ಯಶಸ್ಸು ಮತ್ತು ವೈಫಲ್ಯದ ಕುರಿತಾದ ಸಮಾಜದ ಆಲೋಚನೆಗಳಿಂದ ನಾವು ಹೇಗೆ ಹೊರಬರುವುದು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ನಾವು ನಮ್ಮ ಜೀವನವನ್ನು ಮಹತ್ತಾದ ಸಾಧ್ಯತೆಯನ್ನು ಸಾಧಿಸಲು ಮೆಟ್ಟಿಲನ್ನಾಗಿ ಬಳಸಿದರೆ, ವೈಫಲ್ಯ ಎಂಬ ವಿಷಯವೇ ಇರುವುದಿಲ್ಲ.

ಪ್ರಶ್ನೆ: ನಾವು ವೈಫಲ್ಯದ ಭಯದಿಂದ ಹೊರಬರುವುದು ಹೇಗೆ?

ಸದ್ಗುರು: ಜೀವನದಲ್ಲಿ ವೈಫಲ್ಯ ಎಂಬ ಯಾವುದೇ ವಿಚಾರವಿಲ್ಲ. ವೈಫಲ್ಯದ ಪರಿಕಲ್ಪನೆ ಬಂದಿರುವುದು ಯಶಸ್ಸಿನ ಬಗ್ಗೆ ನಮಗಿರುವ ಮೂರ್ಖ ಪರಿಕಲ್ಪನೆಯಿಂದಷ್ಟೇ. ಜಗತ್ತನ್ನು ಬದಲಿಸುವ ಯತ್ನವನ್ನು ಬಿಟ್ಟು, ನಿಮ್ಮ ಪರಿಕಲ್ಪನೆಯನ್ನು ಬದಲಾಯಿಸಿ. ಹಾಗೆ ಮಾಡಿದರೆ, ಎಲ್ಲವೂ ಅದ್ಭುತವಾಗಿ ಕಾಣುತ್ತದೆ. ನೀವು ಇಂದು ಬೀದಿಯಲ್ಲಿ ಬೇಡುವ ಒಬ್ಬ ಭಿಕ್ಷುಕನಾಗಿದ್ದು, ನಾಳೆ ಒಂದು ಹೋಟೆಲ್‍ಗೆ ಹೋಗಿ ದೋಸೆ ತಿನ್ನಲು ಸಾಧ್ಯವಾಯಿತೆಂದರೆ, ಮಹತ್ತರವಾದ ಯಶಸ್ಸು, ಅಲ್ಲವೇ?

ಯಾರು ತಮ್ಮ ಜೀವನವನ್ನು ಮಹತ್ತಾದ ಸಾಧ್ಯತೆಯನ್ನು ಸಾಧಿಸಲು ಮೆಟ್ಟಿಲನ್ನಾಗಿ ಬಳಸುತ್ತಾರೆಯೋ, ಅವರ ಜೀವನದಲ್ಲಿ ವೈಫಲ್ಯ ಎಂಬ ವಿಷಯವೇ ಇರುವುದಿಲ್ಲ.

ನಿಮ್ಮ ಪ್ರತಿಯೊಂದು ಪರಿಕಲ್ಪನೆಗಳು, ಆಲೋಚನೆಗಳು, ಭಾವನೆಗಳು ಮತ್ತು ಮೌಲ್ಯಗಳು – ಎಲ್ಲವೂ ಬೇರೆಡೆಯಿಂದ ನೀವು ಪಡೆದಿದ್ದು ಅವು ನಿಮ್ಮನು ಆಳುತ್ತಿವೆ. ಯಶಸ್ಸಿಗಾದ ಈ ಪರಿಕಲ್ಪನೆ ನಿಮ್ಮ ಸ್ವಂತದ್ದಲ್ಲ. ಇದು ಬೇರೊಬ್ಬರ ಕಲ್ಪನೆಯಾಗಿದೆ. ನಿಮ್ಮ ಧರ್ಮ, ನಿಮ್ಮ ಸಮಾಜ ಹಾಗೂ ನಿಮ್ಮ ಸಂಸ್ಕೃತಿ ತನ್ನದೇ ಆದ ಪರಿಕಲ್ಪನೆಗಳನ್ನು ನೀವು ನಂಬುವಂತೆ ಮಾಡಿದೆ. ಮತ್ತೊಬ್ಬರ ಕಲ್ಪನೆಯ ಗುಲಾಮರಾಗಬೇಡಿ. ಇದರಿಂದ ಹೊರಬರುವುದೇ ನಿಮ್ಮ ಮೊದಲ ಯಶಸ್ಸು. ಯಶಸ್ಸು ಮತ್ತು ವೈಫಲ್ಯ ನಿಮ್ಮ ಜೀವನದಲ್ಲಿ ಹರಿದಾಡುತ್ತಿರುವ ಹಣದ ಪ್ರಮಾಣವಲ್ಲ. ಯಶಸ್ಸು ಮತ್ತು ವೈಫಲ್ಯ ಜಗತ್ತಿನಲ್ಲಿ ನೀವು ಕಂಡುಕೊಳ್ಳುವ ಮಾನ್ಯತೆಯ ಮೇಲೆ ಅವಲಂಬಿತವಾಗಿರುವುದಿಲ್ಲ. ನರಕಸದೃಶ ಪರಿಸ್ಥಿತಿಯಲ್ಲಿಯೂ ನೀವು ಆನಂದದಿಂದ ಸಾಗಿದರೆಂದರೆ, ಅದುವೇ ನಿಮ್ಮ ಜೀವನದ ಯಶಸ್ಸು.


 

ಬೆಳವಣಿಗೆಗಾದ ಅಡಿಗಲ್ಲು

ಯಾರು ತಮ್ಮ ಜೀವನದಲ್ಲಿ ನಡೆಯುತ್ತಿರುವ ಸಣ್ಣ ಪುಟ್ಟ ಘಟನೆಗಳನ್ನು ಜೀವನದ ಗುರಿಗಳಾಗಿ ನೋಡುತ್ತಾರೆಯೋ, ಅವರಲ್ಲಷ್ಟೇ ವೈಫಲ್ಯದ ಪರಿಕಲ್ಪನೆಯಿರುತ್ತದೆ. ತಮ್ಮ ಜೀವನವನ್ನು ಮಹತ್ತಾದ ಸಾಧ್ಯತೆಯನ್ನು ಸಾಧಿಸಲು ಮೆಟ್ಟಿಲನ್ನಾಗಿ ಬಳಸುವವರಿಗೆ, ಅವರ ಜೀವನದಲ್ಲಿ ವೈಫಲ್ಯ ಎಂಬ ವಿಷಯವೇ ಇರುವುದಿಲ್ಲ. ನಿಮ್ಮ ಬದುಕಿನಲ್ಲಿ ಒಳ್ಳೆಯ ಘಟನೆ ನಡೆಯುತ್ತಿದೆಯೋ ಅಥವಾ ಕೆಟ್ಟ ಘಟನೆ ನಡೆಯುತ್ತಿದೆಯೋ, ಪರಿಸ್ಥಿತಿ ಏನೇ ಇರಲಿ, ಎಲ್ಲವೂ ತನ್ನದೇ ಉಪಯುಕ್ತತೆಯಿಂದ ಕೂಡಿರುತ್ತದೆ. ಅದನ್ನು ನಿಮ್ಮ ಬೆಳವಣಿಗೆಗಾಗಿ ಬಳಸಿಕೊಳ್ಳಿರಿ.

ಒಮ್ಮೆ, ಒಬ್ಬ ರೈತನು ತನ್ನ ಬೆಳೆಯ ಗುಣಮಟ್ಟವನ್ನು ನಿರ್ಧರಿಸುವ ವಿವಿಧ ನೈಸರ್ಗಿಕ ಅಂಶಗಳ ಅಳವಡಿಕೆಯಿಂದ ಬೇಸತ್ತಿದ್ದನು. ಆದ್ದರಿಂದ, ಒಂದು ದಿನ ಶಿವನನ್ನು ಕರೆದು ಹೇಳಿದನು, “ನಾನು ನಡೆಯುತ್ತಿರುವ ಎಲ್ಲಾ ನೈಸರ್ಗಿಕ ಅಸಂಬದ್ಧತೆಯಿಂದ ಬೇಸತ್ತಿದ್ದೇನೆ. ನಿಸ್ಸಂಶಯವಾಗಿ ನೀನು ಕೃಷಿಕನಲ್ಲ. ನೀನೊಬ್ಬ ಬೇಟೆಗಾರ ಎಂಬುದು ಇತಿಹಾಸದಿಂದ ನನಗೆ ತಿಳಿದಿದೆ. ಕೃಷಿ ಮಾಡುವುದರ ಪ್ರಕ್ರಿಯೆಗಳು ನಿನಗೆ ತಿಳಿದಿಲ್ಲ, ಆದ್ದರಿಂದ ನೀನು ಪ್ರಕೃತಿಯನ್ನು ನನ್ನ ಹಿಡಿತದಲ್ಲಿ ಏಕೆ ಬಿಡಬಾರದು? ನಾನು ರೈತ. ಯಾವ ಕಾಲದಲ್ಲಿ ಮಳೆ ಬೀಳಬೇಕು, ಯಾವ ಕಾಲದಲ್ಲಿ ಸೂರ್ಯನ ಕಿರಣಗಳು ಇರಬೇಕು ಎಂದು ನನಗೆ ತಿಳಿದಿದೆ, ಒಳ್ಳೆಯ ಕೃಷಿಯನ್ನು ಸಾಧಿಸುವ ಎಲ್ಲವೂ ನನಗೆ ತಿಳಿದಿದೆ. ನಿನಗೆ ಅದು ಗೊತ್ತಿರಲಿಕ್ಕಿಲ್ಲ ಏಕೆಂದರೆ ನೀನು ಕೇವಲ ಬೇಟೆಗಾರ ಮತ್ತು ವಿರಾಗಿ. ಖಂಡಿತವಾಗಿಯೂ ಉತ್ತಮ ಕೃಷಿಕನಂತೂ ಅಲ್ಲ. ಎಲ್ಲವೂ ಅನುಚಿತ ಸಮಯದಲ್ಲಿ ನಡೆಯುತ್ತಿದೆ. ಅದರ ಹತೋಟಿಯನ್ನು ನನಗೆ ಬಿಟ್ಟುಬಿಡು”.

ನಿಮ್ಮ ಬದುಕಿನಲ್ಲಿ ಒಳ್ಳೆಯ ಘಟನೆ ನಡೆಯುತ್ತಿದೆಯೋ ಅಥವಾ ಕೆಟ್ಟ ಘಟನೆ ನಡೆಯುತ್ತಿದೆಯೋ, ಪರಿಸ್ಥಿತಿ ಏನೇ ಇರಲಿ, ಎಲ್ಲವೂ ತನ್ನದೇ ಉಪಯುಕ್ತತೆಯಿಂದ ಕೂಡಿರುತ್ತದೆ. ಅದನ್ನು ನಿಮ್ಮ ಬೆಳವಣಿಗೆಗಾಗಿ ಬಳಸಿಕೊಳ್ಳಿರಿ.

ಶಿವನು ಅಂದು ಎಲ್ಲವನ್ನೂ ಕೊಡುವಂತಹ ಮನಸ್ಥಿತಿಯಲ್ಲಿದ್ದನು, ಆದ್ದರಿಂದ “ಸರಿ, ಪ್ರಕೃತಿ ಈಗಿನಿಂದ ನಿನ್ನ ಹಿಡಿತದಲ್ಲಿದೆ” ಎಂದು ಹೇಳಿದನು. ನಂತರ ರೈತನು ತನ್ನ ಬೆಳೆಯನ್ನು ಉತ್ತಮ ರೀತಿಯಲ್ಲಿ ಬೆಳೆಯುವ ರೀತಿ ಪ್ರಕ್ರಿಯೆಗಳನ್ನು ಯೋಜಿಸಿದನು. ಅವನು ಮಳೆಯನ್ನು ಕರೆದನು. ಮಳೆ ಸುರಿಯಲಾರಂಭಿಸಿತು. ಅವನು ಭೂಮಿಯನ್ನು ತನ್ನ ಬೆರಳಿನಿಂದ ಕೆರೆದು ನೋಡಿ, ಆರು ಇಂಚುಗಳಷ್ಟು ನೆನೆಯಲ್ಪಟ್ಟಿದೆ ಎಂದು ತಿಳಿದು ಮಳೆಯನ್ನು ನಿಲ್ಲಿಸಿದನು. ನಂತರ ಅವನು ತನ್ನ ಹೊಲವನ್ನು ಉಳುಮೆ ಮಾಡಿ ಮೆಕ್ಕೆಜೋಳದ ಬೀಜಗಳನ್ನು ನೆಟ್ಟು ಎರಡು ದಿನ ಕಾದು “ಮಳೆ!” ಎಂದನು. ನಂತರ “ಬಿಸಿಲು!”ಎಂದನು. ಒಂದು ದಿನ ಅವನು ಹೊಲದಲ್ಲಿ ಕೆಲಸ ಮಾಡುತ್ತಿದುದರಿಂದ ಅವನ ಅನುಕೂಲಕ್ಕಾಗಿ, ಮೋಡದ ವಾತಾವರಣವನ್ನಾಗಿ ಮಾಡಿಕೊಂಡನು. ಎಲ್ಲವೂ ಅವನಿಗೆ ಬೇಕಾದ ರೀತಿಯಲ್ಲಿ ಸಂಭವಿಸಿದವು, ಅದ್ಭುತವಾದ ಬೆಳೆ ಬಂದತು. ಅವನು ತುಂಬಾ ಸಂತೋಷಪಟ್ಟನು.

ಸುಗ್ಗಿಯ ಸಮಯ ಬರುತ್ತಲೇ ಯಾವುದೇ ಪಕ್ಷಿಗಳು ಬರಬಾರದೆಂದು ಅವನು ಬಯಸಿದನು. ಅವನ ಆಶ್ಚರ್ಯಕ್ಕೆ, ಯಾವುದೇ ಪಕ್ಷಿಗಳು ಬರಲಿಲ್ಲ. ಮೆಕ್ಕೆಜೋಳವನ್ನು ಕೊಯ್ಲು ಮಾಡಲು ಅವನು ತನ್ನ ಹೊಲಕ್ಕೆ ಹೋದನು. ಆದರೆ, ಅವನು ಜೋಳವನ್ನು ಬಿಡಿಸಿ ನೋಡಿದಾಗ ಒಳಗೆ ಧಾನ್ಯವೇ ಇರಲಿಲ್ಲ. ಆಗ ಅವನು “ಅಯ್ಯೊ ಇದೇನಿದು? ನಾನು ಏನು ತಪ್ಪು ಮಾಡಿದೆ? ಎಂದು ಯೋಚಿಸಿದ. ಮಳೆ, ನೀರು ಮತ್ತು ಬಿಸಿಲು - ಎಲ್ಲವನ್ನೂ ಸರಿಯಾಗಿ ನಿರ್ವಹಿಸಿದ್ದರಿಂದ ಅವನಿಗೆ ಹೀಗೆ ಹೇಗಾಯಿತೆಂದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಅವನು ಮತ್ತೆ ಶಿವನ ಬಳಿಗೆ ಹೋಗಿ, “ನಾನು ಎಲ್ಲ ಪ್ರಕಿಯೆಗಳನ್ನು ಸರಿಯಾಗಿಯೇ ಮಾಡಿದೆ. ಆದರೆ, ಧಾನ್ಯ ಮಾತ್ರ ದೊರಕಲಿಲ್ಲ. ಒಂದು ವೇಳೆ, ನೀನೇನಾದರೂ ನನ್ನ ಬೆಳೆಯನ್ನು ನಾಶ ಪಡಿಸಿದೆಯಾ?” ಎಂದು ಕೇಳಿದನು. ಅದಕ್ಕೆ ಶಿವನು, “ನಾನೆಲ್ಲವನ್ನೂ ಗಮನಿಸುತ್ತಿದ್ದೆ. ನೀನು ಉಸ್ತುವಾರಿ ವಹಿಸಿದ್ದರಿಂದ ನಾನು ಮಧ್ಯೆ ಪ್ರವೇಶಿಸಲಿಲ್ಲ. ಮಳೆ, ಬಿಸಿಲು ಮತ್ತೆಲ್ಲವೂ ಉತ್ತಮವಾಗಿತ್ತು. ಆದರೆ, ಗಾಳೀಯನ್ನೇಕೆ ನಿಲ್ಲಿಸಿದೆ? ನಾನು ಯಾವಾಗಲೂ ಗಿಡಗಳನ್ನು ಬೆದರಿಸುವ ಹಾಗೆ ಜೋರಾದ ಗಾಳಿಯನ್ನು ಕಳುಹಿಸುತ್ತಿದ್ದೆ. ಇದರಿಂದ ಗಿಡಗಳು ಒತ್ತಡವನ್ನು ಎದುರಿಸುವ ನಿಟ್ಟಿನಲ್ಲಿ ತಮ್ಮ ಬೇರನ್ನು ಭೂಮಿಯ ಆಳಕ್ಕೆ ಇಳಿಸುತ್ತಿತ್ತು. ಇದರಿಂದ ಹೆಚ್ಚು ಬೆಳೆ ಸಿಗುತ್ತಿತ್ತು. ನೀನೀಗ ಸೊಂಪಾದ ಮೆಕ್ಕೆಜೋಳದ ಫಸಲನ್ನು ಹೊಂದಿರುವೆ ಆದರೆ ಅದರಲ್ಲಿ ಧಾನ್ಯ ಮಾತ್ರ ಇಲ್ಲ” ಎಂದನು.

ಏಕೈಕ ಗುರಿ

ಮೆಕ್ಕೆ ಜೋಳದ ಬೆಳೆ ತನ್ನನ್ನು ಬಲಪಡಿಸಿಕೊಳ್ಳಲು ಗಾಳಿಗಳನ್ನು ಬಳಸಿದಂತೆ, ನಿಮ್ಮ ಜೀವನದ ವಿವಿಧ ಸನ್ನಿವೇಶಗಳನ್ನು ನಿಮ್ಮನ್ನು ಬಲಶಾಲಿ ಮತ್ತು ಉತ್ತಮವಾಗಿಸಲು ಬಳಸಿಕೊಳ್ಳಬಹುದು, ಇಲ್ಲದಿದ್ದರೆ ನೀವು ಅಳುತ್ತಲೇ ಕೂರಬೇಕಾಗುತ್ತದೆ. ಇದು ನಿಮ್ಮದೇ ಆಯ್ಕೆಯಾಗಿದೆ. ಯಾವುದೇ ಪರಿಸ್ಥಿತಿಯಿರಲಿ, ನಿಮ್ಮ ಜೀವನದ ಅತ್ಯಂತ ಘೋರ ಘಟನೆಗಳೇ ಆಗಲಿ, ಅದನ್ನು ನಿಮ್ಮ ಬೆಳವಣಿಗೆಗಾಗಿ ಹಾಗು ನಿಮ್ಮ ಉತ್ತಮ ಯೋಗಕ್ಷೇಮಕ್ಕಾಗಿ ಬಳಸಿಕೊಳ್ಳಬಹುದು. ನಿಮ್ಮ ಜೀವನದ ಸಣ್ಣ ಸಣ್ಣ ಘಟನೆಗಳಾದ ನಿಮ್ಮ ವ್ಯವಹಾರ, ನಿಮ್ಮ ಮದುವೆ, ನಿಮ್ಮ ಮಕ್ಕಳು - ಈ ಎಲ್ಲ ವಿಷಯಗಳು ಕೇವಲ ಒಂದು ಮೆಟ್ಟಿಲುಗಳಷ್ಟೇ. ಇದು ನಮಗೇನೂ ಹೊಸ ವಿಚಾರವೇನಲ್ಲ. ಏಕಂದರೆ, ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ನಮ್ಮ ಮನಸ್ಸಿನಲ್ಲಿ ತುಂಬುತ್ತಲೇ ಬಂದಿದ್ದಾರೆ. “ನಿಮ್ಮ ಜೀವನದ ಉದ್ದೇಶ ಮುಕ್ತಿ. ನಿಮ್ಮ ಮದುವೆ, ನಿಮ್ಮ ವ್ಯವಹಾರ, ನಿಮ್ಮ ಸಾಮಾಜಿಕ ಜೀವನ, ಇವೆಲ್ಲವೂ ಅದಕ್ಕಾದ ಸಾಧನಗಳಷ್ಟೇ. ನೀವು ಅದರ ಮೂಲಕ ಅಥವಾ ಅದರ ಹೊರತಾಗಿಯೂ, ನೀವು ಸನ್ಯಾಸಿಯಾಗಿರಿ ಅಥವಾ ನೀವು ಸಂಸಾರದಲ್ಲಿರಿ, ಏನೇ ಆದರೂ ನಿಮ್ಮ ಏಕೈಕ ಗುರಿ ಮುಕ್ತಿ” ಎಂದು ಹೇಳುತ್ತಲೇ ಬಂದಿದ್ದಾರೆ.

Editor's Note: At the end of the day, how successful you are in life just depends on how well you can use your mind and body. Here, Sadhguru points out some essential qualities you should cultivate in both these dimensions. He gives you a 5-min experiment you can do every day, to generate clarity of mind. Try it out!