂದು ನೋಡಬೇಕು. ಪೋಷಕರಾಗಬೇಕೆಂದು  ಬಯಸುವ ಪ್ರತಿಯೊಬ್ಬರೂ ಒಂದು ಸರಳ ಪ್ರಯೋಗವನ್ನು ಮಾಡಬೇಕು – ಅವರುಗಳು ಒಂದು ಕಡೆ ಕುಳಿತು, ತಮ್ಮ ಜೀವನದಲ್ಲಿ ಯಾವುದು ಸರಿಯಿಲ್ಲ,  ಯಾವುದು ಒಳ್ಳೆಯದು ಎಂದು ತಿಳಿದುಕೊಳ್ಳಿಲಿ - ಹೊರಗಿನ ಪ್ರಪಂಚದ ಬಗ್ಗೆ ಅಲ್ಲ, ತಮ್ಮ ಬಗ್ಗೆಯೇ ತಿಳಿದುಕೊಳ್ಳಿಲಿ. ನಿಮ್ಮದೇ ಆದ ನಡವಳಿಕೆ, ನಿಮ್ಮ ನೆಡೆ, ನುಡಿ ಹಾಗೂ ಅಭ್ಯಾಸಗಳು – ಇವುಗಳನ್ನು ನೀವು ಮೂರು ತಿಂಗಳಲ್ಲಿ ಬದಲಾಯಿಸಬಹುದಾದರೆ, ನೀವು ನಿಮ್ಮ ಮಗುವನ್ನೂ ಸಹ  ಬುದ್ಧಿವಂತಿಕೆಯಿಂದ ನಿಭಾಯಿಸಬಹುದು.

ಸಂಪಾದಕರ ಟಿಪ್ಪಣಿ: ಸದ್ಗುರುಗಳಿಂದ ಹೆಚ್ಚಿನ ಪಾಲನೆಯ ಸಲಹೆಗಾಗಿ "ಇನ್ಸ್ಪೈರ್ ಯುವರ್ ಚೈಲ್ಡ್, ಇನ್ಸ್ಪೈರ್ ದಿ ವರ್ಲ್ಡ್" ಎಂಬ ಇ ಬುಕ್ ಡೌನ್ಲೋಡ್ ಮಾಡಿಕೊಳ್ಳಿ. ಪುಸ್ತಕವು "ಪೇ ಆಸ್ ಯು ಲೈಕ್" ಅಡಿಯಲ್ಲಿ ಲಭ್ಯವಿದೆ (ಉಚಿತವಾಗಿ ಪಡೆದುಕೊಳ್ಳಲು ’ಅಮೌಂಟ್’ನಲ್ಲಿ ’೦’ ಎಂಟರ್ ಮಾಡಿ’).